ನ್ಯಾಯ ಕೊಡಬೇಕಾದುದು ಪದ್ಮಿನಿಗಲ್ಲ, ಇತಿಹಾಸಕ್ಕೆ!
ಅಲ್ಲಾವುದ್ದೀನ್ ಖಿಲ್ಜಿಯ ದೂರದರ್ಶಿತ್ವಕ್ಕೆ ಉದಾಹರಣೆಯಾದ ಹೌಸ್ ಖಾಸ್
ಅಲ್ಲಾವುದ್ದೀನ್ ಖಿಲ್ಜಿ ಮುತ್ಸದ್ದಿ ಮತ್ತು ಮಹತ್ವಾಕಾಂಕ್ಷಿ ಸುಲ್ತಾನನಾಗಿದ್ದ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಂದು ಅವನು ಇಸ್ಲಾಮಿಗೆ ನಿಷ್ಠನಾದ ದೊರೆಯೇನೂ ಆಗಿರಲಿಲ್ಲ. ಶರೀಅತ್ ಅಥವಾ ಇಸ್ಲಾಮ್ನ ಇತರ ತಾತ್ವಿಕ ಸಿದ್ಧಾಂತದ ಕುರಿತಂತೆ ಬದ್ಧನಾಗಿದ್ದ ದೊರೆಯೂ ಅಲ್ಲ. ಎಲ್ಲಕ್ಕಿಂತ ಕುತೂಹಲಕಾರಿ ಸಂಗತಿಯೆಂದರೆ ಅಲ್ಲಾವುದ್ದೀನ್ ಖಿಲ್ಜಿ ಒಂದು ಹೊಸ ಧರ್ಮವನ್ನು ಸ್ಥಾಪಿಸುವ ಯೋಚನೆಯನ್ನು ಮಾಡಿದ್ದು.
ಟಿವಿ ಧಾರಾವಾಹಿಗಳು ಮತ್ತು ಸಿನೆಮಾಗಳು ನಿಧಾನಕ್ಕೆ ಭಾರತದ ಮೇಲೆ ಏಕ ಸಂಸ್ಕೃತಿಯೊಂದನ್ನು ಹೇರುತ್ತಿರುವುದನ್ನು ನೋಡುತ್ತಿದ್ದೇವೆ. 70ರ ದಶಕದಿಂದೀಚೆಗೆ ಭಾರತದ ಧರ್ಮ ಅದರಲ್ಲೂ ಮುಖ್ಯವಾಗಿ ಕಲ್ಪಿತ ಹಿಂದೂಧರ್ಮದ ಆಚರಣೆಗಳನ್ನು ನಿಯಂತ್ರಿಸುತ್ತಿರುವುದೇ ಸಿನೆಮಾಗಳು. ಕಳೆದ ಎರಡು ದಶಕಗಳಿಂದ ಟಿವಿ ಧಾರಾವಾಹಿಗಳೂ ಅದನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿವೆ. ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿಯ ವೈವಿಧ್ಯದ ಮೇಲೆ ಈ ಸಿನೆಮಾಗಳು ಮಾಡಿರುವ ಘಾಸಿ ಸಣ್ಣದೇನೂ ಅಲ್ಲ. ಮಾಂಸಾಹಾರದ ಕುರಿತಂತೆ ಮಾಂಸಾಹಾರಿಗಳಲ್ಲೇ ಕೀಳರಿಮೆ ಹುಟ್ಟಿಸುವಲ್ಲಿ, ಉತ್ತರ ಭಾರತೀಯರ ಹೋಳಿಯೂ ಸೇರಿದಂತೆ ಹಲವು ವೈದಿಕ ಆಚರಣೆಗಳನ್ನು ತಮ್ಮದು ಎಂದು ದಕ್ಷಿಣ ಭಾರತೀಯರನ್ನು ನಂಬಿಸುವಲ್ಲಿ ಟಿವಿ ಧಾರಾವಾಹಿಗಳ ಪಾತ್ರ ದೊಡ್ಡದು. ಮದುವೆ ಎಂದಾಗ ಸಿನೆಮಾಗಳು ಒಂದು ಸಿದ್ಧ ಮಾದರಿಯನ್ನು ತೋರಿಸಿಕೊಡುತ್ತವೆ. ಎಲ್ಲ ಮದುವೆ ಸಮಾರಂಭಗಳಲ್ಲೂ ‘ಗಟ್ಟಿ ಮೇಳ’ಗಳಿರುತ್ತವೆ. ಯಾವ ಹಬ್ಬಗಳನ್ನು ಯಾವ ರೀತಿಯಲ್ಲಿ ಆಚರಿಸಬೇಕು