ದ ಪೋಸ್ಟ್ ಒಂದು ವರ್ತಮಾನ

ಪ್ರಕಾಶಕಿ ಕ್ಯಾಥರೀನ್ ಗ್ರಹಾಂ ಪಾತ್ರದಲ್ಲಿ ಮೇರೀಲ್ ಸ್ಟ್ರೀಪ್
ವೈಚಾರಿಕ, ನೈತಿಕ ಜರ್ನಲಿಸಂ ಅನ್ನು ಕಟ್ಟುವುದು ಇಂದು ಕೇವಲ ಪತ್ರಕರ್ತರ ಜವಾಬ್ದಾರಿ ಮಾತ್ರವಲ್ಲ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಸಹ. ಏಕೆಂದರೆ ಈ ಜನಬೆಂಬಲದಿಂದ ಅನೇಕ ಕೆಟ್ಟ ದಿನಗಳಲ್ಲಿಯೂ ಜರ್ನಲಿಸಂ ಫೀನಿಕ್ಸ್ನಂತೆ ಮೇಲೆದ್ದು ಬಂದಿದೆ. ಇಂದೂ ಸಹ ನಾವು ಜರ್ನಲಿಸಂನ ಅಸ್ತಿತ್ವ ಮತ್ತು ಸ್ವಾಯತ್ತೆಗೆ ಕಾಯುತ್ತ ಕೂಡದೆ ಅದನ್ನು ಸಾಧ್ಯವಾಗಿಸುವತ್ತ ಹೆಜ್ಜೆ ಹಾಕೋಣ.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಸಂಪಾದಕ ಬ್ರಾಡ್ಲೀ ಹೇಳುತ್ತಾನೆ ನಾವು ಏನನ್ನು ಮುದ್ರಿಸಬೇಕು, ಯಾವುದನ್ನು ಮುದ್ರಿಸಬಾರದು ಎಂದು ಆಡಳಿತ ಮಂಡಳಿ ನಮಗೆ ಆಜ್ಞಾಪಿಸಲು ಅವಕಾಶ ನೀಡಬಾರದು.
-ಇಂದು ಇಂಡಿಯಾದ ಬಹುಪಾಲು ಮಾಧ್ಯಮಗಳು ಹಿಟ್ಲರ್ವಾದಕ್ಕೆ ತಮ್ಮನ್ನು, ಪತ್ರಿಕಾ ಸ್ವಾಯತ್ತೆಯನ್ನು ಮಾರಿಕೊಂಡಿರುವ ಇಂದಿನ ದಿನಗಳಲ್ಲಿ ಸಂಪಾದಕನೊಬ್ಬನ ಈ ದಿಟ್ಟ ಮಾತುಗಳು ಸಂಪೂರ್ಣ ಅಸಹಜವೆನಿಸುತ್ತವೆ. ಹೌದು ಇದು ಸ್ಪೀಲ್ಬರ್ಗ್ ನಿರ್ದೇಶನದ ಹೊಸ ಸಿನೆಮಾ ‘ದ ಪೋಸ್ಟ್’ನ ಪಾತ್ರದ ಮಾತುಗಳು. ವಾಷಿಂಗ್ಟನ್ಪೋಸ್ಟ್ನ ಸಂಪಾದಕ ಬೆಂಜಮಿನ್ ಬ್ರಾಡ್ಲಿ ಮತ್ತು ಪ್ರಕಾಶಕಿ-ಮಾಲಕಳಾದ ಕ್ಯಾಥರೀನ್ ಗ್ರಹಾಂ ಅವರು ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ ದಿಟ್ಟತೆಯಿಂದ, ಎಲ್ಲಿಯೂ ರಾಜಿಯಾಗದೆ ಪತ್ರಕರ್ತರಾಗಿ ತಮ್ಮ ಮೂಲಭೂತ ಕರ್ತವ್ಯ ನಿರ್ವಹಿಸಿದ ನಿಜದ ಕತೆಯನ್ನು ಆಧರಿಸಿ ಸ್ಟಿಲ್ಬರ್ಗ್ ನಿರ್ದೇಶಿಸಿದ ಸಿನೆಮಾ ‘ದ ಪೋಸ್ಟ್’.
