ಈ ಶಾಪದಿಂದ ಮಹಿಳೆಗೆ ಮುಕ್ತಿಯಿಲ್ಲವೇ?
ಮನಸ್ಸಿನ ನೆಮ್ಮದಿಯ ಹುಡುಕಾಟದಲ್ಲಿ ಸಾವಿರಾರು ಮೈಲಿಗಳನ್ನು ನಾವು ಪಯಣಿಸುತ್ತೇವೆ. ಒಂದು ಪ್ರಸಿದ್ಧ ಸ್ಥಳ ನಮಗೆ ಒಂದು ದಿನ ನೆಮ್ಮದಿ ನೀಡಬಹುದು. ಆದರೆ ಪ್ರತಿನಿತ್ಯ ನಮಗೆ ನೆಮ್ಮದಿ ನೀಡುವ ನಮ್ಮೂರಿನ ಸುತ್ತಮುತ್ತಲಿನ ತಾಣಗಳಲ್ಲಿ ಮಹಿಳೆಯೊಬ್ಬಳು ಬಯಲು ಬಹಿರ್ದೆಸೆಗಾಗಿ ನಮ್ಮ ಕಣ್ಮುಂದೆ ನಿಂತರೆ ಆ ಜಾಗ ನಮಗೆ ನೆಮ್ಮದಿ ನೀಡುತ್ತದೆಯೇ?
ನನಗಿಲ್ಲಿ ಒಂದೆರಡು ಪ್ರಸಂಗಗಳನ್ನು ಪ್ರಸ್ತಾಪಿಸಬೇಕೆನಿಸಿದೆ. ಹಳ್ಳಿಯೊಂದರಲ್ಲಿ ಪಿಯುಸಿ ಓದುವ ಹೆಣ್ಣು ಮಗಳೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ನಾನೇಕೆ ಆತ್ಮಹತ್ಯೆ ಮಾಡಿಕೊಂಡೆ ಎಂದು ಆಕೆ ಮರಣ ಪತ್ರ ಬರೆಯುತ್ತಾ, ‘‘ನನ್ನ ಸಹಪಾಠಿಯೊಬ್ಬ ನನ್ನ ಹಿಂದೆ ಬಿದ್ದಿದ್ದ. ನಾನು ಆತನನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ಆತ ನನ್ನನ್ನು ಹಿಂಬಾಲಿಸಿ ಬಯಲು ಬಹಿರ್ದೆಸೆ ವೇಳೆಯಲ್ಲಿ ನನ್ನ ಛಾಯಾಚಿತ್ರವನ್ನು ಸೆರೆಹಿಡಿದು ಸಾಮಾಜಿಕ ಜಾಲಾತಾಣಗಳಲ್ಲಿ ಬಿತ್ತರಿಸಿದ. ನನ್ನ ಮತ್ತು ತಂದೆ ತಾಯಿಯ ಗೌರವ ಹಾಳಾಗಬಾರದೆಂದು ನಾನು ಹೀಗೆ ಮಾಡಿದೆ...’’ ಎಂದು ಬರೆದಿದ್ದಳು. ಆದರೆ ಆಕೆ ಇಷ್ಟಕ್ಕೆ ನಿಲ್ಲಿಸಲಿಲ್ಲ, ಆ ಸಮಾಜಕ್ಕೆ ಬಹುದೊಡ್ಡ ಸಂದೇಶವನ್ನು ನೀಡುವಂತಹ ನಾಲ್ಕು ಸಾಲುಗಳನ್ನು ಬರೆದಿದ್ದಳು. ಅದೇನೆಂದರೆ, ‘‘ಯಾವುದೇ ತಂದೆ ತಾಯಿ ಹೆಣ್ಣು ಮಕ್ಕಳು ಹುಟ್ಟಿದಾಕ್ಷಣದಿಂದಲೇ ಅವರ ಒಡವೆ, ವಸ್ತ್ರ, ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಹಣವನ್ನು ಕಷ್ಟಪಷ್ಟು ಕೂಡಿಟ್ಟು ವ್ಯವಹರಿಸುವುದನ್ನೇ ಮನೆತನದ ಗೌರವ, ಮಾನ-ಮರ್ಯಾದೆ ಎಂದು ಭಾವಿಸುತ್ತಾರೆ. ಆದರೆ ಅವರೆಂದೂ ನಮ್ಮ ಮಾನವನ್ನು ಕಾಪಾಡುವ ಒಂದು ಶೌಚಾಲಯ ನಿರ್ಮಿಸಬೇಕೆಂದು ಗಂಭೀರವಾಗಿ ಯೋಚಿಸಲಿಲ್ಲ. ನಮ್ಮ ಮನೆಯಲ್ಲಿ ಒಂದು ಶೌಚಾಲಯವಿದ್ದಿದ್ದರೆ ನನಗೆ ಇಂತಹ ದುರ್ಗತಿ ಬರುತ್ತಿರಲಿಲ್ಲ. ಈ ನನ್ನ ಸಾವು ನನ್ನಂತ ವಯಸ್ಸಿಗೆ ಬಂದಂತಹ ಹೆಣ್ಣು ಮಕ್ಕಳನ್ನು ಹೊಂದಿದ ಎಲ್ಲಾ ತಂದೆ-ತಾಯಿಗೆ ಪಾಠವಾಗಬೇಕು.’’
ಈ ಪತ್ರವನ್ನು ನೋಡಿದ ಜನ, ಈ ಸಣ್ಣ ವಿಚಾರಕ್ಕೆ ಪ್ರಾಣ ಕಳ್ಕೋಬೇಕಾ? ಎಂದರು. ಅಂದರೆ ಶೌಚಾಲಯ ಅನ್ನೋದು ನಮಗಿನ್ನೂ ಸಣ್ಣ ವಿಚಾರವಾಗಿಯೇ ಉಳಿದಿರುವ ಕಾರಣಕ್ಕೆ ನಾವು ನೂರಾರು ಕಾರಣಗಳನ್ನು ನೀಡಿ ಶೌಚಾಲಯ ನಿರ್ಮಾಣಕ್ಕೆ ಮೀನಮೇಷ ಎಣಿಸುತ್ತಿದ್ದೇವೆ. ಅಂದು ಆಕೆಯ ಸಾವು ಆ ಊರಿನಲ್ಲಿ ದೊಡ್ಡ ವಿಚಾರವಾಯಿತು. ಈ ಸಾವಿಗೆ ಕಾರಣವಾದ ಶೌಚಾಲಯ ಸಣ್ಣ ವಿಚಾರವಾಯಿತು. ಹಾಗಾದರೆ ನಾವು ಬದಲಾಗಬೇಕಾದುದೆಲ್ಲಿ? ಎರಡು, ಸಣ್ಣ ನಗರದ ಹುಡುಗಿಯೊಬ್ಬಳು ಹಳ್ಳಿಯ ಹುಡುಗನನ್ನು ಪ್ರೀತಿಸಿ ತಂದೆ-ತಾಯಿಯನ್ನು ಧಿಕ್ಕರಿಸಿ ಹಳ್ಳಿಗೆ ಬಂದಿದ್ದಳು. ಬಯಲು ಬಹಿರ್ದೆಸೆಯ ಸಂದರ್ಭದಲ್ಲಿ ಯಾರೋ ನೋಡಿದರು ಎನ್ನುವ ಕಾರಣಕ್ಕೆ ಊರಿನಲ್ಲಿ ಮಾರಾಮಾರಿಯಾಯಿತು. ಸಾಕ್ಷಿಯ ಕೊರತೆಯಿಂದ ಪೊಲೀಸ್ ಸ್ಟೇಷನ್ನಲ್ಲಿ ನ್ಯಾಯ ಸಿಗಲಿಲ್ಲ. ಆದರೆ, ಆಕೆಯ ಗೌರವ ಮಾತ್ರ ಹಾಳಾಯಿತು ಇಷ್ಟಕ್ಕೆ ನಿಲ್ಲಿಸದೆ ಈ ವಿಚಾರವನ್ನು ಊರಿನ ಪಂಚಾಯತ್ನ ಮುಂದಿಟ್ಟಾಗ, ಮತ್ತೆ ಊರಿನ ತುಂಬ ಈ ವಿಚಾರ ಹರಡಿ ಊರಿಗೆ ಊರೇ ಈ ವಿಚಾರದ ಚರ್ಚೆಯಲ್ಲಿ ತೊಡಗಿತು. ಈ ಅವಮಾನವನ್ನು ತಾಳಲಾರದೆ ಆ ಹೆಣ್ಮಗಳು ನೇಣಿಗೆ ಶರಣಾದಳು. ಗಂಡ ವಿಚಾರ ಕೇಳಿ ವಿಷ ಸೇವಿಸಿದ, ಆದರೆ ಆತ ಮುಂದೆ ಬದುಕುಳಿದ. ಆತ ತಾಳ್ಮೆ ಕಳೆದುಕೊಂಡು ಪೊಲೀಸ್ ಠಾಣೆ ಹಾಗೂ ನ್ಯಾಯ ಪಂಚಾಯಿತಿ ಎಂದು ಹೋರಾಡಿದ. ಈ ಪ್ರಸಂಗದಲ್ಲೂ ಕೂಡ ಊರಿನ ಜನರಿಗೆ ಶೌಚಾಲಯ ಇಲ್ಲದೆ ಇರೋದು ಸಣ್ಣ ವಿಚಾರವಾಗಿತ್ತು. ಅವರು ಹಾಗೆಯೇ ಮಾತನಾಡಿಕೊಂಡರು.
