ತ್ರಿಪುರಾದಲ್ಲಿ ಸಿಪಿಎಂ ಮತ್ತು ಬುಡಕಟ್ಟು ಪ್ರತ್ಯೇಕತಾವಾದಿಗಳ ಸಂಘರ್ಷ !
ಪ್ರತ್ಯೇಕತಾವಾದಿ ಐಪಿಎಫ್ ಟಿ ನೆರಳಲ್ಲಿ ಬಿಜೆಪಿ !
ತಕರ್ಜಾಲಕ್ಕೆ ದಾರಿ ಎಂಬ ಬೋರ್ಡ್ ಕಾಣಿಸುತ್ತಿದ್ದಂತೆ ಮಿಲಿಟರಿ ಪಡೆ ಮರಳು ಮೂಟೆಯ ಹಿಂದೆ ಶಸ್ತ್ರಸಜ್ಜಿತರಾಗಿ ನಿಂತ ದೃಶ್ಯ ಕಾಣಿಸುತ್ತದೆ. ಯಾವುದೋ ದೇಶದ ಗಡಿ ಭಾಗಕ್ಕೆ ಬಂದಿದ್ದೇವೆಯೇನೊ ಅನ್ನಿಸುವಷ್ಟರ ಮಟ್ಟಿಗೆ ಇಲ್ಲಿ ಮಿಲಿಟರಿ ಆಡಳಿತವಿದೆ. AFSPA ಸಶಸ್ತ್ರ ಕಾಯ್ದೆಯನ್ನು ತ್ರಿಪುರಾ ಸರಕಾರ ಹಿಂಪಡೆದ ಬಳಿಕವೂ ತಕರ್ಜಾಲಕ್ಕೆ ಮಿಲಿಟರಿ ಭದ್ರತೆ ಒದಗಿಸಲಾಗಿದೆ.
ನಾವು ತ್ರಿಪುರಾಕ್ಕೆ ಬಂದಿಳಿದ ಮರುದಿನವೇ ತಕರ್ಜಾಲದ ಅಮರೇಂದ್ರ ನಗರದಲ್ಲಿ ಗಲಭೆಯಾಗಿ ಸಿಪಿಐಎಂ ಕಚೇರಿ ದ್ವಂಸ ಮಾಡಲಾಗಿದೆ ಎಂಬ ಸುದ್ದಿ ದೊರಕಿತು. ನೇರ ತಕರ್ಜಾಲಕ್ಕೆ ತೆರಳಿದೆವು. ಕೃಷಿ ಮತ್ತು ಕಾಡನ್ನು ನಂಬಿಕೊಂಡ ಬುಡಕಟ್ಟುಗಳೇ ಇರುವ ಪ್ರದೇಶ ತಕರ್ಜಾಲ. ಇಲ್ಲಿ 41 ಸಾವಿರ ಮತದಾರರಿದ್ದಾರೆ. ಅದರಲ್ಲಿ ಶೇ.95ರಷ್ಟು ಬುಡಕಟ್ಟು ಸಮುದಾಯ. ಉಳಿದಂತೆ 5 ಶೇಕಡ ಮುಸ್ಲಿಮರು ಮತ್ತು ಬೆಂಗಾಲಿಗಳು.
