ಮಾಲಿನ್ಯ ಮುಕ್ತ ಮಾಡುವುದು ನಮ್ಮ ಸಂಕಲ್ಪ: ಲಕ್ಷ್ಮಣ್
ಬೆಂಗಳೂರು, ಫೆ.13: ಕರ್ನಾಟಕವನ್ನು ಮಾಲಿನ್ಯ ಮುಕ್ತ ರಾಜ್ಯ ಮಾಡುವುದೇ ನಮ್ಮ ದೃಢ ಸಂಕಲ್ಪ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಹೇಳಿದ್ದಾರೆ.
ಕಾಸಿಯಾದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೆಲ, ಜಲ, ವಾಯು ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಕೆಲಸವನ್ನು ಮಂಡಳಿ ಮಾಡುತ್ತಿದ್ದು, ಅದಕ್ಕಾಗಿ ಅನೇಕ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೆ, ಅವುಗಳನ್ನು ಜಾರಿಗೊಳಿಸಲು ಮಂಡಳಿ ಕಂಕಣಬದ್ಧವಾಗಿದೆ ಎಂದು ತಿಳಿಸಿದರು.
ಮಂಡಳಿ ವತಿಯಿಂದ ಹಲವಾರು ಪರಿಸರಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ರೂಪಿಸಿದ್ದು, ಹಂತ ಹಂತವಾಗಿ ಜಾರಿ ಮಾಡಲಾಗುತ್ತಿದೆ ಎಂದ ಅವರು, ಕೈಗಾರಿಕೆಗಳಿಗೆ ನೀಡುವ ಸಮ್ಮತಿ ಪತ್ರ ಪ್ರಕ್ರಿಯೆಯನ್ನು ಸರಳೀಕರಣ ಮಾಡಿ ಆನ್‌ಲೈನ್ ಮೂಲಕ ನೀಡುವ ವ್ಯವಸ್ಥೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜ್ಯಮಟ್ಟದ ಸಭೆಗೆ ಕಾಸಿಯಾದ ಅಧ್ಯಕ್ಷರನ್ನು ವಿಶೇಷ ಪ್ರತಿನಿಧಿಯಾಗಿ ಸದಸ್ಯತ್ವ ನೀಡಿ ಆಹ್ವಾನಿಸಲಾಗುತ್ತದೆ ಎಂದು ಇದೇ ವೇಳೆ ಭರವಸೆ ನೀಡಿದರು.
ಕಾಸಿಯಾ ಗೌರವಾಧ್ಯಕ್ಷ ಆರ್.ಹನುಮಂತೇಗೌಡ ಮಾತನಾಡಿ, ವಿವಿಧ ಕೈಗಾರಿಕಾ ವಲಯಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಹಾಗೂ ಅವುಗಳ ಪೂರಕ ಅಭಿವೃದ್ಧಿಗೆ ಅಗತ್ಯವಿರುವ ಪರಿಸರವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಸಣ್ಣ ಕೈಗಾರಿಕೆಗಳಿಗೆ ಸಮ್ಮತಿ ಶುಲ್ಕವನ್ನು ಯಂತ್ರೋಪಕರಣ ಮೌಲ್ಯದ ಆಧಾರದ ಮೇಲೆ ನಿಗದಿಪಡಿಸಬೇಕು. ಬಾಡಿಗೆ ಕಟ್ಟಡಗಳ ಪ್ರಕರಣಗಳಲ್ಲಿ 20 ವರ್ಷಗಳ ಬಾಡಿಗೆ ಮೊತ್ತವನ್ನು ಭೂಮಿ ಮತ್ತು ಕಟ್ಟಡದ ಮೌಲ್ಯ ಎಂದು ಪರಿಗಣಿಸಲಾಗುತ್ತಿರುವ ಷರತ್ತನ್ನು ತೆಗೆದು ಹಾಕಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.
ಸಂವಾದದಲ್ಲಿ ಕಾಸಿಯಾ ಗೌರವ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಉಮಾಶಂಕರ್, ಗೌರವ ಉಪಾಧ್ಯಕ್ಷ ಬಸವರಾಜ್ ಎಸ್.ಜವಳಿ, ಜಂಟಿ ಕಾರ್ಯದರ್ಶಿ ಲತಾ ಗಿರೀಶ್, ಕೆ.ಎನ್.ನರಸಿಂಹಮೂರ್ತಿ, ನರೇಂದ್ರಕುಮಾರ್ ಉಪಸ್ಥಿತರಿದ್ದರು.