ಒಂದೇ ದೇವರು ಸಾಕು
ಆರು ದೇವರ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ,
ಮೂರು ದೇವರ ನಿಮ್ಮ ಮೂಗಿನಲ್ಲಿ ಮುರಿದುಕೊಳ್ಳಿ,
ಗುರು ತೋರಿದ್ದು ಒಂದೇ ದೇವರು ಸಾಕು
ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.
-ಮೋಳಿಗೆ ಮಹಾದೇವಿ
ಬಸವಣ್ಣನವರ ಕೀರ್ತಿ ಕಾಶ್ಮೀರದ ವರೆಗೂ ಹಬ್ಬಿತ್ತು. ರಾಜ ಮಹಾದೇವ ಭೂಪಾಲ ಮತ್ತು ರಾಣಿ ಗಂಗಾದೇವಿ ಅವರು ಕಾಶ್ಮೀರದಲ್ಲಿನ ತಮ್ಮ ರಾಜಸತ್ತೆಯನ್ನು ಬಿಟ್ಟು ಬಸವಣ್ಣನವರ ಅನುಯಾಯಿಗಳಾಗಿ ಕಲ್ಯಾಣಕ್ಕೆ ಬಂದರು. ಬಸವಣ್ಣನವರ ಕಾಯಕ ಸಿದ್ಧಾಂತದ ಪ್ರಕಾರ ಮೋಳಿಗೆ (ಕಟ್ಟಿಗೆ) ಮಾರುವ ಕಾಯಕ ಕೈಗೊಂಡು, ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಿ ಎಂದು ಪ್ರಸಿದ್ಧರಾದರು.
ಬಸವಣ್ಣನವರು ಮನವರಿಕೆ ಮಾಡಿಕೊಡುವವರೆಗೂ ಭಾರತದಲ್ಲಿ ಹುಟ್ಟಿದ ಧರ್ಮಗಳಲ್ಲಿ ಏಕದೇವೋಪಾಸನೆಯ ಪರಿಕಲ್ಪನೆ ಇರಲಿಲ್ಲ. ಸನಾತನ ಧರ್ಮ ಎಂದು ಕರೆಯಿಸಿಕೊಳ್ಳುವ ವೈದಿಕ ಧರ್ಮ 33 ಕೋಟಿ ದೇವತೆಗಳ ಬಗ್ಗೆ ನಂಬಿಕೆ ಹುಟ್ಟಿಸಿದೆ. ಶೈವಧರ್ಮದಲ್ಲಿ ಶಿವನಿಗೆ ಗಂಗೆ ಮತ್ತು ಪಾರ್ವತಿ ಎಂಬ ಹೆಂಡಂದಿರಿದ್ದಾರೆ. ಗಣಪತಿ ಮತ್ತು ಷಣ್ಮುಖ ಎಂಬ ಮಕ್ಕಳೂ ಇದ್ದಾರೆ. ಈ ದೇವ ದೇವತೆಗಳಲ್ಲದೆ ವೀರಭದ್ರರಂಥ ಇತರ ದೇವರುಗಳೂ ಇದ್ದಾರೆ. ಈ ಎಲ್ಲ ದೇವ ದೇವತೆಗಳ ಮೂರ್ತಿಪೂಜೆಯೂ ನಡೆಯುತ್ತದೆ. ವೈದಿಕ ಮತ್ತು ಶೈವ ಧರ್ಮಗಳ ನಂತರ ಬಂದ ಜೈನ ಹಾಗೂ ಬೌದ್ಧ ಧರ್ಮಗಳು ಕೂಡ ಏಕದೇವೋಪಾಸನೆಯ ಕುರಿತು ಹೇಳಲಿಲ್ಲ. ಮಾನವರು ಇಂದ್ರಿಯಗಳನ್ನು ಜಯಸಿ ಜಿನ ಆಗುವ ಮೂಲಕ ದೇವರೇ ಆಗುವರು ಎಂದು ಜೈನ ಧರ್ಮ ಹೇಳುತ್ತದೆ. ದೇವರ ಬಗ್ಗೆ ಬುದ್ಧ ಮೌನ ತಾಳಿದ ಕಾರಣ ಬೌದ್ಧ ಧರ್ಮವು ಅಜ್ಞೇಯವಾದಿ ಧರ್ಮವಾಗಿದೆ. ಅಂದರೆ ಬೌದ್ಧ ಧರ್ಮ ದೇವರ ಬಗ್ಗೆ ಚರ್ಚೆ ಮಾಡುವುದಿಲ್ಲ.