ತ್ರಿಪುರಾ ಭಾರತದಿಂದ ಪ್ರತ್ಯೇಕವಾಗಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಬಾಂಗ್ಲಾದೇಶದಿಂದ ನಿರ್ವಹಣೆ ಮಾಡಲಾಗುತ್ತಿರುವ ಭಯೋತ್ಪಾದಕ ಸಂಘಟನೆಗಳಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾ (ಎನ್ಎಲ್ಎಫ್ಟಿ) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ (ಎಟಿಟಿಎಫ್) ತಕರ್ಜಾಲದಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಇದೇ ಕಾರಣದಿಂದ ಪ್ರತ್ಯೇಕ ತ್ರಿಪರ್ಲ್ಯಾಂಡ್ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಐಪಿಎಫ್ ಟಿ (ಇಂಡಿಜಿನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ) ಕೂಡಾ ಬಲವಾಗಿ ನೆಲೆಯೂರಿದೆ. ಇದಲ್ಲದೆ ಐಎನ್ ಪಿಟಿ ( ಇಂಡಿಜಿನಿಯಸ್ ನ್ಯಾಶನಲಿಸ್ಟ್ ಪಾರ್ಟಿ ಆಫ್ ತ್ರಿಪುರಾ), ಟಿಎಸ್ ಪಿ ( ತ್ರಿಪರ್ಲ್ಯಾಂಡ್ ಸ್ಟೇಟ್ ಪಾರ್ಟಿ) ಕೂಡಾ ಅಸ್ತಿತ್ವದಲ್ಲಿದೆ. ಈ ರೀತಿ ಬುಡಕಟ್ಟು ಪ್ರದೇಶವೊಂದರಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರತ್ಯೇಕತಾವಾದಿಗಳು ನೆಲೆಯೂರಲು ಸಿಪಿಐಎಂ ಪಾತ್ರ ಇಲ್ಲವೇ ಇಲ್ಲ ಎಂದರೆ ಸುಳ್ಳಾಗುತ್ತದೆ.
ತ್ರಿಪುರಾದಲ್ಲಿರುವ ಬಹುತೇಕ ಬುಡಕಟ್ಟು ಸಮುದಾಯಗಳು ತಕರ್ಜಾಲದಲ್ಲಿ ಕಾಣಸಿಗುತ್ತಾರೆ. ದೆಬ್ಬರ್ಮಾ, ಜೊಮಾಟಿಯಾ, ಮಲ್ಸಾಮ್, ಕೈಪಂಗ್, ಮೊರಾಂಕಲ್, ರೂಪಾನಿ, ರಿಯಾಂಗ್, ಗಾರೋ, ಮುಂಡಾ, ಕೊಲಾಯ್, ರುವಾಟಿಯಾ ಬುಡಕಟ್ಟು ಸಮುದಾಯಗಳು ಇವೆ. ಈ ಎಲ್ಲಾ ಬುಡಕಟ್ಟು ಸಮುದಾಯದ ಮಧ್ಯೆ ಕೇಡರ್ ಬೇಸ್ಡ್ ಪಾಲಿಟಿಕ್ಸ್ ಮಾಡಿಕೊಂಡಿದ್ದ ಸಿಪಿಐಎಂ ಇತ್ತಿಚೇನ ವರ್ಷಗಳಲ್ಲಿ ಈ ಬುಡಕಟ್ಟು ಗ್ರಾಮಗಳನ್ನು ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪಗಳು ಇದೆ. ಹೆಚ್ಚಿನ ಬುಡಕಟ್ಟು ಹಾಡಿಗಳನ್ನು ನೋಡಿದಾಗ ಅದು ಡಾಳಾಗಿ ಕಾಣಿಸುತ್ತದೆ. ಶೌಚಾಲಯವೂ ಇಲ್ಲದ, ರಸ್ತೆಯೂ ಇಲ್ಲದ, ನೀರಿನ ಸಂಪರ್ಕವೂ ಇಲ್ಲದ ಬುಡಕಟ್ಟು ಕಾಲನಿಗಳೇ ಬಹುತೇಕ ಇವೆ. ನಮ್ಮನ್ನು ಸರಕಾರಗಳು ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಧೋರಣೆ ಬರಲು ಇದು ಕಾರಣವಾಗಿದೆ. "ನಾನೂ ಹಿಂದೆ ಸಿಪಿಐಎಂ ಜೊತೆ ಇದೆ. ಮೂವತ್ತು ವರ್ಷಗಳಿಂದ ಸರಕಾರ ನಮಗಾಗಿ ಏನೇನೂ ಮಾಡಿಲ್ಲ. ನಮಗೆ ಸಿಪಿಐಎಂ ಕಲಿಸಿಕೊಟ್ಟ ಸಂಘರ್ಷದ ಮಾರ್ಗವನ್ನು ಸಿಪಿಐಎಂ ವಿರುದ್ದವೇ ಮಾಡಬೇಕಿದೆ" ಎನ್ನುತ್ತಾನೆ ಪ್ರಮೀಸ್ ದೆಬ್ಬರ್ಮಾ.
