varthabharthi


ನನ್ನೂರು ನನ್ನ ಜನ

ನಗರದ ವಿದ್ಯಾವಂತರ ಬಡಾವಣೆ

ವಾರ್ತಾ ಭಾರತಿ : 7 Feb, 2018
ಚಂದ್ರಕಲಾ ನಂದಾವರ

 ನಾವು ಮಂಗಳೂರಲ್ಲಿ ಮನೆ ಕಟ್ಟಿರುವ ವಿಷಯ ನನ್ನೂರಿನಲ್ಲಿ ಸುದ್ದಿ ಆಯಿತು. ಮಂಗಳೂರಲ್ಲಿ ಮನೆ ಕಟ್ಟಿಕೊಂಡರೆ ಈ ಮನೆ ಹಿತ್ತಲನ್ನು ಮಾರಾಟ ಮಾಡಬಹುದು ಎಂಬುದನ್ನು ಯಾರಾದರೂ ಊಹಿಸಿದರೆ ಅದು ಸಹಜವೇ. ಈ ಹಿನ್ನೆಲೆಯಲ್ಲಿ ಈ ಊರಿನಲ್ಲಿ ತನ್ನ ವೃತ್ತಿಯಿಂದಾಗಿ ಮನೆ ಹಿತ್ತಲು ಕೊಂಡು ಇಲ್ಲಿ ನೆಲೆ ನಿಂತ ನಮ್ಮ ಪರಿಚಿತ ಶಿಕ್ಷಕರೊಬ್ಬರು ತನ್ನ ಸಂಬಂಧಿಯೊಬ್ಬರನ್ನು ನಮ್ಮ ಮನೆ ಹಿತ್ತಲು ನೋಡಲು ಕರೆದುಕೊಂಡು ಬಂದರು. ಅವರು ಜಾತಿಯಲ್ಲಿ ಬ್ರಾಹ್ಮಣರಾದರೂ ಈ ಊರಿನಲ್ಲಿರುವ ಬ್ರಾಹ್ಮಣರ ಪಂಗಡಕ್ಕೆ ಸೇರಿದವರಾಗಿರಲಿಲ್ಲ. ಆದುದರಿಂದ ಈ ಊರಿನ ಯಾವ ಉಸಾಬರಿಯಲ್ಲೂ ತನ್ನನ್ನು ತೊಡಗಿಸಿಕೊಳ್ಳದೆ ತನ್ನ ಪಾಡಿಗೆ ತಾನು ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಿದ್ದರೆಂಬುದನ್ನು ಅವರ ವಿದ್ಯಾರ್ಥಿಗಳಿಂದ ತಿಳಿದುಕೊಂಡಿದ್ದೆ. ಪರಸ್ಪರ ಭೇಟಿಯಾದಾಗ ನಮಸ್ಕಾರದ ವಿನಿಮಯ ಬಿಟ್ಟರೆ ಇನ್ನೇನೂ ಹೆಚ್ಚಿನ ಆತ್ಮೀಯತೆಗೆ ಅವಕಾಶವಿರಲಿಲ್ಲ. ಜೊತೆಗೆ ಅವರು ನಮ್ಮನ್ನು ಬ್ಯಾಹ್ಮಣರೆಂದೇ ಭಾವಿಸಿದ್ದರು.

