ಖರ್ಗೆಯ ಮುಂದಿರುವ ಕಷ್ಟ
ವಾರದ ವ್ಯಕ್ತಿ
ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಂಘ ಪರಿವಾರ, ರಾಜ್ಯ ಬಿಜೆಪಿ ಮತ್ತು ದಲಿತ ರಾಜಕಾರಣಿಗಳು- ಎಲ್ಲರೂ ಒಟ್ಟಾಗಿ ಖರ್ಗೆ ಮೇಲೆ ಬಿದ್ದಿದ್ದಾರೆ. ದಿನಕ್ಕೊಂದು ಆರೋಪ, ಟೀಕೆ, ಮೂದಲಿಕೆ, ಕಾಲೆಳೆಯುವಿಕೆಯಿಂದ ಖರ್ಗೆಯವರನ್ನು ಕಂಗೆಡಿಸಿದ್ದಾರೆ. ಅಷ್ಟಕ್ಕೂ ಮಲ್ಲಿಕಾರ್ಜುನ ಖರ್ಗೆ ಮಾಡಿದ ಮಹಾಪರಾಧವಾದರೂ ಏನು?
ಲೋಕಸಭೆಯಲ್ಲಿ 332 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ಮಿತ್ರಕೂಟದ ಸರಕಾರಕ್ಕೆ ನರೇಂದ್ರ ಮೋದಿ ಪ್ರಧಾನಿಯಾದರೆ; ಕೇವಲ 44 ಸ್ಥಾನಗಳನ್ನು ಪಡೆದು ಹೀನಾಯ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ಪ್ರತಿಪಕ್ಷ ನಾಯಕರಾದರು. ಇಲ್ಲಿಯವರೆಗೆ ಆ ಸ್ಥಾನದಲ್ಲಿ ಕೂತವರು ಉತ್ತರ ಭಾರತದವರು. ಈ ಬಾರಿ ಕರ್ನಾಟಕದ ಖರ್ಗೆ ಲೋಕಸಭೆಯ ಕಾಂಗ್ರೆಸ್ ನಾಯಕ ಎಂದಾಕ್ಷಣ ಪ್ರಧಾನಿ ಮೋದಿ ಮುಖ ಮುಚ್ಚಿಕೊಂಡು ನಕ್ಕಿದರು. ಮಂತ್ರಿಗಳು, ಅಧಿಕಾರಿಗಳು ನಿರ್ಲಕ್ಷಿಸಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಬೇಕಾದ, ಜನಪರ ನಿಲುವು ತಳೆಯಬೇಕಾದ ದೇಶದ ಮಾಧ್ಯಮಗಳು ಕೂಡ ಸ್ವಾರ್ಥಕ್ಕೆ ಬಲಿಬಿದ್ದು ಆಳುವ ಪಕ್ಷದ ತುತ್ತೂರಿಗಳಾದವು.
ದಿನ ಕಳೆದಂತೆ, ಮೋದಿಯ ಆಡಳಿತ, ಕಾರ್ಯವೈಖರಿ, ಜಾರಿಗೆ ತಂದ ಕಾಯ್ದೆಗಳ ಮೂಲಕ ಮೋದಿಯ ‘ಬಂಡವಾಳ’ ಬಯಲಾಯಿತು. ಮೋದಿಯ ಅಪಕ್ವ ರಾಜಕೀಯ ನಡೆಗಳನ್ನು, ಅವು ಜನತೆಯ ಮೇಲೆ ಬೀರಿದ ಪರಿಣಾಮಗಳನ್ನು ಪ್ರತಿಪಕ್ಷ ನಾಯಕ ಖರ್ಗೆ ತರ್ಕಬದ್ಧವಾಗಿ ಟೀಕಿಸಿ ತಿರುಗೇಟು ನೀಡತೊಡಗಿದರು. ಮೊದಮೊದಲು ಖರ್ಗೆ ಮಾತಿಗೆ ನಿಂತರೆ ಮೇಜುಕುಟ್ಟಿ ಸದ್ದು ಮಾಡಿ ಸುಮ್ಮನಿರಿಸುತ್ತಿದ್ದ ಬಲಾಢ್ಯ ಬಿಜೆಪಿಗಳು, ನಂತರದ ದಿನಗಳಲ್ಲಿ ಖರ್ಗೆಯ ಖಡಕ್ ಮಾತಿಗೆ ತೆಪ್ಪಗಾದರು. ಮೋದಿ ಭಜನೆಯಲ್ಲಿ ಮುಳುಗಿದ್ದ ಮಾಧ್ಯಮಗಳು, ನಂತರ ಖರ್ಗೆಗೂ ಸ್ಪೇಸ್ ಕೊಡುವುದು ಡೆಮಾಕ್ರಸಿಯಲ್ಲಿ ಬಹಳ ಮುಖ್ಯ ಎನ್ನುವುದನ್ನು ಅರಿತುಕೊಂಡವು.
