ಮನವೆಂಬ ಮರ್ಕಟ
ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ, ಇಂದ್ರಿಯಗಳೆಂಬ ಶಾಖೆಶಾಖೆಗೆ ಹಾರಿ,
ವಿಷಯಗಳೆಂಬ ಹಣ್ಣು ಫಲಂಗಳ ಗ್ರಹಿಸಿ,
ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ!
ಈ ಮನವೆಂಬ ಮರ್ಕಟವ ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ,
ಎನ್ನನುಳುಕೊಳ್ಳಯ್ಯ ಅಖಂಡೇಶ್ವರಾ.
-ಜೇವರ್ಗಿ ಷಣ್ಮುಖಸ್ವಾಮಿ
‘ಕಪಿಗೆ ಚಪಲತೆ ಸಹಜಂ’ ಎಂದು ರನ್ನ ಹೇಳುತ್ತಾನೆ. ಷಣ್ಮುಖಸ್ವಾಮಿಗಳು ಚಪಲತೆಯ ಸಂಕೇತವಾದ ಮಂಗನನ್ನು ಮನಸ್ಸಿಗೆ ಹೋಲಿಸಿದ್ದಾರೆ. ಮನಸ್ಸೆಂಬ ಮಂಗ ಸುಮ್ಮನೆ ಕೂಡುವಂಥದ್ದಲ್ಲ. ಅದನ್ನು ಹಿಡಿದು ನಿಲ್ಲಿಸುವುದು ಬಹಳ ಕಷ್ಟದ ಕೆಲಸ. ಅದು ಶರೀರವೆಂಬ ಮರವನ್ನು ಹತ್ತುತ್ತಲೇ ಇರುತ್ತದೆ. ಈ ಮರಕ್ಕೆ ಇಂದ್ರಿಯಗಳೆಂಬ ಟೊಂಗೆಗಳಿವೆ. ಈ ಮನಸ್ಸುರೂಪಿ ಮಂಗ ಟೊಂಗೆಯಿಂದ ಟೊಂಗೆಗೆ ಜಿಗಿಯುತ್ತಲೇ ಇರುತ್ತದೆ. ಜಿಗಿದು ಜಿಗಿದು ಕಿವಿ, ನಾಲಗೆ, ಕಣ್ಣು, ಮೂಗು ಮತ್ತು ಚರ್ಮದಂಥ ಕರ್ಮೇಂದ್ರಿಯಗಳ ಹಣ್ಣು ಹಂಪಲಗಳನ್ನು ಸಂಗ್ರಹಿಸುತ್ತದೆ. ಕೆಟ್ಟದ್ದನ್ನು ಕೇಳುತ್ತ, ಕೆಟ್ಟದ್ದನ್ನು ಸವಿಯುತ್ತ, ಕೆಟ್ಟದ್ದನ್ನು ನೋಡುತ್ತ, ಕೆಟ್ಟದ್ದನ್ನೇ ಮೂಸುತ್ತ ಮತ್ತು ತಟ್ಟುತ್ತ ಕಾಮೇಂದ್ರಿಯ ಸುಖವನ್ನು ಸವಿಯುತ್ತ ಅಧೋಮುಖಿಯಾಗಿ ಸಾಗುತ್ತದೆ. ಹೀಗೆ ಸಾಗುವಾಗ ವಸ್ತುಮೋಹದ ಬದುಕಲ್ಲೇ ಬಿದ್ದು ಹೊರಳಾಡುತ್ತಿರುತ್ತದೆ ಎಂದು ಷಣ್ಮುಖಸ್ವಾಮಿಗಳು ಲೌಕಿಕದಲ್ಲೇ ಮುಳುಗಿದವರ ಮನೋ ವಿಶ್ಲೇಷಣೆ ಮಾಡುತ್ತಾರೆ. ಆ ಮೂಲಕ ನಮ್ಮನ್ನು ತಬ್ಬಿಬ್ಬುಗೊಳಿಸುತ್ತಾರೆ. ಆದರೆ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಾರೆ.
