ಕಂಪ್ಯೂಟರ್ ತಂತ್ರಜ್ಞಾನವನ್ನು ಕನ್ನಡಕ್ಕೆ ಬಗ್ಗಿಸಿ ಒಗ್ಗಿಸಿದ ಕಥೆ
ಡಿಜಿಟಲ್ ಕನ್ನಡ
ಕನ್ನಡವನ್ನು ಕಂಪ್ಯೂಟರಿಗೆ ಅಳವಡಿಸುವ ಪ್ರಯತ್ನಗಳಲ್ಲಿದ್ದಾಗ ಹಲವು ತಂತ್ರಜ್ಞಾನಗಳೇ ಹಳತಾಗಿ ಹೋದವು. ಹೊಸ ತಂತ್ರಜ್ಞಾನಗಳು ಕನ್ನಡಕ್ಕೆ ಪೂರಕವಾಗಿದ್ದ ಕಾರಣ ಹಲವು ಸಮಸ್ಯೆಗಳು ತಾವಾಗಿಯೇ ಪರಿಹಾರಗೊಂಡವು. ಉದಾಹರಣೆಗೆ, ಡಾಸ್ ಒ.ಎಸ್. ಕನ್ನಡದ ಕಮಾಂಡ್‌ಗಳನ್ನು ಪಾಲಿಸುವಂತೆ ಮಾಡುವಲ್ಲಿನ ಸಂಶೋಧನಾತ್ಮಕ ಯೋಜನೆ ಜಾರಿಗೊಳ್ಳುವಷ್ಟರಲ್ಲಿ ‘ಡಾಸ್ ಹಿನ್ನೆಲೆಗೆ ಸರಿದುಹೋಗಿ ‘ವಿಂಡೋಸ್ ’ಮುನ್ನೆಲೆಗೆ ಬಂತು. ಕಂಪ್ಯೂಟರಿನ ಅಕ್ಷರ ಸಂಕೇತ ವ್ಯವಸ್ಥೆಯಲ್ಲಿ (ಕ್ಯಾರೆಕ್ಟರ್ ಎನ್‌ಕೋಡಿಂಗ್ ಸಿಸ್ಟಂ), ಲಭ್ಯವಿದ್ದ 256 ಅಕ್ಷರ ಸ್ಥಾನಗಳು ಇಂಗ್ಲಿಷ್ ಮತ್ತು ಇತರೆ ಯೂರೋಪಿಯನ್ ಭಾಷೆಗಳ ಪಾಲಾಗಿಹೋಗಿದ್ದವು. ಕನ್ನಡಕ್ಕೆ ಅಕ್ಷರಸ್ಥಾನಗಳು ಖಾಲಿ ಇರಲಿಲ್ಲ. ಇಂಗ್ಲಿಷ್‌ನ ಅಕ್ಷರಗಳಿಗೆ ಅಡ್ಡಿಪಡಿಸದೆ ಯೂರೋಪಿಯನ್ ಭಾಷೆಗಳ ಅಕ್ಷರಸ್ಥಾನಗಳಲ್ಲಿ ಕನ್ನಡದ ಅಕ್ಷರಭಾಗಗಳನ್ನು ಅಳವಡಿಸಿಕೊಂಡು ಕಂಪ್ಯೂಟರಿನಲ್ಲಿ ಕನ್ನಡಕ್ಕೂ ಸಹ ಅವಕಾಶವನ್ನು ಮಾಡಿಕೊಳ್ಳಲಾಯಿತು. ಹೀಗೆ, ಯಾರದೋ ಹೆದ್ದಾರಿಯಲ್ಲಿ ಕನ್ನಡದ ವಾಹನವನ್ನು ಚಲಾಯಿಸುವುದಕ್ಕೆ ಸ್ಥಳೀಯ ಕಂಪ್ಯೂಟರ್ ತಂತ್ರಜ್ಞರು ಅನುವುಮಾಡಿಕೊಟ್ಟರು. ವಿಂಡೋಸ್‌ನಲ್ಲಿ ಅಕ್ಷರಗಳನ್ನು ಕೇವಲ ಅಕ್ಷರಗಳನ್ನಾಗಿ ಗುರುತಿಸದೇ ಅವುಗಳನ್ನು ಚಿತ್ರರೂಪದಲ್ಲಿ ಗುರುತಿಸುವುದನ್ನು ಆರಂಭಿಸಿದ ಮೇಲೆ, ಆ ಚಿತ್ರಗಳು ಇಂಗ್ಲಿಷ್‌ನದ್ದೇ ಆಗಬೇಕಾಗಿಲ್ಲ, ಅದು ಕನ್ನಡದ್ದೂ ಸಹ ಆಗಬಹುದು ಎಂಬ ಪರಿಕಲ್ಪನೆ ಮೂಡಿ ಫಾಂಟುಗಳು ಎಂದು ಕರೆಯಲಾಗುವ ಚಿತ್ರರೂಪೀ ಅಕ್ಷರ ಸಮೂಹಗಳು ರೂಪುಗೊಂಡವು. ಕನ್ನಡದ ಎಲ್ಲ ಮೂಲಾಕ್ಷರಗಳು, ಗುಣಿತಾಕ್ಷರಗಳು ಮತ್ತು ಒತ್ತಕ್ಷರಗಳು ಸೇರಿದರೆ 500ಕ್ಕೂ ಹೆಚ್ಚಿನ ಅಕ್ಷರಸ್ಥಾನಗಳ ಅಗತ್ಯವಿತ್ತು. ಆದರೆ ಇದ್ದದ್ದೇ 256 ಅಕ್ಷರಸ್ಥಾನಗಳು. ಹಿಂದೆ ಲೆಟರ್‌ಪ್ರೆಸ್ ಎಂದು ಕರೆಯಲಾಗುವ ಮುದ್ರಣ ತಂತ್ರಜ್ಞಾನದಲ್ಲಿ ಸೀಸದಲ್ಲಿ ಎರಕ ಹೊಯ್ದ ಅಕ್ಷರಭಾಗಗಳನ್ನು ಜೋಡಿಸಿ ಪೂರ್ಣಾಕ್ಷರಗಳನ್ನಾಗಿ ಸಂಯೋಜಿಸಲಾಗುತ್ತಿತ್ತು. ಇದೇ ಕಾರ್ಯತಂತ್ರವನ್ನು ಕಂಪ್ಯೂಟರ್‌ನಲ್ಲಿಯೂ ಅಳವಡಿಸಿ ಅಕ್ಷರಸ್ಥಾನಗಳ ಸಮಸ್ಯೆಯನ್ನು ಪರಿಹರಿಸಲಾಯಿತು. ಸುಮಾರು 160 ಸಂಖ್ಯೆಯ ಅಕ್ಷರಭಾಗಗಳ ಒಂದು ಸೆಟ್‌ನ್ನು (ಗ್ಲಿಫ್ ಸೆಟ್) ರೂಪಿಸಿಕೊಂಡು ಕೀಲಿಯೊಂದನ್ನು ಒತ್ತಿದಾಗ ಅಕ್ಷರಭಾಗಗಳು ಕೂಡಿಕೊಂಡು ಪೂರ್ಣಾಕ್ಷರಗಳಾಗಿ ಪರದೆಯಲ್ಲಿ ಮೂಡುವಂತೆ (ರೆಂಡರಿಂಗ್ ಸಿಸ್ಟಂ) ವ್ಯವಸ್ಥೆಯೊಂದನ್ನು ರೂಪಿಸಲಾಯಿತು.
ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ಇಂಗ್ಲಿಷ್ ಲಿಪಿಯ ನೋಟವನ್ನು, ಅಂದರೆ, ಮಾನಿಟರ್‌ನ ಮೇಲಿನ ಪ್ರದರ್ಶನ ರೂಪವನ್ನು ಬದಲಿಸಿಕೊಳ್ಳಲು ಅವಕಾಶ ನೀಡಿದ್ದರು. ಇಂಗ್ಲಿಷ್‌ನ ಸುಂದರ ಮತ್ತು ವಿವಿಧ ರೂಪದ (ಫಾಂಟ್‌ಫೇಸ್), ವಿನ್ಯಾಸದ ಅಕ್ಷರಗಳನ್ನು ಪರದೆಯಲ್ಲಿ ನೋಡುವುದು ಮತ್ತು ಅದೇ ರೀತಿಯಲ್ಲಿ ಮುದ್ರಿಸಿಕೊಳ್ಳುವುದು ಸಾಧ್ಯವಿತ್ತು. ಈ ಹೊಸ ‘ಫಾಂಟ್ ಪ್ರದರ್ಶನ ತಂತ್ರಜ್ಞಾನ’ವೇ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳಿಗೆ ವರದಾನವಾಯಿತು. ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ಡಿಸ್‌ಪ್ಲೇಗಾಗಿ ಎಲ್ಲೆಲ್ಲಿ ಾಂಟ್‌ಗಳನ್ನು ಬದಲಿಸಿಕೊಳ್ಳುವ ಅವಕಾಶ ನೀಡಿದ್ದರೋ ಅಲ್ಲೆಲ್ಲಾ, ಕನ್ನಡದ ಲಿಪಿಯನ್ನೂ ಸಹ ಮೂಡಿಸಬಹುದು ಎಂಬ ಉಪಾಯ ಹೊಳೆಯಿತು. ಈ ಸದವಕಾಶವನ್ನು ಬಳಸಿಕೊಂಡ ಸ್ಥಳೀಯ ತಂತ್ರಾಂಶ ತಯಾರಕರು ಕನ್ನಡದ ಉತ್ತಮ ಫಾಂಟುಗಳು ಮತ್ತು ಅವುಗಳನ್ನು ಪರದೆಯಲ್ಲಿ ಮೂಡಿಸಲು ಉತ್ತಮವಾದ ಕೀಲಿಮಣೆ ವಿನ್ಯಾಸಗಳನ್ನು ರೂಪಿಸಿ ನೀಡಿದರು. ಕನ್ನಡವೂ ಸಹ ಕಂಪ್ಯೂಟರಿನಲ್ಲಿ ತನ್ನ ಸ್ಥಾನಮಾನಗಳನ್ನು ಪಡೆಯಿತು.
ಆಗ ಕಂಪ್ಯೂಟರುಗಳನ್ನು ಹೆಚ್ಚಾಗಿ ಬಳಸುತ್ತಿದ್ದುದು ಮ್ಯಾನ್ಯುವಲ್ ಟೈಪ್‌ರೈಟರ್ ಬಳಸಿ ಅನುಭವವಿರುವ ಟೈಪಿಸ್ಟ್ ಗಳೇ. ಅವರ ಅನುಕೂಲಕ್ಕಾಗಿ ಕಂಪ್ಯೂಟರಿನ ಕೀಲಿಮಣೆ ವಿನ್ಯಾಸವನ್ನು ಮ್ಯಾನುವಲ್ ಟೈಪಿಂಗ್ ಯಂತ್ರದಲ್ಲಿ ಇದ್ದಂತೆಯೇ ರೂಪಿಸಲಾಗಿತ್ತು. ಈ ವಿನ್ಯಾಸದಲ್ಲಿ ‘ಯೋ’ ಎಂಬ ಅಕ್ಷರವನ್ನು ಟೈಪ್‌ಮಾಡಲು ಆರೇಳು ಕೀಲಿಗಳನ್ನು ಒತ್ತಬೇಕಾಗಿತ್ತು. ಕಾಲಕ್ರಮೇಣ, ಕಂಪ್ಯೂಟರ್ ಮ್ಯಾನುವಲ್ ಟೈಪ್‌ರೈಟರ್ ಅಲ್ಲ; ಟೈಪಿಸ್ಟ್‌ಗಳು ಮಾತ್ರವೇ ಅದನ್ನು ಬಳಸಬೇಕೆಂದಿಲ್ಲ; ಕಂಪ್ಯೂಟರ್ ಒಂದು ತರ್ಕಬದ್ಧ ವಿದ್ಯುನ್ಮಾನ ಯಂತ್ರವಾದ್ದರಿಂದ, ಇದರಲ್ಲಿ ಕನ್ನಡವನ್ನು ಅಷ್ಟೊಂದು ಕಷ್ಟಪಟ್ಟು ಟೈಪಿಸಬೇಕಿಲ್ಲ - ಎಂಬ ವಾದಗಳು ಮಂಡನೆಗೊಂಡವು. ಈ ವಾದಗಳಿಗೆ ಪುರಸ್ಕಾರ ದೊರೆತು ಹಲವು ಸರಳ ಕೀಲಿಮಣೆ ವಿನ್ಯಾಸಗಳು ಬಳಕೆಗೆ ಬಂದವು.