ಶೌಚಾಲಯ ನಿರ್ಮಾಣ ಇನ್ನೂ ಸಣ್ಣ ವಿಚಾರವಾಗಿರುವ ಕಾರಣಕ್ಕಾಗಿಯೇ ಅದನ್ನು ಕಡೆಗಣಿಸಿದ್ದೇವೆ. ಜಾಸ್ತಿ ಹಣ ಖರ್ಚು ಮಾಡಿ ಮದುವೆ ಮಾಡುವುದು ನಮ್ಮ ಗೌರವ ಎಂದು ಭಾವಿಸುತ್ತೇವೆ. ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಳ್ಳುತ್ತೇವೆ. ಆದರೆ, ಬೆಳಗ್ಗೆ ಎದ್ದಾಕ್ಷಣ ಆಕೆಯನ್ನು ಬಯಲಿಗೆ ಕಳಿಸುತ್ತೇವೆ. ನಮ್ಮ ಮನೆಯ ಹೆಣ್ಣು ಮಕ್ಕಳು ಋತುಮತಿಯಾದರೆ ಲಕ್ಷಾಂತರ ರೂ. ವೆಚ್ಚದಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಆದರೆ, ಬೆಳಗ್ಗೆ ಎದ್ದು ಆ ಮುದ್ದು ಮಗಳನ್ನು ನಾಲ್ಕು ಜನ ಯುವಕರು ತಿರುಗಾಡುವ ರಸ್ತೆಯನ್ನು ಬಹಿರ್ದೆಸೆಗಾಗಿ ಅವಲಂಬಿಸುತ್ತೇವೆ. ಇನ್ನು ಗರ್ಭಿಣಿ, ಬಾಣಂತಿ, ವಯಸ್ಸಾದ ಅಜ್ಜಿ, ಅಜ್ಜರ ಪಾಡೇನು?
ರಸ್ತೆಯ ಬದುಗಳಲ್ಲಿ ತಿರುಗಾಡುವಾಗ ಅಲ್ಲಿ ಕಕ್ಕಸನ್ನು ನೋಡಿ, ಮಹಿಳೆಯರನ್ನು ಬೈದುಕೊಳ್ಳುತ್ತೇವೆ. ಆದರೆ, ಯಾಕೆ ಮಹಿಳೆಯರು ರಸ್ತೆಯನ್ನೇ ಅವಲಂಬಿಸುತ್ತಾರೆಂದರೆ ರಕ್ಷಣೆಗಾಗಿ ಎಂದು ನಾವು ಯೋಚಿಸುವುದಿಲ್ಲ. ಆಕೆ ಒಬ್ಬೊಂಟಿಯಾಗಿ ನಿರ್ಭೀತವಾಗಿ ದೂರದ ಕೆರೆ, ಮೈದಾನ, ಪೊದೆಗಳ ಕಡೆ ಬಯಲು ಬಹಿರ್ದೆಸೆಗೆ ಹೋಗಲಾರಳು. ಅದಕ್ಕೆ ಪುರುಷ ಸಮಾಜದ ಕ್ರೌರ್ಯವೇ ಕಾರಣ. ಅದೆಂತಹ ಯಾತನೆಯ ಸ್ಥಿತಿ ಎಂದರೆ ಬಯಲು ಬಹಿರ್ದೆಸೆಯಲ್ಲೂ ಆಕೆ ಬೇರೊಬ್ಬರ ರಕ್ಷಣೆಯನ್ನು ಬಯಸುತ್ತಾಳೆ. ಯಾಕೆಂದರೆ ಶೇ. 71ರಷ್ಟು ಅತ್ಯಾಚಾರಗಳು ಬಯಲು ಬಹಿರ್ದೆಸೆ ವೇಳೆಯಲ್ಲಿಯೇ ನಡೆಯುತ್ತವೆ.
