ಬಿಜೆಪಿಗರಿಂದ ಅನ್ನಭಾಗ್ಯ ಹೈಜಾಕ್: ಕಾಂಗ್ರೆಸ್ ಮೌನವೇಕೆ?
# ಬಿಜೆಪಿಯವರು ಈ ಕೆಳಗಿನ ಸರಳ ಪ್ರಶ್ನೆಗಳಿಗೆ ಉತ್ತರಿಸಲಿ
ಸಿದ್ದರಾಮಯ್ಯ ಸರಕಾರದ ಅತ್ಯಂತ ಶ್ರೇಷ್ಠ ಜನಪರ ಯೋಜನೆಗಳು ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್. ಯಾಕೆಂದರೆ ಜಗತ್ತಿನಲ್ಲಿ ಹಸಿವಿಗಿಂತ ಮಿಗಿಲಾದ ಸಿದ್ಧಾಂತವಿಲ್ಲ. ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಕ್ಕೆ ತಂದಾಗ ಹೊಟ್ಟೆ ತುಂಬಿದವರು ಮತ್ತು ರಾಜಕೀಯ ವಿರೋಧಿಗಳು ಅದನ್ನು ಗೇಲಿ ಮಾಡಿದ್ದು ಮತ್ತು ನಖಶಿಖಾಂತ ವಿರೋಧಿಸಿದ್ದು ಚರಿತ್ರೆಯ ಪುಟ ಸೇರುವಷ್ಟು ಹಳತಾಗಿಲ್ಲ. ಆದರೆ ಸಿದ್ದರಾಮಯ್ಯ ಅವ್ಯಾವುವನ್ನೂ ಗಣನೆಗೆ ತೆಗೆದುಕೊಳ್ಳಲಿಲ್ಲವಾದ್ದರಿಂದ ಇಂದು ಕರ್ನಾಟಕಕ್ಕೆ ಹಸಿವು ಮುಕ್ತ ರಾಜ್ಯವೆಂಬ ಕೀರ್ತಿ ದೊರಕಿದೆ.
ಅನ್ನಭಾಗ್ಯ ಯೋಜನೆಯನ್ನು ವಿರೋಧಿಸಿದವರು ಅದಕ್ಕೆ ನೀಡಿದ ಕಾರಣ
- ಜನ ಸೋಮಾರಿಗಳಾಗುತ್ತಾರೆ.
- ಕೂಲಿ ಕೆಲಸಕ್ಕೆ ಕಾರ್ಮಿಕರು ಸಿಗುವುದಿಲ್ಲ.
- ಫಲಾನುಭವಿಗಳು ಅದನ್ನು ಮಾರುತ್ತಾರೆ.
- ಈ ರೀತಿ ಪುಕ್ಸಟ್ಟೆ ಅಕ್ಕಿ ಕೊಟ್ಟರೆ ಯೋಜನೆ ದುರುಪಯೋಗವಾಗುತ್ತದೆ.
ಆದರೆ ಅಕ್ಕಿ ಕೊಟ್ಟರೆ ಜನರ ಹಸಿವು ನಿವಾರಣೆಯಾಗಬಹುದೇ ಹೊರತು ಅದು ಜನರ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲ. ಆಹಾರ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದೇ ಹೊರತು ಆಹಾರವೊಂದರಿಂದಲೇ ನಾಗರಿಕನೆನಿಸಿದ ಮನುಷ್ಯನಿಗೆ ಬದುಕಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಯಾರೂ ಕೇವಲ ತಿನ್ನಲಿಕ್ಕೋಸ್ಕರ ಬದುಕುವುದಿಲ್ಲ, ಬದುಕಲೋಸ್ಕರ ತಿನ್ನುತ್ತಾರೆ. ಕೇವಲ ಹೊಟ್ಟೆ ತುಂಬಿಸುವುದೊಂದೇ ಮನುಷ್ಯನ ಬದುಕಿನ ಅಗತ್ಯವಾಗಿದ್ದರೆ ಮನುಷ್ಯನಿಗೂ ಪ್ರಾಣಿಗಳಿಗೂ ವ್ಯತ್ಯಾಸವಿರುತ್ತಿರಲಿಲ್ಲ.
ಯಾವ ಸರಕಾರದ ಯಾವ ಯೋಜನೆ ಒಂದಿನಿತೂ ದುರುಪಯೋಗವಾಗಿಲ್ಲ ಹೇಳಿ... ಯಾರೋ ಕೆಲವರು ದುರುಪಯೋಗ ಮಾಡುತ್ತಾರೆಂದು ಇಡೀ ಯೋಜನೆಯನ್ನು ಆ ಕಾರಣಕ್ಕಾಗಿ ದೂಷಿಸುವುದರಲ್ಲಿ ಏನರ್ಥವಿದೆ? ಯಾವುದೇ ಯೋಜನೆಯನ್ನು ಎಷ್ಟೇ ಕಟ್ಟುನಿಟ್ಟಾಗಿ ಜಾರಿ ಮಾಡಿದರೂ ನೂರು ಶೇಕಡ ಸದುಪಯೋಗವಾಗುತ್ತದೆ ಎಂದು ಯಾವುದೇ ಸರಕಾರಕ್ಕೆ ಖಚಿತತೆ ನೀಡಲು ಸಾಧ್ಯವೇ?
ಜನ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಮಾರುತ್ತಾರೆ ಎಂದು ಕೆಲವು ಹೊಟ್ಟೆ ತುಂಬಿದ ಮತ್ಸರಿಗಳು ಆರೋಪಿಸುತ್ತಿದ್ದರು/ ಆರೋಪಿಸುತ್ತಿದ್ದಾರೆ. ಇಲ್ಲೊಂದು ವಿಚಾರವನ್ನು ಗಮನಿಸಬೇಕು, ಸರಕಾರ ಯಾವುದೇ ಯೋಜನೆಯನ್ನು ಜಾರಿಗೆ ತರುವಾಗ ವಿಷಯ ತಜ್ಞರ ಸಲಹೆ ಪಡೆಯುತ್ತದೆ. ಆ ಪ್ರಕಾರ ವ್ಯಕ್ತಿಯೊಬ್ಬನಿಗೆ ಏಳು ಕಿಲೋ ಗ್ರಾಂ ಅಕ್ಕಿಯೆಂದು ಸರಕಾರ ನಿರ್ಧರಿಸಿದೆ. ಪುಕ್ಸಟ್ಟೆ ಸಿಕ್ಕ ಅಕ್ಕಿಯನ್ನು ಮಾರಿ ಹಸಿವಿನಿಂದ ನರಳುವ ಬುದ್ಧಿಹೀನ ಕೆಲಸವನ್ನು ಯಾರೂ ಮಾಡಲಾರರು. ಯಾರಾದರೂ ಸ್ವಲ್ಪ ಅಕ್ಕಿಯನ್ನು ಮಾರಿದರೂ ಅದರಲ್ಲಿ ತಪ್ಪೇನು? ಮಾರುವಾತ ತನಗೆ ಮತ್ತು ತನ್ನ ಕುಟುಂಬಕ್ಕೆ ಬಳಕೆಯಾಗಿ ಮಿಗತೆಯಾದುದನ್ನು ತಾನೇ ಮಾರುವುದು? ಒಬ್ಬ ಫಲಾನುಭವಿ ತನ್ನ ಮತ್ತು ತನ್ನ ಕುಟುಂಬದ ಅಕ್ಕಿಯನ್ನು ಮಾರುತ್ತಾನೆಯೇ ಹೊರತು ಇತರರ ಪಾಲನ್ನು ಅಲ್ಲ ತಾನೇ? ಇದರಿಂದ ಹೊಟ್ಟೆ ತುಂಬಿದ ಮತ್ಸರಿಗಳಿಗೇನು ನಷ್ಟ? ಒಬ್ಬ ವ್ಯಕ್ತಿ ತನ್ನ ಕುಟುಂಬದ ಅಗತ್ಯಕ್ಕೆ ಬೇಕಾಗುವ ಇತರ ಅವಶ್ಯಕತೆಯನ್ನು ಪೂರೈಸಲೋ ಅಥವಾ ಇತರ ದಿನಸಿ ಖರೀದಿಗಾಗಿ ಮಾರಿದರೆ ತಪ್ಪೇನು?
ಮೊನ್ನೆ ರವಿವಾರ ಕೆಲಸ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಹೋಗಿದ್ದೆ. ಪುತ್ತೂರು ನಗರ ಬಸ್ ನಿಲ್ದಾಣ ಮತ್ತು ಪೇಟೆಯ ತುಂಬೆಲ್ಲಾ ಅಲ್ಲಿನ ಮಾಜಿ ಶಾಸಕಿಯೊಬ್ಬಾಕೆಯ ಪತಿ ಡಾ.ಪ್ರಸಾದ್ ಭಂಡಾರಿ ಎಂಬವರ ಹೆಸರಲ್ಲಿ ಹಾಕಲಾದ ಜಾಹೀರಾತು ಹೋರ್ಡಿಂಗ್ ಗಳನ್ನು ಕಂಡೆ. ಅದರಲ್ಲಿ ಪ್ರಧಾನಿ ಮೋದಿಯ ಭಾವಚಿತ್ರ ಹಾಕಿ "ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಬೇರೆ ಬೇರೆ ರಾಜ್ಯಗಳಿಂದ ಖರೀದಿಸಲು ಕೇಂದ್ರ ಸರ್ಕಾರ ಪ್ರತೀ ಕಿಲೋಗೆ ಇಪ್ಪತ್ತೊಂಬತ್ತು ರೂಪಾಯಿಗಳನ್ನು ನೀಡುತ್ತದೆ. ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು ಮೂರು ರೂಪಾಯಿಗಳು ಮಾತ್ರ'' ಎಂದು ಬರೆಯಲಾಗಿತ್ತು.
