ಸರಳತೆಯಿಂದಲೂ ಸಿದ್ಧಿಸುತ್ತೆ ಮೋಕ್ಷ...
ನರೇಂದ್ರ ನಾಯಕ್ ಜೀವನ ಕಥನ
ಭಾಗ-33
ಮನುಷ್ಯ ಬದುಕಿರುವಾಗ ಅವನಿಗೆ ಸಿಗದ ಗೌರವ, ಸ್ಥಾನಮಾನ, ಸತ್ತಮೇಲೆ ಯಾವ ಶ್ರಾದ್ಧ, ಧಾರ್ಮಿಕ ವಿಧಿ ವಿಧಾನಗಳಿಂದಾದರೂ ಪೂರೈಸಲು ಸಾಧ್ಯವೇ? ಇದು ನನ್ನ ಪ್ರಶ್ನೆ. ಬದುಕಿರುವಾಗ ನಿಕೃಷ್ಟವಾಗಿ ನೋಡುವವರು ಸತ್ತ ಮೇಲೆ ವೈಕುಂಠ ಸಮಾರಾಧನೆಯ ಹೆಸರಿನಲ್ಲಿ ತಮ್ಮ ಶ್ರೀಮಂತಿಕೆಯ ಪ್ರದರ್ಶನ ಮಾಡುವುದರಿಂದ ಏನು ಪ್ರಯೋಜನ.
ಹೌದು, ಹೇಗೆ ಹುಟ್ಟು ಆಕಸ್ಮಿಕವೋ, ಸಾವು ಕೂಡಾ ಸಹಜ. ಹಾಗಾಗಿ ಜೀವಂತವಾಗಿ ಇರುವಾಗ ಸಿಗದ ಗೌರವವನ್ನು ಸತ್ತ ಮೇಲೆ ಮನುಷ್ಯರಿಗೆ ನೀಡಲಾಗುತ್ತದೆ. ಇದು ನಾವು ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ನಾನು ನನ್ನ ಹೆತ್ತವರ ಮರಣದ ಸಂದರ್ಭ ನಡೆದ ವಿಷಯಗಳನ್ನು ಈಗಾಗಲೇ ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ. 1995ರಲ್ಲಿ ನನ್ನ ತಾಯಿ ತೀರಿ ಹೋದ ವೇಳೆ ಯಾವುದೇ ಧಾರ್ಮಿಕ ವಿಧಾನಗಳಿಲ್ಲದೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಆವಾಗ ತಂದೆ ಭಾವನಾತ್ಮಕವಾಗಿ ನನ್ನನ್ನು ಕೆಲವೊಂದು ವಿಧಿ ವಿಧಾನಗಳನ್ನು ನಡೆಸುವಂತೆ ಕೋರಿದ್ದರೂ ನಾನು ಮಾಡಿರಲಿಲ್ಲ. ತಮ್ಮಂದಿರಿಗೆ ಕೋರ ಬಟ್ಟೆಯನ್ನು ತೊಡಿಸಿ ಮೃತದೇಹವನ್ನು ಹೊತ್ತೊಯ್ಯುವ ಪ್ರಕ್ರಿಯೆ ನಡೆಸಿದ್ದರು. ನಾನು ಯಾವತ್ತೂ ಧರಿಸುವ ಜೀನ್ಸ್ ಪ್ಯಾಂಟ್ ಹಾಗೂ ಶರ್ಟ್‌ನಲ್ಲಿಯೇ ಈ ಕ್ರಿಯೆಯಲ್ಲಿ ಭಾಗವಹಿಸಿದ್ದೆ. ಬಳಿಕ 14ನೇ ದಿನದಂದು ನಗರದ ಸಿವಿ ನಾಯಕ್ ಸಭಾಂಗಣದಲ್ಲಿ ಯಾವುದೇ ಪುರೋಹಿತರ ಭಾಗವಹಿಸುವಿಕೆ ಇಲ್ಲದೆ ಊಟದ ಕಾರ್ಯಕ್ರಮವನ್ನು ನಡೆಸಲಾಯಿತು. ಬಳಿಕ ನನ್ನ ತಂದೆ ತೀರಿ ಹೋದ ಸಂದರ್ಭ ನಾನು ಉತ್ತರಾಖಂಡ್‌ದ ಪಿತೊರಾಘರ್‌ನಲ್ಲಿದ್ದೆ. ನಾನು ಅಲ್ಲಿಗೆ ಹೋಗುವ ವೇಳೆ ಅವರು ಹುಷಾರಿಲ್ಲದೆ ಕೆಲ ಸಮಯ ಆಸ್ಪತ್ರೆಯಲ್ಲಿದ್ದರು. ಅವರು ಕೊನೆಯುಸಿರೆಳೆದ ದಿನ ನಾನು ತರಬೇತಿ ಕಾರ್ಯಕ್ರಮವೊಂದರಲ್ಲಿದ್ದು, ಆ ಸಂದರ್ಭ ಕರೆ ಬಂದಾಗ ತರಬೇತಿಗೆ ಬಂದಿದ್ದವರೆಲ್ಲಾ ‘ಕ್ಯಾ ಹುವಾ ಸರ್?’ (ಏನಾಯ್ತು) ಎಂದು ನನ್ನನ್ನು ಪ್ರಶ್ನಿಸಿದರು. ‘ಮೇರೆ ಪಿತಾಜಿ ಗುಜರ್‌ಗೆಯೇ’ (ನನ್ನ ತಂದೆ ಮೃತಪಟ್ಟರು) ಎಂದೆ. ‘ತೋ ಆಪ್ ಜಾ ರಹೆ ಹೇನಾ? ಎಂದು ಪ್ರಶ್ನಿಸಿದರು. (ನೀವು ಮಂಗಳೂರಿಗೆ ಹೋಗುತ್ತೀರಾ) ‘ನಿಮ್ಮ ತಂದೆ ತೀರಿ ಹೋಗಿದ್ದರೂ ನೀವು ಹೋಗುವುದಿಲ್ಲವೇ ಎಂಬ ಆತಂಕದ ನುಡಿ ಅವರದ್ದಾಗಿತ್ತು. ನಿಜ, ನಾನು ಬರಬಹುದಿತ್ತು. ಆದರೆ ತರಬೇತಿಯನ್ನು ಅರ್ಧದಲ್ಲೇ ನಿಲ್ಲಿಸಿ ಬರಬೇಕಾಗುತ್ತದೆ. ಆದ್ದರಿಂದ ನಾನು ಅವರಿಗೆ ಸಮಾಧಾನದಿಂದಲೇ ಉತ್ತರ ನೀಡಿದೆ. ‘‘ನಾನು ಹೋದರೆ ಅವರು ಬದುಕುತ್ತಾರೆಂದಾದರೆ ನಾನು ಹೋಗಬಹುದಿತ್ತು. ಈಗಿರುವ ಕಾರ್ಯ ಅವರ ಮೃತದೇಹದ ಅಂತ್ಯಸಂಸ್ಕಾರ. ಅದಕ್ಕೆ ನಾನು ವ್ಯವಸ್ಥೆ ಮಾಡಿದ್ದೇನೆ’’ ಎನ್ನುತ್ತಾ ನನ್ನ ತರಬೇತಿ ಮುಂದುವರಿಸಿದೆ. ಮತ್ತೆ ನಾನು ಕಾರ್ಯಕ್ರಮದ ನಿಮಿತ್ತ ಹೊಸದಿಲ್ಲಿಯಲ್ಲಿದ್ದಾಗ ನನ್ನ ಸೋದರ ಸಹೋದರನ ಕರೆ ಬಂತು. ‘ಚಿಕ್ಕಪ್ಪ ತೀರಿ 12 ದಿನ ಆಗಿದೆ’ ಎಂದು ಆತ ಹೇಳಿದ. ಅದಕ್ಕೆ ನಾನೇನು ಮಾಡಬೇಕೆಂದು ಪ್ರಶ್ನಿಸಿದೆ. ‘ಶುದ್ಧ ಮಾಡಬೇಕಲ್ಲವೇ?’ ಎಂದು ಹೇಳಿದ. ಅದು 12 ದಿನದಲ್ಲಿ ಆಗಿದೆಯಲ್ಲಾ ಎಂದು ನಾನು ಮರು ಪ್ರಶ್ನಿಸಿದೆ. ಇಲ್ಲ ಶುದ್ಧ ಮಾಡಬೇಕಾದರೆ ಕೆಲವೊಂದು ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಬೇಕೆಂದು ಆತ ಹೇಳಿದ. ನಾನು ಹೊಸದಿಲ್ಲಿಯಲ್ಲಿದ್ದೇನೆ. ನಿನಗೇನು ಬೇಕಾದರೂ ಮಾಡು ಎಂದೆ. ನೀನೇನು ಮಾಡುವುದಿಲ್ಲವೇ? ನಿನ್ನ ಅಮ್ಮ ಸತ್ತಾಗಲೂ ನೀನೇನೂ ಕ್ರಿಯೆ ಮಾಡಿಲ್ಲ ಎಂದು ಅಸಮಾಧಾನದಿಂದ ಹೇಳಿದ. ‘ಹೌದು, ನಾನು ಸತ್ತಾಗಲೂ ಏನು ಮಾಡುವುದು ಬೇಡ’ ಎಂದು ಉತ್ತರಿಸಿದೆ. ನಾವೇನಾದರೂ ಆಡಿದರೆ ಆಕ್ಷೇಪವಿದೆಯೇ ಎಂದು ಪ್ರಶ್ನಿಸಿದ. ನೀನು ಏನು ಬೇಕಾದರೂ ಮಾಡು ಎಂದು ಹೇಳಿ ಮುಗಿಸಿದ್ದೆ. ಆ ಬಳಿಕ ನಾನು ಮಂಗಳೂರಿಗೆ ಬಂದ ವೇಳೆ ‘ಎಂತ ಮಗ ಮಾರಾಯ ನೀನು. ನಿನ್ನ ಅಪ್ಪನಿಗೆ ಕೊನೆ ಪಕ್ಷ ತೃತೀಯ ಮಟ್ಟದ ಶ್ರಾದ್ಧವಾದರೂ ನಿನಗೆ ಮಾಡಬಹುದಿತ್ತಲ್ಲ’ ಎಂದ. ಅಂದರೆ ಶ್ರಾದ್ಧದಲ್ಲೂ ವಿಧಗಳಿವೆ. ಉಚ್ಚ ಮಟ್ಟದ್ದಾದರೆ 10 ಸಾವಿರ ರೂ.ಗಳಿಂತ ಅಧಿಕ ಖರ್ಚು ಮಾಡಿ ಮಾಡುವಂತಹದ್ದು. ಸೆಕೆಂಡ್ ಕ್ಲಾಸ್ ಎಂದರೆ, 8 ಸಾವಿರ ರೂ.ವರೆಗಿನ ಖರ್ಚು. ಇನ್ನು ತೃತೀಯ ಮಟ್ಟದ್ದು ಎಂದರೆ ಸುಮಾರು ಮೂರು ಸಾವಿರ ರೂ. ಖರ್ಚಿನಲ್ಲಿ ನಡೆಯುತ್ತದೆಯಂತೆ.
ನಾನು ಉತ್ತರಾಖಂಡದಲ್ಲಿ ತರಬೇತಿಯಲ್ಲಿದ್ದ ಸಂದರ್ಭ ಅಲ್ಲಿನ ಜನ ಹೇಳಿದ್ದು ಈಗಲೂ ನೆನಪಿದೆ. ಅಲ್ಲಿ ಯಾರಾದರೂ ಸತ್ತರೆ ಅವನು ಪುಣ್ಯವಂತ. ಬದುಕುಳಿದವ ಸತ್ತಹಾಗೆ. ಯಾಕೆ ಹೀಗೆ ಎಂದು ಪ್ರಶ್ನಿಸಿದರೆ, ಸತ್ತವರ ಸ್ಮರಣಾರ್ಥ ಕುಟುಂಬದವರು ಸತ್ತವರ ಅಂತ್ಯ ಕ್ರಿಯೆ ನಡೆಸುವ ಧಾರ್ಮಿಕ ವ್ಯಕ್ತಿಗೆ ಒಂದು ವರ್ಷದ ಮನೆಯುಪಯೋಗಿ ಸಾಮಗ್ರಿಗಳನ್ನೆಲ್ಲಾ ಕೊಡಬೇಕಂತೆ. ಅದೆಷ್ಟರಮಟ್ಟಿಗೆ ಎಂದರೆ, ಕೆಲವೊಮ್ಮೆ, ಮನೆ ಮಠವನ್ನೆಲ್ಲಾ ಅಡವಿಡುವ ಪರಿಸ್ಥಿತಿಯೂ ಇದೆ ಎಂದು ಹೇಳಿದಾಗ ನನಗಂತೂ ತುಂಬಾ ವೇದನೆಯಾಗಿತ್ತು.
