ಕಠಿಣ ಹೃದಯಿಗಳು ಮೃದುವಾದಾರೆಯೇ?
‘ಇಷ್ಟವಿಲ್ಲದವರಲ್ಲಿ ದೋಷ ಕಾಣುತ್ತದೆ’ ಅನ್ನುವ ನುಡಿಯು ರಾಜಕಾರಣದ ಪೈಪೋಟಿಯಲ್ಲಿ ಪಕ್ಷಕಾರರ ಪ್ರಗತಿಯ ಒಂದು ರಾಜಮಾರ್ಗವಾಗಿ ಬಿಟ್ಟಿದೆ. ವಿರೋಧ ಪಕ್ಷ ಯಾವತ್ತೂ ಅಪ್ರಿಯವಾಗಿ ಕಾಣುತ್ತವೆ ಹಾಗೂ ಅದನ್ನುರುಳಿಸಿ ತಮ್ಮ ಹೆಸರನ್ನು ಎಲ್ಲರ ಬಾಯಿಯಲ್ಲಿರುವಂತಾಗಲು ವಿರೋಧ ಪಕ್ಷಗಳ ದೋಷಗಳನ್ನು ಎಲ್ಲರೆದುರು ಎತ್ತಿ ಹಿಡಿಯುವುದು ರಾಜಕಾರಣಿಗಳ ಕೆಲಸವೇ ಸರಿ. ಕೆಲವೊಮ್ಮೆಯಂತೂ ಪಕ್ಷ ಕಾರರಿಂದ ಇಲ್ಲಸಲ್ಲದ ದೋಷಗಳನ್ನು ಪ್ರತಿಪಕ್ಷಗಳ ಮೇಲೆ ಹೊರಿಸಲ್ಪಟ್ಟು ಅವರ ಒಳ್ಳೆಯ ಸ್ವರೂಪವನ್ನು ಕೆಡಿಸುವ ಪ್ರವೃತ್ತಿ-ಅಲ್ಲ ಕೃತಿಯೂ ಆಗುತ್ತದೆ. ಇದಕ್ಕೆ ಉದಾಹರಣೆ ಬೇಕಾದರೆ ರಾಷ್ಟ್ರಭಕ್ತರು ಬ್ರಿಟಿಷ್ ರಾಜ್ಯ ಪದ್ಧತಿಯನ್ನು ಹೀಯಾಳಿಸುತ್ತಿರುವುದು, ಬ್ರಿಟಿಷ್ ರಾಜ್ಯದಲ್ಲಿ ಶಿಕ್ಷಣದ ಅವನತಿಯನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರ ಭಕ್ತಿಯಿಂದ ಅವರ ಮೇಲೆ ಹೇಗೆ ಬಾಯಿ ಮಾಡುತ್ತಿದ್ದಾರೆ ಅನ್ನುವುದನ್ನನೇನೂ ಬೇರೆ ಹೇಳಬೇಕಿಲ್ಲವಲ್ಲ. ಸ್ವಾತಂತ್ರ್ಯವಿರುವಲ್ಲೆಲ್ಲ ಪ್ರಜೆಗಳನ್ನು ವಿದ್ಯಾವಂತರನ್ನಾಗಿಸಲು ಪ್ರಾಥಮಿಕ ಶಿಕ್ಷಣವನ್ನು ಉಚಿತ ಹಾಗೂ ಕಡ್ಡಾಯ ಮಾಡಲಾಗಿದೆ. ಆದ್ದರಿಂದಲೇ ಹಿಂದೂಗಳು ವಿದ್ಯಾವಂತ ರಾಗಬೇಕಾದರೆ ಸ್ವಾತಂತ್ರ್ಯ ಬೇಕೇ ಬೇಕು ಎಂದು ಪಣ ತೊಟ್ಟು ಹೇಳಿದ್ದು ಎಲ್ಲರೂ ಕೇಳಿರಲೇಬೇಕು.
1910ರಲ್ಲಿ ಕಾಯ್ದೆ ಕೌನ್ಸಿಲ್ನಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡುವಂತಹ ಬಿಲ್ ಒಂದನ್ನು ತರಲಾಗಿತ್ತು. ಬಿಲ್ ರಚಿಸಿದ ಗೋಖಲೆಯವರ ಉದ್ದೇಶ ಪ್ರಾಮಾಣಿಕವಾಗಿದ್ದರೂ ಅವರಿಗೆ ಬೆಂಬಲ ನೀಡಿದ ರಾಷ್ಟ್ರಭಕ್ತರು ಅಪ್ರಾಮಾಣಿಕರಾಗಿದ್ದರು ಅನ್ನುವುದೀಗ ಸಿದ್ಧವಾಗಿದೆ. ಈ ರಾಷ್ಟ್ರಭಕ್ತರಿಗೆ ಕಡ್ಡಾಯ ಶಿಕ್ಷಣ ಬೇಕಿಲ್ಲ ಆದರೆ ಕೇವಲ ಪ್ರಜೆಗಳಿಗೆ ಅಗತ್ಯವಿದೆ ಅನ್ನುವುದೊಂದು ಕಾರಣಕ್ಕೆ ಹಾಗೂ ಸರಕಾರ ತಮ್ಮಲ್ಲಿ ಸಮಯವಿಲ್ಲ ಅನ್ನುವ ಕಾರಣವೊಡ್ಡಿ ಕಡ್ಡಾಯ ಮಾಡಲು ಹಿಂಜರಿದರೆ ಜನ ನಿರಾಶರಾಗಿ ಸರಕಾರದ ಬಗ್ಗೆ ನಿರಾಸೆ ತಾಳಿ ಸ್ವಾತಂತ್ರ್ಯ ಸುಲಭವಾಗಬಹುದು ಎನ್ನುವ ಧೋರಣೆಯಿಂದ ಇವರು ಕಡ್ಡಾಯ ಶಿಕ್ಷಣವನ್ನು ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ಇವರಿಗೆ ನಿಜವಾಗಿಯೂ ಪ್ರಾಮಾಣಿಕವಾಗಿ ಕಡ್ಡಾಯ ಶಿಕ್ಷಣ ಬೇಕಿದ್ದರೆ ಆಡಳಿತ ತಮ್ಮ ಕೈಗೆ ಬಂದ ಕೂಡಲೇ ಅದನ್ನು ಕಡ್ಡಾಯ ಮಾಡಿಬಿಡುತ್ತಿದ್ದರು. ಇಲ್ಲವೇ ಬಹುಶಃ ಸರಕಾರ ಕಡ್ಡಾಯ ಶಿಕ್ಷಣವನ್ನು ಅಲ್ಲಗಳೆದಿದ್ದಕ್ಕೆ ತೋರಿಕೆಯ ಕಳಕಳಿಯ ಆವೇಶದಲ್ಲಿ ತಾವು ಸರಕಾರಕ್ಕೆ ಯದ್ವಾತದ್ವಾ ಬೈದ ಪರಿಣಾಮವಾಗಿ ಸರಕಾರ ಶಿಕ್ಷಣವನ್ನು ಕಡ್ಡಾಯ ಮಾಡಿದರೆ ಒಂದೋ ತಮಗೆ ಬೇಡವಾಗಿದ್ದರೂ ಅದನ್ನು ಸ್ವೀಕರಿಸಬೇಕಾಗುವ ಅಥವಾ ತಮ್ಮ ಗುಟ್ಟು ರಟ್ಟಾಗಿ ನಾವು ಜನತೆಯ ಮಿತ್ರರಲ್ಲ ಹಿತಶತ್ರುಗಳು ಅನ್ನುವುದು ಮನದಟ್ಟಾಗಿ ಅವರು ನಮ್ಮ ಮುಖಕ್ಕೆ ಮಸಿ ಬಳಿದಾರು ಅನ್ನುವ ತಮ್ಮ ಭವಿಷ್ಯವನ್ನವರು ಮರೆತಿರಬಹುದು. ಆದರೆ ದೇವರು ಕೂಡಾ ಅವರ ಸತ್ವ ಪರೀಕ್ಷೆ ನೋಡಲೆಂದೇ ಕಾದಿದ್ದಾನೆ! ಏನು ಮಾಡುವುದಕ್ಕಾಗುತ್ತದೆ? ಯಾರಿಗೆ ಯಾವುದು ಬೇಡವೆನಿಸುತ್ತದೆಯೋ ದೇವರು ಅವರ ಕೈಯಿಂದ ಅದನ್ನೇ ಮಾಡಿಸುತ್ತಾನೆ. ಅವನ ಅಗಧ ಲೀಲೆಯೆದುರು ಯಾರು ಏನು ಮಾಡಿಯಾರು?
ಮುಂಬೈ ಸರಕಾರವನ್ನು ಗಮನದಲ್ಲಿಟ್ಟುಕೊಂಡು ಬ್ರಿಟಿಷ್ ಸರಕಾರವು 1917ರಲ್ಲಿ ಪಾಲಿಕೆಯವರಿಗೆ ಕಡ್ಡಾಯ ಹಾಗೂ ಉಚಿತ ಶಿಕ್ಷಣದ ಬಿಲ್ಲನ್ನು ಪಾಸು ಮಾಡಿಸಿತು. ಅದರಲ್ಲಿ ಪ್ರತಿಯೊಂದು ಪಾಲಿಕೆಯ ಹೆಚ್ಚುವರಿ ಖರ್ಚಿನ ಕೆಲವು ಭಾಗಗಳನ್ನು ತಾವು ಕೊಡುವ ಯೋಜನೆಯನ್ನೂ ಮಾಡಿತು. ಇಷ್ಟೊಂದು ಸವಲತ್ತುಗಳಿದ್ದರೂ ಕಡ್ಡಾಯ ಶಿಕ್ಷಣವಿಲ್ಲ ಎಂದು ಕೂಗುತ್ತಿರುವ ಪಾಲಿಕೆಗಳಲ್ಲಿ ಕೇವಲ ಆರೇಳು ಪಾಲಿಕೆಗಳೇ ಕಡ್ಡಾಯ ಶಿಕ್ಷಣದ ನಿರ್ಧಾರ ತೆಗೆದುಕೊಳ್ಳುವುದು ಅವರಿಗಿರುವ ಶಿಕ್ಷಣದ ಮೇಲಿನ ಮಹತ್ವವನ್ನು ಪ್ರೀತಿಯನ್ನು ತೋರಿಸುತ್ತದೆ. ಅದರಲ್ಲೂ ಬ್ರಿಟಿಷರ ಮೇಲೆ ಆರೋಪ ಹೊರಿಸುವವರಲ್ಲಿ ಮುಂದಿದ್ದ ಸೈನಿಕರಲ್ಲಿ ಹೆಚ್ಚು ಅಗ್ರಗಣ್ಯರಾದ ಪುಣೆಯವರೇ ಇನ್ನೂ ಹಿಂದುಳಿದಿದ್ದಾರೆ ಅನ್ನುವುದನ್ನು ಗಮನಿಸಬೇಕು. ಹುಡುಗರ ಜೊತೆ ಹುಡುಗಿಯರಿಗೂ ಶಿಕ್ಷಣ ಕೊಡಿಸಬೇಕೇ? ಇಲ್ಲ ಆಮೇಲೆ ಕೊಡಿಸಬೇಕೇ? ಅನ್ನುವುದರಲ್ಲೇ ಅವರು ತಮ್ಮ ಕಾಲ ಕಳೆಯುತ್ತಿದ್ದಾರೆ. ಕಡ್ಡಾಯ ಶಿಕ್ಷಣದ ಅಗತ್ಯವಾದರೂ ಏನು? ಇದ್ದ ಶಾಲೆಗಳನ್ನೇ ಸುಧಾರಿಸಿ ಸ್ವಚ್ಛ ಆಹ್ಲಾದಕರ ಗಾಳಿ ಬರುವಂತೆ ವ್ಯವಸ್ಥೆ ಮಾಡಿ, ಶಾಲೆಯ ಪರಿಸರದಲ್ಲಿ ಉದ್ಯಾನವನವನ್ನು ಬೆಳೆಸಿ, ವ್ಯಾಯಾಮಕ್ಕೂ ವ್ಯವಸ್ಥೆ ಮಾಡಿ ಅನ್ನುವಂತಹ ಖಾಸಾ ಫುಣೆಯ ಸಲಹೆ ಯನ್ನು ‘ಕೇಸರಿ’ಯವರು ಕೊಟ್ಟಿದ್ದರು. ಮೊದಲು ಶಾಲೆಗೆ ಹೋಗುವ ಮಕ್ಕಳು ಮೇಲ್ಜಾತಿಯ ಹಿಂದೂ ಮಕ್ಕಳಾಗಿರುತ್ತಿದ್ದರು.ಹಾಗಾಗಿ ಆ ಮಕ್ಕಳ ಖರ್ಚು, ಸವಲತ್ತುಗಳ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದು ಹಿಂದುಳಿದ ಹಾಗೂ ಬಹಿಷ್ಕೃತ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರಲ್ಲೇನರ್ಥವಿದೆ? ಎಂದು ‘ಕೇಸರಿ’ ಜನರಿಗನಿಸಿದ್ದಲ್ಲಿ ಆಶ್ಚರ್ಯವಿಲ್ಲ. ಆದರೆ ಹೀಗೆಲ್ಲ ಅಂದರೆ ಜನ ಏನಂದಾರು? ಅನ್ನುವ ಭಯ ಕಾಡಿ ಅವರು ತಮ್ಮ ಬ್ರಾಹ್ಮಣ ನಿಲುವಿನಲ್ಲಿ ಸ್ವಲ್ಪ ಸುಧಾರಣೆ ತಂದಿದ್ದಾರೆ.
ಅವರ ಈಗಿನ ಹೇಳಿಕೆಯ ಪ್ರಕಾರ ಮೊದಲು ಹುಡುಗರಿಗೆ ವಿದ್ಯೆ ಕಲಿಸಿ ಹುಡುಗಿಯರ ಬಗ್ಗೆ ಆಮೇಲೆ ಯೋಚಿಸಿದರಾಯಿತು ಅನ್ನುವುದು ಅವರ ಧೋರಣೆ. ಈ ಧೋರಣೆಗೆ ಕಾರಣ ಹಣದ ಕೊರತೆ! ಸ್ತ್ರೀಯರಿಗೆ ಮತಾಧಿಕಾರ ಸಿಗಬೇಕೆಂದು ಪುರಸ್ಕರಿಸಿದ ರಾಷ್ಟ್ರಭಕ್ತರೇ ಹುಡುಗಿಯರ ಕಡ್ಡಾಯ ಶಿಕ್ಷಣದ ಬಗ್ಗೆ ಮತ್ತೆ ಯೋಚಿಸಿದರಾಯಿತು ಅನ್ನುತ್ತಿದ್ದಾರೆ. ಎರಡು ವಿಭಿನ್ನ ವಿಚಾರಗಳ ಈ ವಿಷಮತೆ ಹಾಗೂ ವಿಚಾರಶೂನ್ಯತೆ ಕೇವಲ ಇಂತಹ ರಾಷ್ಟ್ರಭಕ್ತರಲ್ಲೇ ಕಾಣಬಹುದು. ತೆರಿಗೆಯ ಹೆಚ್ಚುವರಿ ಭಾರದ ಭಯಾನಕ ಸಂಕಟವನ್ನು ರಾಷ್ಟ್ರೀಯ ಪಕ್ಷ ಹೊರಿಸಿದಾಗ ಕೂಡ ಈ ಅಹಿಂಸಾವಾದಿಗಳ ಕಠೋರ ಮನಸ್ಸು ಮೃದುವಾಗಲಿಲ್ಲ, ಬದಲಿಗೆ ಈ ಸಂಕಟವನ್ನು ಗಮನಕ್ಕೆ ತರುವವರ ಚೇಷ್ಟೆ ಮಾಡಿ ಅವರನ್ನು ಚುಚ್ಚುಮಾತುಗಳಿಂದ ನೋಯಿಸಿ ತಮ್ಮ ಕಠೋರತನವನ್ನು ತೋರಿಸಿಕೊಟ್ಟರು ಎಂದು ಲೋಕಸಂಗ್ರಹಕಾರರು ವಿಲಾಪಿಸುತ್ತಿದ್ದಾರೆ. ನಮ್ಮ ಕೆಲಸ ನಾವು ನೋಡಿಕೊಳ್ಳುತ್ತೇವೆ ಎಂದು ಎದೆ ತಟ್ಟಿ ಹೇಳುವವರು ಹೀಗೆ ಅಳುವುದು ಆಶ್ಚರ್ಯವಾಗಿದೆ. ಕೆಲಸ ನೋಡಿಕೊಳ್ಳುವುದರ ಜೊತೆಗೆ ತೆರಿಗೆ ಭಾರದ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ ಅನ್ನುವುದನ್ನು ಲೋಕ ಸಂಗ್ರಹಕಾರರು ಮರೆತಿದ್ದಾರೆ.