ತಕರ್ಜಾಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕತಾವಾದಿ ಐಪಿಎಫ್ ಟಿಯ ರಾಜ್ಯಾಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ ಸ್ಪರ್ಧೆ ಮಾಡುತ್ತಿದ್ದಾರೆ. ಆದ್ದರಿಂದ ಇದು ತ್ರಿಪುರಾ ಪ್ರತ್ಯೇಕತಾವಾದಿಗಳಿಗೆ ಪ್ರತಿಷ್ಠೆ ಮತ್ತು ಅಸ್ತಿತ್ವದ ಪ್ರಶ್ನೆ. ಇಲ್ಲಿ ನಿರಂತರವಾಗಿ ಗೆದ್ದು ಬರುತ್ತಿದ್ದ ಸಿಪಿಐಎಂನ ಹಾಲಿ ಶಾಸಕ ನಿರಂಜನ ದೆಬ್ಬರ್ಮಾಗೆ ಈ ಬಾರಿ ಸಿಪಿಐಎಂ ಟಿಕೆಟ್ ನೀಡಿಲ್ಲ. ನಿರಂಜನ್ ದೆಬ್ಬರ್ಮಾರ ಕಳಪೆ ಸಾಧನೆ, ಬುಡಕಟ್ಟುಗಳ ಮಧ್ಯೆ ಸಂಘಟನೆ ಮಾಡದಿರುವುದು, ಬುಡಕಟ್ಟುಗಳ ಅಭಿವೃದ್ಧಿಗೆ ಒತ್ತು ನೀಡದಿರುವುದು ನಿರಂಜನ್ ದೆಬ್ಬರ್ಮಾಗೆ ಟಿಕೆಟ್ ನಿರಾಕರಿಸಲು ಕಾರಣಗಳು. ಈ ಬಾರಿ ಸಿಪಿಐಎಂ ನಿಂದ ರಮೀಂದ್ರ ದೆಬ್ಬರ್ಮಾ ಸ್ಪರ್ಧಿಸುತ್ತಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಾಂಗ್ರೆಸ್ ನಿಂದ ಸ್ಯಾಮ್ಸಂಗ್ ದೆಬ್ಬರ್ಮಾ, ಐಎನ್ ಪಿಟಿಯಿಂದ ಓಮಿಯಾ ಕುಮಾರ್ ದೆಬ್ಬರ್ಮಾ, ಟಿಎಸ್ ಪಿಯಿಂದ ಚಿತ್ತರಂಜನ್ ದೆಬ್ಬರ್ಮಾ ಕಣದಲ್ಲಿದ್ದಾರೆ. ಪ್ರತ್ಯೇಕತಾವಾದಿಗಳೇ ಆಗಿರುವ ಐಎನ್ ಪಿಟಿ ಮತ್ತು ಟಿಎಸ್ ಪಿ ಬುಡಕಟ್ಟುಗಳ ಮತ ಸೆಳೆದಷ್ಟೂ ಆಡಳಿತರೂಢ ಸಿಪಿಐಎಂಗೆ ಲಾಭವಾಗಲಿದೆ. ಇಲ್ಲದೇ ಇದ್ದಲ್ಲಿ ತಕರ್ಜಾಲದಲ್ಲಿ ಐಪಿಎಫ್ ಟಿ ರಾಜ್ಯಾಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ ಸುಲಭದಲ್ಲಿ ಗೆಲುವು ಸಾಧಿಸಲಿದ್ದಾರೆ.
