ಬರುತ್ತಿದೆ ‘ರೊಬೊಟ್’ ಸೂಟ್ಕೇಸ್ಗಳು...
ಪ್ರಪಂಚೋದ್ಯ
ಚಾಲಕರಹಿತ ಕಾರುಗಳು ಮಾರುಕಟ್ಟೆಗೆ ಬರಲು ಸ್ವಲ್ಪ ಸಮಯ ಬೇಕಾಗಬಹುದು. ಆದರೆ ಸ್ವಯಂಚಾಲಿತ ಸೂಟ್ಕೇಸ್ಗಳು ಈಗಾಗಲೇ ಭಾರೀ ಜನಪ್ರಿಯಗೊಂಡಿವೆೆ.
ಆದರೆ ಚಾಲಕರಹಿತ ಕಾರುಗಳಲ್ಲಿ ಅಳವಡಿಸಲಾದ ಕೆಲವು ತಂತ್ರಜ್ಞಾನಗಳನ್ನು, ರಿಮೋಟ್ ಕಂಟ್ರೋಲ್ ಮೂಲಕ ಸಂಚರಿಸುವ ಈ ಸೂಟ್ಕೇಸ್ಗಳಲ್ಲಿ ಅಳವಡಿಸಲಾಗಿದೆ. ಭಾರವಾದ ಲಗ್ಗೇಜ್ಗಳನ್ನು ಹೊತ್ತೊಯ್ಯುವ ತೊಂದರೆಯನ್ನು ಎದುರಿಸುವ ಪ್ರಯಾಣಿಕರಿಗೆ ಅತ್ಯಂತ ಪ್ರಯೋಜನಕಾರಿಯಾದ ಈ ರೊಬೊಟ್ ಸೂಟ್ಕೇಸ್ಗಳನ್ನು ಅಮೆರಿಕದ ಲಾಸ್ವೆಗಾಸ್ನಲ್ಲಿ ಇತ್ತೀಚೆಗೆ ನಡೆದ ಗ್ರಾಹಕ ಮೇಳದಲ್ಲಿ ಅನಾವರಣಗೊಳಿಸಲಾಗಿದೆ.
ಕ್ಯಾಲಿಫೋರ್ನಿಯಾ ಮೂಲದ ಟ್ರಾವೆಲ್ಮೇಟ್ ಕಂಪೆನಿಯು ತಯಾರಿಸಿರುವ ಈ ರೊಬೊಟ್ ಸೂಟ್ಕೇಸನ್ನು, ಸ್ಮಾರ್ಟ್ ಫೋನ್ ಆ್ಯಪ್ ಮೂಲಕ ನಿಯಂತ್ರಿಸಬಹುದಾಗಿದೆ. ತನ್ನ ಮಾಲಕನ ಜೊತೆಗೆ ಅದು ತಾಸಿಗೆ 11 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಅಷ್ಟೇ ಅಲ್ಲ ತಾನು ಸಾಗುವ ದಾರಿಯಲ್ಲಿ ಎದುರಾಗುವ ಅಡೆತಡೆಗಳನ್ನು ಕೂಡಾ ಅದು ಗ್ರಹಿಸಬಲ್ಲದು. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನವನ್ನು ಹೊಂದಿರುವ ಈ ಸೂಟ್ಕೇಸನ್ನು ಸ್ಮಾರ್ಟ್ಫೋನ್ ಆ್ಯಪ್ ಮೂಲಕ ಮಾಲಕನು ನಿರ್ದೇಶಿಸಬಹುದಾಗಿದೆ.
1,100 ಡಾಲರ್ ಬೆಲೆಯಿರುವ ಈ ರೊಬೊಟ್ ಸೂಟ್ಕೇಸ್, ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಬರಲಿದ್ದು, ಆನಂತರ ಯುರೋಪ್ ಹಾಗೂ ಜಪಾನ್ಗಳಿಗೆ ಆಗಮಿಸಲಿದೆ.