ಬರಿಮಾತಿನ ದಿಬ್ಬಣ
2018-19ರ ಬಜೆಟ್‌ನಲ್ಲಿ ಕೇಂದ್ರ ಸರಕಾರ ಎತ್ತಿಟ್ಟಿರುವ ಹಣವು ಬಜೆಟ್‌ನಲ್ಲಿ ಕೊಚ್ಚಿಕೊಂಡಿರುವ ಯಾವ ಯೋಜನೆಗೂ ಸಾಲುವುದಿಲ್ಲ.
ಬಂಡವಾಳ ಹೂಡಿಕೆಯಲ್ಲಿ ಇಳಿಮುಖದ ಪ್ರವೃತ್ತಿಯು ಮೋದಿ ಸರಕಾರವು ಅಧಿಕಾರಕ್ಕೆ ಬರುವ ಮುಂಚೆಯೇ ಪ್ರಾರಂಭವಾಗಿದ್ದರೂ ಮೋದಿ ಸರಕಾರವು ಅದನ್ನು ತಡೆಗಟ್ಟಲು ಮಾಡಬಹುದಾದಷ್ಟನ್ನು ಮಾಡಲೇ ಇಲ್ಲ. ಸರಕಾರವು ಮಾಡುತ್ತಿದ್ದ ಬಂಡವಾಳ ವೆಚ್ಚವೂ ಕುಸಿಯುತ್ತಾ ಹೋಗಿದೆ. ಹಾಗೂ ವಿತ್ತೀಯ ವಿಷಯಗಳಲ್ಲಿ ಪ್ರತಿಗಾಮಿ ಧೋರಣೆಗಳೇ ಉಳ್ಳ ಈ ಬಜೆಟ್‌ನಲ್ಲಿ ಸರಕಾರವು ಆಲಂಕಾರಿಕ ಘೋಷಣೆಗಳನ್ನು ಮಾತ್ರ ಮಾಡುತ್ತಾ ಜನರನ್ನು ಮೋಸಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ.
ದಿನಗಳೆದಂತೆ ಬಜೆಟ್ ಮಂಡನೆಯು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಹಾಗಿದ್ದರೂ ಅದು ಕೇಂದ್ರ ಸರಕಾರದ ಕ್ಯಾಲೆಂಡರಿನಲ್ಲಿ ಮಾಧ್ಯಮಗಳಿಗೆ ಅತ್ಯಗತ್ಯವಾಗಿ ಬೇಕಾದ ಒಂದು ಘಟನೆಯಾಗಿ ಮಾತ್ರ ಇದ್ದೇ ಇರುತ್ತದೆ: ಆಳುವ ಸರಕಾರಗಳಿಗೆ ಇದು ತಾನು ಎಷ್ಟೊಂದು ಜನಪರ ಎಂದು ತೋರಿಸಿಕೊಳ್ಳಲು ಒಂದು ಅವಕಾಶವನ್ನು ಖಂಡಿತಾ ಒದಗಿಸುತ್ತದೆ. ಆದರೆ ವಾಸ್ತವದಲ್ಲಿ ಅದು ಅಂತಾರಾಷ್ಟ್ರೀಯ ಸಾಲ ನೀಡುವ ಸಂಸ್ಥೆಗಳ ಮತ್ತು ವಿಶ್ವ ಹಣಕಾಸು ಬಂಡವಾಳಿಗರ ವಿತ್ತೀಯ ಸದೃಢೀಕರಣದ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿರುತ್ತದೆ. ಏಕೆಂದರೆ ಈ ಜಾಗತಿಕ ಹಣಕಾಸು ಬಂಡವಾಳಿಗರು ಸರಕಾರಗಳು ಮಾರುಕಟ್ಟೆಯಲ್ಲಿ ಕಡಿಮೆ ಸಾಲ ಮಾಡುವುದನ್ನು ಪ್ರಶಂಸಿಸುತ್ತವೆ ಹಾಗೂ ಹೆಚ್ಚು ಸಾಲ ಮಾಡಿದರೆ ಕೆಂಗಣ್ಣು ಬೀರುತ್ತವೆ. (ಏಕೆಂದರೆ ಸಾರ್ವಜನಿಕ ಸಾಲವು ಪ್ರಧಾನವಾಗಿ ಖಾಸಗಿ ಕಾರ್ಪೊರೇಟ್ ವಲಯಗಳಿಗೆ ದಕ್ಕಬೇಕೆಂಬುದು ಅವುಗಳ ಧೋರಣೆ -ಅನು).