ತಿಪುರಾದಲ್ಲಿ ತಕರ್ಜಾಲವೇ ಪ್ರತಿಷ್ಠೆಯ ಕಣವಾಗಿದೆ. ಇಡೀ ತ್ರಿಪುರಾದ ರಾಜಕೀಯ ಚಿತ್ರಣವನ್ನು ತಕರ್ಜಾಲ ನೀಡುತ್ತದೆ. ತ್ರಿಪುರಾದಲ್ಲಿ ಎದ್ದ ಪ್ರತ್ಯೇಕತಾವಾದಿಗಳ ಕೂಗು, ಸರಕಾರದ ಸ್ಪಂದನೆ, AFSPA ಕಾಯ್ದೆ, ಅಟಾನಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್ ನ ಕಾರ್ಯವೈಖರಿ ಮತ್ತು ಇವೆಲ್ಲದರ ಪರಿಣಾಮದ ಇಂದಿನ ತ್ರಿಪುರಾದ ಬದಲಾದ ರಾಜಕಾರಣವನ್ನು ಇದೊಂದೇ ಕ್ಷೇತ್ರದಲ್ಲಿ ನೋಡಿಬಿಡಬಹುದು.
ನಾವು ತಕರ್ಜಾಲ ವಿಧಾನಸಭಾ ಕ್ಷೇತ್ರದ ನಬಚಂದ್ರಪರ ಬುಡಕಟ್ಟು ಗ್ರಾಮಕ್ಕೆ ತೆರಳಿದೆವು. ಅಲ್ಲಿ ಫೆಬ್ರವರಿ 11ರ ರವಿವಾರ ಸಿಪಿಐಎಂ ರ್ಯಾಲಿ ಆಯೋಜಿಸಿತ್ತು. ಬೂತ್ ಕಚೇರಿಯಿಂದ ಇನ್ನೇನು ರ್ಯಾಲಿ ಹೊರಡಬೇಕು ಅನ್ನುವಷ್ಟರಲ್ಲಿ ಕಲ್ಲು, ದೊಣ್ಣೆಗಳಿಂದ ಸಿಪಿಐಎಂ ಕಚೇರಿ ಮೇಲೆ ಐಪಿಎಫ್ ಟಿ ಕಾರ್ಯಕರ್ತರು ದಾಳಿ ನಡೆಸಿದರು. ನಾಲ್ಕು ಜನ ಸಿಪಿಐಎಂ ಕಾರ್ಯಕರ್ತರಿಗೆ ಗಾಯಗಳಾದವು. ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಐಪಿಎಫ್ ಟಿ ಕಾರ್ಯಕರ್ತರಿಗೂ ಗಾಯಗಳಾದವು.
ಸಿಪಿಐಎಂ ಕಚೇರಿಯ ಮೇಲೆ ದಾಳಿ ನಡೆಸಿದ ಐಪಿಎಫ್ ಟಿ ತಂಡದ ಪ್ರಮುಖನಾಗಿದ್ದ ಅರಬಿಂದೋ ದೆಬ್ಬರ್ಮಾರನ್ನು ಮಾತನಾಡಿಸಿದ್ವಿ. "ಇನ್ನೂ ಎಷ್ಟು ದಿನ ಅಂತ ನೋಡೋದು ? ದಾಳಿ ಮಾಡಿದ್ವಿ. ಇನ್ನೂ ಮಾಡ್ತೀವಿ. ಇನ್ನು ಸುಮ್ಮನಿರೋಕೆ ಆಗಲ್ಲ " ಎಂದರು.