ಯಾಕೆಂದರೆ ಬ್ರಾಹ್ಮಣರೆನ್ನುವ ವರ್ಗದಲ್ಲೇ ಪರಸ್ಪರ ಪರಿಚಯವೇ ಇಲ್ಲದ ಪಂಗಡಗಳಿವೆ. ಆರಾಧನೆಯ ನೆಲೆಗಳಿಂದ ಶೈವರು, ವೈಷ್ಣವರೆಂದಾದರೆ ಅವರೊಳಗೆ ಜಾತಿಯ ಹಿನ್ನೆಲೆಯಲ್ಲಿ ಸ್ಮಾರ್ತರು, ಅದ್ವೈತಿಗಳು, ದ್ವೈತಿಗಳು ಇವರಲ್ಲೂ ಸ್ಥಾನಿಕರು, ಶಿವಳ್ಳಿಗಳು ತುಳು ಭಾಷಿಕರಾದರೆ, ಕೋಟ, ಕೋಟೇಶ್ವರದವರು ಕನ್ನಡಿಗರಾದರೆ, ಹವ್ಯಕರೆನ್ನುವವರದ್ದು ಕನ್ನಡವೇ ಆಗಿದ್ದರೂ ಅದು ಪ್ರತ್ಯೇಕ ವಾದ ಪಂಗಡವಾಗಿರುವುದು ಮೇಲ್ನೊಟಕ್ಕೆ ತಿಳಿಯುವಂತಹುದು. ಇನ್ನು ಇವರ ಆಚಾರ ವಿಚಾರಗಳಲ್ಲೂ, ಅದನ್ನು ಸಂಸ್ಕೃತಿ ಎನ್ನುವುದಾದರೆ ಅವರವರ ಮದುವೆಗಳ ರೀತಿ ರಿವಾಜುಗಳು ಬೇರೆ ಬೇರೆಯೇ ಆಗಿದೆ. ಅವರ ಆಹಾರ ಪದ್ಧತಿಗಳೂ ಬೇರೆ ಬೇರೆಯೇ ಆಗಿರುವುದೂ ಕೂಡಾ ವಿಶೇಷವಾದುದು. ನಾವು ಬಹುಶಃ ಬ್ರಾಹ್ಮಣರೆಂದು ಸುಳ್ಳು ಹೇಳುವ ಅವಕಾಶಗಳು ಸಾಕಷ್ಟು ಬಾರಿ ಒದಗಿದರೂ ಹಾಗೆ ಹೇಳಿ ಆಗಬೇಕಾದ ಪುರುಷಾರ್ಥಗಳೇನೂ ಇಲ್ಲ ಎನ್ನುವುದು ನಮಗೆ ತಿಳಿದಿರುವುದೇ ಆಗಿದೆ. ಜೊತೆಗೆ ನಾವು ಹುಟ್ಟಿದ ಜಾತಿಗಿಂತ ಮಾನವೀಯತೆ ಮೇಲು ಎಂಬ ತಿಳುವಳಿಕೆ ಚಿಕ್ಕಂದಿನಲ್ಲಿ ಮನೆಯಲ್ಲೇ ಪ್ರಾಯೋಗಿಕವಾಗಿ ದೊರೆತ ಪಾಠ. ‘‘ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ ಜಾತಿ ವಿಜಾತಿ ಎನಬೇಡ ದೇವನೊಲಿದಾತನೇ ಜಾತ ಸರ್ವಜ್ಞ’’ ಎಂಬುದು ಶಾಲೆಯಲ್ಲಿಯೂ ಕಲಿತ ಪಾಠ, ಮನಸ್ಸು ಒಪ್ಪಿಕೊಂಡ ಸತ್ಯ.

ಬಂದಿರುವ ಈ ಶಿಕ್ಷಕರು, ನಮ್ಮ ಬಗ್ಗೆ ಭಾವಿಸಿದ್ದನ್ನು ಅಲ್ಲ ಎಂದು ತಿಳಿಸಿದೆವು. ಈ ಬ್ರಾಹ್ಮಣ ವರ್ಗದವರಿಗೆ ಕೃಷಿಯ ಮೇಲೆ ವಿಶೇಷ ಆಸಕ್ತಿ. ಆ ಕಾರಣದಿಂದಲೇ ಮನೆಯಂಗಳದಲಿದ್ದ ಹೂವಿನ ಗಿಡಗಳು, ಹಿತ್ತಲಲ್ಲಿ ಸುತ್ತಲೂ ಇದ್ದ ತೆಂಗಿನ ಗಿಡಗಳು, ಹಣ್ಣಿನ ಗಿಡ ಮರಗಳು ಹಾಗೂ ನಮ್ಮ ಮನೆಯೂ ಅವರಿಗೆ ಇಷ್ಟವಾಯಿತು. ಅವರು ಖುಷಿಯಿಂದಲೇ ‘‘ಮನೆ ಹಿತ್ತಲು ಇಷ್ಟವಾಗಿದೆ. ಬೇರೆ ಯಾರಿಗೂ ಕೊಡಬಾರದು’’ ಎಂಬ ಒತ್ತಾಯದೊಂದಿಗೆ ಮನೆ ತಮಗೇ ಬೇಕು ಎಂದು ಹೇಳಿದರು. ಆದರೆ ನಾವಿನ್ನೂ ಮನೆ ಕಟ್ಟಲು ಶುರು ಮಾಡಿದ್ದಷ್ಟೇ. ಅಲ್ಲದೆ ನಮ್ಮ ಯೋಜನೆ ಎರಡು ವರ್ಷದ್ದಾಗಿತ್ತು. ಹಾಗೆಯೇ ಮನೆ ಹಿತ್ತಲು ಮಾರಾಟ ಮಾಡುವ ಯೋಚನೆಯನ್ನೂ ಮಾಡಿರಲಿಲ್ಲ. ಮಾರುವುದಾದರೆ ನಿಮಗೇ ಮೊದಲು ತಿಳಿಸುತ್ತೇವೆ ಎಂದೆವು. ಖರೀದಿಸುವುದಕ್ಕಾಗಿ ಬಂದವರು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು.

