ಕೋರೆಗಾಂವ್ನ ಜಯಸ್ತಂಭ
ಇಂಗ್ಲಿಷರ ಶಾಸನ ಹಿಂದೂಸ್ಥಾನದಲ್ಲಿ ಶುರುವಾಗಲು, ಹಿಂದೂಗಳು ಮಾಡಿದ ಸಹಾಯದ ಅನೇಕ ಪಟ್ಟು ಸಹಾಯವನ್ನು ಅಸ್ಪಶ್ಯರು ಮಾಡಿದ್ದರು. ಇಂಗ್ಲಿಷರ ಸೈನ್ಯದಲ್ಲಿ ಸಾಕಷ್ಟು ಸೈನಿಕರು ಅಸ್ಪಶ್ಯರೇ ಇದ್ದರು. ಆಕಾರ್ಟಿನ ಮುತ್ತಿಗೆಯಲ್ಲಿ ಅಸ್ಪಶ್ಯ ಸೈನಿಕರು ಅನ್ನದ ಗಂಜಿಯನ್ನು ಕುಡಿದು ಮತ್ತು ಇಂಗ್ಲಿಷ್ ಸೈನಿಕರಿಗೆ ಅನ್ನ ತಿನ್ನಲು ಕೊಟ್ಟು ನಾಲ್ಕು ದಿವಸ ಹೋರಾಡಿ ಕೋಟೆಯನ್ನು ಇಂಗ್ಲಿಷರಿಗೆ ಕೊಡಿಸಿದ್ದರು. ಮುಂಬೈಯ ತುಕಡಿಗಳಲ್ಲಿ ಮಹಾರರ ಭರತಿ ಸಾಕಷ್ಟು ಇತ್ತು. ಪೇಶ್ವೆಗಳನ್ನು ನಿರ್ನಾಮಗೊಳಿಸುವಲ್ಲಿ ಮಹಾರ್ ಸೈನಿಕರ ಮೊದಲ ತಂಡವೇ ಕಾರಣೀಭೂತವಾಗಿತ್ತು. ಜನವರಿ 1, 1818ರಂದು ಮುಂಬೈಯ ನೇಟಿವ್ ಇನ್ಫೆಂಟ್ರಿಯಲ್ಲಿ 500 ಜನರಲ್ಲಿ ಕೇವಲ 250 ಶಿಸ್ತಿಲ್ಲದ ಕುದುರೆ ಸವಾರರು ಮತ್ತು 2 ತೋಫಗಳು (ಇವು ಮದ್ರಾಸಿನ 24 ಬ್ರಿಟಿಷ್ ತೋಫೇಗಾರರ ಹಿಡಿತದಲ್ಲಿದ್ದವು.) ಇಷ್ಟು ಸ್ವಲ್ಪ ಸೈನ್ಯದಿಂದ ಕ್ಯಾಪ್ಟನ್ ಸ್ಟಾಂಟನ್ ಅವರು ಪೇಶ್ವೆಗಳ 25,000ಕ್ಕೂ ಅಧಿಕವಾಗಿದ್ದ ಇಂಥ ಪ್ರಚಂಡ ಸೈನ್ಯವನ್ನು ಹೊಡೆದು ಕೋರೆಗಾಂವ್ನ ರಕ್ಷಣೆಯನ್ನು ಹೇಗೆ ಮಾಡಿದರು ಎನ್ನುವುದು ನಿಜವಾಗಿ ಚಿರಸ್ಮರಣೀಯವಾಗಿದೆ.