ಆದರೆ 12ನೇ ಶತಮಾನದ ಬಸವಣ್ಣನವರು ಏಕದೇವೋಪಾಸನೆಯ ಕುರಿತು ಈ ದೇಶದಲ್ಲಿ ಮೊದಲ ಬಾರಿಗೆ ಹೇಳಿದ್ದಾರೆ. ಆದ್ದರಿಂದ ಲಿಂಗಾಯತವು ದೇಶದಲ್ಲಿ ಹುಟ್ಟಿದ ಮೊದಲ ಏಕದೇವೋಪಾಸನಾ ಧರ್ಮವಾಗಿದೆ. ಅರಿವಿನ ಕುರುಹು ಆದಂಥ ನಿರಾಕಾರವಾದ ಇಷ್ಟಲಿಂಗವನ್ನು ಬಸವಣ್ಣನವರು ಸೃಷ್ಟಿಸಿ ಏಕದೇವೋಪಾಸನೆಯ ಮಹತ್ವವನ್ನು ತಿಳಿಸಿದರು. ದೇವರು ದೇಹದೊಳಗೇ ಇದ್ದಾನೆ ಎಂದು ಹೇಳಿ, ಆತನ ಜೊತೆಗಿನ ಅನುಸಂಧಾನಕ್ಕಾಗಿ ಇಷ್ಟಲಿಂಗ ಕೊಟ್ಟರು. ‘ದೇವನೊಬ್ಬ ನಾಮ ಹಲವು’ ಎಂದು ಸಾರಿದರು. ಒಬ್ಬನೇ ದೇವರು, ಒಂದೇ ಜಗತ್ತು ಮತ್ತು ಒಂದೇ ಮಾನವ ಕುಲ ಎಂಬ ಅರಿವು ಮೂಡಿಸಿದರು. ಬಸವಣ್ಣನವರ ಶಿವನಿಗೆ ಹೆಂಡಿರು ಮಕ್ಕಳಿಲ್ಲ. ಯಾವ ಆಕಾರವೂ ಇಲ್ಲ. ಶಿವನು ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣ ಎಂದು ಬಸವಣ್ಣನವರು ತಿಳಿಸಿದ್ದಾರೆ. ಆತನ ಬಳಿ ಹೋಗಲಿಕ್ಕಾಗದು, ಆತನನ್ನು ನೋಡಲಿಕ್ಕಾಗದು, ಯಾರ ಜೊತೆಗೂ ಆತನನ್ನು ಹೋಲಿಸಲಿಕ್ಕಾಗದು ಮತ್ತು ಆತನ ಉದ್ದಗಲಗಳನ್ನು ಅಳೆಯಲಿಕ್ಕಾಗದು. ಇಂಥ ನಿರಾಕಾರ ಶಿವನನ್ನು ಶರಣ ಶರಣೆಯರು ಆರಾಧಿಸಿದರು. ತಮ್ಮ ಅಂತಃಸಾಕ್ಷಿಯಲ್ಲೇ ದೇವರನ್ನು ಕಂಡರು. ಅಂತೆಯೇ ಬಸವ ಗುರು ತೋರಿದ ಒಂದೇ ದೇವರು ಸಾಕು ಎಂದು ಮೋಳಿಗೆ ಮಹಾದೇವಿ ಹೇಳಿದ್ದಾಳೆ.