ತೆರಿಗೆ ಭಾರ ಹೊರುವ ತಾಕತ್ತು ಪುಣೆಯ ಜನರಿಗಿಲ್ಲ ಎಂದೇನಾದರೂ ಲೋಕ ಸಂಗ್ರಹಕಾರರಿಗೆ ಅನಿಸುತ್ತಿದ್ದರೆ ಪುಣೆಯ ಜನರೇ ಬ್ರಿಟಿಷರಿಗೆ ಸಲಹೆ ಕೊಡಲು ಮುಂದಿದ್ದವರು ಅನ್ನುವುದನ್ನು ನೆನಪಿಸಿಕೊಡುತ್ತೇವೆ. ತೆರಿಗೆ ಭಾರ ಹೊರುವುದು ಅಸಾಧ್ಯವಾಗಿದ್ದರೆ ನಿಮ್ಮ ಖರ್ಚುಗಳನ್ನು ಕಡಿಮೆಮಾಡಿಕೊಳ್ಳಿ. ಸಾಧ್ಯವಾದಲ್ಲೆಲ್ಲ ಖರ್ಚನ್ನು ಕಡಿಮೆ ಮಾಡಿ. ಕಡಿಮೆ ಮಹತ್ವದ ಖರ್ಚನ್ನು ತೆಗೆದು ಅದನ್ನು ಶಿಕ್ಷಣಕ್ಕೆ ಕೊಡಿ. ಉಪದೇಶಿಸುವುದನ್ನೇ ಜಾರಿಗೆ ತರಲು ಪ್ರಯತ್ನಿಸಿ. ಆಗ ಸಮಸ್ಯೆಯೇ ಉಳಿಯುವುದಿಲ್ಲ. ಆದರೆ ಈ ಎಲ್ಲ ತಿಳಿಹೇಳುವುದರಿಂದ ಕೇಸರಿಯವರಿಗೆ ಸಮಾಧಾನವಾಗುವ ಹಾಗೆ ಕಾಣೆ. ಏಕೆಂದರೆ ಅವರಿಗೆ ಸ್ತ್ರೀ ಶಿಕ್ಷಣ ಬೇಡವಾಗಿದೆ! ಹಣವಿಲ್ಲ ಅನ್ನುವುದೊಂದು ಕಾರಣ ಅಷ್ಟೆ. ಪುಣೆ ಕಮಿಟಿಯ ಒಟ್ಟು 39 ಸಭಾಸದರಲ್ಲಿ ಜನರಿಂದ ಆರಿಸಲ್ಪಟ್ಟ ಒಟ್ಟು 26 ಸಭಾಸದರಿದ್ದಾರೆ. ಈ 26ರಲ್ಲಿ ಸಭೆಯಲ್ಲಿ ಗೈರುಹಾಜರಿದ್ದ 4 ಜನರನ್ನು ಬಿಟ್ಟರೆ ಉಳಿದ 22ರಲ್ಲಿ 16 ಸಭಾಸದರು ಹುಡುಗಿಯರ ಶಿಕ್ಷಣದ ವಿರುದ್ಧವಿದ್ದಾರೆ. ಜನಪ್ರತಿನಿಧಿಗಳ ತೀರ್ಮಾನವೇ ಜನತೆಯ ನಿರ್ಣಯ ಅನ್ನುವುದು ನಿಜವಾಗಿದ್ದರೆ ಪುಣೆಯ ಎಲ್ಲ ಜನತೆ ರಾಷ್ಟ್ರ ಪಕ್ಷದವರೇ ಆಗಿದ್ದಾರೆ. ಹಾಗಾಗಿ ಎಲ್ಲರೂ ಹುಡುಗಿಯರ ಶಿಕ್ಷಣದ ವಿರೋಧದಲ್ಲಿದ್ದಾರೆ ಎಂದು ‘ಕೇಸರಿ’ಯ ಜನ ದಿಮಾಕಿನಲ್ಲಿ ಹೇಳುತ್ತಿದ್ದಾರೆ. ಹಾಗಾಗಿ ಜನ ಪ್ರತಿನಿಧಿಗಳು ‘‘ಜನರ ಆದರ್ಶವಲ್ಲದಿದ್ದರೆ ‘ತ್ವಮೇವ ಶರಣಂ ಮಮ’ ಅನ್ನುತ್ತ ಕಲಿಯುಗದ ಕೆಲಸಕಾರ್ಯಗಳನ್ನು ನೋಡಿಕೊಳ್ಳುವ ರಾಜರಾದ ಮತದಾರರಲ್ಲಿ ಹೋಗಿ ಈ ವಿಷಯವನ್ನು ಇತ್ಯರ್ಥ ಮಾಡಿಕೊಳ್ಳಿ’’ ಅನ್ನುವುದು ರಾಜಕಾರಣದಲ್ಲಿ ನಿಷ್ಣಾತರಾದ ‘ಕೇಸರಿ’ಯವರ ಸಲಹೆಯಾಗಿದೆ. ಈ ಭಾರೀ ಶಬ್ದಗಳು ಹಾಗೂ ಅನುಭವಸ್ಥರ ಸಲಹೆ ಎಷ್ಟು ಅಹಂಕಾರದ್ದಾಗಿದೆ ಅನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಿದೆ. ಖರ್ಚಿನ ಭಾರ ಕೇವಲ ಮತದಾರರ ಮೇಲಿಲ್ಲ.
ಪರೋಕ್ಷವಾಗಿ ಪಾಲಿಕೆಯ ತೆರಿಗೆ ಕಟ್ಟಿಯೂ ಕೂಡ ಮತದಾನದ ಹಕ್ಕಿಲ್ಲದ ಎಷ್ಟೋ ಜನ ಕೇಸರಿಯವರ ಊರಿನಲ್ಲಿದ್ದಾರೆ. ಹಾಗಾದರೆ ಮತದಾರರನ್ನೇ ಕೇಳಿ ಎಂದೇಕೆ ಹೇಳುತ್ತೀರಿ? ಬಹುಶಃ ಇದರಲ್ಲಿ ನಿಮ್ಮ ಸ್ವಾರ್ಥವಿದೆ. ಅದಕ್ಕೆ. ಹುಡುಗರ ಶಿಕ್ಷಣಕ್ಕೆ ಸಮ್ಮತಿ ಸೂಚಿಸಿದವರು ಹುಡುಗಿಯರ ಶಿಕ್ಷಣಕ್ಕೆ ಸಮ್ಮತಿ ಸೂಚಿಸಿಯಾರು ಅನ್ನುವ ನಂಬಿಕೆಯಿಲ್ಲ. ಹಿಂದುಳಿದ ಹಾಗೂ ಬಹಿಷ್ಕೃತ ಜನ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಶಿಕ್ಷಣ ಪಡೆಯುವುದರಲ್ಲಿ ಮಾತ್ರ ಮೇಲ್ವರ್ಗದ ಜನರ ಮಕ್ಕಳೇ (ಗಂಡು ಮಕ್ಕಳು) ಕಾಣುತ್ತಾರೆ. ಹಾಗಾಗಿಯೇ ಲೋಕಮಾನ್ಯ ಕವಡೆ ಶಾಸ್ತ್ರಿಗಳು ಕಡ್ಡಾಯ ಯಾಕೆ? ಎಂದು ಕೇಳುತ್ತಾರೆ. ಉಳಿದವರನ್ನೆಲ್ಲ ಮೆಟ್ಟಿ ಜೀವನ ನಡೆಸುವುದು ಸಾಗಿದೆ. ಶಿಕ್ಷಣದಲ್ಲೂ ತಮ್ಮ ಹಿತ ಸಾಧಿಸಿಯಾಗಿದೆ. ಈಗ ಹೆಚ್ಚಿನ ತೆರಿಗೆ ಕಟ್ಟಿ ಹಿಂದುಳಿದ ಹಾಗೂ ಬಹಿಷ್ಕೃತ ಮಕ್ಕಳಿಗೆ ವಿದ್ಯೆ ಕೊಡುವುದರಲ್ಲಿ ಯಾವ ಪುರುಷಾರ್ಥವಿದೆ? ತಾವೇ ಪೋಷಿಸಿಕೊಂಡಿರುವ ದ್ವೇಷವನ್ನವರು ಪ್ರತಿಪಕ್ಷದ ಕೈಗೆ ಕೊಡಲು ಸಿದ್ಧರಿಲ್ಲ, ಆದರೇನು ಮಾಡಿಯಾರು? ಇಂದಿನವರೆಗೆ ಕೃಷ್ಣನನ್ನು ಬೆಳೆಸಿದ ಪಾಲಿಸಿದ ತಂದೆ ವಾಸುದೇವ ಅಂದರೆ ನಾನೆ-ಬ್ರಿಟಿಷರಲ್ಲ ಎಂದು ಎಲ್ಲರೆದುರು ಕೊಚ್ಚಿಕೊಂಡು ತೊಟ್ಟಿಲಿನ ಹಗ್ಗವನ್ನು ತನ್ನ ಕೈಗೆ ತೆಗೆದುಕೊಂಡ ಮೇಲೆ ಶಿಕ್ಷಣದ ಬಗ್ಗೆ ತಾವು ಗಮನ ಕೊಡದಿದ್ದರೆ ಎಲ್ಲಿ ಈ ಬಹಿರಂಗ ವಾಸುದೇವನ ಅಂತರಂಗದಲ್ಲಿರುವ ಕಂಸ ಕಂಡಾನೋ ಅನ್ನುವ ಭಯ ಕಾಡಿ ಹುಡುಗರ ಶಿಕ್ಷಣಕ್ಕವರು ಒಪ್ಪಿದ್ದಾರೆ. ಆದರೆ ಹುಡುಗಿಯರ ಶಿಕ್ಷಣಕ್ಕೆ ಒಪ್ಪಿಗೆ ಕೊಡುವಷ್ಟು ಪುಣ್ಯ ಅವರಲ್ಲಿಲ್ಲ. ಮೇಲ್ವರ್ಗದ ಹಿಂದೂಗಳ ಆಚಾರ ವಿಚಾರಗಳು, ಮನಸ್ಸಿನ ಸಣ್ಣತನ, ಹೀನ ತಿಳುವಳಿಕೆಗಳು, ಕೆಲಸಕ್ಕೆ ಬಾರದ ಸಂಸ್ಕಾರಗಳು, ಇವೆಲ್ಲವುಗಳನ್ನು ತಮ್ಮ ಜೀವಕ್ಕಿಂತ ಹೆಚ್ಚು ಬೆಲೆ ಯಾರಾದರೂ ಕೊಡುವವರಿದ್ದರೆ ಅವರು ಅಂಧಶ್ರದ್ಧೆಯುಳ್ಳ ಮಹಿಳೆಯೇ ಆಗಿರಬೇಕು. ಅಂತಹ ಸ್ತ್ರೀಯರನ್ನು ವಿದ್ಯಾವಂತರನ್ನಾಗಿಸಿ ತಮ್ಮ ವರ್ಚಸ್ಸನ್ನು ಕಡಿಮೆಮಾಡಿಕೊಳ್ಳಲು ಈ ಮತದಾರರು ಒಪ್ಪಿಕೊಳ್ಳಲಾರರು ಅನ್ನುವುದನ್ನು ತಿಳಿದೇ ‘ಕೇಸರಿ’ ಜನರು ಇಂತಹ ಸ್ವಾರ್ಥ ತುಂಬಿದ ಹೇಳಿಕೆ ಕೊಟ್ಟಿದ್ದಾರೆ. ಇಲ್ಲದಿದ್ದರೆ ಹುಡುಗ ಹುಡುಗಿಯರಲ್ಲಿ ಭೇದಭಾವ ಮಾಡುವ ತನ್ನ ತಾಯಿಗೆ ಮಾರಣಾಂತಿಕ ಶಿಕ್ಷೆ ಕೊಡುವ ಪ್ರಸಂಗ ಒದಗಿದರೆ ಆಕೆಗೆ ನೇಣು ಹಾಕಿ ಎಂದು ಹೇಳಿದ ನ್ಯಾಯಾಧೀಶನನ್ನೇ ಕೇಳಿ ಎಂದು ಆಹ್ವಾನಿಸುವಷ್ಟು ಮುಗ್ಧರು ‘ಕೇಸರಿ’ಯವರಲ್ಲ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)