ಕಮಲ್‌ಹಾಸನ್: ದ್ರಾವಿಡ ರಾಜಕಾರಣದ ನವತಾರೆ
ಸಿನೆಮಾ ರಂಗಕ್ಕೂ ರಾಜಕೀಯಕ್ಕೂ ಏನಾದರೂ ರಕ್ತ ಸಂಬಂಧ ಉಂಟೆ ಎನ್ನುವುದು ಸಂಶೋಧನೆಗೆ ಒಳ್ಳೆಯ ವಸ್ತುವಾಗಬಲ್ಲದು. ಸಂಶೋಧನಾಸಕ್ತರು ನೆರೆಯ ತಮಿಳುನಾಡಿಗೆ ಹೋದರೆ ಸಾಕು, ವಿಪುಲ ಸಾಮಗ್ರಿ ಸಿಗುತ್ತದೆ. ಇದರಲ್ಲಿ ಕನ್ನಡ, ತೆಲುಗು, ಹಿಂದಿ, ಬಂಗಾಳಿ ಚಲಚ್ಚಿತ್ರ ಕಲಾವಿದರೂ ಹಿಂದೆ ಬಿದ್ದಿಲ್ಲ. ಆದರೆ ರಾಜಕಾರಣದೊಂದಿಗೆ ಅವರ ನಂಟು ತಮಿಳಿನಷ್ಟು ‘ರಕ್ತ’ರಂಜಿತವಲ್ಲ.
ತಮಿಳು ನಾಡಿನ ರಾಜಕೀಯದಲ್ಲಿ ಜನನಾಯಕನಾಗಿ ರೂಪುಗೊಂಡು ಜೀವಂತ ಇದ್ದಾಗಲೇ ಒಂದು ದಂತ ಕಥೆಯಾದವರು ಸಿನೆಮಾ ನಾಯಕ ತಾರೆ ಎಂ.ಜಿ. ರಾಮಚಂದ್ರನ್.ಅವರು ಮತದಾರರ ಹೃದಯಸಾಮ್ರಾಟನಾಗಿ ರಾರಾಜಿಸಿದ್ದು ಈಗ ಇತಿಹಾಸ. ಇದು ಎಂಜಿಆರ್ ಜನ್ಮಶತಾಬ್ದಿ ವರ್ಷ. ಎಂಜಿಆರ್ ಜನ್ಮಶತಾಬ್ದಿಯ ವಿಶೇಷ ಕುರುಹೋ ಎಂಬಂತೆ ತಮಿಳು ಸಿನೆಮಾದಿಂದ ರಾಜಕೀಯಕ್ಕೆ ಹೊಸದೊಂದು ಪ್ರವಾಹ ಶುರುವಾಗಿದೆ. ಹೀಗೆ ರಾಜಕೀಯಕ್ಕೆ ಧುಮ್ಮಿಕ್ಕುತ್ತಿರುವ ತಮಿಳು ಸಿನೆಮಾದ ರಾಗರಂಜಿತ ನಟರಲ್ಲಿ ಕಮಲ್‌ಹಾಸನ್, ರಜನಿಕಾಂತ್ ಪ್ರಮುಖರು.
ವಿಶಾಲ್ ರೆಡ್ಡಿ, ಉದಯಾನಿಧಿ ಸ್ಟಾಲಿನ್ ಮೊದಲಾದ ನಟನಟಿಯರ ಒಂದು ಪಟಾಲಂ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಾಗಿ ನೇಪಥ್ಯದಲ್ಲಿ ಕಾದು ನಿಂತಿದ್ದಾರೆ. ರಜನಿಕಾಂತ್‌ಗಿಂತ ಒಂದು ಹೆಜ್ಜೆ ಮುಂದಿರುವ ಕಮಲ್‌ಹಾಸನ್ ಫೆ.21ರಂದು ತಮ್ಮ ಹೊಸ ಪಕ್ಷವನ್ನು ಘೋಷಿಸಿದ್ದಾರೆ. ‘ಮಕ್ಕಳ್ ನೀದಿ ಮಯ್ಯಂ’-ಕಮಲ್‌ಹಾಸನ್ ಅವರ ಹೊಸ ಪಕ್ಷದ ಹೆಸರು. ಅಂದರೆ ‘ಜನನ್ಯಾಯ ಕೇಂದ್ರ’.ರಾಮೇಶ್ವರದಿಂದ ಮಧುರೈವರೆಗೆ ಪಯಣಿಸಿ ರೋಡ್ ಶೋ ನಡೆಸಿದ ನಂತರ, ಅಭಿಮಾನಿಗಳ ಭಾಜಾಭಜಂತ್ರಿ ಮಧ್ಯೆ ಹೊಸ ಪಕ್ಷದ ಧ್ವಜ ಬಿಡುಗಡೆ ಮಾಡಿ ಹೆಸರನ್ನು ಘೋಷಿಸಿರುವ ಕಮಲ್‌ಹಾಸನ್, ‘‘ನಾನು ನಿಮ್ಮ ನಾಯಕನಲ್ಲ, ನಾನೊಂದು ಸಾಧನ, ನೀವೇ ನಾಯಕರು’’ ಎಂದು ಅಭಿಮಾನಿಗಳಿಗೆ ತಿಳಿಸುವ ಮೂಲಕ ಪಕ್ಷದ ಹೆಸರಿನಲ್ಲೂ ಘೋಷಣೆಯಲ್ಲೂ ತಮ್ಮ ರಾಜಕೀಯ ವರಸೆಯ ಮೊದಲ ಮಿಂಚನ್ನು ಹರಿಬಿಟ್ಟಿದ್ದಾರೆ.