ನಿಜ ಜೀವನದಲ್ಲಿ ಬ್ರಾಡ್ಲಿ ಮತ್ತು ಗ್ರಹಾಂ ಅವರು ಈ ‘ಪೆಂಟಗನ್ ಪೇಪರ್ಸ್’ ಹಗರಣದ ಕುರಿತಾಗಿ ತಮ್ಮ ಆತ್ಮಕತೆಯಲ್ಲಿ ವಿವರವಾಗಿ ಬರೆದಿದ್ದರು. ಪಕ್ಕದ ರಾಷ್ಟ್ರಗಳಲ್ಲಿ ಅಭದ್ರತೆಯನ್ನು ಸೃಷ್ಟಿಸಿ ತನ್ನ ಕಲೋನಿಯಲ್ ಸಾಮ್ರಾಜ್ಯ ಸ್ಥಾಪಿಸಲು ಆ ಪುಟ್ಟ ರಾಷ್ಟ್ರಗಳೊಂದಿಗೆ ಏಕಪಕ್ಷೀಯವಾಗಿ ಯುದ್ಧ ನಡೆಸುವ ಅಮೆರಿಕ ಅರವತ್ತರ ದಶಕದಲ್ಲಿ ವಿಯೆಟ್ನಾಂ ವಿರುದ್ದ ಅನ್ಯಾಯದ, ಅಮಾನವೀಯ ಯುದ್ಧ ಸಾರುತ್ತದೆ. ಆದರೆ ತನ್ನ ಪ್ರಜೆಗಳಿಗೆ ಈ ಯುದ್ಧದ ಕುರಿತಾಗಿ ಸುಳ್ಳುಗಳನ್ನು ಬಿತ್ತುತ್ತಿರುತ್ತದೆ. ನಿರ್ದೇಶಕ ಸ್ಪೀಲ್ಬರ್ಗ್ ಅವರು ‘ದ ಪೋಸ್ಟ್’ ಸಿನೆಮಾದಲ್ಲಿ ಸಂಪಾದಕ ಬ್ರಾಡ್ಲಿ (ಟಾಮ್ ಹಾಂಕ್ಸ್) ಮತ್ತು ಪ್ರಕಾಶಕಿ-ಮಾಲಕಿ ಕ್ಯಾಥರೀನ್ ಗ್ರಹಾಂ (ಮೇರೀಲ್ ಸ್ಟ್ರೀಪ್) ಅವರ ಮೂಲಕ ಈ ಕತೆಯನ್ನು ಹೇಳುತ್ತಾ ಹೋಗುತ್ತಾರೆ. ಇದಕ್ಕೂ ಮೊದಲು ಅಮೆರಿಕ ದೇಶವು ವಿಯೆಟ್ನಾಂ ಯುದ್ಧದಲ್ಲಿ ನಡೆಸಿದ ದುಷ್ಕೃತ್ಯಗಳು ಮತ್ತು ತನ್ನ ಪ್ರಜೆಗಳಿಗೆ ನೀಡಿದ ತಪ್ಪು ಮಾಹಿತಿಗಳು ಹಾಗೂ ಹಾದಿ ತಪ್ಪಿಸಿದ ಸುಳ್ಳುಗಳನ್ನು ಒಳಗೊಂಡ ಈ ‘ಪೆಂಟಗನ್ ಪೇಪರ್ಸ್’ ಎನ್ನುವ ರಹಸ್ಯ ದಾಖಲೆಗಳನ್ನು ಅಲ್ಲಿನ ರಕ್ಷಣಾ ಅಧಿಕಾರಿಗಳು ಸಿದ್ಧಪಡಿಸಿರುತ್ತಾರೆ. ಟೈಮ್ಸ್ ಪತ್ರಿಕೆಯ ತನಿಖಾ ವರದಿಗಾರರು ಈ ‘ಪೆಂಟಗನ್ ಪೇಪರ್ಸ್’ ರಹಸ್ಯ ದಾಖಲೆಗಳನ್ನು ಅಮೆರಿಕದ ಮೂಲಕ ಪಡೆದುಕೊಂಡು ನ್ಯೂಯಾರ್ಕ್ ಟೈಮ್ಸ್ನಲ್ಲಿ ಮುದ್ರಿಸಬೇಕು ಎನ್ನುವ ಸಿದ್ಧತೆಯಲ್ಲಿದ್ದಾಗ ಅಮೆರಿಕ ಸರಕಾರವು ಈ ದಾಖಲೆಗಳನ್ನು