ಕೇವಲ ನಾಲ್ಕು ವರ್ಷಗಳ ಹಿಂದೆ ಅನ್ನಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಾಗ ನಾನು ಈ ಲೇಖನದ ಪ್ರಾರಂಭದಲ್ಲಿ ನೀಡಿದ ಕಾರಣಗಳನ್ನು ಮುಂದಿಟ್ಟು ಇದೇ ಬಿಜೆಪಿಯವರು ನಖಶಿಖಾಂತ ವಿರೋಧಿಸಿದ್ದರು. ಇದೀಗ ಚುನಾವಣೆ ಸಮೀಪಿಸುತ್ತಿರುವಾಗ ಹೇಳಿಕೊಳ್ಳಲು ಒಂದೇ ಒಂದು ಜನಪರ ಕಾರ್ಯಕ್ರಮವಿಲ್ಲದ ಬಿಜೆಪಿಯು ರಾಜ್ಯ ಸರಕಾರದ ಯೋಜನೆಯನ್ನು ಹೈಜಾಕ್ ಮಾಡಹೊರಟಿದೆ. ನೋಟ್ ಬ್ಯಾನ್, ಬೆಲೆಯೇರಿಕೆ, ಜಿಎಸ್ಟಿ ಇತ್ಯಾದಿ ಜನವಿರೋಧಿ ಕೃತ್ಯಗಳನ್ನೇ ತನ್ನ ಬತ್ತಳಿಕೆಯಲ್ಲಿ ತುಂಬಿಸಿಕೊಂಡಿರುವ ಬಿಜೆಪಿ ಅದಕ್ಕಾಗಿ ಈ ರೀತಿಯ ಸುಳ್ಳು ಪ್ರಚಾರದ ಚೀಪ್ ಪಬ್ಲಿಸಿಟಿಯನ್ನು ಪಡೆಯುತ್ತಿದೆ.
"ಭಕ್ತಗಣ " ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳನ್ನು ಅವ್ಯಾಹತವಾಗಿ ಪ್ರಚಾರ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲಾ ಸುದ್ದಿಗಳಿಗೂ ಪ್ರತಿಕ್ರಿಯೆ ನೀಡುತ್ತಾ ಇರಲಾಗದು. ಸಾಮಾಜಿಕ ಜಾಲತಾಣಗಳೆಂದರೆ ಅರ್ಧ ಸತ್ಯದ ಮಾಧ್ಯಮಗಳು. ಆದರೆ ಇದೀಗ ಅದೇ ಸುಳ್ಳುಗಳನ್ನು ಬಹಿರಂಗ ಜಾಹೀರಾತುಗಳ ಮೂಲಕ ಪ್ರಚುರಪಡಿಸುತ್ತಿರುವಾಗ ಸುಮ್ಮನಿರುವುದು ಹುಂಬತನ.
ಬಿಜೆಪಿಯವರು ಈ ಕೆಳಗಿನ ಸರಳ ಪ್ರಶ್ನೆಗಳಿಗೆ ಉತ್ತರಿಸಲಿ
ಒಂದು ವೇಳೆ ಕೇಂದ್ರ ಸರ್ಕಾರ ಇಪ್ಪತ್ತೊಂಬತ್ತು ರೂಪಾಯಿಗಳನ್ನು ನೀಡುತ್ತಿದೆಯಾದರೆ, ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ಇಂತಹ ಯೋಜನೆಗಳು ಜಾರಿಯಲ್ಲಿಲ್ಲವೇಕೆ? ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೇನು ಹೊಟ್ಟೆ ತುಂಬಿದವರ ರಾಜ್ಯಗಳೇ? ಅಥವಾ ಕೇಂದ್ರದ ಇಪ್ಪತ್ತೊಂಬತ್ತು ರೂಪಾಯಿಗಳಿಗೆ ಮೂರು ರೂಪಾಯಿಯನ್ನೂ ಸೇರಿಸಲಾಗದಷ್ಟು ದರಿದ್ರ ರಾಜ್ಯಗಳೇ?
ಒಂದುಕಾಲಕ್ಕೆ ಜನರ ಹಸಿವನ್ನು ಗೇಲಿ ಮಾಡಿದ ಈ ಜನದ್ರೋಹಿಗಳ ಸುಳ್ಳು ಪ್ರಚಾರವನ್ನು ಸರಕಾರ ಕೂಡಲೇ ತಡೆ ಹಿಡಿಯಬೇಕು. ಇಂತಹ ಸುಳ್ಳು ಜಾಹೀರಾತು ಹೋರ್ಡಿಂಗ್ ಗಳನ್ನು ಈ ಕೂಡಲೇ ತೆರವುಗೊಳಿಸಿ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಷ್ಟನ್ನಾದರೂ ಮಾಡಲು ಸಿದ್ದರಾಮಯ್ಯ ಸರಕಾರ ಮುಂದೆ ಬರದಿದ್ದರೆ ಜನತೆ ಅದನ್ನು ಕೇಂದ್ರದ ಮೋದಿ ಸರಕಾರದ ಯೋಜನೆ ಎಂದು ನಂಬಲು ಅಸಹಾಯಕರಾಗುತ್ತಾರೆ.