varthabharthi


ನನ್ನೂರು ನನ್ನ ಜನ

ಮರಳಿ ನನ್ನೂರು ಮಂಗಳೂರಿಗೆ

ವಾರ್ತಾ ಭಾರತಿ : 31 Jan, 2018
ಚಂದ್ರಕಲಾ ನಂದಾವರ

ನನ್ನ ಬದುಕಿನಲ್ಲಿ ಬಾಲ್ಯದಿಂದ ಹದಿ ಹರೆಯದ ವರೆಗಿನ ಹದಿನೇಳು ವರ್ಷಗಳನ್ನು ನನ್ನ ಪ್ರೀತಿಯ ಹುಟ್ಟೂರು ಬಿಜೈಯಲ್ಲಿ ಕಳೆದುದು ಸುದೀರ್ಘವಾದ ಕಾಲವಾದರೂ ಅದರಲ್ಲಿ ಮುಗ್ಧತೆಯ ಕಾಲವೇ ಹೆಚ್ಚು. ಇದೀಗ ಕಾಟಿಪಳ್ಳ ಕೃಷ್ಣಾಪುರದ ವಾಸ್ತವ್ಯ ಹನ್ನೆರಡು ವರ್ಷಗಳದ್ದಾದರೂ ಅದು ನನ್ನ ಬದುಕಿನ ಅನೇಕ ಅನುಭವಗಳನ್ನು ವಿಶ್ಲೇಷಿಸುವ, ವಿಮರ್ಶಿಸುವ ಆ ಮೂಲಕ ತನ್ನನ್ನು ತಾನು ಅರಿತುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟ ಕಾಲವೂ ಹೌದು. ಕೃಷ್ಣಾಪುರದ ವಾಸ್ತವ್ಯದ ಪ್ರಾರಂಭದ ಐದಾರು ವರ್ಷದೊಳಗೆ, ಮಂಗಳೂರಿನ ತವರು ಮನೆಯಲ್ಲಿ ತಂದೆ ನಿಧನರಾದರು. ಅದರ ಮುಂದಿನ ವರ್ಷ ನಮ್ಮ ಜತೆಯಲ್ಲಿದ್ದ ನನ್ನ ಅತ್ತೆ ನಮ್ಮವರ ತಾಯಿ ಅವರ ಮಗಳು ಅಂದರೆ ನನ್ನ ಅತ್ತಿಗೆಯ ಮನೆಗೆ ಕೆಲವೇ ದಿನಗಳಿಗೆ ಹೋದವರು ಒಂದು ವಾರದ ಅಸೌಖ್ಯದಿಂದ ತೀರಿಕೊಂಡರು. ಮತ್ತೆರಡು ವರ್ಷಗಳಲ್ಲಿ ನಮ್ಮವರ ತಂದೆ ನನ್ನ ಮಾವನೂ ಈ ಲೋಕವನ್ನು ತೊರೆದರು. ಈ ಎಲ್ಲರೂ ಅವರ 63ನೇ ವಯಸ್ಸಿನಿಂದ 80ರ ವಯಸ್ಸಿನೊಳಗೆ ನಮ್ಮನ್ನು ಬಿಟ್ಟು ಅಗಲಿದ ಹಿರಿಯರೇ ಆಗಿದ್ದರು. ಆದರೂ ಅವರೆಲ್ಲ ಇಲ್ಲದ ಮನೆಗಳ ಖಾಲಿತನ, ಮನಸ್ಸುಗಳ ಖಾಲಿತನ ನಮ್ಮನ್ನು ಕಾಡಿದ್ದು ನಿಜ.