 ನಮ್ಮ ಮಂಗಳೂರಿನ ಮನೆ ನಿರ್ಮಾಣದ ಕೆಲಸ ನಿಧಾನದಲ್ಲಿ ಸಾಗುತ್ತಿತ್ತು. ಈ ನಡುವೆ ನಮ್ಮ ಮನೆ ಖರೀದಿಸಬೇಕೆಂದು ಆಸೆ ಮಾಡಿದವರಿಗೆ ಅದೇನೋ ಸಂದೇಹವುಂಟಾಯಿತು. ಜೊತೆಗೆ ನಾವು ಇನ್ಯಾರಿಗೋ ಮಾತುಕೊಟ್ಟು ಮುಂಗಡ ಹಣ ಪಡೆದಿದ್ದೇವೆ ಎಂಬ ಅನುಮಾನ ಅದರಲ್ಲೂ ನಾವು ಮುಸ್ಲಿಮರಿಗೆ ಮಾರಾಟ ಮಾಡುತ್ತಿದ್ದೇವೆ, ಅದು ಅಪರಾಧವೆಂಬಂತೆ, ಜೊತೆಗೆ ಅವರಿಗೆ ಮಾತುಕೊಟ್ಟು ಮೋಸ ಮಾಡಿದ್ದೇವೆ ಎಂಬಂತಹ ಕಾರಣಗಳನ್ನು ಊಹಿಸಿ ಒಂದು ಸುದೀರ್ಘವಾದ ಪತ್ರವನ್ನು ನನ್ನ ಕಾಲೇಜಿನ ವಿಳಾಸಕ್ಕೆ ಕಳುಹಿಸಿದರು. ಆ ಪತ್ರ ಓದಿದ ನನಗೆ ನಾವು ಮಾಡದಿರುವ ಕೆಲಸದ ಬಗ್ಗೆ ಆಪಾದನೆ ಜೊತೆಗೆ ಊಹಿಸಿಯೂ ಇರದ ಆಲೋಚನೆಗಳನ್ನೆಲ್ಲಾ ನೋಡಿ ನನಗೆ ಅವರ ಬಗ್ಗೆ ಅಸಹ್ಯವಾಯಿತು. ಜೊತೆಗೆ ಅವರ ವ್ಯಕ್ತಿತ್ವದ ಬಗ್ಗೆ ಗೌರವವೂ ಇಲ್ಲವಾಯಿತು.

ಇದರಲ್ಲಿ ನನ್ನೂರಿನಲ್ಲಿದ್ದ ಶಿಕ್ಷಕರ ಪಾತ್ರ ಇಲ್ಲ ಎನ್ನುವುದೂ ತಿಳಿದಿತ್ತು. ಇಂತಹ ಸುಳ್ಳು ಆಪಾದನೆಯನ್ನು ಸಹಿಸಿಕೊಳ್ಳುವ ಅಭ್ಯಾಸವೇ ಇಲ್ಲದ ನಾನು ಅವರಿಗೆ ಸತ್ಯವಿಚಾರಗಳನ್ನು ಮತ್ತು ವಿದ್ಯಾವಂತರೆನ್ನಿಸಿಕೊಂಡವರ ತಲೆಯೊಳಗೆ ತುಂಬಿದ ಅಮಾನವೀಯವಾದ ಅತ್ಯಂತ ಕೀಳುಮಟ್ಟದ ಆಲೋಚನೆಯನ್ನು ಖಂಡಿಸಿ ಪತ್ರ ಬರೆದು ಕಳುಹಿಸಿದೆ. ಅದರಲ್ಲಿ ನಾನು ಮಾರಾಟ ಮಾಡುವ ಸಂದರ್ಭ ಬಂದಾಗಲೂ ನಿಮಗೆ ಇನ್ನು ಮಾರಾಟ ಮಾಡಲಾರೆ. ನೀವು ಈ ಬಗ್ಗೆ ಆಸೆ ಇಟ್ಟುಕೊಳ್ಳಬೇಡಿ ಎಂದು ನಿರ್ದಾಕ್ಷಿಣ್ಯವಾಗಿ ತಿಳಿಸಿದೆ. ಇಲ್ಲಿ ಗಮನಿಸಬೇಕಾದುದು ಅವರೊಬ್ಬರನ್ನಲ್ಲ. ಒಟ್ಟು ಸಮಾಜದಲ್ಲಿ ಅದುವರೆಗೆ ವ್ಯಾವಹಾರಿಕವಾದರೂ ಸೌಹಾರ್ದದಿಂದ ಬದುಕಿದ್ದ ಜನರ ಮನಸ್ಸನ್ನು ಅಡ್ವಾಣಿಯವರ ರಾಮರಥ, ಅಯೋಧ್ಯೆ ಎನ್ನುವ ಕಾಣದ ಊರಿನ ಮಸೀದಿಯ ಬಗ್ಗೆ ಅಸಹನೆ ಹೇಗೆ ಮನದೊಳಗೆ ಕಲ್ಮಶಗಳನ್ನು ತುಂಬಿಸುವ ಕೆಲಸ ಮಾಡಿದೆ ಎಂಬುದಕ್ಕೆ ಖರ್ಚಿಲ್ಲದೆ ದೊರೆತ ಉದಾಹರಣೆ ಇದು.