ಪ್ರಕಟಿಸಬಾರದೆಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವಿರುದ್ಧ ಕೋರ್ಟನಲ್ಲಿ ಇಂಜೆಕ್ಷನ್ ತರುತ್ತಾರೆ. ಇಲ್ಲಿಂದ ‘ದ ಪೋಸ್ಟ್’ ಸಿನೆಮಾದ ಕತೆ ತಿರುವು ಪಡೆದುಕೊಳ್ಳುತ್ತದೆ. ಆಗ ಬೆನ್ ಬಾಗ್ದಿಕಿನ್ ಎನ್ನುವ ವರದಿಗಾರ ಈ ಪೆಂಟಗನ್ ಪೇಪರ್ಸ್ ರಹಸ್ಯ ದಾಖಲೆಗಳೊಂದಿಗೆ ‘ವಾಷಿಂಗ್ಟನ್ ಪೋಸ್ಟ್’ (ವಾಪೋ) ಪತ್ರಿಕೆಯ ಆಡಳಿತ ಮಂಡಳಿ ಬಳಿ ಇದನ್ನು ಪ್ರಕಟಿಸಬೇಕೆಂದು ಪ್ರಸ್ತಾಪಿಸುತ್ತಾನೆ. ಆಗ ‘ವಾಪೋ’ ಆಡಳಿತ ಮಂಡಳಿ ಮತ್ತು ಸಂಪಾದಕರ ನಡುವೆ ಸಣ್ಣದಾಗಿ ತಿಕ್ಕಾಟ ಶುರುವಾಗುತ್ತದೆ.
ಸಂಪಾದಕ ಬ್ರಾಡ್ಲಿ ಪಾತ್ರದಲ್ಲಿ ಟಾಮ್ ಹಾಂಕ್ಸ್
‘ವಾಪೋ’ದ ದುಬಾರಿ ವಕೀಲರು ಅಮೆರಿಕದ ಅಧ್ಯಕ್ಷ ನಿಕ್ಸನ್ಗೆ ಪ್ರತಿಕೂಲವಾಗಿರುವ ಆತನನ್ನು ಪದಚ್ಯುತಗೊಳಿಸಬಲ್ಲ ‘ಪೆಂಟಗನ್ ಪೇಪರ್ಸ್’ ರಹಸ್ಯ ದಾಖಲೆಗಳನ್ನು ಪ್ರಕಟಿಸಿದರೆ ದೊಡ್ಡ ಗಂಡಾಂತರಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ. ಆ ಕಾಲದಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಪ್ರಭಾವ, ಪ್ರಸಾರ, ಜನಪ್ರಿಯತೆಗೆ ಹೋಲಿಸಿದಾಗ ವಾಷಿಂಗ್ಟನ್ಪೋಸ್ಟ್ ಪತ್ರಿಕೆ ತುಂಬಾ ಸಣ್ಣ ಪತ್ರಿಕೆಯಾಗಿರುತ್ತದೆ. ಅಮೆರಿಕ ದೇಶದ ಅಧ್ಯಕ್ಷನನ್ನು ಎದುರು ಹಾಕಿಕೊಳ್ಳಬಲ್ಲಂತಹ ದಾಖಲೆಗಳನ್ನು ಪ್ರಕಟಿಸಿ ಅದನ್ನು ದಕ್ಕಿಸಿಕೊಳ್ಳುವ ಯಾವುದೇ ಶಕ್ತಿಯಾಗಲೀ, ಛಾತಿಯಾಗಲೀ ಇಲ್ಲದ ವಾಪೋಗೆ ಅದು ಭವಿಷ್ಯದಲ್ಲಿ ಮರಣಶಾಸನವಾಗುವ ಎಲ್ಲಾ ಸಾದ್ಯತೆಗಳಿರುತ್ತವೆ. ಆದರೆ ಸಂಪಾದಕ ಬ್ರಾಡ್ಲಿ ಮತ್ತು ಪ್ರಕಾಶಕಿ-ಮಾಲಕಿ ಕ್ಯಾಥರೀನ್ ಗ್ರಹಾಂ ಅವರು ‘ಈ ಎಲ್ಲಾ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಈ ಪೆಂಟಗನ್ ಪೇಪರ್ಸ್ ರಹಸ್ಯ ದಾಖಲೆಗಳನ್ನು ಪ್ರಕಟಿಸಲು ನಿರ್ಧರಿಸುತ್ತಾರೆ. ಬ್ರಾಡ್ಲಿ-ಗ್ರಹಾಂ ಅವರು ವಾಪೋ ಪತ್ರಿಕೆ ಓದುವ ವ್ಯವಹಾರ ನಡೆಸುತ್ತಿಲ್ಲ ಬದಲಾಗಿ ಸುದ್ದಿಗಳನ್ನು ವರದಿ ಮಾಡುತ್ತದೆ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ. ಈ ಸಿನೆಮಾದ ಮೂಲಕ ಬ್ರಾಡ್ಲೀ-ಗ್ರಹಾಂ ಜೋಡಿಯು ಸುದ್ದಿ ಮನೆಯಲ್ಲಿ ವರ್ತನೆಗಳಿಗೆ ಸ್ಥಳವಿಲ್ಲ. ಬದಲಾಗಿ ಅದು ಪತ್ರಕರ್ತನ ನೈತಿಕತೆಯನ್ನು, ದಕ್ಷತೆಯನ್ನು, ಕಾರ್ಯಕ್ಷಮತೆಯನ್ನು ಏಕಕಾಲಕ್ಕೆ ಒರೆಗೆ ಹಚ್ಚುವ ಕರ್ಮಭೂಮಿ ಎನ್ನುವ ಆದರ್ಶವನ್ನು ಅನಾವರಣಗೊಳಿಸುತ್ತದೆ. ಇಲ್ಲಿಯೇ ಈ ಸಿನೆಮಾ ಗೆಲ್ಲುವುದು.
ಬ್ರಾಡ್ಲಿ-ಗ್ರಹಾಂ ಜೋಡಿಯು ತಾವು ಜೈಲು ಪಾಲಾಗುವ ಸಾಧ್ಯತೆಗಳನ್ನು ಲೆಕ್ಕಿಸದೆ ದೇಶದ ಹಿತಾಸಕ್ತಿ ಮತ್ತು ಭವಿಷ್ಯ ಮುಖ್ಯ ಎಂದು ನಿರ್ಧರಿಸುತ್ತದೆ ಮತ್ತು ಅನೇಕ ಆತಂಕಗಳು, ಬಿಕ್ಕಟ್ಟುಗಳನ್ನು ಮೀರಿ ಕಳಂಕಿತ ಪೆಂಟಗನ್ ಪೇಪರ್ಸ್ ರಹಸ್ಯ ದಾಖಲೆಗಳನ್ನು ಪ್ರಕಟಿಸುತ್ತಾರೆ. ಹೌದು ದ ಪೋಸ್ಟ್ ಒಂದು ಕೆಚ್ಚೆದೆಯ, ದಿಟ್ಟ ಸಿನೆಮಾ. ಇಂದಿನ ಇಂಡಿಯಾದ ವರ್ತಮಾನದ ಎಲ್ಲಾ ಸಂಗತಿಗಳೊಂದಿಗೆ ದ ಪೋಸ್ಟ್ ಸಿನೆಮಾಕ್ಕೂ ಸಂಪೂರ್ಣ ಸಾಮ್ಯತೆಗಳಿವೆ. ಇಂದು ಕೇಂದ್ರದ ಒಕ್ಕೂಟ ಸರಕಾರದ ಅಧಿಕಾರ ಹಿಡಿದಿರುವ ಬಿಜೆಪಿ ಪಕ್ಷದ ಅಧ್ಯಕ್ಷ ಅಮಿತ್ ಶಾನ ಮಗನ ಅವ್ಯವಹಾರಗಳನ್ನು ಯಾವುದೇ ಪತ್ರಿಕೆ ಪ್ರಕಟಿಸಲು ಧೈರ್ಯ ವಹಿಸುವುದಿಲ್ಲ. ಆದರೆ ಈ ಬ್ರಾಡ್ಲಿ-ಗ್ರಹಾಂ ಜೋಡಿಯಂತೆ ನೈತಿಕತೆ ಮತ್ತು ಪತ್ರಿಕಾ ಧರ್ಮದ ಆದರ್ಶವನ್ನು ನೆಚ್ಚಿ ಈ ದಾಖಲೆಗಳನ್ನು ಪ್ರಕಟಿಸಿದ ಇಂಡಿಯಾದ ಅಂತರ್ಜಾಲ ಪತ್ರಿಕೆ ‘ದ ವೈರ್.