ನಮ್ಮ ಈ ಮನಸ್ಥಿತಿಯನ್ನು ಮನೆಯಂಗಳದ ತುಂಬ ತುಂಬಿದ್ದ ಹಸಿರು ಮರಗಳು, ಕಾಯಿಬಿಡುವ ತೆಂಗಿನಮರಗಳು, ಹೂಗಿಡಗಳು ಬದಲಾಯಿಸುವ ಪ್ರಯತ್ನದಲ್ಲಿ ಸೋಲುತ್ತಿದ್ದುದೂ ನಿಜ. ನಮ್ಮಿಬ್ಬರ ಸಾಹಿತ್ಯ ಕಾರ್ಯಕ್ರಮಗಳು, ನಮ್ಮ ಬರವಣಿಗೆ, ನಮ್ಮವರ ಸಂಶೋಧನಾ ಕಾರ್ಯಗಳೆಲ್ಲವೂ ಇವುಗಳ ಜತೆಗೇ ಮುಂದುವರಿಯುತ್ತಿದ್ದಂತೆ ಮಗಳು ಹೈಸ್ಕೂಲು ಮುಗಿಸುವ ಹಂತಕ್ಕೆ ತಲುಪುತ್ತಾಳೆ. ಮಗನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮುಗಿಯುತ್ತದೆ. ಆಗ ನಾವು ಪುನಃ ಮಂಗಳೂರಿಗೆ ಹಿಂದಿರುಗುವ ಎನ್ನುವ ಆಲೋಚನೆ ಆಗಾಗ ಬರುತಿತ್ತು. ಈ ಆಲೋಚನೆಗೆ ಈ ಊರಿನಲ್ಲಿ ಹುಟ್ಟಿಕೊಂಡ ಅಭದ್ರತೆಯ ಸ್ಥಿತಿಯೂ ಪೂರಕವಾಯಿತು ಎಂದರೆ ತಪ್ಪಲ್ಲ. ಈ ಹಂತದಲ್ಲಿ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಬಳಿಯ ದಡ್ಡಲ್‌ಕಾಡಿನ ಬಳಿಯಲ್ಲಿ ಒಂದು ಹೊಸ ಬಡಾವಣೆ ನಿರ್ಮಾಣಗೊಳ್ಳುವ ಹಿನ್ನೆಲೆಯಲ್ಲಿ ನಿವೇಶನಗಳು ಮಾರಾಟಕ್ಕಿವೆ ಎಂದು ತಿಳಿದಾಗ ಒಂದು ಸಣ್ಣ ನಿವೇಶನವನ್ನು ಖರೀದಿಸಿದ್ದೆವು. ಆ ನಿವೇಶನದಲ್ಲಿ ಮನೆ ಕಟ್ಟುವುದಕ್ಕೆ ಬೇಕಾದ ಆರ್ಥಿಕ ಸ್ಥಿತಿಯಂತೂ ನಮ್ಮಲ್ಲಿ ಇರಲಿಲ್ಲ. ಜತೆಗೆ ಕೃಷ್ಣಾಪುರದ ಮನೆ ಹಿತ್ತಿಲ ಖರೀದಿಗೆ ಗೆಳತಿಯಿಂದ, ಹಿತೈಷಿಗಳಿಂದ ಸಾಲ ಪಡೆದಿದ್ದೇವಲ್ಲಾ. ಈಗ ಈ ಎರಡನೇ ಮನೆಗೆ ಹಾಗೆ ಸಾಲ ಬೇಡುವುದು ಮನಸ್ಸಿಗೆ ಹಿತವಾದುದೂ ಆಗಿರಲಿಲ್ಲ ಮತ್ತು ವೈಯಕ್ತಿಕ ಸಾಲ ಕೂಡದು ಎಂಬ ನಿರ್ಧಾರವೂ ನಮ್ಮದಾಗಿತ್ತು.