ಮಂಗಳೂರಲ್ಲಿ ಮನೆ ಕಟ್ಟುವ ಬಗ್ಗೆ ಜೀವ ವಿಮಾ ವಿಭಾಗದ ಒಪ್ಪಿಗೆ ಪತ್ರ ದೊರೆತ ಮೇಲೆ ನಮ್ಮ ಮೂರು ಸೆಂಟ್ಸಿನ ನಿವೇಶನದಲ್ಲಿ ‘‘ಕೆಸರು ಕಲ್ಲು’’ ಅಥವಾ ಭೂಮಿ ಪೂಜೆಗೆ ಒಂದು ದಿನ ನಾವೇ ನಿರ್ಧಾರ ಮಾಡಿದೆವು. ಕಂಟ್ರಾಕ್ಟರ್ ಬಿ.ಆರ್.ಆಚಾರ್‌ರವರು ಪೂಜೆಗೆ ಪೂಜಾರಿಯನ್ನು ಅಂದರೆ ಅರ್ಚಕರನ್ನು ಕರೆವ ಬಗ್ಗೆ ತಿಳಿಸಿದಾಗ ಅದರ ಆವಶ್ಯಕತೆ ಇಲ್ಲ ಎಂದು ತಿಳಿಸಿದೆವು. ‘‘ನಾವು ಹಾಗೂ ನೀವು ಈ ಮನೆ ಕಟ್ಟಿಸುವ ವ್ಯವಹಾರ ನಡೆಸುವ ಮಂದಿ. ಇನ್ನು ಮನೆಯ ಕಟ್ಟಡವನ್ನು ಕಟ್ಟುವವರು ನಿಮ್ಮ ಕೈ ಕೆಳಗೆ ದುಡಿಯುವ ಆಳುಗಳು. ಆದ್ದರಿಂದ ಭೂಮಿ ಅಗೆದು ಕಲ್ಲು ಕಟ್ಟುವ ಆಳನ್ನು ಕರಕೊಂಡು ಬನ್ನಿ. ನಾವೂ ಬರುತ್ತೇವೆ’’ ಎಂದು ತಿಳಿಸಿ ಒಂದು ವಾರದ ನಡುವಿನ ದಿನ ಅಂದರೆ ಇಬ್ಬರಿಗೂ ಕಾಲೇಜು ಇರುವ ದಿನದ ಬೆಳಗ್ಗೆ 8:30 ಗಂಟೆಗೆ ಬರುತ್ತೇವೆ. 9 ಗಂಟೆಯ ಒಳಗೆ ಮುಗಿದು ನಾವು ಕಾಲೇಜಿಗೆ ಹೋಗಬೇಕಾಗಿದೆ ಎಂದೆವು. ಕಂಟ್ರಾಕ್ಟರ್‌ರಾದ ಬಿ.ಆರ್.ಆಚಾರ್‌ರವರಿಗೆ ಬೇರೇನೂ ಹೇಳಲಾಗದೆ ಆಯ್ತು ಎಂದು ಒಪ್ಪಿಕೊಂಡರು.

