ತಮಿಳುನಾಡಿನ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲವನ್ನೆಬ್ಬಿಸಿರುವ ಕಾವೇರಿ ತೀರ್ಪು!
ಮುಂದಿನ ಚುನಾವಣೆಯ ಹೊತ್ತಿಗೆ ಇದನ್ನೊಂದು ಚುನಾವಣಾ ವಿಷಯವನ್ನಾಗಿಸಿ, ಭಾವನಾತ್ಮಕವಾಗಿ ತಮಿಳು ಮತದಾರರನ್ನು ಒಲಿಸಿಕೊಳ್ಳಲು ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಸರ್ವಸಿದ್ಧ್ದತೆ ನಡೆಸಿವೆ.
ಶತಮಾನಗಳಷ್ಟು ಹಳೆಯದಾದ ಕಾವೇರಿ ಜಲವಿವಾದದ ಬಗ್ಗೆ ಅಂತಿಮವಾಗಿ ಸುಪ್ರೀಂಕೋರ್ಟ ತೀರ್ಪು ಪ್ರಕಟಿಸಿದ್ದು, ಈ ವಿವಾದಕ್ಕೆ ಸಂಬಂಧಿಸಿದ ಎರಡೂ ರಾಜ್ಯಗಳಲ್ಲಿ ಎರಡು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಜಲವಿವಾದಕ್ಕೆ ಸಂಬಂಧಿಸಿದ ಎರಡು ದೊಡ್ಡ ರಾಜ್ಯಗಳೆಂದರೆ ಕರ್ನಾಟಕ ಮತ್ತು ತಮಿಳುನಾಡು. ಇನ್ನು ಈ ವಿವಾದದ ಭಾಗವಾಗಿದ್ದ ಕೇರಳ ಮತ್ತು ಪುದುಚೇರಿಗಳಿಗೆ ಈ ತೀರ್ಪಿನಿಂದ ಯಾವ ವ್ಯತ್ಯಾಸವೂ ಆಗಿಲ್ಲ. ಹಾಗೆ ನೋಡಿದರೆ ಈ ತೀರ್ಪಿನ ಬಗ್ಗೆ ಹೆಚ್ಚು ಆತಂಕದಿಂದ ಕಾಯುತ್ತಿದ್ದುದೇ ಕರ್ನಾಟಕವೆನ್ನಬಹುದು. ಯಾಕೆಂದರೆ ಹಿಂದಿನ ಹಲವು ಮಧ್ಯಂತರ ತೀರ್ಪುಗಳು ನ್ಯಾಯಾಧಿಕರಣದ ವರದಿಗಳು ಬಹುತೇಕ ರಾಜ್ಯದ ಹಿತಕ್ಕೆ ಮಾರಕವಾಗಿಯೇ ಇದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪರವಾಗಿ ಒಂದು ತೀರ್ಪು ಬರಬಹುದೆಂಬ ನಿರೀಕ್ಷೆ ಬಹುತೇಕರಿಗೆ ಇರಲಿಲ್ಲವೆಂದರೆ ತಪ್ಪೇನಿಲ್ಲ. ಯಾಕೆಂದರೆ ಯಾವ ಕೆಲವು ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ನಾವು ಹಿಂದೆಲ್ಲ ವಾದ ಮಾಡಿದ್ದೆವೋ ಆ ಯಾವ ವಾದಗಳನ್ನೂ ನ್ಯಾಯಾಲಯ ಇದುವರೆಗೂ ಗಣನೆಗೆ ತೆಗೆದುಕೊಂಡಿರಲಿಲ್ಲ. ಈ ಐತಿಹಾಸಿಕ ತೀರ್ಪು(ಕರ್ನಾಟಕದ ಮಟ್ಟಿಗೆ) ಎರಡೂ ರಾಜ್ಯಗಳಲ್ಲಿ ಕೆಲವೊಂದು ರಾಜಕೀಯ ಪರಿಣಾಮಗಳನ್ನು ಬೀರಿದ್ದು ಅವನ್ನು ನಾವು ಸೂಕ್ಷ್ಮವಾಗಿ ವಿಶ್ಲೇಷಿಸಿ ನೋಡಬೇಕಾಗುತ್ತದೆ(ಹೀಗಾಗಿ ಇಲ್ಲಿನ ತೀರ್ಪಿನ ಅಂಶಗಳ ಚರ್ಚೆಯ ಅಗತ್ಯವಿಲ್ಲವೆನಿಸುತ್ತದೆ)
ಈ ತೀರ್ಪನ್ನು ಕನಾಟಕದ ಕಾವೇರಿ ಕೊಳ್ಳದ ರೈತರು ಬಹಳ ಸಂತೋಷದಿಂದ, ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಅದರ ಜೊತೆಗೆ ಉತ್ತರ ಕರ್ನಾಟಕದ ಜನತೆ ಸಹ ಈ ತೀರ್ಪನ್ನು ಬಹಳ ಸಂತೋಷದಿಂದ ಸ್ವೀಕರಿಸಿದ್ದಾರೆ. ಯಾಕೆಂದರೆ ಉತ್ತರ ಕರ್ನಾಟಕದ ಕಳಸಾಬಂಡೂರಿ, ಮಹಾದಾಯಿ ಪ್ರಕರಣಗಳು ಸಹ ನ್ಯಾಯಾಲಯಗಳಲ್ಲಿದ್ದು ಅವುಗಳ ವಿಷಯದಲ್ಲಿ ಅಂತಿಮ ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಾಲಯಗಳು ಕಾವೇರಿ ತೀರ್ಪಿನ ಆಧಾರದ ಮೇಲೆಯೇ ತೀರ್ಪು ನೀಡಬಹುದೆಂಬ ಆಶಾಭಾವನೆ ಆ ಭಾಗದ ಜನರಲ್ಲಿದ್ದರೆ ತಪ್ಪೇನಿಲ್ಲ. ಕಾವೇರಿಯ ವಿಚಾರದಲ್ಲಿ ಆದಂತೆಯೇ ಆ ವಿವಾದಗಳಲ್ಲಿಯೂ ನಮಗೆ ವಿಳಂಬವೆನಿಸಿದರೂ ಪೂರಕವಾದ ಧನಾತ್ಮಕ ಫಲಿತಾಂಶವೇ ದೊರೆಯುತ್ತದೆ ಎಂದು ವಿಶ್ವಾಸ ಇಡುವುದರಲ್ಲಿ ಯಾವುದೇ ತಪ್ಪಿಲ್ಲ.
ಇನ್ನು ರಾಜಕೀಯವಾಗಿ ನೋಡಿದರೆ ರಾಜ್ಯದ ಮೂರೂ ಪಕ್ಷಗಳು ಈ ತೀರ್ಪಿಗೆ ಸಂತೋಷವನ್ನು ವ್ಯಕ್ತ ಪಡಿಸಿದ್ದರೂ ಮೂರು ಪಕ್ಷಗಳ ನಾಯಕರು ಮೂರುದ್ವನಿಯಲ್ಲಿ ಮಾತನಾಡಿರುವುದು ಅವರ ಪ್ರತಿಕ್ರಿಯೆಯ ಒಳಗೂ ರಾಜಕಾರಣ ಬೆರೆತಿರುವುದನ್ನು ಗಮನಿಸಬಹುದಾಗಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡುತ್ತ ‘‘ಇದು ಗೆಲುವೂ ಅಲ್ಲ, ಸೋಲೂ ಅಲ್ಲ. ಕನಾಟಕಕ್ಕೆ ಭಾಗಶಃ ಪರಿಹಾರ ದೊರೆತಿದೆ.’’ ಎಂದು ಸಮಚಿತ್ತದ ಉತ್ತರ ನೀಡಿದ್ದಾರೆ. ಇನ್ನು ಭಾಜಪದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ಈ ತೀರ್ಪು ತಮಗೆ ಸ್ವಲ್ಪ ಸಮಾಧಾನ ತಂದಿದೆ. ರೈತರಿಗೆ ಮತ್ತು ಜನತೆಗೆ ಕುಡಿಯಲು ಮತ್ತು ನೀರಾವರಿಗೆ ಹೆಚ್ಚುವರಿ ನೀರು ದೊರೆತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಜಾತ್ಯತೀತ ಜನತಾದಳದ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿಯವರು ‘‘ಕಾವೇರಿ ತೀರ್ಪಿನ ಪೂರ್ಣಪ್ರತಿ ದೊರೆತ ನಂತರ ಪ್ರತಿಕ್ರಿಯಿಸುತ್ತೇನೆ. ಅದರೆ ಪ್ರಾಥಮಿಕ ಮಾಹಿತಿಯ ಪ್ರಕಾರ ನೀರೇ ಇಲ್ಲದಿರುವಾಗ ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಮಾತೆಲ್ಲಿಯದು? ಈ ತೀರ್ಪಿನಲ್ಲಿ ನಮಗೆ ಅನ್ಯಾಯವಾಗಿದೆ ಎಂಬ ಅನುಮಾನ ಇದೆ’’ ಎಂದು ನುಡಿದಿದ್ದಾರೆ.
ಇನ್ನು ಮಾಜಿ ಪ್ರದಾನಿಗಳಾದ ಎಚ್.ಡಿ. ದೇವೇಗೌಡರು ಮಾತ್ರ ಎಂದಿನಂತೆ ತಮ್ಮ ಮುತ್ಸದ್ದಿತನವನ್ನು ತೋರುತ್ತಾ, ಕಾವೇರಿ ತೀರ್ಪಿನಿಂದ ರಾಜ್ಯದ ಜನತೆಗೆ ಏನು ಅನ್ಯಾಯವಾಗಿದೆ ಎಂಬ ಅಂಶಗಳ ಕುರಿತು ಸದ್ಯದಲ್ಲೇ ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಹೇಳುತ್ತಾ, ಇತರೇ ಪಕ್ಷದವರು, ಕುರುಡರು ಆನೆಯನ್ನು ವಿಭಿನ್ನವಾಗಿ ವ್ಯಾಖ್ಯಾನ ಮಾಡಿದಂತೆ ಹೇಳಿಕೆ ನೀಡುತ್ತಿದ್ದಾರೆ. ವಾಸ್ತವಾಂಶಗಳೇನು ಮತ್ತು ರಾಜ್ಯಕ್ಕೆ ಆಗಿರುವ ಅನ್ಯಾಯವೇನು ಎಂಬುದನ್ನು ಮತ್ತು ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನೂ ಹೇಳುತ್ತೇನೆಂದು ಹೇಳಿ ಜನರಲ್ಲಿ ಒಂದಿಷ್ಟು ಕುತೂಹಲ ಮೂಡಿಸಿದ್ದಾರೆ. ಇನ್ನು ಪಕ್ಷರಾಜಕಾರಣಕ್ಕೆ ಬಂದರೆ ಈ ತೀರ್ಪು ಕಾಂಗ್ರೆಸ್ ಪಕ್ಷಕ್ಕೆ, ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಪಾರವಾದ ಸಮಾಧಾನವನ್ನು ನೀಡಿದೆ ಎಂದರೆ ತಪ್ಪಾಗಲಾರದು.
ಯಾಕೆಂದರೆ ಕಾವೇರಿ ಜಲ ವಿವಾದದಲ್ಲಿ ಯಾವಾಗಲೇ ಆಗಲಿ ರಾಜ್ಯದ ವಿರುದ್ಧ ವರದಿಗಳು, ಮಧ್ಯಂತರ ತೀರ್ಪುಗಳು ಬಂದಾಗ ಕಾವೇರಿ ಕಣಿವೆಯ ಜನತೆಯ ಆಕ್ರೋಶ ಭುಗಿಲೇಳುತ್ತಿದ್ದುದು, ಅದರ ಪರಿಣಾಮ ರಾಜ್ಯ ಸರಕಾರದ ಮೇಲೆಯೇ ಆಗಿರುತ್ತಿತ್ತು. ಹಾಗಾಗಿ ಈ ಬಾರಿ ಏನಾದರೂ ಕಾವೇರಿ ತೀರ್ಪು ರಾಜ್ಯದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಬಂದಿದ್ದರೆ ಆ ಭಾಗದ ಜನರ ಸಿಟ್ಟು ಸಹಜವಾಗಿ ಅಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿಯೇ ಇರುತ್ತಿತ್ತು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ವಿರೋಧಪಕ್ಷಗಳು ಸಹ ಮುಗಿಬೀಳುತ್ತಿದ್ದವು. ವಿಧಾನಸಭಾ ಚುನಾವಣೆಗಳು ನಡೆಯಲಿರುವ ಈ ಹೊತ್ತಿನಲ್ಲಿ ಒಂದು ಕಡೆ ರೈತರ ಮತ್ತೊಂದು ಕಡೆ ವಿರೋಧ ಪಕ್ಷಗಳ ಆಕ್ರೋಶಕ್ಕೆ ಸಿದ್ದರಾಮಯ್ಯ ತುತ್ತಾಗ ಬೇಕಿತ್ತು.
ಆಗ ಈ ತೀರ್ಪು ಸ್ವಲ್ಪಮಟ್ಟಿಗಾದರೂ ಹಳೇ ಮೈಸೂರುಭಾಗದಲ್ಲಿ ಕಾಂಗ್ರೆಸ್ಗೆ ಹಿನ್ನಡೆಯನ್ನುಂಟು ಮಾಡುತ್ತಿತ್ತು. ಬಹುಶ: ಸಿದ್ದರಾಮಯ್ಯನವರ ಅದೃಷ್ಟ ಚೆನ್ನಾಗಿರುವಂತೆ ಕಾಣುತ್ತಿದೆ. ನಾವ್ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಉಚ್ಚನ್ಯಾಯಾಲಯದ ತೀರ್ಪು ಭಾಗಶಃ ರಾಜ್ಯದ ಪರವಾಗಿ ಬಂದಿದ್ದು ಕಾವೇರಿಕೊಳ್ಳದ ಜನರಲ್ಲಿ ಸಂತಸವನ್ನುಂಟು ಮಾಡಿದೆ ಈ ತೀರ್ಪಿನ ಒಳಗಿನ ಅಂಶಗಳ ಬಗ್ಗೆ ಸಂಪೂರ್ಣ ನ್ಯಾಯ ದೊರೆಯದೇ ಇರುವುದರ ಬಗ್ಗೆ ಜನತಾದಳದ ನಾಯಕರು ಏನೇ ಹೇಳಿದರೂ, ರೈತರೀಗ ಬೀದಿಗಿಳಿದು ಹೋರಾಟ ಮಾಡುವ ಮನಃಸ್ಥಿತಿಯಲ್ಲಿ ಇಲ್ಲ. ಇನ್ನೂ ಹೇಳಬೇಕೆಂದರೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ವಿರುದ್ದ ಝಳಪಿಸಲು ಬಳಸಬಹುದಾಗಿದ್ದ ಒಂದು ದೊಡ್ಡ ಅಸ್ತ್ರ ಜನತಾದಳದ ಕೈನಿಂದ ಜಾರಿ ಹೋಗಿದೆ. ಆಕಸ್ಮಾತ್ ಈ ತೀರ್ಪು ರಾಜ್ಯಕ್ಕೆ ವ್ಯತಿರಿಕ್ತವಾಗಿ ಬಂದಿದ್ದರೆ ಜನತಾದಳ ಈ ವೇಳೆಗಾಗಲೇ ರಾಷ್ಟ್ರೀಯ ಪಕ್ಷಗಳಿಂದ ನಮಗೆ ನ್ಯಾಯ ಸಿಗಲಾರದೆಂದು ಹೇಳುತ್ತಾ, ತನ್ನಂತಹ ಪ್ರಾದೇಶಿಕ ಪಕ್ಷಗಳಿಗೆ ಮತ ನೀಡಿ ಅಧಿಕಾರಕ್ಕೆ ತಂದರೆ ಮಾತ್ರ ರಾಜ್ಯಕ್ಕೆ ನ್ಯಾಯ ದೊರೆಯುತ್ತದೆ ಎನ್ನುವ ಪ್ರಚಾರ ಪ್ರಾರಂಭಿಸಿರುತ್ತಿತ್ತು. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸುತ್ತ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿತ್ತು. ಶಕ್ತಿ ರಾಜಕಾರಣದಲ್ಲಿ ಇವೆಲ್ಲವೂ ಮಾಮೂಲಿ ಸಂಗತಿಗಳಾಗಿದ್ದು ಪ್ರತೀ ರಾಜಕೀಯ ಪಕ್ಷವೂ ತನ್ನ ಪಾಲಿನ ಲಾಭಪಡೆದುಕೊಳ್ಳಲು ಪ್ರಯತ್ನಿಸುತ್ತವೆ. ಆದ್ದರಿಂದ ಸದ್ಯಕ್ಕಂತೂ ಜನತಾದಳಕ್ಕೆ ನಿರಾಸೆಯಾಗಿದೆ.
ಇನ್ನು ಭಾಜಪಕ್ಕೆ ಈ ತೀರ್ಪು ಅಂತಹ ಲಾಭವನ್ನಾಗಲಿ, ನಷ್ಟವನ್ನಾಗಲಿ ಉಂಟು ಮಾಡುವ ಬಾಬ್ತಿನದಲ್ಲ. ಯಾಕೆಂದರೆ ಹಳೆಮೈಸೂರು ಭಾಗದಲ್ಲಿ ಅದಿನ್ನೂ ರಾಜಕೀಯವಾಗಿ ಬೇರು ಬಿಡಬೇಕಿದ್ದು ಕಾಂಗ್ರೆಸ್ ವಿರುದ್ಧ ಅದು ನಡೆಸುತ್ತಿದ್ದ ರಾಜಕೀಯ ದಾಳಿ ಅಂತಿಮವಾಗಿ ಜನತಾದಳಕ್ಕೇನೆ ಲಾಭವಾಗುತ್ತಿತ್ತು. ಹಾಗಾಗಿ ಈ ವಿಚಾರದಲ್ಲಿ ಅದು ಹೆಚ್ಚೇನು ಮಾತಾಡದೆ ಮೌನವಾಗಿದೆ.
ಆದರೆ ತಮಿಳುನಾಡಿನ ಮಟ್ಟಿಗೆ ಈ ತೀರ್ಪು ರಾಜಕೀಯ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿಬಿಟ್ಟಿದೆ. ಇಂತಹದೊಂದು ತೀರ್ಪಿಗೆ ಅಡಳಿತಾರೂಢ ಎಐಎಡಿಎಂಕೆ ಪಕ್ಷವೇ ಕಾರಣವೆಂದು ಅಲ್ಲಿನ ವಿರೋಧಪಕ್ಷಗಳು ಸರಕಾರದ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿವೆ. ದಿವಂಗತ ಕುಮಾರಿ ಜಯಲಲಿತಾ ಬದುಕಿರುವವರೆಗೂ ಕಾವೇರಿ ಜಲವಿವಾದವನ್ನು ಸದಾಕಾಲ ಜೀವಂತವಾಗಿರುವಂತೆ ನೋಡಿಕೊಳ್ಳುತ್ತಲೇ ತಮ್ಮ ರಾಜಕೀಯ ಮಾಡಿದವರು. ತಮಿಳುನಾಡಿನ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ತಮ್ಮ ಪಕ್ಷವನ್ನು ಬಲಿಷ್ಠಗೊಳಿಸಿಕೊಂಡು ರಾಜಕೀಯ ಮಾಡಲು ಅವರಿಗೆ ಕಾವೇರಿ ವಿವಾದವೇ ಒಂದು ಆಯುಧವಾಗಿತ್ತು. ಆದ್ದರಿಂದಲೇ ಅವರು ತಮ್ಮ ಕನ್ನಡದ ಅಸ್ಮಿತೆಯನ್ನು ಶಾಶ್ವತವಾಗಿ ತೊರೆದು ಕಾವೇರಿ ನೀರಿಗಾಗಿ ಸದಾ ಕರ್ನಾಟಕ ರಾಜ್ಯದ ಜೊತೆ ಕಿತ್ತಾಡುತ್ತಲೇ ರಾಜಕಾರಣ ಮಾಡುತ್ತಿದ್ದರು. ಅದು ಅವರ ಪಕ್ಷದ ಅಳಿವು ಉಳಿವಿನ ಪ್ರಶ್ನೆಯಾಗಿತ್ತು.
ಹೀಗೆ ಕಾವೇರಿ ವಿವಾದದೊಂದಿಗೆ ಗುರುತಿಸಿಕೊಂಡಿದ್ದ ಅದೇ ಎಐಎಡಿಎಂಕೆ ಪಕ್ಷದ ಆಡಳಿತಾವಧಿಯಲ್ಲಿ ವ್ಯತಿರಿಕ್ತ ತೀರ್ಪು ಬಂದಿರುವುದು ಅ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಮೊನ್ನೆ ತಾನೇ ಅದು ಜಯಲಲಿತಾರವರ ಸ್ವಕ್ಷೇತ್ರ ಆರ್.ಕೆ.ನಗರದಲ್ಲಿ ದಿನಕರ್ ವಿರುದ್ಧ ಸೋತಿದ್ದು, ಇದೀಗ ನ್ಯಾಯಾಲಯದಲ್ಲಿಯೂ ಪರಾಭವಗೊಂಡಿರುವುದು ಆಡಳಿತ ಪಕ್ಷದ ಮಟ್ಟಿಗೆ ಬಾರೀ ಹಿನ್ನಡೆಯನ್ನುಂಟು ಮಾಡಿದೆ. ಇದು ಸಾಲದೆಂಬಂತೆ ವಿರೋಧ ಪಕ್ಷವಾದ ಡಿಎಂಕೆಯ ನಾಯಕ ಸ್ಟಾಲಿನ್ ಈ ಸೋಲಿಗೆ ಮುಖ್ಯಮಂತ್ರಿ ಪಳನಿಸ್ವಾಮಿಯವರ ಹೊಣೆಗೇಡಿತನವೇ ಕಾರಣವೆಂದು ಟೀಕಿಸಿ ಸರಕಾರದ ರಾಜಿನಾಮೆ ಕೇಳಿದ್ದಾರೆ.
ಜೊತೆಗೆ ತಮಿಳುನಾಡು ಸರಕಾರ ನ್ಯಾಯಾಲಯದ ಮುಂದೆ ತನ್ನ ವಾದವನ್ನು ಸರಿಯಾಗಿ ಮಾಡಲಿಲ್ಲವೆಂದು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಪನ್ನೀರ್ಸೆಲ್ವಂ, ‘‘ಯಾವತ್ತಿನಿಂದ ಡಿಎಂಕೆಗೆ ಕಾವೇರಿಯ ಬಗ್ಗೆ ಅಕ್ಕರಾಸ್ಥೇ ಶುರುವಾಯಿತು. ಯಾವತ್ತೂ ಅದರ ಆಡಳಿತಾವಧಿಯಲ್ಲಿ ತಮಿಳುನಾಡಿಗೆ ಕಾವೇರಿ ನದಿನೀರು ದೊರೆತಿಲ್ಲ’’ವೆಂದು ಮರು ಆರೋಪ ಮಾಡಿದ್ದಾರೆ. ಇದರ ನಡುವೆ ಚಲನಚಿತ್ರ ನಟ ಮತ್ತು ರಾಜಕಾರಣಿಯ ಹೊಸ ಅವತಾರದಲ್ಲಿರುವ ರಜನಿಕಾಂತ್ ತಮಗೆ ಈ ತೀರ್ಪಿನಿಂದ ನಿರಾಸೆಯಾಗಿದ್ದು ಮೇಲ್ಮನವಿ ಸಲ್ಲಿಸಲು ಸರಕಾರವನ್ನು ಒತ್ತಾಯಿಸಿದ್ದಾರೆ. ಇದೀಗ ಕಾವೇರಿ ಜಲವಿವಾದವನ್ನು ಬಳಸಿಕೊಂಡು ತಮ್ಮ ರಾಜಕೀಯ ಬಲವನ್ನು ಹೆಚ್ಚಿಸಿಕೊಳ್ಳಲು ಎಲ್ಲ ಪಕ್ಷಗಳೂ ಪ್ರಯತ್ನ ನಡೆಸುತ್ತಿದ್ದು ಅವು ಒಟ್ಟಾಗಿ ಎಐಎಡಿಎಂಕೆ ಪಕ್ಷದ ಮೇಲೆ ತಿರುಗಿ ಬಿದ್ದಿವೆ.
ಮುಂದಿನ ಚುನಾವಣೆಯ ಹೊತ್ತಿಗೆ ಇದನ್ನೊಂದು ಚುನಾವಣಾ ವಿಷಯವನ್ನಾಗಿಸಿ, ಭಾವನಾತ್ಮಕವಾಗಿ ತಮಿಳು ಮತದಾರರನ್ನು ಒಲಿಸಿಕೊಳ್ಳಲು ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಸರ್ವಸಿದ್ಧತೆ ನಡೆಸಿವೆ. ಕರ್ನಾಟಕದ ಪಾಲಿಗೆ ಪೂರಕವಾಗಿ ಬಂದಂತಹ ತೀರ್ಪೊಂದು ನಮ್ಮ ಪಕ್ಕದ ರಾಜ್ಯದಲ್ಲಿ ರಾಜಕೀಯ ತಲ್ಲಣಗಳನ್ನು ಸೃಷ್ಟಿಸಿರುವುದು ವಿಷಾದನೀಯ ಸಂಗತಿಯಾಗಿದೆ.