ಎನ್ನುವುದನ್ನು ಟಿವಿ ಧಾರಾವಾಹಿಗಳನ್ನು ನೋಡಿ, ಅದನ್ನು ನಂಬಿ ಆಚರಿಸುವವರಿದ್ದಾರೆ. ಟಿವಿ ಸಿನೆಮಾಗಳ ಮೂಲಕ ಈ ದೇಶದ ವೈವಿಧ್ಯಗಳನ್ನೆಲ್ಲ ಅಳಿಸುವ ಹುನ್ನಾರ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಇವೆಲ್ಲದರ ನಡುವೆ, ಇದೀಗ ನಾವು ಸಿನೆಮಾ ಮತ್ತು ಧಾರಾವಾಹಿಗಳ ಮೂಲಕವೇ ಹೊಸದಾಗಿ ಇತಿಹಾಸವನ್ನು ಕಲಿಯುವಂತಹ ಸ್ಥಿತಿಗೆ ಬಂದು ನಿಂತಿದ್ದೇವೆ. ಇತಿಹಾಸಗಾರರು, ಸಂಶೋಧಕರನ್ನು ದೇಶದ್ರೋಹಿಗಳಾಗಿ ಬಿಂಬಿಸುತ್ತಿರುವ ಹೊತ್ತಿನಲ್ಲೇ, ಚಂದಮಾಮ ಬರಹಗಾರರೆಲ್ಲ ಇತಿಹಾಸ ತಜ್ಞರುಗಳಾಗಿ, ಸಂಶೋಧಕರಾಗಿ ಟಿವಿ, ಸಿನೆಮಾಗಳ ಐತಿಹಾಸಿಕ ಕತೆಗಳಿಗೆ ಚಿತ್ರಕತೆ ಬರೆಯುತ್ತಿದ್ದಾರೆ. ಪರಿಣಾಮವಾಗಿ ಹಿಂದೂ ರಾಷ್ಟ್ರೀಯವಾದಕ್ಕೆ ಪೂರಕವಾದ ರಮ್ಯ ರೋಚಕ ಇತಿಹಾಸ ಪಾತ್ರಗಳು ಪುಂಖಾನುಪುಂಖವಾಗಿ ಹೊರಹೊಮ್ಮುತ್ತಿವೆ. ಇವುಗಳಿಗೆಲ್ಲ ನೀವು ದಾಖಲೆಗಳನ್ನು ಕೇಳಿದರೆ, ಈ ಇತಿಹಾಸ ಪಾತ್ರಗಳ ಚಿತ್ರಕತೆಗೆ ಬಳಸಿದ ಇತಿಹಾಸ ಗ್ರಂಥಗಳನ್ನು ಹುಡುಕಿದರೆ ನಿಮ್ಮ ತಲೆಯ ಮೇಲೆ ‘ದೇಶದ್ರೋಹಿ’ ಎಂಬ ಮುಳ್ಳಿನ ಕಿರೀಟವನ್ನು ಇಟ್ಟು ಬಿಡುತ್ತಾರೆ. ಆ ಬಳಿಕ ನಿಮ್ಮ ಮಾತುಗಳು, ವಾದಗಳಿಗೆ ಯಾವ ಬೆಲೆಯೂ ಇಲ್ಲ. ಹೊಸ ತಲೆಮಾರಿನ ಪರಿಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ ರಾಜವೌಳಿಯ ನಿರ್ದೇಶನದ ‘ಬಾಹುಬಲಿ’ಯನ್ನು ಭಾರತ ಇತಿಹಾಸದ ಒಂದು ಪಾತ್ರವಾಗಿ ನಂಬಿದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಇತ್ತೀಚೆಗೆ ಹೊರ ಬಂದ ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತ್’ ಇದೇ ಧಾಟಿಯ ಸಿನೆಮಾ. ಬನ್ಸಾಲಿಯವರು ಹೇಳುವಂತೆ 1540ರಲ್ಲಿ ಮಾಲಿಕ್ ಮಹಮ್ಮದ್ ಜಯಸಿ ಎಂಬ ಸೂಫಿ ಕವಿ ಬರೆದಿರುವ ‘ಪದ್ಮಾವತ್’ ಕಾವ್ಯವನ್ನು ಆಧರಿಸಿದ್ದಿದ್ದರೆ ಇಲ್ಲಿ ಚರ್ಚೆಯ ಅಗತ್ಯವೇ ಇರುತ್ತಿರಲಿಲ್ಲ. ಇಡೀ ಚಿತ್ರವನ್ನು ಇನ್ನೊಂದು ‘ಬಾಹುಬಲಿ’ ಚಿತ್ರವನ್ನು ನೋಡಿದಂತೆಯೇ ನೋಡಿ ಖುಷಿ ಪಟ್ಟು ಮರೆತು ಬಿಡಬಹುದಿತ್ತು. ಅಲ್ಲಾವುದ್ದೀನ್ ಖಲ್ಜಿ ಎನ್ನುವ ಸುಲ್ತಾನ ಈ ದೇಶವನ್ನು ಆಳಿದ್ದು 12ನೇ ಶತಮಾನದಲ್ಲಿ. ಆತನ ಬದುಕು, ಆಳ್ವಿಕೆಗಳ ಕುರಿತಂತೆ ಇತಿಹಾಸಗಳು ಮಾತನಾಡುತ್ತವೆ. ಅಲ್ಲಾವುದ್ದೀನ್ ಖಿಲ್ಜಿಯ ಸಮಕಾಲೀನ ಬರಹಗಾರನಾಗಿರುವ ಜಿಯಾವುದ್ದೀನ್ ಬರನಿ ಸುಲ್ತಾನನ ಆಡಳಿತದ ಕುರಿತಂತೆ ಹಲವು ವಿಷಯಗಳನ್ನು ದಾಖಲಿಸುತ್ತಾನೆ. ಆದರೆ ಈತನ ಬರಹಗಳಲ್ಲಿ ಎಲ್ಲೂ ಪದ್ಮಿನಿಯ ಪ್ರಸ್ತಾಪ ಬರುವುದೇ ಇಲ್ಲ. 300 ವರ್ಷಗಳ ಬಳಿಕ ಜಯಸಿ ಎನ್ನುವ ಸೂಫಿ ಕವಿ ಬರೆದಿರುವ ಒಂದು ಜಾನಪದ ಕತೆಯಂತಿರುವ ‘ಪದ್ಮಾವತ್’ನಲ್ಲಿ ಪದ್ಮಿನಿಯ ಪಾತ್ರ ಮೊದಲ ಬಾರಿಗೆ ಬರುತ್ತದೆ. ಮಾತನಾಡುವ ಗಿಳಿ, ಮಂತ್ರವಾದಿ, ಜಾದೂ ಇತ್ಯಾದಿಗಳೆಲ್ಲ ಬರುವುದರಿಂದ ಅದನ್ನು ಜಾನಪದ ಕಾವ್ಯವಾಗಿ ನಾವು ಸ್ವೀಕರಿಸಬಹುದಾಗಿದೆ. ‘ಆದರೆ ಪದ್ಮಿನಿಯ ಮೇಲೆ ಮೋಹಗೊಳ್ಳುವ ಸುಲ್ತಾನನಾಗಿ ಅಲ್ಲಾವುದ್ದೀನ್ ಖಿಲ್ಜಿ’ಯ ಪಾತ್ರವೂ ಬರುವುದರಿಂದ ಈ ಕಾವ್ಯ ಇತಿಹಾಸದೊಂದಿಗೆ ಒಂದು ಅನೈತಿಕ ಸಂಬಂಧವನ್ನು ಬೆಸೆದುಕೊಳ್ಳುತ್ತದೆ. ಮುಂದೆ 19ನೇ ಶತಮಾನದಲ್ಲಿ ಸ್ವಾತಂತ್ರ ಹೋರಾಟದ ಕಾಲಘಟ್ಟದಲ್ಲಿ ಹುಟ್ಟಿಕೊಂಡ ರಾಷ್ಟ್ರೀಯವಾದಿ ಕಾದಂಬರಿಕಾರರ ಮೂಲಕ ಪದ್ಮಿನಿಯ ಪಾತ್ರ ಬೆಳೆಯಿತು. ಅದನ್ನು ಭಾರತದ ಆದರ್ಶವಾಗಿ ಮಂಡಿಸಲು ಯಶಸ್ವಿಯಾದರು. ಉಳಿದಂತೆ ಪದ್ಮಿನಿಯ ಪಾತ್ರಗಳು ಅಮರ ಚಿತ್ರಗಳ ಕತೆಗಳ ಮೂಲಕ ಜನರ ನಡುವೆ ವ್ಯಾಪಕವಾಗಿ ಹರಿದಾಡಿತು. ರಾಮಾಯಣವೆನ್ನುವ ಪುರಾಣ ಕಾವ್ಯವನ್ನೇ ಇತಿಹಾಸವಾಗಿಸಲು ಹೊರಟು ಹಲವು ರಾದ್ಧಾಂತಗಳಿಗೆ ಕಾರಣರಾಗಿರುವ ಜನರು ಅಲ್ಲಾವುದ್ದೀನ್ ಖಿಲ್ಜಿಯ ಕಾರಣದಿಂದ ಬೆಂಕಿಗೆ ಹಾರುವ ಪದ್ಮಿನಿಯ ಕಾವ್ಯವನ್ನು ಅದು ಹೇಗೆ ಅದರಷ್ಟಕ್ಕೇ ಬಿಡಲು ಸಾಧ್ಯ?