ಇಷ್ಟು ವರ್ಷಗಳ ಅವಧಿಯಲ್ಲಿ ಬ್ಯಾಂಕುಗಳು ಗೃಹಸಾಲ ನೀಡಲು ಪ್ರಾರಂಭ ಮಾಡಿದ್ದುವು. ಆದರೆ ಅದರ ಬಡ್ಡಿಯ ದರ ಹೆಚ್ಚೇ ಆಗಿತ್ತು. ಅಲ್ಲದೆ, ಅವರು ಗೃಹ ನಿರ್ಮಾಣದ ಪೂರ್ಣ ಮೊತ್ತ ನೀಡುತ್ತಿರಲಿಲ್ಲ. ಇಷ್ಟರಲ್ಲಿ ಜೀವವಿಮಾ ನಿಗಮ ಗೃಹ ಸಾಲದ ಯೋಜನೆ ಪ್ರಾರಂಭಿಸುತ್ತದೆ ಎಂದು ನಾವು ಕಡ್ಡಾಯವಾಗಿ ಜೀವವಿಮೆ ಮಾಡಬೇಕಾದ್ದರಿಂದ ನಮಗೆ ನೆರವಾದ ಜೀವವಿಮಾ ನಿಗಮದ ಏಜೆಂಟರು ತಿಳಿಸಿದ್ದು ನಮಗೆ ಹೊಸ ಆಸೆಯನ್ನು ಚಿಗುರಿಸಿತು. ದಿನಾ ಬೆಳಗ್ಗೆ ಬೀಗಹಾಕಿ, ಸಂಜೆ ಬಂದು ಬೀಗ ತೆಗೆದು ಮನೆ ಪ್ರವೇಶಿಸುವುದು ನಮ್ಮವರಿಗೆ ಕೆಡುಕೆನಿಸಲು ಶುರುವಾದಂತೆ ಯಾಕೆ ಇಷ್ಟು ದೂರ ಅನಗತ್ಯ ಓಡಾಡುವುದು ಎಂಬುದು ನನ್ನವರ ಚಿಂತೆ. ನಮ್ಮಿಬ್ಬರಿಗೂ ವರ್ಗಾವಣೆ ಇಲ್ಲದಿರುವುದು ಕೂಡ ಇದಕ್ಕೆ ಕಾರಣ. ನನಗೋ ಈ ಹತ್ತು ವರ್ಷಗಳಲ್ಲಿ ಕೃಷ್ಣಾಪುರ ಮಂಗಳೂರಿನ ಪ್ರಯಾಣ ಪ್ರಾರಂಭದಂತೆ ಪ್ರಕೃತಿಯ ವೀಕ್ಷಣೆ, ಪುಸ್ತಕದ ಓದು, ಹೊಸ ಪರಿಚಿತರೊಂದಿಗಿನ ಮಾತು ಇವೆಲ್ಲಕ್ಕೂ ಇತಿಶ್ರೀ ಆಗಿತ್ತು. ಈಗ ದಿನಾ ಬೆಳಗ್ಗೆ ಸಂಜೆ ನೇತಾಡಿಕೊಂಡು ಓಡಾಡುವ ಪರಿಸ್ಥಿತಿ. ಜತೆಗೆ ಮನೆಗೆಲಸಗಳ ಜವಾಬ್ದಾರಿಗಳಿಂದ ದೇಹಕ್ಕೆ ಸಾಕು ಸಾಕೆನಿಸುತ್ತಿತ್ತು.

ಈ ಎಲ್ಲ ಕಾರಣಗಳಿಂದ ದಡ್ಡಲ್‌ಕಾಡಿನ ಗೊಲ್ಲಚ್ಚಿಲ್ ಬಡಾವಣೆಯಲ್ಲಿದ್ದ ನಿವೇಶನದಲ್ಲಿ ಮನೆಕಟ್ಟುವ ನಿರ್ಧಾರ ಮಾಡಿದೆವು. ಅಲ್ಲಿ ಈಗಾಗಲೇ ಮನೆ ನಿರ್ಮಾಣಗಳು ಪ್ರಾರಂಭವಾಗಿದ್ದುವು. ನಮಗೆ ನಿವೇಶನ ಖರೀದಿಸುವಲ್ಲಿ ನೆರವಾದ ಕಂಟ್ರಾಕ್ಟರ್ ಬಿ.ಆರ್. ಆಚಾರ್‌ರವರು ಸಾಮಾನ್ಯವಾಗಿ ಎಲ್ಲರಿಗೂ ಸಣ್ಣ ವೆಚ್ಚದ ಮನೆಯ ನಕ್ಷೆಯನ್ನು ತೋರಿಸಿ ಅವುಗಳ ವೆಚ್ಚದ ಹಂತಗಳನ್ನು ಕುರಿತು ತಿಳಿಸಿದರು. ನಮ್ಮ ಎಲ್‌ಐಸಿ ಏಜೆಂಟರು ನಮ್ಮಿಂದ ಜತೆಯಾಗಿ ಗೃಹಸಾಲದ ಅರ್ಜಿಯನ್ನು ಮೊದಲಿಗೆ ಸಲ್ಲಿಸಿ ದಾಖಲೆ ಮಾಡಿದರು. ಅರ್ಜಿ ಸಲ್ಲಿಕೆಯಾಗಿ ಸಾಲ ನೀಡಿಕೆಯ ಒಪ್ಪಿಗೆ ಇಲ್ಲದೆ ನಮ್ಮ ಮನೆ ನಿರ್ಮಾಣದ ಕಾರ್ಯ ಆರಂಭವಾಗುವಂತಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯವಾದುದು. ಅಂತೂ ನಿಧಾನಕ್ಕೆ ಹಣ ಹೊಂದಿಸಿಕೊಂಡು ಮನೆ ಕಟ್ಟಿಸೋಣ ಎನ್ನುವುದಕ್ಕೆ ಇನ್ನೊಂದು ಕಾರಣವೂ ಇದೆ. ನಮಗೆ ನಿವೇಶನ ಒದಗಿಸಿಕೊಟ್ಟವರೇ ಮನೆ ನಿರ್ಮಿಸಿ ಕೊಡುವ ಷರತ್ತು ಇತ್ತು.

ಇಡೀ ಬಡಾವಣೆಗೆ ಅವರೇ ಕಂಟಾಕ್ಟರ್ ಹಾಗೂ ಸತೀಶ್‌ರಾವ್ ಇಡ್ಯಾ ಇಂಜಿನಿಯರರು. ಆದ್ದರಿಂದ ಅವರ ಕೈಯಲ್ಲಿ ಹತ್ತು ಹಲವು ಮನೆಗಳ ನಿರ್ಮಾಣ. ಅವರಿಗೆ ನಮ್ಮ ಮನೆ ಕೂಡಲೇ ಕಟ್ಟಿಕೊಡಬೇಕಾದ ತುರ್ತು ಇರಲಿಲ್ಲ. ನಮಗೂ ಅಂತಹ ತುರ್ತು ಇಲ್ಲದ್ದರಿಂದ ಸಾಲದ ಒಪ್ಪಿಗೆ ಪತ್ರ ದೊರೆತ ಬಳಿಕವೇ ನಮ್ಮ ಯೋಚನೆ ಹಾಗೂ ಯೋಜನೆ ಎಂಬಂತೆ ನಿರಾಳವಾಗಿದ್ದೆವು. ಹಾಗೆಯೇ ನಮಗೆ ನಮ್ಮ ಸಂಪಾದನೆ ಹಾಗೂ ಮರುಪಾವತಿಯ ಸಾಮರ್ಥ್ಯದಲ್ಲಿ ಎಷ್ಟು ಸಾಲ ದೊರೆಯಬಹುದೆಂಬುದನ್ನು ತಿಳಿದೇ ನಮ್ಮ ಮನಗೆ ತಳಪಾಯ ಹಾಕುವ ಯೋಚನೆ ಇತ್ತು. ಜೀವವಿಮಾ ನಿಗಮದ ಗೃಹ ಸಾಲ ಯೋಜನೆಯ ಕಚೇರಿಯ ಉದ್ಘಾಟನೆಯಾಯಿತು. ಅಲ್ಲಿನ ಅಧಿಕಾರಿ ಕೆ.ವಿ. ನಾರಾಯಣ್ ಎಂಬವರು ಕೇರಳದವರು. ಇಲ್ಲಿಯೇ ಉದ್ಯೋಗಕ್ಕಾಗಿ ನೆಲೆಸಿದವರು. ಬಹಳ ಒಳ್ಳೆಯ ಸಜ್ಜನ ಅಧಿಕಾರಿ. ಆತ್ಮೀಯವಾಗಿ ಮಾತನಾಡಿಸಿ ಜೀವವಿಮಾ ವಿಭಾಗದಿಂದ ಸಾಲ ಪಡೆದಾಗಲೂ ನಾವು ಹೇಗೆ ಸುಭದ್ರರು ಎನ್ನುವುದನ್ನು ಮನದಟ್ಟು ಮಾಡುತ್ತಿದ್ದರು. ಜತೆಗೆ ಅವರ ಮಗಳು ಸೈಂಟ್ ಆ್ಯನ್ಸ್ ಹೈಸ್ಕೂಲಲ್ಲಿ ನಮ್ಮವರ ಶಿಷ್ಯೆಯಾಗಿದ್ದಳು ಎಂಬ ಕಾರಣದಿಂದ ನಮ್ಮಿಬ್ಬರ ಬಗ್ಗೆ ಇನ್ನಷ್ಟು ಗೌರವ ತೋರಿಸುತ್ತಿದ್ದರು.