ಮನುಷ್ಯ ಬದುಕಿರುವಾಗ ಅವನಿಗೆ ಸಿಗದ ಗೌರವ, ಸ್ಥಾನಮಾನ, ಸತ್ತಮೇಲೆ ಯಾವ ಶ್ರಾದ್ಧ, ಧಾರ್ಮಿಕ ವಿಧಿ ವಿಧಾನಗಳಿಂದಾದರೂ ಪೂರೈಸಲು ಸಾಧ್ಯವೇ? ಇದು ನನ್ನ ಪ್ರಶ್ನೆ. ಬದುಕಿರುವಾಗ ನಿಕೃಷ್ಟವಾಗಿ ನೋಡುವವರು ಸತ್ತ ಮೇಲೆ ವೈಕುಂಠ ಸಮಾರಾಧನೆಯ ಹೆಸರಿನಲ್ಲಿ ತಮ್ಮ ಶ್ರೀಮಂತಿಕೆಯ ಪ್ರದರ್ಶನ ಮಾಡುವುದರಿಂದ ಏನು ಪ್ರಯೋಜನ.
ಅದೊಂದು ಬಾರಿ ನನ್ನ ಸಂಬಂಧಿಕರೊಬ್ಬರು ಸುಮಾರು 80 ವರ್ಷ ಪ್ರಾಯದವರಿರಬಹುದು. ಅವರು 12 ವರ್ಷದ ಬ್ರಾಹ್ಮಣ ಯುವಕನ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಇವೆಲ್ಲಾ ಏನು?
ಸುಮಾರು 25 ವರ್ಷಗಳ ಹಿಂದಿನ ಘಟನೆಯಿರಬಹುದು. ಪಾಣೆಮಂಗಳೂರಿನಲ್ಲಿ ನನ್ನ ಸ್ನೇಹಿತರೊಬ್ಬರಿದ್ದರು. ಅವರು ಪತ್ನಿ ಸೇರಿ ಕಷ್ಟಪಟ್ಟು ಹೊಟೇಲ್ ಮಾಡಿ ಮಕ್ಕಳನ್ನು ಓದಿಸಿ ದೊಡ್ಡ ವ್ಯಕ್ತಿಗಳನ್ನಾಗಿಸಿದ್ದರು. ಆದರೆ ಇವರಿಬ್ಬರಿಗೆ ವಯಸ್ಸಾದ ವೇಳೆ ಮಕ್ಕಳು ಅವರಿಬ್ಬರನ್ನು ಅವರ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಸ್ವಂತ ತಂದೆ ತಾಯಿಯನ್ನೇ ನೋಡಿಕೊಳ್ಳಲಾಗದೆ ಅವರನ್ನು ಸಂಬಂಧಿಕರ ಮನೆಯಲ್ಲಿ ಬಿಡುವ ಪರಿಸ್ಥಿತಿ ನಮ್ಮದು. ಅದಿರಲಿ, ಏನೋ ಅವರ ಸಮಸ್ಯೆ ಎಂದು ಹೇಳಬಹುದು. ಆದರೆ ಅದೊಂದು ದಿನ ಸಂಬಂಧಿಕರ ಮನೆಯಲ್ಲಿದ್ದ ತಾಯಿ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದರು. ಆ ಸಂದರ್ಭ ಮುಂಬೈನಲ್ಲಿ ಉನ್ನತ ಉದ್ಯೋಗದಲ್ಲಿದ್ದ ಪುತ್ರ ಸಂಬಂಧಿಕರ ಮನೆಯವರಿಗೆ ಪತ್ರ ಬರೆದು ‘‘ಆಕೆಯನ್ನು ಓರ್ವ ಪ್ರಜೆಯಾಗಿ ಉತ್ತಮವಾಗಿ ನೋಡಿಕೊಳ್ಳಿ’’ ಎಂದು ಹೇಳಿದ್ದ. ಆಂಗ್ಲ ಭಾಷೆಯಲ್ಲಿ ಪತ್ರ ಬರೆದಿದ್ದನ್ನು ಆ ಸಂಬಂಧಿಕರು ನನ್ನ ಪರಿಚಯಸ್ಥರಾಗಿದ್ದರಿಂದ ನನ್ನಲ್ಲಿ ಓದಿಸಿದ್ದರು. ನಾನು ವಿಷಯ ತಿಳಿಸಿದೆ. ಕೊನೆಗೆ ಅವರಿಗೆ ನಾವೆಲ್ಲಾ ಸೇರಿ ಚಿಕಿತ್ಸೆ ಕೊಡಿಸಿದೆವು. ಹಾಗಿದ್ದರೂ ಕೆಲ ದಿನಗಳಲ್ಲಿ ಅವರು ತೀರಿಕೊಂಡು ಬಿಟ್ಟರು. ಆ ಸಂದರ್ಭ ಓಡಿ ಬಂದಿದ್ದ ಮಗ ಹಾಗೂ ಇತರ ಮಕ್ಕಳು ಕಣ್ಣೀರಿನ ಹೊಳೆಯನ್ನೇ ಹರಿಸಿದ್ದರು. ಅಮ್ಮನ ಶ್ರಾದ್ಧ ಅತ್ಯಂತ ಅದ್ದೂರಿಯಿಂದ ಮಾಡಬೇಕೆಂದು ಹೇಳಿ ಮಾಡಿಸಿದರು. ಇಷ್ಟಾಗಿ ಮಕ್ಕಳು ಮುಂದೆ ತಂದೆಯನ್ನಾದರೂ ತಮ್ಮ ಜತೆ ಕರೆಸಿಕೊಳ್ಳಬಹುದೆಂಬ ನಮ್ಮ ಊಹೆ ಸುಳ್ಳಾಗಿತ್ತು. ಇಲ್ಲೇ ಬಿಟ್ಟು ಹೋಗಿದ್ದರು. ಅದೊಂದು ದಿನ ಸಂಬಂಧಿಕರು ತಂದೆಯನ್ನು ಕರೆದುಕೊಂಡು ಮುಂಬೈಗೆ ಹೋಗಿ ಬೆಳಗ್ಗೆ ಬೆಳಗ್ಗೆ ಮಗನ ಮನೆ ಬಾಗಿಲು ಬಡಿದರು. ಬಾಗಿನಲ್ಲಿ ಅಪ್ಪ ಹಾಗೂ ಸಂಬಂಧಿಕರನ್ನು ಕಂಡು ಕಸಿವಿಸಿಗೊಂಡರೂ, ಅಪ್ಪನನ್ನು ಕರೆದುಕೊಂಡು ಬಂದಿದ್ದೀರಾ, ನಾನೇ ಕರೆ ತರಬೇಕೆಂದಿದ್ದೆ ಎಂದು ಹೇಳುತ್ತಾ ಮಗ ತಂದೆಯನ್ನು ಬರಮಾಡಿಕೊಂಡಿದ್ದ. ಆ ಸಂಬಂಧಿಕರು ಮುಂಬೈ ನಿಂದ ಹಿಂದಿರುಗಿದ ಕೆಲ ದಿನಗಳಲ್ಲೇ ತಂದೆಯನ್ನು ಅಲ್ಲಿನ ಆಶ್ರಮಕ್ಕೆ ಸೇರಿಸಿದ ಮಾಹಿತಿ ದೊರಕಿತ್ತು. ಒಟ್ಟಿನಲ್ಲಿ ಇದೆಲ್ಲಾ ಕೇವಲ ತೋರಿಕೆಯ ಪ್ರೀತಿ, ಬಾಂಧವ್ಯ ಯಾಕೆ? ಸತ್ತ ಮೇಲೆ ತೋರುವ ಪ್ರೀತಿ ಇರುವಾಗ ತೋರಿದರೆ ಸಾಕಲ್ಲವೇ?