varthabharthi


ವಾರದ ವ್ಯಕ್ತಿ

ವಾರದ ವ್ಯಕ್ತಿ

ಮೆತ್ತಗಾದ ಮೋದಿ

ವಾರ್ತಾ ಭಾರತಿ : 4 Feb, 2018
-ಬಸು ಮೇಗಲಕೇರಿ

ಬಜೆಟ್ ತಯಾರಿಸಿದ್ದು ಅಧಿಕಾರಿಗಳು, ಲೋಕಸಭೆಯಲ್ಲಿ ಮಂಡಿಸಿದ್ದು ಹಣಕಾಸು ಸಚಿವ ಅರುಣ್ ಜೇಟ್ಲಿ. ಆದರೆ ದೇಶದ ಮಾಧ್ಯಮಗಳು ಬರೆದದ್ದು, ಬಿತ್ತರಿಸಿದ್ದು-ಮೋದಿ ಬಜೆಟ್ ಎಂದು.

ಮೋದಿ ಪ್ರಚಾರಪ್ರಿಯ. ಅವರ ಪ್ರತಿಯೊಂದು ನಡೆಯೂ, ನಾಲ್ಕು ವರ್ಷಗಳ ಹಾರಾಟವೂ ಅದನ್ನು ಹೇಳುತ್ತದೆ. ಸಾಲದೆಂದು ಶ್ರೀರಾಮನ ಭಕ್ತರು ಮೋದಿಯನ್ನು ಆಕಾಶದೆತ್ತರಕ್ಕೆ ನಿಂತ ಹನುಮನಿಗೆ ಹೋಲಿಸಿ ಭಜನೆಯಲ್ಲಿ ನಿರತರಾಗಿದ್ದಾರೆ. ಅಧಿಕಾರವಿದ್ದ ಕಡೆ ಅವಕಾಶಕ್ಕಾಗಿ ಹಾತೊರೆಯುವ, ಹಸ್ತ ಹೊಸೆಯುವ ಪತ್ರಕರ್ತರು ಓಲೈಕೆಗೆ ಇಳಿದಿದ್ದಾರೆ. ಪ್ರತಿಯೊಂದನ್ನೂ ಮೋದಿ ಖಾತೆಗೆ ಜಮಾ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಮೋದಿ ಎಂದರೆ ಭಾರತ ಎನ್ನುವಂತಾಗಲು, ಮೋದಿ ಬಿಟ್ಟರೆ ಮತ್ತೊಬ್ಬರಿಲ್ಲ ಎಂದು ಸಾರಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ.

1975ರಲ್ಲಿ ಇಂದಿರಾ ಎಂದರೆ ಇಂಡಿಯಾ ಎನ್ನುವಂತಾಗಿತ್ತು. ದೇಶ ಕಾಂಗ್ರೆಸ್‌ಮಯವಾಗಿತ್ತು. ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿದ್ದ ಇಂದಿರಾ ಗಾಂಧಿ, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. 19 ತಿಂಗಳ ಕಾಲ ದೇಶದ ಬಾಯಿಗೆ ಬೀಗ ಹಾಕಿ ಬೀಗಿದರು.ಆದರೆ 1977ರ ಲೋಕಸಭಾ ಚುನಾವಣೆಯಲ್ಲಿ ಹೇಳಹೆಸರಿಲ್ಲದಂತೆ ಧೂಳೀಪಟವಾದರು.ಇದು ಇಲ್ಲಿಯೇ, 40 ವರ್ಷಗಳ ಹಿಂದೆ ನಡೆದ, ಇತಿಹಾಸದ ಪುಟಗಳಲ್ಲಿ ದಾಖಲಾದ, ಸರ್ವಾಧಿಕಾರಿಗೆ ಸಾಮಾನ್ಯರು ಬುದ್ಧಿ ಕಲಿಸಿದ ಕತೆ.

 ಮೋದಿ ಕೂಡ ಇಂದಿರಾ ಗಾಂಧಿಯಂತಾಗಲು, ಕಾಂಗ್ರೆಸ್ ಮುಕ್ತ ಭಾರತ ಮಾಡಲು, ಭಾರತವನ್ನು ಮೋದಿಮಯ ಮಾಡಲು ಸಂಘಪರಿವಾರವನ್ನು ಸೊಂಟಕ್ಕೆ ಕಟ್ಟಿಕೊಂಡು ಕಾದಾಟಕ್ಕಿಳಿದಿದ್ದಾರೆ. ಅದಕ್ಕೆ ಕೇಂದ್ರ ಸರಕಾರದ ಪರಮಾಧಿಕಾರವನ್ನೇ ಬಳಸಿಕೊಳ್ಳುತ್ತಿದ್ದಾರೆ.ಆದರೆ ಮೋದಿಯವರ ಈ ಆಟ-ಹಾರಾಟಕ್ಕೆ ಮೊನ್ನೆಯ ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಬ್ರೇಕ್ ಹಾಕಿ ಎಚ್ಚರಿಸಿದೆ. ನಾಲ್ಕುವರ್ಷದ ಮೋದಿಯ ಜನಪ್ರೀತಿ ಮತ್ತು ಜನಪ್ರಿಯತೆಯನ್ನು ಜಗಜ್ಜಾಹೀರು ಮಾಡಿದೆ.ಗುಜರಾತ್ ಚುನಾವಣೆಯ ನಂತರ ದೇಶದಲ್ಲಿ ಮೋದಿ ಅಲೆ ಇದೆಯಾ ಅಥವಾ ಮೋದಿ ವರ್ಚಸ್ಸು ಹೇಗಿದೆ ಎಂದು ‘ ಇಂಡಿಯಾ ಟುಡೆ’ ಸರ್ವೇ ನಡೆಸಿದಾಗ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಆ ಸರ್ವೇಯ ಪ್ರಕಾರ ಜನರ ಮನಸ್ಸಿನಿಂದ ಮೋದಿ ನಿಧಾನವಾಗಿ ಮರೆಯಾಗುತ್ತಿದ್ದಾರೆ.ವರ್ಚಸ್ಸನ್ನು ಕಳೆದುಕೊಂಡು ಕಳಾಹೀನವಾಗಿ ಕಾಣುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಪ್ರಕಟವಾಗಿ ದೇಶದಲ್ಲಿ ಚರ್ಚೆ ಹುಟ್ಟುಹಾಕಿರುವ ಸಂದರ್ಭದಲ್ಲಿಯೇ, ಕಳೆದವಾರ ಬಜೆಟ್ ಮಂಡನೆಯಾದ ದಿನವೇ ಹೊರಬಿದ್ದ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಲಗಳ ಉಪಚುನಾವಣೆಗಳಲ್ಲಿ ಬಿಜೆಪಿ ಹೀನಾಯವಾಗಿ ಸೋತು ಮೋದಿಯನ್ನು ಬೆಚ್ಚಿಬೀಳಿಸಿದೆ.

ಕಾಕತಾಳೀಯವೋ ಏನೋ, ಮೂರು ವರ್ಷದ ಬಜೆಟನ್ನು ತಮ್ಮ ಆಪ್ತ ಕಾರ್ಪೊರೇಟ್ ಕುಳಗಳಾದ ಅಂಬಾನಿ-ಅದಾನಿಗಳ ಮೂಗಿನ ನೇರಕ್ಕೆ, ಅವರ ವ್ಯಾಪಾರ-ವಹಿವಾಟಿಗೆ ಅನುಕೂಲಕರವಾಗುವಂತೆ ಮಂಡಿಸಿದ್ದ ಮೋದಿ, ನಾಲ್ಕನೇ ಚುನಾವಣಾ ವರ್ಷದ ಬಜೆಟನ್ನು, ಬಡವರ ಪರ ಬಜೆಟನ್ನಾಗಿ ರೂಪಿಸಲು ಹೆಣಗಾಡಿರುವುದು ಎದ್ದು ಕಾಣುತ್ತದೆ. ಅಂದರೆ ಆಕಾಶದಲ್ಲಿ ಹಾರಾಡುತ್ತಿದ್ದ ಮೋದಿ ನೆಲಕ್ಕಿಳಿದಿದ್ದಾರೆ. ನೆಲದ ಮೇಲೆ ಕಾಲೂರಿ ವಾಸ್ತವವನ್ನು ಅರಿಯುತ್ತಿದ್ದಾರೆ.

ಹಾಗೆ ನೋಡಿದರೆ, ಮೋದಿ ಮೇಲ್ಜಾತಿಗೆ ಸೇರಿದವರಲ್ಲ, ಅನುಕೂಲಸ್ಥರಲ್ಲ, ಡೂನ್ ಸ್ಕೂಲ್ ಪ್ರಾಡಕ್ಟಲ್ಲ, ಪ್ರತಿಷ್ಠಿತ ರಾಜಕೀಯ ಕುಟುಂಬದಿಂದ ಬಂದವರಲ್ಲ. ಗುಜರಾತಿನ ವಡ್ನಾಗರದ, ಹಿಂದುಳಿದ ಗಾಣಿಗ ಜಾತಿಗೆ ಸೇರಿದ, ಮನೆತುಂಬ ಮಕ್ಕಳಿದ್ದ, ಚಹ ಮಾರಿ ಬದುಕುತ್ತಿದ್ದ ಕಷ್ಟದ ಕುಟುಂಬದಿಂದ ಬಂದವರು. ಹಸಿವು-ಅವಮಾನಗಳನ್ನು ಬೆನ್ನಿಗಿಟ್ಟುಕೊಂಡು ಬೆಳೆದವರು. ಚಿಕ್ಕಂದಿನಲ್ಲಿಯೇ ಮನೆಯಿಂದ ಹೊರಬಿದ್ದು, ಆರೆಸ್ಸೆಸ್ ಸೇರಿ ಶಿಸ್ತು, ಶ್ರದ್ಧೆಯನ್ನು ಕಲಿತವರು. ಶ್ರಮದಿಂದ ಹಂತಹಂತವಾಗಿ ಮೇಲೇರಿದವರು.ಸಂಘ-ಪಕ್ಷ ಕೊಟ್ಟ ಅವಕಾಶವನ್ನು ಬಳಸಿಕೊಂಡು ಬೆಟ್ಟದಂತೆ ಬೆಳೆದು ಇಡೀ ದೇಶವೇ ಬೆರಗಾಗುವಂತೆ ಮಾಡಿದವರು.ಮಾದರಿಯಾದವರು. ಅಷ್ಟೇ ಅಲ್ಲ, ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದು, ಪ್ರಮುಖವಾಗಿ ‘‘ವಿಷವನ್ನೂ ಕೂಡ ಹೇಗೆ ಜೀರ್ಣಿಸಿಕೊಳ್ಳಬೇಕು ಎಂಬುದನ್ನು ಕಲಿತದ್ದು ನಾನು ನನ್ನ ಹುಟ್ಟೂರಾದ ವಡ್ನಾಗರದಲ್ಲಿ’’ ಎಂದ ಸ್ವತಃ ಮೋದಿಯೇ ನೆನಪು ಮಾಡಿಕೊಂಡಿದ್ದಿನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಇಂತಹ ದಿಕ್ಕೆಟ್ಟ ದರಿದ್ರ ಸ್ಥಿತಿಯಿಂದ ಬಂದ ಮೋದಿ ಭಾರತದ ಪ್ರಧಾನಿಯಾದಾಗ, ದೇಶದ ಶ್ರೀಸಾಮಾನ್ಯನೇ ಪ್ರಧಾನಿಯಾದಂತೆ ಸಂಭ್ರಮಿಸಿದ್ದರು. ಕಾಮನ್ ಮ್ಯಾನ್ ಕನಸು ನನಸಾಯಿತೆಂದು ಭಾವಿಸಿದ್ದರು. ರಾಜಕೀಯ ಪಂಡಿತರು ಇದೇ ಪ್ರಜಾಪ್ರಭುತ್ವದ ಸೊಗಸು ಎಂದು ವ್ಯಾಖ್ಯಾನಿಸಿದ್ದರು. ಅದಕ್ಕೆ ಪೂರಕವಾಗಿ ಪ್ರಧಾನಿ ಪಟ್ಟದಲ್ಲಿ ಕೂತ ಮೋದಿ ಕೂಡ, ‘‘ಈ ದೇಶಕ್ಕಾಗಿ ನನ್ನ ಬದುಕನ್ನೇ ತ್ಯಾಗ ಮಾಡಿದ್ದೇನೆ, ದೇಶಸೇವೆಗಾಗಿಯೇ ಮದುವೆಯಾಗಿದ್ದ ಮಡದಿಯನ್ನು ಬಿಟ್ಟಿದ್ದೇನೆ, ಮನೆಯನ್ನು ತೊರೆದಿದ್ದೇನೆ, ಜಗತ್ತು ಭಾರತವನ್ನು ಬೆರಗಿನಿಂದ ನೋಡುವಂತೆ ಮಾಡುತ್ತೇನೆ’’ ಎಂದಿದ್ದರು.

ಕಾಂಗ್ರೆಸ್‌ನ ನಿರಂತರ ಆಡಳಿತ ಮತ್ತು ಆ ಆಡಳಿತದ ಫಲವಾಗಿ ದೇಶಕ್ಕೆ ದಕ್ಕಿದ ವಂಶ ಪಾರಂಪರ್ಯ ರಾಜಕಾರಣ, ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ, ಬ್ರಹ್ಮಾಂಡ ಭ್ರಷ್ಟಾಚಾರದಿಂದ ರೋಸಿಹೋಗಿದ್ದ ದೇಶದ ಜನತೆ, ಮೋದಿಯನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಅವರ ನಡೆ ಮತ್ತು ನುಡಿಯನ್ನು ಮಾದರಿಗೆ ಬಳಸಿಕೊಂಡಿದ್ದರು. ದೇಶವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವ ರೀತಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಜೊತೆಗೆ ಮೋದಿಯ ಮಾತು, ಜಾಣ್ಮೆ, ಗತ್ತು, ಗಾಂಭೀರ್ಯ-ಪ್ರಧಾನಿ ಅಂದರೆ ಹೀಗಿರಬೇಕು ಎನ್ನುವಂತೆ ಮಾಡಿತ್ತು. ಇಡೀ ದೇಶವೇ ಮೋದಿಯನ್ನು ಮುಕ್ತಕಂಠದಿಂದ ಹೊಗಳುತ್ತಿತ್ತು. ಆ ಹೊಗಳಿಕೆಗೆ ಉಬ್ಬಿ ಆಕಾಶದಲ್ಲಿ ತೇಲಾಡತೊಡಗಿದ ಮೋದಿ, ಮಾಡಿದ್ದೆಲ್ಲ ಸರಿ ಅನ್ನುವ ಅಹಂನಿಂದ ಹಾರಾಟದಲ್ಲಿಯೇ ಕಾಲಕಳೆಯತೊಡಗಿದರು.

ಮುಂದುವರಿದು ಕೇಂದ್ರ ಸಚಿವ ಸಂಪುಟದಲ್ಲಿ ತಮಗಿಂತ ಹಿರಿಯರು, ಅನುಭವಿಗಳು ಮತ್ತು ಬುದ್ಧಿವಂತರಿದ್ದರೂ, ಅವರನ್ನು ಬಾಯಿ ಬಿಡದ ಬೊಂಬೆಗಳನ್ನಾಗಿ ಮಾಡಿ ಮೂಲೆಗೆ ಕೂರಿಸಿದರು. ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಯಶವಂತ ಸಿನ್ಹಾರನ್ನು ನಿರ್ಲಕ್ಷಿಸಿ ಅವಮಾನಿಸಿದರು. ಸಾಧುಸಂತರನ್ನು ರಾಜಕಾರಣದ ಅಂಗಳಕ್ಕೆ ಕರೆತಂದು ಮುಖ್ಯಮಂತ್ರಿ ಮಾಡಿದರು. ದೇಶಭಕ್ತಿ, ಧರ್ಮಕ್ಕೆ ರಾಜಕೀಯ ಬೆರೆಸಿ, ಸೌಹಾರ್ದ ಬದುಕಿಗೆ ಬೆಂಕಿ ಇಟ್ಟು ವೈವಿಧ್ಯಮಯ ಭಾರತಕ್ಕೆ ಕಳಂಕ ತಂದರು. ಗೋಹತ್ಯೆಯ ನೆಪದಲ್ಲಿ ಮುಸ್ಲಿಮರು, ದಲಿತರು, ಕ್ರಿಶ್ಚಿಯನ್ನರನ್ನು ಹತ್ಯೆ ಮಾಡಲು ಸಂಘಪರಿವಾರದವರಿಗೆ ಪರವಾನಿಗೆ ಕೊಟ್ಟರು. ಮಾಡಿದ್ದು ಸರಿ ಎಂದು ಸಾರಲು ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡರು. ಸುದ್ದಿಗೂ-ಜಾಹೀರಾತಿಗೂ ವ್ಯತ್ಯಾಸವೇ ಗೊತ್ತಾಗದಂತೆ ಮೋದಿ ಭಜನೆ ಬಿತ್ತರವಾಗುವಂತೆ ನೋಡಿಕೊಂಡರು. ತಂತ್ರಜ್ಞಾನವನ್ನು ಬಳಸಿಕೊಂಡು ಸೋಷಿಯಲ್ ಮೀಡಿಯಾವನ್ನು ಮ್ಯಾನೇಜ್ ಮಾಡಿದರು.ಮಾತಲ್ಲೇ ಮನೆ ಕಟ್ಟಿ, ಗಾಳಿಯಲ್ಲಿ ಹೊಟ್ಟೆ ತುಂಬಿಸಿ, ‘‘ದೇಶ ಅಭಿವೃದ್ಧಿಯ ನಾಗಾಲೋಟದಲ್ಲಿದೆ’’ ಎಂಬ ಸುಳ್ಳಿನ ಸೌಧವನ್ನೇ ಸೃಷ್ಟಿಸಿಬಿಟ್ಟರು.

ಇವೆಲ್ಲವೂ ಹೊಸಕಾಲದ ರಾಜಕೀಯ ತಂತ್ರಗಳು, ಅಧಿಕಾರದಲ್ಲಿ ಉಳಿಯಬೇಕೆಂದರೆ ಪ್ರಯೋಗಕ್ಕಿಳಿಸಲೇಬೇಕಾದ ವಿಧಾನಗಳು ಎಂದು ಮೋದಿ ಮೇಲಿನ ಆರೋಪಗಳನ್ನೆಲ್ಲ ಸಮರ್ಥಿಸಿಕೊಳ್ಳಬಹುದು. ದೇಶವನ್ನು 60 ವರ್ಷ ಹಾಳು ಮಾಡಿದ ಕಾಂಗ್ರೆಸ್‌ನ ಕೊಳೆ ತೊಳೆಯಲು ನಾಲ್ಕು ವರ್ಷ ಸಾಕೇ ಎಂಬ ಸಬೂಬನ್ನೂ ಒಪ್ಪಬಹುದು. ಆದರೆ ಸದ್ಯ ಎದುರಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈನಲ್ಲಿರುವ ಅಧಿಕಾರವನ್ನು ಕಿತ್ತುಕೊಳ್ಳಲು ಮೋದಿ ಮತ್ತು ಅಮಿತ್ ಶಾ ಹೂಡಿರುವ ಆಟ, ಸ್ಥಳೀಯ ಬಿಜೆಪಿ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಮಾನವಂತರಿಗೆ ಇರುಸು-ಮುರುಸುಂಟುಮಾಡಿದೆ. ಪ್ರಜಾಪ್ರಭುತ್ವದ ರೀತಿ ನೀತಿಯನ್ನೇ ಬುಡಮೇಲು ಮಾಡುವಂತಿದೆ.

ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಿಕ್ಕಾಗಿ, ಬಿಜೆಪಿಯ ತಂತ್ರಗಾರಿಕೆಯನ್ನು ಜಾರಿಗೆ ತರಲಿಕ್ಕಾಗಿಯೇ ಹೊರರಾಜ್ಯಗಳ ಒಂಭತ್ತು ಮಂದಿ ‘ಚಾಣಕ್ಯ’ರಿಗೆ ಚುನಾವಣಾ ಉಸ್ತುವಾರಿ ವಹಿಸಿಕೊಡಲಾಗಿದೆ.

ಐವತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ, ತಳಮಟ್ಟದಿಂದ ಪಾರ್ಟಿ ಕಟ್ಟಿರುವ ಯಡಿಯೂರಪ್ಪ ರಿಗೆ ಪಾರ್ಟಿಯಲ್ಲಿ ಮೂರು ಕಾಸಿನ ಮರ್ಯಾದೆಯಿಲ್ಲ. ಇವರಷ್ಟೇ ಅಲ್ಲ, ಈಶ್ವರಪ್ಪ, ಅನಂತಕುಮಾರ್, ಜೋಷಿ, ಶೆಟ್ಟರ್, ಶೋಭಾ, ಸದಾನಂದಗೌಡರಾದಿಯಾಗಿ ಇವರಾರೂ ಮೋದಿ-ಶಾ ಕಣ್ಣಲ್ಲಿ ನಾಯಕರೇ ಅಲ್ಲ. ಇವರಾರಿಗೂ ನಯಾಪೈಸೆಯ ಬೆಲೆಯೂ ಇಲ್ಲ. ಇವರಿಗೆ ಅಭ್ಯರ್ಥಿಗಳ ಹೆಸರು ಸೂಚಿಸುವ, ಟಿಕೆಟ್ ಹಂಚುವ ಅಧಿಕಾರವೇ ಇಲ್ಲ. ಅದಕ್ಕಿಂತಲೂ ಮುಖ್ಯವಾಗಿ ‘ನಾನು ಅಭ್ಯರ್ಥಿ’ ಎಂದು ಎದೆಮುಟ್ಟಿ ಹೇಳಿಕೊಳ್ಳುವ ಧೈರ್ಯವೂ ಇಲ್ಲ. ಟಿಕೆಟ್ ಸಿಗುವ ಖಾತ್ರಿಯೂ ಇಲ್ಲ. ಈ ಬಗ್ಗೆ ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರು,‘‘ನಮ್ಮ ಪಾರ್ಟಿ ಕತೆ ಹೇಳಂಗಿಲ್ಲ ಬಿಡಿ, ನಮಗಿಂತ ಫ್ಯೂಡಲ್ ಗೌಡರ ಪಾರ್ಟಿಯೇ ಎಷ್ಟೋ ವಾಸಿ. ನಾವು ಕಾಂಗ್ರೆಸ್‌ನ್ನು ಗುಲಾಮರ ಪಕ್ಷ, ಹೈಕಮಾಂಡ್ ಮುಂದೆ ಕೈ ಕಟ್ಟಿ ನಡುಬಗ್ಗಿಸಿ ನಿಲ್ಲುವ ಜೀ ಹುಜೂರ್‌ಗಳ ಪಕ್ಷ, ಲಕೋಟೆ ಪಕ್ಷ ಅಂತ ಟೀಕಿಸುತ್ತಿದ್ದವು. ಇವತ್ತು ನಾವು ಅವೆರಡೂ ಪಕ್ಷಗಳಿಗಿಂತ ಹೀನಾಯ ಸ್ಥಿತಿಯಲ್ಲಿದ್ದೇವೆ’’ ಎನ್ನುತ್ತಾರೆ.

ಬಿಜೆಪಿಯ ಸ್ಥಳೀಯ ನಾಯಕರಿಗೆ ಮೋದಿಯ ಹೊಸಕಾಲದ ಚುನಾವಣಾ ತಂತ್ರ ಗೊತ್ತಿಲ್ಲದಿರಬಹುದು. ಭ್ರಷ್ಟರಾಗಿದ್ದು, ಒಗ್ಗಟ್ಟಿಲ್ಲದೆ, ಗೆಲ್ಲುವ ವಿಶ್ವಾಸ ಕಳೆದುಕೊಂಡಿರಬಹುದು. ಇವರ ಈ ಮೈನಸ್ ಪಾಯಿಂಟ್ ಗಳನ್ನೇ ಮುಂದಿಟ್ಟ ಮೋದಿ, ಸ್ಥಳೀಯ ನಾಯಕರನ್ನು ನಿರ್ಲಕ್ಷಿಸಿರುವುದು ಎಷ್ಟು ಸರಿ? ಬಿಜೆಪಿಗೆ ಮತ ನೀಡಿ ಗೆಲ್ಲಿಸಿದರೆ ಕರ್ನಾಟಕದ ಕತೆ ಏನು ಎನ್ನುವುದನ್ನು ಮತದಾರರು ಗಂಭೀರವಾಗಿ ಯೋಚಿಸಬೇಕಾಗಿದೆ. ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಪರಿಗಣಿಸಿರುವ ಕರ್ನಾಟಕವನ್ನು ಗೆಲ್ಲುವುದು ಬಿಜೆಪಿಗೆ, ಬಿಜೆಪಿಯ ಸಾಮ್ರಾಜ್ಯವನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸುವುದು ಮೋದಿಗೆ ಬಹಳ ಮುಖ್ಯವಾಗಿರಬಹುದು. ಪ್ರತಿಷ್ಠೆಯ ಪ್ರಶ್ನೆಯಾಗಿರಬಹುದು. ಆ ಮೂಲಕ ಮೋದಿಯ ವರ್ಚಸ್ಸು ವೃದ್ಧಿಯಾಗಿ, ಕುರ್ಚಿ ಗಟ್ಟಿಯಾಗಿಸಬಹುದು. ಹಾಗಂತ ದಶಕಗಳಿಂದ ಪಕ್ಷ ಸಂಘಟನೆಗಾಗಿ ಬೆವರು ಸುರಿಸಿದ ನಾಯಕರನ್ನು ನಿರ್ಲಕ್ಷಿಸುವುದೇ? ಇದೇ ಮೈನಸ್ ಪಾಯಿಂಟ್ ಗಳು ಮೋದಿ ಮತ್ತು ಅಮಿತ್ ಶಾಗಳಲ್ಲಿ ಇಲ್ಲವೇ?

ರಾಜಕಾರಣಿಗಳೆಂದರೆ ಭ್ರಷ್ಟರು ಎನ್ನುವುದು ಜನಜನಿತ.ಅಧಿಕಾರವಿದ್ದಾಗ ಕೊಳ್ಳೆ ಹೊಡೆಯುವ, ಬೇನಾಮಿ ಹೆಸರಲ್ಲಿ ಆಸ್ತಿ ಮಾಡುವ, ಕಣ್ಣಿಗೆ ಕಾಣುವ ವ್ಯಾಪಾರ-ವಹಿವಾಟುಗಳಲ್ಲೆಲ್ಲ ಹಣ ಹೂಡುವ ರಾಜಕಾರಣಿಗಳು, ಚುನಾವಣೆ ಬಂದಾಗ ಅದೇ ಹಣ ಚೆಲ್ಲಿ ಗೆಲ್ಲುತ್ತಾರೆ. ಅಧಿಕಾರಕ್ಕೇರುತ್ತಾರೆ. ಆದರೆ ಮೋದಿ ಭ್ರಷ್ಟರಲ್ಲ. ಮೋದಿ ಸಂಸಾರಸ್ಥರಲ್ಲ. ಅವರಿಗಾಗಿ ಆಸ್ತಿ ಮಾಡುವ ಪ್ರಮೇಯವೂ ಇಲ್ಲ. ನಿಜ. ಒಪ್ಪುವಂಥದ್ದೆ.ಆದರೆ ಅದಾನಿ-ಅಂಬಾನಿಗೆ ಅನುಕೂಲ ಮಾಡಿಕೊಡುತ್ತಾರೆ. ಅವರು ಇವರ ಚುನಾವಣಾ ಖರ್ಚುವೆಚ್ಚವನ್ನೆಲ್ಲ ನೋಡಿಕೊಳ್ಳುತ್ತಾರೆ.ವೃತ್ತಿರಾಜಕಾರಣಿಗಳು ಅವರೇ ದುಡಿದು,ಅವರೇ ಸುರಿದು ಅಧಿಕಾರ ಹಿಡಿದರೆ ಮೋದಿ,ಅಂಬಾನಿ-ಅದಾನಿ ಹಣದಿಂದ ಅಧಿಕಾರ ಹಿಡಿಯುತ್ತಾರೆ. ಅಂತಿಮವಾಗಿ ಅವರದೂ ಅಧಿಕಾರ ಕ್ಕಾಗಿಯೇ ಹೋರಾಟ, ಇವರದೂ ಅಧಿಕಾರಕ್ಕಾಗಿಯೇ ಹೋರಾಟ. ಅವರು ನೇರ, ನಿರಂತರ; ಇವರು ಪರೋಕ್ಷ, ಪರಾವಲಂಬಿ. ಮೋದಿ ಹೇಗೆ ಭಿನ್ನ? ವ್ಯತ್ಯಾಸವೇನು?

 ಮೋದಿ ಗೆದ್ದಿದ್ದು ದುರ್ಬಲ ವಿರೋಧ ಪಕ್ಷಗಳಿಂದ, ಹೊಸಗಾಲದ ಚುನಾವಣಾ ತಂತ್ರಗಳಿಂದ. ಈ ನಾಲ್ಕು ವರ್ಷಗಳ ಬರಿಮಾತಿನ, ಹಾರಾಟದ ಆಡಳಿತದಿಂದಾಗಿ ಮೋದಿ ಏನು ಎನ್ನುವುದು ಮತದಾರರಿಗೆ ಅರ್ಥವಾಗತೊಡಗಿದ್ದಾರೆ. ಸಂಘ ಪರಿವಾರದ ವಟುಗಳು ಎದ್ದು ನಿಲ್ಲತೊಡಗಿದ್ದಾರೆ. ಮಾನವಂತ ಯಶವಂತ್ ಸಿನ್ಹಾ ಮಾತನಾಡುತ್ತಿದ್ದಾರೆ. ಚುನಾವಣೆಯಿಂದ ಚುನಾವಣೆಗೆ ಮೋದಿಯ ವರ್ಚಸ್ಸು ಕುಂದತೊಡಗಿದೆ. ಅದು ಮೋದಿಗೂ ಗೊತ್ತಾಗಿದೆ. ಮೆತ್ತಗಾಗಿದ್ದಾರೆ. ಮೌನಿಯಾಗಿದ್ದಾರೆ.ಮನಮೋಹನ್ ಸಿಂಗ್ ನಗುತ್ತಿದ್ದಾರೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)