ಸಾಲಕ್ಕೆ ಅರ್ಜಿ ಸಲ್ಲಿಸಿದ ಮೊದಲಿಗರೆಂಬ ದಾಖಲೆ ಇದ್ದರೂ ನಾವು ಸಾಲ ಪಡೆಯುವಲ್ಲಿ ನಾಲ್ಕನೆಯವರಾದೆವು. ನಮ್ಮಿಬ್ಬರಿಗೂ ಯಾವುದೇ ವಿಷಯದಲ್ಲಿ ನಾವೇ ಮೊದಲಿಗರಾಗಬೇಕೆಂಬ ಅಥವಾ ನಮಗೇ ಸಿಗಬೇಕೆಂಬ ನಿರೀಕ್ಷೆಗಳು ಎಂದಿಗೂ ಇರಲಿಲ್ಲವಾದ್ದರಿಂದ ಅನಗತ್ಯವಾದ ಒತ್ತಡಗಳೂ ಇರಲಿಲ್ಲ. ಹಾಗಲ್ಲದೆ ತಳಪಾಯಕ್ಕೆ ನಾವೇ ಹಣ ಹೂಡಿದ ಬಳಿಕವಷ್ಟೇ ಸಾಲ ನೀಡುವ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಅಂತೂ ಮಂಗಳೂರಲ್ಲಿ ಮನೆಕಟ್ಟುವ ನಿರ್ಧಾರ ಮಾಡಿದುದರಿಂದ ಮಗಳನ್ನು ಸೈಂಟ್ ಆ್ಯಗ್ನೆಸ್ ಕಾಲೇಜಿಗೆ ಸೇರಿಸಿದೆವು. ಕೃಷ್ಣಾಪುರದಿಂದ ಕಂಕನಾಡಿಗೆ ಇದ್ದ 53 ನಂಬ್ರದ ಬಸ್ಸು ಅವಳ ಕಾಲೇಜು ಪ್ರಯಾಣಕ್ಕೆ ಅನುಕೂಲವಾಗಿತ್ತು. ಮಗನ ಏಳನೇ ತರಗತಿ ಮುಗಿದಿರಲಿಲ್ಲವಾದ್ದರಿಂದ ಮುಂದಿನ ವರ್ಷದೊಳಗೆ ಮನೆ ನಿರ್ಮಾಣ ಮುಗಿಸುವುದು ಅಗತ್ಯವೂ ಅನಿವಾರ್ಯವೂ ಆಗಿ ಅವನ ಹೈಸ್ಕೂಲು ವಿದ್ಯಾಭ್ಯಾಸ ಮಂಗಳೂರಲ್ಲಿಯೇ ಆರಂಭವಾಗಬೇಕಿತ್ತು.

ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ನಮ್ಮ ಯೋಜನೆಗೆ ನಾಂದಿ ಹಾಡಲೇ ಬೇಕಿತ್ತು.ಗೊಲ್ಲಚ್ಚಿಲ್‌ನ ಬಡಾವಣೆ ಮಿನೇಜಸ್ ಕುಟುಂಬದವರಲ್ಲಿ ಇದ್ದ ಹೆಚ್ಚುವರಿ ಜಾಗ ಅರ್ಲನ್ ಸೀಲಿಂಗ್ ಕಾನೂನಿನ ಮೇರೆಗೆ ಈಗ ನಿವೇಶನಗಳಾಗಿ ಮಾರಾಟವಾಗುವುದಕ್ಕೆ ಕಾನೂನು ರೀತ್ಯಾ ಪರವಾನಿಗೆ ದೊರೆತು ನಾವೆಲ್ಲ ಖರೀದಿಸಿದ್ದೆವು. ನಮಗೆ ನಿವೇಶನಗಳ ಮಾರಾಟದ ವ್ಯವಸ್ಥೆಯನ್ನು ಮಾಡುತ್ತಿದ್ದ ಬಿ.ಆರ್. ಆಚಾರ್‌ರವರು ತನ್ನ ಈ ಬಡಾವಣೆಯ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು. ನಾವಿಬ್ಬರು ಉಪನ್ಯಾಸಕರು ಎಂದು ತಿಳಿದು ಗೌರವದಿಂದ ಕಾಣುತ್ತಿದ್ದರು. ಅಲ್ಲದೆ, ಈ ಬಡಾವಣೆಯಲ್ಲಿ ನಿವೇಶನಗಳನ್ನು ಖರೀದಿಸಿದವರೆಲ್ಲರೂ ಬ್ಯಾಂಕ್ ಉದ್ಯೋಗಿಗಳು, ಉಪನ್ಯಾಸಕರು ಡಾಕ್ಟರರು, ಸರಕಾರಿ ಕಚೇರಿಗಳಲ್ಲಿರುವವರು ಎಲ್ಲರೂ ವಿದ್ಯಾವಂತರಾಗಿದ್ದು ಇದೊಂದು ಉತ್ತಮ ಬಡಾವಣೆಯಾಗಲಿದೆ ಎಂದು ಹೇಳುತ್ತಿದ್ದರು.

ಆಗಾಗ ಅವರ ಕಚೇರಿಗೆ ಬಂದಾಗ ಹಲವರ ಪರಿಚಯವಾಗುತ್ತಿತ್ತು. ಅವರು ಹೇಳಿದಂತೆ ನಿಜವಾಗಿಯೂ ಇಂದು ‘ಲೋಹಿತ್‌ ನಗರ’ ಎಂಬ ಹೆಸರಿನ ಬಡಾವಣೆಯಲ್ಲಿರುವ ವಿದ್ಯಾವಂತ ಪ್ರಜ್ಞಾವಂತ ನಾಗರಿಕರ ಬದುಕು ವೈವಿಧ್ಯಮಯವಾದುದು ಎಂದೇ ಅನ್ನಿಸುತ್ತಿದೆ. ಈ ಗೊಲ್ಲಚ್ಚಿಲ್ ಎನ್ನುವ ಪ್ರದೇಶ ವೈಯಕ್ತಿಕವಾಗಿ ನನಗೆ ಹಿಂದೆಯೇ ಪರಿಚಿತವಾದುದು. ನಾವು ದೇರೆಬೈಲಿನಲ್ಲಿದ್ದಾಗ ದಡ್ಡಲ್‌ಕಾಡಿನಲ್ಲಿದ್ದ ಟೈಲರಿಂಗ್ ಕ್ಲಾಸಿಗೆ ಬರುತ್ತಿದ್ದುದನ್ನು ಈ ಹಿಂದೆ ಹೇಳಿದ್ದೆ. ಆಗ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದ ಕಾರ್ಯ ನಡೆಯುತಿತ್ತು. ಪೂರ್ಣವಾಗಿರಲಿಲ್ಲ. ಈಗ ನಾವು ಖರೀದಿಸಿದ ನಿವೇಶನವುಳ್ಳ ಬಡಾವಣೆಯ ಮೂಲ ಧಣಿಗಳಾಗಿದ್ದ ಮಿನೇಜಸ್ ಸಹೋದರರು ನನ್ನ ತಂದೆಯವರ ಉರ್ವಾ ಚರ್ಚ್‌ನ ಸೈಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದಾಗಿನ ಅವರ ಶಿಷ್ಯರಾಗಿದ್ದವರು. ಅವರ ಸಹೋದರಿಯವರಲ್ಲಿ ಕಿರಿಯವರಾದ ಸ್ಟೆಲ್ಲಾ ಮಿನೇಜಸ್ ನನ್ನ ತಂದೆಯವರು ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದಾಗ ಶಿಷ್ಯೆಯಾಗಿದ್ದವರು. ಮುಂದೆ ದೇರೆಬೈಲು ಚರ್ಚ್ ನ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ನನಗೂ ಪರಿಚಿತರಾಗಿದ್ದರು.

