ಹೀಗೊಂದು ಅಂಬೇಡ್ಕರರ ಕನಸಿನ ಮಾದರಿ ಹಳ್ಳಿ...
ಅದೊಂದು ಹಳ್ಳಿ, ಅದರಲ್ಲೂ ಆ ಹಳ್ಳಿ ಬಾಬಾಸಾಹೇಬ್ ಅಂಬೇಡ್ಕರರ ಪರಿಕಲ್ಪನೆಯ ಹಳ್ಳಿ. ಆ ಹಳ್ಳಿಯಲ್ಲಿ ಯಾರೂ ಯಾರನ್ನು ಶಾಲೆಯಿಂದ ಹೊರಗಿಟ್ಟಿಲ್ಲ, ದೇವಸ್ಥಾನದಿಂದ ಆಚೆ ಇಟ್ಟಿಲ್ಲ, ನಲ್ಲಿಯಲ್ಲಿ ನೀರು ತೆಗೆದುಕೊಳ್ಳುವಾಗ ಯಾರೂ ಯಾರನ್ನು ನೋಡಿ ಮಂಡಿಗಂಟ ಸೀರೆ ಎತ್ತಿಕೊಳ್ಳುವುದಿಲ್ಲ. ಯಾರೂ ಯಾರನ್ನೂ ಸ್ವಾಮಿ, ಬುದ್ಧ್ದೀ, ಅಪ್ಪೋ, ಅಯ್ಯೋ, ಅಮ್ಮೋ, ಅವ್ವೋ... ಎಂದು ಸಂಬೋಧಿಸುವುದಿಲ್ಲ. ಎಲ್ಲರೂ ಇಲ್ಲಿ ಮಾವ, ಅಣ್ಣ, ಅಕ್ಕ, ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕವ್ವ, ದೊಡ್ಡವ್ವ... ಅನ್ನುವವರೇ. ಶಾಲೆಯ ಕಪ್ಪು ಹಲಗೆಯನ್ನು ಎಲ್ಲಾ ನೇರ ಮುಟ್ಟುವವರೇ. ದೇವಸ್ಥಾನದ ಗರ್ಭಗುಡಿಯನ್ನು ನೇರ ಪ್ರವೇಶಿಸಿ ದೇವರ ಮುಟ್ಟುವವರೇ! ಎಲ್ಲಾ ಮನೆಯವರ ನೀರನ್ನು ಒಬ್ಬರೇ ತುಂಬಿಸಿ ಅವರವರ ಮನೆಗಳಿಗೆ ತಲುಪಿಸುವವರೇ! ಹೌದು, ಇದು ಬಾಬಾಸಾಹೇಬ್ ಅಂಬೇಡ್ಕರರ ಕಲ್ಪನೆಯ ಹಳ್ಳಿ. ಬರೀ ಕಲ್ಪನೆಯಲ್ಲ ವಾಸ್ತವದಲ್ಲಿ ಅಸ್ತಿತ್ವದಲ್ಲಿರುವ ಹಳ್ಳಿ. ಆ ಹಳ್ಳಿ ಬೇರಾವುದೂ ಅಲ್ಲ, ಸ್ವತಃ ನಮ್ಮ ತಾಯಿ ದೇವಾಜಮ್ಮನವರ, ನಾನು ಹುಟ್ಟಿ ಬೆಳೆದ, ನನ್ನ ಬಾಲ್ಯದ, ನನ್ನ ವೈಚಾರಿಕ ಅಧ್ಯಯನದ ಮೊದಲ ಶಾಲೆಯಾಗಿದ್ದ ಹಳ್ಳಿ, ಚಾಮರಾಜನಗರದಿಂದ ಹತ್ತು ಕಿ.ಮೀ ದೂರದಲ್ಲಿರುವ ಸಿದ್ದಯ್ಯನಪುರ.
