ಆರ್ಥಿಕತೆ ಮತ್ತು ಜನತೆ
ಭಾಗ 2
2016-17ರ ಕೊನೆಯ ತ್ರೈಮಾಸಿಕದ ನಂತರದಲ್ಲಿ ಕೃಷಿಯಲ್ಲೂ ಜಿವಿಎಯ ಅಭಿವೃದ್ಧಿ ದರ ಹೊಡೆತವನ್ನನುಭವಿಸಿದೆ. ಆರ್ಥಿಕ ಸಮೀಕ್ಷೆಯು 2017-18ರ ಎರಡನೇ ಅವಧಿಯಲ್ಲಿ ಕೃಷಿಯು ಚೇತರಿಸಿಕೊಳ್ಳುತ್ತದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದೆ. ಆದರೆ ಹಾಗಾಗಬೇಕೆಂದರೆ ಅಹಾರ ಧಾನ್ಯ ಮತ್ತು ವಾಣಿಜ್ಯ ಬೆಳೆಗಳೆರಡಕ್ಕೂ ಲಾಭದಾಯಕ ದರಗಳನ್ನು ಖಾತರಿಪಡಿಸುವ ವ್ಯವಸ್ಥೆಯು ಪುನಶ್ಚೇತನಗೊಳ್ಳಬೇಕು. ಅಷ್ಟು ಮಾತ್ರವಲ್ಲದೆ ವಾಣಿಜ್ಯಬೆಳೆಗಳ ಮಾರಾಟ ನಿಗಮಗಳ ಮಾರುಕಟ್ಟೆ ವ್ಯವಹಾರಗಳು ನವೀಕರಣಗೊಳ್ಳಬೇಕು. ರೈತರ ಸಾಲ ಪರಿಹಾರದ ಜೊತೆಜೊತೆಗೆ ಇಂಥಾ ಬೆಲೆ ಬೆಂಬಲದ ಯೋಜನೆಗಳು ಜೊತೆಗೂಡಬೇಕು. ರೈತಾಪಿಯ ಸಾಲ ಮನ್ನಾ ಮಾಡುವುದು ಒಂದು ನೈತಿಕ ಅವಘಡಕ್ಕೆ ದಾರಿಮಾಡಿಕೊಡಬಹುದೆಂಬ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಆದರೆ ಅದೇ ಮಹಾಶಯರು ಕೈಗಾರಿಕೋದ್ಯಮಿಗಳು, ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದಿದ್ದರೂ, ಸಾಲ ಮನ್ನಾ ಯೋಜನೆಗಳ ಫಲಾನುಭವಿಗಳಾಗುತ್ತಲೇ ಇರುವುದರ ಬಗ್ಗೆ ಚಕಾರವೆತ್ತುವುದಿಲ್ಲ.
ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದ ಉದ್ಯಮಿಗಳಿಗೆ ಸೀಮಿತ ಹೊಣೆಗಾರಿಕೆ (ಲಿಮಿಟೆಡ್ ಲಯಬಿಲಿಟಿ) ಸೌಲಭ್ಯಗಳು ದೊರೆಯದಂತೆ ಕಂಪೆನಿ ಕಾನೂನುಗಳಿಗೆ ತಿದ್ದುಪಡಿ ತರಬೇಕೆಂದು ಸಲಹೆ ಮಾಡಿದರೆ ಸಾಕು ಇವರೆಲ್ಲರೂ ತಿರುಗಿಬೀಳುತ್ತಾರೆ. ಸ್ವಲ್ಪ ಹಿಂದೆ, ಎಂದರೆ, ಸಾರ್ವಜನಿಕ ಜೀವನದಲ್ಲಿ ಅಪ್ರಾಮಾಣಿಕತೆಯು ಇಂದಿನ ಮಟ್ಟವನ್ನು ತಲುಪಿರದ ಕಾಲದಲ್ಲಿ, ಬ್ರೆಝಿಲ್ ದೇಶದಲ್ಲಿ ಸೇನಾಡಳಿತವು ಇದ್ದ ಸಂದರ್ಭದಲ್ಲಿ ಅದರ ಅಧ್ಯಕ್ಷರು ಒಮ್ಮೆ ಅಮೆರಿಕಕ್ಕೆ ಭೇಟಿ ನೀಡಿದಾಗ ಪತ್ರಕರ್ತರು ಬ್ರೆಝಿಲ್ನ ಆರ್ಥಿಕತೆಯ ಸ್ಥಿತಿಗತಿ ಹೇಗಿದೆಯೆಂದು ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಅವರು: ‘‘ನನ್ನ ದೇಶದಲ್ಲಿ ಆರ್ಥಿಕತೆಯ ಸ್ಥಿತಿಗತಿ ಚೆನ್ನಾಗಿಯೇ ಇದೆ. ಆದರೆ ಜನತೆಯ ಪರಿಸ್ಥಿತಿ ಚೆನ್ನಾಗಿಲ್ಲ’’ ಎಂದು ಉತ್ತರಿಸುತ್ತಾರೆ. ಮೋದಿ ಸರಕಾರವು ಜಾರಿಗೆ ತಂದ ನೋಟು ನಿಷೇಧ ಮತ್ತು ಜಿಎಸ್ಟಿಯೆಂಬ ಕ್ರಮಗಳು ಅಸಂಘಟಿತ ವಲಯದ ಜನಜೀವನದ ಮೇಲೆ ಆಘಾತಕಾರವಾದ ದಾಳಿ ಮಾಡಿದ್ದರೂ ಅದನ್ನು ಆಟದ ಸ್ವರೂಪವನ್ನೇ ಬದಲಿಸಿದ ಮಹತ್ವದ ಕ್ರಮಗಳೆಂದು ಕೊಚ್ಚಿಕೊಳ್ಳಲಾಗುತ್ತದೆ. ಅವರ ಪ್ರಕಾರ ಇವುಗಳ ಒಂದೇ ಒಂದು ಅನುದ್ದೇಶಿತ ನಕಾರಾತ್ಮಕ ಪರಿಣಾಮವೆಂದರೆ ಜಿಡಿಪಿ ಬೆಳವಣಿಗೆಯ ದರಗಳಲ್ಲಿ ಒಂದು ಸಣ್ಣ ಇಳಿತವಾಗಿರುವುದು. ಆದರೆ ಉದ್ಯೋಗ ಮತ್ತು ಜೀವನೋಪಾಯಗಳ ಮೇಲೆ ಅದು ಮಾಡಿರುವ ನಕಾರಾತ್ಮಕ ಪರಿಣಾಮಗಳನ್ನು ಸಂಪೂರ್ಣವಾಗಿ ಅಲಕ್ಷ್ಯ ಮಾಡಲಾಗುತ್ತಿದೆ.
ಈ ಪತ್ರಿಕೆಯ ಅಂಕಣಗಳಲ್ಲಿ ನೋಟು ನಿಷೇಧದಿಂದ ಜನಸಾಮಾನ್ಯರ ಬದುಕಿನ ಮೇಲಾಗಿರುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಚರ್ಚಿಸಿದ್ದೇವೆ. ಆದರೂ ಜಿಎಸ್ಟಿಯು ಹೇಗೆ ಅಸಂಘಟಿತ ಕ್ಷೇತ್ರವನ್ನು ಹಿಂಡುತ್ತಿದೆ ಎಂಬ ಬಗ್ಗೆ ಒಂದೆರಡು ಮಾತುಗಳು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಜಿಎಸ್ಟಿಯು ಅಸಂಘಟಿತ ಕ್ಷೇತ್ರದ ಉದ್ಯಮಗಳ ವಹಿವಾಟು ಮಾಡುವ ವೆಚ್ಚವನ್ನು ಹೆಚ್ಚಿಸಿದೆ ಮತ್ತು ಜಿಎಸ್ಟಿ ಮರುಪಾವತಿಗೆ ಕಾಯುವ ವೆಚ್ಚವನ್ನು ಹೆಚ್ಚಿಸಿದೆ. ಅಲ್ಲದೆ ಅಸಂಘಟಿತ ಕ್ಷೇತ್ರವನ್ನು ತೆರಿಗೆ ಬಲೆಯೊಳಗೆ ತಂದುಕೊಂಡು ಖಾಸಗಿ ಕಾರ್ಪೊರೇಟ್ ಕಂಪೆನಿಗಳ ಮೇಲಿನ ಪರೋಕ್ಷ ತೆರಿಗೆ ಭಾರವನ್ನು ಕಡಿಮೆ ಮಾಡಲಾಗಿದೆ. ಕೃಷಿ ಕ್ಷೇತ್ರವನ್ನೂ ಒಳಗೊಂಡಂತೆ ಅಸಂಘಟಿತ ಕ್ಷೇತ್ರವು ಜಿಡಿಪಿಗೆ ಶೇ.45ರಷ್ಟು ಕೊಡುಗೆಯನ್ನು ನೀಡುತ್ತಿದ್ದು ಶೇ.75ರಷ್ಟು ಕಾರ್ಮಿಕರನ್ನು ಹೊಂದಿದೆ. ಈಗ ಕೃಷಿಯೇತರ ಅಸಂಘಟಿತ ಕ್ಷೇತ್ರದ ಗಣನೀಯ ಪ್ರಮಾಣದ ವಹಿವಾಟನ್ನು ಜಿಎಸ್ಟಿ ವ್ಯಾಪ್ತಿಯೊಳಗೆ ತಂದುಕೊಂಡಿರುವುದರಿಂದ ಅತ್ಯಂತ ಸೂಕ್ಷ್ಮ ಆರ್ಥಿಕ ಪರಿಸ್ಥಿತಿಯಲ್ಲಿ ವ್ಯವಹರಿಸುತ್ತಿದ್ದ ಈ ಕ್ಷೇತ್ರದ ಬಹುಪಾಲು ವಹಿವಾಟುಗಳೇ ಅಸುನೀಗುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ಉದ್ಯೋಗಗಳಿಗೆ ಮತ್ತು ಜೀವನೋಪಾಯಗಳಿಗೆ ಹುದೊಡ್ಡ ಹೊಡೆತ ಬೀಳಲಿದೆ.
ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು (ಇಂಟರ್ ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್) ಹೊರತಂದಿರುವ ಜಾಗತಿಕ ಹಸಿವು ಸೂಚ್ಯಂಕ: ಹಸಿವಿನ ಅಸಮಾನತೆಗಳು-2017 (2017 ಗ್ಲೋಬಲ್ ಹಂಗರ್ ಇಂಡೆಕ್ಸ್: ದಿ ಇನ್ಈಕ್ವಾಲಿಟೀಸ್ ಆಫ್ ಹಂಗರ್)ನ ಪ್ರಕಾರ ಭಾರತದಲ್ಲಿನ ಐದು ವರ್ಷದೊಳಗಿನ ಮಕ್ಕಳು ಎದುರಿಸುತ್ತಿರುವ ಅಪೌಷ್ಟಿಕತೆ, ದೇಹದ ಬೆಳವಣಿಗೆಯಾಗದಿರುವುದು, ಬಲಹೀನತೆ ಮತ್ತು ಸಾವುಗಳ ಪ್ರಮಾಣವು ಬಂಗ್ಲಾದೇಶ ಮತ್ತು ಕೆಲವು ಆಫ್ರಿಕಾ ದೇಶಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಭಾರತದಲ್ಲಿ ಅಗತ್ಯವಿರುವಷ್ಟು ಕ್ಯಾಲರಿ ಆಹಾರವನ್ನು ಸೇವಿಸದಿರುವುದರಿಂದ ಶೇ.38ರಷ್ಟು ಮಕ್ಕಳ ದೇಹದ ಬೆಳವಣಿಗೆಯು ಸರಿಯಾಗಿ ಆಗದೆ ಬೆಳೆಯಬೇಕಾದ ಎತ್ತರಕ್ಕೆ ಬೆಳೆಯುವುದೇ ಇಲ್ಲ. ಮೇಲಿನ ಜಾಗತಿಕ ಹಸಿವು ವರದಿಯನ್ನು ಉಲ್ಲೇಖಿಸುವ ಆರ್ಥಿಕ ಸಮೀಕ್ಷೆಯು ಭಾರತದಲ್ಲಿ ಕಾಯಿಲೆಯ ಭಾರವನ್ನು ಹೆಚ್ಚಿಸುವ ಅತಿ ದೊಡ್ಡ (ಶೇ.14.6) ಅಂಶವೆಂದರೆ ಅಪೌಷ್ಟಿಕತೆಯೆಂದು ಒಪ್ಪಿಕೊಳ್ಳುತ್ತದೆ.
