ವರ್ತನೆಗಳ ವಿಕಾಸ
ಬೆಳೆಯುವ ಪೈರು
ಭಾಗ 4
ವಿಧ ವಿಧ ವರ್ತನೆಗಳು
ಏಕತಾನತೆಯ ಲಹರಿಯ ಮೀರಲು
ಸಾಮಾನ್ಯವಾಗಿ ಹದಿಹರೆಯದ ಮಕ್ಕಳಲ್ಲಿ ಒಂದೋ ವಿನಯವಾಗಿ ಹೇಳಿದಂತೆ ಕೇಳಿಕೊಂಡಿರುವಂತರಿರುತ್ತಾರೆ ಅಥವಾ ಹೇಳಿದ ಮಾತು ಒಂದೂ ಕೇಳದೆ ಅವರಿಷ್ಟಕ್ಕೆ ಇರುವಂತಹವರಿರುತ್ತಾರೆ. ಅವರು ಹಾಗೆಯೇ, ಒಟ್ಟಾರೆ ಆ ದಿಕ್ಕು ಮತ್ತು ಗುರಿ ಅವರಿಗೆ ತೃಪ್ತಿಯನ್ನು ಕೊಡಬೇಕು. ಈ ದಿಕ್ಕನ್ನು ಅವರು ಬದಲಿಸುವುದೇ ಇಲ್ಲ. ಬಂಡಾಯವೇಳುವುದು ಅಥವಾ ವಿನಯದಿಂದಿರುವುದು ಈ ಎರಡೇ ಅವರಿಗೆ ಸಾಮಾನ್ಯವಾಗಿರುವ ಆಯ್ಕೆ ಏಕೆಂದರೆ, ತಾವು ಬಯಸುವ ಮಾನ್ಯತೆ, ಅನುಕಂಪ, ತೃಪ್ತಿ; ಇತ್ಯಾದಿಗಳು ಅವರಿಗೆ ಸಿಗುತ್ತದೆ ಅಥವಾ ಇಲ್ಲ. ಆದ್ದರಿಂದಲೇ ಅವರಿಗೆ ಮನೆಯಲ್ಲಾಗಲಿ ಅಥವಾ ಶಾಲೆಯಲ್ಲಾಗಲಿ ಈ ವ್ಯವಸ್ಥೆ ಹಾಗೇ ಇರುತ್ತದೆ. ಬೇಕಾದರೆ ಗಮನಿಸಿ ನೋಡಿ, ನಮ್ಮ ಮಗು ಹೇಳಿದ ಮಾತು ಕೇಳಿಕೊಂಡಿರುತ್ತದೆ. ತಾನಾಯಿತು, ತನ್ನ ಪಾಡಾಯ್ತು ಎಂದು ಪೋಷಕರು ಹೇಳಿದಂತೆ ಶಿಕ್ಷಕರೂ ಹೇಳುತ್ತಾರೆ. ಅಥವಾ ಇನ್ನೊಂದು ಬಗೆಯಲ್ಲೂ ಇರಬಹುದು. ಶಾಲೇಲೂ ಹೇಳಿದ ಮಾತು ಕೇಳಲ್ಲ, ಹಾಗೆಯೇ ಮನೆಯಲ್ಲಿಯೂ ಕೂಡಾ. ಅಷ್ಟೆಲ್ಲಾ ಏಕೆ? ಎಷ್ಟೋ ಜನ ಪೋಷಕರು ಹೇಳುವುದನ್ನು ಕೇಳಿದ್ದೇನೆ, ‘‘ಇವನು ಸಣ್ಣವನಾಗಿದ್ದಾಗಿನಿಂದಲೂ ಹೀಗೇ. ಹೀಗೇ ವರ್ತಿಸುತ್ತಿದ್ದ. ಹೀಗೇ ಆಡುತ್ತಿದ್ದ. ದೇಹ ಬೆಳೆದಿದೆ ಅಷ್ಟೇ, ಬುದ್ಧಿ ಬೆಳೆದಿಲ್ಲ’’. ಹೀಗೆ ಹೇಳುವವರ ಪ್ರಮಾಣವೇ ಅತೀ ಹೆಚ್ಚು ಇರುವುದು. ಏಕೆಂದರೆ, ಮಗುವಿನ ಬೆಳವಣಿಗೆ ಮತ್ತು ವಿಕಾಸವು ಆಗುತ್ತಿರುವಾಗ ಅದನ್ನು ಸಾಕ್ಷೀಕರಿಸಿಕೊಂಡು ಅದಕ್ಕೆ ಬೇಕಾದ ಪೋಷಣೆ ಮತ್ತು ಅವಲಂಬನೆ ನೀಡುವುದಕ್ಕಿಂತ, ತಾವೇ ತಮ್ಮ ದೃಷ್ಟಿಯಂತೆ, ಆಸೆಯಂತೆ, ಮಹತ್ಕಾಂಕ್ಷೆಯಂತೆ ಅದನ್ನು ಬೆಳೆಸಲು, ವಿಕಸಿಸಲು ಪೋಷಕರು ಯತ್ನಿಸುವುದು. ಇದರಿಂದಲೇ ಮಕ್ಕಳು ಎಷ್ಟು ದೊಡ್ಡವರಾದರೂ ಅವರ ವರ್ತನೆಯಲ್ಲಿ ವಿಕಾಸವೂ ಕಾಣದು, ಬದಲಾವಣೆಯೂ ಕಾಣದು. ಗೂಟಕ್ಕೆ ಕಟ್ಟಿರುವ ದನದಂತೆ, ದನಕ್ಕೆ ಎಷ್ಟು ದೊಡ್ಡ ಹಗ್ಗ ಕಟ್ಟಿರುತ್ತದೆಯೋ ಅಷ್ಟೇ ಅದರ ವ್ಯಾಪ್ತಿ ಮತ್ತು ವಿಸ್ತಾರ, ಹಾಗೂ ಮುಕ್ತತೆಯ ಸೀಮೆ. ಹಾಗೆಯೇ ಮಕ್ಕಳು ಏನೇ ಮಾಡಿದರೂ ದೊಡ್ಡವರ ವ್ಯಾಪ್ತಿಯಿಂದ ಹೊರಗೆ ಬರಲಾರದವರಾಗಿರುತ್ತಾರೆ. ತೀರಾ ಅಪರೂಪವೆನಿಸುವಂತೆ ವ್ಯತಿರಿಕ್ತವಾದಂತಹ ಉದಾಹರಣೆಗಳು ನಿಮಗೆ ದೊರಕಬಹುದು.
ಫಲವತ್ತಿಲ ಮಜಲು
ಒಂದು ಮಾತು ನಿಜ. ಹದಿಹರೆಯಕ್ಕೆ ಕಾಲಿಡುವ ಮಕ್ಕಳಿಗೆ (ಈ ಕಾಲಘಟ್ಟಕ್ಕೆ ಹತ್ತು ದಾಟಿದರೆಂದಿಟ್ಟುಕೊಳ್ಳಿ) ಮನೆಯ ಮತ್ತು ಶಾಲೆಯ ವಾತಾವರಣ ಅವರ ಸ್ವಭಾವ ಮತ್ತು ಮುಂದಣ ದಾರಿಯನ್ನು ಸ್ಪಷ್ಟಗೊಳಿಸುವಂತೆ ಬಹಳ ಫಲವತ್ತಾಗಿರುತ್ತದೆ. ಇಂತಹ ಸಮಯದಲ್ಲಿಯೇ ಅವರು ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳುವ ವಿಷಯ, ಕ್ರೀಡೆ ಇತ್ಯಾದಿಗಳಲ್ಲಿ ಪರಿಣಿತಿಯನ್ನು ಪಡೆಯಲು ಸಾಧ್ಯವಾಗುವಂತಹ ಫಲವಂತಿಕೆ ಇರುತ್ತದೆ. ಹಾಗಾಗಿಯೇ ನೀನು ಇದು ಮಾಡಬೇಕು, ಅದು ಮಾಡಬೇಕು ಎಂಬ ಯಾವ ನಿರ್ದೇಶನಗಳನ್ನೂ ನೀಡದೇ ಮಕ್ಕಳನ್ನು ಹತ್ತು ದಾಟುವವರೆಗೂ ಗಮನಿಸುತ್ತಿರಬೇಕು. ಅವರ ಆಸಕ್ತಿಗಳು ಬದಲಾಗುತ್ತಾ ಬದಲಾಗುತ್ತಾ ಕೆಲವೊಂದು ಮುಂದೆ ಉಳಿಯುವುದೇ ಇಲ್ಲ. ಕೆಲವೊಂದು ಮಾರ್ಪಾಡುಗಳನ್ನು ಹೊಂದಿರುತ್ತವೆ. ಮತ್ತೆ ಕೆಲವೊಂದು ಉತ್ತಮ ರೀತಿಯಲ್ಲಿ ಸಾಧಿತವಾಗುತ್ತಿರುತ್ತದೆ. ಇದೆನ್ನೆಲ್ಲಾ ಗಮನಿಸುತ್ತಿರಬೇಕೇ ಹೊರತು ಟೀಕೆಗಳನ್ನು ಮಾಡುತ್ತಿರಬಾರದು. ಬದಲಿಗೆ ತಮ್ಮ ಅವಗಾಹನೆಗೆ ಪಟ್ಟಿ ಮಾಡಿಕೊಂಡು ಟಿಪ್ಪಣಿ ಮಾಡಿಕೊಳ್ಳಬಹುದು. ನಮ್ಮ ದೇಶದಲ್ಲಿ ಮಕ್ಕಳ ಬೆಳವಣಿಗೆ, ಬುದ್ಧಿ, ಭಾವುಕತೆ, ವೈಚಾರಿಕ ವಿಕಾಸ, ಶಾರೀರಿಕ ಬೆಳವಣಿಗೆ; ಇವುಗಳ್ಯಾವ ಹಂತಗಳ ಬಗ್ಗೆಂುೂ ಯಾವ ದಾಖಲೆಗಳನ್ನೂ ಮಾಡುವ ಅಭ್ಯಾಸವನ್ನು ಪೋಷಕರು ಹೊಂದಿಲ್ಲ. ಅದರ ಪರಿಕಲ್ಪನೆಯ ಅರಿವೇ ಇಲ್ಲ ಎನ್ನಬಹುದು.
ಕನಿಷ್ಠದಿಂದ ಗರಿಷ್ಠಕ್ಕೆ
ತಮ್ಮ ಮಕ್ಕಳ ಬಟ್ಟೆ ಚಿಕ್ಕದಾಯಿತು, ಅದನ್ನು ತೊಟ್ಟುಕೊಳ್ಳಲಾರವು ಎಂದಕೂಡಲೇ ಅವನ್ನು ಬೇರೆ ಮಕ್ಕಳಿಗೆ ಕೊಟ್ಟುಬಿಡುವ ಮನಸ್ಥಿತಿಯ ಪೋಷಕರೇ ಹೆಚ್ಚು ಜನ. ಆದರೆ, ಮಗುವು ಯಾವ ವಸ್ತುಗಳ ಜೊತೆ, ಯಾವ ಉಡುಪು ಅಥವಾ ಉಪಯೋಗಿಸುವ ಪರಿಕರ, ಆಡುವ ಆಟಿಕೆಗಳ ಜೊತೆ ವಿಶೇಷವಾಗಿ ಒಡನಾಟ ಮತ್ತು ಬಳಕೆಯ ಅಭ್ಯಾಸವನ್ನು ಹೊಂದಿರುತ್ತದೆಯೋ ಅದನ್ನೂ ಕಾಲಾನಂತರ ನಿರ್ಲಕ್ಷಿಸಿದರೂ ಅದನ್ನು ಪೋಷಕರು ಜತನ ಮಾಡಿಟ್ಟುಕೊಂಡಿದ್ದು, ನಂತರ ಅದನ್ನು ಮಗುವಿಗೇ ತೋರಬೇಕು.
ಕಾಲದಿಂದ ಕಾಲಕ್ಕೆ ತಮ್ಮ ಬೆಳವಣಿಗೆಯ ದಾಖಲೆಗಳನ್ನು ಗುರುತಿಸುವಂತಹ ಮಕ್ಕಳು ತಮ್ಮ ವರ್ತನೆಗಳ ಬದಲಾವಣೆಯನ್ನೂ ಕೂಡ ಗಮನಿಸಬಲ್ಲರು.
ತಾವು ಹಿಂದೆ ಉಪಯೋಗಿಸಿರುವ ವಸ್ತುಗಳು, ಉಡುಪುಗಳು, ಆಟಿಕೆಗಳು, ಪುಸ್ತಕಗಳು, ಇವುಗಳೊಂದಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತಹ ಫೋಟೊಗಳು; ಇವೆಲ್ಲವೂ ತಮ್ಮದೊಂದು ಮ್ಯೂಸಿಯಂ ಮಾಡಲು ಅಲ್ಲ. ವ್ಯಕ್ತಿಯ ಗುಣ, ಸ್ವಭಾವಗಳ ಮತ್ತು ವರ್ತನೆಗಳ ವಿಕಾಸವನ್ನು ಹೇಳುತ್ತವೆ. ಕೆಲವು ವಸ್ತುಗಳು, ಭಾವಚಿತ್ರಗಳು ಆ ಹೊತ್ತಿನ ಅವರ ವರ್ತನೆಗಳ ಮತ್ತು ಸಂದರ್ಭಗಳ ಕತೆ ಹೇಳುತ್ತವೆ. ಇದರಿಂದಾಗಿ ಇಂದಿಗೆ ತಾವೆಷ್ಟು ಮುಂದುವರಿದಿದ್ದೇವೆ ಅಥವಾ ಹಾಗೆಯೇ ಇದ್ದೇವೆ ಎನ್ನುವುದು ತಿಳಿಯುತ್ತದೆ. ಅಂದೆಂದೋ ಹಟ ಮಾಡಿದ ವಸ್ತುವು ಇಂದಿಗೂ ತನ್ನಲ್ಲಿ ಅದೇ ಹಟಮಾರಿತನವನ್ನು ಉಳಿಸಿದೆ ಎಂದಾದರೆ, ಆ ಮಗುವು ದೈಹಿಕವಾಗಿ ಬೆಳೆದಿದೆಯೇ ಹೊರತು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ವಿಕಾಸವನ್ನಾಗಲಿ, ಬೆಳವಣಿಗೆಯನ್ನಾಗಲಿ ಹೊಂದಿಲ್ಲವೆಂದೇ ಅರ್ಥ. ಹಾಗಾಗಿ, ಹಳೆಯ ವಸ್ತುಗಳು, ಪೋಟೊಗಳು ಇತ್ಯಾದಿಗಳು ಹಲವು ಬಾರಿ ನಮ್ಮ ವರ್ತನೆಯ ಮತ್ತು ಗುಣಸ್ವಭಾವಗಳ ಹಂತಗಳನ್ನು ವಿವರಿಸಲು, ಅವುಗಳ ಬೆಳವಣಿಗೆಯ ಮಾನದಂಡವಾಗಿ ಪರಿಣಮಿಸುತ್ತದೆ. ಮಕ್ಕಳಿಗೆ ದೊಡ್ಡವರು ಕೂಡ ಈ ರೀತಿಯಲ್ಲಿ ಹಳೆಯ ವಸ್ತುಗಳು ಮತ್ತು ಚಿತ್ರಗಳು ವರ್ತನೆಯ ಮತ್ತು ಸ್ವಭಾವಗಳ ಪ್ರಗತಿಯನ್ನು ಗಮನಿಸಲು ನೆರವಾಗಬೇಕು. ಆಗಲೇ ಅವರಿಗೂ ಕೂಡ ತಮ್ಮನ್ನು ತಾವು ಗಮನಿಸಿಕೊಳ್ಳಲು ಸಮಯವನ್ನು ಕಂಡುಕೊಳ್ಳುತ್ತಾರೆ. ಯಾವುದೇ ಹಳತರ ಕುರುಹುಗಳನ್ನು ಉಳಿಸದೇ, ಅವರ ವರ್ತನೆಗಳ ವಿಕಾಸಗಳನ್ನು ಗಮನಿಸಲು ಸಾಧ್ಯವಾಗದೇ ಹೋಗುವಂತಹ ಜೀವನ ಶೈಲಿಯನ್ನು ರೂಪಿಸಿದ್ದೇ ಆದರೆ, ಮಕ್ಕಳು ತಮ್ಮ ವಿಕಾಸದ ಘಟ್ಟಗಳನ್ನೇ ಗುರುಸಿದೇ ಹೋಗುವುದಲ್ಲದೇ ತಮ್ಮ ತಪ್ಪು ಒಪ್ಪುಗಳನ್ನು ಕೂಡಾ ಗುರುತಿಸದೇ ಹೋಗುತ್ತಾರೆ. ತಾವು ಹಿಂದೆ ಮಾಡಿದ ಹಟವನ್ನು, ಮಾಡಿಕೊಂಡ ಕೋಪವನ್ನು, ಮಾಡಿದ್ದ ಜಗಳ ರಾದ್ಧಾಂತಗಳನ್ನು, ಅದರ ಪರಿಣಾಮವನ್ನು ಇಂದು ನೆನೆಸಿಕೊಂಡು ಸಂಕೋಚಪಡುವಂತಹ ಸಂದರ್ಭಗಳು ಉಂಟಾಗಬೇಕು. ಆಗ, ಅವರು ವರ್ತನೆಗಳ ವಿಕಾಸದ ಹಂತಗಳಲ್ಲಿದ್ದಾರೆಂದೇ ಅರ್ಥ. ಕನಿಷ್ಠದಿಂದ ಗರಿಷ್ಠಕ್ಕೆ ಹೋಗುವುದೆಂದಲ್ಲ ಇದರರ್ಥ. ನಿಕೃಷ್ಟದಿಂದ ಉತ್ಕೃಷ್ಟಕ್ಕೆ ಸಾಗುವುದೆನ್ನುವುದು ಸರಿ.
ಪೊರೆ ಕಳಚಿಕೊಳ್ಳುವ ವರ್ತನೆಗಳು
ವರ್ತನೆಗಳ ವಿಕಾಸದ ಹಂತಗಳು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ, ಹಳೆಯ ದ್ವೇಷ, ಕೋಪ, ನಿರಾಸೆ ಮತ್ತು ಹಟಗಳು ಸಕಾರಾತ್ಮಕವಾಗಿ ರೂಪಾಂತರಗೊಳ್ಳುತ್ತಿರಬೇಕು. ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ್ದೇನೆಂದರೆ, ಶಾರೀರಿಕವಾಗಿ ಹೇಗೆ ಬೆಳೆಯುತ್ತಿರುತ್ತಾರೋ ಹಾಗೆಯೇ ಅವರು ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿಯೂ ಕೂಡಾ ಔನ್ನತ್ಯವನ್ನು ಪಡೆಯುತ್ತಿರಬೇಕು. ಇಲ್ಲವಾದರೆ, ಸಣ್ಣ ಮಗುವಿದ್ದಾಗ ಗೊಂಬೆಗಾಗಿ ಹಟ ಮಾಡಿ ರಾದ್ಧಾಂತ ಮಾಡಿದ ವ್ಯಕ್ತಿಯು ಕಿಶೋರಾವಸ್ಥೆಗೆ ಬಂದಾಗ ಅದೇ ರೀತಿ ಉಡುಪಿಗೋ, ವೀಡಿಯೊ ಗೇಮಿಗೋ ಹಟ ಮಾಡುತ್ತಿರುತ್ತಾನೆ. ಹದಿ ಹರೆಯದ ಹುಡುಗನಾದಾಗ ಬೈಕಿಗೋ ಮತ್ತೊಂದಕ್ಕೋ ಹಟ ಮಾಡುತ್ತಾನೆ. ಹಾಗೆಯೇ ವಯಸ್ಕನಾದಾಗ ಮನೆಗೋ, ಆಸ್ತಿಯ ಪಾಲಿಗೋ ಅದೇ ಹಟದ ಗುಣ ಮುಂದುವರಿಯುತ್ತದೆ. ಶಾರೀರಿಕವಾಗಿ ಬೆಳೆದರೂ ತನ್ನ ವರ್ತನೆಗಳ ವಿಕಾಸವನ್ನು ಅರಿಯದವರು ತಮ್ಮೆಲ್ಲಾ ಗುಣಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ. ಆದರೆ, ವಸ್ತುಗಳು, ಕಾಲಗಳು, ಸಂದರ್ಭಗಳು ಮತ್ತು ವ್ಯಕ್ತಿಗಳು ಬದಲಾಗುತ್ತಿರುತ್ತಾರೆ.
ಹೇಳಬೇಕಾದಿಷ್ಟೇ, ಮಗುವು ತನ್ನ ವರ್ತನೆಗಳನ್ನು, ಗುಣಗಳನ್ನು ತಾನೇ ನೋಡಿಕೊಂಡು ಅದರ ಉನ್ನತ ವಿಕಾಸಕ್ಕೆ ಕಾರಣವಾಗುವಂತೆ ಹಿರಿಯರು ನೆರವಾಗುತ್ತಿರಬೇಕು. ಅವರು ತಮ್ಮ ಎಲ್ಲಾ ನಕಾರಾತ್ಮಕವಾದಂತಹ ಪೊರೆಗಳನ್ನು ಕಳಚಿಕೊಂಡು ಸಮಗ್ರವಾಗಿ ವಿಕಾಸ ಹೊಂದಲು ಹಿರಿಯರಾದವರು ಜವಾಬ್ದಾರಿ ಹೊರಲೇಬೇಕು.
ಅಡ್ಡಾದಿಡ್ಡಿಯಿಂದ ಅರಿವಿಗೆ
ಮಕ್ಕಳ ಆಯ್ಕೆಯ ವಿಷಯಗಳು ಬಹಳ ಸೀಮಿತವಾಗಿದ್ದು, ಅವುಗಳ ವ್ಯಾಪ್ತಿಯಲ್ಲಷ್ಟೇ ಅವರ ಗಮನಗಳಿರುತ್ತವೆ. ಹಾಗಾಗಿ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಆಯ್ಕೆಯ ವಿಷಯಗಳೇ ಹೇಗೆಲ್ಲಾ ವಿಸ್ತಾರವನ್ನು ಪಡೆದುಕೊಳ್ಳುತ್ತವೆ ಎಂಬುದರ ಕವಲುಗಳನ್ನು, ಮಜಲುಗಳನ್ನು ಪರಿಚಯಿಸುತ್ತಿರಬೇಕು. ಉದಾಹರಣೆಗೆ, ಕಾರಿನ ಆಟಿಕೆಯೊಂದಿಗೆ ಆಡಲು ಇಷ್ಟಪಡುವ ಹುಡುಗನಿಗೆ ವಿವಿಧ ರೀತಿಯ ಕಾರುಗಳನ್ನು, ಕಾರುಗಳ ಕಂಪೆನಿಗಳನ್ನು, ಅವುಗಳ ತಂತ್ರಜ್ಞಾನಗಳನ್ನು ಹಂತ ಹಂತವಾಗಿ ಪರಿಚಯಿಸುವ ಸಾಧ್ಯತೆಗಳಿರುತ್ತವೆ. ಹಾಗೆಯೇ ಕಾರುಗಳು ಈ ಹಿಂದೆ ಎಂತೆಂತಹ ಮಾದರಿಯ ಕಾರುಗಳಿದ್ದವು, ಅವುಗಳ ಇಂಜಿನ್ನುಗಳು ಹೇಗಿದ್ದವು, ಈಗ ಹೇಗಿವೆ ಎಂಬುದರ ಪರಿಚಯವೂ ಕೂಡ ಈ ಹಂತಗಳಲ್ಲಿ ಸೇರ್ಪಡುವಂತಹ ವಿಷಯಗಳಾಗಿರುತ್ತವೆ. ಕಾರುಗಳಿಲ್ಲದಿದ್ದಾಗ ಯಾವುದನ್ನು ನಾವು ಕಾರ್ (ರಥ) ಎನ್ನುತ್ತಿದ್ದೆವು, ಮೂಲದಲ್ಲಿ ಅವುಗಳು ಹೇಗಿದ್ದವು? ಕ್ರಮೇಣ ಎಂತೆಂತಹ ಬದಲಾವಣೆಗಳಾದವು? ಇವೆಲ್ಲವನ್ನೂ ಕೂಡ ಅವರು ತಿಳಿದುಕೊಳ್ಳುವಂತೆ ಪ್ರೇರೇಪಿಸಬೇಕು. ಹೊಡೆದಾಟದಲ್ಲಿ ಬಡಿದಾಟದಲ್ಲಿ ನಿರತವಾಗಿರುವ ಮಕ್ಕಳಿಗೆ ಸಮರ ಕಲೆಗಳನ್ನು ಪರಿಚಯಿಸುವುದು ಒಂದು ಒಳ್ಳೆಯ ವರ್ತನಾ ವಿಕಾಸಕ್ಕೆ ತೆರೆದುಕೊಳ್ಳುವುದು. ಏಕೆಂದರೆ, ಕರಾಟೆ, ಕುಂಗ್ ಫೂ, ಕಲರಿ ಪಯಟ್ಟು, ಕುಸ್ತಿ; ಯಾವುದೇ ಆಗಲಿ ಶಿಸ್ತನ್ನು ಬೇಡುತ್ತದೆ. ಅದರಲ್ಲಿ ಯಾರೊಂದಿಗೆ ಹೊಡೆದಾಡಬೇಕು, ಯಾರೊಂದಿಗೆ ಹೊಡೆದಾಡಬಾರದು? ಯಾವ ರೀತಿಯ ತಂತ್ರಗಳಿಂದ ಸ್ವರಕ್ಷಣೆ ಮಾಡಿಕೊಳ್ಳಬೇಕು ಎಂಬಿತ್ಯಾದಿ ಅಂಶಗಳನ್ನು ಕಲಿಯುತ್ತಾ ಹೋಗುತ್ತಾರೆ. ಇದರಿಂದಾಗಿ ಅವರು ತಮ್ಮದೇ ಆಸಕ್ತಿಯ ವಿಷಯದ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಅವುಗಳನ್ನು ಕ್ರಮಬದ್ಧವಾಗಿ, ಶಿಸ್ತುಬದ್ಧವಾಗಿ, ಅಧ್ಯಯನದ ಬದ್ಧತೆಯನ್ನು ರೂಢಿಸಿಕೊಳ್ಳುತ್ತಾರೆ. ಅವರ ಯಪ್ರಾತಪ್ರಾ ಹೊಡೆದಾಟವು ಒಂದು ಶಿಸ್ತುಬದ್ಧ ಸಮರ ಕಲೆಯಾಗಿ ರೂಪುಗೊಳ್ಳುವುದರಲ್ಲಿ ಅವರ ಜಿದ್ದಾ ಜಿದ್ದಿ ವರ್ತನೆಗಳು ಶಿಸ್ತಿನ ವರ್ತನೆಗಳಿಗೆ ರೂಪಾಂತರ ಗೊಂಡಿರುತ್ತವೆ. ಅಡ್ಡಾದಿಡ್ಡಿ ಆಸಕ್ತಿಗಳು ಅರಿವಿನ ಕಡೆಗೆ ಒಯ್ಯುವುದೆಂದರೆ ಇದೇಯೇ.
ವರ್ತನೆಗಳು ಏಕೆ ವಿಕಾಸವಾಗಲೇ ಬೇಕು?
ವರ್ತನೆಗಳ ವಿಕಾಸವು ಉತ್ತಮಮಟ್ಟಕ್ಕೆ ಹೋಗುವುದಕ್ಕೆ ಇರುವ ಮುಖ್ಯ ಕಾರಣವೆಂದರೆ ಮಗುವಿನ ಹಂತದಿಂದ ವಯಸ್ಕನ ಹಂತದವರೆಗೂ ಹಂತಹಂತವಾಗಿ ಬೆಳೆಯುತ್ತಿರುವ ಜ್ಞಾನದ, ಪ್ರಜ್ಞೆಯ, ಬೌದ್ಧಿಕ ಮಟ್ಟ. ಯಾವ ಮಗುವು ತನ್ನ ಆಯ್ಕೆಯದ್ದೇ, ಆಸಕ್ತಿಯದ್ದೇ ವಿಷಯಗಳ ಅರಿವಿನ ಮಟ್ಟವನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆಯೋ ಆ ಮಗುವು ಸಹಜವಾಗಿಯೇ ತನ್ನ ವರ್ತನೆಗಳ ವಿಕಾಸವನ್ನು ಕಾಣುವಂತಾಗುತ್ತದೆ. ಇದನ್ನೇ ಹಿರಿಯರಾದವರು ಮಕ್ಕಳಲ್ಲಿ ಮಾಡಬೇಕಾಗಿರುವುದು. ಮಗುವಿನ ಯಾವುದೇ ಆಯ್ಕೆಯ ಮತ್ತು ಆಸಕ್ತಿಯ ವಿಷಯವನ್ನು ಕಂಡುಕೊಂಡಲ್ಲಿ ಮಗುವಿಗೆ ಅದರ ಔನ್ನತ್ಯವನ್ನೂ ಮತ್ತು ಔಚಿತ್ಯವನ್ನೂ ಮನವರಿಕೆ ಮಾಡಿಕೊಡುವುದು. ಇದೇ ಮಗುವಿನ ವರ್ತನೆಯ ವಿಕಾಸಕ್ಕೂ ಕಾರಣವಾಗುತ್ತದೆ. ತಾನು ಆಯ್ದುಕೊಂಡಿರುವ ವಸ್ತುವಿಷಯದ ಬಗ್ಗೆ, ತನ್ನ ಆಸಕ್ತಿಯ ಬಗ್ಗೆ ಅಭಿಮಾನವನ್ನೂ ತಾಳುವುದರೊಂದಿಗೆ ಅದರ ಬಗ್ಗೆ ಮತ್ತಷ್ಟು ಕುತೂಹಲವನ್ನು ತಳೆಯುತ್ತದೆ. ಕುತೂಹಲ ಹೆಚ್ಚಾದಷ್ಟು ಅಧ್ಯಯನದ ವ್ಯಾಪ್ತಿಯು ಹೆಚ್ಚುತ್ತದೆ. ಅಧ್ಯಯನವು ಶಿಸ್ತುಬದ್ಧಗೊಂಡಾಗಲಂತೂ ಜ್ಞಾನದ ಪಕ್ವತೆಯಿಂದ ವರ್ತನೆಯು ಕೂಡ ಘನತೆಯಿಂದ ಮತ್ತು ವೌಲ್ಯದಿಂದ ಕೂಡಿರುತ್ತದೆ. ವರ್ತನೆಗಳು ವಿಕಾಸವಾಗಲೇ ಬೇಕು. ಇಲ್ಲವೆಂದರೆ ವ್ಯಕ್ತಿತ್ವಗಳು ನಿಂತ ನೀರಾಗಿ ಕೊಳೆತುಹೋಗುತ್ತವೆ.