ಬಕಾಸುರನಿಗೆ ಬಾರಿಯಾಟ್ರಿಕ್ ಸರ್ಜರಿ!
ಹೊಟ್ಟೆಬಾಕತನಕ್ಕೆ ಆಧುನಿಕ ವಿಜ್ಞಾನ ಕಂಡುಕೊಂಡಿರುವ ಚಿಕಿತ್ಸೆಗಳಲ್ಲಿ ಹೊಟ್ಟೆಗೊಂದು ಬ್ಯಾಂಡ್ ತೊಡಿಸಿ, ಹೊಟ್ಟೆಯ ಗಾತ್ರವನ್ನೇ ಸಣ್ಣದು ಮಾಡಿಬಿಡುವ ಶಸ್ತ್ರಕ್ರಿಯೆ ಕೂಡ ಒಂದು. ಅದಕ್ಕೆ ವೈದ್ಯಕೀಯ ಹೆಸರು ‘ಬಾರಿಯಾಟ್ರಿಕ್ ಸರ್ಜರಿ’.
ಜಗತ್ತಿನ ಒಂದು ಶೇ. ಮಂದಿಯ ಸಂಪತ್ತು ಮತ್ತು ಉಳಿದ ಶೇ. 99 ಮಂದಿಯ ಸಂಪತ್ತು ಸಮಸಮ ಎಂಬ ವರದಿಗಳು ಆಗಾಗ ತಮ್ಮ ವಾರ್ಷಿಕ ಸೇವೆ ಸಲ್ಲಿಸುತ್ತಿವೆ. ಆದರೆ ಬೆಕ್ಕಿನ ಕೈಗೇ ಇಲಿಗಳನ್ನು ಸಾಕುವ ಜವಾಬ್ದಾರಿಯೂ ಇರುವುದರಿಂದ ಡಾವೋಸ್ನಂತಹ ವ್ಯಾಪಾರಿ ಮೇಳಗಳಲ್ಲಿ ಈ ತರತಮದ ‘‘ಸುಖಚರ್ಚೆ’’ಗಳು ಮಾತ್ರ ನಡೆಯುತ್ತವೆಯೇ ಹೊರತು ಅದಕ್ಕೆ ಕಾರಣವನ್ನಾಗಲೀ, ಪರಿಹಾರವನ್ನಾಗಲೀ ಗುರುತಿಸಿ, ಆ ದಿಕ್ಕಿನಲ್ಲಿ ಹೆಜ್ಜೆ ಇಡುವುದು ಸಾಧ್ಯವಾಗುತ್ತಿಲ್ಲ. 80ರ ದಶಕದ ಮಧ್ಯಭಾಗದಲ್ಲಿ ಜಗತ್ತಿನಾದ್ಯಂತ ಆರಂಭಗೊಂಡ ‘ನಿಯೋಲಿಬರಲಿಸಂ’ನ ಫಲ ಇದು.
ಭಾರತದ್ದೇ ಒಂದಿಷ್ಟು ಅಂಕಿಸಂಖ್ಯೆಗಳನ್ನು ಮುಂದಿಡುತ್ತೇನೆ. ಇದು ಈ ವರ್ಷದ ಆಕ್ಸ್ ಫಾಮ್ ವರದಿಯ ಭಾಗ:
*ಭಾರತದಲ್ಲಿ ಈ ವರ್ಷ 17 ಮಂದಿ ಹೊಸ ಶತಕೋಟಿಪತಿಗಳು ಹುಟ್ಟಿಕೊಂಡಿದ್ದು, ಒಟ್ಟು ಅಂತಹವರ ಸಂಖ್ಯೆ 101ಕ್ಕೆ ಏರಿದೆ.
* ಈ ಶತಕೋಟಿ ಪತಿಗಳ ಒಟ್ಟು ಸಂಪತ್ತು 20,676 ದಶಲಕ್ಷಕೋಟಿ ರೂಪಾಯಿ ಎಂದರೆ ದೇಶದ ಎಲ್ಲ ರಾಜ್ಯಗಳ ಆರೋಗ್ಯ ಮತ್ತು ಶಿಕ್ಷಣ ಆವಶ್ಯಕತೆಗಳ ಒಟ್ಟು ಬಜೆಟ್ನ ಶೇ. 85 ಆಗುತ್ತದೆ.