ಮೊನ್ನಿನ ಅಧಿವೇಶನದಲ್ಲಿ ಮಲ್ಲಿಕಾರ್ಜುನ ಖರ್ಗೆ, ‘ಪ್ರಧಾನಿ ಮೋದಿ ಮನಸ್ಸು ಮಾಡಿದರೆ ಕಗ್ಗಂಟಾಗಿರುವ ಮಹಾದಾಯಿ ನದಿ ನೀರಿನ ವಿವಾದವನ್ನು ಕ್ಷಣಾರ್ಧದಲ್ಲಿ ಬಗೆಹರಿಸಬಹುದು. ಆದರೆ ಬಿಜೆಪಿಯವರಿಗೆ ವಿವಾದ ಬಗೆಹರಿಯುವುದು ಬೇಕಾಗಿಲ್ಲ. ಹೀಗಾಗಿ ಅದನ್ನು ಕಗ್ಗ್ಗಂಟಾಗಿಸುತ್ತಿದ್ದಾರೆ’ ಎಂದು ಲೋಕಸಭೆಯಲ್ಲಿ ಮಾತನಾಡಿದ್ದು ಮೋದಿಗೆ ಮರ್ಮಾಘಾತ ನೀಡಿದೆ. ಇದಕ್ಕೆ ಉತ್ತರಿಸಬೇಕಾದ್ದು ಜವಾಬ್ದಾರಿಯುತ ಸ್ಥಾನದಲ್ಲಿರುವ, ದೇಶದ ಸಮಸ್ತ ಜನರನ್ನು ಪ್ರತಿನಿಧಿಸುವ, ಎಲ್ಲರನ್ನು ಸಮಾನವಾಗಿ ಕಾಣುವ ಪ್ರಧಾನಿಯ ಕರ್ತವ್ಯ. ಆದರೆ ಮೋದಿ ಪ್ರಶ್ನೆ ಮಾಡಿದ ಖರ್ಗೆ ವಿರುದ್ಧ ವ್ಯಂಗ್ಯಮಿಶ್ರಿತ ಧಾಟಿಯಲ್ಲಿ ಲೇವಡಿ ಮಾಡಿ ಅವಮಾನಿಸಿದರು. ಪ್ರಧಾನಿಯ ಅತ್ಯಮೂಲ್ಯ ಸಮಯವನ್ನು ವ್ಯಕ್ತಿನಿಂದೆಗೆ ಬಳಸಿಕೊಂಡು ಸಂಸದರನ್ನು ನಗಿಸಿದರು. ಆ ಮೂಲಕ ಸಂಸತ್ತಿನ ಘನತೆಗೂ ಚ್ಯುತಿ ತಂದು ಅಪಚಾರವೆಸಗಿದರು.
