ನಮ್ಮ ಬಾವಾಜಿಗೊಂದು ಸರಳ ಶ್ರದ್ಧಾಂಜಲಿ
ನರೇಂದ್ರ ನಾಯಕ್ ಜೀವನ ಕಥನ
ಭಾಗ 33
ಗ್ರಹಣ ಎಂಬುದು ಪ್ರಕೃತಿ ನಿಯಮ. ಪ್ರಾಥಮಿಕ ಹಂತದಿಂದಲೇ ವಿಜ್ಞಾನ ಪಾಠಗಳಲ್ಲಿ ಈ ಗ್ರಹಣಗಳ ಬಗ್ಗೆ ಕಲಿಸಲಾಗುತ್ತದೆ. ಈ ಗ್ರಹಣಕ್ಕೂ ಮನುಷ್ಯನ ಗ್ರಹಗತಿಗೂ ಯಾವುದೇ ಸಂಬಂಧವಿಲ್ಲ. ಹಾಗಿದ್ದೂರ ಸಂಬಂಧ ಕಲ್ಪಿಸಿ, ಲೂಟಿ ಮಾಡುವ ಕೃತ್ಯಗಳು, ಭಯ ಹುಟ್ಟಿಸುವ ಪ್ರಯತ್ನಗಳು ಮಾತ್ರ ನಡೆಯುತ್ತಲೇ ಇರುತ್ತವೆ. ಕೆಲ ವರ್ಷಗಳಿಂದೀಚೆಗಂತೂ ದೃಶ್ಯ ಮಾಧ್ಯಮಗಳಿಂದಾಗಿ ಈ ಗ್ರಹಣಗಳಿಗೆ ಮತ್ತಷ್ಟು ಪ್ರಚಾರ ದೊರಕಿದೆ. ಪ್ರಚಾರ ಬೇಕು. ವೈಜ್ಞಾನಿಕವಾಗಿ ನಡೆಯುವ ಈ ಗ್ರಹಣಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಒಳ್ಳೆಯದೇ. ಆದರೆ ಅದರ ಬಗ್ಗೆ ಭೀತಿ ಹುಟ್ಟಿಸುವುದಂತೂ ನಿಜಕ್ಕೂ ಶೋಚನೀಯ.
ನಾನು ಹಿಂದಿನ ಸಂಚಿಕೆಯಲ್ಲೂ ಮೋಕ್ಷದ ಬಗ್ಗೆ ಮಾತನಾಡಿದ್ದೆ. ಇಂದೂ ಅದನ್ನು ಮುಂದುವರಿಸುತ್ತಿದ್ದೇನೆ. ಈ ತಿಂಗಳಲ್ಲಿ ನಡೆದ ನನ್ನ ಬಾವನ ಶ್ರದ್ಧಾಂಜಲಿಯೊಂದಿಗೆ ಈ ಮೋಕ್ಷದ ಬಗ್ಗೆ ನನ್ನ ಸರಳ ಮುಕ್ತಿಯ ಕುರಿತಾದ ವಾದವನ್ನು ಮುಂದುವರಿಸುತ್ತಿದ್ದೇನೆ.