ಹಿಂದೆ ಇದ್ದ 8 ಬಿಟ್‌ಗಳ ‘ಕ್ಯಾರೆಕ್ಟರ್ ಎನ್‌ಕೋಡಿಂಗ್ ಸಿಸ್ಟಂ’ ಹಿನ್ನೆಲೆಗೆ ಸರಿದು ‘16 ಬಿಟ್’ಗಳ ಎನ್‌ಕೋಡಿಂಗ್ ಸಿಸ್ಟಂ ಜಾರಿಗೆ ಬಂದಾಗ 63 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಷರಸ್ಥಾನಗಳು ಲಭ್ಯವಾಯಿತು. ಇದರಿಂದ ಜಗತ್ತಿನ ಎಲ್ಲ ಭಾಷೆಗಳಿಗೆ ಕಂಪ್ಯೂಟರಿನಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾಯಿತು. ಇದ್ದ ಒಂದೇ ಹೆದ್ದಾರಿಯಲ್ಲಿ ಎಲ್ಲ ಭಾಷೆಗಳ ವಾಹನಗಳನ್ನು ಚಲಾಯಿಸುವ ಸಂಕಷ್ಟ ದೂರವಾಯಿತು. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಿಗೆ ಪ್ರತ್ಯೇಕವಾದ ಹೆದ್ದಾರಿಗಳು ರೂಪುಗೊಂಡು ಅಪಘಾತಗಳು ಇಲ್ಲವಾದವು.
ಕಾಲಕ್ರಮೇಣ ಹೆಚ್ಚಿನ ರೆಸೊಲ್ಯೂಷನ್ ಉಳ್ಳ ಕಂಪ್ಯೂಟರ್ ಮಾನಿಟರ್‌ಗಳು ಮಾರುಕಟ್ಟೆಗೆ ಬಂದವು. ಕಪ್ಪು-ಬಿಳುಪಿನ ಮಾನಿಟರ್‌ಗಳು ಹಿನ್ನೆಲೆಗೆ ಸರಿದವು. ಪಠ್ಯವನ್ನು ಬಣ್ಣ ಬಣ್ಣಗಳಲ್ಲಿ ಪ್ರದರ್ಶಿಸುವ ಕಲರ್ ಮಾನಿಟರ್‌ಗಳೂ ಸಹ ಬಳಕೆಗೆ ಬಂದವು. ಕನ್ನಡ ಪಠ್ಯದದಲ್ಲಿನ ಒತ್ತಕ್ಷರಗಳು ಕಾಣಿಸದ ಸಮಸ್ಯೆಗೆ ಪರಿಹಾರ ದೊರೆಯಿತು. ಅಕ್ಷರಗಳ ರೂಪ, ವಿನ್ಯಾಸ ಮತ್ತು ಗಾತ್ರಗಳನ್ನು ಹೆಚ್ಚಿಸಿಕೊಳ್ಳುವ ಸೌಲಭ್ಯಗಳನ್ನು ನೀಡುವ ಟ್ರೂಟೈಪ್ ಫಾಂಟ್ ತಂತ್ರಜ್ಞಾನದ ಅಳವಡಿಕೆಯಿಂದ, ಕನ್ನಡ ಪಠ್ಯವನ್ನು ಪರದೆಯ ಮೇಲೆ ಓದುವ ಕೆಲಸ ಸುಲಭವಾಯಿತು. 9 ಪಿನ್‌ಗಳ ಪ್ರಿಂಟರ್‌ಗಳ ಬದಲಾಗಿ 24 ಪಿನ್‌ಗಳ ಡಾಟ್‌ಮ್ಯಾಟ್ರಿಕ್ಸ್ ಪ್ರಿಂಟರ್‌ಗಳು ಬಂದವು. ಇಂಕ್‌ಜೆಟ್ ಮತ್ತು ಲೇಸರ್‌ಜೆಟ್ ಪ್ರಿಂಟರ್‌ಗಳು ಬಳಕೆಗೆ ಬಂದ ನಂತರ ಕನ್ನಡ ಪಠ್ಯಕ್ಕೆ, ಮುಖ್ಯವಾಗಿ ಒತ್ತಕ್ಷರಗಳಿಗೆ ದೃಶ್ಯಸ್ಪಷ್ಟತೆ ದೊರೆಯಿತು. ಮುದ್ರಣದಲ್ಲಿ ಮತ್ತು ಪ್ರದರ್ಶನದಲ್ಲಿ ಕನ್ನಡ ಪಠ್ಯಗಳು ಸುಂದರವಾಗಿ ಮೂಡಿದವು. ಕನ್ನಡ ಲಿಪಿಸೌಂದರ್ಯ ಹೆಚ್ಚಿತು.
ಕನ್ನಡದ ಅಕ್ಷರಭಾಗಗಳಿಗೆ ಎಲ್ಲ ತಂತ್ರಾಂಶ ತಯಾರಕರು ಒಂದೇ ರೀತಿಯ ಸಂಕೇತೀಕರಣವನ್ನು ಅನುಸರಿಸಬೇಕು ಎಂಬ ಕರ್ನಾಟಕ ಸರಕಾರದ ನಿಯಮ ಜಾರಿಗೊಂಡಿತು. ಇದರಿಂದ ಮಾಹಿತಿ ವಿನಿಮಯ ಸಮಸ್ಯೆಗೆ ಪರಿಹಾರ ದೊರೆಯಿತು. ಹಳೆಯ ಪಠ್ಯಗಳನ್ನು ಪರಸ್ಪರ ಪರಿವರ್ತಿಸಲು ‘ಪರಿವರ್ತಕ’ ಸಾಧನೋಪಕರಣಗಳನ್ನು (ಕನ್ವರ್ಟರ್‌ಗಳು) ಸಿದ್ಧಪಡಿಸಲಾಯಿತು. 16 ಬಿಟ್ ಎನ್‌ಕೋಡಿಂಗ್ ಆವಿಷ್ಕಾರದಿಂದಾಗಿ ಅಕ್ಷರಸ್ಥಾನಗಳು ಹೆಚ್ಚಾದ ಕಾರಣ ಜಾಗತಿಕವಾಗಿ ಎಲ್ಲ ಭಾಷೆಗಳ ಲಿಪಿಗಳಿಗೆ ‘ಯೂನಿಕೋಡ್’ ಎಂಬ ಹೆಸರಿನ ಒಂದು ಶಿಷ್ಟತೆ ರೂಪುಗೊಂಡಿತು. ಅದನ್ನು ಆಧರಿಸಿ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ತಮ್ಮ ಆನ್ವಯಿಕ ತಂತ್ರಾಂಶಗಳಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಅಳವಡಿಸಿದರು. ಹಲವು ಸ್ತರಗಳ ಕಂಪ್ಯೂಟರ್ ತಂತ್ರಾಂಶಗಳಲ್ಲಿ ಕನ್ನಡಕ್ಕಿದ್ದ ಬಹುತೇಕ ಸಮಸ್ಯೆಗಳು ಪರಿಹಾರಗೊಂಡವು.