ಯಾಕೆ ಈ ಹಳ್ಳಿಗೆ ಇಷ್ಟೊಂದು ವಿಶೇಷಣ? ಅದರಲ್ಲೂ ಬಾಬಾಸಾಹೇಬರ ಕಲ್ಪನೆಯ ವಿಶೇಷಣ? ಯಾಕೆಂದರೆ ಅಲ್ಲಿ ಶೋಷಿತ ಸಮುದಾಯದ ಒಂದು ಜನಾಂಗ ಬಿಟ್ಟರೆ ಬೇರಾವುದೇ ಜಾತಿ ಇಲ್ಲ. ಬೇರಾವ ಜಾತಿ ಇಲ್ಲದ ಕಾರಣಕ್ಕೆ ಅವರಿಗೆ ಅಸ್ಪಶ್ಯತೆಯ ಕಿಂಚಿತ್ ಅನುಭವ ಇಲ್ಲ! ಎಪ್ಪತ್ತು ವರ್ಷಗಳ ಹಿಂದೆ ಚಾಮರಾಜನಗರ ರಾಮಸಮುದ್ರದ ಶೋಷಿತ ಸಮುದಾಯದ ಯಜಮಾನರೊಬ್ಬರು ತಮ್ಮ ಬೀದಿಯಲ್ಲಿ ಹಾದು ಹೋಗುತ್ತಿದ್ದ ಅಂದಿನ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್‌ರನ್ನು ‘‘ನಮಗೆ ಜಮೀನು ಬೇಕು’’ ಎಂದು ಬೇಡಿಕೆ ಇಟ್ಟಾಗ ಮನವಿ ಸ್ವೀಕರಿಸಿದ ಮಹಾರಾಜ ಜಯಚಾಮರಾಜ ಒಡೆಯರ್ ಸ್ಥಳದಲ್ಲೇ ಒಂದು ಸಾವಿರ ಎಕರೆ ಭೂಮಿ ಮಂಜೂರು ಮಾಡಿದರು. ಹಾಗೆ ಹುಟ್ಟಿಕೊಂಡ ಹಳ್ಳಿಯೇ ಸಿದ್ದಯ್ಯನಪುರ.
ವೈಯಕ್ತಿಕವಾಗಿ ನನಗೇ ತಿಳಿದಂತೆ ನಮ್ಮ ತಾತ ಕಲ್ಮಾದಯ್ಯ ರಾಮ ಸಮುದ್ರದಿಂದ ಗಾಡಿ ಕಟ್ಟಿಕೊಂಡು ಹೋಗಿ ಅಲ್ಲಿಯ ಜಮೀನು ತರಿದು ತನ್ನ ಗದ್ದೆ ಮಾಡಿಕೊಂಡರು. ಆನೆ, ಹುಲಿ, ಚಿರತೆ ಇದ್ದ ಆ ಪ್ರದೇಶವನ್ನು ಶೋಷಿತ ಸಮುದಾಯವು ಕುಟುಂಬಕ್ಕೆ ನಾಲ್ಕು ಎಕರೆಯಂತೆ ಜಮೀನು ತರಿದು ಶುಚಿ ಗೊಳಿಸಿ ಸಾಗುವಳಿ ಮಾಡಲಾರಂಭಿಸಿತು. ಮಾಜಿ ರಾಜ್ಯಪಾಲ ಬಿ.ರಾಚಯ್ಯನವರು ಕಂದಾಯ ಸಚಿವರಾಗಿದ್ದ ಸಮಯದಲ್ಲಿ ಇಲ್ಲಿ ಚಿಕ್ಕಹೊಳೆ ಎಂಬ ಅಣೆಕಟ್ಟು ಕಟ್ಟಿ ಇಡೀ ಸಿದ್ದಯ್ಯನಪುರದ ಶೋಷಿತ ಸಮುದಾಯಗಳ ಜಮೀನಿಗೆ ನೀರು ಒದಗಿಸಿದರು. ರಾಚಯ್ಯನವರ ಶ್ರಮದಿಂದ ಸಂಪೂರ್ಣ ಒಂದೇ ಶೋಷಿತ ಜಾತಿ ಇರುವ ಆ ಊರಿನಲ್ಲಿ ಇಂದು ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಜಮೀನಿದೆ. ಸುಸ್ಥಿತಿಯ ಮನೆಗಳಿವೆ. ನಿಯಮಿತ ಆದಾಯವಿದೆ. ಬೇರೆ ಯಾವುದೇ ಜಾತಿ ಅಲ್ಲಿಲ್ಲದ್ದರಿಂದ ಅವರದೇ ಹೊಟೇಲ್‌ಗಳು, ಅಂಗಡಿ ಮುಂಗಟ್ಟುಗಳು... ಹೀಗೆ ವ್ಯಾಪಾರ ವಹಿವಾಟು ವ್ಯವಸ್ಥೆಯ ಸ್ವಾವಲಂಬನೆ ಇದೆ. ಸಂಪೂರ್ಣ ಶೇ.100 ಸಾಕ್ಷರತೆ ಇದೆ. ಅಲ್ಲಿಯ ಆ ಕಾಲದ ಗುಡಿಸಲುಗಳಲ್ಲಿ ನನ್ನ ಸೋದರ ಮಾವ ಆರ್.ಎಂ.ಮಹಾದೇವಪ್ಪರವರು ತರುತ್ತಿದ್ದ ಸುಧಾ, ಮಯೂರ, ಫ್ರಂಟ್ ಲೈನ್, ದಿ ಹಿಂದೂ ಪತ್ರಿಕೆಗಳನ್ನು ನನ್ನನ್ನೂ ಸೇರಿ ಬಾಲ್ಯದಲ್ಲೇ ಓದಿದ ವಿದ್ಯಾವಂತರಿದ್ದಾರೆ.
ಇಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಕಲ್ಪನೆ, ಯಾಕೆಂದರೆ 1942ರಲ್ಲಿ ಬಾಬಾಸಾಹೇಬರು ಸಿದ್ದಯ್ಯನಪುರದ ಈ ಮಾದರಿಯ ಸಂಪೂರ್ಣ ಶೋಷಿತರೇ ಇರುವ ಪ್ರತ್ಯೇಕ ಹಳ್ಳಿಗಳನ್ನು ನಮಗೆ ಕೊಡಬೇಕೆಂದು ಬ್ರಿಟಿಷರಲ್ಲಿ ಮನವಿ ಕೊಡುತ್ತಾರೆ. ಆದರೆ ಅದು ಈಡೇರಲಿಲ್ಲ. ಅಷ್ಟೊತ್ತಿಗಾಗಲೇ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಸಮಯ ಬಂದಿರುತ್ತದೆ. ಅಂದಹಾಗೆ ಬಾಬಾಸಾಹೇಬರು ಯಾಕೆ ಹಾಗೆ ಶೋಷಿತರಿಗೆ ಪ್ರತ್ಯೇಕ ಹಳ್ಳಿ ಕೇಳಿದರೆಂದರೆ ಈಗ ಸಿದ್ದಯ್ಯನಪುರದಲ್ಲಿ ಯಾವ ವಾತಾವರಣವಿದೆಯೋ ಅಂತಹ ವಾತಾವರಣದಲ್ಲಿ ತನ್ನ ಜನ ಅಸ್ಪಶ್ಯತೆ ಮುಕ್ತ ವಾತಾವರಣದಲ್ಲಿ ಬದುಕಲಿ ಎಂಬುದಾಗಿತ್ತು. ಯಾಕೆಂದರೆ ಶೋಷಿತರ ಸಮಸ್ಯೆ ವಿದ್ಯೆ ಇಲ್ಲದಿರುವುದರಲ್ಲಲ್ಲ, ಆಸ್ತಿ ಇಲ್ಲದಿರುವುದರಲ್ಲಲ್ಲ, ಅಂತಸ್ತು ಇಲ್ಲದಿರುವುದರಲ್ಲಲ್ಲ, ಅದಕ್ಕೆಲ್ಲ ತಡೆಯಾಗಿರುವ ಅಸ್ಪಶ್ಯತೆ ಇರುವಲ್ಲಿ! ಅಂದಹಾಗೆ ಅಸ್ಪಶ್ಯತೆಯ ಅಂತಹ ವಾತಾವರಣವೇ ಇಲ್ಲವೆಂದರೆ? ಮೇಲು ಕೀಳಿನ ಅಂತಹ ತಾರತಮ್ಯದ, ‘‘ಮುಟ್ಟಬೇಡ... ದೂರ ಹೋಗು...’’ ಎಂಬಂತಹ ಸಂದರ್ಭಗಳೇ ಇಲ್ಲವೆಂದರೆ? ಅಂತಹ ವಾತಾವರಣದಲ್ಲಿ ವ್ಯಕ್ತಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಪರವಾಗಿಲ್ಲ ಸ್ವಚ್ಛಂದ ಗಾಳಿ ಕುಡಿದು ನೆಮ್ಮದಿಯಾಗಿ ನಿದ್ದೆಯಾದರೂ ಮಾಡುತ್ತಾನೆ. ಹಾಗಂತ ಸಿದ್ದಯ್ಯನಪುರದಲ್ಲಿ ಹೊಟ್ಟೆಗೆ ಹಿಟ್ಟಿಲ್ಲ ಎಂಬುದಲ್ಲ. ಅವರ ಹೊಟ್ಟೆಗಳಿಗೇನು, ಅಕ್ಕ ಪಕ್ಕದ ಊರುಗಳಿಗೆ ಕೊಡುವಷ್ಟು ಈಗ ಅವರ ಬಳಿ ಇದೆ.
ಬಾಲ್ಯದಲ್ಲಿ ಇದೇ ಸಿದ್ದಯ್ಯನಪುರದಲ್ಲಿ ಬೆಳೆದ ಅನ್ನವನ್ನೇ ನಾವು ಉಣ್ಣುತ್ತಿದ್ದುದು. ಆ ಕಾಲದಲ್ಲೇ ಪ್ರತಿಯೊಬ್ಬರ ಮನೆಯಲ್ಲೂ ಟಿವಿಎಸ್‌ನಂತಹ ದ್ವಿಚಕ್ರ ವಾಹನವಿತ್ತು! ಅಷ್ಟೊಂದು ಸ್ವಾವಲಂಬಿಗಳು ಅಸ್ಪಶ್ಯತೆ ಮುಕ್ತ ವಾತಾವರಣದಲ್ಲಿ ಬದುಕುತ್ತಿರುವ ಬಾಬಾಸಾಹೇಬರ ಕಲ್ಪನೆಯ ಹಳ್ಳಿಯಲ್ಲಿ ಬದುಕುತ್ತಿರುವ ಸಿದ್ದಯ್ಯನಪುರದ ನನ್ನ ಜನ. ಅಂದಹಾಗೆ ಈಗ ಸಿದ್ದಯ್ಯನಪುರದ ಸುದ್ದಿ ಯಾಕೆ ಎಂದಿರಾ? ಮೊನ್ನೆ ಅಂದರೆ ಕಳೆದ ಸೋಮವಾರ ಜನವರಿ 29ರಂದು ಆ ಊರಿಗೆ ಹೋಗಿದ್ದೆ. ಬಾಬಾಸಾಹೇಬರ ಸುಂದರ ಪುತ್ಥಳಿ ಅನಾವರಣದ ಕಾರ್ಯಕ್ರಮದ ನಿಮಿತ್ತ ಪ್ರೇಕ್ಷಕನಾಗಿ ಎಲ್ಲವನ್ನೂ ಗಮನಿಸಿದೆ. ಹಳೆಯದರ ಜೊತೆಗೆ ಬಾಲ್ಯದಲ್ಲಿ ನಮ್ಮ ದೊಡ್ಡಪ್ಪನವರ ಜೊತೆಗೆ ಹೊಟೇಲ್‌ಗಳಿಗೆ ಹೋದಾಗ ಹಿರಿಯರು ನಮ್ಮನ್ನು ಡ್ಯಾನ್ಸ್ ಮಾಡಿ ಎನ್ನುತ್ತಿದ್ದದ್ದು, ಹಾಡು ಹೇಳಿ ಎನ್ನುತ್ತಿದ್ದದ್ದು, ಹಾಡು ಹೇಳಿದ ಮೇಲೆ ಹೊಟೇಲ್‌ನ ನಮ್ಮ ಮಾವಂದಿರು, ಮಕ್ಕಳಾದ ನಮಗೆ ಉಚಿತವಾಗಿ ದೋಸೆ ಕೊಡುತ್ತಿದ್ದದ್ದು, ಅದನ್ನು ಚಪ್ಪರಿಸಿ ತಿಂದು, ಕಾಡ ನಡುವಿನ ಗದ್ದೆಗೆ ವಿಹಾರ ಮಾಡಲು ಹೋಗುತ್ತಿದ್ದದ್ದು, ಸಂಜೆವರೆಗೂ ನದಿಯ ನೀರಲ್ಲಿ ಈಜುತ್ತಾ, ಅಜ್ಜಿ ತಂದ ಮುದ್ದೆ ಸವಿಯುತ್ತ, ಕಾಡ ಹಣ್ಣುಗಳ ತಿನ್ನುತ್ತ... ನಿಜಕ್ಕೂ ಬದುಕು ಅಂದರೆ ಏನು ಎಂಬುದನ್ನು ಸಿದ್ದಯ್ಯನಪುರ ತಿಳಿಸಿಕೊಟ್ಟಿದೆ.
ಈಗಲೂ ಅಷ್ಟೇ ಇಡೀ ಗ್ರಾಮಸ್ಥರೇ ರೂ. 25 ಲಕ್ಷ ತಾವೇ ಹಾಕಿ ಗ್ರಾಮದ ಮಧ್ಯೆ ಸರ್ಕಲ್‌ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರ ಸುಂದರ ಕಂಚಿನ ಪ್ರತಿಮೆ ನಿರ್ಮಿಸಿದ್ದಾರೆ. ಇಡೀ ಊರಿಗೆ ಊರೇ ನಿಂತು ಬಂದವರಿಗೆಲ್ಲ ಊಟದ ವ್ಯವಸ್ಥೆ ಮಾಡಿ ಮಾವ, ದೊಡ್ಡಪ್ಪ, ಚಿಕ್ಕಪ್ಪಎಂದು ಸಂಭ್ರಮಿಸಿದ್ದಾರೆ. ನಾನು ಅವರ ಸಂಭ್ರಮದಲ್ಲಿ ಜೊತೆಯಾದೆ ಹಳೆಯ ನೆನಪುಗಳ ಕಣ್ಣ ತುಂಬಿಕೊಳ್ಳುತ್ತ... ಸಿದ್ದಯ್ಯನಪುರದಂತಹ ಬಾಬಾಸಾಹೇಬರು ಕನಸಿದ ಪ್ರತ್ಯೇಕ ಹಳ್ಳಿಯಂತಹ ಗ್ರಾಮಗಳು ದೇಶದೆಲ್ಲೆಡೆ ತಲೆ ಎತ್ತಲಿ.. ನನ್ನ ಜನ ಅಸ್ಪಶ್ಯತೆ ಮುಕ್ತ ವಾತಾವರಣದಲ್ಲಿ ಬದುಕಲಿ ಎಂದು ಮನದಲ್ಲೇ ಮೆಲುಕು ಹಾಕುತ್ತ...