ನನ್ನ ಬಾವ (ಸಹೋದರ ಸಂಬಂಧಿ) ಫೆಬ್ರವರಿ 5ರಂದು (2018)ರಂದು ಇಹಲೋಕ ತ್ಯಜಿಸಿದರು. ಅಲ್ಪಕಾಲ ಅನಾರೋಗ್ಯದಿಂದ ಇದ್ದ ಅವರು ಅಸುನೀಗಿದಾಗ ಸಹಜವಾಗಿಯೇ ಅವರ ಅಂತ್ಯಕ್ರಿಯೆ ಬಗ್ಗೆ ಅವರ ಪತ್ನಿ ಹಾಗೂ ಮಕ್ಕಳಿಗೆ ಆತಂಕ ಶುರುವಾಗಿತ್ತು. ಕಾರಣ, ಅವರು ಅದಾಗಲೇ, ನಾನೂ ಸೇರಿದಂತೆ ಅವರ ಮಗಳು ಹಾಗೂ ಪತ್ನಿಯಲ್ಲಿ ಸ್ಪಷ್ಟವಾಗಿ ಮಾತೊಂದನ್ನು ಹೇಳಿದ್ದರು. ಅದೇನೆಂದರೆ ‘ನಾನು ಸತ್ತರೆ ನನ್ನ ಅಂತ್ಯಕ್ರಿಯೆಯನ್ನು ನನ್ನ ಪತ್ನಿ ಪ್ರೇಮಾ, ಮಗಳು ದೀಪ್ತಿ ಅಥವಾ ನೀನು’ ಮಾಡಬೇಕು ಎಂದು. ಅದರ ಜತೆ ಯಾವುದೇ ರೀತಿಯ ಧಾರ್ಮಿಕ ವಿಧಿವಿಧಾನಗಳೂ ಬೇಡವೆಂದು ಅವರು ಸ್ಪಷ್ಟಪಡಿಸಿದ್ದರು. ಮಾತ್ರವಲ್ಲದೆ, ‘ನನ್ನ ಆತ್ಮವನ್ನು ಸ್ವರ್ಗಕ್ಕೆ ಕಳುಹಿಸಲು ಯಾವುದೇ ವಿಧಿಗಳನ್ನೂ ಮಾಡುವುದು ಬೇಡ’ ಎಂದೂ ಅವರು ಹೇಳಿಕೊಂಡಿದ್ದರು. ಆದರೂ ಅವರ ಪತ್ನಿ ಹಾಗೂ ಅವರ ಮಗಳು ಅವರ ಪಾರ್ಥಿವ ಶರೀರದ ಅಸ್ಥಿ (ಬೂದಿ)ಯನ್ನು ಸೂಕ್ತವಾದ ಜಾಗದಲ್ಲಿ ವಿಲೇವಾರಿ ಮಾಡಬೇಕೆಂಬುದು ಅವರ ಬಯಕೆಯಾಗಿತ್ತು. ಅದರಂತೆ ಅವರು ಮರಣ ಹೊಂದಿದ ಬಳಿಕ ನಿಗದಿತ ದಿನದಂದು ನಾನು, ಬಾವನ ಪತ್ನಿ ಪ್ರೇಮ, ದೀಪ್ತಿ ಮತ್ತು ನನ್ನ ಪತ್ನಿ ಆಶಾ ಜತೆ ಸಮುದ್ರ ತೀರಕ್ಕೆ ತೆರಳಿದೆವು. ಅಲ್ಲಿ ಅಸ್ಥಿಯನ್ನು ವಿಸರ್ಜಿಸಿದೆವು. ಸುಮಾರು 49 ವರ್ಷಗಳ ಕಾಲ ನನ್ನ ಬಾವ ಜಿ.ಎಂ. ಹೆಗ್ಡೆ ಅವರ ಜತೆ ಸಂಸಾರ ನಡೆಸಿದ ಪ್ರೇಮಾ ಮತ್ತು ಅಮೆರಿಕದಲ್ಲಿ ನೆಲೆಸಿರುವ ಮಗಳು ದೀಪ್ತಿಗೆ ಅದೊಂದು ಭಾವನಾತ್ಮಕ ಕ್ಷಣವಾಗಿತ್ತು. ಜಿ.ಎಂ. ಹೆಗ್ಡೆಯವರ ಜತೆ ವಿವಾಹದ ಬಳಿಕ ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಹೆಜ್ಜೆ ಹಾಕಿದ್ದ, ಅವರು ತಮ್ಮ ಪತಿಯ ಅಂತ್ಯ ಸಂಸ್ಕಾರದ ಎಲ್ಲಾ ವಿಧಿವಿಧಾನಗಳಲ್ಲೂ ಭಾಗವಹಿಸಿದ್ದರು ಎನ್ನುವುದನ್ನು ನಾನು ಇಲ್ಲಿ ಉಲ್ಲೇಖಿಸಲೇ ಬೇಕು. ಆ ಅವಿಸ್ಮರಣೀಯ ಕ್ಷಣಗಳ ಭಾವಚಿತ್ರವನ್ನೂ ನಾನು ಕ್ಲಿಕ್ಕಿಸಿದ್ದೇನೆ.
ಇಷ್ಟು ಮಾತ್ರವಲ್ಲ, ಭಾವನವರ ಪಾರ್ಥಿವ ಶರೀರವನ್ನು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುವ ಸಂದರ್ಭದಲ್ಲೂ ಪ್ರೇಮಾ ಸಾಕ್ಷಿಯಾಗಿದ್ದರು. ಹಾಗಾಗಿ ಇದೊಂದು ಧಾರ್ಮಿಕ ವಿಧಿ ವಿಧಾನಗಳಿಂದ ಹೊರತಾದ ಭಾವನಾತ್ಮಕ ಶ್ರದ್ಧಾಂಜಲಿ ಎಂದೇ ಹೇಳಬೇಕು. ಈ ಅಂತ್ಯಕ್ರಿಯೆ, ವೈಕುಂಠ ಸಮಾರಾಧನೆ ಬಗ್ಗೆ ನನ್ನ ನಿಲುವು ಯಾವತ್ತೂ ಸ್ಪಷ್ಟ. ಯಾವುದೇ ಕ್ರಿಯೆಗಳು ಕೇವಲ ತೋರಿಕೆಗೆ ಆಗಿರದೆ, ಅದು ನಿಜವಾಗಿಯೂ ವೌಲ್ಯಯುತವಾಗಿದ್ದಲ್ಲಿ, ಅಗತ್ಯವಾಗಿದ್ದಲ್ಲಿ ಮಾತ್ರವೇ ಅದಕ್ಕೊಂದು ಶೋಭೆ. ವ್ಯಕ್ತಿ ಜೀವಂತ ಆಗಿರುವಾಗ ಇಲ್ಲದ ಕಾಳಜಿ, ಆಡಂಬರ, ಸತ್ತ ಮೇಲೆ ಮಾಡಿ ಏನೂ ಪ್ರಯೋಜನವಾಗದು. ಅದನ್ನು ನಾನು ಯಾವತ್ತೂ ಪ್ರತಿಪಾದಿಸುತ್ತೇನೆ.
ಗ್ರಹಣ ಹೆಸರಿನಲ್ಲಿ ಆತಂಕ ಸೃಷ್ಟಿಸುವ ಹುನ್ನಾರ!
ಹೌದು, ಇದು ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಸೂರ್ಯಗ್ರಹಣ, ಚಂದ್ರಗ್ರಹಣ ಎಂದಾಗಲೆಲ್ಲಾ ಒಂದು ರೀತಿಯ ಭಯವನ್ನು ಜನರಲ್ಲಿ ಬಿತ್ತಲಾಗುತ್ತದೆ. ಅದರಿಂದ ದೋಷವಾಗುತ್ತದೆ. ಇಂತಹ ನಕ್ಷತ್ರ, ರಾಶಿಯವರಿಗೆ ಈ ರೀತಿಯ ದೋಷವಿರುತ್ತದೆ. ಆ ದೋಷವನ್ನು ಪರಿಹಾರ ಮಾಡಲು ಅದೊಂದಿಷ್ಟು ಕ್ರಮಗಳು. ನಿಜಕ್ಕೂ ಇದೊಂದು ದಂಧೆ ಎಂದೇ ನಾನು ಹೇಳುತ್ತೇನೆ.
ಗ್ರಹಣ ಎಂಬುದು ಪ್ರಕೃತಿ ನಿಯಮ. ಪ್ರಾಥಮಿಕ ಹಂತದಿಂದಲೇ ವಿಜ್ಞಾನ ಪಾಠಗಳಲ್ಲಿ ಈ ಗ್ರಹಣಗಳ ಬಗ್ಗೆ ಕಲಿಸಲಾಗುತ್ತದೆ. ಈ ಗ್ರಹಣಕ್ಕೂ ಮನುಷ್ಯನ ಗ್ರಹಗತಿಗೂ ಯಾವುದೇ ಸಂಬಂಧವಿಲ್ಲ. ಹಾಗಿದ್ದೂರ ಸಂಬಂಧಕಲ್ಪಿಸಿ, ಲೂಟಿ ಮಾಡುವ ಕೃತ್ಯಗಳು, ಭಯ ಹುಟ್ಟಿಸುವ ಪ್ರಯತ್ನಗಳು ಮಾತ್ರ ನಡೆಯುತ್ತಲೇ ಇರುತ್ತವೆ. ಕೆಲ ವರ್ಷಗಳಿಂದೀಚೆಗಂತೂ ದೃಶ್ಯ ಮಾಧ್ಯಮಗಳಿಂದಾಗಿ ಈ ಗ್ರಹಣಗಳಿಗೆ ಮತ್ತಷ್ಟು ಪ್ರಚಾರ ದೊರಕಿದೆ. ಪ್ರಚಾರ ಬೇಕು. ವೈಜ್ಞಾನಿಕವಾಗಿ ನಡೆಯುವ ಈ ಗ್ರಹಣಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಒಳ್ಳೆಯದೇ. ಆದರೆ ಗ್ರಹಣದಿಂದ ತೊಂದರೆ ಉಂಟಾಗುತ್ತದೆ. ಅದರಿಂದ ಕೆಲ ನಿರ್ದಿಷ್ಟ ನಕ್ಷತ್ರ, ರಾಶಿಯ ಜನರು ಕಷ್ಟ ಅನುಭವಿಸುತ್ತಾರೆ. ಅದಕ್ಕಾಗಿ ಏನೆಲ್ಲಾ ಪರಿಹಾರ ಮಾಡಬೇಕು ಎಂದು ಜೋತಿಷಿಗಳನ್ನು ಚಾನೆಲ್ಗಳೆದುರು ಕುಳ್ಳಿರಿಸಿ ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸುವುದಂತೂ ನಿಜಕ್ಕೂ ಶೋಚನೀಯ.
ಭಾರತೀಯ ವಿಚಾರವಾದಿಗಳ ಸಂಘಟನೆಯಿಂದಂತೂ ಪ್ರತೀ ಗ್ರಹಣದ ಸಂದರ್ಭದಲ್ಲೂ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಇದಲ್ಲದೆ ಇತರ ಕಾರ್ಯಕ್ರಮಗಳಲ್ಲಿಯೂ ಜನರಿಗೆ ಈ ಬಗ್ಗೆ ಮಾಹಿತಿ ಒದಗಿಸುವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ. ನಮ್ಮ ಈ ಕಾರ್ಯಕ್ರಮ ಮುಂದುವರಿಯುತ್ತಲೇ ಇದೆ. ಗ್ರಹಣ ಬಗ್ಗೆ ವರ್ಣರಂಜಿತ ತಥಾಕಥಿತ ಕಥೆಗಳನ್ನು ಹೆಣೆದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಹುನ್ನಾರಗಳೂ ಮುಂದುವರಿಯುತ್ತಿವೆೆ.
ಇಂತಹ ಹುನ್ನಾರಗಳ ನಡುವೆಯೂ ವಿಜ್ಞಾನವನ್ನು ಸುಳ್ಳಾಗಿಸಲು ಸಾಧ್ಯವಿಲ್ಲ ಎಂಬುದು ವಾಸ್ತವ. ಹಾಗಾಗಿ ಈ ವೈಜ್ಞಾನಿಕ, ಪ್ರಕೃತಿಯ ವಿಸ್ಮಯದ ಬಗ್ಗೆ ವಿವರದೊಂದಿಗೆ, ಇತ್ತೀಚೆಗೆ ನಡೆದ ಚಂದ್ರಗ್ರಹಣದ ವೇಳೆ ಭಾರತೀಯ ವಿಚಾರವಾದಿಗಳ ಸಂಘದಿಂದ ನಡೆಸಲಾದ ಕಾರ್ಯಕ್ರಮದ ಬಗ್ಗೆ ನಾನು ಮುಂದಿನ ಸಂಚಿಕೆಯಲ್ಲಿ ನಿಮಗೆ ವಿವರಿಸಲಿದ್ದೇನೆ.