ಕಾಂ’ನ ವಿರುದ್ಧ ಕೋರ್ಟ್ನಲ್ಲಿ ದಾವೆ ಹೂಡಲಾಗುತ್ತದೆ. ಆ ಪತ್ರಿಕೆ ಸಂಕಷ್ಟಕ್ಕೆ ಗುರಿಯಾಗುತ್ತದೆ. ಇದೇ ಅಮಿತ್ ಶಾನ ವಿರುದ್ಧ ನಕಲಿ ಎನ್ಕೌಂಟರ್ ಆರೋಪದ ತನಿಖೆ ನಡೆಸುವ ನ್ಯಾಯಾಧೀಶ ಲೋಯಾ ಅವರು 2014ರಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಾರೆ. ಅದರ ಕುರಿತಾಗಿ ಇಲ್ಲಿನ ಬಹುಪಾಲು ಮಾಧ್ಯಮಗಳು ಬಾಯಿ ಬಿಚ್ಚುವುದಿಲ್ಲ. ಮತ್ತೊಂದು ದಿನಪತ್ರಿಕೆ ‘ಟ್ರಿ ಬ್ಯೂನ್’ ಆಧಾರ್ ಕುರಿತಾದ ನ್ಯೂನತೆಗಳು ಮತ್ತು ಲೋಪದೋಷಗಳನ್ನು ಪ್ರಕಟಿಸಿದಾಗ ಅದರ ವರದಿಗಾರ್ತಿಯ ವಿರುದ್ಧವೇ ಮೊಕದ್ದಮೆ ಹೂಡಲಾಗುತ್ತದೆ. ಮೋದಿ ನೇತೃತ್ವದ ಸರಕಾರ ನಡೆಸಿದ ಫ್ರಾನ್ಸ್ ಯುದ್ಧ ವಿಮಾನಗಳ ಖರೀದಿಯಲ್ಲಿನ ಅವ್ಯವಹಾರಗಳನ್ನು ಯಾವುದೇ ಪತ್ರಿಕೆ ಚರ್ಚಿಸುವುದಿಲ್ಲ. ಇನ್ನಷ್ಟು ಉದಾಹರಣೆಗಳನ್ನು ಕೊಡಬಹುದು. ಆದರೆ ಇಂದು ಬಹುಪಾಲು ಮಾಧ್ಯಮಗಳು ಈ ಮೋದಿ-ಆರೆಸ್ಸೆಸ್ ಸರಕಾರದ ಗುಲಾಮರಂತೆ ವರ್ತಿಸುತ್ತಿರುವುದು ಪ್ರಜಾಪ್ರಭುತ್ವವನ್ನೇ ಅಣಕಿಸುವಂತಿದೆ. ಇಂದು ಈ ಮೋದಿಯ ಸುತ್ತ ಸುತ್ತುತ್ತಿರುವ ಮಾಧ್ಯಮಗಳು ಸಂಪೂರ್ಣವಾಗಿ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯ ಮಾದರಿಯನ್ನು ತನ್ನ ಮೂಲ ತುಡಿತವನ್ನಾಗಿರಿಸಿಕೊಂಡು ಸ್ವತಃ ತಾನೊಂದು ಪರ್ಯಾಯ ಮಾರ್ಕೆಟಿಂಗ್ ವಲಯವಾಗಿ ರೂಪುಗೊಂಡಿದೆ.
ಬಹಳ ಹಿಂದೆ ಮೀಡಿಯಾ ತಜ್ಞರೊಬ್ಬರು(ಹೆಸರು ಮರೆತಿದೆ) ಬರೆದ ಲೇಖನದ ಭಾಗವೊಂದು ನೆನಪಾಗುತ್ತಿದೆ. ಅದು ಹೀಗಿದೆ ಪಟ್ಟಣ/ನಗರವೊಂದರಲ್ಲಿ ‘ಎ’ ಮತ್ತು ‘ಬಿ’ ಎನ್ನುವ ಎರಡು ದಿನಪತ್ರಿಕೆಗಳಿರುತ್ತವೆ. ‘ಎ’ ಪತ್ರಿಕೆಯು ಮೌಲ್ಯಗಳನ್ನು, ಸಿದ್ಧಾಂತಗಳನ್ನು, ಪತ್ರಿಕಾರಂಗದ ನೈತಿಕತೆಗಳನ್ನು ನಂಬಿದ್ದರೆ ‘ಬಿ’ ಪತ್ರಿಕೆಯು ಜನಪ್ರಿಯ ಪತ್ರಿಕೆಯಾಗಿದ್ದು ರೋಮಾಂಚಕಾರಿ, ಮೈನವಿರೇಳಿಸುವ ಕ್ರೈಮ್ ಸುದ್ದಿಗಳು, ಸ್ಕಾಂಡಲ್ಗಳನ್ನು ಆಧರಿಸುತ್ತದೆ. ಪತ್ರಕರ್ತನಾದವನು ‘ಎ’ ಪತ್ರಿಕೆಗಾಗಿ ಕೆಲಸ ಮಾಡಲು ಬಯಸಿದರೆ ಬಹುಪಾಲು ಓದುಗರು ಮುಖಪುಟಗಳ ರೋಚಕತೆಗೆ, ಗಾಸಿಪ್ ಮತ್ತು ಕ್ರೌರ್ಯದ ವೈಭವೀಕರಣಕ್ಕೆ ಬಲಿಯಾಗಿ ‘ಬಿ’ ಪತ್ರಿಕೆಗೆ ಮನಸೋಲುತ್ತಾರೆ. ಉದ್ಯಮಗಳೂ ಸಹ ಜನಪ್ರಿಯತೆಯನ್ನಾಧರಿಸಿ ತಮಗೆ ಲಾಭ ತಂದುಕೊಡುವ ‘ಬಿ’ ಪತ್ರಿಕೆಗೆ ಹೆಚ್ಚಿನ ಜಾಹೀರಾತು ನೀಡುತ್ತಾರೆ. ಕಡೆಗೆ ‘ಎ’ ಪತ್ರಿಕೆಯು ಏಕಾಂಗಿಯಾಗಿ, ಆರ್ಥಿಕ ನಷ್ಟ ಅನುಭವಿಸುತ್ತ ತನ್ನ ಚಲಾವಣೆಯನ್ನು ಉಳಿಸಿಕೊಳ್ಳಲು ತನ್ನ ಮುದ್ರಣದ ಗುಣಮಟ್ಟವನ್ನು ಕೆಳಮಟ್ಟಕ್ಕೆ ಇಳಿಸಿ, ಪತ್ರಿಕೆಯ ಬೆಲೆ ಹೆಚ್ಚಿಸಬೇಕಾಗುತ್ತದೆ. ಇದರಿಂದಾಗಿ ಅಳಿದುಳಿದ ಓದುಗರು ಸೋವಿಯಾಗಿ ದೊರಕುವ ‘ಬಿ’ ಪತ್ರಿಕೆಯನ್ನು ಓದತೊಡಗುತ್ತಾರೆ. ಬೇರೆ ದಾರಿ ಕಾಣದ ಪತ್ರಕರ್ತರು ಸಹ ‘ಬಿ’ ಪತ್ರಿಕೆಗೆ ವಲಸೆ ಹೋಗಬೇಕಾಗುತ್ತದೆ. ಕಡೆಗೊಂದು ದಿನ ‘ಎ’ ಪತ್ರಿಕೆ ಕೊನೆಯುಸಿರೆಳೆಯುತ್ತದೆ. ಇದು ಸರಳ ಕತೆಯಂತೆ ತೋರಿದರೂ ವಾಸ್ತವವಾಗಿ ಇಂದಿನ ಪರಿಸ್ಥಿತಿಯ ನಿಜಗನ್ನಡಿ. ನಾಡೊಂದರಲ್ಲಿ ಬಿ ಪತ್ರಿಕೆಗಳ ಸಂಖ್ಯೆ ಹೆಚ್ಚಿದಷ್ಟೂ ನಾಡಿನ ಸಾಂಸ್ಕೃತಿಕ ಮತ್ತು ಮೌಲ್ಯದ ಅವಸಾನದ ಪ್ರಕ್ರಿಯೆಯೂ ಅಷ್ಟೇ ವೇಗದಲ್ಲಿರುತ್ತದೆ. ನಮ್ಮಲ್ಲಿ ‘ಎ’ ಯಾರು ‘ಬಿ’ ಯಾರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!! ಅಂದರೆ ಆರ್ಥಿಕ ಪ್ರಗತಿ ಮತ್ತು ಉದ್ದೀಪನ ಮತ್ತು ರೋಚಕತೆ ಸುದ್ದಿಗಳು ಪರಸ್ಪರ ಪೂರಕವಾಗಿ ಅವಲಂಬಿತವಾಗಿ ಗುಪ್ತ ಕಾರ್ಯಸೂಚಿಗಳು ಕ್ರಮೇಣ ತಮ್ಮ ಗುಪ್ತತೆಯನ್ನು ಕಳಚಿಕೊಂಡು ಮುಖಪುಟಗಳಲ್ಲಿ ಪತ್ರಿಕೆಗಳ ಧೋರಣೆಯಾಗಿಯೇ ರಾರಾಜಿಸುತ್ತವೆ. ಇನ್ನು ಆ ಪತ್ರಿಕೆ ಜನಪ್ರಿಯ ಪತ್ರಿಕೆಯಾಗಿದ್ದರೆ ಆ ಪತ್ರಿಕೆಗಳ ಧೋರಣೆಗಳೇ ಓದುಗರ ಧೋರಣೆಗಳಾಗಿಬಿಡುವುದು ಸಹಜವೇ. ಹೀಗಾಗಿ ಇಂದು ಹಿಡನ್ ಅಜೆಂಡಾಗಳ ವ್ಯಾಖ್ಯಾನವನ್ನೇ ಮರುಚಿಂತಿಸಬೇಕೇನೋ?.
ಜಾಗತೀಕರಣಕ್ಕೆ ಒಳಗಾಗಿ ಇಪ್ಪತ್ತೈದು ವರ್ಷಗಳಾದ ನಂತರ ಇಂಡಿಯಾ ದೇಶದ ಸಮಾಜದ ಅನೇಕ ವಲಯಗಳಲ್ಲಿ ದೊಡ್ಡ ಮಟ್ಟದಲ್ಲಿ ಸ್ಥಿತ್ಯಂತರಗಳು, ಮೌಲ್ಯದ ಅಧಃಪತನಗಳು, ಸೋ ಕಾಲ್ಡ್ ಅಭಿವೃದ್ಧಿಯ ಸೂಚ್ಯಂಕಗಳ ಹುಸಿ ಸಂಭ್ರಮಗಳು ಇತ್ಯಾದಿಗಳಿಗೆಲ್ಲ ನಾವು ಸಾಕ್ಷಿಯಾಗಬೇಕಾಯಿತು. ಪ್ರಜಾಪ್ರಭುತ್ವದ ಮೂರು ಸ್ತಂಭಗಳೆಂದು ಕರೆಯಲ್ಪಡುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ನಾಲ್ಕನೇ ಸ್ತಂಭ ಎಂದು ಅನಧಿಕೃತವಾಗಿ ಕರೆಯಲ್ಪಡುವ ಪತ್ರಿಕಾರಂಗಗಳಲ್ಲಿನ ಕಾರ್ಯನಿರ್ವಹಣೆಯ ಸ್ವರೂಪದಲ್ಲಿಯೂ ಬಲು ದೊಡ್ಡದಾದ ಬದಲಾವಣೆಗಳು ಜರುಗಿದ್ದು ಮತ್ತು ಜರುಗುತ್ತಿರುವುದು ಇಂದಿಗೂ ನಮ್ಮ ಕಣ್ಣೆದುರಿಗಿದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಶಕ್ತಿ ರಾಜಕಾರಣದ, ಹಿಟ್ಲರ್ವಾದವು ದೊಡ್ಡ ಮಟ್ಟದಲ್ಲಿ ಜಾರಿಗೊಂಡು ಸಮಾಜದ ಮೇಲ್ಮುಖ ಚಲನೆಯನ್ನೇ ಸ್ಥಗಿತಗೊಳಿಸಿದೆ. ಚಿಂತನೆಗಳನ್ನು ನಾಶ ಮಾಡುತ್ತಿದೆ. ಇದನ್ನೇ ಚೊಮೆಸ್ಕಿ “Friendly Fascism” ಎಂದು ವಿವರಿಸಿದರು. ಸಮಯದ ವಿರುದ್ಧ ಬದುಕಬೇಕಾದ, ಸೆಣೆಸಬೇಕಾದ ಅನಿವಾರ್ಯತೆಯನ್ನು ವಿವರಿಸುವ ‘ದ ಪೋಸ್ಟ್’ ಸಿನೆಮಾ ಇಂದು ಭಾರತೀಯ ಮಾಧ್ಯಮರಂಗಕ್ಕೆ ಅನೇಕ ಪಾಠಗಳನ್ನು ಕಲಿಸುತ್ತದೆ. ಎಂತಹ ಸರ್ವಾಧಿಕಾರದ ಆಡಳಿತದಲ್ಲಿಯೂ ಆತ್ಮವಂಚನೆಗೆ ಒಳಗಾಗಬೇಡಿ ಎನ್ನುವ ಆದರ್ಶವನ್ನು ಮನಗಾಣಿಸುತ್ತದೆ.
ದ ಪೋಸ್ಟ್ ಚಲನ ಚಿತ್ರದ ದೃಶ್ಯ...
ಹೌದು ಸಿನೆಮಾಕ್ಕೂ ಮತ್ತು ವಾಸ್ತವಕ್ಕೂ ಭೂಮಿ-ಆಕಾಶದಷ್ಟು ಅಂತರವಿದೆ. ನಿಜಜೀವನದಲ್ಲಿ ಸಂಪಾದಕನಿಗೆ ಬ್ರಾಡ್ಲಿ ಮಟ್ಟದಲ್ಲಿ ಸ್ಪೂರ್ತಿದಾಯಕವಾಗಿ, ನಿರ್ಧಾರಯುತವಾಗಿ ಮತ್ತು ಮುಖ್ಯವಾಗಿ ಕೆಚ್ಚೆದೆಯಿಂದ ಕಾರ್ಯ ನಿರ್ವಹಿಸುವುದು ಅನೇಕ ಸಂದರ್ಭಗಳಲ್ಲಿ ಹುಚ್ಚುತನವೆನಿಸಿಕೊಳ್ಳುತ್ತದೆ. ಇಂದಿನ ಹಿಟ್ಲರ್ವಾದದ ದಿನಗಳಲ್ಲಿ ಸಂಪಾದಕನಿಗೆ ನೀನು ‘ಬೆಂಜಮಿನ್ ಬ್ರಾಡ್ಲಿ’ ಆಗು ಎಂದರೆ ಆತ್ಮಹತ್ಯೆ ಮಾಡಿಕೋ ಎಂದರ್ಥವೇನೋ. ಏಕೆಂದರೆ ಬ್ರಾಡ್ಲಿಗೆ ಕ್ಯಾಥರೀನ್ ಗ್ರಹಾಂಳಂತಹ ಪ್ರಕಾಶಕಿ-ಮಾಲಕಳು ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಳು. ನಿಜ ಬದುಕಿನಲ್ಲಿ ಬ್ರಾಡ್ಲಿ ಆಗ ಹೊರಟವನಿಗೆ ಕ್ಯಾಥರೀನ್ ಗ್ರಹಾಂಳ ಆವಶ್ಯಕತೆಯೂ ಇದೆ. ವೈಚಾರಿಕ, ನೈತಿಕ ಜರ್ನಲಿಸಂ ಅನ್ನು ಕಟ್ಟುವುದು ಇಂದು ಕೇವಲ ಪತ್ರಕರ್ತರ ಜವಾಬ್ದಾರಿ ಮಾತ್ರವಲ್ಲ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಸಹ. ಏಕೆಂದರೆ ಈ ಜನಬೆಂಬಲದಿಂದ ಅನೇಕ ಕೆಟ್ಟ ದಿನಗಳಲ್ಲಿಯೂ ಜರ್ನಲಿಸಂ ಫೀನಿಕ್ಸ್ನಂತೆ ಮೇಲೆದ್ದು ಬಂದಿದೆ. ಇಂದೂ ಸಹ ನಾವು ಜರ್ನಲಿಸಂನ ಅಸ್ತಿತ್ವ ಮತ್ತು ಸ್ವಾಯತ್ತೆಗೆ ಕಾಯುತ್ತ ಕೂಡದೆ ಅದನ್ನು ಸಾಧ್ಯವಾಗಿಸುವತ್ತ ಹೆಜ್ಜೆ ಹಾಕೋಣ. ನಮ್ಮನ್ನು ಮೌನಗೊಳಿಸುವವರ ವಿರುದ್ಧ ಸೆಟೆದು ನಿಲ್ಲಲು ಉದಾಹರಣೆಯಾಗಿ ನಮ್ಮ ಮುಂದೆ ‘ಬೆಂಜಮಿನ್ ಬ್ರಾಡ್ಲಿ- ಕ್ಯಾಥರೀನ್ ಗ್ರಹಾಂ’ರಂತಹ ಬುಡ್ಡಿದೀಪಗಳಿವೆ.