ನಾಗೂರು ಸರಕಾರಿ ಶಾಲೆ ಉಳಿಸಲು ಕಟ್ಟಡಕ್ಕೆ ರೈಲಿನ ವಿನ್ಯಾಸ !
ಮಕ್ಕಳ ಸಂಖ್ಯೆ ವೃದ್ಧಿಸಲು ರಾಜ್ಯದಲ್ಲೇ ಪ್ರಥಮ ವಿನೂತನ ಪ್ರಯೋಗ
ಉಡುಪಿ, ಫೆ. 6: ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಶಾಲೆ ಮುಚ್ಚುವುದನ್ನು ತಡೆಯುವುದಕ್ಕಾಗಿ ಕುಂದಾಪುರ ತಾಲೂಕಿನ ನಾಗೂರಿ ನಲ್ಲಿ ವಿನೂತನ ಪ್ರಯೋಗವೊಂದನ್ನು ಅನುಷ್ಠಾನಕ್ಕೆ ತರಲಾಗಿದೆ. ಅದಕ್ಕಾಗಿ ಇಡೀ ಶಾಲೆಯನ್ನು ರೈಲಿನಂತೆ ವಿನ್ಯಾಸಗೊಳಿಸಿ ಮಕ್ಕಳ ಸಂಖ್ಯೆ ವೃದ್ಧಿಸುವ ಪ್ರಯತ್ನ ನಡೆಸಲಾಗುತ್ತಿದೆ.
ನಾಗೂರು -ಕಂಬದಕೋಣೆ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ಇರುವ ನಾಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದೂಸ್ತಾನಿ (ಉರ್ದು) ಇದರ ಮುಖ್ಯ ಶಿಕ್ಷಕರ ಕನಸಿನಂತೆ ಇಡೀ ಶಾಲಾ ಕಟ್ಟಡವನ್ನು ರೈಲಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಇಲ್ಲಿನ ಮಕ್ಕಳು ರೈಲಿನಲ್ಲಿ ಕುಳಿತು ಪಾಠ ಕೇಳುವ ಹೊಸ ಅನುಭವವನ್ನು ಪಡೆಯುತ್ತಿದ್ದಾರೆ.
1973ರಲ್ಲಿ ಸ್ಥಾಪನೆಗೊಂಡ ಶಾಲೆಯು ಆರಂಭದಲ್ಲಿ 200-300 ರಷ್ಟು ಮಕ್ಕಳನ್ನು ಹೊಂದಿತ್ತು. ಆಂಗ್ಲ ಮಾಧ್ಯಮದ ಪ್ರಭಾವದಿಂದ ಕಾಲಕ್ರಮೇಣ ಈ ಸರಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಇಳಿಮುಖಗೊಳ್ಳುತ್ತಾ ಹೋಯಿತು. 2015-16ನೆ ಸಾಲಿನಲ್ಲಿ 29 ಮಕ್ಕಳು ಮಾತ್ರ ಇಲ್ಲಿ ಶಿಕ್ಷಣ ಪಡೆದರೆ, ಈ ಸಾಲಿನಲ್ಲಿ ಕೇವಲ 20 ಮಕ್ಕಳು ಕಲಿಯುತ್ತಿದ್ದಾರೆ.
ಒಂದರಿಂದ ಏಳನೆ ತರಗತಿಯ ಈ ಶಾಲೆಯಲ್ಲಿ ಉರ್ದು ಭಾಷಾ ಶಿಕ್ಷಕಿ ಸಹಿತ ಒಟ್ಟು ಮೂವರು ಶಿಕ್ಷಕರಿದ್ದಾರೆ. ವಿಶ್ವನಾಥ ಪೂಜಾರಿ ಈ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದಾರೆ. ಇವರು ಬೈಂದೂರು ವಲಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದಾರೆ. ಇಲ್ಲಿ ಆರು ಮಕ್ಕಳು ಉರ್ದು ಕಲಿಯುತ್ತಿದ್ದಾರೆ.
ಶಾಲೆ ಉಳಿಸುವ ಪ್ರಯತ್ನ: ಕಳೆದ ವರ್ಷ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದ್ದ ಕಾರಣ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಶಿಕ್ಷಕರು ಸುತ್ತಮುತ್ತಲಿನ ಮನೆ ಗಳಿಗೆ ತೆರಳಿ ಪೋಷಕರಿಗೆ ಮನವರಿಕೆ ಮಾಡಿಸಿದರು. ಆದರೆ ಎಲ್ಲರೂ ಅನುಕಂಪ ತೋರಿಸಿದರೆ ಹೊರತು ಯಾವುದೇ ರೀತಿಯಲ್ಲಿ ಪ್ರೋತ್ಸಾಹ ನೀಡಲಿಲ್ಲ. ಮುಚ್ಚುವ ಶಾಲೆ ಅಂತ ಇತ್ತ ಕಡೆ ಯಾರು ಕೂಡ ಕಾಲು ಇಡುತ್ತಿರಲಿಲ್ಲ.
ಈ ಮಧ್ಯೆ ಮೂರು ವರ್ಷಗಳ ಹಿಂದೆ ಈ ಶಾಲೆಗೆ ವರ್ಗಾವಣೆಗೊಂಡು ಬಂದ ಈಗಿನ ಪ್ರಭಾರ ಮುಖ್ಯ ಶಿಕ್ಷಕ ವಿಶ್ವನಾಥ ಪೂಜಾರಿ, ಈ ಶಾಲೆ ಉಳಿಸಲು ಏನಾದರೂ ಹೊಸತನವನ್ನು ಮಾಡಬೇಕೆಂಬ ಚಿಂತನೆಯನ್ನು ಆರಂಭಿಸಿದರು. ಕಳೆದ ಒಂದು ವರ್ಷದಿಂದ ಇದಕ್ಕಾಗಿ ತನ್ನ ಸಂಬಳದ ಅಲ್ಪ ಮೊತ್ತವನ್ನು ಅವರು ಕೂಡಿಟ್ಟರು.
ವಿಶ್ವನಾಥ್ ಪೂಜಾರಿ ಹೊಸತನ ಹುಡುಕಾಟಕ್ಕಾಗಿ ಈ ವರ್ಷದ ಜನವರಿ ತಿಂಗಳಲ್ಲಿ ಇಂಟರ್‌ನೆಟ್ ತಡಕಾಡಿದಾಗ ಕೇರಳದ ಶಾಲೆಯ ವಿಶಿಷ್ಟ ಪ್ರಯೋಗ ವೊಂದು ಅವರ ಕಣ್ಣಿಗೆ ಬಿತ್ತು. ಅಲ್ಲಿ ಇದೇ ರೀತಿ ಶಾಲೆಗೆ ರೈಲಿನ ವಿನ್ಯಾಸ ಮಾಡಿ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಆ ಶಾಲೆ ಈಗ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಇಂತಹ ಪ್ರಯೋಗ ಎಲ್ಲೂ ಮಾಡಿಲ್ಲ ಎಂಬುದನ್ನು ಅರಿತ ವಿಶ್ವನಾಥ ಪೂಜಾರಿ, ತನ್ನ ಶಾಲೆಯಲ್ಲಿ ಈ ರೀತಿಯ ಪ್ರಯೋಗಕ್ಕೆ ಅಣಿಯಾದರು.
ಕಲಾ ಶಿಕ್ಷಕರ ಮೊರೆ: ಶಾಲೆಯನ್ನು ರೈಲಿನ ವಿನ್ಯಾಸ ಮಾಡಲು ಕಲಾವಿದರ ಮೊರೆ ಹೋದರೆ ದುಬಾರಿಯಾಗುತ್ತದೆ ಎಂಬುದನ್ನು ಮನಗಂಡ ವಿಶ್ವನಾಥ ಪೂಜಾರಿ, ಸರಕಾರಿ ಶಾಲೆಗಳಲ್ಲಿರುವ ಕಲಾ ಶಿಕ್ಷಕರುಗಳ ಮೊರೆ ಹೋದರು.
ಆಗ ಅವರಿಗೆ ಸಿಕ್ಕಿದ್ದು ಉಪ್ಪುಂದ ಜೂನಿಯರ್ ಕಾಲೇಜಿನ ಕಲಾ ಶಿಕ್ಷಕ ಬಡಿಗೇರ್, ಆರೂರು ಸರಕಾರಿ ಶಾಲೆಯ ಕಲಾ ಶಿಕ್ಷಕ ಚಂದ್ರಶೇಖರ್ ಮತ್ತು ಕಲಾ ವಿದ್ಯಾರ್ಥಿ ಗಿರೀಶ್. ಇದಕ್ಕೆ ಒಪ್ಪಿದ ಅವರು ಶಿಕ್ಷಕರ ಕನಸಿನ ಶಾಲೆಯನ್ನು ವಿನ್ಯಾಸಗೊಳಿಸಲು ಸಜ್ಜಾದರು.
ಅದರಂತೆ ಈ ಮೂವರು ತಮ್ಮ ಶಾಲಾ ಕರ್ತವ್ಯವನ್ನು ಮುಗಿಸಿ ಬಂದು ಪ್ರತಿದಿನ ಸಂಜೆ 5ಗಂಟೆಯಿಂದ ರಾತ್ರಿ 11:30ರವರೆಗೆ ಶಾಲೆಗೆ ರೈಲಿನ ವಿನ್ಯಾಸ ಗೊಳಿಸುವ ಕೆಲಸವನ್ನು ಮಾಡಿದರು. ಹೀಗೆ 6-7 ದಿನಗಳಲ್ಲಿ ಪೈಟಿಂಗ್ ಕಾರ್ಯ ಪೂರ್ಣಗೊಂಡು ಸುಂದರ ಹಾಗೂ ವಿನೂತನ ಪರಿಕಲ್ಪನೆಯ ರೈಲಿನ ಶಾಲೆ ಸೃಷ್ಠಿಯಾಯಿತು. ಇದಕ್ಕೆ ಒಟ್ಟು 36 ಸಾವಿರ ರೂ. ಹಣ ವೆಚ್ಚವಾಗಿದ್ದು, ಅದಕ್ಕಾಗಿ ವಿಶ್ವನಾಥ ಪೂಜಾರಿ ತಾನು ಒಂದು ವರ್ಷ ಸಂಬಳದಿಂದ ಕೂಡಿಟ್ಟ ಹಣವನ್ನು ಬಳಸಿಕೊಂಡರು.
ದೇಣಿಗೆಗಳ ಮಹಾಪೂರ: ಹೀಗೆ ಮುಚ್ಚುವ ಹಂತದಲ್ಲಿದ್ದ ಈ ಶಾಲೆ ಹೊಸ ರೂಪ ತಳೆದು ಜನಾಕರ್ಷಣೆ ಪಡೆಯುತ್ತಿದ್ದಂತೆ ದಾನಿಗಳ ಹಾಗೂ ಹಳೆ ವಿದ್ಯಾರ್ಥಿಗಳಿಂದ ದೇಣಿಗೆಗಳ ಮಹಾಪೂರವೇ ಹರಿದು ಬರಲಾರಂಭಿಸಿತು.
ಹೊಸ ವಿನ್ಯಾಸದ ಪರಿಕಲ್ಪನೆ ಆರಂಭಿಸುತ್ತಿದ್ದಂತೆ ದಾನಿಗಳಿಂದ ಸಂಗ್ರಹವಾದ ಸುಮಾರು 70 ಸಾವಿರ ರೂ. ಹಣದಿಂದ ಶಾಲೆಯಲ್ಲಿ ಸ್ಮಾರ್ಟ್ ತರಗತಿಯನ್ನು ಆರಂಭಿಸಲಾಯಿತು. ವಿದೇಶದಲ್ಲಿರುವ ಶಾಲೆಯ ಹಳೆ ವಿದ್ಯಾರ್ಥಿ ನೀಡಿದ ದೇಣಿಗೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು.