ಈ ಬಡಾವಣೆಯ ಸುತ್ತ ಇರುವ ಅನೇಕ ಮನೆಗಳಲ್ಲಿ ಅಪ್ಪನ ಶಿಷ್ಯ, ಶಿಷ್ಯೆಯರು ಇದ್ದು, ನನಗೆ ಈ ಬಡಾವಣೆಯ ಸ್ಥಳ ಹೊಸದಾಗಿ ಅಪರಿತವಾಗದೆ ಮತ್ತೆ ನನ್ನ ಊರಿಗೇ ಬಂದಂತೆ ಆಯ್ತು. ಆ ಕಡೆ ದಡ್ಡಲ ಕಾಡಿನಲ್ಲಿದ್ದ ನಿವಾಸಿಗಳೂ ಪರಿಚಿತರು. ಇನ್ನ್ನು ಮುಂದೆ ಉರ್ವಾ ಸ್ಟೋರ್ಸ್‌ನಲ್ಲಿದ್ದ ಹದಿನೈದು ವರ್ಷಗಳ ವಾಸ್ತವ್ಯದ ಹಿನ್ನೆಲೆಯೂ ಆ ದಾರಿಯೂ ಅಲ್ಲಿದ್ದ ಮನೆಗಳವರೂ ನನ್ನ ತವರು ಮನೆಯ ಕಾರಣದಿಂದ ಪರಿಚಿತರೇ ಆಗಿದ್ದು, ನಾನು ಮತ್ತು ಪುನಃ ತವರಿಗೇ ಬರುವಂತಾಯಿತು. ಆದ್ದರಿಂದ ಕಾಟಿಪಳ್ಳ ಕೃಷ್ಣಾಪುರಕ್ಕೆ ಹೋದಾಗಿನ ಅನಾಥ ಭಾವ ಕಾಡದೆ ಇಲ್ಲಿ ಮನೆಕಟ್ಟಲು ಬರುವ ವೇಳೆಯಲ್ಲೇ ಅನೇಕರು ಪರಿಚಿತರು ಸಿಕ್ಕಿ ನಾನು ನನ್ನವರ ಜತೆ ಇರಲು ಬರುತ್ತಿದ್ದೇನೆ ಎಂಬ ಭಾವ. ಅದೇ 17 ನಂಬ್ರ, 33 ನಂಬ್ರ ಬಸ್‌ಗಳು. 28 ನಂಬ್ರದ ಬಸ್ ಮಾತ್ರ ಇಲ್ಲವಾಗಿತ್ತು. ಈ ಬಸ್‌ಗಳಲ್ಲಿ ಮತ್ತೆ ನನ್ನ ಕಾಪಿಕಾಡು, ಬಿಜೈ ಊರಿನ ಸ್ನೇಹಿತರು. ಹೀಗೆ ಗೊಲ್ಲಚ್ಚಿಲ್‌ನ ಮನೆಗೆ ಯಾವ ಕಡೆಯಿಂದ ಬಂದರೂ ಸಿಗುವವರು ಎಲ್ಲರೂ ನನ್ನವರೇ ಎಂಬ ಭಾವ ನನ್ನ ಮನಸ್ಸಿಗೆ ತುಂಬಾ ಖುಷಿ ನೀಡಿದ ವಿಷಯ. ಈ ಕಾರಣದಿಂದಲೇ ಇಂದಿಗೂ ನನ್ನ ಬಿಜೈ, ಕಾಪಿಕಾಡುಗಳು ದೇರೇಬೈಲಿನ ಉರ್ವಾಸ್ಟೋರ್ಸ್‌ನ ಹಳೆಯ ಸವಿಸವಿ ನೆನಪುಗಳು ಮನದ ತುಂಬಾ ತುಂಬಿಕೊಂಡಿದೆ. ಆದರೆ ಉರ್ವಾಸ್ಟೋರ್ಸ್‌ ನಲ್ಲಿದ್ದ ಮನೆಯನ್ನು ತಂದೆಯ ನಿಧನದ ಬಳಿಕ ಬದಲಾಯಿಸಿದ ನನ್ನ ತಮ್ಮ ತನ್ನ ಸಂಸಾರದೊಂದಿಗೆ, ಅಮ್ಮನೊಂದಿಗೆ ನಮ್ಮ ಕೃಷ್ಣಾಪುರದ ಮನೆಯ ಬಳಿಯಲ್ಲಿ ಮನೆ ಮಾಡಿಕೊಂಡಿದ್ದ.