ಇದು ಪುರುಷರಿಗೆ ಕ್ಷುಲ್ಲಕ ವಿಚಾರ. ಆದರೆ, ಹೆಣ್ಣು ಮಕ್ಕಳ ಪಾಡು? ನನ್ನೊಬ್ಬ ಸ್ನೇಹಿತನಿದ್ದ, ಆತ ಪ್ರತಿದಿನ ಬೆಳಗಿನ ಜಾವ 2 ಕಿ.ಮೀ. ದೂರದಿಂದ 4 ಬಿಂದಿಗೆ ನೀರನ್ನು ಪ್ರತಿದಿನ ಹೊತ್ತು ತರುತ್ತಿದ್ದ. ಕುತೂಹಲಕ್ಕೆ ‘‘3 ದಿನಕ್ಕೊಮ್ಮೆ ಕುಡಿಯೋ ನೀರು ಬರುತ್ತದೆ. ಅದೇ ಸಾಕಲ್ವೆ? ಯಾಕೆ ಇಷ್ಟೊಂದು ಕಷ್ಟಪಡ್ತಿದ್ದೀಯಾ?’’ ಅಂದೆ. ಅದಕ್ಕೆ ಆತ ‘‘ನನ್ನ ಹೆಂಡತಿ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳು ಶೌಚಾಲಯ ಬಳಸ್ತಾರೆ. ಆ ಮೂವರಿಗೂ ಒಂದೊಂದು ಬಿಂದಿಗೆ ನನಗೊಂದು ಬಿಂದಿಗೆ’’ ಅಂದ. ಒಮ್ಮೆ ಮೂಕವಾಗಿ ಯೋಚಿಸಿದೆ. ನಮಗೆ ಮೊದಲು ನೀರ್ ಕೊಡಿ ಆಮೇಲೆ ಶೌಚಾಲಯ ಕಟ್ಕೋತೀವಿ ಅನ್ನೋರಿಗೆ ಇಂತಹ ವ್ಯಕ್ತಿ ಮಾದರಿಯಾಗಲಿ ಎಂದುಕೊಂಡೆ. ಊಟ, ತಿಂಡಿ, ಅಡುಗೆ, ತೊಳೆಯೋದು, ಸ್ನಾನ, ಬಟ್ಟೆ ಇವು ನಮ್ಮ ಬದುಕಿನ ಅನಿವಾರ್ಯ ಭಾಗಗಳಾಗಿವೆ. ಎಷ್ಟೇ ಕಷ್ಟಬಂದರೂ ಕೂಡ ನಾವಿದನ್ನು ಪ್ರತಿನಿತ್ಯ ಪೂರೈಸಿಕೊಳ್ಳುತ್ತೇವೆ. ಆದರೆ, ಶೌಚಾಲಯ ಇನ್ನೂ ನಮ್ಮ ಬದುಕಿನ ಅನಿವಾರ್ಯ ಭಾಗ ಎಂದು ನಮಗನಿಸಿಲ್ಲ. ಆ ಕಾರಣಕ್ಕಾಗಿಯೇ ನಾವು ಶೌಚಾಲಯ ಎಂದಾಕ್ಷಣ ನೂರಾರು ಪ್ರಶ್ನೆಗಳನ್ನು ಮುಂದಿಡುತ್ತೇವೆ. ಇದು ಎಂದು ನಿಂತೀತು?