ಸಚಿವ ರೈ, ಖಾದರ್ ನ್ಯಾಯ ಒದಗಿಸದ ಪಟ್ಟಭದ್ರರು : ಕೆ.ಅಶ್ರಫ್
‘ಮುಸ್ಲಿಮರ ಸಮಸ್ಯೆಗಳಿಗೆ ಕಾಂಗ್ರೆಸ್ ಸಚಿವರು, ಶಾಸಕರು ಸ್ಪಂದಿಸಿಲ್ಲ’
ಮೂರು ಬಾರಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿ, ಒಂದು ಅವಧಿಗೆ ನಗರ ಯೋಜನಾ ಸ್ಥಾಯಿ ಸಮಿತಿಯ ಅಧ್ಯಕ್ಷನಾಗಿ, ಒಂದು ಅವಧಿಗೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಸದ್ಯ ‘ಮಾಜಿ ಮೇಯರ್ ಅಶ್ರಫ್’ ಎಂದೇ ಗುರುತಿಸಲ್ಪಡುತ್ತಿರುವ ಮಂಗಳೂರಿನ ಬಂದರ್ ನಿವಾಸಿ ಕೆ.ಅಶ್ರಫ್ ಹಲವು ವರ್ಷಗಳಿಂದ ಮುಸ್ಲಿಮ್ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೊಳಗಾಗುತ್ತಿದ್ದಾರೆ. ಮೂಲತಃ ಕಾಂಗ್ರೆಸ್ನ ಅಶ್ರಫ್ ಇದೀಗ ಜೆಡಿಎಸ್ ಪಕ್ಷದ ಹೊಸ್ತಿಲಲ್ಲಿದ್ದಾರೆ. ‘ಸಮುದಾಯ ಪರ ಹೋರಾಟ’ಗಾರರೆಂದೇ ಬಿಂಬಿಸಲ್ಪಟ್ಟ ಅವರು ಸಮುದಾಯದೊಳಗೆ ಟೀಕೆ ಮತ್ತು ಪ್ರಶಂಸೆಗೊಳಗಾಗುತ್ತಿದ್ದಾರೆ. ಅವರ ಜೊತೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನವನ್ನು ಇಲ್ಲಿ ದಾಖಲಿಸಲಾಗಿದೆ.
ಮೂಲತಃ ಕಾಂಗ್ರೆಸ್ ಪಕ್ಷದ ತಾವು ಒಮ್ಮೆ ಪಕ್ಷದಿಂದ ದೂರ ಸರಿದು ಮತ್ತೆ ಸೇರ್ಪಡೆಗೊಂಡಿರಿ. ಇದೀಗ ಮತ್ತೆ ಕಾಂಗ್ರೆಸ್ನಿಂದ ದೂರ ಸರಿದು ಜೆಡಿಎಸ್ ಸೇರ್ಪಡೆಗೊಳ್ಳಲು ಸಜ್ಜಾಗಿದ್ದೀರಿ? ಇದಕ್ಕೆ ಕಾರಣವೇನು?
ಹೌದು. ನಾನು ಮೂಲತಃ ಕಾಂಗ್ರೆಸ್ಸಿಗ. ಪಕ್ಷ ನೀಡಿದ ವಿವಿಧ ಹುದ್ದೆಯ ಜವಾಬ್ದಾರಿಯನ್ನೂ ನಾನು ಸಮರ್ಥವಾಗಿ ನಿಭಾಯಿಸಿದೆ. ಕಳೆದ ಚುನಾವಣೆಯಲ್ಲಿ ಜೆ.ಆರ್.ಲೋಬೊ ಪರವಾಗಿ ದುಡಿದಿದ್ದೆ. ಆದರೆ ಅವರು ನನ್ನ ವಿರುದ್ಧವೇ ಪಿತೂರಿ ನಡೆಸತೊಡಗಿದರು. ಈ ಮಧ್ಯೆ ಹಬ್ಬದ ಸಂದರ್ಭ ಕುದ್ರೋಳಿ-ಕಂಡತ್ಪಳ್ಳಿ ಬಳಿ ಪೊಲೀಸ್ ಇಲಾಖೆ ಜಾನುವಾರು ಸಾಗಾಟ ತಡೆಹಿಡಿಯುವ ನೆಪದಲ್ಲಿ ಬ್ಯಾರಿಕೇಡ್ ಅಳವಡಿಸುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ಇಲ್ಲದ ಈ ಕ್ರಮದ ವಿರುದ್ಧ ನಾನು ಧ್ವನಿ ಎತ್ತಿದೆ. ಅಲ್ಲದೆ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್ ಬಳಿ ಸಮಸ್ಯೆ ಹೇಳಿಕೊಂಡೆ.
ಆವಾಗಲೂ ಅವರಿಬ್ಬರು ಸ್ಪಂದಿಸಲಿಲ್ಲ. ಹಾಗಾಗಿ ಮಂಗಳೂರಿಗೆ ಆಗಮಿಸಲಿರುವ ಮುಖ್ಯಮಂತ್ರಿಗೆ ಕರಿಪತಾಕೆ ಪ್ರದರ್ಶಿಸುವುದಾಗಿ ಎಚ್ಚರಿಕೆ ನೀಡಬೇಕಾಯಿತು. ನನ್ನ ಸಮುದಾಯಕ್ಕೆ ಅಂದರೆ ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಂಡಿರುವ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯ ಆಗತೊಡಗಿದಾಗ ಸಹಜವಾಗಿ ನಾನು ಪ್ರತಿಭಟಿಸಬೇಕಾಯಿತು. ಪಕ್ಷಕ್ಕಿಂತ ಸಮುದಾಯ ಮುಖ್ಯ ಅಂತ ಮನಗಂಡ ನಾನು ಕಾಂಗ್ರೆಸ್ನಿಂದ ಹೊರ ನಡೆದೆ. ಮತ್ತೆ ಹಿರಿಯರ, ಅಭಿಮಾನಿಗಳ ಮಾತಿಗೆ ಮನ್ನಣೆ ನೀಡಿ ಕಾಂಗ್ರೆಸ್ಗೆ ಸೇರ್ಪಡೆಗೊಂಡೆ. ಈ ಮಧ್ಯೆ ಖುರೇಷಿಯ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದರು. ಪವಿತ್ರ ಕುರ್ಆನ್ಗೂ ಪೊಲೀಸ್ ಇಲಾಖೆ ಅಗೌರವ ತೋರಿಸಿತು. ಈ ಅನ್ಯಾಯವನ್ನು ಸಚಿವರು, ಶಾಸಕರ ಗಮನ ಸೆಳೆಯಲಾಯಿತು. ಆದರೆ ಅವರ್ಯಾರೂ ಸ್ಪಂದಿಸಲಿಲ್ಲ. ಹಾಗಾಗಿ ಮುಸ್ಲಿಮ್ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡತೊಡಗಿದೆ. ಆದರೂ ಕಾಂಗ್ರೆಸ್ ಸರಕಾರ ಮತ್ತು ಪಕ್ಷವನ್ನು ಪ್ರತಿನಿಧಿಸುವ ಸಚಿವರು, ಶಾಸಕರು ಸ್ಪಂದಿಸಲಿಲ್ಲ. ಅನಿವಾರ್ಯವಾಗಿ ನಾನು ಕಾಂಗ್ರೆಸ್ ಬಿಡುವ ನಿರ್ಧಾರಕ್ಕೆ ಬಂದೆ.
ಯು.ಟಿ.ಖಾದರ್ ಮೇಲೆ ನಿಮಗೆ ಯಾಕಿಷ್ಟು ಸಿಟ್ಟು?
ನಿಜ ಹೇಳಬೇಕಿದ್ದರೆ ನನಗೆ ಅವರ ಮೇಲೆ ಸಿಟ್ಟು ಇಲ್ಲ. ನಾನು ಜೆ.ಆರ್.ಲೋಬೊ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದ್ದೆ. ಜೆಡಿಎಸ್ ವರಿಷ್ಠರನ್ನು ಭೇಟಿಯಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದೆ. ಆದರೆ ಮೊನ್ನೆ ಪತ್ರಕರ್ತರ ಪ್ರಶ್ನೆಗೆ ಸಚಿವ ಖಾದರ್ ಅವರು, ಲೋಬೊ ಬದಲು ಅಶ್ರಫ್ ನನ್ನ ವಿರುದ್ಧ ಸ್ಪರ್ಧಿಸಲಿ. ಠೇವಣಿ ಹಣ ಇಲ್ಲದಿದ್ದರೆ ಕಾಂಗ್ರೆಸ್ ಕಾರ್ಯಕರ್ತರು ಚಂದಾ ಎತ್ತಿ ಕಟ್ಟಲಿದ್ದಾರೆ. ಕ್ಷೇತ್ರದ ಪರಿಚಯ ಇಲ್ಲದಿದ್ದರೆ ಕಾಂಗ್ರೆಸ್ ಕಾರ್ಯಕರ್ತರೇ ತೋರಿಸಿಕೊಡಲಿದ್ದಾರೆ ಎಂದರು. ಅದನ್ನು ನಾನು ಸವಾಲಾಗಿ ಸ್ವೀಕರಿಸಿ ಉಳ್ಳಾಲ (ಮಂಗಳೂರು) ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ.
ಸಮುದಾಯ... ಸಮುದಾಯ ಎನ್ನುವ ತಾವು ಇದೀಗ ಮುಸ್ಲಿಮ್ ಸಮುದಾಯದಿಂದ ಬಂದ ಯು.ಟಿ.ಖಾದರ್ ವಿರುದ್ಧವೇ ಸ್ಪರ್ಧಿಸುತ್ತಿದ್ದೀರಿ.
ಹೌದು... ನಾನು ಈಗಲೂ ಸಮುದಾಯ ಪ್ರೇಮಿ. ಸಮುದಾಯಕ್ಕೆ ಅನ್ಯಾಯವಾದರೆ ಹೋರಾಟ ಮುಂದುವರಿಯಲಿದೆ. ಅಂದಹಾಗೆ, ಖಾದರ್ ಸಮುದಾಯದ ನಾಯಕನಲ್ಲ. ಅವರು ಕಾಂಗ್ರೆಸ್ ಪಕ್ಷದ ನಾಯಕರೋ ಏನೋ? ಜೆಡಿಎಸ್ ಅಭ್ಯರ್ಥಿಯಾಗಿ ನಾನು ಉಳ್ಳಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಗುರಿ ಇಟ್ಟುಕೊಂಡಿದ್ದೇನೆ.
ನಿಮ್ಮ ಮಗನ ಮೇಲೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದಾಗ ಸಚಿವ ಖಾದರ್ ಬಳಿ ಸಹಾಯ ಕೇಳಿಕೊಂಡು ಹೋಗಿದ್ದೀರಂತೆ?
ಆ ವಿಷಯದಲ್ಲಿ ಸಹಾಯ ಕೇಳಿಕೊಂಡು ನಾನು ಖಾದರ್ ಬಳಿ ಹೋಗಿಯೇ ಇಲ್ಲ. ಅಂತಹ ದರ್ದು ನನಗೆ ಬಂದಿಲ್ಲ. ಅವರ ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಸುಮ್ಮನೆ ತೇಜೋವಧೆ ಮಾಡುತ್ತಿದ್ದಾರೆ. ನನಗೆ ಈ ವಿಷಯದಲ್ಲಿ ಐವನ್ ಡಿಸೋಜ ಒಬ್ಬರನ್ನು ಬಿಟ್ಟರೆ ಬೇರೆ ಯಾವ ರಾಜಕಾರಣಿ ಕೂಡ ಸಹಾಯ ಮಾಡಿಲ್ಲ.
ಕಾಂಗ್ರೆಸ್ ಭದ್ರಕೋಟೆಯನ್ನು ಮುರಿಯಲು ನಿಮಗೆ ಸಾಧ್ಯವೇ?
ಯಾಕೆ ಸಾಧ್ಯವಿಲ್ಲ? ಉಳ್ಳಾಲ (ಮಂಗಳೂರು) ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದವರು ಯಾರು? ಅಲ್ಲಿ ಎಡಪಕ್ಷಗಳು, ಬಿಜೆಪಿ ಕೂಡ ಗೆದ್ದ ಇತಿಹಾಸವಿದೆ. ಹಾಗಾಗಿ ಅಸಾಧ್ಯದ ಮಾತೇ ಇಲ್ಲ.
ನಿಮ್ಮ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗದೇ?
ಇಲ್ಲಿ ಲಾಭ-ನಷ್ಟದ ಪ್ರಶ್ನೆಯೇ ಇಲ್ಲ. ಜೆಡಿಎಸ್ ಅಭ್ಯರ್ಥಿಯಾಗಿ ಪಕ್ಷದ ಅಸ್ತಿತ್ವವನ್ನು ತೋರಿಸುವುದು ನನ್ನ ಕರ್ತವ್ಯವಾಗಿದೆ.
ಕಾಂಗ್ರೆಸ್ ನಿಮಗೆ ‘ಮೇಯರ್’ ಸ್ಥಾನವನ್ನು ನೀಡಿದೆ. ಹೀಗಿರುವಾಗ ಆ ಪಕ್ಷಕ್ಕೆ ಕೃತಘ್ನನಾಗುವುದು ಸರಿಯಲ್ಲ ಎಂಬ ಮಾತು ಕೇಳಿ ಬರುತ್ತಿದೆ?
ಕಾಂಗ್ರೆಸ್ ‘ಮೇಯರ್’ ಸ್ಥಾನವನ್ನು ಪುಕ್ಕಟೆಯಾಗಿ ನೀಡಿಲ್ಲ. ಪಕ್ಷಕ್ಕಾಗಿ ಹಲವು ಮಂದಿ ಕಾರ್ಯಕರ್ತರಾಗಿ ದುಡಿದಿದ್ದಾರೆ. ಆದರೆ ಸ್ಥಾನಮಾನ ನೀಡುವಾಗ ಸರಿಯಾಗಿ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುತ್ತಿಲ್ಲ. ಹೋರಾಟ ಮಾಡಿಯೇ ಆ ಸ್ಥಾನವನ್ನು ಪಡೆಯಲಾಗುತ್ತದೆ. ಮಂಗಳೂರಿನಲ್ಲಿ ಮೂವರು ಮುಸ್ಲಿಮರು ಮೇಯರ್ ಆಗಿದ್ದು ಕೂಡ ಹೋರಾಟ ಮಾಡಿಯೇ.
ಮೇಯರ್ ಆಗಿದ್ದಾಗ ಸಮುದಾಯಕ್ಕೆ ತಾವು ಏನನ್ನೂ ಮಾಡಿಲ್ಲ ಎಂಬ ಆರೋಪವಿದೆಯಲ್ಲಾ?
ಮಂಗಳೂರಿನ ಬೀದಿಬದಿ ವ್ಯಾಪಾರಿಗಳಲ್ಲಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ನನ್ನ ಗಮನಕ್ಕೆ ತಾರದೆ ಅಧಿಕಾರಿಗಳು ಆ ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾದಾಗ ನಾನು ಪಕ್ಷದ ನಾಯಕರ ವಿರೋಧವನ್ನೂ ಲೆಕ್ಕಿಸದೆ ಅವರು ಅಲ್ಲೇ ವ್ಯಾಪಾರ ಮಾಡುವಂತೆ ಮಾಡಿದೆ. ಹೇಳುವುದಾದರೆ ಇನ್ನೂ ಹಲವು ಕೆಲಸ ಕಾರ್ಯಗಳ ಪಟ್ಟಿ ಇದೆ. ಸಂದರ್ಭ ಬಂದಾಗ ಅದನ್ನೆಲ್ಲಾ ಹೇಳುವೆ.
ನೀವು ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದಲೇ ಮುಸ್ಲಿಮ್ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ಮಾಡಿದ್ದು ಎಂಬ ಆರೋಪವಿದೆಯಲ್ಲಾ?
ಕಳೆದ ಮನಪಾ ಚುನಾವಣೆಯಲ್ಲಿ ಕಾಂಗ್ರೆಸ್ ನನಗೆ ಬಿ ಫಾರಂ ನೀಡಿತ್ತು. ಸ್ಪರ್ಧಿಸುವ ಆಸೆ ಇದ್ದಿದ್ದರೆ ನಾನು ಆ ಅವಕಾಶವನ್ನು ಕೈ ಚೆಲ್ಲುತ್ತಿರಲಿಲ್ಲ. ಇನ್ನು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ನನಗೆ ಇರಲಿಲ್ಲ. ಮುಸ್ಲಿಮರಿಗೆ ಕಾಂಗ್ರೆಸ್ನ ಅಭಯ ಇದೆ ಎಂದು ಸಮುದಾಯ ನಂಬಿತ್ತು. ಆದರೆ ಕಾಂಗ್ರೆಸ್ ಸರಕಾರವಿದ್ದಾಗಲೂ ಆ ಪಕ್ಷದಿಂದ ಅನ್ಯಾಯ ಆದಾಗ ಪಕ್ಷದೊಳಗಿದ್ದುಕೊಂಡೇ ಹೋರಾಟ ಮಾಡಿದೆ. ಫಲ ಕಾಣದಿದ್ದಾಗ ರಾಜೀನಾಮೆ ಸಲ್ಲಿಸಿ ಜೆಡಿಎಸ್ನಿಂದ ಅನಿವಾರ್ಯವಾಗಿ ಚುನಾವಣೆ ಎದುರಿಸುತ್ತಿದ್ದೇನೆ.
ನೀವು ಒಮ್ಮೆ ಎಸ್ಕೆಎಸ್ಸೆಸ್ಸೆಫ್, ಇನ್ನೊಮ್ಮೆ ಎಸ್ಸೆಸ್ಸೆಫ್, ಮತ್ತೊಮ್ಮೆ ಪಿಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಳ್ಳುತ್ತೀರಿ. ಯಾಕೆ ಈ ದ್ವಂದ್ವ?
ನಾನು ಕೇವಲ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರನೂ ಹೌದು. ಮುಸ್ಲಿಮ್ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ಮಾಡುವಾಗ ಈ ಸಂಘಟನೆಗಳೊಂದಿಗೆ ಸಖ್ಯ ಬೆಳೆಸಬೇಕಾಗಿದೆ. ಅದನ್ನು ತಪ್ಪಾಗಿ ಅರ್ಥೈಸಬೇಕಿಲ್ಲ.
ಗೆಲ್ಲುವ ವಿಶ್ವಾಸ ಇದೆಯಾ?
ಸೋಲು ಗೆಲುವಿನ ಪ್ರಶ್ನೆಯಲ್ಲ. ಇದು ಅಸ್ತಿತ್ವದ ಪ್ರಶ್ನೆ.
‘ಲೋಬೊ ಪಕ್ಕಾ ಕೋಮುವಾದಿ’
ನಮ್ಮದು ಕಾಂಗ್ರೆಸ್ ಕುಟುಂಬ. ಹಿರಿಯರ ಕಾಲದಿಂದಲೇ ಅಂದರೆ ಜೋಡಿ ಎತ್ತು , ದನ- ಕರು, ಕೈ ಚಿಹ್ನೆ ಹೀಗೆ ನಮ್ಮ ಕುಟುಂಬದ ಸಂಬಂಧ ಕಾಂಗ್ರೆಸ್ನೊಂದಿಗೆ ಇತ್ತು. 30 ವರ್ಷಗಳಿಂದ ನಾನು ಕಾಂಗ್ರೆಸ್ಗೆ ದುಡಿದವ. ಐವನ್ ಡಿಸೋಜ ಹೊರತುಪಡಿಸಿ ಬೇರೆ ಯಾರೂ ಕೂಡ ಪಕ್ಷ ಬಿಡದಂತೆ ನನ್ನ ಮನವೊಲಿಸಲಿಲ್ಲ. ನನ್ನನ್ನು ಪಕ್ಷದಲ್ಲಿ ಮೊದಲು ಹತ್ತಿಕ್ಕಲು ನೋಡಿದ್ದು ಶಾಸಕ ಜೆ. ಆರ್.ಲೋಬೊ. ಅವರೊಬ್ಬ ಪಕ್ಕಾ ಕೋಮುವಾದಿ. ಅವರಿಗೆ ರಾಜಕೀಯ ಅಂದರೆ ಏನೂಂತಲೇ ಗೊತ್ತಿಲ್ಲ. ಇನ್ನು ಸಚಿವ ಖಾದರ್ಗೆ ಇನ್ನೊಬ್ಬ ಮುಸ್ಲಿಮ್ ನಾಯಕ ಈ ಜಿಲ್ಲೆಯಲ್ಲಿ ಬೆಳೆಯುವುದು ಇಷ್ಟವಿಲ್ಲ. ನಾನು ಕಾಂಗ್ರೆಸ್ನಲ್ಲಿದ್ದುಕೊಂಡೇ ಪಿಎಫ್ಐ ಸಹಿತ ಮುಸ್ಲಿಮ್ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ಮಾಡತೊಡಗಿದಾಗ ಖಾದರ್ಗೆ ಸಹಿಸಲು ಸಾಧ್ಯವಾಗಲಿಲ್ಲ. ಖಾದರ್ ಮತ್ತು ಲೋಬೊ ಸೇರಿಕೊಂಡು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸ್ಥಾನದಿಂದ ನನ್ನನ್ನು ತೆರೆಮರೆಯಲ್ಲೇ ತೆರವುಗೊಳಿಸಿದರು.
ರಮಾನಾಥ ರೈ ಕೂಡ ಹಿಂದಿನ ರಮಾನಾಥ ರೈ ಆಗಿ ಉಳಿದಿಲ್ಲ. ಅವರ ಮಾತಿಗೆ ಈಗ ಎಲ್ಲಿಯೂ ಬೆಲೆ ಇಲ್ಲ. ಅವರ ಅಬ್ಬರ ಕೇವಲ ಬಂಟ್ವಾಳಕ್ಕೆ ಸೀಮಿತವಾಗಿದೆ. ಜಿಲ್ಲೆಗೆ ಇಬ್ಬಿಬ್ಬರು ಸಚಿವರನ್ನು ಕೊಟ್ಟ ಬಳಿಕ ಇವರೆಲ್ಲಾ ಹೈಕಮಾಂಡ್ನ ಮುಂದೆ ತಮ್ಮ ತಮ್ಮ ಸ್ಥಾನ ಭದ್ರಪಡಿಸಲು ಮುಂದಾಗುತ್ತಿರುವ ಪಟ್ಟಭದ್ರರೇ ವಿನಃ ನ್ಯಾಯದ ಪರ ಇಲ್ಲವೇ ಇಲ್ಲ.
ಕೆ.ಅಶ್ರಫ್, ಮಾಜಿ ಮೇಯರ್