ಸಂಜಯ್ ಲೀಲಾ ಬನ್ಸಾಲಿ ಬಾಲಿವುಡ್ನ ಮಹತ್ವದ ನಿರ್ದೇಶಕ. ‘ಪದ್ಮಾವತ್’ ಕತೆಯನ್ನು ಕೈಗೆತ್ತಿಕೊಳ್ಳುವಾಗ ಆ ಕತೆ ಮತ್ತು ಪಾತ್ರ ವರ್ತಮಾನದ ರಾಜಕೀಯದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಊಹಿಸಿಕೊಳ್ಳುವ ಎಲ್ಲ ಚಿಂತನಾಶಕ್ತಿಯೂ ಅವರಲ್ಲಿದೆ. ಪದ್ಮಿನಿ ಯಾವ ಕಾರಣಕ್ಕೂ ಇಂದಿನ ಆಧುನಿಕ ಮಹಿಳೆಯರಿಗಾಗಲಿ, ವರ್ತಮಾನದ ರಾಜಕೀಯಕ್ಕಾಗಲಿ ಆದರ್ಶವಾಗಬಹುದಾದ ಪಾತ್ರವಲ್ಲ. ಪದ್ಮಾವತ್ ಎನ್ನುವ ಕತೆಯನ್ನು ಸಿನೆಮಾ ಮಾಡಲು ಅವರಿಗೆ ಪ್ರೇರಣೆ ನೀಡಿದ ಶಕ್ತಿ ಯಾವುದು? ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಇದೇ ಸಂದರ್ಭದಲ್ಲಿ ಪದ್ಮಾವತ್ ಚಿತ್ರವನ್ನು ನೋಡದೆಯೇ ಏಕಾಏಕಿ ಅದರ ವಿರುದ್ಧ ಪ್ರತಿಭಟನೆಗಿಳಿದ ಕರ್ಣಿಸೇನೆಯನ್ನು ನಿಯಂತ್ರಿಸುತ್ತಿದ್ದ ಶಕ್ತಿ ಯಾವುದು ಎನ್ನುವುದೂ ನಿಗೂಢವಾಗಿಯೇ ಇದೆ. ಆದರೆ ಈ ಎಲ್ಲ ಗದ್ದಲಗಳಲ್ಲಿ ಎಲ್ಲ ಗಮನ ‘ಪದ್ಮಿನಿ’ ಪಾತ್ರದ ಕಡೆಗೆ ಹೊರಳಿತೇ ಹೊರತು, ಅಲ್ಲಾವುದ್ದೀನ್ ಖಿಲ್ಜಿ ಎನ್ನುವ ಐತಿಹಾಸಿಕ ವ್ಯಕ್ತಿಯನ್ನು ಯಾವ ದಾಖಲೆಗಳೂ ಇಲ್ಲದೆ ಬನ್ಸಾಲಿ ವಿರೂಪಗೊಳಿಸಿರುವ ಕುರಿತಂತೆ ಚರ್ಚೆ ನಡೆಯಲಿಲ್ಲ. ಇಂದು ಚರ್ಚೆ ನಡೆಸಬೇಕಾದುದು ಪದ್ಮಾವತ್ ಚಿತ್ರದಲ್ಲಿ ಇತಿಹಾಸಕ್ಕೆ ಮಾಡಿದ ಅನ್ಯಾಯದ ಕುರಿತಂತೆ ಮತ್ತು ಈ ಬಗ್ಗೆ ಚರ್ಚೆ ಮಾಡಬೇಕಾದವರು ಬೀದಿಯ ಗುಂಪುಗಳಲ್ಲ. ನಿಜವಾದ ಇತಿಹಾಸ ತಜ್ಞರು ಬನ್ಸಾಲಿ ಮಾಡಿದ ಅವಾಂತರವನ್ನು ಗಂಭೀರ ಚರ್ಚೆಗೆತ್ತಿಕೊಳ್ಳಬೇಕಾಗಿದೆ.