2018-19ರ ಕೇಂದ್ರ ಬಜೆಟ್ ಈ ಸರಕಾರದ ರಾಜಕೀಯ ಧೋರಣೆಗೆ ತಕ್ಕಂತಿದೆ. ಮಾಧ್ಯಮಗಳಿಗಾಗಿಯೇ ಸಿದ್ಧಪಡಿಸಿದ್ದ ಬಜೆಟ್ ಭಾಷಣವನ್ನು ಮಾಧ್ಯಮಗಳು ಚಾಚೂ ತಪ್ಪದಂತೆ ಬಿತ್ತರಿಸಿದವು. ಆದರೆ ವಾಸ್ತವದಲ್ಲಿ ಬಜೆಟ್‌ನಲ್ಲಿ ಭಾರತದ ಆರ್ಥಿಕತೆಯು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬಲ್ಲ ಯಾವುದೇ ಸುಸಂಬದ್ಧ ನೀತಿ ಅಥವಾ ಯೋಜನೆಗಳಿರಲಿಲ್ಲ. ಯಾವ ಯೋಜನೆಗಳನ್ನು ಕ್ರಾಂತಿಕಾರಕ ನೀತಿಗಳೆಂದು ಸರಕಾರವು ಕೊಚ್ಚಿಕೊಂಡಿದೆಯೋ ಅವೆಲ್ಲ ಈಗಾಗಲೇ ಜಾರಿಯಲ್ಲಿದ್ದ ಯೋಜನೆಗಳೇ ಆಗಿವೆ. ಹೆಸರನ್ನಷ್ಟೇ ಹೊಸದಾಗಿ ನೀಡಲಾಗಿದೆ. ಮತ್ತೊಂದು ಕಡೆ ಕೆಲವು ದೂರಗಾಮಿ ಉದ್ದೇಶಗಳನ್ನೇ ಜಾರಿಯಾ ಗಲಿರುವ ಯೋಜನೆಗಳೇನೋ ಎಂಬಂತೆ ಪ್ರಸ್ತಾಪಿಸಲಾಗಿದೆ. ತನ್ನನ್ನು ಯಾವುದಕ್ಕೂ ಪ್ರಶ್ನೆಯನ್ನೇ ಮಾಡದ ಮಾಧ್ಯಮದ ಸಹಕಾರದೊಂದಿಗೆ ನರೇಂದ್ರ ಮೋದಿ ಸರಕಾರವು ಹಿಂದಿನ ಎಲ್ಲಾ ಸರಕಾರಗಳು ನಾಚುವಷ್ಟು ಹಸಿಹಸಿಯಾಗಿ ಇವೆಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ.
ಆದರೂ ಅಂಕಿಅಂಶಗಳಿಂದ ಸಿಂಗಾರಗೊಂಡಿರುವ ಈ ಬಜೆಟ್ ಏನನ್ನು ನೀಡಲಿದೆ ಎಂಬುದನ್ನು ವಿಶ್ಲೇಷಿಸೋಣ. 2018-19ನೇ ಸಾಲಿನ ಅಂದಾಜು ವೆಚ್ಚಗಳು ಕಳೆದ ವರ್ಷಕ್ಕಿಂತ ಶೇ.10.1ರಷ್ಟು ಹೆಚ್ಚಲಿವೆೆ. ಇದು ಕಳೆದ ಸಾಲಿಗಿಂತ ಈ ಸಾರಿಯ ಜಿಡಿಪಿಯು ಎಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಅಂದಾಜು ಮಾಡಲಾಗಿದೆಯೋ ಅದಕ್ಕಿಂತ ಶೇ.11.5ರಷ್ಟು ಕಡಿಮೆ ಹಾಗೂ 2017-18ರಲ್ಲಿ ಯಾವ ಪ್ರಮಾಣದಲ್ಲಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತೋ ಅದಕ್ಕಿಂತ ಶೇ.12.3ರಷ್ಟು ಕಡಿಮೆ.
ಕಳೆದ ಸಾಲಿಗಿಂತ 2018-19ರಲ್ಲಿ ಒಟ್ಟಾರೆ ತೆರಿಗೆ ಆದಾಯವು ಶೇ.16.7ರಷ್ಟು ಹೆಚ್ಚಲಿದೆ ಎಂಬ ಆಶಾವಾದವನ್ನು ಬಜೆಟ್‌ನಲ್ಲಿ ತೋರಲಾಗಿದೆ. ಆದರೆ 2017-18ರ ಸಾಲಿನಲ್ಲಿ ಬಜೆಟ್ ನಲ್ಲಿ ಮಾಡಿದ ಅಂದಾಜು ವೆಚ್ಚಕ್ಕಿಂತ ಪರಿಷ್ಕೃತ ವೆಚ್ಚ ಹೆಚ್ಚಾಗಿದೆ. ಆದರೆ ಪರಿಷ್ಕೃತ ಬಂಡವಾಳ ವೆಚ್ಚ ಮಾತ್ರ 36,357 ಕೋಟಿ ರೂ.ನಷ್ಟು ಕಡಿಮೆಯಾಗಿದೆ. ಹೀಗಾಗಿ 2017-18ರ ಸಾಲಿನಲ್ಲಿ ಮಾಡಿರುವ ಬಂಡವಾಳ ವೆಚ್ಚವು 2016-17ರ ಸಾಲಿನಲ್ಲಿ ಮಾಡಿದ ಬಂಡವಾಳ ವೆಚ್ಚಕ್ಕಿಂತ ಕಡಿಮೆಯಾಗಲಿದೆ. ಅಂಥ ಬಂಡವಾಳ ವೆಚ್ಚಗಳು ಸಾಮಾನ್ಯವಾಗಿ ದೇಶದ ಭೌತಿಕ ಆಸ್ತಿಗಳನ್ನು ಸೃಷ್ಟಿ ಮಾಡುವಂಥ ವೆಚ್ಚಗಳಾಗಿದ್ದು ಸಾರ್ವಜನಿಕ ವೆಚ್ಚಗಳ ಬಹುಮುಖ್ಯ ಭಾಗವಾಗಿರುತ್ತವೆ. 2017-18ರ ಸಾಲಿನಲ್ಲಿ ‘‘ದೊಡ್ಡ ಮತ್ತು ಮಧ್ಯಮ ಗಾತ್ರದ ನೀರಾವರಿ ಮತ್ತು ವಿದ್ಯುತ್ ಯೋಜನೆಗಳಿಗಾಗಿ’’ ಮಾಡಬೇಕಿದ್ದ ವೆಚ್ಚದಲ್ಲಿ ಆಗಿರುವ ಕಡಿತವೇ 2017-18ರ ಸಾಲಿನ ಪರಿಷ್ಕೃತ ಬಂಡವಾಳ ವೆಚ್ಚದಲ್ಲಿ ಕಂಡುಬರುತ್ತಿರುವ ಇಳಿಕೆಗೆ ಕಾರಣವಿರಬೇಕು. 2009-10 ಮತ್ತು 2013-14ರ ನಡುವಿನ ಅವಧಿಯಲ್ಲಿ ಈ ಬಗೆಯ ಬಂಡವಾಳ ವೆಚ್ಚಗಳು ಶೇ.16.4ರಷ್ಟು ಇರುತ್ತಿತ್ತು. ಆದರೆ ಅದು 2014-15 ಮತ್ತು 2018-19ರ ಅವಧಿಯಲ್ಲಿ ಶೇ.10.4ಕ್ಕೆ ಇಳಿದಿದೆ. ಇದು ನಿಜಕ್ಕೂ ಚಿಂತೆಗೀಡು ಮಾಡುವಂಥ ಬೆಳವಣಿಗೆಯಾಗಿದೆ. ಏಕೆಂದರೆ ದಿನಗಳೆದಂತೆ ಸಾರ್ವಜನಿಕ ವೆಚ್ಚಗಳು ಪ್ರಧಾನವಾಗಿ ಖಾಸಗಿ ಕಾರ್ಪೊರೇಟ್ ಬಂಡವಾಳ ಹೂಡಿಕೆಯ ಮೇಲೆ ಅವಲಂಬಿತವಾಗುತ್ತಿದ್ದು, ಖಾಸಗಿ ಕಂಪೆನಿಗಳು ಲಾಭದ ದರ ಹೆಚ್ಚಿಲ್ಲದ ಬಾಬತ್ತಿನಲ್ಲಿ ಹೂಡಿಕೆ ಮಾಡುವುದಿಲ್ಲ ಹಾಗೂ ಲಾಭದ ಹರಿವು ಇಲ್ಲದಾಗ ಸಾಲ ಮರುಪಾವತಿ ಮಾಡಲಾಗದ ಬಿಕ್ಕಟ್ಟು ಉಂಟಾಗಿ ಹಣಕಾಸು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.
2018-19ರ ಸಾಲಿನಲ್ಲಿ ವಿತ್ತೀಯ ಕೊರತೆ (ಆದಾಯಕ್ಕಿಂತ ವೆಚ್ಚವು ಹೆಚ್ಚಿರುವ ಪ್ರಮಾಣ)ಯು ಜಿಡಿಪಿಯ ಶೇ.3.5ರಷ್ಟಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದು ಈ ಹಿಂದೆ ಮಾಡಿದ ಅಂದಾಜಿಗಿಂತ ಹೆಚ್ಚಿರುವುದು ಮಾತ್ರವಲ್ಲದೆ ಈಗ ಮಾಡಿರುವ ಅಂದಾಜಿಗಿಂತಲೂ ಹೆಚ್ಚೇ ಆಗಲಿದೆ. ಏಕೆಂದರೆ ಬಜೆಟ್‌ನಲ್ಲಿ ಈ ಸಾಲಿನ ಜಿಡಿಪಿಯ ಬಗ್ಗೆ ಮಾಡಿರುವ ಅಂದಾಜು ಉತ್ಪ್ರೇಕ್ಷಿತವಾಗಿದೆ. 2017-18ರ ಸಾಲಿಗೆ ಮಾಡಲಾಗಿದ್ದ ವಿತ್ತೀಯ ಕೊರತೆಯು ಅಂದಾಜನ್ನು ಮೀರಿರುವುದಕ್ಕೆ ಆದಾಯ ಸಂಗ್ರಹದಲ್ಲಿ ಆಗಿರುವ ಕೊರತೆಯೇ ಕಾರಣವೆಂಬುದು ನಿಸ್ಸಂಶಯ. ಈ ಪ್ರತಿಗಾಮಿ ವಿತ್ತೀಯ ಕೊರತೆ ಅಂದಾಜುಗಳು ಮತ್ತು ಸರಕಾರದ ಒಟ್ಟಾರೆ ಸಾಲದ ಹೊರೆಯು ಜಿಡಿಪಿಯ ಶೇ.40ಕ್ಕಿಂತ ಹೆಚ್ಚಿರಬಾರದೆಂಬ ಹೊಸ ‘ಸಾಲ ಶರತ್ತು’ಗಳಿಗೆ ಒಪ್ಪಿಕೊಳ್ಳುವ ಪ್ರಸ್ತಾಪಗಳು ತಮ್ಮ ಸರಕಾರವು ‘ಪರಿಷ್ಕೃತ ವಿತ್ತೀಯ ಪಥ’ಕ್ಕೆ ಬದ್ಧವಾಗಿರುತ್ತದೆಂದು ಖಾತರಿ ನೀಡಿ ಜಾಗತಿಕ ಹಣಕಾಸು ಮಾರುಕಟ್ಟೆಯನ್ನು ಮತ್ತು ದೇಶದ ಸಾಲಾರ್ಹತೆಯ ಸೂಚ್ಯಂಕ ಕೊಡುವ ಏಜೆೆನ್ಸಿಗಳನ್ನು (ರೇಟಿಂಗ್ ಏಜೆನ್ಸಿ) ಮೆಚ್ಚಿಸಲು ಮಾಡಿರುವ ಕಸರತ್ತುಗಳೇ ಆಗಿವೆ. ಒಟ್ಟಾರೆ ಬಜೆಟ್‌ನ ಪ್ರಧಾನ ಲಕ್ಷವೇ ಇದಾಗಿದೆಯೆಂದರೂ ತಪ್ಪಲ್ಲ.
ರಾಜಕೀಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಬೆಳೆದ ಬೆಲೆಗೆ ಸರಿಯಾದ ಬೆಲೆ ದಕ್ಕದಿರುವುದರ ವಿರುದ್ಧ ಮತ್ತು ಗ್ರಾಮೀಣ ಆರ್ಥಿಕತೆಗೆ ಪುನಶ್ಚೇತನ ನೀಡುವ ಯಾವ ನೀತಿಗಳೂ ಇಲ್ಲದಿರುವುದರ ವಿರುದ್ಧ 2017-18ರ ಅವಧಿಯುದ್ದಕ್ಕೂ ಕೃಷಿ ಕ್ಷೇತ್ರದಲ್ಲಿ ಕೋಲಾಹಲ ಉಂಟಾಗಿ ರೈತಾಪಿ ವರ್ಗದ ಮಧ್ಯಮ ಜಾತಿಗಳು ದೊಡ್ಡ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದವು. ಹೀಗಾಗಿ ಬಜೆಟ್ ಈ ಸಮಸ್ಯೆಗಳನ್ನೂ ಉದ್ದೇಶಿಸಿರುತ್ತದೆ ಎಂಬ ನಿರೀಕ್ಷೆ ಸಹಜವಾದದ್ದೇ ಆಗಿತ್ತು. ಬಜೆಟ್ ಭಾಷಣವನ್ನು ಮಾತ್ರ ಗಮನಿಸಿದರೆ ಅದು ಗ್ರಾಮೀಣ ಆರ್ಥಿಕತೆಯ ಬಿಕ್ಕಟ್ಟಿನ ಬಗ್ಗೆ ತುಂಬಾ ಕಾಳಜಿಯನ್ನು ತೋರಿರುವಂತೆ ಕಾಣುತ್ತದೆ. ಆದರೆ ಯಾವ್ಯಾವ ಬಾಬತ್ತಿಗೆ ಎಷ್ಟೆಷ್ಟು ಹಣವನ್ನು ಒದಗಿಸಿದ್ದಾರೆ ಎಂಬುದನ್ನು ನೋಡಿದಾಗ ಮಾತ್ರ ದೊಡ್ಡ ನಿರಾಶೆಯೇ ಉಂಟಾಗುತ್ತದೆ. ಹಣಕಾಸು ಮಂತ್ರಿಗಳು ಯಾವ್ಯಾವ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನೂ ಘೋಷಿಸಿಲ್ಲವೋ ಆ ಎಲ್ಲ ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕೆ ಅದರ ಶೇ.50ರಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಸೇರಿಸಿ ಹೊಸ ಬೆಂಬಲ ಬೆಲೆಯನ್ನು ಕೊಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಆದರೆ ಮರು ವಾಕ್ಯದಲ್ಲೇ ನೀತಿ ಅಯೋಗವು ರಾಜ್ಯ ಸರಕಾರಗಳೊಡನೆ ಸಮಾಲೋಚನೆ ನಡೆಸಿ ರೈತರು ಸರಿಯಾದ ಬೆಲೆಯನ್ನು ಪಡೆಯಲು ಬೇಕಾದ ಸಾಂಸ್ಥಿಕ ರಚನೆಗಳನ್ನು ಏರ್ಪಾಡು ಮಾಡುವುದು ಎಂದೂ ಹೇಳಿದ್ದಾರೆ. ಇದರ ಬಗ್ಗೆ ಭಾರತೀಯ ಜನತಾ ಪಕ್ಷವು 2014ರ ಚುನಾವಣೆಯಲ್ಲೇ ಭರವಸೆಗಳನ್ನೂ ನೀಡಿದ್ದರೂ ಅದು ಜಾರಿಯಾಗಲು ಬೇಕಾದ ನೀತಿ, ಯೋಜನೆ ಮತ್ತು ಸಾಂಸ್ಥಿಕ ಸ್ವರೂಪಗಳು ನಾಲ್ಕು ವರ್ಷಗಳ ನಂತರವೂ, ಈ ಬಜೆಟ್ ಮಂಡನೆಯ ಕಾಲಕ್ಕೂ ಸಿದ್ಧವಾಗಿಲ್ಲ. ಹೀಗಾಗಿ ಇದೂ ಕೂಡಾ ಒಂದು ಪೊಳ್ಳು ಭರವಸೆಯೇ(ಜುಮ್ಲಾ) ಆಗಿದೆ. ಅಂಥಾ ಒಂದು ನೀತಿಯ ಬಗ್ಗೆ ಚರ್ಚೆಯೂ ಸಹ ಇಷ್ಟು ತಡವಾಗಿ ಆರಂಭಗೊಳ್ಳುತ್ತಿದೆ.
ಇನ್ನು ಗ್ರಾಮೀಣ ಅರ್ಥಿಕತೆಯ ಬಗೆಗಿನ ಎಲ್ಲಾ ‘ಹೊಸ’ ಮತ್ತು ಹಳೆಯ ಯೋಜನೆಗಳಿಗೆ ಕೊಟ್ಟಿರುವ ಅನುದಾನ ಅತ್ಯಲ್ಪ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಂಥ ಪ್ರಮುಖವಾದ ಗ್ರಾಮೀಣ ಹೂಡಿಕೆಯನ್ನೂ ಸಹ ಹೆಚ್ಚಿಸಿಲ್ಲ. ಆದರೂ ಈ ಯೋಜನೆಯಡಿ ಕಟ್ಟಬೇಕಿರುವ ರಸ್ತೆಗಳನ್ನೂ ಕಟ್ಟಿಮುಗಿಸುವ ಗುರಿಯನ್ನು 2022ರ ಬದಲಿಗೆ 2019ಕ್ಕೆ ನಿಗದಿಪಡಿಸಲಾಗಿದೆಯೆಂದು ಕೊಚ್ಚಿಕೊಳ್ಳಲಾಗಿದೆ. ಬಜೆಟ್‌ನುದ್ದಕ್ಕೂ ಇಂಥ ಸಾರವಿಲ್ಲದ ಬಾಯಿಪ್ರಚಾರದ ಮಾತುಗಳೇ ಹೆಚ್ಚಾಗಿವೆ.
ಸರಕಾರದ ಹಲವಾರು ಹೆಗ್ಗಳಿಕೆಯ ಯೋಜನೆಗಳ ಬಗ್ಗೆಯೂ ಇದೇ ಧೋರಣೆ ಕಂಡುಬರುತ್ತದೆ. ಹಣಕಾಸು ಮಂತ್ರಿಗಳ ಭಾಷಣವು ಅಂಥ ಮೂರು ಯೋಜನೆಗಳನ್ನು ಪ್ರಸ್ತಾಪಿಸುತ್ತದೆ: ಪ್ರಧಾನ್ ಮಂತ್ರಿ ಕಿಸಾನ್ ಸಂಪದ ಯೋಜನೆ, 2017ರ ರಾಷ್ಟ್ರೀಯ ಆರೋಗ್ಯ ಯೋಜನೆಯ ‘ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳು’, ಮತ್ತು ನಿಗೂಢವಾದ ‘ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ’ (ನ್ಯಾಶನಲ್ ಹೆಲ್ತ್ ಪ್ರೊಟೆಕ್ಷನ್ ಸ್ಕೀಮ್- ಎನ್‌ಎಚ್‌ಪಿಎಸ್). ಮೊದಲನೇ ಯೋಜನೆಯಲ್ಲಿ ಸಂಸ್ಕರಿತ ಆಹಾರ ಉತ್ಪಾದನಾ ಯೋಜನೆಯ ಉತ್ತೇಜನಕ್ಕೆ ಕೇವಲ 1,313 ಕೋಟಿ ರೂ.ನ್ನು ಒದಗಿಸಿದ್ದರೆ, ಎರಡನೇ ಯೋಜನೆಯಲ್ಲಿ 1.5 ಲಕ್ಷ ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳಿಗಾಗಿ ಕೇವಲ 1,200 ಕೋಟಿ ರೂ.ನ್ನು ತೆಗೆದಿಡಲಾಗಿದೆ. ಇನ್ನು ಮೂರನೇ ಯೋಜನೆಯಾದ ‘ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ’ (ನ್ಯಾಶನಲ್ ಹೆಲ್ತ್ ಪ್ರೊಟೆಕ್ಷನ್ ಸ್ಕೀಮ್- ಎನ್‌ಎಚ್‌ಪಿಎಸ್)ಯನ್ನು ಜಗತ್ತಿನಲ್ಲೇ ಅತೀ ದೊಡ್ಡದಾದ ಸರಕಾರಿ ಧನ ಸಹಾಯದ ಆರೋಗ್ಯ ರಕ್ಷಣಾ ಯೋಜನೆಯೆಂದು ಹೇಳಿಕೊಳ್ಳಲಾಗುತ್ತಿದೆ. ಮೊದಲನೆಯದಾಗಿ ಒಂದು ವಿಮೆ ಆಧಾರಿತ ಯೋಜನೆಯನ್ನು ಸರಕಾರವು ಸಾರ್ವಜನಿಕ ಆರೋಗ್ಯ ಯೋಜನೆಯೆಂದು ಹೇಳಿಕೊಳ್ಳುತ್ತಿದೆ. ರಿಯಾಯಿತಿ ದರದ ಸಾರ್ವಜನಿಕ ಆರೋಗ್ಯ ರಕ್ಷಣಾ ವೆಚ್ಚಗಳಿಗೆ ಹೋಲಿಸಿದಲ್ಲಿ ಆರೋಗ್ಯ ವಿಮಾ ಯೋಜನೆಯು ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಹೆಚ್ಚಿಸುವುದಲ್ಲದೆ, ರೋಗಿಗಳು ಮತ್ತು ಅವರ ಕುಟುಂಬದವರು ತಮ್ಮ ಸ್ವಂತ ಜೋಬಿನಿಂದ ಮಾಡುವ ವೆಚ್ಚದ ಪ್ರಮಾಣವನೂ ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ ಬಜೆಟ್ ದಾಖಲೆಗಳನ್ನು ಹತ್ತಿರದಿಂದ ನೋಡಿದರೆ ಈ ಸಾಲಿನಲ್ಲಿ ಈ ಬಾಬತ್ತಿಗೆ ಒಂದಿಷ್ಟು ಹಣವನ್ನೂ ಎತ್ತಿಟ್ಟಿಲ್ಲ. 2016-17ರ ಸಾಲಿನ ಬಜೆಟ್ ಭಾಷಣದಲ್ಲೂ ಇದೇ ಬಗೆಯ ಘೋಷಣೆಯನ್ನು ಮಾಡಿದ್ದರೂ ಅದಿನ್ನೂ ಕ್ಯಾಬಿನೆಟ್‌ನಲ್ಲೇ ಕೊಳೆಯುತ್ತಿದೆ. ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನಾ’ದಡಿಯಲ್ಲಿ ತಾಯಂದಿರಿಗೆ ನೀಡುತ್ತಿದ್ದ ಸೌಲಭ್ಯಗಳನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ದೇಶದ 60 ಪ್ರಮುಖ ಅರ್ಥಶಾಸ್ತ್ರಜ್ಞರು ಈ ಯೋಜನೆಯನ್ನು ಜಾರಿಗೊಳಿಸಲು ಹಣದ ಕೊರತೆ ಇರುವುದನ್ನು ಹಣಕಾಸು ಮಂತ್ರಿಗಳ ಗಮನಕ್ಕೆ ತಂದಿದ್ದರು. 2013ರ ರಾಷ್ಟ್ರೀಯ ಅಹಾರ ಭದ್ರತಾ ಕಾಯ್ದೆಯ ಪ್ರಕಾರ ತಾಯಂದಿರಿಗೆ ಬೇಕಾದ ಸೌಲಭ್ಯವನ್ನು ನೀಡುವ ಜವಾಬ್ದಾರಿ ಸರಕಾರದ್ದೇ ಆಗಿದೆ. ಇದು ಕೇಂದ್ರ ಹಾಗೂ ರಾಜ್ಯಗಳೆರಡರ ಜಂಟಿ ಅನುದಾನದಿಂದ ನಡೆಯುವ ಕಾರ್ಯಕ್ರಮವಾಗಿದ್ದು ಕೇಂದ್ರ ಸರಕಾರವು ಇದರಲ್ಲಿ ತನ್ನ ಜವಾಬ್ದಾರಿಯನ್ನು ಪೂರೈಸಬೇಕೆಂದರೆ ಕೇಂದ್ರವು 8,000 ಕೋಟಿ ರೂ.ನ್ನು ಎತ್ತಿಡಬೇಕಿತ್ತು. 2017-18ರ ಬಜೆಟ್‌ನಲ್ಲಿ ಈ ಬಾಬತ್ತಿಗೆ 2,700 ಕೋಟಿ ರೂ.ನ್ನು ಎತ್ತಿಡಲಾಗಿತ್ತು. ಆದರೆ ಈ ವರ್ಷ ಎತ್ತಿಟ್ಟಿರುವುದು ಕೇವಲ 2,400 ಕೋಟಿ ರೂ. ಮಾತ್ರ. ‘ಇಂದಿರಾ ಗಾಂಧಿ ಹಿರಿಯ ನಾಗರಿಕರ ಪಿಂಚಣಿ ಯೋಜನೆ’ಯಡಿ ವೃದ್ಧಾಪ್ಯ ವೇತನವನ್ನು 200 ರಿಂದ 300 ರೂ.ಗಳಿಗೂ ಮತ್ತು ವಿಧವಾ ವೇತನವನ್ನು 300 ರೂ.ಗಳಿಂದ 500 ರೂ.ಗಳಿಗೂ ಏರಿಸಬೇಕೆಂಬ ಬೇಡಿಕೆಯನ್ನು ನಿರ್ಲಕ್ಷ ಮಾಡಲಾಗಿದೆ.
