ಹನೂರು; ಕಾರು - ಆಟೋ ಢಿಕ್ಕಿ : ಮೂವರಿಗೆ ಗಾಯ
ಹನೂರು,ಫೆ.10: ಸಮೀಪದ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯ ಬಳಿ ಶನಿವಾರ ಕಾರು ಹಾಗೂ ಆಟೋ ನಡುವೆ ಢಿಕ್ಕಿ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಕೊಳ್ಳೇಗಾಲ ಸಮೀಪದ ಮಧುವನಹಳ್ಳಿ ಗ್ರಾಮದ ಆಟೋ ಚಾಲಕ ನಿಂಗರಾಜು (40) ಹಾಗೂ ಕನಕಪುರದ ಪ್ರದೀಪ್ (26), ಕನ್ನಿಕಗೌಡ (12) ಎಂಬವರು ಗಾಯಗೊಂಡಿದ್ದಾರೆ.
ಕನಕಪುರದ ಪ್ರದೀಪ್ ಎಂಬವರು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರೊಡನೆ ಶನಿವಾರ ಮಲೆಮಹದೇಶ್ವರ ಬೆಟ್ಟದಲ್ಲಿ ಪೂಜೆ ಮುಗಿಸಿ ಕೊಳ್ಳೇಗಾಲದ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಅದೇ ವೇಳೆ ಮಧುವನಹಳ್ಳಿ ಗ್ರಾಮದ ನಿಂಗರಾಜು ಎಂಬವರು ಕಾರ್ಯನಿಮಿತ್ತ ಹನೂರಿಗೆ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆಯ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯ ಬಳಿ ಢಿಕ್ಕಿ ಸಂಭವಿಸಿದೆ. ಪರಿಣಾಮ ಆಟೋ ಚಾಲಕ ನಿಂಗರಾಜು ಹಾಗೂ ಕಾರಿನಲಿದ್ದ ಇಬ್ಬರಿಗೆ ಗಾಯವಾಗಿದೆ.
ಪ್ರದೀಪ್ ಹಾಗೂ ಕನ್ನಿಕಗೌಡ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಊರಿಗೆ ತೆರಳಿದ್ದರೆ ಆಟೋ ಚಾಲಕ ನಿಂಗರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಸಂಬಂಧ ಹನೂರು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.