ದಕ್ಷಿಣ ಭಾರತದ ಚಲಚಿತ್ರರಂಗದಿಂದ ರಾಜಕೀಯ ಪ್ರವೇಶಿಸಿದ ಝಗಮಗಿಸಿವ ತಾರೆಯರ ಸಾಲು ಕಣ್ಸೆಳೆಯುವಷ್ಟು ಆಕರ್ಷಕವಾದದ್ದು. ಎನ್.ಟಿ.ರಾಮ ರಾವ್, ಜಯಲಲಿತಾ, ವಿ.ಎನ್.ಜಾನಕಿ, ಶಿವಾಜಿಗಣೇಶನ್, ವಿಜಯಕಾಂತ್, ಎಸ್.ಎಸ್.ರಾಜೇಂದ್ರನ್, ವೈಜಯಂತಿಮಾಲ, ಜಯಪ್ರದಾ, ಹೇಮಮಾಲಿನಿ, ಖುಷ್ಬೂ, ವಿಜಯಶಾಂತಿ, ಎಂ.ಆರ್.ರಾಧಾ, ಎನ್.ಎಸ್.ಕೃಷ್ಣನ್, ದಾಸರಿ ನಾರಾಯಣ ರಾವ್, ಚಿರಂಜೀವಿ, ನೆಪೋಲಿಯನ್, ಶರತ್ ಕುಮಾರ್, ಕೃಷ್ಣಂರಾಜು, ‘ಭರತ್’ಮುರಳಿ, ನಗ್ಮಾ, ಪವನ್ ಕಲ್ಯಾಣ್ ಇತ್ಯಾದಿ. ಕನ್ನಡದಲ್ಲಿ ಅಂಬರೀಷ್, ಅನಂತನಾಗ್, ಶ್ರೀನಾಥ್, ತಾರಾ, ಜಯಮಾಲಾ....ಹಿಂದಿ ಮತ್ತು ಬಂಗಾಳಿ ಸಿನೆಮಾಗಳಿಂದಲೂ ರಾಜಕೀಯಕ್ಕೆ ವಲಸೆ ಹೋದ ನಟನಟಿಯರ ಯಾದಿ ದೊಡ್ಡದೇ ಇದೆ. ನರ್ಗೀಸ್, ಜಯಾ ಬಚ್ಚನ್, ರಾಜ್‌ಬಬ್ಬರ್, ವಿನೋದ್ ಖನ್ನಾ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ, ದಾರಾ ಸಿಂಗ್, ಪರೇಶ್ ರಾವಲ್, ಮನೋಜ್ ತಿವಾರಿ, ಸ್ಮತಿ ಇರಾನಿ, ರೂಪಾ ಗಂಗೂಲಿ, ಕಿರಣ್ ಖೇರ್, ನಿತೀಶ್ ಭಾರದ್ವಾಜ್ ಮೊದಲಾದವರು ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿರುವುದುಂಟು.
ರಾಜಕೀಯದಿಂದ ಸಿನೆಮಾದಲ್ಲಿ ನಟಿಸಲು ಹೋದ ಒಂದು ಅಪರೂಪದ ನಿದರ್ಶನ ಹರೀಂದ್ರನಾಥ ಚಟ್ಟೋಪಾಧ್ಯಾಯ. ಚಟ್ಟೋಪಾಧ್ಯಾಯ ಸಿನೆಮಾಕ್ಕೆ ಹೋಗುವ ಮೊದಲು ಲೋಕಸಭೆ ಸದಸ್ಯರಾಗಿದ್ದರು. ಈ ತಾರೆಯರೆಲ್ಲ ಲೋಕಸಭೆ/ರಾಜ್ಯ ಸಭೆ/ವಿಧಾನ ಸಭೆ ಸದಸ್ಯರಾದುದುಂಟು. ಇದೇ ಅವರ ಯಶಸ್ಸಿನ ಮಾನ- ದಂಡವಾಗದು. ರಾಜಕೀಯ ನಾಯಕರಾಗಿ ಇವರೆಲ್ಲ ಉತ್ತುಂಗ ಸಾಧನೆ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗದು. ಇವರೆಲ್ಲರ ಹಿನ್ನೆಲೆಯೇ ಬೇರೆ, ರಾಜಕೀಯ ಸೇರಿದ ತಮಿಳು ನಟನಟಿಯರ ಹಿನ್ನೆಲೆಯೇ ಬೇರೆ. ಅಣ್ಣಾದೊರೈ, ಕರುಣಾನಿಧಿ, ಎಂಜಿಆರ್ ಇವರೆಲ್ಲ ದ್ರಾವಿಡ ಆಂದೋಲನದ ಹಿನ್ನೆಲೆಯವರು. ನಾಸ್ತಿಕವಾದಿ ಸಮಾಜಸುಧಾರಕ, ಹೋರಾಟಗಾರ ಪೆರಿಯಾರ್ ಶಿಷ್ಯರು. ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ಪಕ್ಷ ಕಟ್ಟಿದವರು. ದ್ರಾವಿಡ ಸಂಸ್ಕೃತಿಯ ಅಸ್ಮಿತೆ ಮತ್ತು ದ್ರಾವಿಡ ಭಾಷೆಯ ರಕ್ಷಣೆ, ಅಭಿವೃದ್ಧ್ದಿಗಳು ಇವರ ಮುಖ್ಯ ಕಾಳಜಿಯಾಗಿದ್ದವು. ಯಾವುದೇ ಕಾರಣಕ್ಕೂ ದ್ರಾವಿಡ ಸಂಸ್ಕೃತಿಯೊಂದಿಗೆ ರಾಜಿಮಾಡಿಕೊಳ್ಳದಂಥ ರಾಜಕೀಯ ಬದ್ಧತೆ ಇವರದಾಗಿತ್ತು.
ಈ ಬದ್ಧತೆಯಿಂದಾಗಿಯೇ ಅಣ್ಣಾದೊರೈ, ಕರುಣಾನಿಧಿ, ಎಂಜಿಆರ್ ಜನ ನಾಯಕರಾಗಿ ಬೆಳೆದಿದ್ದರು. ಕಾಂಗ್ರೆಸ್ ಆಡಳಿತ ಸಂಪೂರ್ಣವಾಗಿ ಕೊನೆಗೊಂಡು ದ್ರಾವಿಡ ರಾಜಕೀಯ ಭದ್ರವಾಗಿ ಬೇರೂರಿತ್ತು. ಎಂಜಿಆರ್ ನಿಧನಾನಂತರವೂ ಅವರ ಉತ್ತರಾಧಿಕಾರಿಯಾಗಿ ಆಡಳಿತಸೂತ್ರ ಹಿಡಿದ ಜಯಲಲಿತಾ ಕನ್ನಡತಿಯಾದರೂ ದ್ರಾವಿಡ ಸಂಸ್ಕೃತಿಯ ರಾಜಕಾರಣಕ್ಕೆ ಕಾಯಾವಾಚಾಮನಸಾ ಬದ್ಧರಾಗಿ ಜನಮಾನಸದಲ್ಲಿ ವಿರಾಜಮಾನರಾಗಿದ್ದರು. ಅವರ ಸ್ಥಾನವನ್ನು ಮತ್ತೊಬ್ಬರು ತುಂಬುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಜಯಲಲಿತಾ ತಮಿಳುನಾಡಿನ ರಾಜಕೀಯದಲ್ಲಿ ಸುಭದ್ರವಾಗಿ ಬೇರುಬಿಟ್ಟಿದ್ದರು. ಭ್ರಷ್ಟಾಚಾರ ಆಪಾದನೆಗಳಿಂದಾಗಿ ಜೈಲಿಗೆ ಹೋಗಬೇಕಾಯಿತಾದರೂ ಜನರ ಹೃದಯದಲ್ಲಿ ಅವರು ಗಳಿಸಿದ್ದ ಪ್ರೀತಿಯ ಸ್ಥಾನಮಾನಕ್ಕೆ ಚ್ಯುತಿ ಬರಲಿಲ್ಲ. ಜಯಲಲಿತಾ ನಿಧನಾನಂತರ ಅವರ ಸ್ಥಾನ ತುಂಬುವುದು ಕಷ್ಟ ಎಂಬುದು ಕೇವಲ ಮಾತಾಗಿ ಉಳಿಯಲಿಲ್ಲ. ಅಧಿಕಾರ ಕಚ್ಚಾಟದಿಂದಾಗಿ ಪಕ್ಷ ಒಡೆಯಿತು.
ಈಗ ತೇಪೆ ಹಾಕಲಾಗಿದೆ. ಅದೂ ನರೇಂದ್ರ ಮೋದಿಯವರ ಮಾತಿಗೆ ಮಣಿದು ಎಂಬ ಅಭಿಪ್ರಾಯವೂ ಬಹಿರಂಗವಾಗಿದ್ದು ತಮಿಳುನಾಡಿನ ರಾಜಕಾರಣ ಈಗ ಸಂಧಿಕಾಲದಲ್ಲಿದೆ. ಏತನಧ್ಯೆ ರಾಷ್ಟ್ರ ರಾಜಕಾರಣದಲ್ಲೂ ಬಿಜೆಪಿಯ ಜಯಭೇರಿಯಿಂದಾಗಿ ತೀವ್ರಗಾಮಿ ಬೆಳವಣಿಗೆಗಳು ಆಗುತ್ತಿವೆ. ಇಂದಿನ ಈ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಮಲ್‌ಹಾಸನ್, ರಜನಿಕಾಂತ್ ಅವರಂಥ ಮಹಾನ್ ತಾರೆಯರು ಪ್ರಸ್ತುತರಾಗಬಹುದಾದರೂ ಸಮಕಾಲೀನ ಚುನಾವಣಾ ರಾಜಕೀಯದಲ್ಲಿ ಗೆಲ್ಲುವ ಕುದುರೆಗಳಾಗಬಹುದೇ ಎಂಬುದು ರಾಜಕೀಯ ಹೋರಾಶಾಸ್ತ್ರಿಗಳನ್ನು ಕಾಡುತ್ತಿರುವ ಪ್ರಶ್ನೆ. ಕಮಲ್‌ಹಾಸನ್, ರಜನಿಕಾಂತ್ ಜನಪ್ರಿಯತೆಯ ಶಿಖರ ಮುಟ್ಟಿರುವ ತಾರೆಯರು ಎಂಬುದರಲ್ಲಿ ಎರಡು ಮಾತಿಲ್ಲ. ಇವರಿಬ್ಬರಿಗೂ ಅಭಿಮಾನಿಗಳ ಸಂಘ-ಸಂಘಟನೆಗಳು ನೂರಾರು ಸಾವಿರಾರು ಇವೆ. ಇನ್ನು ತಮಿಳು ಚಿತ್ರ ರಸಿಕರು ತಮ್ಮ ಮೆಚ್ಚಿನ ತಾರೆಯರ ಆರಾಧನೆಯಲ್ಲಿ ದೇಶದ ಉಳಿದೆಲ್ಲ ಸಿನೆಮಾ ರಸಿಕರಿಗಿಂತ ನೂರಾರು ಹೆಜ್ಜೆ ಮುಂದಿದ್ದಾರೆ. ಗುಡಿಗಳನ್ನು ಕಟ್ಟಿ ಪೂಜಿಸುವಷ್ಟರ ಮಟ್ಟಿಗಿನ ಪ್ರೀತಿಯ ಪರಮಾವಧಿ ಅವರದು.
ಈ ಪ್ರೀತಿ ಮತಗಳಾಗಿ ಪರಿವರ್ತನೆ ಹೊಂದುತ್ತವೆಯೇ? ಅತಿಯಾದ ಈ ಸ್ತುತಿ, ಭಟ್ಟಂಗಿತನಗಳು ಮತಯಂತ್ರಗಳಲ್ಲಿ ಪ್ರತಿಫಲಿಸಬಹುದೇ? ಯಾವುದೇ ಒಂದು ಅನನ್ಯವಾದ ರಾಜಕೀಯ ಸಿದ್ಧಾಂತ-ನೀತಿನಿಲುವುಗಳಿಲ್ಲದೆಯೂ ಕೇವಲ ಪ್ರೀತಿ ಅಭಿಮಾನದ ಭಟ್ಟಂಗಿಗಳ ಬಲದಿಂದಲೇ ರಾಜಕೀಯ ನಾಯಕತ್ವದ ಮೆಟ್ಟಿಲೇರುವುದು ಸಾಧ್ಯವಾದೀತೇ? ಭ್ರಷ್ಟಾಚಾರ ಅಥವಾ ಧರ್ಮ ಕುರಿತ ಥಾನುಗಟ್ಟಳೆ ಮಾತುಗಳಿಂದ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಸಾಧ್ಯವಾದೀತೇ? ತಮಿಳುನಾಡಿನ ಜನತೆಯ ಸಿನೆಮಾ ಪ್ರೀತಿ ಮತ್ತು ಅಭಿಮಾನ ವಿಶಿಷ್ಟವಾದದ್ದು. ಸಿನೆಮಾ ತಾರೆಯರೇ ಅವರ ದ್ರಾವಿಡ ‘ದೇವರು’. ತಮ್ಮ ಆರಾಧ್ಯದೈವವಾದ ಸಿನೆಮಾ ಮತ್ತು ತಾರೆಯರಿಗಾಗಿ ಅವರು ಯಾವ ತ್ಯಾಗಕ್ಕೂ ಸಿದ್ಧ. ಒಂದು ಸಣ್ಣ ನಿದರ್ಶನ. ನಲವತ್ತು-ಐವತ್ತು ವರ್ಷಗಳ ಹಿಂದಿನ ಮಾತು. ಆಗ ಮದ್ರಾಸಿನ ಜನರಲ್ ಆಸ್ಪತ್ರೆ ಬ್ಲಡ್ ಬ್ಯಾಂಕಿಗೆ ರಕ್ತ ಸಂಗ್ರಹಣೆಯೇ ಕಷ್ಟಸಾಧ್ಯವಾಗಿದ್ದ ದಿನಗಳು. ವಾರದಲ್ಲಿ ಮೂರುನಾಲ್ಕು ದಿನ ರಕ್ತ ದಾನ ಮಾಡಲು ಜನರೇ ಬರುತ್ತಿರಲಿಲ್ಲವಂತೆ. ಆದರೆ ಗುರುವಾರ ಮತ್ತು ಶುಕ್ರವಾರ ಮಾತ್ರ, ಐದು ರೂಪಾಯಿ ಪ್ರತಿಫಲಕ್ಕಾಗಿ ರಕ್ತ ದಾನ ಮಾಡಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದರಂತೆ. ಏನಿದರ ಮರ್ಮ? ಒಂದು ಹೊತ್ತು ಕೂಳಿಗೂ ಗತಿಯಿಲ್ಲದ ಜನರು ಆಗಷ್ಟೆ ಬಿಡುಗಡೆಯಾದ ಹೊಸ ಚಿತ್ರದಲ್ಲಿ ತಮ್ಮ ಒಲವಿನ ತಾರೆಯರ ಮುಖದರ್ಶನಕ್ಕಾಗಿ ರಕ್ತ ದಾನ ಮಾಡುತ್ತಿದ್ದರಂತೆ. ಇದು ತಮಿಳು ಜನತೆಗೂ ಸಿನೆಮಾಗೂ ಇರುವ ‘ರಕ್ತ ಸಂಬಂಧ’. ಈ ರಕ್ತ ಸಂಬಂಧ ವಿವಿಧ ರೂಪಗಳಲ್ಲಿ ಇಂದಿಗೂ ಮುಂದುವರಿದುಕೊಂಡು ಬಂದಿದೆ ಎಂಬುದು ಸೋಜಿಗವಾದರೂ ನಿಜ!.
ಮೇಲಿನ ಮಾತುಗಳಿಗೆ ಮತ್ತೊಂದು ಉದಾಹರಣೆ ಕಾಣಲು ನಾವು 1972ರ ಕಾಲಘಟ್ಟದತ್ತ ಹಿಂದಿರುಗಿ ನೋಡಬೇಕಾದೀತು.1972ರಲ್ಲಿ ಎಂ.ಜಿ.ರಾಮಚಂದ್ರನ್ ಡಿಎಂಕೆ ತ್ಯಜಿಸಿ ತಮ್ಮ ಹೊಸ ಪಕ್ಷ ಅಣ್ಣಾ ಡಿಎಂಕೆ ಸ್ಥಾಪಿಸಿದರು. ಮಾತೃಪಕ್ಷ ಡಿಎಂಕೆ ಒಡೆಯಲು ಎಂಜಿಆರ್‌ಗೆ ಸೈದ್ಧಾಂತಿಕ ಕಾರಣಗಳೇನೂ ಇರಲಿಲ್ಲ. ಆಗ ಅವರಿಗಿದ್ದದ್ದು ಅಪಾರವಾದ ಜನಪ್ರಿಯತೆಯೊಂದೇ. ಡಿಎಂಕೆಗಾದರೋ ದ್ರಾವಿಡ ಸಂಸ್ಕೃತಿ ಮತ್ತು ಭಾಷೆ ಆಧಾರಿತ ತಮಿಳು ಅನನ್ಯತೆಯ ಸಿದ್ಧಾಂತದ ಗಟ್ಟಿ ನೆಲಗಟ್ಟಿನ ಜೊತೆಗೆ ತಳಮಟ್ಟದ ಕಾರ್ಯಕರ್ತರ ಸಶಕ್ತ ಸಂಘಟನೆಯ ಬಲವಿತ್ತು. ಎಂಜಿಆರ್ ಇಂತಹ ಪ್ರಾಬಲ್ಯದ ವಿರುದ್ಧ ಸಡ್ಡುಹೊಡೆದು ನಿಂತಿದ್ದರು. ಅಸಾಧಾರಣ ರಾಜಕೀಯ ಧೈರ್ಯವನ್ನು ತೋರಿದ ಎಂಜಿಅರ್‌ಗೆ ಅಗ ನೆರವಿಗೆ ಬಂದದ್ದು ಸಿನೆಮಾ ಅಭಿಮಾನಿಗಳ ಈ ‘ರಕ್ತ ಸಂಬಂಧ’ವೇ. 1967-ಎಂಜಿಆರ್ ರಾಜಕೀಯ ಜೀವನದ ಒಂದು ಪರ್ವಕಾಲ. 1954ರಿಂದ ಮೂವತ್ತಾರಕ್ಕೂ ಹೆಚ್ಚು ತಮಿಳು ಸಿನೆಮಾಗಳಲ್ಲಿ ಅಭಿನಯಿಸಿದ್ದ ಎಂಜಿಆರ್ ಆಗ ಇತರ ಹಿಂದುಳಿದ ವರ್ಗಗಳ ಚಳವಳಿಯತ್ತ ಮುಖ ಮಾಡಿದರು. ಆ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಏಳಲಾಗದ ರೀತಿಯಲ್ಲಿ ಸೋತುಸುಣ್ಣವಾಗಿತ್ತು. ಆಗ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಜಿಆರ್ ಅದ್ಭುತ ವಿಜಯ ಸಾಧಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ಆರಾಧ್ಯ ದೈವವಾಗಿದ್ದ ನಟ ಎಂಜಿಆರ್‌ಗೆ ರಕ್ತ ದಾನ ಮಾಡಲು ಆಸ್ಪತ್ರೆಯ ಮುಂದೆ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರಂತೆ. ಅಂದಿನಿಂದ ಎಂಜಿಆರ್ ಅವರಿಗೆ ಅಭಿಮಾನಿಗಳು ‘ನನ್ನ ರಕ್ತದ ರಕ್ತವಾದರು’. ತಮಿಳರಿಗೆ ದ್ರಾವಿಡ ಸಂಸ್ಕೃತಿ ಮತ್ತು ತಮಿಳು ಭಾಷೆಯ ಅಸ್ಮಿತೆ ಕುರಿತು ಇರುವಷ್ಟೇ ನಿಷ್ಠೆ ತಮ್ಮ ನಾಯಕರ ಬಗ್ಗೆಯೂ ಅಚಲವಾಗಿದೆ. ನಾಯಕ ಪೂಜೆಯಲ್ಲಿ ಎಲ್ಲರಿಗಿಂತ ಒಂದು ಕೈ ಮೇಲು. ನಾಯಕ ರೆಂದರೆ ವಿಭೂತಿ ಪುರುಷರು ಎನ್ನುವಷ್ಟು ಭಕ್ತಿ-ನಿಷ್ಠೆ. ಇದಕ್ಕೆ ತಮಿಳು ನಾಡಿನ ಇತಿಹಾಸದಲ್ಲಿ ನಿದರ್ಶನಗಳ ಕೊರತೆ ಏನಿಲ್ಲ. 1974ರಲ್ಲಿ ಎಂಜಿಆರ್ ತಮಗಿರುವ ಜನ ಬೆಂಬಲವನ್ನು ತಿಳಿಯಲು ಒಂದು ಪರೀಕ್ಷೆ ನಡೆಸಿದರು. ತಮಗೆ ನಿಷ್ಠರಾಗಿರುವವರು ಕೈಗಳ ಮೇಲೆ ಎಐಎಡಿಎಂಕೆ ಚುನಾವಣಾ ಚಿಹ್ನೆಯನ್ನು ಅಥವಾ ಪಕ್ಷದ ಹೆಸರನ್ನು ಹಚ್ಚೆ ಹುಯ್ಯಿಸಿಕೊಳ್ಳಬೇಕೆಂದು ಕರೆ ನೀಡಿದರು. ಲಕ್ಷಾಂತರ ಮಂದಿ ಹಚ್ಚೆ ಹುಯ್ಯಿಸಿಕೊಂಡು ತಮ್ಮ ಭಕ್ತಿ-ನಿಷ್ಠೆಗಳನ್ನು ಪ್ರದರ್ಶಿಸಿದರು. ಈಗ ಜಯಲಲಿತಾ ಅವರ ನಿಧನದಿಂದ ಉಂಟಾಗಿರುವ ರಾಜಕೀಯ ಶೂನ್ಯತೆಯನ್ನು ತುಂಬುವುದರಲ್ಲಿ ತಮಿಳರ ಪಕ್ಷನಿಷ್ಠೆ ಮತ್ತು ನಾಯಕ ನಿಷ್ಠೆ ಒರೆಗೆ ಬಿದ್ದಿದೆ. ಎಐಎಡಿಎಂಕೆಯಲ್ಲಿ ನಿಷ್ಠೆ ಮುಂದುವರಿಸುವರೋ ಅಥವಾ ಡಿಎಂಕೆಗೆ ಮತ್ತೊಂದು ಅವಕಾಶ ನೀಡುವರೋ, ಇಲ್ಲವೇ, ಇವತ್ತಿನ ತಮಿಳು ಸಿನೆಮಾದ ನಾಯಕರಾದ ಕಮಲ್‌ಹಾಸನ್-ರಜನಿಕಾಂತರಿಗೆ ನಿಷ್ಠೆ ಬದಲಾಯಿಸುವರೋ ಎಂಬುದು ನೂರು ಡಾಲರ್ ಪ್ರಶ್ನೆ. ಕಮಲ್‌ಹಾಸನ್ ಮತ್ತು ರಜನಿಕಾಂತ್ ಇಬ್ಬರೂ ಈ ಶೂನ್ಯ ತುಂಬಲು ಕಾತುರರಾಗಿರುವುದು ಸ್ಪಷ್ಟ. ಡಿಎಂಕೆ ವಿರೋಧಿ ಓಟುಬ್ಯಾಂಕ್ ಆಗಿರುವ ಎಐಎಡಿಎಂಕೆ ಓಟು ಬ್ಯಾಂಕ್‌ನ ಮೇಲೆ ಇಬ್ಬರೂ ಕಣ್ಣಿಟ್ಟಿದ್ದಾರೆ. ಈಗಿನ ಎಐಎಡಿಎಂಕೆ ನಾಯಕತ್ವಕ್ಕೆ ಜಯಲಲಿತಾ ಗೈರುಹಾಜರಿಯಲ್ಲಿ ಇನ್ನೊಂದು ಚುನಾವಣೆ ಎದುರಿಸುವ ಸಾಮರ್ಥ್ಯ ಇಲ್ಲವೆಂದು ಇಬ್ಬರೂ ಭಾವಿಸಿದ್ದಾರೆ. ಚುನಾವಣಾ ಮೈತ್ರಿಗೆ ಕಮಲ್‌ಹಾಸನ್ ವಿರೋಧವಿಲ್ಲ.ಆದರೆ ರಜನಿಕಾಂತ್ ಹೊಸ ಪಕ್ಷ ಘೋಷಣೆಗೂ ಮುನ್ನ ತಮ್ಮ ಪಕ್ಷ ಎಲ್ಲ 234 ಸ್ಥಾನಗಳಿಗೂ ಸ್ಪರ್ಧಿಸುವುದೆಂದು ಖಚಿತವಾಗಿ ಹೇಳಿದ್ದಾರೆ. ಈಚಿನ ವರ್ಷಗಳಲ್ಲಿ ಎರಡೂ ದ್ರಾವಿಡ ಪಕ್ಷಗಳಿಂದ ಬೇಸತ್ತಿರುವ ತಮಿಳು ಮತದಾರರಿಗೆ 2005ರಲ್ಲಿ ರಾಜಕೀಯ ಪ್ರವೇಶಿಸಿದ ವಿಜಯಕಾಂತ್ ಪರ್ಯಾಯ ಆಯ್ಕೆಯಾಗಿ ಕಂಡುಬಂದರು. ಆದರೆ ಮತಗಟ್ಟೆಯಲ್ಲಿ ಅವರಿಗೆ ನಿರ್ಣಾಯಕವಾಗಿ ಶ್ರೀಸಾಮಾನ್ಯರ ಓಟಿನ ಬೆಂಬಲ ಸಿಗಲಿಲ್ಲ. ಕಮಲ್‌ಹಾಸನ್ ಸಾರ್ವಜನಿಕ ಭಾಷಣಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ತಮ್ಮ ರಾಜಕೀಯ ದೃಷ್ಟಿ-ಧೋರಣೆಗಳ ಬಗ್ಗೆ ಖಚಿತವಾದ ನಿಲುವು-ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದುಂಟು. ಅವರಿಗೆ ನಿಶ್ಚಿತವಾದ ರಾಜಕೀಯ ಕಾರ್ಯಕ್ರಮ ಮತ್ತು ಗುರಿಗಳೂ ಇರುವಂತಿದೆ. ಸಾರ್ವಜನಿಕ ಜೀವನವನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಸ್ವಚ್ಛಪಡಿಸುವ ಧ್ಯೇಯ, ಒಳ್ಳೆಯ ಆಡಳಿತ ನೀಡುವ ಸಂಕಲ್ಪ, ಗಾಂಧಿ ಮೌಲ್ಯಗಳಲ್ಲಿ ನಿಷ್ಠೆ- ಇವುಗಳ ಜೊತೆಗೆ ಡ್ರಾವಿಡ ಅಸ್ಮಿತೆ ಕುರಿತ ಕಾಳಜಿಯನ್ನೂ ಪ್ರಕಟಪಡಿಸಿದ್ದಾರೆ. ಅವರ ದಕ್ಷಿಣ ಭಾರತದ ಗಡಿ ಪರಿಕಲ್ಪನೆಯಲ್ಲಿ ವಿಂಧ್ಯಪರ್ವತದ ತಪ್ಪಲಿನವರೆಗಿನ ಭಾರತ ದ್ರಾವಿಡ! ಇವಿಷ್ಟರಿಂದಲೇ ಎಐಎಡಿಎಂಕೆ ಮತಬ್ಯಾಂಕನ್ನು ಸೆಳೆಯುವುದು ಸಾಧ್ಯವಾದೀತೇ? ಈ ರಾಜಕೀಯ ನೀತಿನಿಲುವುಗಳ ಜೊತೆಗೆ ಸಿನೆಮಾ ಜನಪ್ರಿಯತೆಯಿಂದ ತಮ್ಮ ಪಕ್ಷ ವಿಜಯಸ್ತಂಭ ಮುಟ್ಟುವುದು ಸಾಧ್ಯ ಎಂದು ಕಮಲ್‌ಹಾಸನ್ ಭಾವಿಸಿದ್ದರೆ ಅದು ಹಗಲುಗನಸೇ ಸರಿ. ಗೆಲ್ಲಲು ಅವರು ಎಐಎಡಿಎಂಕೆ ಓಟು ಬ್ಯಾಂಕನ್ನು ಒಲಿಸಿಕೊಳ್ಳುವುದರ ಜೊತೆಗೆ ಸಮಾಜದ ಬೇರೆವರ್ಗಗಳನ್ನೂ ಗಮನಿಸಬೇಕಾಗುತ್ತದೆ. ಬೇರೆಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ, ವಿಭಿನ್ನ ಸಾಮಾಜಿಕ ಅಸ್ಮಿತೆಗಳನ್ನು ಹೊಂದಿರುವ ಸಮುದಾಯಗಳ ಮನಗೆಲ್ಲುವುದು ಚಿತ್ರ ನಟನಾಗಿ ಅಭಿಮಾನಿಗಳನ್ನು ಗಳಿಸಿದಷ್ಟು ಸುಲಭವಲ್ಲ. ವಿಭಿನ್ನ ವರ್ಗಸಮುದಾಯಗಳ ಸಾಮಾಜಿಕ ಹಿತಾಸಕ್ತಿಗಳನ್ನು ಲಕ್ಷ್ಯದಲ್ಲಟ್ಟುಕೊಂಡು ಪರ್ಯಾಯ ರಾಜಕೀಯ ವ್ಯವಸ್ಥೆಯೊಂದನ್ನು ಕೊಡುವುದು ಸುಲಭದ ಮಾತಲ್ಲ. ಸಿನೆಮಾ ಜನಪ್ರಿಯತೆ ದೃಷ್ಟಿಯಿಂದಲೂ ಕಮಲ್‌ಹಾಸನ್ ಮತ್ತು ರಜನಿಕಾಂತ್ ಜನಪ್ರಿಯತೆಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಕಮಲ್‌ಹಾಸನ್ ನಟನಾಗಿ ನಯನಾಜೂಕಿನ ಸಂಸ್ಕೃತಿ ವರ್ಗಕ್ಕೆ ಸೇರಿದವರು. ಅವರ ಅಭಿಮಾನಿಗಳ ವರ್ಗವೇ ಬೇರೆ. ರಜನಿಕಾಂತ್ ಅಭಿಮಾನಿಗಳ ವರ್ಗವೇ ಬೇರೆ. ಕಮಲ್‌ಹಾಸನ್ ಆಗಲಿ ರಜನಿಯಾಗಲಿ ತಮಿಳುನಾಡಿನಲ್ಲಿ ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಬೇಕಾದರೆ ಸಮಾಜದ ಎಲ್ಲ ವರ್ಗ-ಸಮುದಾಯಗಳ ಹಿತಾಸಕ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಜನಬೆಂಬಲವನ್ನು ಸಂಘಟಿಸಬೇಕಾಗುತ್ತದೆ. ಇಲ್ಲವಾದಲ್ಲಿ ಅವರ ರಾಜಕಾರಣವೂ ಸಿನೆಮಾ ಆವುಟದಂತೆಯೇ ಆಗಬಹುದು.