ಭೌತಿಕ ಸುಖದ ಲೋಲುಪತೆಯಿಂದ ಹೊರಬರಬೇಕಾದರೆ ಮನಸ್ಸೆಂಬ ಕೋಡಗವನ್ನು ಧ್ಯಾನಪಾಶದಲ್ಲಿ ಕಟ್ಟಬೇಕು. ಅದು ಮಿಸುಗಾಡದಂತೆ ನೋಡಿಕೊಳ್ಳಬೇಕು. ಆಗ ನಾವು ಚಂಚಲಸ್ವಭಾವದಿಂದ ಹೊರಬಂದು ಏಕಾಗ್ರತೆಯ ಆನಂದವನ್ನು ಅನುಭವಿಸಲು ಸಾಧ್ಯ.
ಈ ಮನಸ್ಸೆಂಬ ಮರ್ಕಟನನ್ನು ಕಟ್ಟಿಹಾಕಿದ ಮೇಲೆ ಅದನ್ನು ಓಂಕಾರ ವೃಕ್ಷಕ್ಕೆ ಏರಿಸುವುದನ್ನು ಕಲಿಯಬೇಕು. ಷಣ್ಮುಖಸ್ವಾಮಿಗಳ ಈ ಓಂಕಾರ ವೃಕ್ಷದ ಪರಿಕಲ್ಪನೆ ಮನಸ್ಸಿನಲ್ಲಿ ಸುಂದರ ರೂಪಕವಾಗಿ ನಿಲ್ಲುತ್ತದೆ. ‘‘ಓಂಕಾರವೆಂಬ ಮರಕ್ಕೆ ಷಟ್‌ಕೃತಿಯೆಂಬ ಶಾಖೆ ಪಸರಿಸಿ, ಷಡಕ್ಷರಗಳೆಂಬ ತಳಿರು ಕೊನರಿ, ಷಟ್‌ಸ್ಥಲಗಳೆಂಬ ಕುಸುಮಂಗಳಾಗಿ, ಷಡುಲಿಂಗಗಳೆಂಬ ಮೋಕ್ಷದ ಮಧುರ ಫಲಂಗಳು ತಳೆದಿರ್ಪುದು ನೋಡಾ’’ ಎಂದು ಇನ್ನೊಂದು ವಚನದಲ್ಲಿ ಹೇಳುತ್ತಾರೆ.
ಕಲಬುರ್ಗಿ ಜಿಲ್ಲೆ ಜೇವರ್ಗಿಯ ಷಣ್ಮುಖಸ್ವಾಮಿಗಳು (1630-1711) ಮಲ್ಲಶೆಟ್ಟೆಪ್ಪ - ದೊಡ್ಡಮಾಂಬೆಯ ಮಗ. ಭಕ್ತವರ್ಗದಿಂದ ಬಂದು ಜೇವರ್ಗಿ ವಿರಕ್ತಮಠದ ಸ್ವಾಮಿಗಳಾಗಿದ್ದರು. ಇವರ 717 ವಚನಗಳು ಸಿಕ್ಕಿವೆ. ಅಖಂಡೇಶ್ವರ ಜೋಗುಳಪದ, ಪಂಚಸಂಜ್ಞೆಗಳ ಪದ ಮತ್ತು ನಿರಾಳ ಸದ್ಗುರುಸ್ತೋತ್ರ ಇವು ಅವರ ಇತರ ಕೃತಿಗಳು. ‘‘ಬಸವಾಕ್ಷರವೆಂಬ ಹಡಗನೇರಿ ಬಸವ ಬಸವ ಬಸವಾ ಎಂದು ಭವಸಾಗರ ದಾಟಿದೆ’’ ಎಂದು ಹೇಳುವ ಮೂಲಕ ಅವರು ಬಸವನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆ.