ಕೇಸರಿವಾದಿಗಳ ಸಟೆನುಡಿ, ವದಂತಿ, ದ್ವೇಷ ಇತ್ಯಾದಿಗಳ ಮೂಲ
ಭಾಗ-1
ಮೊನ್ನೆ ಫೆಬ್ರವರಿ 7, 2018ರಂದು ರಾಷ್ಟ್ರಪತಿಯವರ ಉಪನ್ಯಾಸಕ್ಕೆ ಧನ್ಯವಾದ ಸಮರ್ಪಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಸುಮಾರು ಒಂದು ಗಂಟೆಗೂ ಮಿಕ್ಕಿ ಮಾತನಾಡಿದರು. ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರವಾಗಿ ಪ್ರಧಾನಿಗಳು ತಮ್ಮ ಸರಕಾರದ ಸಾಧನೆಗಳು, ದೇಶದ ಸರ್ವಾಂಗೀಣ ಪ್ರಗತಿ, ಮುಂದಿನ ಯೋಜನೆಗಳು ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲುವುದು ಲಾಗಾಯ್ತಿನಿಂದ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ. ಇದು ಸಂಸತ್ತಿಗೆ ಸಲ್ಲಿಸುವ ಗೌರವ. ಸಂಸತ್ತು ಅಂದರೆ ಭಾರತದ ಸಮಸ್ತ ಪ್ರಜೆಗಳನ್ನು ಪ್ರತಿನಿಧಿಸುವ ಸಂಸ್ಥೆ. ಆದರೆ ಪ್ರಧಾನಿ ಮೋದಿ ಸಂಸತ್ತಿಗೆ ಅಗೌರವವಾಗುವ ರೀತಿ ಮಾತನಾಡುವ ಮೂಲಕ 130 ಕೋಟಿ ಭಾರತೀಯರಿಗೆ ಅವಮಾನ ಮಾಡಿದ್ದಾರೆ. 2014ರ ಮೇನಲ್ಲಿ ಸಂಸತ್ತಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ನಾಟಕೀಯವಾಗಿ ಮೆಟ್ಟಲಿಗೆೆ ಚುಂಬಿಸಿದ ಪ್ರಚಾರಪ್ರಿಯ ಮೋದಿ ಇಂದು ಅದೇ ಸಂಸತ್ತಿಗೆ ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಂಡಿರುವುದು ವಾಸ್ತವದಲ್ಲಿ ಸಂಘ ಪರಿವಾರದ ಹಿಡನ್ ಮನಃಸ್ಥಿತಿಯ ಪ್ರತಿಬಿಂಬವೇ ಆಗಿದೆ.
ಸಂಘ ಪರಿವಾರ ಸಾರ್ವಜನಿಕವಾಗಿ ಏನೇ ಹೇಳಲಿ, ಅದಕ್ಕೆ ಸಂವಿಧಾನ, ಸಂಸತ್ತು, ಪ್ರಜಾತಂತ್ರ, ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ ಮುಂತಾದ ಜನಪರ ತತ್ವಗಳಲ್ಲಿ ನಂಬಿಕೆ ಇಲ್ಲ ಎನ್ನುವುದು ತೆರೆದ ರಹಸ್ಯ. ಅದಕ್ಕೆ ಬೇಕಿರುವುದು ಮತ್ತು ಅದು ಸ್ಥಾಪಿಸಲು ಹವಣಿಸುತ್ತಿರುವುದು ಏಕ ನಾಯಕನ ಸರ್ವಾಧಿಕಾರಿ ಆಳ್ವಿಕೆಯ ಹಿಂದೂ ರಾಷ್ಟ್ರ. ಫ್ಯಾಶಿಸ್ಟ್ ಮತ್ತು ನಾಝಿ ಪಕ್ಷಗಳಿಂದ ಎರವಲು ಪಡೆದು ರಚಿಸಲಾಗಿರುವ ಅದರ ಘೋಷವಾಕ್ಯವೇ ಇದನ್ನು ಸ್ಪಷ್ಟಪಡಿಸುತ್ತದೆ: ‘‘ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತದಿಂದ ಸ್ಫೂರ್ತಿ ಪಡೆಯುತ್ತಿರುವ ಆರೆಸ್ಸೆಸ್ ಈ ಮಹಾನ್ ದೇಶದ ಪ್ರತಿಯೊಂದು ಮೂಲೆಯಲ್ಲೂ ಹಿಂದುತ್ವದ ಜ್ಯೋತಿಯನ್ನು ಬೆಳಗಿಸುತ್ತಿದೆ’’ (ಎಂ.ಎಸ್.ಗೋಳ್ವಲ್ಕರ್, ಶ್ರೀ ಗುರೂಜಿ ಸಮಗ್ರ ದರ್ಶನ್, ನಾಗಪುರ, ಸಂಪುಟ 1, ಪುಟ 11). ಆರೆಸ್ಸೆಸ್ ಕಾರ್ಯಕರ್ತರಿಗೆ ಕಡ್ಡಾಯವಾಗಿರುವ ಪ್ರಾರ್ಥನೆ ಮತ್ತು ಪ್ರತಿಜ್ಞಾ ವಿಧಿಗಳಲ್ಲಿ ಅವರೆಲ್ಲರೂ ಹಿಂದೂ ರಾಷ್ಟ್ರ ನಿರ್ಮಾಣದ ಕೆಲಸಕ್ಕೆ ಬದ್ಧರಾಗಿರಬೇಕೆಂದು ಹೇಳಲಾಗಿದೆ. ಅವರ ಪ್ರಾರ್ಥನೆಯ ಕೆಲವು ವಾಕ್ಯಗಳು ಹೀಗಿವೆ: ‘‘....ಸರ್ವಶಕ್ತನಾದ ಪರಮಾತ್ಮನೇ ಹಿಂದೂ ರಾಷ್ಟ್ರದ ಅಖಂಡ ಭಾಗವಾದ ನಾವು ನಿನಗೆ ಭಕ್ತಿಯಿಂದ ವಂದಿಸುತ್ತೇವೆ/ ನಿನ್ನ ಧ್ಯೇಯ ಸಾಧನೆಗಾಗಿ ನಾವು ಟೊಂಕಕಟ್ಟಿ ನಿಂತಿದ್ದೇವೆ/ ಅದನ್ನು ಸಾಧಿಸುವುದಕ್ಕಾಗಿ ನಿನ್ನ ಆಶೀರ್ವಾದಗಳನ್ನು ನಮಗೆ ನೀಡು.’’ (ಶಾಖಾ ದರ್ಶಿಕಾ, ಜೈಪುರ, 1997)
ಈಗ ಪ್ರಧಾನಿ ಮೋದಿಯವರ ಭಾಷಣಕ್ಕೆ ಮರಳೋಣ. ಇತ್ತೀಚೆಗೆ ಗುಜರಾತ್, ರಾಜಸ್ಥಾನ ಮೊದಲಾದ ಕಡೆಗಳಲ್ಲಿ ನಡೆದ ಚುನಾವಣೆಗಳ ನಂತರ ಸಂಘ ಪರಿವಾರದಲ್ಲಿ ಅಪಾಯದ ಕರೆಗಂಟೆ ಮೊಳಗಿದೆ. ಇದೇ ಪ್ರವೃತ್ತಿ ಮುಂದುವರಿದರೆ 2019ರ ಚುನಾವಣೆಗಳಲ್ಲಿ ಪಕ್ಷದ ಗತಿ ಏನು, 2025ರ ಒಳಗಾಗಿ ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಗುರಿಯ ಕತೆ ಏನು ಎಂಬ ಭಯ ಬಿಜೆಪಿಯನ್ನು ಕಾಡತೊಡಗಿದೆ. ಪ್ರಧಾನಿ ಮೋದಿ ಸಂಸತ್ತಿನ ಸಂಪ್ರದಾಯ ಧಿಕ್ಕರಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಮಟ್ಟಕ್ಕೆ ಇಳಿಯುವುದರ ಹಿಂದೆ ಇದೇ ಭಯ ಮತ್ತು ಅಭದ್ರತೆ ಕೆಲಸಮಾಡಿರುವುದರಲ್ಲಿ ಸಂಶಯವಿಲ್ಲ. ಸಂಸತ್ತನ್ನು ಈ ರೀತಿಯಾಗಿ ಚುನಾವಣಾ ಪ್ರಚಾರಕ್ಕೆ ಮತ್ತು ಪ್ರತಿಪಕ್ಷಗಳ ಹಾಲಿ ಮತ್ತು ಮಾಜಿ ನಾಯಕರ ಮೇಲೆ ಕೆಸರೆರಚುವುದಕ್ಕೆ ದುರ್ಬಳಕೆ ಮಾಡಿಕೊಂಡಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಹಾಗಾದರೆ ನಾಲ್ಕು ರಸ್ತೆ ಕೂಡುವಲ್ಲಿ ಗಂಟಲು ಹರಿಯುವ ಹಾಗೆ ಬೊಬ್ಬಿರಿಯುವ ತುಂಡು ನಾಯಕರಿಗೂ ದೇಶದ ಪ್ರಧಾನಮಂತ್ರಿಗೂ ಏನು ವ್ಯತ್ಯಾಸವೆಂದು ಜನ ಪ್ರಶ್ನಿಸಿದರೆ ಅದರಲ್ಲಿ ಅಚ್ಚರಿಯೇನು ಬಂತು? ಹಿಂದಿನ ಯಾವ ಪ್ರಧಾನಿಯೂ ಸಂಸತ್ತಿನ ಘನತೆಯನ್ನು ಇಷ್ಟೊಂದು ಕೆಳಮಟ್ಟಕ್ಕೆ ಇಳಿಸಿರಲಿಲ್ಲ.
ಮೋದಿಯವರ ಭಾಷಣದಲ್ಲಿ ನೆಹರೂ, ಪಟೇಲ್, ದೇಶ ವಿಭಜನೆ, ಕಾಶ್ಮೀರ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಚಾರಿತ್ರಿಕವಾಗಿ ಹಲವು ತಪ್ಪುಗಳಿದ್ದವು. ಈಗಾಗಲೇ ಇದರ ಕಡೆಗೆ ಗಮನ ಸೆಳೆದಿರುವ ರಾಜಕೀಯ ವಿಶ್ಲೇಷಕರು ಮತ್ತು ಇತಿಹಾಸತಜ್ಞರು ಸತ್ಯಾಂಶಗಳನ್ನು ಜನತೆಯ ಮುಂದಿಟ್ಟಿದ್ದಾರೆೆ: (1) ಪಟೇಲರು ದೇಶ ವಿಭಜನೆಯನ್ನು ವಿರೋಧಿಸಿರಲಿಲ್ಲ. (2) ಪಟೇಲರು ಕಾಶ್ಮೀರವನ್ನು ಭಾರತದ ಹೈದರಾಬಾದಿನೊಂದಿಗೆ ವಿನಿಮಯ ಮಾಡಿಕೊಳ್ಳುವ ಪ್ರಸ್ತಾಪವನ್ನು ಪಾಕಿಸ್ಥಾನದ ಮುಂದಿಟ್ಟಿದ್ದರು. (3) ಡಿಸೆಂಬರ್ 1939ರ ಹಿಂದೂ ಮಹಾಸಭಾ ಅಧಿವೇಶನದ ಸಂದರ್ಭದಲ್ಲಿ ದ್ವಿರಾಷ್ಟ್ರ ಕಲ್ಪನೆಗೆ ನಾಂದಿ ಹಾಕಿದಾತ ಸಾವರ್ಕರ್. ಒಂದು ವಿಧದಲ್ಲಿ ನೋಡಿದರೆ ಮೋದಿಯವರ ದಿಕ್ಕು ತಪ್ಪಿಸುವ ಮಾತುಗಳಲ್ಲಿ ಏನೇನೂ ವಿಶೇಷವಿಲ್ಲ. ಏಕೆಂದರೆ ಇದರ ಪ್ರಾರಂಭವನ್ನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲ ಮತ್ತು ಅದಕ್ಕೂ ಮುನ್ನ ಆರೆಸ್ಸೆಸ್ನ ಪದಾಧಿಕಾರಿಯಾಗಿದ್ದ ಕಾಲದಷ್ಟು ಹಿಂದೆಯೇ ಗುರುತಿಸಬಹುದು. ಉದಾಹರಣೆಗೆ ಸ್ಥಳೀಯ ಚುನಾವಣೆಗಳ ಕಾಲದಲ್ಲಿ ಉಗ್ರರ ಗುಮ್ಮವನ್ನು ಸೃಷ್ಟಿಸಿರುವ ಸಂಗತಿ, ವೈಬ್ರೆಂಟ್ ಗುಜರಾತ್ ಶೃಂಗಸಭೆಗಳಲ್ಲಿ ಬಿಲಿಯಗಟ್ಟಲೆ ಡಾಲರು ಹೂಡಿಕೆಯಾಗಿದೆ ಎಂದು ಪ್ರಚಾರ ಮಾಡಿದ ನಂತರ ಅವುಗಳಲ್ಲಿ ಹೆಚ್ಚಿನಂಶ ಬರೀ ಪ್ರಸ್ತಾಪಗಳಾಗಿಯೇ ಉಳಿದು ಅಂತಿಮವಾಗಿ ಗುಜರಾತ್ ಮಾದರಿ ಠುಸ್ಸಾದ ವಿಚಾರ ಯಾರಿಗೆ ತಾನೆ ಗೊತ್ತಿಲ್ಲ? ಇರಲಿ. ಸದ್ಯಕ್ಕೆ ನಾವು 2014ರ ನಂತರದ ಹೇಳಿಕೆಗಳ ಮೇಲೆ ಕೇಂದ್ರೀಕರಿಸೋಣ. ಪಟ್ಟಿ ಸಾಕಷ್ಟು ದೊಡ್ಡದಿದ್ದು ಅವುಗಳ ಪೈಕಿ ಕೆಲವು ಪ್ರಮುಖ ನಿದರ್ಶನಗಳು ಇಲ್ಲಿವೆ:
*ಮೋದೀಜಿ ದಿಲ್ಲಿ ವಿಶ್ವವಿದ್ಯಾನಿಲಯದ ಬಿ.ಎ. ಪದವೀಧರ ಮತ್ತು ಗುಜರಾತ್ ವಿಶ್ವವಿದ್ಯಾನಿಲಯದಿಂದ ಸಕಲ ಸಮಾಜ ವಿಜ್ಞಾನ ವಿಷಯದಲ್ಲಿ ಎಂ.ಎ. ಪಾಸ್ ಆಗಿದ್ದಾರೆ ಎಂಬ ಹೇಳಿಕೆ.
* 2015ರಲ್ಲಿ ನಾಗಾಲ್ಯಾಂಡಿನ NSCN (IM) ಬಣದ ಜೊತೆ ಚಾರಿತ್ರಿಕ ಶಾಂತಿ ಒಪ್ಪಂದ ಆಗಿದೆ ಎಂದು ಘೋಷಿಸಲಾಯಿತು. ಆದರೆ ರಕ್ಷಣಾ ಮಂತ್ರಿಗಾಗಲಿ ಸಂಬಂಧಪಟ್ಟ ಯಾವನೇ ಮುಖ್ಯಮಂತ್ರಿಗಾಗಲಿ ಇದರ ಅರಿವಿಲ್ಲ ಮಾತ್ರವಲ್ಲ ಒಪ್ಪಂದದಲ್ಲಿ ಏನಿದೆ ಎಂದೂ ಗೊತ್ತಿಲ್ಲ. * ಯುಪಿಎ ಸರಕಾರದ ಯೋಜನೆಗಳ ಹಳೆ ಬಾಟಲಿಗೆ ಹೊಸಾ ಲೇಬಲ್ ಹಚ್ಚಿ ಅವು ಎನ್ಡಿಎ ಸರಕಾರದ ವಿನೂತನ ಯೋಜನೆಗಳೆಂದು ಟಾಂಟಾಂ ಮಾಡಲಾಗುತ್ತಿದೆ.
* ಭಾರತೀಯ ಸೈನಿಕರು ಲಾಗಾಯ್ತಿನಿಂದ ಮಾಡುತ್ತಾ ಬಂದಿರುವ ಗಡಿ ಸಮೀಪದ ದಾಳಿ ಕಾರ್ಯಾಚರಣೆಗೆ ಕಳೆದ ವರ್ಷ ಸರ್ಜಿಕಲ್ ದಾಳಿ ಎಂಬ ವಿನೂತನ, ಆಕರ್ಷಕ ಹೆಸರು ಕೊಟ್ಟು ಅದು ಮೊದಲ ಬಾರಿಗೆ ಆದುದೆಂಬಂತೆ ಬಿಂಬಿಸಲಾಯಿತು.
* ಚೀನಾ ಜೊತೆಗಿನ 73 ದಿನಗಳ ಡೋಕಾಲಾ ಬಿಕ್ಕಟ್ಟು ಬಗೆಹರಿದಿದೆ, ಚೀನೀಯರನ್ನು ಒದ್ದೋಡಿಸಲಾಗಿದೆ ಎಂದು 56 ಇಂಚುಗಳನ್ನುಬ್ಬಿಸಿ ದೇಶಾದ್ಯಂತ ಪ್ರಚಾರ ಮಾಡಲಾಯಿತು. ಆದರೆ ಒಪ್ಪಂದದ ವಿವರಗಳನ್ನು ಸಂಸತ್ತಿಗೆ ತಿಳಿಸಲಾಗಿಲ್ಲ. ಈಗ ನೋಡಿದರೆ ಚೀನೀಯರು ಎಲ್ಲೂ ಹೋಗಿಲ್ಲ, ಅಲ್ಲೇ ಇದ್ದಾರೆ; ಸಾವಿರಾರು ಚೀನೀ ಸೈನಿಕರು ಅಲ್ಲಿ ಬಗೆಬಗೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಸತ್ಯ ಬಟಾಬಯಲಾಗಿದೆ.
* ಇತ್ತೀಚಿನ ಗುಜರಾತ್ ಚುನಾವಣೆಗಳ ವೇಳೆಯಂತೂ ಮೋದಿಯವರ ನಾಲಿಗೆಯಿಂದ ಸಭ್ಯತೆಯ ಎಲ್ಲೆ ಮೀರಿದ, ಹಿಂದೆಂದೂ ಕಂಡುಕೇಳಿರದ ಹಸಿಹಸಿ ಸಟೆನುಡಿಗಳು ಹೊರಹೊಮ್ಮಿವೆ. ‘‘ಮಣಿ ಶಂಕರ್ ಅಯ್ಯರ್ ಪಾಕಿಸ್ಥಾನಕ್ಕೆ ಹೋಗಿ ಮೋದಿಯನ್ನು ಕೊಲ್ಲುವ ಪಿತೂರಿ ಹೂಡಿದರು; ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ, ಮಾಜಿ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಮೊದಲಾದವರು ಅಯ್ಯರ್ ಮನೆಯಲ್ಲಿ ಪಾಕಿಸ್ಥಾನದ ಮಾಜಿ ವಿದೇಶ ಮಂತ್ರಿಯನ್ನು ಭೇಟಿಯಾಗಿ ಅಹಮದ್ ಪಟೇಲ್ರನ್ನು ಗುಜರಾತಿನ ಮುಖ್ಯಮಂತ್ರಿಯಾಗಿಸುವ ಷಡ್ಯಂತ್ರ ರೂಪಿಸಿದರು’’ ಎಂದು ಆರೋಪಿಸುವುದು ಪ್ರಧಾನಿಯ ಸ್ಥಾನದಲ್ಲಿರುವವರು ಆಡಬಹುದಾದ ಮಾತುಗಳೇ?
* ನೋಟು ರದ್ದತಿಯಿಂದ ಖೋಟಾ ನೋಟು, ಭಯೋತ್ಪಾದನೆ, ಕಪ್ಪುಹಣಗಳ ಹಾವಳಿ ಬಹುತೇಕ ಮಟ್ಟಿಗೆ ಕೊನೆಗೊಳ್ಳುತ್ತದೆ ಎಂಬ ಮಾತು ಇನ್ನೂ ಗಾಳಿಯಲ್ಲೇ ತೇಲಾಡುತ್ತಿದೆ. 15 ತಿಂಗಳುಗಳೇ ಉರುಳಿದರೂ ಹಳೆ ನೋಟುಗಳ ಲೆಕ್ಕ ಇನ್ನೂ ಮುಗಿದಿಲ್ಲ; ಉಗ್ರರ ಹಾವಳಿ ಮೊದಲಿಗಿಂತ ಹೆಚ್ಚೇ ಆಗಿದೆ.
* ಸರಳ ಮತ್ತು ಉತ್ತಮ ಎಂದು ಘೋಷಿಸಲಾದ ಜಿಎಸ್ಟಿ ಭಾರೀ ಕ್ಲಿಷ್ಟಕರವಾಗಿ ಪರಿಣಮಿಸಿದೆ.
* ರೂ 15 ಲಕ್ಷ ಪ್ರಜೆಯ ಕಿಸೆಗೆ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಇವೇ ಮೊದಲಾದ ಚುನಾವಣಾ ಕಾಲದ ಪೊಳ್ಳು ಭರವಸೆಗಳನ್ನು ಜನ ಇನ್ನೂ ಮರೆತಿಲ್ಲ.