ಜೀವವಿಮಾ ನಿಗಮದ ಗೃಹ ಸಾಲ ಯೋಜನೆಯಡಿ ನಾವಿಬ್ಬರೂ ಜತೆಯ ಸಾಲಗಾರರಾಗಿ 2 ಲಕ್ಷದ ಮೊತ್ತ ನಮಗೆ ದೊರೆಯುವುದೆಂದಾಯ್ತು. ಈಗ ನಾವು ನಮ್ಮ ನಿವೇಶನದಲ್ಲಿ ಗೃಹ ನಿರ್ಮಾಣದ ಪ್ರಾರಂಭದ ಕಾರ್ಯವಾಗಿ ಮಾಡಬೇಕಾದ್ದು ಭೂಮಿಪೂಜೆ ಎಂಬ ಸುಸಂಸ್ಕೃತ ಪದದೊಂದಿಗಿನ ಕಾರ್ಯವೆಂದಾದರೆ ಸಾಮಾನ್ಯ ಭಾಷೆಯಲ್ಲಿ ಕಲ್ಲುಹಾಕುವುದು, ಇನ್ನೂ ಜನಪದೀಯವಾಗಿ ತುಳುವಿನಲ್ಲಿ ಹೇಳುವುದಾದರೆ ಕುಟ್ಟಿ ಹಾಕುವುದು. ಯಾವ ಪದಗಳ ಬಳಕೆ ಮಾಡಿದರೂ ಕೆಲಸ ಒಂದೇ. ಆದರೆ ಪದಗಳಂತೆಯೇ ಅದರ ರೀತಿ ಬೇರೆ ಬೇರೆಯಾಗಿರುತ್ತದೆ ಎನ್ನುವುದು ಈ ಹಿಂದಿನ ವರ್ಷಗಳಲ್ಲಿ ನನ್ನ ಅನುಭವಗಳಿಗೆ ದೊರೆತ ಸತ್ಯ. ಈ ಸತ್ಯಗಳೊಂದಿಗಿನ ಮುಖಾಮುಖಿಯಲ್ಲಿ ಯಾವ ರೀತಿಯಲ್ಲಿ ಮಾಡುವುದು ಎಂಬುದು ಬರೇ ಸಣ್ಣ ವಿಷಯವಾಗದೆ ಗಂಭೀರ ಚಿಂತನೆಗೆ ಅವಕಾಶ ನೀಡಿತು. ಜತೆಗೆ ನಮ್ಮಿಬ್ಬರಿಗೂ ಈಗ ಹಿರಿಯರ ಸ್ಥಾನದಲ್ಲಿ ನಿಂತು ಮಾರ್ಗದರ್ಶಕರಾಗುವವರು ಇರಲಿಲ್ಲ. ಆದರೆ ಅವರ ಚಿಂತನೆಗಳ ಮಾರ್ಗದರ್ಶನವಿದ್ದುದು ನಿಜ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)