1296ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ತನ್ನ ಸೋದರಮಾವ ಜಲಾಲುದ್ದೀನ್ ಖಿಲ್ಜಿಯನ್ನು ಕೊಂದು ಸಿಂಹಾಸನ ಏರಿದ. ಭಾರತದ ಇತಿಹಾಸದಲ್ಲಿ ತನ್ನ ಸಂಬಂಧಿಕರು, ಸೋದರರನ್ನು ಕೊಂದು ರಾಜಪದವಿಯನ್ನು ಏರಿದ ಕತೆಗಳು ನೂರಾರಿವೆ. ಅರಮನೆಯೆನ್ನುವುದೇ ಸಂಚಿನ ಮನೆ. ಈ ಕಾರಣಕ್ಕಾಗಿ ಸುಲ್ತಾನನ್ನು ಏಕಾಏಕಿ ಕ್ರೂರಿಯಾಗಿಯೂ, ಪಾತಕಿಯಾಗಿಯೂ ನೋಡುವಾಗ, ನಾವಿಂದು ಹಾಡಿ ಹೊಗಳುವ ಹಲವು ರಾಜರೂ ಇಂತಹದೇ ದಾರಿಯಿಂದ ರಾಜಪದವಿಯನ್ನು ಏರಿದವರು ಎನ್ನುವುದನ್ನು ಮರೆಯಬಾರದು. ಬನ್ಸಾಲಿಯವರ ಚಿತ್ರದಲ್ಲಿ ‘ಅಲ್ಲಾವುದ್ದೀನ್ ಖಿಲ್ಜಿ’ಗೆ ಒಂದು ವ್ಯಕ್ತಿತ್ವವೇ ಇಲ್ಲ. ಆತ ದೆಹಲಿಯ ಸುಲ್ತಾನನಾಗಿ ಹಲವು ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಎನ್ನುವುದು ಬನ್ಸಾಲಿ ಮರೆತಂತಿದೆ. ಬನ್ಸಾಲಿ ಪ್ರಕಾರ ಪ್ರತೀ ದಿನ ಕೊಲೆ, ಹಿಂಸೆ, ಹೆಣ್ಣು, ಊಟ ಇವುಗಳ ನಡುವೆ ಕಾಲ ಕಳೆಯುವ ಸೈಕೋಪಾತ್ ಅಲ್ಲಾವುದ್ದೀನ್ ಖಿಲ್ಜಿ. ಈ ಮೂಲಕ ಅವರು ಜನಪ್ರಿಯ ದೃಷ್ಟಿಯಿಂದ, ಕಪ್ಪು ಮತ್ತು ಬಿಳಿಪು ಎರಡೇ ಬಣ್ಣದಲ್ಲಿ ನೋಡುವ ಹಿಂದುತ್ವ ರಾಷ್ಟ್ರೀಯವಾದಿಗಳಿಗೆ ಅನುಕೂಲವಾಗುವಂತೆ ಇತಿಹಾಸವನ್ನು ಹೊಸದಾಗಿ ಬರೆದಿದ್ದಾರೆ. ಇದನ್ನು ಬರೇ ಸಿನೆಮಾ ಆಗಿ ಮಾತ್ರ ಯಾಕೆ ನೋಡಬಾರದು? ಎಂದು ಹೇಳುವ ಮಂದಿಯೂ ಇದ್ದಾರಾದರೂ, ಇತಿಹಾಸವನ್ನು ಈ ಬಗೆಯಲ್ಲಿ ನೋಡುವ ಅಪಾಯ ದೇಶವನ್ನು ತಪ್ಪುದಾರಿಗೆ ಕೊಂಡೊಯ್ಯುತ್ತದೆ ಮತ್ತು ಇಂತಹ ಸಿನೆಮಾಗಳು ಬರೀ ಮನರಂಜನೆಯಾಗಿ ನೋಡಿ ಮುಗಿದು ಹೋಗುವುದಿಲ್ಲ ಎನ್ನುವ ಅಂಶವನ್ನು ಅವರು ನೆನಪಿಟ್ಟುಕೊಳ್ಳಬೇಕಾಗಿದೆ.
ಅಲ್ಲಾವುದ್ದೀನ್ ಖಿಲ್ಜಿಯು ಒಬ್ಬ ಬಹುಮುಖ ವ್ಯಕ್ತಿತ್ವದ ಅರಸನಾಗಿದ್ದಾನೆ. ಈ ಬಗ್ಗೆ ಆತನ ಸಮಕಾಲೀನನಾಗಿರುವ ಬರನಿ ಹಲವು ಮಹತ್ವದ ಮಾಹಿತಿಗಳನ್ನು ದಾಖಲಿಸಿದ್ದಾನೆ. ಅಲ್ಲಾವುದ್ದೀನ್ ಖಿಲ್ಜಿ ಭಾರತ ಕಂಡ ಅಪ್ರತಿಮ ಯೋಧ. ಲೂಟಿಕೋರರೆಂದೇ ಕುಖ್ಯಾತರಾಗಿದ್ದ ಮಂಗೋಲರ ದಾಳಿಯನ್ನು ಐದು ಬಾರಿ ಎದುರಿಸಿ ಹಿಮ್ಮೆಟ್ಟಿಸಿ ದೆಹಲಿಯನ್ನು ಕಾಪಾಡಿದ ಖ್ಯಾತಿ ಇವನದು. ಇದೇ ಸಂದರ್ಭದಲ್ಲಿ ಹಲವು ದೂರದೃಷ್ಟಿಯುಳ್ಳ ಯೋಜನೆಗಳನ್ನು ಆತ ಜಾರಿಗೆ ತಂದಿದ್ದ. ಸೈನಿಕರಿಗೆ ಜನರಿಗೆ ನೀರಿನ ಸಮಸ್ಯೆ ಆಗ ಬಾರದು ಎಂದು ಈತ ನಿರ್ಮಿಸಿದ ‘ಹೌಸ್ ಖಾಸ್’ ಇಂದಿಗೂ ದಿಲ್ಲಿಯಲ್ಲಿ ಖಿಲ್ಜಿಯ ಇತಿಹಾಸವನ್ನು ಹೇಳುತ್ತಿದೆ. ಅಂದಿನ ಪ್ರಭುತ್ವಳ ಬಗೆ ಬಗೆಯ ತೆರಿಗೆಯಿಂದ ರೈತರು ಅತೀ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದರು. ಹೀಗೆ ತೆರಿಗೆ ಸಂಗ್ರಹಿಸುವ ಜಮೀನ್ದಾರರು ಮುಖಿಯಾಗಳು, ಚೌಧುರಿಗಳು, ರಾವ್ಗಳು, ರಾಣಾಗಳು. ಸುಲ್ತಾನ ಹೇಳಿದ್ದಕ್ಕಿಂತ ಹೆಚ್ಚು ತೆರಿಗೆಗಳನ್ನು ವಸೂಲಿ ಮಾಡುತ್ತಿದ್ದರು. ಆದರೆ ಇದನ್ನು ಕೊನೆಗೊಳಿಸಿ ಸಮಾನ ತೆರಿಗೆಯ ಆಡಳಿತಕ್ಕೊಳಪಡಿಸಿದ ಖ್ಯಾತಿಯೂ ಅಲ್ಲಾವುದ್ದೀನ್ ಖಿಲ್ಜಿಯದ್ದು. ಇದನ್ನೂ ಜಿಯಾವುದ್ದೀನ್ ಬರನಿ ದಾಖಲಿಸುತ್ತಾನೆ. ಮಧ್ಯವರ್ತಿಗಳು ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದ ಸಂದರ್ಭದಲ್ಲಿ ಬೆಲೆನಿಯಂತ್ರಣವನ್ನು ಈತ ಜಾರಿಗೆ ತಂದ. ಇದೊಂದು ಬೃಹತ್ ಸುಧಾರಣೆ ಎಂದು ಬರನಿ ಬಣ್ಣಿಸುತ್ತಾನೆ. ಅಳತೆಗಿಂತ ಕಡಿಮೆ ಸರಕನ್ನು ತೂಗದಂತೆ, ಅಥವಾ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರದಂತೆ ಖಚಿತಪಡಿಸಿಕೊಳ್ಳಲು ಸುಲ್ತಾನ ಗೂಢಚಾರರನ್ನು ಮಾರುಕಟ್ಟೆಗೆ ಕಳುಹಿಸುತ್ತಿದ್ದನಂತೆ. ಒಂದು ವೇಳೆ ತೂಕದಲ್ಲಿ ಹೆಚ್ಚು ಕಡಿಮೆ ಮಾಡಿದ್ದರೆ, ಆ ವ್ಯಾಪಾರಿಯ ತೊಡೆಯಿಂದ ಅಷ್ಟು ಮಾಂಸವನ್ನು ಕಿತ್ತು ತೆಗೆಯುವ ಆದೇಶ ನೀಡಿದ್ದನಂತೆ. ಮಾರಾಟಗಾರರು ಇದರಿಂದ ಎಷ್ಟು ಭಯಭೀತರಾಗಿದ್ದರೆಂದರೆ, ಅಳತೆಗಿಂತ ಹೆಚ್ಚು ಸರಕನ್ನು ಸೇರಿಸಿಯೇ ಕೊಡುತ್ತಿದ್ದರು. ಇದೇ ಸಂದರ್ಭದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಹೆಣ್ಣು ಪಿಪಾಸು ಆಗಿದ್ದನೆಂಬ ಮಾಹಿತಿ ಎಲ್ಲೂ ತಿಳಿದು ಬರುವುದಿಲ್ಲ.
ಅಲ್ಲಾವುದ್ದೀನ್ ಖಿಲ್ಜಿ ಮುತ್ಸದ್ದಿ ಮತ್ತು ಮಹತ್ವಾಕಾಂಕ್ಷಿ ಸುಲ್ತಾನನಾಗಿದ್ದ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಂದು ಅವನು ಇಸ್ಲಾಮಿಗೆ ನಿಷ್ಠನಾದ ದೊರೆಯೇನೂ ಆಗಿರಲಿಲ್ಲ. ಶರೀಅತ್ ಅಥವಾ ಇಸ್ಲಾಮ್ನ ಇತರ ತಾತ್ವಿಕ ಸಿದ್ಧಾಂತದ ಕುರಿತಂತೆ ಬದ್ಧನಾಗಿದ್ದ ದೊರೆಯೂ ಅಲ್ಲ. ಎಲ್ಲಕ್ಕಿಂತ ಕುತೂಹಲಕಾರಿ ಸಂಗತಿಯೆಂದರೆ ಅಲ್ಲಾವುದ್ದೀನ್ ಖಿಲ್ಜಿ ಒಂದು ಹೊಸ ಧರ್ಮವನ್ನು ಸ್ಥಾಪಿಸುವ ಯೋಚನೆಯನ್ನು ಮಾಡಿದ್ದು. ಸಾಮ್ರಾಜ್ಯವನ್ನು ಸಾಕಷ್ಟು ವಿಸ್ತರಿಸಿದ ಬಳಿಕ, ತನ್ನದೇ ಒಂದು ಧರ್ಮವನ್ನು ಸ್ಥಾಪಿಸಿದರೆ ಹೇಗೆ? ಎಂಬ ಯೋಜನೆಯನ್ನು ದಿಲ್ಲಿಯ ಮುಖ್ಯಸ್ಥ ಅಲೌಲ್ ಮುಲ್ಕ್ ನ ಜೊತೆಗೆ ಹಂಚಿಕೊಳ್ಳುತ್ತಾನೆ. ಆದರೆ ಅಲೌಲ್ ಮುಲ್ಕ್ ಆತನ ಈ ಯೋಜನೆಗೆ ಅಸಮ್ಮತಿ ಸೂಚಿಸುತ್ತಾನೆ. ‘‘ಹೊಸ ಧರ್ಮವನ್ನು ಸ್ಥಾಪಿಸುವುದು ದೇವರ ಕೈಯಲ್ಲಿದೆಯೇ ಹೊರತು ಮನುಷ್ಯರ ಕೈಯಲ್ಲಿ ಇಲ್ಲ’’ ಮುಲ್ಕ್ ಸುಲ್ತಾನನಿಗೆ ಮನವರಿಕೆ ಮಾಡುತ್ತಾನೆ. ಬದಲಿಗೆ ಆಡಳಿತದ ಕಡೆಗೆ ಹೆಚ್ಚು ಮನ ನೀಡಲು ಸಲಹೆ ನೀಡುತ್ತಾನೆ.
