ಮುಲಾಜಿಲ್ಲದ ಆದೇಶ ಸ್ವಾಗತಾರ್ಹ
ಮಾನ್ಯರೇ,
ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯೇ ಮೊದಲು. ಕನ್ನಡವೇ ಹೆಚ್ಚು ಪ್ರಚಲಿತದಲ್ಲಿರುವ ಭಾಷೆ. ಹೀಗಾಗಿ ಕರ್ನಾಟಕದಲ್ಲಿ ಕನ್ನಡ ಆಡಳಿತ, ನಾಡ ಭಾಷೆ ಎನ್ನುವುದು ಎಲ್ಲರಿಗೂ ಗೊತ್ತು. ಜಗತ್ತಿನಲ್ಲಿ ಅತೀ ಹೆಚ್ಚು ಮಂದಿ ಮಾತನಾಡುವ ಭಾಷೆಗಳಲ್ಲಿ ಕನ್ನಡವೂ ಒಂದು. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಕೂಡಾ ಹೌದು.
ಈ ಹಿಂದಿನಿಂದಲೂ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಲಾಗುತ್ತಿದೆ. ಆದರೆ ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದ ಖಾಸಗಿ ಶಾಲೆಗಳು ಕನ್ನಡ ನಾಡಲ್ಲೇ ಕನ್ನಡ ಭಾಷೆ ಕಲಿಸಲು ಹಿಂದೇಟು ಹಾಕುತ್ತಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡ ಭಾಷೆಯ ಕಡ್ಡಾಯ ಕಲಿಕೆ ಜಾರಿ ನಿಯಮ ತರಲು ರಾಜ್ಯ ಸರಕಾರ ಮುಂದಾಗಿರುವುದು ಸ್ವಾಗತಾರ್ಹ. ಜೊತೆಗೆ ಇದು ಸಕಾಲಿಕ ಚಿಂತನೆಯೂ ಹೌದು. ಹೀಗಾಗಿ ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮವನ್ನು ಹೊಂದಿರುವ ಶಾಲೆಗಳು ಸಹ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಬೋಧಿಸಬೇಕಾಗುತ್ತದೆ. ಅದು ಒಂದನೇ ತರಗತಿಯಿಂದಲೇ ಕಲಿಸಬೇಕು ಎಂಬ ನಿಯಮ ತೃಪ್ತಿಕರವಾಗಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದು ಪಡಿಸಲು ರಾಜ್ಯ ಸರಕಾರ ಮುಂದಾಗಿರುವುದು ಸ್ವಾಗತಾರ್ಹ.