* 2000ನೇ ಇಸವಿಯಲ್ಲಿ ದೇಶದಲ್ಲಿದ್ದ ಶತಕೋಟಿಪತಿಗಳ ಸಂಖ್ಯೆ ಕೇವಲ 9. ಈಗ 2017ರಲ್ಲಿ ಆ ಸಂಖ್ಯೆ 101ಕ್ಕೆ ಏರಿದೆ.
* ಭಾರತದಲ್ಲಿ ಅತ್ಯಂತ ಸಿರಿವಂತ ಶೇ. 10 ಮಂದಿಯ ಕೈಯಲ್ಲಿ ದೇಶದ ಶೇ. 73 ಸಂಪತ್ತಿದೆ.
ಉಳ್ಳವರು-ಇಲ್ಲದವರ ಅಂತರ ಎಷ್ಟು ದೊಡ್ಡದು ಎಂಬುದಕ್ಕೆ ಸಣ್ಣ ಕಣ್ಣಂದಾಜು:
ಭಾರತದಲ್ಲಿ ಅರ್ಧಕ್ಕರ್ಧ ಗಾರ್ಮೆಂಟ್ ನೌಕರರಿಗೆ ಕನಿಷ್ಠ ವೇತನ ನಿಯಮಗಳಿಗಿಂತ ಕಡಿಮೆ ಸಂಬಳ ಸಿಗುತ್ತಿದೆ. ಅಂತಹ ಒಬ್ಬ ಕನಿಷ್ಠ ವೇತನದ ಕಾರ್ಮಿಕ ದೇಶದ ಅತಿದೊಡ್ಡ ಗಾರ್ಮೆಂಟ್ ಕಂಪೆನಿಯ ಅತ್ಯಂತ ಹಿರಿಯ ಎಕ್ಸಿಕ್ಯೂಟಿವ್ ಒಂದು ವರ್ಷದಲ್ಲಿ ಗಳಿಸುವ ಸಂಬಳದ ಮೊತ್ತವನ್ನು ಗಳಿಸಲು 941 ವರ್ಷ ಬೇಕಾಗುತ್ತದೆ!
ಅದರ ಕೊರೋಲರಿ ಎಂದರೆ, ಕನಿಷ್ಠ ವೇತನದ ಕಾರ್ಮಿಕ ತನ್ನ ಇಡೀ ಜೀವಮಾನದಲ್ಲಿ ಗಳಿಸುವ ಒಟ್ಟು ಹಣವನ್ನು ಆ ದೊಡ್ಡ ಕಂಪೆನಿಯ ಹಿರಿಯ ಎಕ್ಸಿಕ್ಯೂಟಿವ್ ಬರೇ 18 ದಿನಗಳಲ್ಲಿ ಗಳಿಸಿರುತ್ತಾನೆ. ದೇಶದ ಎಲ್ಲ ಗಾರ್ಮೆಂಟ್ ಕಾರ್ಖಾನೆಗಳಲ್ಲಿರುವ ಅಂದಾಜು 14,700 ಕನಿಷ್ಠ ವೇತನ ಕಾರ್ಮಿಕರಿಗೆ ವರ್ಷಕ್ಕೆ 32 ಲಕ್ಷ ಖರ್ಚು ಮಾಡಿದರೂ ಅವರಿಗೆ ಬದುಕುವಷ್ಟು ಹಣ ಸಿಗುತ್ತದೆ.