ಒಮ್ಮೆ ಸುಲ್ತಾನನು ಒಂದು ಯೋಜನೆಯನ್ನು ಮಂಡಿಸಿದಾಗ ಖಾಝಿಯೊಬ್ಬ ‘‘ಇದು ಶರೀಅತ್ಗೆ ವಿರೋಧವಾಗಿದೆ’’ ಎಂದು ಆಕ್ಷೇಪ ವ್ಯಕ್ತಪಡಿಸುತ್ತಾನೆ. ಇದರಿಂದ ಸಿಟ್ಟಾದ ಸುಲ್ತಾನ ‘‘ನನ್ನ ರಾಜ್ಯಕ್ಕೆ ಒಳ್ಳೆಯದೆಂದು ನಾನು ಯಾವುದನ್ನು ತಿಳಿದಿದ್ದೇನೋ ಅದನ್ನು ಮಾಡಿದ್ದೇನೆ ಮತ್ತು ನನ್ನ ಕೆಲಸಗಳು ಶರೀಯತ್ಗೆ ಅನುಗುಣವಾಗಿವೆಯೋ ಅಥವಾ ಅದರ ವಿರುದ್ಧವಾಗಿದೆಯೋ ಎಂಬ ಬಗ್ಗೆ ನನಗೆ ಕಾಳಜಿ ಇಲ್ಲ’’ ಎಂದು ಹೇಳಿದನಂತೆ. ಆದರೆ ಖಾಝಿಯನ್ನು ಮನೆಗೆ ಹೋಗಲು ಬಿಟ್ಟ. ಬರನಿ ಇದನ್ನೂ ದಾಖಲಿಸಿದ್ದಾನೆ. ಇಂತಹ ಒಂದು ಬಹು ವ್ಯಕ್ತಿತ್ವವಿರುವ ಪಾತ್ರವನ್ನು ರಜಪೂತರನ್ನು ಮತ್ತು ಪದ್ಮಿನಿಯ ಸತಿಸಹಗಮನವನ್ನು ವೈಭವೀಕರಿಸುವ ಒಂದೇ ಉದ್ದೇಶಕ್ಕಾಗಿ ಬನ್ಸಾಲಿ ವಿರೂಪಗೊಳಿಸಿದ್ದಾರೆ. ‘ಪದ್ಮಾವತ್’ ಚಿತ್ರದಲ್ಲಿ ಪದ್ಮಿನಿಗೆ ಅನ್ಯಾಯವಾಗಿದೆಯೋ ಇಲ್ಲವೋ, ಆದರೆ ಇತಿಹಾಸಕ್ಕಂತೂ ಭಾರೀ ಅನ್ಯಾಯವಾಗಿದೆ. ಸಿನೆಮಾವನ್ನು ಸಿನೆಮಾ ಆಗಿಯಷ್ಟೇ ನೋಡಬೇಕು ಎಂದು ಹೇಳುವವರು ನೆನಪಿನಲ್ಲಿಟ್ಟುಕೊಳ್ಳಬೇಕು, ಪದ್ಮಾವತ್ ಪ್ರೇಕ್ಷಕರ ಮೇಲೆ ಪದ್ಮಿನಿ, ರಜಪೂತರು ಮತ್ತು ಅಲ್ಲಾವುದ್ದೀನ್ ಖಿಲ್ಜಿಯ ಕುರಿತಂತೆ ಒಂದು ಅಭಿಪ್ರಾಯವನ್ನು ಪರಿಣಾಮಕಾರಿಯಾಗಿ ಹೇರುತ್ತದೆ. ರಾಜಕೀಯ ಶಕ್ತಿಗಳು ಹರಡುತ್ತಿರುವ ಹುಸಿ ರಾಷ್ಟ್ರೀಯತೆಯನ್ನು ಸರ್ವ ರಿೀತಿಯಲ್ಲಿ ಎತ್ತಿ ಹಿಡಿಯುತ್ತದೆ ಆ ಅಭಿಪ್ರಾಯ.