ಈ ಬಜೆಟ್‌ನಲ್ಲಿ ಮಾಡಿರುವ ಒಂದು ಗಮನಾರ್ಹ ಪ್ರಸ್ತಾಪವೆಂದರೆ ಒಂದು ಲಕ್ಷಕ್ಕೂ ಮೇಲ್ಪಟ್ಟ ‘ದೀರ್ಘ ಕಾಲೀನ ಬಂಡವಾಳ ಗಳಿಕೆ’ (ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ನಾ- ಎಲ್‌ಟಿಸಿಜಿ)ಯ ಮೇಲೆ ಶೇ.10ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ. ಇದಲ್ಲದೆ ಈವರೆಗೆ ಇದ್ದ ಶೇ.3 ಶಿಕ್ಷಣ ಸೆಸ್ ರದ್ದಾಗಿ ಅದರ ಬದಲಿಗೆ ಶೇ.4ರಷ್ಟು ‘ಶಿಕ್ಷಣ ಮತ್ತು ಆರೋಗ್ಯ’ ಸೆಸ್ ಜಾರಿಗೆ ಬರಲಿದೆ. ಇದು ಒಂದೆಡೆ ಜನರ ತೆರಿಗೆ ಭಾರವನ್ನು ಹೆಚ್ಚಿಸುವುದಲ್ಲದೆ ಇದರಿಂದ ಸಂಗ್ರಹಿಸಲಾಗುವ ನಿಧಿಯನ್ನು ಕೇಂದ್ರವು ರಾಜ್ಯಗಳ ಜೊತೆ ಹಂಚಿಕೊಳ್ಳುವುದೂ ಇಲ್ಲ. ‘ಸಂಬಳದಾರ ತೆರಿಗೆದಾರರು ಪಡೆದುಕೊಳ್ಳುವ ರಿಯಾಯ್ತಿಗಳು’ ಎನ್ನುವ ಶೀರ್ಷಿಕೆ ಇದ್ದರೂ ಅದರಲ್ಲಿ ಸಂಬಳದಾರರು ಪಡೆದುಕೊಳ್ಳಬಹುದಾದ ಯಾವ ದೊಡ್ಡ ಪ್ರಯೋಜನವನ್ನೂ ಘೋಷಿಸಲಾಗಿಲ್ಲ. ಏಕೆಂದರೆ ಈವರೆಗೆ ಸಾರಿಗೆ ವೆಚ್ಚ ಮತ್ತು ವೈದ್ಯಕೀಯ ವೆಚ್ಚಗಳ ಮೇಲೆ ದೊರಕುತ್ತಿದ್ದ ರಿಯಾಯ್ತಿಗಳಿಗೆ ಹೋಲಿಸಿದಲ್ಲಿ ಬಜೆಟ್‌ನಲ್ಲಿ ಘೋಷಿಸಿರುವ 40,000ರೂ ನಿಗದಿತ ರಿಯಾಯತಿಯು ಅಂಥಾ ಹೆಚ್ಚೇನೂ ಅನುಕೂಲ ಮಾಡುವುದಿಲ್ಲ.
ಈ ಸರಕಾರದ ಮೊದಲ ಬಜೆಟ್‌ನಿಂದಲೇ ರಾಜ್ಯಗಳ ಪಾಲನ್ನು ನಿಗದಿ ಮಾಡುವ 14ನೇ ಹಣಕಾಸು ಆಯೋಗದ ಹೊಸ ಸೂತ್ರವು ಜಾರಿಯಲ್ಲಿದೆ. ಸಾಮಾಜಿಕ ಕ್ಷೇತ್ರಗಳ ಮೇಲಿನ ವೆಚ್ಚದಲ್ಲಿ ರಾಜ್ಯಕ್ಕೆ ಹೆಚ್ಚಿನ ಹೊಣೆಗಾರಿಕೆ ಇದೆ. ಈ ಸರಕಾರವು ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿಯತೊಡಗಿತ್ತು. 2014ರ ಆಗಸ್ಟ್‌ನಲ್ಲಿ ಕಚ್ಚಾ ತೈಲದ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್‌ಗೆ 100 ಡಾಲರ್ ಇದ್ದದ್ದು 2016ರ ಜನವರಿ ವೇಳೆಗೆ 30 ಡಾಲರಿಗಿಂತ ಕಡಿಮೆ ಆಗಿಬಿಟ್ಟಿತು. ಈ ಇಡೀ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ 100 ಡಾಲರ್‌ಗಿಂತ ಕಡಿಮೆಯೇ ಇತ್ತು. ಇಂಥ ಅನುಕೂಲಕರ ವಾತಾವರಣ ಈಗ ಇಲ್ಲ: ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 60 ಡಾಲರ್‌ನಷ್ಟಾಗಿದ್ದು ಬರಲಿರುವ ದಿನಗಳಲ್ಲಿ ಈ ಏರಿಕೆ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಕಚ್ಚಾ ತೈಲಕ್ಕೆ ಕಡಿಮೆ ಬೆಲೆ ಇದ್ದ ಅವಧಿಯಲ್ಲಿ ಸರಕಾರವು ಪೆಟ್ರೋಲಿಯಂ ಮತ್ತು ಅದರ ಇತರ ಉತ್ಪನ್ನಗಳಿಂದ ಹೆಚ್ಚೆಚ್ಚು ಪರೋಕ್ಷ ತೆರಿಗೆಯನ್ನು ವಸೂಲಿ ಮಾಡುವುದರಲ್ಲಿ ನಿರತವಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆ ಇದ್ದದ್ದರಿಂದಲೇ ದೇಶದ ಆಮದು ವೆಚ್ಚವೂ ಕಡಿಮೆಯಾಗಿ ವಾಣಿಜ್ಯದಲ್ಲಿ ಕೊರತೆಯ ಪ್ರಮಾಣವೂ ತಗ್ಗಿತ್ತು. ಈ ಕಾರಣದಿಂದಲೇ ಹಣದುಬ್ಬರವೂ ಕಡಿಮೆಯಾಗಿತ್ತು. ಆದರೆ ಹಣದುಬ್ಬರ ಇಳಿದಿದ್ದರ ಶ್ರೇಯಸ್ಸನ್ನು ತನಗೆ ಸೇರಬೇಕೆಂದು ಮೋದಿ ಸರಕಾರ ಹೇಳಿಕೊಂಡಿತ್ತು. ಯುಪಿಎ ಸರಕಾರವನ್ನು ಅಮಾನ್ಯಗಳೊಳಿಸಲು ಬಿಜೆಪಿ ಪಕ್ಷವು 2014ರ ಚುನಾವಣೆಯಲ್ಲಿ ಬೆಲೆ ಏರಿಕೆಯ ವಿಷಯವನ್ನು ಪ್ರಧಾನವಾಗಿ ಪ್ರಚಾರ ಮಾಡಿತ್ತು. ಆದರೆ ಕಡಿಮೆ ಹಣದುಬ್ಬರದ ಆನುಕೂಲವಿದ್ದರೂ ಮೋದಿ ಸರಕಾರವು ದೇಶದ ಆರ್ಥಿಕತೆ ಮತ್ತು ಬಂಡವಾಳ ಹೂಡಿಕೆಯಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಘೋರವಾಗಿ ವಿಫಲವಾಗಿದೆ. ಈ ಸರಕಾರವು ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ಪುನಶ್ಚೇತನ ನೀಡಲು ಸಾಧ್ಯವಾಗಿಲ್ಲ. ಜಾಗತಿಕ ಮಾರುಕಟ್ಟೆಯು ಪುನಶ್ಚೇತನಗೊಳ್ಳುತ್ತಿದ್ದರೂ ಭಾರತದ ರಫ್ತು ಉದ್ಯಮವು ಮಾತ್ರ ಸೊರಗುತ್ತಲೇ ಇದೆ.
ಬಂಡವಾಳ ಹೂಡಿಕೆಯಲ್ಲಿ ಇಳಿಮುಖದ ಪ್ರವೃತ್ತಿಯು ಮೋದಿ ಸರಕಾರವು ಅಧಿಕಾರಕ್ಕೆ ಬರುವ ಮುಂಚೆಯೇ ಪ್ರಾರಂಭವಾಗಿದ್ದರೂ ಮೋದಿ ಸರಕಾರವು ಅದನ್ನು ತಡೆಗಟ್ಟಲು ಮಾಡಬಹುದಾದಷ್ಟನ್ನು ಮಾಡಲೇ ಇಲ್ಲ. ಸರಕಾರವು ಮಾಡುತ್ತಿದ್ದ ಬಂಡವಾಳ ವೆಚ್ಚವೂ ಕುಸಿಯುತ್ತಾ ಹೋಗಿದೆ. ಹಾಗೂ ವಿತ್ತೀಯ ವಿಷಯಗಳಲ್ಲಿ ಪ್ರತಿಗಾಮಿ ಧೋರಣೆಗಳೇ ಉಳ್ಳ ಈ ಬಜೆಟ್‌ನಲ್ಲಿ ಸರಕಾರವು ಆಲಂಕಾರಿಕ ಘೋಷಣೆಗಳನ್ನು ಮಾತ್ರ ಮಾಡುತ್ತಾ ಜನರನ್ನು ಮೋಸಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ.
ಕೃಪೆ: Economic and Political Weekly