ಮುಕ್ತಿ ಹೇಗೆ?
ಇಂದು ವಿಶ್ವ ಕ್ಯಾನ್ಸರ್ ದಿನ
ಕ್ಯಾನ್ಸರ್ ರೋಗ ಮನುಕುಲದ ಬಹುದೊಡ್ಡ ಶತ್ರು. ಅನಾದಿ ಕಾಲದಿಂದಲೂ ಈ ರೋಗ ಮನುಕುಲವನ್ನು ಕಾಡುತ್ತಿದೆ. ಅಚ್ಚ ಕನ್ನಡದಲ್ಲಿ ಕ್ಯಾನ್ಸರ್ ರೋಗವನ್ನು ಅರ್ಬುದ ರೋಗ ಎಂದು ಕರೆಯಲಾಗುತ್ತದೆ.
ಕ್ಯಾನ್ಸರ್ ರೋಗ ಅಂದ ಕೂಡಲೇ ನಾವೆಲ್ಲಾ ಒಮ್ಮ್ಮೆಲೆ ದಿಗಿಲುಗೊಳ್ಳುತ್ತೇವೆ. ಹಿಂದಿನ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯರ ಸೇವೆ ದುರ್ಲಬವಾಗಿತ್ತು. ಬಡತನ, ಅನಕ್ಷರತೆ ಮತ್ತು ಮೂಲಭೂತ ಸೌಕಾರ್ಯಗಳ ಕೊರತೆಯಿಂದಾಗಿ ರೋಗವನ್ನು ಪತ್ತೆ ಹಚ್ಚುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿರುತ್ತಿತ್ತು. ಆ ಕಾರಣದಿಂದಲೇ ಕ್ಯಾನ್ಸರ್ ಗುಣಪಡಿಸಲಾಗದ ಕಾಯಿಲೆ ಎಂಬ ಹಣೆಪಟ್ಟಿ ಪಡೆದು ಕೊಂಡಿತು. ಆದರೆ ತಂತ್ರಜ್ಞಾನ ಪರಿಣಿತ ವೈದ್ಯರ ಲಭ್ಯತೆ ಮತ್ತು ಜನರ ತಿಳುವಳಿಕೆಯ ಮಟ್ಟ ಏರಿದಂತೆ ಜನರಲ್ಲಿ ಅರ್ಬುದ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡತೊಡಗಿದೆ ಮತ್ತು ಈಗಿನ ಕಾಲಘಟ್ಟದಲ್ಲಿ ಕ್ಯಾನ್ಸರ್ ಖಂಡಿತವಾಗಿಯೂ ಗುಣಪಡಿಸಲಾಗದ ಕಾಯಿಲೆಯಲ್ಲ. ಪ್ರಾರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಮುಖವಾಗಬಹುದು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗವನ್ನು ಗೆದ್ದು ಸುಖ ಜೀವನ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಸಮಾಧಾನಕರ ಅಂಶ. ಅಕ್ಷರತೆ, ಬಡತನ ನಿರ್ಮೂಲನ ಗುಣಮಟ್ಟದ ವೈಜ್ಞಾನಿಕ ಆವಿಷ್ಕಾರಗಳು ಮತ್ತು ತಾಂತ್ರಿಕ ಹಾಗೂ ವೈಜ್ಞಾನಿಕ ಕೌಶಲತೆಗಳಿಂದ, ಆರಂಭಿಕ ಹಂತದಲ್ಲಿ ಕ್ಯಾನ್ಸರ್ ರೋಗ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಜನರಲ್ಲಿ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು ಎಂಬ ಭಾವನೆ ಮೂಡಿಸುವಲ್ಲಿ ವೈದ್ಯಕೀಯ ಜಗತ್ತು ಯಶಸ್ಸು ಕಂಡಿದೆ ಎಂದರೂ ತಪ್ಪಲ್ಲ. ಆದರೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಕ್ಯಾನ್ಸರ್ ಇಳಿ ವಯಸ್ಸಿನ ರೋಗವಾಗಿತ್ತು. 60-70ರ ಹರೆಯದಲ್ಲಿ ಕಾಣಿಸಿಕೊಳ್ಳುತ್ತಿದ ರೋಗ, ಈಗೀಗ 30-40 ಹರೆಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ. ವಾತಾವರಣದಲ್ಲಿ ವ್ಯತ್ಯಾಸ, ಹವಾಮಾನ ವೈಪರೀತ್ಯ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಕಲುಷಿತಗೊಂಡ ನೀರು, ಗಾಳಿ, ಆಹಾರ ಮತ್ತು ವಿಪರೀತ ಒತ್ತಡದ ಜೀವನದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಬೀಡಿ, ಸಿಗರೇಟು, ಗುಟ್ಕಾ ಮುಂತಾದ ದುಶ್ಚಟಗಳ ಸಹವಾಸದಿಂದಾಗಿ ಹೆಚ್ಚು ಹೆಚ್ಚು ಯುವಜನತೆ ಕ್ಯಾನ್ಸರ್ ರೋಗಕ್ಕೆ ತುತ್ತಾುವುದು ಆತಂಕಕಾರಿ ವಿಚಾರವೇ ಸರಿ.
ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ 2008ರಿಂದ ಪ್ರತೀ ವರ್ಷ ಫೆಬ್ರವರಿ 4 ರಂದು ‘ಜಾಗತಿಕ ಕ್ಯಾನ್ಸರ್ ದಿನ’ ಎಂದು ಆಚರಿಸಲಾಗುತ್ತದೆ. ಪ್ರಾರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚುವುದು ಮತ್ತು ಪರಿಣಾಮಕಾರಿ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವುದೇ ಈ ಆಚರಣೆಯ ಮೂಲ ಉದ್ದೇಶ.
ಅರ್ಬುದ ರೋಗಕ್ಕೆ ಕಾರಣಗಳು
♦ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ
♦ ಧೂಮಪಾನ ಮತ್ತು ಮದ್ಯಪಾನ
♦ ಅನುವಂಶೀಯ ಕಾರಣಗಳು
♦ ಆರಾಮದಾಯಕ ಜೀವನ ಶೈಲಿ, ಅನಾರೋಗ್ಯಪೂರ್ಣ ಆಹಾರದ ಪದ್ಧತಿ ಮತ್ತು ಒತ್ತಡದ ಜೀವನ ಇತ್ಯಾದಿ
♦ ವಿಕಿರಣದ ಮುಖಾಂತರ
♦ ಅತಿಯಾದ ಗರ್ಭನಿರೋಧಕ ಮಾತ್ರೆಗಳು ಮತ್ತು ಕೃತಕ ರಸದೂತ ಮಾತ್ರೆಗಳ ಅನಿಯಂತ್ರಿತ ಬಳಕೆ
♦ ವಾತಾವರಣದ ವೈಪರೀತ್ಯ, ವಾಯು ಮಾಲಿನ್ಯ, ವೃತ್ತಿ ಸಂಬಂಧಿ ಕ್ಯಾನ್ಸರ್ ಕಾರಕ ವಸ್ತುಗಳ ದೇಹಕ್ಕೆ ಸೇರುವುದರಿಂದ
♦ ಅನಾರೋಗ್ಯಕರವಾದ ಲೈಂಗಿಕ ಜೀವನ ಮತ್ತು ಹತ್ತು ಹಲವಾರು ಲೈಂಗಿಕ ಸಂಬಂಧಗಳು, ಹಲವಾರು ಬಾರಿ ಗರ್ಭ ಧರಿಸುವುದು ಇತ್ಯಾದಿ.
♦ ಹೆಪಟೈಟಿಸ್ ಬಿ ಮತ್ತು ಸಿ ವೈರಸ್ನ ಸೋಂಕು, ಎಬ್ಸ್ಟೈನ್ ಬಾರ್ ವೈರಸ್, ಹ್ಯೂಮನ್ ಪಾಪಿಲೋಮ ವೈರಾಸ್ ಇತ್ಯಾದಿ ವೈರಸ್ ಸೋಂಕಿನಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
ತಡೆಗಟ್ಟುವುದು ಹೇಗೆ?
♦ ಧೂಮಪಾನ, ಮದ್ಯಪಾನ ಮತ್ತು ತಂಬಾಕು ಮೂರು ಕೂಡ ಮನುಕುಲದ ಬಹುದೊಡ್ಡ ವೈರಿ. ಇವು ಮೂರು ಚಟಗಳು ಒಟ್ಟು ಸೇರಿದಲ್ಲಿ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ. ಇವನ್ನು ತ್ಯಜಿಸಲು ಪ್ರಯತ್ನಿಸಿ.
♦ ಕೆಲವೊಂದು ಕ್ಯಾನ್ಸರ್ (ವೃಷಣದ ಕ್ಯಾನ್ಸರ್, ಸ್ತನ ಕ್ಯಾನ್ಸರ್) ಅನುವಂಶೀಯವಾಗಿ ಬರುತ್ತವೆ. ಈ ರೀತಿಯ ಚರಿತ್ರೆಯುಳ್ಳವರು ಕಾಲಕಾಲಕ್ಕೆ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು.
♦ ಅತಿಯಾದ ರಸದೂತಗಳ ಬಳಕೆ ಮತ್ತು ಅತಿಯಾದ ಗರ್ಭನಿರೋಧಕಗಳ ಬಳಕೆಯಿಂದ ಕ್ಯಾನ್ಸರ್ ಬರಲೂ ಬಹುದು. ಅದೇ ರೀತಿ ಅನಾರೋಗ್ಯಕರ ಲೈಂಗಿಕ ಪ್ರಕ್ರಿಯೆಗಳು ಮತ್ತು ಸಂಬಂಧಗಳಿಗೆ ಕಡಿವಾಣ ಹಾಕಲೇಬೇಕು.
♦ ಆರೋಗ್ಯಕರವಾದ ಜೀವನ ಕ್ರಮ, ಪರಿಪೂರ್ಣವಾದ ಸಮತೋಲಿನ ಆಹಾರ, ಶಿಸ್ತು ಬದ್ಧವಾದ ನಿರಂತರವಾದ ದೈಹಿಕ ವ್ಯಾಯಾಮಗಳಿಂದ ಕೂಡಿದ ಜೀವನಶೈಲಿ ಮತ್ತು ಒತ್ತಡ ರಹಿತ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು. ಕಲುಷಿತ ವಾತಾವರಣ, ಕಲುಷಿತ ಆಹಾರ ನೀರು ಇತ್ಯಾದಿಗಳಿಂದಲೂ ಕ್ಯಾನ್ಸರ್ ಬರಬಹುದು. ವಿಕಿರಣ ಸೂಸುವ ವಾತಾವರಣ ಮತ್ತು ವೃತ್ತಿ ಸಂಬಂಧಿ ಕ್ಯಾನ್ಸರ್ಕಾರಕ (ಸೀಸದ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ) ವಾತಾವರಣವಿದ್ದಲ್ಲಿ ವೃತ್ತಿಯನ್ನು ಬದಲಿಸಿ, ಕ್ಯಾನ್ಸರ್ ಬರದಂತೆ ಎಚ್ಚರ ವಹಿಸಬೇಕು.
♦ ಕಾಲಕಾಲಕ್ಕೆ ವೈದ್ಯರ ಬಳಿ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಂಡಲ್ಲಿ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಸರ್ವಿಕ್ಸ್ ಕ್ಯಾನ್ಸರ್ ಮತ್ತು ಇನ್ನಾವುದೇ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಬಹುದು. ಕ್ಯಾನ್ಸರ್ ರೋಗದ ವಿಚಾರದಲ್ಲಿ ರೋಗದ ಚಿಕಿತ್ಸೆಗಿಂತ ರೋಗವನ್ನು ತಡೆಗಟ್ಟುವಂತೆ ಮುನ್ನೆಚ್ಚರಿಕೆ ವಹಿಸುವುದರಲ್ಲಿಯೇ ಜಾಣತನ ಅಡಗಿದೆ.
ಚಿಕಿತ್ಸೆ ಹೇಗೆ
ಕ್ಯಾನ್ಸರ್ ರೋಗಕ್ಕೆ ಮೂಲಭೂತ ಚಿಕಿತ್ಸೆ ಎಂದರೆ ಕ್ಯಾನ್ಸರ್ ಪೀಡಿತ ಗಡ್ಡೆಯನ್ನು ಸರ್ಜರಿ ಮುಖಾಂತರ ತೆಗೆಯುವುದು. ಪ್ರಾರಂಭಿಕ ಹಂತದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಮುಂದುವರಿದ ಹಂತದಲ್ಲಿ ಸರ್ಜರಿ ಜೊತೆಗೆ ವಿಕಿರಣ ಚಿಕಿತ್ಸೆ ಹಾಗೂ ಕಿಮೋಥೆರಪಿಯ ಆವಶ್ಯಕತೆ ಇರುತ್ತದೆ. ಕೆಲವೊಂದು ಕ್ಯಾನ್ಸರ್ಗಳನ್ನು ಕಿಮೋಥೆರಪಿಯಿಂದಲೇ ಗುಣಪಡಿಸಲಾಗುತ್ತದೆ. (ಉದಾಹರಣೆ ಲಿಂಫೋಮ ಎನ್ನುವ ಕ್ಯಾನ್ಸರ್) ಮುಂದುವರಿದ ಹಂತದಲ್ಲಿ ಎಲ್ಲಾ ಮೂರು ರೀತಿಯ ಚಿಕಿತ್ಸೆಯೂ ಬೇಕಾಗಬಹುದು. ಚಿಕಿತ್ಸೆಯ ವಿಧಾನ, ಪ್ರಮಾಣ ಮತ್ತು ಚಿಕಿತ್ಸೆಯ ಸಮಯ ಎಲ್ಲವನ್ನು ವೈದ್ಯರೇ ನಿರ್ಧರಿಸುತ್ತಾರೆ. ವೈದ್ಯರ ಸೂಕ್ತ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆದಲ್ಲಿ ಕ್ಯಾನ್ಸರ್ ರೋಗವನ್ನು ಖಂಡಿತವಾಗಿಯೂ ಪರಿಣಾಮಕಾರಿಯಾಗಿ ಗುಣಪಡಿಸಬಹುದು ಮತ್ತು ಇತರರಂತೆ ನೆಮ್ಮದಿಯ ಜೀವನ ನಡೆಸಬಹುದು ಮತ್ತು ನಡೆಸಿದ ನಿದರ್ಶನಗಳು ನಮ್ಮ ಮುಂದೆಯೇ ಹಲವಾರು ಇವೆೆ.
ಬಾಯಿ ಕ್ಯಾನ್ಸರ್ನ ಚಿಹ್ನೆಗಳು
♦ ಪ್ರಾರಂಭಿಕ ಹಂತದಲ್ಲಿ ಖಾರ ಆಹಾರ ಪದಾರ್ಥಗಳನ್ನು ತಿನ್ನುವಾಗ ಬಾಯಿ ಉರಿಯುತ್ತದೆ.
♦ ಬಾಯಿಯಲ್ಲಿ ಹುಣ್ಣು ಅಥವಾ ಗಾಯ ಆಗುತ್ತದೆ ಮತ್ತು ಹುಣ್ಣು ಒಣಗುವುದೇ ಇಲ್ಲ
♦ ಬಾಯಿಯಲ್ಲಿ ಗಡ್ಡೆ ಬೆಳೆಯುತ್ತದೆ. ಮತ್ತು ಮುಟ್ಟಿದಾಗ ರಕ್ತ ಬರುತ್ತದೆ.
♦ ವಿಪರೀತ ನೋವು ಇರುತ್ತದೆ. ಮಾತ್ರೆ ತಿಂದರೂ ನೋವು ನಿವಾರಣೆಯಾಗುವುದಿಲ್ಲ
♦ ಬಾಯಿ ತೆರೆಯಲು ಕಷ್ಟವಾಗಬಹುದು. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿ 50 ಮಿ.ಮೀ. ಬಾಯಿ ತೆರೆಯಬಹುದು. ಅರ್ಬುದ ರೋಗದಲ್ಲಿ 20 ಮಿ.ಮೀ. ಗಿಂತ ಜಾಸ್ತಿ ಬಾಯಿ ತೆರೆಯಲು ಕಷ್ಟವಾಗಬಹುದು.
♦ ಮಾತನಾಡುವಾಗ ಮತ್ತು ಆಹಾರ ಪದಾರ್ಥ ಸೇವಿಸುವಾಗ ತೊಂರೆ ಮತ್ತು ನೋವು ಆಗಬಹುದು.
♦ ಬಾಯಿಯಲ್ಲಿ ಬಿಳಿ ಮತ್ತು ಕೆಂಪುಕಲೆಗಳು ಕಾಣಿಸಿಕೊಳ್ಳಬಹುದು.
♦ ನಾಲಗೆಯ ಮೇಲೆ ಗುಳ್ಳೆ ಅಥವಾ ಹುಣ್ಣು ಅಥವಾ ಗಡ್ಡೆಬೆಳೆದು ನಾಲಗೆಯ ಚಲನೆಯಲ್ಲಿ ಕಷ್ಟವಾಗಬಹುದು
♦ ಅತಿಯಾದ ಎಂಜಲು (ಜೊಲ್ಲುರಸ) ಬಂದಂತೆ ಅನಿಸುವುದು
♦ ಕುತ್ತಿಗೆಯ ಸುತ್ತ ಗಡ್ಡೆ ಅಥವಾ ಗುಳ್ಳೆ ಬೆಳೆದಂತೆ ಅನಿಸಬ ಹುದು. ಗಡ್ಡೆ ಸುಮಾರು 2ರಿಂದ 10ರ ವರೆಗೆ ಇದ್ದು ಕಲ್ಲಿನಂತೆ ಗಟ್ಟಿಯಾಗಿರುತ್ತೆ. ಆದರೆ ನೋವಿರುವುದಿಲ್ಲ.ಶ್ವಾಸಕೋಶದ ಕ್ಯಾನ್ಸರ್ನ ಚಿಹ್ನೆಗಳು
ಶೇ. 90ರಷ್ಟು ಮಂದಿ ಧೂಮಪಾನ ದಿಂದಾಗಿಯೇ ಎದೆಗೂಡಿನ ಕ್ಯಾನ್ಸರ್ಗೆ ತುತ್ತಾಗುತ್ತಾರೆ. ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣದೇ ಇರಬಹುದು. ಆದರೆ ಮುಂದುವರಿದ ಕ್ಯಾನ್ಸರ್ನಲ್ಲಿ ಈ ಕೆಳಗಿನ ಲಕ್ಷಣಗಳು ಹೆಚ್ಚಾಗಿ ಕಾಣಸಿಗುತ್ತದೆ.
♦ ವಿಪರೀತ ಮತ್ತು ನಿರಂತರ ಕೆಮ್ಮು ಇದ್ದು ಯಾವುದೇ ರೀತಿಯ ಔಷಧಗಳಿಗೆ ಕಡಿಮೆಯಾಗದೆ, ನಿರಂತರ 4, 5 ವಾರ ಕಡಿಮೆಯಾಗದಿ್ದಲ್ಲಿ ವೈದ್ಯರ ಸಲಹೆ ಅತೀ ಅಗತ್ಯ.
♦ ಕೆಮ್ಮುವಾಗ ರಕ್ತ ವಸರುವುದು, ಕಫದ ಜೊತೆ ರಕ್ತ ಸೂಸುವುದು
♦ ಆಹಾರ ಸೇರದಿರುವುದು ಮತ್ತು ಹಸಿವಿಲ್ಲದಿರುವುದು ಇದರಿಂದಾಗಿ ದೇಹದ ತೂಕ ಕಡಿಮೆಯಾಗಬಹುದು
♦ ಉಸಿರಾಡಲು ಕಷ್ಟವಾಗಬಹುದು. ಉಸಿರಾಡುವಾಗ ಜೋರಾಗಿ ಶಬ್ದ ಬರಬಹುದು. ಉಸಿರಾಡುವಾಗ ಎದೆಭಾಗದಲ್ಲಿ ನೋವಾಗ ಬಹುದು. ದೀರ್ಘವಾದ ಶ್ವಾಸ ೆಗೆಯಲು ಸಾಧ್ಯವಾಗದೇ ಇರಬಹುದು
♦ ಪದೇ ಪದೇ ಆಯಾಸಗೊಳ್ಳುವುದು, ಜೀವನದಲ್ಲಿ ನಿರಾಸಕ್ತಿ. ಶ್ವಾಸಕೋಶದಲ್ಲಿ ಆಮ್ಲಜನಕದ ಪೂರೈಕೆ ಮತ್ತು ವಿನಿಮಯವಾಗದಿದ್ದಲ್ಲಿ ಜೀವನದ ಉತ್ಸಾಹ ಬತ್ತಿಹೋಗಬಹುದು.