ಇದೇ ವೇಳೆ ಇಂಗ್ಲಿಷರ ಕಡೆಯಲ್ಲಿ ಕೇವಲ 276 ಜನರಿದ್ದರು. ಸುಪ್ರಸಿದ್ಧ ಇತಿಹಾಸಕಾರನಾದ ಟ್ರಾಡ್ ಈ ಪ್ರಸಂಗವನ್ನು ಹಿಂದಿ ಥರ್ಮಾಪಿಲಿ ಎಂದು ವರ್ಣಿಸುತ್ತಾರೆ. ಸದರಿ ದಿಗ್ವಿಜಯ ಸ್ಮರಣಾರ್ಥವಾಗಿ ಕೋರೆಗಾಂವ್ನಲ್ಲಿ ಒಂದು ಕಲ್ಲಿನ ವಿಜಯ ಸ್ತಂಭವನ್ನು ನಿಲ್ಲಿಸಲಾಗಿದೆ. ಮುಂಬೈಯ ನೇಟಿವ್ ಇನ್ಫೆಂಟ್ರಿ ಎಂದರೆ ಮಹಾರರ ಕಾಲಾಳುಗಳ ತುಕಡಿಯೇ ಹೌದು. ಮಹಾರ್ ಸೈನಿಕರು ಪೇಶ್ವೆಗಳನ್ನು ನೆಲಸಮ ಮಾಡಿದರು. ಇದರ ಬಗ್ಗೆ ಒಪ್ಪಿಗೆಯ ಉತ್ತರವನ್ನು ಕೊಡುವಾಗ ಮಧ್ಯಭಾಗದ ಕಮಿಷನರ್ ಮಿ. ಎಲ್.ಜೆ.ವೌಂಟ್ ಫೋರ್ಡ್ ಅವರು ಅಸ್ಪಶ್ಯರ ಉನ್ನತಿಯ ಸಲುವಾಗಿ ಗೊತ್ತುವಳಿಯಲ್ಲಿ ಮುಂಬೈ ಕಾಯ್ದೆ ಕೌನ್ಸಿಲ್ನಲ್ಲಿ ನವೆಂಬರ್ 5, 1920ರಂದು ಭಾಷಣ ಮಾಡುತ್ತಾ ಹೇಳಿದ್ದಾರೆ. ಅವರ ಭಾಷಣದ ಸಾರಾಂಶ ಹೀಗಿದೆ:
‘‘ಜಾನ್ ಕಂಪೆನಿಯ ಯಾವ ಸೈನ್ಯವಿತ್ತೋ, ಆ ಸೈನ್ಯದಲ್ಲಿ ಮಹಾರರ ಭರ್ತಿ ದೊಡ್ಡ ಸಂಖ್ಯೆಯಲ್ಲಿ ಇತ್ತು. ಕೋರೆಗಾಂವ್ನಲ್ಲಿ ಯಾವ ವಿಜಯಸ್ತಂಭವನ್ನು ನಿಲ್ಲಿಸಿದ್ದಾರೋ ಅದು ಮಹಾರರು ಮಾಡಿ ತೋರಿಸಿದ ಪರಾಕ್ರಮಕ್ಕೆ ಶೋಭೆಯನ್ನು ತರುವ ಜಯದ ಚಿಹ್ನೆಯೇ ಸರಿ. ಪೌರ್ವಾತ್ಯ ದೇಶಗಳಲ್ಲಿ ಯಾವ ಪ್ರಕಾರ ಪರಾಕ್ರಮವನ್ನು ಇವತ್ತಿನವರೆಗೂ ಗಣನೆ ಮಾಡುತ್ತಾರೋ, ಅದರಲ್ಲಿ ಕೋರೆಗಾಂವ್ನ ಮಹಾರರ ಪರಾಕ್ರಮ ತುಂಬಾ ಸರ್ವಶ್ರೇಷ್ಠವಾದುದು. ಖಡಕಿಯ ಹೋರಾಟ ಮುಗಿದ ನಂತರ ಕ್ಯಾಪ್ಟನ್ ಸ್ಟಾಂಟನ್ ಅವರು ಪುಣೆಯ ಹತ್ತಿರ ಇರುವ ಕರ್ನಲ್ ಬರ್ ಅವರ ಸೈನ್ಯವನ್ನು ಸೇರಲು ಖಡಕಿಯಿಂದ ಹೊರಟು ಕೋರೆಗಾಂವ್ನಲ್ಲಿ ತಂಗಿದರು. ಅವರ ಪದಾತಿ ಸೈನ್ಯದಲ್ಲಿ ಕಾಲಾಳುಗಳು 200 ಇದ್ದರು. ಇದರಲ್ಲಿ ಕೆಲವು ಅರಬರೂ ಇದ್ದರು. ಮಿಕ್ಕವರೆಲ್ಲರೂ ಮಹಾರರೇ ಆಗಿದ್ದರು. ಅರಬರು ತೋಫಾಖಾನೆಯಲ್ಲಿದ್ದರು. ಎರಡನೆಯ ಬಾಜಿರಾವ್ ಅವರ ನೇತೃತ್ವದಲ್ಲಿ ಪೇಶ್ವೆಯವರ ಸೈನ್ಯ ಆ ಕಡೆಯಲ್ಲಿತ್ತು. ಅವರ ಮತ್ತು ಸ್ಟಾಂಟನ್ ಅವರ ಪದಾತಿಗಳು ಎದುರಾದವು. ಪೇಶ್ವೆಗಳ ಸೈನ್ಯ 25,000 ಇತ್ತು. ಮಹಾರ್ ಸೈನಿಕರು ಪೇಶ್ವೆಗಳ 25,000 ಸೈನಿಕರನ್ನು ಒಂದು ಹಗಲು ಮತ್ತು ಒಂದು ರಾತ್ರಿಯವರೆಗೆ ಇದ್ದಲ್ಲಿಯೇ ಬಂಧಿಸಿಟ್ಟರು. ಅವರನ್ನು ಮುಂದೆ ಸರಿಯಲು ಬಿಡಲಿಲ್ಲ. ಕೊನೆಗೆ ಮಹಾರ್ ಸೈನಿಕರು ಪೇಶ್ವೆಗಳ 25,000 ಸೈನಿಕರ ಧೂಳೆಬ್ಬಿಸಿದರು. ಮಹಾರರು ಯಾವ ದರ್ಜೆಯಲ್ಲಿ ಹೋರಾಡಿದರು ಎನ್ನುವುದಕ್ಕೆ ಇದೊಂದು ಐತಿಹಾಸಿಕ ಪುರಾವೆಯಾಗಿದೆ. ಈ ಯೋಧಗುಣದಿಂದಾಗಿ ಮುಂಬೈ ಸರಕಾರ ಮತ್ತು ಹಿಂದೂಸ್ಥಾನದ ಸರಕಾರ ಮಹಾರರ ಬಗ್ಗೆ ಅಭಿಮಾನಪಡುತ್ತದೆ, ಹಾಗೆಯೇ ಸಾಮ್ರಾಜ್ಯ ಸರಕಾರದ ಸೈನ್ಯದ ವಿಸ್ತರಣೆ ಮಾಡುವ ವೇಳೆ ಬಂದಾಗ ಮತ್ತು ಯಾವಾಗ ಜರೂರಿ ಬೀಳುತ್ತದೆಯೋ ಆಗ ಸರಕಾರ ಮಹಾರರನ್ನು ಸೈನ್ಯದಲ್ಲಿ ಖಂಡಿತ ಸೇರಿಸಿಕೊಳ್ಳುವುದು.’’
(the joint memorandum of the depressed india association, bombay & the servent of somavamshi society, bombay; presented to the royal statuary commission, 1927-29, page-1)' ಕೋರೆಗಾಂವ್ನಲ್ಲಿ ನಡೆದ ಹೋರಾಟದ ಸವಿಸ್ತಾರ ವರ್ಣನೆ ಈ ಕೆಳಗೆ ಕಂಡಂತಿದೆ.-
ಕೋರೆಗಾಂವ್ ಯುದ್ಧ - ‘‘ಎರಡನೆಯ ಬಾಜಿರಾವ್ ಪೇಶ್ವೆ ಮತ್ತು ಇಂಗ್ಲಿಷರ ಮಿತ್ರತ್ವದ ಸಂಬಂಧ ಬಹಳ ದಿನ ನಡೆಯಲಿಲ್ಲ. ಅವರಲ್ಲಿನ ವೈಮನಸ್ಯ ಕೆಲವು ದಿನಗಳ ತನಕ ಪ್ರತಿಧ್ವನಿಸುತ್ತಿತ್ತು ಮತ್ತು ಕೊನೆಗೆ 1817ರ ನವೆಂಬರ್ನಲ್ಲಿ ಸ್ಫೋಟಗೊಂಡಿತು. ಪೇಶ್ವೆಗಳ ಸೈನ್ಯ ಪುಣೆಯಲ್ಲಿ ಇಂಗ್ಲಿಷರ ವಕಾಲತಿಯ ಮೇಲೆ ಯಾವಾಗ ಹಲ್ಲೆ ಮಾಡಿದರೋ, ಆಗ ವಕಾಲತಿಯ ಸಂರಕ್ಷಣೆ ಮಾಡಲು ಕರ್ನಲ್ ಬರ್ ಅವರು ತುಂಬಾ ಪ್ರಯತ್ನಪಟ್ಟರು. ಆದರೆ ಪೇಶ್ವೆಯವರ ಪ್ರಚಂಡ ಸೇನೆಯ ಮುಂದೆ ಅವರ ಪ್ರಯತ್ನ ನಿಷ್ಫಲವಾಯಿತು. ನಂತರ ಇಂಗ್ಲಿಷ್ ಹೋರಾಟಗಾರರ ಮುಂದೆ ಪೇಶ್ವೆಯವರ ಸೈನ್ಯ ಪುಣೆಯ ಉತ್ತರ ದಿಕ್ಕಿಗೆ ಓಡಿಹೋಯಿತು. ಬಾಜೀರಾವ್ ಸೈನ್ಯವನ್ನು ಸರಿಯಾಗಿ ಒಟ್ಟು ಸೇರಿಸಿ ಮತ್ತೆ ಒಂದು ಸಲ ಕರ್ನಲ್ ಬರ್ ಅವರ ಸೇನೆಯ ಮೇಲೆ (ಪುಣೆಯಲ್ಲಿ ಇಂಗ್ಲಿಷ್ ನೆಲೆಯ ಮೇಲೆ) ಹಲ್ಲೆ ಮಾಡಿದನು. ಈ ವೇಳೆಗೆ ಎರಡನೆಯ ಬೆಟಾಲಿಯನ್ ಫಸ್ಟ್ ರೆಜಿಮೆಂಟ್, ಬಾಂಬೆ ನೇಟಿವ್ ಇನ್ಫೆಂಟ್ರಿ, ಅವರ ಮಕ್ಕಾಮು ಪುಣೆಯ ವಾಯುವ್ಯದಲ್ಲಿ 35 ಮೈಲಿದೂರದಲ್ಲಿರುವ ಶಿರೂರು ಹಳ್ಳಿಯಲ್ಲಿತ್ತು. ಅದರ ಪ್ರಮುಖರು ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಾಂಟನ್ ಆಗಿದ್ದರು. ಕರ್ನಲ್ ಬರ್ಗೆ ಪೇಶ್ವೆಯ ಪ್ರಚಂಡ ಸೈನ್ಯವನ್ನು ಎರಡನೆಯ ಬಾರಿ ಎದುರಿಸುವುದು ಅಸಾಧ್ಯವೆನಿಸಿದಾಗ ಅವರು ಕ್ಯಾಪ್ಟನ್ ಸ್ಟಾಂಟನ್ಗೆ ಪುಣೆ ನೆಲೆಯ ಸಂರಕ್ಷಣೆ ಮಾಡಲು ಸಹಾಯಕ್ಕೆ ಬರಲು ತುರ್ತಾಗಿ ಸಂದೇಶ ಕಳಿಸಿದರು.
ಕ್ಯಾಪ್ಟನ್ ಸ್ಟಾಂಟನ್ ಶಿರೂರಿನಿಂದ ಪುಣೆಯ ಕಡೆಗೆ ಹೋಗಲು ಎರಡನೆಯ ಬೆಟಾಲಿಯನ್ ತೆಗೆದುಕೊಂಡು ಡಿಸೆಂಬರ್ 31, 1817ರ ರಾತ್ರಿ 8 ಗಂಟೆಗೆ ಹೊರಟರು. ಅದರಲ್ಲಿ ಮಹಾರರು ಬಹು ಸಂಖ್ಯೆಯಲ್ಲಿದ್ದರು. ಕ್ಯಾಪ್ಟನ್ ಸ್ಟಾಂಟನ್ ಜೊತೆಗೆ 500 ಕಾಲಾಳುಗಳು, 300 ಅಶ್ವದಳ, 5 ಬೆಟಾಲಿಯನ್ ಆಫೀಸರುಗಳು, 206 ಪೌಡರ್ ತೋಫಾಗಳು ಮತ್ತು ಅದನ್ನು ನಡೆಸುವ 24 ಬ್ರಿಟಿಷ್ ಸೈನಿಕರು ಇಷ್ಟು ಜಮಾವಣೆ ಇತ್ತು. ಸುಮಾರು 25 ಮೈಲಿ ರಾತ್ರಿ ಪ್ರವಾಸ ಮಾಡಿದರು. ಅದರ ನಂತರ ಈ ಬೆಟಾಲಿಯನ್ ಬೆಳಗಿನ ಜಾವ ಭೀಮಾ ನದಿಯ ತೀರಕ್ಕೆ ಬಂದಿತು. ಆಗ ಪೇಶ್ವೆಯವರ ಪ್ರಚಂಡ ಸೈನ್ಯ ನದಿಯ ಇನ್ನೊಂದು ತೀರದಲ್ಲಿ ಹೋರಾಟಕ್ಕೆ ಅಣಿಯಾಗುತ್ತಿದ್ದುದು ಕಾಣಿಸಿತು. ಅವರ ಸೈನ್ಯದಲ್ಲಿ 5000 ಕಾಲಾಳುಗಳು ಮತ್ತು 25 ಸಾವಿರ ಅಶ್ವದಳ ಇತ್ತು. ಪೇಶ್ವೆಯವರ ಸೈನ್ಯವು ನಮ್ಮನ್ನು ಮುಗಿಸಿದರೆ, ಕರ್ನಲ್ ಬರ್ ಅವರನ್ನೂ ಮುಗಿಸುತ್ತಾರೆ ಎಂದು ಮಧ್ಯ ಹಿಂದೂಸ್ಥಾನದ ಶಿಂಧೆ, ಹೋಳಕರ್ ಮತ್ತು ಭೋಸ್ಲೆ ಅವರುಗಳು ಜನರಲ್ ಸ್ಮಿತ್ ಅವರನ್ನು ಹೊಡೆದು ಹಾಕಿದರೆ, ಬ್ರಿಟಿಷ್ ರಾಜ್ಯ ಹಿಂದೂಸ್ಥಾನದಿಂದ ಕಾಲು ತೆಗೆಯುವ ಹಾಗೆ ಆಗುತ್ತದೆ, ಎನ್ನುವ ಭವಿಷ್ಯ ಇಂಗ್ಲಿಷ್ ಸೈನ್ಯಾಧಿಕಾರಿಗಳಿಗೆ ಕಾಣಿಸುತ್ತಿತ್ತು. ಹಾಗಾಗಿ ಕ್ಯಾಪ್ಟನ್ ಸ್ಟಾಂಟನ್ ಪೇಶ್ವೆಗಳ ಸೈನ್ಯವನ್ನು ಹೇಗೆ ಹಿಡಿಯಬಹುದೆನ್ನುವ ವ್ಯೆಹವನ್ನು ರಚಿಸುತ್ತಿದ್ದನು. ಅವನು ಪೇಶ್ವೆಯವರ ಸೈನ್ಯಕ್ಕೆ ಮೋಸಮಾಡಿ ಕೋರೆಗಾಂವ್ ಹಳ್ಳಿಗೆ ಪ್ರವೇಶಿಸಿದನು.
ಈ ಊರಿನಲ್ಲಿ ಮಣ್ಣಿನ ಕುಂಬಿಗಳು ಇದ್ದವು. ಈ ಕುಂಬಿಗಳ ಮತ್ತು ಊರಿನ ಮನೆಗಳ ಸಲುವಾಗಿ ಪೇಶ್ವೆಯವರ ಅಶ್ವದಳಕ್ಕೆ ಊರಿನಲ್ಲಿ ಓಡಾಡಿಕೊಂಡು ಯುದ್ಧ ಮಾಡುವುದು ಕಷ್ಟವಾಗಿತ್ತು. ಆದ್ದರಿಂದ ಸ್ಟಾಂಟನ್ನನು ಗುಪ್ತವಾಗಿ ಊರನ್ನು ತನ್ನ ಹಿಡಿತದಲ್ಲಿ ತೆಗೆದುಕೊಂಡು, ಭೀಮಾ ನದಿಯ ತೀರದಲ್ಲಿ ಮತ್ತು ಶಿರೂರಿಗೆ ಹೋಗುವ ರಸ್ತೆಯಲ್ಲಿ ಎಲ್ಲಿಂದ ಪೇಶ್ವ್ವೆಯವರ ಸೈನ್ಯಕ್ಕೆ ತಪ್ಪದೆ ಹೊಡೆಯಲು ಬರುತ್ತದೆಯೋ, ಅಂಥ ಜಾಗದಲ್ಲಿ ಅವನು ಎರಡು ತೋಪುಗಳನ್ನು ಕೂಡಿಸಿದ. ಊರಿನ ಮಧ್ಯಭಾಗದಲ್ಲಿ ಯಾವ ಕೋಟೆ ಇತ್ತೋ ಅದರ ಮೇಲೆ ಅವರು ತೋಫನ್ನು ಕೂಡಿಸಲಿಲ್ಲ. ಆದ್ದರಿಂದ ಪೇಶ್ವೆಯ ಸೈನ್ಯ ಊರಿನಲ್ಲಿ ಓಡಾಡುವಾಗ ಅದರ ಮೇಲೆ ತೋಫೆಯ ಗೋಲಿ ಹಾರಿಸಿದ. ಆದ್ದರಿಂದ ಊರಿನ ಚಕಮಕಿಯಲ್ಲಿ ಸಾಕಷ್ಟು ಸೈನಿಕರು ಸಾಯಲಾರಂಭಿಸಿದರು.
ಪೇಶ್ವೆಯ ಸೈನ್ಯದಲ್ಲಿ ಅರಬ್ಬರು, ಸನ್ಯಾಸಿಗಳು ಮತ್ತು ಮರಾಠೆಯವರ ಭರತಿಯಾಗಿತ್ತು. ಆವರೂ ಒಳ್ಳೆಯ ಹೋರಾಟಗಾರರಾಗಿದ್ದರು. ಅವರ ಹೋರಾಟದಲ್ಲಿ ಇಂಗ್ಲಿಷ್ ಸೈನಿಕರು ಎಷ್ಟೋ ಸಲ ಹಿಂದೇಟು ಹಾಕುತ್ತಿದ್ದರು. ಅವರು ನಿದ್ದೆ ಕೆಟ್ಟರು, ಬಾಯಾರಿದರು ಮತ್ತು ಶತ್ರುವಿಗೆ ಶರಣಾಗಿ ಎಂದು ಕಿರುಚಲು ಶುರು ಮಾಡಿದರು. ಲೆಫ್ಟಿನೆಂಟ್ ಪಟಿನ್ಸನ್ ಮತ್ತು ಲೆಫ್ಟಿನೆಂಟ್ ಚಿಶೊಲ್ಮ್ ಇಬ್ಬರು ಈ ಯುದ್ಧದಲ್ಲಿ ಮಡಿದವರು. ಚಿಶೊಲ್ಮ್ ದೇಹವನ್ನು ಶತ್ರುಗಳು ತುಂಡು ತುಂಡು ಮಾಡಿದ್ದರು. ಅದನ್ನು ತೋರಿಸಿ ಸ್ಟಾಂಟನ್ ತಮ್ಮ ಸೈನಿಕರಿಗೆ ಹೀಗೆ ಹೇಳಿದ, ‘‘ನೀವೇನಾದರೂ ಸ್ವಲ್ಪ ಶತ್ರುವಿಗೆ ಶರಣಾದರೆ ನಿಮ್ಮ ಗತಿಯೂ ಇದೇ ಆಗುತ್ತದೆ. ಯುದ್ಧದ ಮೇಲೆ ಲಕ್ಷ ಕೊಡಿ ಮತ್ತು ಪ್ರಾಣದ ಪಣವೊಡ್ಡಿ ಹೋರಾಡಿ. ಮರಣದ ಜವಾಬ್ದಾರಿ ಹೊತ್ತುಕೊಳ್ಳಿ, ಶರಣಾಗುವುದು ಬೇಡ.’’ ಮುಂದೆ ಇಂಗ್ಲಿಷ್ ಸೈನಿಕರು ಆವೇಶದ ಹಲ್ಲೆ ನಡೆಸಿದರು. ಇದರಿಂದ ಜನವರಿ 1, 1818ರ ರಾತ್ರಿ 9ಗಂಟೆಗೆ ಪೇಶ್ವೆಯವರ ಸೈನ್ಯ ಹಿಂದೆ ಸರಿಯಿತು. ಇಂಗ್ಲಿಷ್ ಸೈನಿಕರು ಅವರ ಹಿಂದೆ ಓಡಿದರೂ ಭೀಮಾ ನದಿಯ ತನಕವೇ ಹಿಂಬಲಿಸಿದರು. ನದಿ ತೀರದ ನೀರು ಕುಡಿದು ಅವರು ತಮ್ಮ 24 ಗಂಟೆಯ ಬಾಯಾರಿಕೆಯನ್ನು ತಣಿಸಿಕೊಂಡರು. ಪೇಶ್ವೆಯವರ ಸೈನ್ಯವನ್ನು ಓಡಿಸಿಕೊಂಡು ಹೋಗುವ ತುಕಡಿಯಲ್ಲಿ ಪ್ರಮುಖರಾಗಿದ್ದವರೆಲ್ಲರೂ ಮಹಾರ್ ಸೈನಿಕರೇ ಆಗಿದ್ದರು.
ಅವರು ತಮ್ಮ 40 ಪಟ್ಟು ಸಂಖ್ಯೆಯಲ್ಲಿದ್ದ ಪೇಶ್ವೆಯವರ ಸೈನ್ಯವನ್ನು ಓಡಿಸಿಕೊಂಡು ಹೋದರು. ಈ ಮಹಾರರ ಶೌರ್ಯವನ್ನು ನೋಡಿ ಬಾಕಿ ಇದ್ದ ಪೇಶ್ವೆಯವರ ಸೈನ್ಯದ ಧೈರ್ಯ ಕುಗ್ಗಿ ಎಲ್ಲರೂ ಓಡಿಹೋದರು. ಇಂಗ್ಲಿಷರಲ್ಲಿ ಒಟ್ಟು 534 (ಸೈನಿಕ ಮತ್ತು ಅಧಿಕಾರಿ) ಹೋರಾಟಗಾರರ ಪೈಕಿ 275 ಹೋರಾಟಗಾರರು ಸತ್ತರು ಮತ್ತು ಗಾಯಗೊಂಡರು. ಪೇಶ್ವೆಯವರಲ್ಲಿ ಸುಮಾರು 600 ಜನ ಯುದ್ಧದಲ್ಲಿ ಮಡಿದರು. ಕೋರೆಗಾಂವ್ನ ವಿಜಯದ ಸಲುವಾಗಿ ಭೀಮಾ ನದಿಯ ತೀರದಲ್ಲಿ ಇಂಗ್ಲಿಷರು ವಿಜಯ ಸ್ತಂಭವನ್ನು ನಿಲ್ಲಿಸಿದರು. ಅದರ ಒಂದು ಪಕ್ಕದಲ್ಲಿ ಗಾಯಗೊಂಡ ಅಥವಾ ಮಡಿದವರ ಹೆಸರುಗಳನ್ನು ಇಂಗ್ಲಿಷ್ ಮತ್ತು ಮರಾಠಿ ಭಾಷೆಯಲ್ಲಿ ಕೆತ್ತಿದ್ದಾರೆ.
ಅವರಲ್ಲಿ 23 ಮಹಾರ್ ಸಿಪಾಯಿಗಳ ಪೈಕಿ 20 ಜನ ಸತ್ತರು ಮತ್ತು 3 ಜನ ಗಾಯಗೊಂಡರು. ಅವರ ಹೆಸರು ಮುಂದೆ ಹೇಳಿರುವ ರೀತಿಯಲ್ಲಿದೆ -1. ಸೋಮನಾಕ್ ಕಮಲನಾಕ್ ನಾಯಕ್, 2.ರಾಮನಾಯಕ್ ಯೇಮನಾಕ್ ನಾಯಕ್, 3. ಗೋದ್ನಾಕ್ ಕೋಠೇನಾಕ್, 4. ರಾಮನಾಕ್ ಯೇಸ್ನಾಕ್, 5 ಭಾಗ್ನಾಕ್ ಹರ್ನಾಕ್, 6 ಅಂಬನಾಕ್ ಕಾರ್ನಾಕ್, 7. ಗಣನಾಕ್ ಬಾಳ್ನಾಕ್, 8. ಬಲ್ ನಾಕ್ ಕೋಂಡ್ನಾಕ್, 9. ರೂಪನಾಕ್ ಲಖ್ನಾಕ್, 10. ವಪ್ ನಾಕ್ ಹರ್ನಾಕ್, 11. ವಿಠನಾಕ್ ಧಾಮ್ನಾಕ್, 12. ರಾಜ್ನಾಕ್ ಗಣನಾಕ್, 13. ವಪನಾಕ್ ಹರ್ನಾಕ್, 14. ರೈನಾಕ್ ವಾನ್ನಾಕ್, 15. ಗಜನಾಕ್ ಧರ್ಮನಾಕ್, 16 ದೇವನಾಕ್ ಆನನಾಕ್, 17. ಗೋಪಾಲ್ನಾಕ್ ಬಾಳನಾಕ್ 18. ಹರ್ನಾಕ್ ಹೀರಾನಾಕ್, 19. ಜಟ್ನಾಕ್ ಧೈನಾಕ್, 20 ಗಣನಾಕ್ ಲಖ್ನಾಕ್, ಮುಂದೆ ಮೂರು ಸೈನಿಕರು ಗಾಯಗೊಂಡರು. 21. ಜಾನನಾಕ್ ಹೀರ್ನಾಕ್ 22. ಭೀಕ್ನಾಕ್ ರತನ್ ನಾಕ್, 23. ರತ್ನ್ ಧಾನ್ನಾಕ್.’’
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)