ಹಳ್ಳಿಯಲ್ಲಿದ್ದ ನಮ್ಮ ಅನಕ್ಷರಸ್ಥರಾದ ಆದರೆ ಅನುಭವಿಗಳಾದ ಹಿರಿಯರ ಸಂಪ್ರದಾಯದಂತೆ ಮನೆ ಕಟ್ಟುವ ಜಾಗದಲ್ಲಿ ಗಣಪತಿ ಇಡುವುದು, ಬಳಿಕ ದೈವ ದೇವರುಗಳಲ್ಲಿ ಬೇಡಿಕೊಳ್ಳುವುದು ಸಾಮಾನ್ಯವಾದ ರೀತಿ. ಗಣಪತಿ ಇಡುವುದೆಂದರೆ ತುದಿ ಬಾಳೆ ಎಲೆಯ ಮೇಲೆ ಅಕ್ಕಿ, ಜುಟ್ಟು ಇರುವ ತೆಂಗಿನಕಾಯಿ, ಬಳಿಯಲ್ಲಿ ಎಲೆ ಅಡಕೆ, ನಾವಲ್ಲದೆ ಸಾಂದರ್ಭಿಕವಾಗಿ ಇರುವವರಿಗೆ ಕೊಡಬೇಕಾದ ವಸ್ತುಗಳು ಇರುತ್ತವೆ. ಇಲ್ಲಿ ಆ ರೀತಿ ಇಡಬೇಕಾದುದು ಪಂಚೆ, ಶಾಲು ಹಾಗೂ ಸಾಂಕೇತಿಕವಾಗಿ ಒಂದಿಷ್ಟು ನಾಣ್ಯಗಳು. ಇವೆಲ್ಲವುಗಳ ಜೊತೆಗೆ ನಾವು ಹೇಳಿದ ದಿನ ಹೇಳಿದ ಸಮಯಕ್ಕೆ ನಿವೇಶನದ ಬಳಿ ಬಂದೆವು. ಬಿ.ಆರ್.ಆಚಾರ್‌ರವರ ಕಚೇರಿ ಬಡಾವಣೆಯೊಳಗೆ ತಾತ್ಕಾಲಿಕ ಶೆಡ್‌ನೊಳಗೆ ಇತ್ತು. ಅವರು ನಮ್ಮನ್ನು ಕಾಯುತ್ತಿದ್ದರು. ನಾವು ಬಂದಂತೆಯೇ ಅವರೂ ಒಬ್ಬ ಮೇಸ್ತ್ರಿಯೊಂದಿಗೆ ಅಲ್ಲಿಗೆ ಬಂದರು. ನಾನು ಎಲ್ಲವನ್ನೂ ಸರಿಯಾಗಿ ಜೋಡಿಸಿಟ್ಟೆ. ಕಂಟ್ರಾಕ್ಟರ್ ಮತ್ತು ನಮ್ಮ ನಡುವೆ ಈಗಾಗಲೇ ಸ್ಥಳ ಖರೀದಿಸಿದಾಗಲೇ ಕಾನೂನಿನಂತೆ ವ್ಯವಹಾರದ ಒಪ್ಪಂದವಾಗಿ ಸಹಿ ಹಾಕಿದ್ದೆವು. ನಿವೇಶನವೂ ನಮ್ಮವರ ಹೆಸರಲ್ಲಿ ನೋಂದಣಿ ಆಗಿತ್ತು. ಸಾಮಾಜಿಕ ವ್ಯವಹಾರಗಳಿಗೆ ಇಷ್ಟು ಸಾಕಾಗಿತ್ತು. ಆದರೆ ಸಮಾಜ ಇಂತಹ ಕಾನೂನುಗಳಿಲ್ಲದ ದಿನಗಳಲ್ಲಿ ನಡೆಸುತ್ತಿದ್ದ ರೀತಿಗಳನ್ನು ಆಚರಣೆಗಳನ್ನು ಬಿಡುವುದಕ್ಕೆ ಭಾವನಾತ್ಮಕವಾಗಿ ಒಪ್ಪದೆ ಇರುವುದರಿಂದಲೇ ಇಂದು ನಮ್ಮ ಆಚರಣೆಗಳ ಭಾರದಿಂದ ವೈಚಾರಿಕತೆಯನ್ನು ಅರಿಯದ ಮಂದಿ ಬದುಕಿನಲ್ಲಿ ನರಳುತ್ತಾರೆ ಎಂದರೆ ಎಲ್ಲರೂ ಒಪ್ಪಲಾರರು.

ಆದ್ದರಿಂದ ಅಂತಹವರೊಂದಿಗೆ ವ್ಯವಹರಿಸುವಾಗ ಒಂದಿಷ್ಟು ಮಾರ್ಪಾಡುಗಳೊಂದಿಗೆ ಅವರ ಭಾವನೆಗಳಿಗೂ ಧಕ್ಕೆಯಾಗದಂತೆ ವರ್ತಿಸುವುದು ಒಂದು ರೀತಿಯ ಸಮನ್ವಯದ ದಾರಿ. ಈ ನಿಟ್ಟಿನಲ್ಲಿ ಬೆಳಗ್ಗಿನ ಹೊತ್ತು ಸೂರ್ಯನಿಗೆ ಅಭಿಮುಖವಾಗಿ ಅಂದರೆ ಪೂರ್ವದಿಕ್ಕಿಗೆ ಮುಖ ಮಾಡಿ ನಿಂತು ನಾವು ಇರುವುದಕ್ಕೆ ಕಟ್ಟುವ ಮನೆಗಾಗಿ ಭೂಮಿ ತಾಯಿಯನ್ನು ಅಗೆದು ಬಗೆದು ನೋಯಿಸುವುದಕ್ಕಾಗಿ ಕ್ಷಮೆ ಕೋರಿ, ಸೂರ್ಯನ ಸಾಕ್ಷಿಯಾಗಿ ನಾವು ವ್ಯವಹಾರವನ್ನು ಪ್ರಾಮಾಣಿಕವಾಗಿ ನಡೆಸುತ್ತೇವೆ ಎಂದು ಗಟ್ಟಿಯಾಗಿ ಹೇಳಿಕೊಂಡೆವು. ಒಂದರ್ಥದಲ್ಲಿ ಇದು ಆಣೆ ಪ್ರಮಾಣ ಅಂದರೆ ಭಾಷೆ ಕೊಟ್ಟಂತೆ ಆಗಿರುತ್ತದೆ. ಜನ ತಮ್ಮ ನಾಲಗೆಯ ಬಗ್ಗೆ, ತಮ್ಮ ಮಾತಿನ ಬಗ್ಗೆ ಸತ್ಯಸಂಧರಾದ ಕಾಲದ ರೀತಿ ಇದು. ಹಾಗೆಯೇ ಅದನ್ನು ನಂಬಿ ನಡೆದವರು ಕೂಡಾ. ನಮ್ಮ ಈ ಬೇಡಿಕೆ, ಪ್ರಾರ್ಥನೆ, ಭಾಷೆ ಅಲ್ಲಿದ್ದ ಮೇಸ್ತ್ರಿಗೆ ಸಂಬಂಧಪಟ್ಟಿರದೆ ಇದ್ದರೂ ಈ ಪ್ರಾರ್ಥನೆಯಲ್ಲಿ ಕೂಲಿಯಾಳುಗಳ ರಕ್ಷಣೆಯ ಬೇಡಿಕೆಯೂ ಇರುತ್ತದೆ. ಆದ್ದರಿಂದ ಅವನಿಗೂ ಇದು ಭಾವನಾತ್ಮಕವಾದ ವಿಷಯವೇ ಆಗಿರುತ್ತಾ ಅವನಲ್ಲೂ ನಮ್ಮ ಪ್ರಾರ್ಥನೆಯ ವೇಳೆ, ಅವನೂ ಅಂತರಂಗದಲ್ಲಿ ಶ್ರದ್ಧಾಳುವಾಗುತ್ತಾನೆ ಎಂಬುದನ್ನು ನಾನು ತಿಳಿದವಳು ಮಾತ್ರವಲ್ಲ ಗ್ರಹಿಸಿದವಳು. ಆದ್ದರಿಂದಲೇ ಪ್ರತಿಯೊಬ್ಬನ ಕಾರ್ಯವು ಕೈಲಾಸಕ್ಕೆ ಸಲ್ಲುವಂತಹುದೇ ಆಗಿರುತ್ತದೆ.