ಸರಕಾರಗಳು ಒಳಗೊಳ್ಳುವ ಬೆಳವಣಿಗೆಯ ಬಾಯುಪಚಾರಕ್ಕೇನೂ ಕಡಿಮೆ ಮಾಡುವುದಿಲ್ಲ; ಆದರೆ ಆ ದಿಕ್ಕಿಗೆ ಸ್ಪಷ್ಟ ವಿರುದ್ಧ ದಿಕ್ಕಿನಲ್ಲಿ ನೀತಿಗಳನ್ನು ರೂಪಿಸುತ್ತವೆ. ನಿಜವಾಗಿ ಆಗಬೇಕಿರುವುದು ತಳದಲ್ಲಿರುವ ಶೇ. 40 ಜನಕ್ಕೆ ವೇಗವಾಗಿ ಬೆಳೆಯಲು ಅವಕಾಶ ಮಾಡಿಕೊಡುವ ಶ್ರಮ, ಕೃಷಿಯಂತಹ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ. ಸಿರಿವಂತರಿಗೆ ತೆರಿಗೆ ರಿಯಾಯಿತಿ, ಸಾಲ ಮನ್ನಾ, ತೆರಿಗೆ ರಜೆ ಕೊಡುವ ಬದಲು ಅವರಿಂದ ಕಟ್ಟುನಿಟ್ಟಿನ ತೆರಿಗೆ ವಸೂಲಿ ಮತ್ತದರ ವಿವೇಚನೆಯುತ ಹೂಡಿಕೆ. ಆದರೆ ಅದಕ್ಕೆ ಬದಲಾಗಿ, ಕೃಷಿ ಸೇರಿದಂತೆ ಎಲ್ಲ ಶ್ರಮಕ್ಷೇತ್ರಗಳನ್ನು ಬಲಾಢ್ಯ ಕಾರ್ಪೊರೇಟ್ಗಳಿಗೆ ತಟ್ಟೆಯಲ್ಲಿಟ್ಟು ಕೊಡುವ ನೀತಿಗಳು ತಯಾರಾಗುತ್ತಿವೆ.
ಜಾಗತಿಕವಾಗಿ, ಬರಿಯ 10 ಬಲಾಢ್ಯ ಕಂಪೆನಿಗಳು ಒಟ್ಟಾಗಿ ಜಗತ್ತಿನ 180ದೇಶಗಳ ಸರಕಾರಿ ಸಂಪತ್ತಿಗೆ ಸರಿಸಮವಾದ ಸಂಪತ್ತನ್ನು ಹೊಂದಿವೆ ಎಂದು ಆಕ್ಸ್ ಫಾಮ್ ವರದಿ ಮಾಡುತ್ತದೆ. ಈ ರೀತಿಯ ತರತಮಕ್ಕೆ ಅದು ಕೆಲವು ಜಾಗತಿಕ ಕಾರಣಗಳನ್ನು ಬೆಟ್ಟುಮಾಡಿ ತೋರಿಸುತ್ತದೆ, ಆ ಕಾರಣಗಳು ಭಾರತಕ್ಕೂ ಪ್ರಸ್ತುತ:
* ಎಲ್ಲ ಕಾರ್ಪೊರೇಟ್ಗಳಲ್ಲೂ ಹಿರಿಯ ಮ್ಯಾನೇಜ್ಮೆಂಟ್ಗೆ ಎಲ್ಲ ರಸವನ್ನೂ ನುಂಗಲುಕೊಟ್ಟು ತಳಮಟ್ಟದ ಕೆಲಸಗಾರನಿಗೆ ಬರಿಯ ಜೊಗಟನ್ನು ನೀಡಲಾಗುತ್ತಿದೆ. ಸಣ್ಣ ಉದಾಹರಣೆ, ಭಾರತದ ಅತ್ಯಂತ ದೊಡ್ಡ ಐಟಿ ಕಂಪೆನಿಯಲ್ಲಿ ಸಿಇಒನ ಸಂಬಳ, ಆ ಕಂಪೆನಿಯ ತಳಮಟ್ಟದ ಇಂಜಿನಿಯರ್ಗಿಂತ 416ಪಟ್ಟು ಹೆಚ್ಚು. ಕಂಪೆನಿಗಳಲ್ಲಿ ಖರ್ಚು ತಗ್ಗಿಸುವುದು ಎಂದರೆ ಬಡಪಾಯಿ ಕಾರ್ಮಿಕರನ್ನು ಕಿತ್ತೊಗೆಯುವುದು ಇಲ್ಲವೇ ಅವರ ಸಂಬಳಕ್ಕೆ ಕತ್ತರಿ ಹಾಕುವುದು.
* ತೆರಿಗೆ ಹಣ ಉಳಿಸಿ ಲಾಭ ಪಡೆಯುವುದಕ್ಕಾಗಿ ಬಹುರಾಷ್ಟ್ರೀಯ ಕಾರ್ಪೊರೇಟ್ಗಳು ದೇಶ ದೇಶಗಳ ನಡುವೆ ಸ್ಪರ್ಧೆ ಹುಟ್ಟಿಸುವಷ್ಟು ಸಮರ್ಥರಾಗಿರುತ್ತಾರೆ. ಭಾರತದಲ್ಲೇ ಬೆಂಗಳೂರು, ಹೈದರಾಬಾದ್ ಗಳ ನಡುವೆ ಐಟಿ ಉದ್ದಿಮೆಗಳಿಗೆ ಕೆಂಪುಹಾಸಿನ ಸ್ವಾಗತ ನೀಡಲು ಇಂತಹದೊಂದು ಸ್ಪರ್ಧೆ ಏರ್ಪಟ್ಟದ್ದನ್ನು ನಾವು ಕಂಡಿದ್ದೇವೆ. ತೆರಿಗೆ ವಿನಾಯಿತಿ, ತೆರಿಗೆ ರಜೆಯ ಲಾಭ ನೇರವಾಗಿ ಕಾರ್ಪೊರೇಟ್ಗಳದು.
* ಶೇರುದಾರರಿಗೆ ಲಾಭತಂದುಕೊಡುವ ಮೇಲಾಟಕ್ಕೆ ಬಿದ್ದಿರುವ ಕಾರ್ಪೊರೇಟ್ಗಳು ಅಲ್ಪಕಾಲಿಕ ಲಾಭಾಂಶಗಳನ್ನು ಗರಿಷ್ಠ ಇರಿಸಿಕೊಂಡಿರುತ್ತವೆ. ಇದು ಕೊನೆಗೆ ಹೋಗಿ ತಲುಪುವುದು ಸಿರಿವಂತರಿಗೇ ಹೊರತು ಬಡ ಸುರಕ್ಷಿತ ಹೂಡಿಕೆದಾರರಿಗಲ್ಲ.
* ಹಣಕಾಸು, ತೈಲ, ಗಣಿ, ಬಟ್ಟೆ, ಔಷಧಿ, ವಾಹನಗಳಂತಹ ಬಲಶಾಲಿ ಮತ್ತು ಪ್ರಭಾವಿ ಕಾರ್ಪೊರೇಟ್ಗಳು ಸರಕಾರವನ್ನೇ ಬಗ್ಗಿಸಿ, ಸರಕಾರದ ನೀತಿ-ನಿಯಮಗಳು ತಮ್ಮ ಪರ ಇರುವಂತೆ ಮಾಡಿಕೊಳ್ಳಬಲ್ಲ ತಾಕತ್ತು ಹೊಂದಿವೆ. ಈ ಕ್ರೋನಿ ಕ್ಯಾಪಿಟಲಿಸಂನ ಲಾಭ ಕಾರ್ಪೊರೇಟ್ ಗಳಿಗೇ. ಇದರ ನಷ್ಟ ಸಣ್ಣ ವ್ಯವಹಾರಸ್ಥರಿಗೆ. ಬಲಾಢ್ಯ ಕಾರ್ಟೆಲ್ಗಳು ಮತ್ತು ಸರಕಾರಗಳು ಒಟ್ಟಿಗೆ ನಿಂತಿರುವ ಕಾರಣದಿಂದಾಗಿ ಜನಸಾಮಾನ್ಯ ತನ್ನ ದೈನಂದಿನ ಆವಶ್ಯಕತೆಗಳಿಗೂ ಹೆಚ್ಚು ಪಾವತಿಸಬೇಕಾಗುತ್ತದೆ.
* ಸಿರಿವಂತ ಕಾರ್ಪೊರೇಟ್ಗಳ ಮಾಲಕವರ್ಗದ ಸಂಪತ್ತು ಅವರ ವಂಶಪಾರಂಪರ್ಯದಲ್ಲಿ ಹರಿದು ಬರುತ್ತದೆಯೇ ಹೊರತು ಬೇರೆಯವರಿಗೆ ಹಂಚಿಹೋಗುವುದಿಲ್ಲ. ಅವರು ತಮಗೆ ಅನುಕೂಲಕರವಾದ ನಿಯಮಗಳಿಗಾಗಿ ರಾಜಕಾರಣವನ್ನು ಖರೀದಿ ಮಾಡುವ ತಾಕತ್ತಿರುವವರು.
ಎಲ್ಲ ಅವಾಂತರಗಳ ಹಿಂದಿರುವುದು ಸರಕಾರದ ಪಾತ್ರವನ್ನು ಕಿರಿದುಗೊಳಿಸಿ ಖಾಸಗಿಯವರು ಮುಂದೆಬರಬೇಕು, ಶೇರುದಾರರಿಗೆ ಗಳಿಸಿಕೊಡುವುದೇ ಕಾರ್ಪೊರೇಟ್ಗಳ ಧ್ಯೇಯ, ಅತಿಯಾದ ಸಿರಿವಂತಿಕೆ ಯಶಸ್ಸಿನ ದ್ಯೋತಕ, ಬಡವರ ಸಿರಿವಂತರ ನಡುವಿನ ಅಂತರ ಅಪ್ರಸ್ತುತ, ಸರಕಾರ ನೀತಿಯ ಮುಖ್ಯ ಉದ್ದೇಶ ಜಿಡಿಪಿ ಬೆಳವಣಿಗೆ, ನಮ್ಮ ಆರ್ಥಿಕತೆಯಲ್ಲಿ ಲಿಂಗಭೇದ ಇಲ್ಲ, ಭೂಮಿಯ ಸಂಪನ್ಮೂಲಗಳು ಅನಂತ ಎಂಬ ಕೆಲವು ತಪ್ಪು ಕಲ್ಪನೆಗಳು ಎಂದು ಆಕ್ಸ್ ಫಾಮ್ ಬೊಟ್ಟು ಮಾಡುತ್ತದೆ.
ಭಾರತದ ಸಂದರ್ಭದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಸಮಾನತೆ ತರುವ, ಸಮಯದ ಪರೀಕ್ಷೆಯಲ್ಲೂ ಪಾಸಾಗಿರುವ ಯಶಸ್ವಿ ಮಾದರಿಗಳಲ್ಲಿ ಒಂದು- ಸಹಕಾರಿ ಮಾಡೆಲ್. ಈವತ್ತು ಅದು ಯಾರಿಗೂ ಬೇಡವಾಗಿದೆ. ರೈತ, ಶ್ರಮಿಕ ಸಂಬಳಕ್ಕೆ ದುಡಿಯಬೇಕೇ ಹೊರತು ಲಾಭದಲ್ಲಿ ಪಾಲುದಾರ ಆಗಿರಬಾರದು ಎಂಬ ದುರಾಸೆಯೇ ಈವತ್ತು ದೇಶದಲ್ಲಿ ಸಹಕಾರಿ ಮಾಡೆಲ್ನ್ನು ಮೂಲೆಗಿಡುವ ಹವಣಿಕೆಯ ಹಿಂದಿರುವ ಹುನ್ನಾರ. ಹಾಗಾಗಿಯೇ ಸರಕಾರಗಳು ಬಕಾಸುರನ ಹೊಟ್ಟೆಗೆ ಬಾರಿಯಾಟ್ರಿಕ್ ಸರ್ಜರಿಯ ಮಾತನಾಡುತ್ತಿವೆ!
ಕೃಪೆ: avadhimag.com