"ಸಿಪಿಐಎಂ ಅಭ್ಯರ್ಥಿಯೇ ನೇರವಾಗಿ ನಮ್ಮ ಐಪಿಎಫ್ ಟಿ ಕಚೇರಿ ಎದುರು ಬಂದು ಕಾರು ನಿಲ್ಲಿಸಿದ್ರು. ಕಾರಿನಿಂದ ಇಳಿದ ಸಿಪಿಐಎಂ ಕಾರ್ಯಕರ್ತರು ನೇರ ಕಚೇರಿಗೆ ನುಗ್ಗಿದ್ರು. ಕಚೇರಿಯಿಂದ ನಾವು ಹೊರಬರಲೂ ಸಾಧ್ಯವಾಗಲಿಲ್ಲ. ಇನ್ನಷ್ಟೂ ಜನ ಬಂದು ಐಪಿಎಫ್ ಟಿ ಕಚೇರಿ ದ್ವಂಸ ಮಾಡಿದ್ರು. ನಮ್ಮ ಕಚೇರಿ ದ್ವಂಸವಾದ ಬಳಿಕವಷ್ಟೇ ನಾವು ಸಿಪಿಐಎಂ ಕಚೇರಿಗೆ ದಾಳಿ ಮಾಡಿದ್ವಿ" ಎನ್ನುತ್ತಾರೆ ಶೊಮಂತೊ ದೆಬ್ಬರ್ಮಾ.
ಪ್ರತ್ಯೇಕತಾವಾದಿ ಐಪಿಎಫ್ ಟಿ ಯಾವ ಪ್ರಚೋದನೆಯೂ ಇಲ್ಲದೆ ನಮ್ಮ ಮೇಲೆ ದಾಳಿ ನಡೆಸಿತು. ಈ ಹಿಂದಿನಿಂದಲೂ ಉಗ್ರವಾದಿ ಚಟುವಟಿಕೆ ನಡೆಸುತ್ತಿರುವ ಐಪಿಎಫ್ ಟಿ ಗೆ ಈ ಬಾರಿ ಸಿಪಿಐಎಂ ಮೇಲೆ ದಾಳಿ ನಡೆಸಲೆಂದೇ ಬಿಜೆಪಿಯಿಂದ ಹಣ ಹರಿದು ಬಂದಿದೆ ಎನ್ನುತ್ತಾರೆ ಸ್ಥಳೀಯ ಸಿಪಿಐಎಂನ ಧೀರೆಂದ್ರ ದೆಬ್ಬಾರ್ಮಾ.
ಐಪಿಎಫ್ ಟಿ ಪಕ್ಷವು ಬಿಜೆಪಿಯ ಮೈತ್ರಿಯೊಂದಿಗೆ 9 ಎಸ್ ಟಿ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐಎನ್ ಪಿಟಿ ಪಕ್ಷವು ಕಾಂಗ್ರೆಸ್ ಮೈತ್ರಿಯಲ್ಲಿ ಸ್ಪರ್ಧೆ ನಡೆಸಿತ್ತು. ಈ ಬಾರಿ ಐಪಿಎಫ್ ಟಿ ಪಕ್ಷದ ಮೂಲಕ ತ್ರಿಪುರಾದ ಕಾಡಿನ ಗ್ರಾಮಗಳಿಗೆ ಬಿಜೆಪಿ ಪ್ರವೇಶ ಮಾಡಿದೆ. ತ್ರಿಪುರಾದ ಬುಡಕಟ್ಟು ಮಕ್ಕಳು ಮೋದಿ ಮುಖವಾಡ ಧರಿಸಿ ಆಟವಾಡುವ ದೃಶ್ಯಗಳು ಗುಡ್ಡಗಾಡು ಬುಡಕಟ್ಟು ಕಾಲನಿಯಲ್ಲಿ ಕಾಣಸಿಗುತ್ತಿದೆ. ಇದು ಭವಿಷ್ಯದ ತ್ರಿಪುರಾದ ಸೂಚನೆಯೇ ಎಂಬ ಪ್ರಶ್ನೆಗಳು ಮೂಡುತ್ತವೆ.
ಚಿತ್ರಗಳು: ನವೀನ್ ಸೂರಿಂಜೆ
(ಲೇಖಕರು ಬಿಟಿವಿಯ ರಾಜಕೀಯ ವರದಿಗಾರರು)