ಮಾಟ ಮಂತ್ರವೆಂಬ ಮಾಯಾ ಜಾಲದ ಸುತ್ತ....
ನರೇಂದ್ರ ನಾಯಕ್ ಜೀವನ ಕಥನ
ಭಾಗ 31
ಮಾಟ ಮಾಡಿದ್ದು ಯಾರೆಂದು ಸಾಕಷ್ಟು ತಲೆ ಕೆಡಿಸಿಕೊಂಡರೂ ಇವರ ಸಮಸ್ಯೆ ಪರಿಹಾರವಾಗಿರಲಿಲ್ಲ. ಬಹಳ ಪರಿಶ್ರಮದ ಬಳಿಕ ಆ ಹುಡುಗನಿಗೆ ಮಾಟ ಮಾಡಿದ್ದವರ ಬಗ್ಗೆ ತಿಳಿದೂ ಬಂತು. ಅದು ಬೇರ್ಯಾರೂ ಅಲ್ಲ ಆತನ ಚಿಕ್ಕಮ್ಮನೇ ಅಂತೆ. ಕಾರಣ ಅವರ ಮಕ್ಕಳು ಕಲಿಯುವುದರಲ್ಲಿ ತುಂಬಾ ಹಿಂದಿದ್ದರಂತೆ. ಇದಕ್ಕಾಗಿ ಮತ್ಸರದಿಂದ ಅವರು ಈ ರೀತಿ ಮಾಡಿದ್ದರಂತೆ. ಅಂತೂ ಪರೀಕ್ಷೆಗೂ ಮಾಟ ಮಂತ್ರಕ್ಕೂ ಎಲ್ಲಿಯ ಸಂಬಂಧ? ಈ ನಿದರ್ಶನವೊಂದು ಮಾಟವೆಂಬ ವೌಢ್ಯವನ್ನು ಅರಿಯಲು ಸಾಕಲ್ಲವೇ?
ಈ ಮಾಟ ಮಂತ್ರಗಳ ಬಗ್ಗೆ ನಾನು ಈಗಾಗಲೇ ಹೇಳಿಕೊಂಡಿದ್ದೇನೆ. ಮೂಢನಂಬಿಕೆಯ ಮತ್ತೊಂದು ಮುಖವೇ ಇದು. ನಂಬಿಕೆಯ ಹೆಸರಿನಲ್ಲಿ ಮುಗ್ಧರನ್ನು ನಂಬಿಸಿ ಹಣ ಮಾಡುವವರ ದಂಧೆ ಈ ಕ್ಷೇತ್ರದಲ್ಲೂ ಸಾಮಾನ್ಯವಾಗಿದೆ. ಅದೆಷ್ಟೂ ಇಂತಹ ಮಂತ್ರವಾದಿಗಳ ಅಸಲಿಯತ್ತು ಬಯಲು ಮಾಡಿದರೂ ಇವರತ್ತ ಹೋಗುವವರ ಜನರಿಗೇನೂ ಕಮ್ಮಿಯಿಲ್ಲ. ಈ ಮಾಟ ಮಂತ್ರಗಳನ್ನು ತೆಗೆಯುವವರು ಹೇಗೆ ವರ್ತಿಸುತ್ತಾರೆಂಬುದನ್ನು ತಿಳಿಯಲು ನಾನು ಬೀರಿ ಎಂಬಲ್ಲಿನ ಮಾಂತ್ರಿಕನಲ್ಲಿಗೆ ಹೋಗಿದ್ದೆ. ಆತ ಬಹಳ ಹೆಸರುವಾಸಿಯಾದ ಮಾಂತ್ರಿಕನಾಗಿದ್ದ. ಆತನ ಬಳಿ ಹೋದೊಡನೆಯೇ ನಾನು ಆತನ ಕಾಲಿಗೆ ಉದ್ದಂಡ ನಮಸ್ಕಾರ ಹಾಕಿದೆ. ಆತನಿಗೆ ಸಂತಸವಾಯಿತು ನನ್ನ ಭಯಭಕ್ತಿ ಕಂಡು ಇರಬೇಕು. ನನ್ನನ್ನು ಪೂಜಾ ಕೊಠಡಿಗೆ ಕರೆದೊಯ್ದ. ಕುಳಿತುಕೊಳ್ಳಲು ಹೇಳಿದ. ಆತನ ಮಂತ್ರ ಶಕ್ತಿ ಬಗ್ಗೆ ನಾನು ಹಲವಾರು ಕತೆಗಳನ್ನು ಕೇಳಿದ್ದೆ. ಹಾಗಾಗಿ ನನಗೂ ಆತನನ್ನು ತಿಳಿಯುವ ಬಗ್ಗೆ ತುಂಬಾನೇ ಕುತೂಹಲವಿತ್ತು. ಆತ ತನ್ನ ಮಂತ್ರಶಕ್ತಿಯಿಂದ ಕವಡೆಗಳನ್ನು ಓಲಾಡಿಸುವುದು, ಆತನನ್ನು ಪರೀಕ್ಷಿಸಲು ಬಂದವನಿಗೆ ಅಂಗಳವನ್ನೇ ಓರೆ ಕೋರೆ ಮಾಡಿದ್ದು, ಶೂನ್ಯದಿಂದ ಮಾವಿನ ಹಣ್ಣು ಕೊಟ್ಟಿದ್ದು ಇವೆಲ್ಲವೂ ಅವನ ಮಾಂತ್ರಿಕ ಶಕ್ತಿಯಾಗಿತ್ತು. ನಾನು ಆತನ ಎದುರು ದುಃಖತಪ್ತನಾಗಿ ‘ಸ್ವಾಮಿ, ನಿಮ್ಮ ಅಪಾರ ಶಕ್ತಿಯ ಬಗ್ಗೆ ಕೇಳಿದ್ದೇನೆ. ಜೀವನದಲ್ಲಿ ಸೋತ ನನಗೆ ಏನಾದರೂ ಉಪಾಯ ಮಾಡಿ ರಕ್ಷಿಸಿ’ ಎಂದು ವಿನಂತಿಸಿಕೊಂಡೆ. ಆಗ ಆತ ಒಂದು ವೀಳ್ಯದೆಲೆಯನ್ನು ತೋರಿಸಿದ. ನನ್ನ ಶಕ್ತಿಯ ಬಗ್ಗೆ ನಿನಗೆ ಸಂದೇಹವಿದೆಯೇ? ಬೇಕಾದರೆ ನಾನು ಎಲೆಯ ಮೇಲೆ ಕುಳಿತು ನೇತ್ರಾವತಿ ನದಿ ದಾಟುತ್ತೇನೆಂದ!
ನಾನಂತೂ ಆಶ್ಚಯದಿಂದ ಮತ್ತೆ ಅವನ ಕಾಲಿಗೆರಗಿದೆ. ನನ್ನ ಕಷ್ಟ ತಾಪತ್ರಯಗಳ ಬಗ್ಗೆ ದೊಡ್ಡದಾದ ಕತೆಯನ್ನು ಆತನ ಮುಂದೆ ವಿವರಿಸಿದೆ. ಕೂಡಲೇ ಜಾತಕ ತಂದಿದ್ದೀಯಾ ಎಂದು ಕೇಳಿದ. ತರಲಿಲ್ಲ ಎಂದಾಗ, ಆತನಿಗೆ ಕೋಪ ಬಂತು. ನಿಮ್ಮಂತಹವರಿಗೆ ಇಲ್ಲಿಗೆ ಬರುವಾಗ ಏನು ತರಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ ಎಂದ. ಕೊನೆಗೆ ಕವಡೆಗಳನ್ನು ಹಾಕಿ ಅವುಗಳನ್ನು ಪರೀಕ್ಷಿಸಿ ‘‘ನಿನಗೆ ಕೃತ್ರಿಮ ಮಾಡಿದ್ದಾರೆ’’ ಎಂದ!