ಇನ್ನೂ ದೊಡ್ಡ ಸಮಸ್ಯೆಯೆಂದರೆ ಬಡತನ, ಸಂಕಷ್ಟಗಳು ಮತ್ತು ದಾರಿದ್ರ್ಯಗಳ ವಿಶಾಲ ಸಾಗರದಲ್ಲಿ ಸಂಪತ್ತು, ಐಷಾರಾಮ ಮತ್ತು ನಾಗರಿಕತೆಗಳ ದ್ವೀಪಗಳು ಸೃಷ್ಟಿಯಾಗಿರುವುದು. ಗ್ರಾಮೀಣ ಪ್ರದೇಶದ 4/5 ಭಾಗದಷ್ಟು ಜನರು ದೈನಂದಿನ ಅಗತ್ಯವಾಗಿರುವ 2,400 ಕ್ಯಾಲರಿಗಳಷ್ಟು ಶಕ್ತಿಯನ್ನು ನೀಡುವ ಆಹಾರಕ್ಕಾಗಿ ಮತ್ತು ನಗರ ಪ್ರದೇಶದಲ್ಲಿ 3/5 ಭಾಗದಷ್ಟು ಜನರು 2,100 ಕ್ಯಾಲೋರಿಯಷ್ಟು ಆಹಾರಕ್ಕಾಗಿ ಅಗತ್ಯವಿರುವಷ್ಟು ವೆಚ್ಚವನ್ನು ಮಾಡಲಾಗದ ಪರಿಸ್ಥಿಯಲ್ಲಿದ್ದಾರೆ. ಇವರ ಪರಿಸ್ಥಿತಿಗಳನ್ನು ಭಾರತ ಸಮಾಜದ ಮತ್ತೊಂದು ತುದಿಯಲ್ಲಿರುವ 100 ಡಾಲರ್ ಬಿಲಿಯಾಧೀಶರ ಅಭೂತಪೂರ್ವ ಐಷಾರಾಮಗಳೊಂದಿಗೆ ಹೋಲಿಸಿ ನೋಡಬೇಕು. ಈ ಕಾರಣಕ್ಕಾಗಿಯೇ ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ (ಐಸಿಡಿಎಸ್) ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳಿಗೆ (ನರೇಗ) ಅಗತ್ಯವಿರುವಷ್ಟು ಸಂಪನ್ಮೂಲಗಳನ್ನು ಒದಗಿಸಬೇಕಾಗಿರುವುದು ಅತ್ಯವಶ್ಯವಾಗಿದೆ.
ಆರ್ಥಿಕ ಸಮೀಕ್ಷೆಯ ಜಿಡಿಪಿ ಮತ್ತು ಜಿವಿಎ ಬಗೆಗಿನ ವಿಶ್ವಾಸಕ್ಕೆ ಯೋಗ್ಯವಲ್ಲದ ಅಂಕಿಅಂಶಗಳು, ಅಭಿವೃದ್ಧಿಯ ಬಗೆಗಿನ ಅದರ ಗೀಳು, ಅಭಿವೃದ್ಧಿ ಪ್ರಕ್ರಿಯೆಗಳು ಏಕೆ ದಾರಿ ತಪ್ಪುತ್ತಿವೆ ಮತ್ತು ಅದನ್ನು ಸರಿದಾರಿಗೆ ತರುವುದು ಹೇಗೆ ಎಂಬ ಬಗ್ಗೆ ಅದರ ತಿಳವಳಿಕೆಗಳು, ಸುಲಭವಾಗಿ ಭಾರತದಲ್ಲಿ ಉದ್ಯಮ ನಡೆಸುವಂತಾಗಲು ಮತ್ತೊಂದು ಮಜಲನ್ನು ಮುಟ್ಟಲು ಅದು ತೋರುತ್ತಿರುವ ಕಾತರಗಳು, ಹವಾಮಾನ ಬದಲಾವಣೆ ಮತ್ತು ಲಿಂಗ ಅಸಮಾನತೆಯ ಬಗ್ಗೆ ಅದರ ಬಾಯುಪಚಾರದ ಮಾತುಗಳೆಲ್ಲವು ಬಜೆಟ್ನಲ್ಲಿದೆ. ಆದರೂ ಅದರ ಮುಖ್ಯ ಉದ್ದೇಶ ಮಾತ್ರ ಬಂಡವಾಳ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವುದೇ ಆಗಿದೆ. ಆದರೆ ವಾಸ್ತವದಲ್ಲಿ ದೇಶದ ಆರ್ಥಿಕತೆಯ ಸ್ಥಿತಿಗತಿಗಳೂ ಚೆನ್ನಾಗಿಲ್ಲ. ಜನರ ಪರಿಸ್ಥಿತಿಗಳೂ ಚೆನ್ನಾಗಿಲ್ಲ.
ಕೃಪೆ: Economic and Political Weekly