ಈಗ ಮೇಸ್ತ್ರಿ ಒಂದಿಷ್ಟು ಜಾಗ ಅಳತೆ ಮಾಡಿ, ಗುರುತು ಹಾಕಿ ಸುತ್ತಲೂ ಅಗೆದು ಬಳಿಕ ನಡುವೆ ಗುಂಡಿ ತೋಡಿದ. ಬಳಿಕ ನಾಲ್ಕು ಕಲ್ಲುಗಳನ್ನು ಜೋಡಿಸಿ, ಮರಳು ಸಿಮೆಂಟಿನ ಮಿಶ್ರಣದಿಂದ ಅವುಗಳನ್ನು ಗಟ್ಟಿ ಮಾಡಿದ. ಹೀಗೆ ಒಂದೊಂದು ಕಲ್ಲುಗಳ ಜೋಡಣೆಯಿಂದಲೇ ಕಟ್ಟಡ ನಿರ್ಮಾಣ ತಾನೇ? ಈ ಕೆಲಸ ಅಂದರೆ ಭೂಮಿ ಪೂಜೆ, ಸೂರ್ಯ ಸಾಕ್ಷಿ, ಕೆಸರು ಕಲ್ಲು ಹಾಕುವ ಪ್ರಕ್ರಿಯೆಗಳು ಮುಗಿದ ಬಳಿಕ ಎಲೆಯಲ್ಲಿಟ್ಟ ಅಕ್ಕಿ, ಕಾಯಿ, ಪಂಚೆ, ಶಾಲು ಯಾರಿಗೆ ಕೊಡುವುದು ಎಂದು ಬಿ.ಆರ್.ಆಚಾರ್‌ರವರು ಕೇಳಿದಾಗ ಅದು ಸೇರಬೇಕಾದುದು ನಿಜವಾಗಿಯೂ ನಮಗಾಗಿ ಕೆಲಸ ಮಾಡುವ ಆಳುಗಳಿಗೆ ಸಿಗಬೇಕಾದ ಗೌರವ ಎಂದು ಹೇಳಿ ಅವನಿಗೆ ಒಪ್ಪಿಸಿದೆವು. ಅವನು ಭಾವುಕನಾದ. ಯಾಕೆಂದರೆ ಎಲ್ಲೂ ಇಂತಹ ಅನುಭವ ಆಗಿರಲಾರದು. ಅಲ್ಲಿದ್ದ ನಾಣ್ಯಗಳ ಜೊತೆಗೆ ನೂರರ ನೋಟನ್ನು ಜೊತೆಗೆ ಸೇರಿಸಿ ಕೊಟ್ಟೆವು. ನಾವು ನಂಬಿದ ದೇವರನ್ನು ನಾವೇ ನಮ್ಮ ಭಾಷೆಗಳಲ್ಲಿ ಮಾತನಾಡಿಸಿಕೊಂಡು ಬಂದ ಪರಂಪರೆಯಲ್ಲಿ ನಮ್ಮ ಮತ್ತು ದೇವರ ನಡುವೆ ಇನ್ನೊಬ್ಬರ ಅಗತ್ಯವಿಲ್ಲ ಎನ್ನುವುದು ನಮ್ಮ ಮನೆಗಳಲ್ಲಿ ನಡೆವ ಅನೇಕ ಕಾರ್ಯಕ್ರಮಗಳಲ್ಲಿ ನೋಡಿ ತಿಳಿದಿರುವುದೇ ಆಗಿತ್ತು. ಭೂಮಿ ಪೂಜೆಗೆ ಅರ್ಚಕರನ್ನು ಕರೆದಿಲ್ಲ ಎಂಬ ವಿಷಯ ಮಾತ್ರ ನನ್ನ ಕಾಲೇಜಿನ ಉಪನ್ಯಾಸಕರ ಕೊಠಡಿಯಲ್ಲಿ ಚರ್ಚಿತವಾಗಿ ನಾನು ದೇವರನ್ನು ನಂಬುವುದಿಲ್ಲ ಎಂಬಂತಾಯಿತು.

ನಮ್ಮ ಮನೆಯ ತಳಪಾಯ ಮಳೆಗಾಲದ ಮಳೆಯಲ್ಲಿ ನೆನೆದು ಗಟ್ಟಿಯಾದಂತೆಯೇ ಹಂತ ಹಂತಕ್ಕೆ ಸರಿಯಾದ ಮೊತ್ತವನ್ನು ನೀಡಲು ಜೀವವಿಮಾ ನಿಗಮದಿಂದಲೂ ಸಕಾಲದಲ್ಲಿ ಯಾವ ಅಡ್ಡಿ ಆತಂಕಗಳಿಲ್ಲದೆ ದೊರೆಯುತ್ತಿತ್ತು. ಎಲ್ಲರ ಮನೆಗಳು ಸಾಮಾನ್ಯವಾಗಿ ಒಂದೇ ನಕ್ಷೆಯಂತೆ ಮಾದರಿ ಮನೆಯಂತಿದ್ದರೆ ನಾವು ಮಹಡಿಯನ್ನೂ ಈಗಲೇ ಕಟ್ಟಿಸುವ ನಿರ್ಧಾರ ಮಾಡಿದುದರಿಂದ ನಮ್ಮ ನಕ್ಷೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನೂ ಮಾಡಿಕೊಂಡೆವು.

ಈ ಕಾರಣದಿಂದ ನಮ್ಮ ಬಜೆಟ್ ದೊಡ್ಡದಾಗಿತ್ತು. ಮನೆಗೆ ಆರು ತಿಂಗಳ ಬದಲು ಎರಡು ವರ್ಷದ ಅವಧಿಯೂ ಬೇಕಾಯ್ತು. ಈ ಎಲ್ಲಾ ಕಾರಣಗಳ ಜೊತೆಗೆ ಕಂಟ್ರಾಕ್ಟರ್‌ರೊಂದಿಗಿನ ಉಳಿದ ಮನೆಗಳವರಂತೆ ನಮ್ಮ ಒಪ್ಪಂದದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೆವು. ಮನೆಗೆ ಬೇಕಾದ ಮರದ ಸಾಮಗ್ರಿಗಳನ್ನು ನಮಗೆ ಈಗಾಗಲೇ ಆತ್ಮೀಯರಾಗಿದ್ದ ಪಣಂಬೂರಿನ ಸಾಧು ಪೂಜಾರಿಯವರಿಂದ ಪಡೆದುಕೊಂಡು ಕಂತುಗಳಲ್ಲಿ ಹಣ ಪಾವತಿಸಿದೆವು. ಹಾಗೆಯೇ ನೆಲಕ್ಕೆ ಹಾಸಬೇಕಾದ ಮೊಸಾಯಿಕ್ ಟೈಲ್ಸ್‌ನ ಬಗ್ಗೆ ವಿಚಾರಿಸಿದಾಗ ನಮ್ಮ ವಿದ್ಯಾರ್ಥಿಯೊಬ್ಬನ ತಂದೆ ಮೊಸಾಯಿಕ್ ಪೌಡರನ್ನು ತಂದು ಮನೆಯಲ್ಲೇ ನೆಲಕ್ಕೆ ಹಾಸುವ ತಂತ್ರಗಾರಿಕೆಯಲ್ಲಿ ಮಾಡುತ್ತಾರೆ ಎಂದು ತಿಳಿಯಿತು. ಅವರನ್ನು ಸಂಪರ್ಕಿಸಿದ್ದಾಯಿತು. ಅವರು ಒಂದೊಂದು ಕೋಣೆಗೂ ಬೇರೆ ಬೇರೆ ಬಣ್ಣದ ನೆಲದ ಹಾಸನ್ನು ಅಂದವಾಗಿ ಮಾಡಿಕೊಟ್ಟರು. ಅವರದ್ದೇ ಆದ ಕಾರಣಗಳಿಂದ ಕೆಲಸ ಸ್ವಲ್ಪ ತಡವಾಗಿ ಒಂದಿಷ್ಟು ಅಸಮಾಧಾನವೂ ಉಂಟಾಯಿತು. ಆದರೆ ನಮ್ಮ ವಿದ್ಯಾರ್ಥಿ ಅವರಿಂದಾದ ತೊಂದರೆಗೆ ಸಮಾಧಾನದಿಂದ ವರ್ತಿಸಿ ಕೆಲಸ ಪೂರೈಸಿ ಕೊಟ್ಟು ಉಪಕರಿಸಿದನು. ನಮ್ಮ ಮನೆ ಸಿದ್ಧಗೊಳ್ಳುವುದರೊಳಗೆ ಬಡಾವಣೆಯಲ್ಲಿ ಅನೇಕ ಮನೆಗಳು ಸಿದ್ಧವಾಗಿ ಗೃಹಪ್ರವೇಶ ಸಮಾರಂಭಗಳು ನಡೆದರೂ ಪರಸ್ಪರರ ಪರಿಚಯಕ್ಕೆ ಅವಕಾಶವಿರಲಿಲ್ಲ. ಆದರೆ ಈಗಾಗಲೇ ಪರಿಚಯವಾದವರು ಎಂದರೆ ನಮ್ಮ ನಿವೇಶನದ ಹಿಂಬದಿಯಲ್ಲಿದ್ದ ನಿವೇಶನದ ಮಾಲಕರಾದ ದಂಪತಿಯಲ್ಲಿ ಮಹಿಳೆ ಮನೆ ಕಟ್ಟುವುದಕ್ಕೆ ಪ್ರಾರಂಭಿಸಿದಾಗ ನಮ್ಮನ್ನೂ ಬೇಗ ಕಟ್ಟುವಂತೆ ಒತ್ತಾಯಿಸುತ್ತಿದ್ದರು.

ಯಾಕೆಂದರೆ ಆಕೆ ಒಬ್ಬಳೇ ಈ ಮನೆಯಲ್ಲಿ ಇರಬೇಕಾಗಿದ್ದವರು. ಆಕೆ ವೈದ್ಯೆ. ಚಿಕ್ಕ ಮಗುವಿನ ತಾಯಿಯಾಗಿದ್ದರು. ತೊಟ್ಟಿಲ ಮಗುವನ್ನು ನಾನು ನೋಡಿ ಬರುವ ಮೂಲಕ ನಮ್ಮ ಆತ್ಮೀಯತೆ ಹೆಚ್ಚಿತ್ತು. ಅವರಿಗೆ ನೆರೆಕರೆಯೂ ಬೇಕಾಗಿತ್ತು. ಅವರ ಪತಿ ಗಲ್ಫ್ ರಾಷ್ಟ್ರವೊಂದರಲ್ಲಿ ಇಂಜಿನಿಯರ್ ಆಗಿದ್ದರು. ನನಗೆ ವೈದ್ಯೆಯಾಗಿದ್ದ ಅವರ ಬಗ್ಗೆ ವಿಶೇಷ ಗೌರವ ಉಂಟಾಗಿತ್ತು. ಜೊತೆಗೆ ಒಳ್ಳೆಯ ಮಾತುಗಾತಿಯಾಗಿದ್ದ ಆಕೆ ಸ್ನೇಹ ಜೀವಿಯೂ ಆಗಿದ್ದರು. ನಾವಿಬ್ಬರೂ ಉಪನ್ಯಾಸಕರೆನ್ನುವುದು ತಿಳಿದ ಆಕೆಗೂ ನಮ್ಮಲ್ಲಿ ವಿಶೇಷ ಗೌರವ ಇತ್ತು. ನಿವೇಶನ ಖರೀದಿಸುವಾಗ ಬಿ.ಆರ್.ಆಚಾರ್‌ರವರು ಹೇಳಿದಂತೆ ಇದೊಂದು ವಿದ್ಯಾವಂತರ ಬಡಾವಣೆ ಎನ್ನುವುದು ಪರಸ್ಪರರಿಗೆ ಗೌರವದ ವಿಷಯವೂ ಆಗಿತ್ತು. ಬಹುಶಃ ನಾವು ಇದುವರೆಗೆ ಸಾಗಿ ಬಂದ ಬದುಕಿನ ಸುತ್ತಮುತ್ತಲ ಅನುಭವಗಳಿಗಿಂತ ಇಲ್ಲಿ ನಮ್ಮ ಮುಂದಿನ ಬದುಕಿನ ಅನುಭವಗಳು ನಗರದ ವಿದ್ಯಾವಂತರ, ಪ್ರಜ್ಞಾವಂತ ನಾಗರಿಕರ, ನೆರೆಕರೆಯ ಅನುಭವಗಳಾಗಬಹುದಾಗಿದ್ದು ಒಂದರ್ಥದಲ್ಲಿ ನಮಗೇ ತಿಳಿಯದೇ ನಮ್ಮ ಅಂತಸ್ತು ಎತ್ತರಕ್ಕೆ ಏರಿದ ಅನುಭವದ ಸಂಭ್ರಮ ಒಳಗೊಳಗೇ ಸಂತೋಷವನ್ನೂ ನೀಡುವಂತಹದ್ದಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)