ಇದಕ್ಕೆ ಏನು ಮಾಡಬೇಕು ಎಂದು ನಾನು ಆತನಲ್ಲಿ ಪ್ರಶ್ನಿಸಿದೆ. ಅದಕ್ಕಾಗಿ ಹಲವಾರು ಪೂಜಾ ಪಾಠಗಳ ಅಗತ್ಯವಿದೆ. ಏನೇನು ಬೇಕೆಂದು ತಿಳಿಸಬೇಕಾದರೆ ಜಾತಕ ಪರಿಶೀಲಿಸಬೇಕೆಂದ. ಮತ್ತೊಂದು ದಿನ ಅದನ್ನು ತರುತ್ತೇನೆಂದು ಹೇಳಿ ಹೊರಬಂದೆ. ಆಗ ನನ್ನೊಂದಿಗೆ ಬಂದಿದ್ದ ಮಿತ್ರರು ದೂರದಲ್ಲಿ ನಿಂತು ಈ ಎಲ್ಲಾ ನಾಟಕ ಕಂಡು ನಕ್ಕು ಬಿಟ್ಟರು. ಆತನ ಈ ವರ್ತನೆಗಳು ನನಗೆ ಆ ಮಾಂತ್ರಿಕ ಕಾರ್ಯ ವಿಧಾನಗಳನ್ನು ಮತ್ತಷ್ಟು ಮನದಟ್ಟು ಮಾಡಿತ್ತು. ಈ ಮಾಂತ್ರಿಕರು ಮಾಡುವುದೇನು?
ಮುಖ್ಯವಾಗಿ ತಮ್ಮಲ್ಲಿಗೆ ಬರುವವರಿಗೆ ಭಯ ಹುಟ್ಟಿಸುವುದು. ಸಾಮಾನ್ಯವಾಗಿ ಮಾಂತ್ರಿಕರಲ್ಲಿ ಹೋಗುವ ವ್ಯಕ್ತಿ ಭಯದಿಂದಲೇ ಇರುತ್ತಾನೆ. ಆತನಲ್ಲಿ ಇನ್ನೂ ಹೆಚ್ಚಿನ ಭೀತಿ ಹುಟ್ಟಿಸಿದಾಗ ಆತ ಕಂಗಾಲಾಗುತ್ತಾನೆ. ಮುಖ್ಯವಾಗಿ ಮಹಿಳೆಯರಿಗೆ ನಿಮ್ಮ ಗಂಡ ಅಥವಾ ಮಕ್ಕಳಿಗೆ ಪೀಡೆಯಿದೆ ಎಂದು ಹೇಳಿದಾಗ ಅವರು ಹೆದರುತ್ತಾರೆ. ಸಾಮಾನ್ಯವಾಗಿ ಈ ಮಾಂತ್ರಿಕರು ಕಟ್ಟುಮಸ್ತಾದ ದೇಹವನ್ನು ಹೊಂದಿರುತ್ತಾರೆ. ಹೊಳೆಯುವ ಕಂಗಳು, ಸನ್ಯಾಸಿಯಂತೆ ವೇಷ ಧರಿಸಿರುತ್ತಾರೆ. ಇದನ್ನು ನೋಡುವಾಗ ಆತನಲ್ಲಿ ವಿಶೇಷ ಶಕ್ತಿ ಇರಬೇಕು ಎಂದು ಅನ್ನಿಸುವುದು ಸಹಜ. ಮಾಂತ್ರಿಕರ ಬಳಿ ಹೆಚ್ಚಾಗಿ ನಾವಾಗಿಯೇ ಹುಡುಕಿಕೊಂಡು ಹೋಗುವುದಿಲ್ಲ. ಬದಲಾಗಿ ಯಾರೋ ನಮ್ಮ ಜೀವನದಲ್ಲಿನ ಸಾಮಾನ್ಯ ದುಃಖಗಳನ್ನು ಪರಸ್ಪರ ಹಂಚಿಕೊಳ್ಳುವಾಗ ಪರಿಹಾರಕ್ಕೆ ಇಂತಹ ಮಂತ್ರವಾದಿಗಳಿದ್ದಾರೆ. ಅವರ ಬಳಿ ಹೋದರೆ ಕಷ್ಟಗಳು ಪರಿಹಾರವಾಗುತ್ತವೆ ಎಂಬ ಸಲಹೆ ನೀಡುತ್ತಾರೆ. ತಮಗೆ ಪರಿಚಯವಿರುವ ಮಂತ್ರವಾದಿಗಳನ್ನು ಅವರು ಪರಿಚಯಿಸುತ್ತಾರೆ. ಹಾಗಾಗಿ ಮನದಲ್ಲಿರುವ ಭಯ, ಕಷ್ಟ ನೋವುಗಳ ನಡುವೆ ಆ ಮಂತ್ರವಾದಿಯನ್ನು ಕಾಣಲು ಹೋಗುತ್ತೇವೆ. ಪೂಜೆ ನಡೆಸುವ ವಿಧಾನಗಳು ವಿಶೇಷವಾಗಿ ರಾತ್ರಿಯಲ್ಲಿಯೇ ನಡೆಯುತ್ತವೆೆ. ಕೋಳಿ ಬಲಿ, ಬೆಂಕಿ ಅಥವಾ ಅವರ ಸಹಾಯಕರ ಹಾವ ಭಾವಗಳಿಂದ ನೋಡುಗರಿಗೆ ಅವರ ಮೇಲೆ ನಂಬಿಕೆ ಬರುವಂತಾಗುತ್ತದೆ. ಇದಲ್ಲದೆ ಮಾಟ ಮಾಡಿದ್ದಾರೆಂದು ಹೇಳಿರುವ ವಸ್ತುಗಳನ್ನು ತೆಗೆದು ತೋರಿಸುವುದನ್ನೂ ಅವರು ಮಾಡುತ್ತಾರೆ. ಆದರೆ ಅವೆಲ್ಲವೂ ಬೆಳ್ಳಂಬೆಳಗ್ಗೆ ಸುಮಾರು 2ರಿಂದ 3 ಗಂಟೆಯ ವೇಳೆಗೆ ನಡೆಯುತ್ತದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಅಲ್ಲಿ ಹೋದವರ ಮನಸ್ಸು, ಗಮನ ಬೇರೆಡೆಯೇ ಇರುತ್ತದೆ. ಇಂತಹ ಸಮಯದಲ್ಲಿ ಅವರು ತೋರಿಸುವ ಕೈಚಳಕ ನೋಡುಗರ ಪಾಲಿಗೆ ಅದ್ಭುತ ಶಕ್ತಿಯಾಗಿ ಗೋಚರಿಸುತ್ತದೆ. ಕೆಲವೊಮ್ಮೆ ಮಾಟ ಮಂತ್ರಗಳನ್ನು ಸಬೂಬುಗಳಾಗಿಯೂ ಉಪಯೋಗಿಸಲಾಗುತ್ತದೆ. ಇದಕ್ಕೊಂದು ಉದಾಹರಣೆ ನನ್ನ ಸಹದ್ಯೋಗಿಯೊಬ್ಬರ ಪ್ರಕರಣ. ನನ್ನ ಮಿತ್ರರೊಬ್ಬರು ಪರೀಕ್ಷಕರಾಗಿ ಬೇರೊಂದು ವಿಶ್ವವಿದ್ಯಾಲಯದ ಪ್ರಶ್ನೆ ಪತ್ರಿಕೆಗಳನ್ನು ವೌಲ್ಯಮಾಪನ ಮಾಡಬೇಕಾಗಿತ್ತು. ಆಗ ವಿದ್ಯಾರ್ಥಿಯೊಬ್ಬನ ಕಡೆಯಿಂದ ಅವರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಯಿತು. ಆ ವಿದ್ಯಾರ್ಥಿ ಬೇರೆ ವಿಶ್ವವಿದ್ಯಾನಿಲಯದ ವೈದ್ಯಕೀಯ ಕಾಲೇಜಿನವ. ಆತ ಒಂದು ವಿಷಯದಲ್ಲಿ ಮಾತ್ರ ಅನುತ್ತೀರ್ಣನಾಗುತ್ತಿದ್ದನಂತೆ. ಇದಕ್ಕೆ ಕಾರಣ ಏನಿರಬಹುದು ಎಂದು ಪೋಷಕರು ಆಲೋಚಿಸಿದರು. ತಮ್ಮ ಮಗನನ್ನು ಈ ವಿಷಯದಲ್ಲಿ ಉತ್ತೀರ್ಣಗೊಳಿಸಲು ಅವರು ಹಲವಾರು ಉಪಾಯಗಳನ್ನೂ ಕಂಡುಕೊಂಡರು. ಆದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆ ಹುಡುಗನ ತಂದೆ ತಾಯಿಗಳು ಮಂತ್ರವಾದಿಯನ್ನು ಆಶ್ರಯಿಸಿದರು. ಆತನ ಉತ್ತರ ಯುವಕನಿಗೆ ಮಾಟ ಮಾಡಲಾಗಿದೆ ಎಂಬುದಾಗಿತ್ತು. ಆ ಮಾಟ ಎಷ್ಟು ವಿಶೇಷವೆಂದರೆ ಆ ವಿದ್ಯಾರ್ಥಿಗೆ ಉಳಿದ ಸಮಯದಲ್ಲಿ ವಿಷಯಗಳ ಬಗ್ಗೆ ಸರಿಯಾದ ಜ್ಞಾನವಿರುತ್ತಿತ್ತಂತೆ. ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿದ್ದನಂತೆ. ಆದರೆ ಪರೀಕ್ಷೆಯಲ್ಲಿ ಮಾತ್ರ ಎಲ್ಲವೂ ಮರೆತು ಹೋಗುತ್ತಿತ್ತು!
ಮಾಟ ಮಾಡಿದ್ದು ಯಾರೆಂದು ಸಾಕಷ್ಟು ತಲೆ ಕೆಡಿಸಿಕೊಂಡರೂ ಇವರ ಸಮಸ್ಯೆ ಪರಿಹಾರವಾಗಿರಲಿಲ್ಲ. ಬಹಳ ಪರಿಶ್ರಮದ ಬಳಿಕ ಆ ಹುಡುಗನಿಗೆ ಮಾಟ ಮಾಡಿದ್ದವರ ಬಗ್ಗೆ ತಿಳಿದೂ ಬಂತು. ಅದು ಬೇರ್ಯಾರೂ ಅಲ್ಲ ಆತನ ಚಿಕ್ಕಮ್ಮನೇ ಅಂತೆ. ಕಾರಣ ಅವರ ಮಕ್ಕಳು ಕಲಿಯುವುದರಲ್ಲಿ ತುಂಬಾ ಹಿಂದಿದ್ದರಂತೆ. ಇದಕ್ಕಾಗಿ ಮತ್ಸರದಿಂದ ಅವರು ಈ ರೀತಿ ಮಾಡಿದ್ದರಂತೆ. ಅಂತೂ ಪರೀಕ್ಷೆಗೂ ಮಾಟ ಮಂತ್ರಕ್ಕೂ ಎಲ್ಲಿಯ ಸಂಬಂಧ? ಈ ನಿದರ್ಶನವೊಂದು ಮಾಟವೆಂಬ ವೌಢ್ಯವನ್ನು ಅರಿಯಲು ಸಾಕಲ್ಲವೇ?