ಅದೇ ರೀತಿ ಗೋವಾದಲ್ಲಿರುವ ಉದ್ಯಮಿಯೊಬ್ಬರು ಶಾಲೆಗೆ 20 ಡೆಸ್ಕ್ ಬೆಂಚ್ ನೀಡುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಿಂದ ಸುಮಾರು 50 ಸಾವಿರ ರೂ. ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ.
ಈಗ ಈ ಶಾಲೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಸಾಕಷ್ಟು ಜನರು ಶಾಲೆ ನೋಡಲು ಬರುತ್ತಿದ್ದು, ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾರೆ. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್.ಪ್ರಕಾಶ್, ಸ್ಥಳೀಯ ಜಿ.ಪಂ. ಹಾಗೂ ತಾ.ಪಂ. ಸದಸ್ಯರುಗಳು ಶಾಲೆಗೆ ಭೇಟಿ ನೀಡಿ ಈ ಸುಂದರ ಪರಿಕಲ್ಪನೆಗೆ ಮಾರು ಹೋಗಿ ಪ್ರೋತ್ಸಾಹ ನೀಡುವ ಭರವಸೆಯನ್ನು ನೀಡಿದ್ದಾರೆ.
ಈ ಹೊಸ ಪರಿಕಲ್ಪನೆಯನ್ನು ಶಾಲೆಗೆ ಪ್ರಶಸ್ತಿ ಸಿಗಬೇಕೆಂಬ ಉದ್ದೇಶದಿಂದ ಮಾಡಿದ್ದಲ್ಲ. ಇಂಥ ಸರಕಾರಿ ಶಾಲೆಗಳು ಉಳಿಯಬೇಕು ಎಂಬುದು ಮಾತ್ರ ನಮ್ಮ ಆಶಯ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಈ ಹೊಸ ವಿನ್ಯಾಸದಿಂದ ಮುಂದಿನ ವರ್ಷ ಮಕ್ಕಳ ಸಂಖ್ಯೆ ಹೆಚ್ಚಾಗಬಹುದೆಂಬ ನಿರೀಕ್ಷೆ ಯಲ್ಲಿದ್ದೇವೆ.
-ವಿಶ್ವನಾಥ ಪೂಜಾರಿ, ಪ್ರಭಾರ ಮುಖ್ಯಶಿಕ್ಷಕ, ಸರಕಾರಿ ಪ್ರಾಥಮಿಕ ಶಾಲೆ, ನಾಗೂರು.
ಇದೊಂದು ಉತ್ತಮ ಪರಿಕಲ್ಪನೆಯಾಗಿದೆ. ಮುಂದೆ ಯಾವ ರೀತಿ ಈ ಶಾಲೆ ಯಶಸ್ವಿಯಾಗುತ್ತದೆ ಎಂಬುದನ್ನು ನೋಡಬೇಕಾಗಿದೆ. ಇದಕ್ಕೆ ಪೋಷಕರ ಬೆಂಬಲ ಅತಿ ಅಗತ್ಯ. ಮಕ್ಕಳನ್ನು ನಾವು ಗುಣಾತ್ಮಕ ಶಿಕ್ಷಣದತ್ತ ಕೊಂಡೊಯ್ಯುವ ಕೆಲಸ ಮಾಡಬೇಕು. ಇಲಾಖೆಯ ವೆಬ್‌ಸೈಟ್ ನಲ್ಲಿ ಈ ಶಾಲೆಯ ಸಂಪೂರ್ಣ ಚಿತ್ರವನ್ನು ಅಪ್‌ಲೋಡ್ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ.
-ಒ.ಆರ್.ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಬೈಂದೂರು.