ನಗರೀಕರಣದ ಹೊಸ ಅನುಭವಗಳು
ಮಂಗಳೂರಿನ ನಮ್ಮ ಹೊಸ ಮನೆಯಿರುವ ಬಡಾವಣೆಗೆ ಕಂಟ್ರಾಕ್ಟರ್ ಬಿ.ಆರ್.ಆಚಾರ್‌ರವರು ತಮ್ಮ ಮಗ ಲೋಹಿತ್‌ನ ಹೆಸರಿನೊಂದಿಗೆ ಲೋಹಿತ್ ನಗರ ಎಂದು ಹೆಸರು ಇಟ್ಟಿದ್ದರು. ಈ ಹೆಸರು ಕಾರ್ಪೊರೇಶನ್‌ನಲ್ಲಿ ದಾಖಲೀಕರಣದೊಂದಿಗೆ ಅನುಮತಿ ಪಡೆದಿತ್ತೇ ಇಲ್ಲವೇ ಎಂಬ ಪ್ರಶ್ನೆ ಆಗ ನಮಗೆ ಗೋಚರಿಸಿರಲಿಲ್ಲ. ಈಗ ಹೀಗೆ ಒಂದು ಪ್ರದೇಶಕ್ಕೆ ಹಿಂದೆ ಇದ್ದ ಹೆಸರನ್ನು ಬದಲಾಯಿಸಲು ಅನುಮತಿ ಬೇಕು ಎಂದು ತಿಳಿದಿದೆಯಾದರೂ ಹೀಗೆ ಯಾವುದೇ ಸಂಬಂಧವಿಲ್ಲದ ಗೊಲ್ಲಚ್ಚಿಲ್ ಎಂಬ ಸ್ಥಳಕ್ಕೆ ಲೋಹಿತ್ ನಗರ ಎಂಬ ನಗರೀಕರಣದ ಹೆಸರಿನ ಹಿಂದೆ ಆಡಳಿತಾತ್ಮಕವಾದ ಒಪ್ಪಿಗೆಯ ಬಗ್ಗೆ ತಿಳಿದಿಲ್ಲವಾದರೂ ನಮ್ಮ ವಿಳಾಸದಲ್ಲಿ. ನಮ್ಮ ಪ್ರಕಾಶನ ಸಂಸ್ಥೆಯ ವಿಳಾಸದಲ್ಲಿ ಗೊಲ್ಲಚ್ಚಿಲ್, ದೇರೆಬೈಲು ಎಂಬುದನ್ನು ದಾಖಲಿಸಿರುವುದು ನಮ್ಮವರ ಜಾನಪದೀಯ ಚಿಂತನೆಯಿಂದ. ಆದರೆ ಬರಬರುತ್ತಾ ಇಲ್ಲಿನ ಸ್ಥಳೀಯರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಲೋಹಿತ್ ನಗರವೇ ಎಲ್ಲರಿಗೂ ಹಿತವೆನಿಸಿದ್ದರೂ ಅನೇಕ ಬಾರಿ ಲೋಹಿತ್ ನಗರದೊಂದಿಗೆ ದೇರೆಬೈಲು ಮಾತ್ರ ಕಡ್ಡಾಯವಾಗಿ ಇರಬೇಕಾಗುತ್ತದೆ ಅಂಚೆ ಇಲಾಖೆಯ ಕಾರಣಕ್ಕಾಗಿ ಮತ್ತು ಅದು ಸರಿಯಾದುದು ಕೂಡಾ ಆಗಿದೆ.
ಅಂತೂ ಈ ನಮ್ಮ ಮನೆಗೂ ‘ದೃಶ್ಯ’ ಎನ್ನುವ ಹೆಸರನ್ನೇ ಮುಂದುವರಿಸಿದೆವು. ಹಾಲುಕ್ಕಿಸುವ ಸಂಪ್ರದಾಯದಂತೆ ಅಂದು ಗ್ಯಾಸ್ ಸ್ಟವ್ ಮೇಲೆ ಹಾಲುಕ್ಕಿಸಿ ಸಕ್ಕರೆ ಬೆರಸಿ ಬಂದಂತಹ ಬಂಧು ಮಿತ್ರರಿಗೆ ಸಿಹಿ ಹಾಲು ನೀಡಿದರೂ, ನಮ್ಮ ಸಂಭ್ರಮದಲ್ಲಿ ಪಾಲ್ಗೊಂಡವರಿಗೆ, ನಮ್ಮ ಮನೆಯ ನಿರ್ಮಾಣದಲ್ಲಿ ದುಡಿದ ಶ್ರಮಜೀವಿಗಳಿಗೆ ಸಿಹಿ ಊಟದೊಂದಿಗೆ ಉಡುಗೊರೆ ನೀಡಿ ಸಂತೋಷಪಟ್ಟೆವು. ಉಡುಗೊರೆ ಬೇಡ ಎಂದರೂ ಹತ್ತಿರದ ಬಂಧುಗಳು, ಸಹೋದ್ಯೋಗಿಗಳು ಅದನ್ನು ತಿಳಿದು ತಿಳಿದೇ ಬದಿಗೊತ್ತಿ ಮನೆಯ ಸಮೃದ್ಧಿಯನ್ನು ಹಾರೈಸಿ ಉಡುಗೊರೆ ನೀಡಿ ತಮ್ಮ ಆತ್ಮೀಯತೆಯನ್ನು ಹೆಚ್ಚಿಸಿದರು. ಎರಡನೇ ದಿನದ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತ ಸ್ನೇಹಿತರಿಗೆ ವಿಶೇಷ ಆಹ್ವಾನ. ಹತ್ತಿರದ ಬಂಧುಗಳೂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಅಂದು ನಮ್ಮವರ ತುಳು ಕವನ ಸಂಕಲನದ ಬಿಡುಗಡೆಯ ಕಾರ್ಯಕ್ರಮ. ಪುಸ್ತಕ ಬಿಡುಗಡೆ ಮಾಡಿದವರು ನಮ್ಮಿಬ್ಬರ ಗುರುಗಳಾಗಿದ್ದ ಡಾ.ಬಿ.ಎ.ವಿವೇಕ ರೈ ಅವರು.
ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದ ‘ಲೋಕಾಭಿರಾಮ’ ಅಂಕಣದ ಖ್ಯಾತಿಯ ಕು.ಶಿ.ಹರಿದಾಸ ಭಟ್ಟರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟವರು ಡಾ.ಚಿನ್ನಪ್ಪ ಗೌಡ, ಮುದ್ದು ಮೂಡುಬೆಳ್ಳೆಯವರು ಪ್ರಾರ್ಥನೆ ಹಾಡಿದ್ದರು. ನಮ್ಮ ಕುಟುಂಬದ ಹಿರಿಯ ಹಿತೈಷಿಯಾಗಿದ್ದ, ನನ್ನ ತಂದೆಯವರ ಆತ್ಮೀಯ ಸ್ನೇಹಿತರಾಗಿದ್ದ ಕವಿ ಮಂದಾರ ಕೇಶವ ಭಟ್ಟರು ಉಪಸ್ಥಿತರಿದ್ದುದು ನನ್ನ ತವರಿನ ಕಡೆಯಿಂದ ಹಿರಿಯ ಬಂಧುಗಳಿದ್ದಂತೆ ನಮ್ಮೆಲ್ಲರಿಗೂ ಸಂತಸ ತಂದಿತ್ತು. ನಮ್ಮ ಎರಡು ಕುಟುಂಬಗಳ ನಡುವೆ ಬ್ರಾಹ್ಮಣ್ಯದ ಮಡಿವಂತಿಕೆ ಇಲ್ಲದ ಆತ್ಮೀಯ ಬಾಂಧವ್ಯದಲ್ಲಿ ನಿಜ ಅರ್ಥದ ಬ್ರಾಹ್ಮಣ್ಯವನ್ನು ನಾನು ಅರ್ಥೈಸಿಕೊಂಡಿದ್ದೇನೆ. ಆದಾಗಲೇ ನಮ್ಮವರ ಕನ್ನಡ, ತುಳು ಕವಿತೆಗಳನ್ನು ಆಕಾಶವಾಣಿಯಲ್ಲಿ ಹಾಡಿದ್ದ ಕಲಾವಿದೆಯರು ಈ ಸಂದರ್ಭದಲ್ಲಿಯೂ ಹಾಡುವ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. ಹೀಗೆ ಈ ಮನೆಯ ನಮ್ಮ ವಾಸ್ತವ್ಯಕ್ಕೆ ಸಾಹಿತ್ಯ ಕಾರ್ಯಕ್ರಮ ನಾಂದಿಯಾದುದು ಮುಂದೆ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳು ಹಲವಾರು ವರ್ಷಗಳ ವರೆಗೆ ನಡೆಯುತ್ತಾ ಬಂದುದು ಒಂದು ಇತಿಹಾಸ. ಮುಂದಿನ ದಿನಗಳಲ್ಲಿ ಮನೆ ಮನೆ ಸಾಹಿತ್ಯ ಕಾರ್ಯಕ್ರಮ ಎಂಬ ರೂಢಿಗೆ ಇದು ಕಾರಣವಾದುದೂ ಹೌದು. ಈ ಸಾಹಿತ್ಯ ಕಾರ್ಯಕ್ರಮಗಳಿಗೆ ಶಕ್ತಿ ನೀಡಿದ್ದು ನಮ್ಮ ‘ಕೊಲಾಜ್’ ಬಳಗದ ಸದಸ್ಯರು.
ಮನೆ ಒಕ್ಕಲು ನಡೆದರೂ ನಾವು ಈಗಲೇ ಇಲ್ಲಿ ವಾಸ್ತವ್ಯ ಪ್ರಾರಂಭಿಸಲು ಸಾಧ್ಯವಿರಲಿಲ್ಲ. ಯಾಕೆಂದರೆ ಮಗ ತನ್ನ ಏಳನೇ ತರಗತಿಯಲ್ಲಿದ್ದ. ಆ ಹಂತದಲ್ಲಿ ಅವನನ್ನು ಬೇರೆ ಶಾಲೆಗೆ ಹಾಕುವುದು ಸರಿ ಕಾಣಲಿಲ್ಲ. ಆತ ಪ್ರಾಥಮಿಕ ತರಗತಿಯನ್ನು ಅದೇ ಶಾಲೆಯಲ್ಲಿ ಪೂರ್ಣಗೊಳಿಸುವುದು ನಮ್ಮ ದೃಷ್ಟಿಯಲ್ಲಿ ಅಂದರೆ ಶಿಕ್ಷಕರಾಗಿ ಸರಿ ಎನಿಸಿತ್ತು. ಆದ್ದರಿಂದ ಕೆಳಗಿನ ಹಂತದ ಮನೆಯ ಭಾಗವನ್ನು ಸರಿಯಾದವರು ಸಿಕ್ಕಿದರೆ ಬಾಡಿಗೆಗೆ ಕೊಡುವ ಆಲೋಚನೆಯೂ ಇತ್ತು. ಆದರೆ ಈ ಬಡಾವಣೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಎರಡನೇ ದಿನದ ಕಾರ್ಯಕ್ರಮ ಮುಗಿದು ಇದ್ದ ಕೆಲವು ನೆಂಟರು ಹೊರಟು ನಿಂತಾಗ ಬೀಳ್ಕೊಡಲು ಹೊರಗೆ ರಸ್ತೆಯಲ್ಲಿ ನಿಂತಂತೆಯೇ ಒಬ್ಬ ಅಪರಿಚಿತ ವ್ಯಕ್ತಿ ತಾನು ಇಲ್ಲಿಗೆ ಗುಜರಾತಿನಿಂದ ಬಂದಿದ್ದೇನೆ. ಇಲ್ಲಿ ಹಡಗಿಗೆ ಸಂಬಂಧಿಸಿದ ಹುದ್ದೆಗಾಗಿ ಬಂದಿದ್ದೇನೆ. ತಾನು ಮೆರೈನ್ ಇಂಜಿನಿಯರ್ ಎಂದು ತಿಳಿಸಿದ್ದಲ್ಲದೆ, ನನ್ನ ಮನೆಯ ವಸ್ತುಗಳೆಲ್ಲಾ ಗುಜರಾತಿನಿಂದ ಪ್ಯಾಕ್ ಆಗಿ ಹೊರಟಿದೆ. ನಾಳೆ ಸಂಜೆ ತಲುಪಲಿದೆ. ನಾನು ನನ್ನ ಜೊತೆ ನನ್ನ ಹೆಂಡತಿ ಇಬ್ಬರು ಮಕ್ಕಳೂ ಇರುತ್ತಾರೆ ಎಂದು ಗೋಗರೆದರು. ತಾನು ಮೂಲತಃ ಕೇರಳದವನೆಂದೂ ಕೊಂಕಣಿ ಮಾತೃಭಾಷೆಯವರೆಂದೂ ತಿಳಿಸಿದರು. ಕನ್ನಡ ತಿಳಿಯದ ಅವರಲ್ಲಿ ಹಿಂದಿ ಇಂಗ್ಲಿಷ್‌ನಲ್ಲಿ ಮಾತುಕತೆ ನಡೆದು ಮುಂದಿನ ವಾರದಲ್ಲಿ ಬಾಡಿಗೆ ಪತ್ರ ವಕೀಲರ ಮೂಲಕ ಮಾಡಿಸಿ ನೀಡುತ್ತೇವೆ ಎಂದು ತಿಳಿಸಿದೆವು.
ಇಂತಹ ವ್ಯವಹಾರ ನಮಗೆ ಹೊಸದು. ಆದರೆ ಸ್ನೇಹಿತರ ವಲಯದಲ್ಲಿ ವಕೀಲರಿದ್ದುದರಿಂದ ಈ ಬಗ್ಗೆ ಚರ್ಚಿಸಿ ಕೇವಲ ಒಂದು ವರ್ಷಕ್ಕೆ ಮಾತ್ರ ಎಂದು ಷರತ್ತು ಹಾಕಿ ಬಾಡಿಗೆಗೆ ನೀಡಿದೆವು. ಮೇಲಿನ ಮಹಡಿಗೆ ಹೊರಗಿನಿಂದಲೇ ಹೋಗುವ ವ್ಯವಸ್ಥೆ ಇದ್ದುದರಿಂದ ಅದನ್ನು ನಾವೇ ಇಟ್ಟುಕೊಂಡು ಆಗೀಗ ಬಂದು ಇರುವುದಕ್ಕೆ ಹಾಗೂ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅವಕಾಶ ಉಳಿಸಿಕೊಂಡೆವು. ಮರುದಿನವೇ ಮನೆಯ ವಸ್ತುಗಳು ಬಂದದ್ದಾಯಿತು. ಒಂದು ವಾರದಲ್ಲಿ ಅವರ ಮಡದಿ ಮಕ್ಕಳೂ ಬಂದರು. ಮಕ್ಕಳು ಬಹಳ ಚಿಕ್ಕವರು. ಇನ್ನೂ ಶಾಲೆಗೆ ಹೋಗುವ ವಯಸ್ಸಾಗದ ಮಗ ಹಾಗೂ ಹಸುಗೂಸಾಗಿದ್ದ ಹೆಣ್ಣು ಮಗಳು. ಆಗೀಗ ನಾವು ಬಂದು ಹೋಗುತ್ತಿದ್ದೆವು. ಒಳ್ಳೆಯ ವಿದ್ಯಾವಂತ ಕುಟುಂಬವೇ ಆದರೂ ಮುಂದಿನ ವರ್ಷ ಮನೆ ಬಿಟ್ಟು ಕೊಡಬೇಕು ಎಂದು ಹೇಳಿದಾಗ ಮಾತ್ರ ಕೂಡಲೇ ಒಪ್ಪದೆ ಒಂದಿಷ್ಟು ಮನಸ್ಸಿಗೆ ನೋವಾಗುವಂತೆ ವರ್ತಿಸಿದಾಗ ಅಸಮಾಧಾನವಾದುದು ಸಹಜವೇ. ನಮಗೆ ಇಲ್ಲಿನ ವಾಸ್ತವ್ಯ ಅನಿವಾರ್ಯವೇ. ಮಗಳು ಈಗಾಗಲೇ ಪ್ರಥಮ ಪಿಯುಸಿಯನ್ನು ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಮುಗಿಸಿದ್ದಾಳೆ. ಅವಳ ವಿದ್ಯಾಭ್ಯಾಸ ಅಲ್ಲೇ ಮುಂದುವರಿಯಬೇಕು. ಮಗನನ್ನು ಮಂಗಳೂರಲ್ಲಿ ಹೈಸ್ಕೂಲಿಗೆ ಸೇರಿಸಬೇಕು ಎಂಬ ಅನಿವಾರ್ಯತೆ ನಮ್ಮದು. ಬಡಪೆಟ್ಟಿಗೆ ಮನೆ ಬಿಡುವುದಿಲ್ಲ ಎಂದಾದರೆ ನಾವು ಕೋರ್ಟ್‌ಗೆ ಹೋಗಿ ಒಕ್ಕಲೆಬ್ಬಿಸಬೇಕಾಗುತ್ತದೆ ಎಂಬ ಒತ್ತಡ ಹಾಕಬೇಕಾಯಿತು.
ಈ ಬಡಾವಣೆಯ ವಾಸ್ತವ್ಯ ಅವರಿಗೆ ಪಣಂಬೂರಿಗೆ ಹತ್ತಿರದ ಸ್ಥಳವಾಗಿದ್ದುದರಿಂದ ಅವರಿಗೂ ಮನೆ ಬಿಡಲು ಮನಸ್ಸಿಲ್ಲ. ಕೊನೆಗೆ ಇದೇ ಬಡಾವಣೆಯಲ್ಲಿ ಯಾರೋ ನಮ್ಮಂತೆಯೇ ಹೊಸದಾಗಿ ಕಟ್ಟಿಸಿ ವಾಸ್ತವ್ಯಕ್ಕೆ ಅಗತ್ಯವಿಲ್ಲದ್ದರಿಂದ ಆ ಮನೆಯನ್ನು ಬಾಡಿಗೆಗೆ ಪಡೆದುಕೊಂಡರು. ಆ ಕಾರಣದಿಂದ ಶಾಲೆಗಳು ಪ್ರಾರಂಭವಾಗಿ ಒಂದು ತಿಂಗಳ ಬಳಿಕ ನಾವು ನಮ್ಮ ಮನೆಯಲ್ಲಿ ನಾವೇ ಇರುವ ವಾಸ್ತವ್ಯವನ್ನು ಪ್ರಾರಂಭಿಸಿದೆವು. ಮಕ್ಕಳಿಬ್ಬರಿಗೂ ಕೃಷ್ಣಾಪುರವಾಗಿ ಸೂರಿಂಜೆಯಿಂದ ಬರುವ 53 ನಂಬ್ರದ ಬಸ್ಸು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಹೋಗುವುದರಿಂದ ಆ ಬಸ್ಸೇ ಅನುಕೂಲವಾಗಿತ್ತು. ಬೇರೆ ಯಾವ ಬಸ್ಸುಗಳು ಈ 17 ನಂಬ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡುತ್ತಿರಲಿಲ್ಲ. ನಾವು ಮಂಗಳೂರಿಗೆ ಬಂದದ್ದಾಯಿತು. ಈಗ ಕೃಷ್ಣಾಪುರದ ಮನೆ ಹಿತ್ತಿಲನ್ನು ಏನು ಮಾಡೋಣ ಎಂಬ ಯೋಚನೆಯಲ್ಲೇ ಅದನ್ನು ಬಾಡಿಗೆಗೆ ಕೊಡುವ ನಿರ್ಧಾರವಾಯಿತು. ಸದ್ಯಕ್ಕೆ ಮಾರಾಟದ ಯೋಚನೆ ಇರಲಿಲ್ಲ. ಆದರೆ ಅಲ್ಲಿದ್ದ ತೆಂಗಿನ ಮರಗಳಿಗೆ ಬೇಸಗೆಯಲ್ಲಿ ನೀರು ಹಾಕಬೇಕಲ್ಲ? ಮನೆ ಹಿತ್ತಲು ಮಾರಾಟ ಮಾಡಬೇಡಿ. ಇಬ್ಬರು ಮಕ್ಕಳಿದ್ದಾರಲ್ಲಾ? ಎಂಬ ಹಿತವಚನ ಹಲವರದ್ದು. ಅದೂ ಸರಿಯೇ! ಆಗೆಲ್ಲಾ ಕೃಷ್ಣಾಪುರ, ಕಾಟಿಪಳ್ಳಗಳಲ್ಲಿ ಎಂಆರ್‌ಪಿಲ್‌ನಲ್ಲಿ ಬೇರೆ ಬೇರೆ ಊರುಗಳಿಂದ ಬೇರೆ ಬೇರೆ ಕಾರ್ಯ ಕೌಶಲ್ಯವಿರುವ ಜನ ಬಂದು ನೆಲೆಸಿದ್ದರು. ಮತ್ತೆ ಮತ್ತೆ ಬರುವವರಿಗೆ ಇಂತಹ ಮನೆಗಳು ಬೇಕಿತ್ತು.
ಅಲ್ಲಿಯೂ ರಾಜಸ್ಥಾನದ ಗ್ರಾನೈಟ್‌ನ ಕೆಲಸ ಮಾಡುವ ನಾಲ್ಕೈದು ಮಂದಿ ಸೇರಿ ಬಾಡಿಗೆಗೆ ದೊರೆತರು. ಅವರು ಸಂಸಾರ ಮಂದಿಗರಲ್ಲದೆ ಇಲ್ಲಿ ಬರೀ ಗಂಡಸರೇ ಇದ್ದುದರಿಂದ ಹಿತ್ತಲನ್ನು ನೋಡುವುದು ಬಿಡಿ ಮನೆಯನ್ನೇ ಸ್ವಚ್ಛವಾಗಿಡುತ್ತಿರಲಿಲ್ಲ. ಅವರಿಗೂ ಕಾನೂನಿನಂತೆ ಒಂದು ವರ್ಷದ ಅವಧಿಗೆ ಕೊಟ್ಟುದ್ದರಿಂದ ಅವರನ್ನೂ ಬಿಡಿಸುವಲ್ಲಿ ಕಷ್ಟವೇ ಆಯಿತು. ಇನ್ನು ಬಾಡಿಗೆಗೆ ಕೊಡುವ ಉಸಾಬರಿಯೇ ಬೇಡ ಎಂದು ನಿರ್ಧರಿಸಿ ಮಾರಾಟ ಮಾಡುವ ನಿರ್ಧಾರ ಮಾಡಿದೆವು. ಅದು ಹೇಗೋ ತಿಳಿದು ಕಾಲೇಜಿಗೆ ಒಬ್ಬ ಮಹಿಳೆ ಬ್ಯಾಂಕ್ ಉದ್ಯೋಗಿ ಬಂದು ಮನೆ ಖರೀದಿಸುವ ಆಸಕ್ತಿ ತಿಳಿಸಿ, ಮನೆ ಹಿತ್ತಲು ನೋಡಿ ಬಂದರು. ಅವರಿಗೆ ಒಪ್ಪಿಗೆಯಾಯಿತು. ನನಗೂ ನನ್ನಂತೆಯೇ ಒಬ್ಬ ಉದ್ಯೋಗಿ ಮಹಿಳೆ ತನ್ನ ಜವಾಬ್ದಾರಿಯಲ್ಲಿ ಸಂಸಾರ ನಿರ್ವಹಿಸುತ್ತಾ ಮನೆ ಹಿತ್ತಲು ಕೊಳ್ಳುವ ಆಸಕ್ತಿ ತೋರಿದಾಗ ಹೆಚ್ಚು ದುರಾಸೆ ಪಡದೆ ನಷ್ಟವಾಗದ ರೀತಿಯಲ್ಲಿ ಅವರಿಗೆ ಮನೆ ಮಾರಾಟ ಮಾಡಿದೆವು. ಆಕೆ ಖರೀದಿಸಿದ ಬಳಿಕ ಸುರತ್ಕಲ್ ಶಾಖೆಗೆ ವರ್ಗಾವಣೆ ಪಡೆದು ತನ್ನ ಪ್ರಯಾಣದ ಶ್ರಮವನ್ನು ಕಡಿಮೆ ಮಾಡಿಕೊಂಡರು. ಇಂದಿಗೂ ಆ ಮನೆಯಲ್ಲಿ ವಾಸ್ತವ್ಯ ಇರುವ ಅವರು ಮನೆಯನ್ನು ಆಧುನಿಕಗೊಳಿಸಿದ್ದಾರೆ. ಹಸಿರಿನ ಮರಗಿಡಗಳನ್ನೂ ಉಳಿಸಿಕೊಂಡಿದ್ದಾರೆ ಎನ್ನುವುದು ನಮ್ಮ ಸಂತೋಷ. ಮಂಗಳೂರಿನಲ್ಲಿ ಮನೆ ಬಾಡಿಗೆ ನೀಡಿದಾಗ, ಕೃಷ್ಣಾಪುರದ ಮನೆ ಹಿತ್ತಿಲು ಮಾರಾಟ ಮಾಡುವ ವೇಳೆ ಇದುವರೆಗೆ ತಿಳಿದಿಲ್ಲದ ಅನುಭವಗಳಾಯ್ತು.
ಮಂಗಳೂರಿನ ಮನೆ ಬಾಡಿಗೆಗೆ ಕೇಳಿಕೊಂಡು ಬಂದವರೊಂದಿಗೆ ನಾವು ಒಪ್ಪಂದ ಮಾಡಿಕೊಂಡ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಬಂದು ನಮ್ಮಲ್ಲಿ ಬಾಡಿಗೆಗೆ ಜನ ಸಿಕ್ಕಿದ ಬಗ್ಗೆ ನಮ್ಮಲ್ಲಿ ಕಮಿಶನ್ ಕೇಳಿದರು. ತಾನು ಅವರನ್ನು ಕಳುಹಿಸಿದೆಂದು ತಿಳಿಸಿದರು. ನಾವು ಆತನಲ್ಲಿ ಯಾವ ವ್ಯವಹಾರ ಮಾಡಿರದೆ ಇದ್ದರೂ ಆತನಿಗೆ ಕಮಿಶನ್ ನೀಡಬೇಕಾದುದು ಯಾವ ನ್ಯಾಯ ಎಂಬುದು ನಮಗೆ ತಿಳಿಯದೆ ಇದ್ದರೂ ಆತ ಮತ್ತೆ ಮತ್ತೆ ಇದೇ ಕಾರಣಕ್ಕಾಗಿ ನಮ್ಮನ್ನು ಬೆಂಬಿಡದ ಬೇತಾಳನಾಗಿ ಕಾಡಿದಾಗ 500 ರೂ.ಯನ್ನು ನೀಡಿದ ಅಸಹಾಯಕತೆ ನಮ್ಮದಾಯಿತು. ಇದೇ ರೀತಿ ಕೃಷ್ಣಾಪುರದ ಮನೆ ಹಿತ್ತಿಲು ಮಾರಾಟವಾದ ಸಂದರ್ಭವೂ ಆ ಮಹಿಳೆ ನಮ್ಮನ್ನು ನೇರವಾಗಿ ಸಂಪರ್ಕಿಸಿ ವ್ಯವಹಾರ ಮಾಡಿದ್ದರು.