ಮೋದಿಯ ಮಾತು ಮತ್ತು ಕೃತಿಗಳ ನಡುವಿನ ಅಂತರವನ್ನು ಅರಿತಿದ್ದ ಖರ್ಗೆ, ‘ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಯಂ ಬುದ್ಧಿಯಿಂದ ಸರಕಾರ ನಡೆಸುತ್ತಿಲ್ಲ. ಆರೆಸ್ಸೆಸ್ ಮತ್ತು ವಿಎಚ್‌ಪಿಗಳ ಆಜ್ಞೆ, ಆದೇಶಗಳಿಗೆ ಅನುಗುಣವಾಗಿ ಸರಕಾರ ನಡೆಸುತ್ತಿದ್ದಾರೆ’ ಎಂದರು. ಪ್ರಧಾನಿ ಮೋದಿ ಯಾರ ಮೇಲೆ ಹೇಗೆ ಬೇಕಾದರೂ ಮಾತನಾಡಬಹುದು. ಆದರೆ ಮೋದಿ ಬಗ್ಗೆ ಮಾತನಾಡಿದರೆ ಸಂಘಪರಿವಾರ ಸಹಿಸುವುದಿಲ್ಲ. ಮಾತನಾಡಿದವರ ಜನ್ಮ ಜಾಲಾಡುತ್ತದೆ. ಖರ್ಗೆ ವಿಷಯದಲ್ಲಿಯೂ ಅದೇ ಆಗಿದೆ.
ಸಂಘ ಪರಿವಾರದ ಸೂಚನೆಯಂತೆ ಕರ್ನಾಟಕದ ಬಿಜೆಪಿ, ಮಲ್ಲಿಕಾರ್ಜುನ ಖರ್ಗೆಯವರ ಭ್ರಷ್ಟಾಚಾರವನ್ನು ಬಯಲು ಮಾಡುವ ವೀಡಿಯೊವೊಂದನ್ನು ಮೊನ್ನೆ ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಮಾಡಿದೆ. ಐವತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ಹೊಂದಿರುವ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ವೀಡಿಯೊದಲ್ಲಿ ವಿವರವಾಗಿ ಬಿಡಿಸಿಟ್ಟಿರುವ ಬಿಜೆಪಿ, ಎಲ್ಲಿ ಏನು ಎಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವುದರ ಬಗ್ಗೆ ವಿವರಿಸಿದೆ. ಇವುಗಳ ಬಗ್ಗೆ ಏಕೆ ತನಿಖೆ ಆಗುತ್ತಿಲ್ಲವೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬಿಜೆಪಿ ಪ್ರಶ್ನಿಸಿದೆ.
ಚುನಾವಣಾ ಸಂದರ್ಭದಲ್ಲಿ ಈ ರೀತಿಯ ಆರೋಪ ಸರ್ವೇಸಾಮಾನ್ಯ. ಒಂದು ಪಕ್ಷವನ್ನು ಹಣಿಯಲು, ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಲು, ಜನರನ್ನು ಗೊಂದಲ ಗೊಳಿಸಲು, ಚುನಾವಣೆಯಲ್ಲಿ ಅದರ ಲಾಭ ಪಡೆಯಲು ರಾಜಕೀಯ ಪಕ್ಷಗಳು ಹವಣಿಸುವುದು, ತಂತ್ರಗಾರಿಕೆಗಳ ಮೊರೆ ಹೋಗುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೆ. ಆದರೂ, ಇಷ್ಟು ದಿನ ಇಲ್ಲದಿದ್ದ ಆರೋಪ, ಭ್ರಷ್ಟಾಚಾರ ಈಗ, ಇದ್ದಕ್ಕಿದ್ದಂತೆ ದಲಿತ ನಾಯಕ ಖರ್ಗೆ ಮೇಲೆ ಏಕೆ? ಇದೀಗ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಇದಕ್ಕಾಗಿಯೇ ರಾಜ್ಯ ಬಿಜೆಪಿ ನಾಯಕರು ದಲಿತರನ್ನು ಓಲೈಸಲು, ದಲಿತ ಓಟ್ ಬ್ಯಾಂಕ್ ಛಿದ್ರ ಮಾಡಲು ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುವ, ಊಟ ಮಾಡುವ ನಾಟಕ ಶುರುವಿಟ್ಟುಕೊಂಡಿದ್ದಾರೆ. ಇದು ಸಹಜವಾಗಿಯೇ ದಲಿತ ನಾಯಕ ಖರ್ಗೆಯವರನ್ನು ಕೆರಳಿಸಿದೆ. ‘‘ಬಿಜೆಪಿಯವರು ಪ್ರತೀ ಬಾರಿ ದಲಿತರ ಮನೆಯಲ್ಲಿ ಊಟ ಮಾಡಿದೆವು, ಉಪಾಹಾರ ಸೇವಿಸಿದೆವು, ವಾಸ್ತವ್ಯ ಮಾಡಿದೆವು ಎಂದು ಹೇಳುತ್ತಾರೆ. ದಲಿತರೇನು ಪಾಪಿಗಳಾ?’’ ಎಂದಿರುವ ಖರ್ಗೆ, ‘‘ದಲಿತರನ್ನು ಅಸ್ಪಶ್ಯತೆಯಲ್ಲಿ ಇಟ್ಟವರೇ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು. ಮನುಸ್ಮತಿ ಹಾಗೂ ಬಿಜೆಪಿಯ ದಲಿತ ವಿರೋಧಿ ನೀತಿಯಿಂದಾಗಿ ದಲಿತರು ಇಂದಿಗೂ ಬವಣೆ ಪಡುವಂತಾಗಿದೆ’’ ಎಂದು ಕೊಂಚ ಕಟುವಾಗಿಯೇ ಪ್ರತಿಕ್ರಿಯಿಸಿದರು.
ಉತ್ತರಿಸಬೇಕಾದ ಬಿಜೆಪಿ, ದಲಿತ ನಾಯಕ ರಮೇಶ್ ಜಿಗಜಿಣಗಿಯವರನ್ನು ಎತ್ತಿಕಟ್ಟಿದೆ. ‘‘ದಲಿತರು ಪಾಪಿಷ್ಠರಾಗಿದ್ದರೆ ಅದು ಕಾಂಗ್ರೆಸ್‌ನಲ್ಲಿ ಇರುವವರು ಮಾತ್ರ. ಬಿಜೆಪಿಯಲ್ಲಿ ದಲಿತರು ಯಾರೂ ಪಾಪಿಷ್ಠರಲ್ಲ. ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆಗಬೇಕು ಎಂಬ ಬಗ್ಗೆ ಎರಡು ಮಾತಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್‌ಗೆ ಮೋಸ ಮಾಡಿದ ಕಾಂಗ್ರೆಸ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಆಗಲು ಬಿಟ್ಟಿಲ್ಲ. ಅವರನ್ನು ಮೂಲೆಗುಂಪು ಮಾಡಿದೆ’’ ಎಂದು ಜಿಗಜಿಣಗಿಯಿಂದ ಹೇಳಿಸುವ ಮೂಲಕ, ದಲಿತರಿಂದ ದಲಿತರನ್ನು ದಮನಿಸುವ ಅಸ್ತ್ರ ಪ್ರಯೋಗಿಸಿದೆ.
ಹಾಗೆ ನೋಡಿದರೆ, ಖರ್ಗೆ ಇದ್ದಕ್ಕಿದ್ದಂತೆ ಎದ್ದುಬಂದ ನಾಯಕನಲ್ಲ. ಬೀದರ್ ಜಿಲ್ಲೆಯ ವರವಟ್ಟಿಯ ದಲಿತ ಕುಟುಂಬದಲ್ಲಿ 1942ರಲ್ಲಿ ಜನಿಸಿದ ಖರ್ಗೆ, 1969 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ, ಸುಮಾರು ಐದು ದಶಕಗಳ ಕಾಲ, ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಲೋಕಸಭೆಯ ಸಂಸದೀಯ ನಾಯಕನವರೆಗೆ ಹಂತ ಹಂತವಾಗಿ ಬೆಳೆದು ನಿಂತವರು. ಮತ್ತೊಂದು ಪಕ್ಷದತ್ತ ಕಣ್ಣೆತ್ತಿಯೂ ನೋಡದ ಪಕ್ಷ ನಿಷ್ಠರು. ಕಡುಕಷ್ಟದಲ್ಲಿ ಬೆಳೆದ ಖರ್ಗೆ ಪದವಿ ಪಡೆದು ವಕೀಲಿಕೆ ಮಾಡುತ್ತ, ಬಡ ಕಾರ್ಮಿಕರ ಪರ ಹೋರಾಟಕ್ಕಿ ಳಿದವರು. ದೇವರಾಜ ಅರಸರಿಂದ ರಾಜಕಾರಣಕ್ಕಿಳಿದು, 1972ರಿಂದ 2004ರವರೆಗೆ, ನಿರಂತರವಾಗಿ 9 ಬಾರಿ ಗೆದ್ದು, ಸೋಲಿಲ್ಲದ ಸರದಾರನೆಂಬ ದಾಖಲೆ ಬರೆದವರು. ಹಾಗೆಯೇ 2009ರಿಂದ 2 ಬಾರಿ ಸಂಸತ್ ಸದಸ್ಯರಾಗಿ, ಕಾಂಗ್ರೆಸ್ ಪಕ್ಷದ ಹಿರಿಯ ಅನುಭವಿ ರಾಜಕಾರಣಿಯ ಪಟ್ಟಿಗೆ ಸೇರಿದವರು.
ದೇವರಾಜ ಅರಸರಿಂದ ಆರಂಭವಾಗಿ ಗುಂಡೂರಾವ್, ಬಂಗಾರಪ್ಪ, ವೀರಪ್ಪಮೊಯ್ಲಿ, ಎಸ್.ಎಂ.ಕೃಷ್ಣ ಮತ್ತು ಧರಂಸಿಂಗ್‌ರ ಕ್ಯಾಬಿನೆಟ್‌ನಲ್ಲಿ ಹಲವು ಮಹತ್ವದ ಖಾತೆಗಳನ್ನು ನಿರ್ವಹಿಸಿದ ಖರ್ಗೆ, ಅನುಭವಿ ಆಡಳಿತಗಾರರಾಗಿ, ಉತ್ತಮ ಸಂಸದೀಯ ಪಟುವಾಗಿ ರೂಪುಗೊಂಡವರು. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿ ಸೈ ಎನಿಸಿಕೊಂಡವರು. ಆನಂತರ ಕೇಂದ್ರದ ಮನಮೋಹನ್ ಸಿಂಗ್‌ರ ಸಂಪುಟದಲ್ಲಿ ರೈಲ್ವೆ ಮತ್ತು ಕಾರ್ಮಿಕ ಸಚಿವರಾಗಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದವರು.
ಹಾಗೆ ನೋಡಿದರೆ, ಕರ್ನಾಟಕದ ರಾಜಕಾರಣದಲ್ಲಿ ಬಹುಸಂಖ್ಯಾತರು ಮತ್ತು ಬಲಿಷ್ಠ ಜಾತಿಗಳದೇ ಕಾರುಬಾರು. ಚುನಾವಣೆಗಳಲ್ಲಿ ಜಾತಿಗಳದೇ ಪ್ರಧಾನ ಪಾತ್ರ. ಬಲಾಢ್ಯ ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗರ ಮುಂದಾಳತ್ವದಲ್ಲಿಯೇ ಚುನಾವಣೆಗಳು ಜರುಗುವುದು, ಅವರೇ ಮುಖ್ಯಮಂತ್ರಿಗಳಾಗುವ ಪರಿಸ್ಥಿತಿ ನಿರ್ಮಾಣವಾಗುವುದು. ಆದರೆ ಕಾಂಗ್ರೆಸ್ ಪಕ್ಷ ಇವೆರಡಕ್ಕಿಂತಲೂ ಭಿನ್ನವಾದ ಚುನಾವಣಾ ತಂತ್ರ ಹೆಣೆದಿದೆ. ಮೇಲ್ಜಾತಿಗಳನ್ನು, ಬಹುಸಂಖ್ಯಾತರನ್ನು ಜೊತೆಯಲ್ಲಿಟ್ಟುಕೊಂಡೇ ದನಿ ಇಲ್ಲದ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ.