ವಿವೇಚನೆಯಿಂದ ವಿಜ್ಞಾನ ಉಳಿಯಲಿ
ಇಂದು ರಾಷ್ಟ್ರೀಯ ವಿಜ್ಞಾನ ದಿನ
ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28ರಂದು ಆಚರಿಸಲಾಗುತ್ತದೆ. ದೇಶದ ಹಲವಾರು ವಿಜ್ಞಾನಿಗಳು ತಮ್ಮ ನಿರಂತರ ಪರಿಶ್ರಮದಿಂದ ಹೊಸ ಹೊಸ ಸಂಶೋಧನೆ, ಆವಿಷ್ಕಾರಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ. ಆದಾಗ್ಯೂ ವಿಜ್ಞಾನ ದಿನ ಆಚರಣೆಗೆ ಮೈಲಿಗಲ್ಲಾಗಿದ್ದು ಸರ್ ಸಿ. ವಿ. ರಾಮನ್ರ ಮಹತ್ತರವಾದ ಸಾಧನೆ.
ಸರ್ ಸಿ. ವಿ. ರಾಮನ್ 1928 ರಲ್ಲಿ ಬೆಳಕಿನ ನೂತನ ಆವಿಷ್ಕಾರವನ್ನು ಪರಿಚಯಿಸಿದರು. ಈ ಆವಿಷ್ಕಾರವನ್ನು 'Raman Effect' ಎಂದು ಕರೆಯಲಾಗುತ್ತದೆ. 1930ರಲ್ಲಿ ಈ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ದೊರೆಯುವ ಮೂಲಕ ಆ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ. ಇದು ಭಾರತದ ವೈಜ್ಞಾನಿಕ ಕ್ಷೇತ್ರಕ್ಕೆ ಸಂದ ಮೊದಲ ನೊಬೆಲ್ ಪ್ರಶಸ್ತಿಯಾಗಿದ್ದು, ಭಾರತದ ಹಿರಿಮೆಗೆ ಸಾಕ್ಷಿಯಾಗಿದೆ.
14ರ ಸೆ.24ಕ್ಕೆ ಭಾರತದ ಮಂಗಳಯಾನ ನೌಕೆ ಮಂಗಳ ಕಕ್ಷೆಯೊಳಗೆ ಸೇರಿತು. ಮಂಗಳಯಾನದಲ್ಲಿ ವಿಶ್ವದ ನಾಲ್ಕನೇ ಮತ್ತು ಏಶ್ಯಾದ ಪ್ರಥಮ ರಾಷ್ಟ್ರವೆಂಬ ಖ್ಯಾತಿ ಭಾರತಕ್ಕೆ ಸಂದವು.
ಈ ಎಲ್ಲ ಪ್ರಗತಿಗೆ ಹರ್ಷವ್ಯಕ್ತಪಡಿಸುವ ಜೊತೆಗೆ ವಿಜ್ಞಾನದೊಳಗೆ ಅಜ್ಞಾನವನ್ನು ವ್ಯವಸ್ಥಿತವಾಗಿ ಹೇರುತ್ತಿರುವುದನ್ನು ಗಮನಿಸಬೇಕಾಗಿದೆ. ವಿಜ್ಞಾನದ ವಾಸ್ತವ ಅವಾಸ್ತವದ ಬಗ್ಗೆ ವಿಮರ್ಶಿಸುವ ಪ್ರಜ್ಞಾವಂತಿಕೆ ಮೂಡಿಸುವುದು ಆಧುನಿಕ ಸಮಾಜಕ್ಕೆ ತುರ್ತು ಅಗತ್ಯವಾಗಿದೆ.
ವಿಶ್ವ ವಿಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ‘‘ಮನುಷ್ಯರು ಭೂಮಿಯಲ್ಲಿ ಬದುಕುಳಿಯಬೇಕಾದರೆ ಭೂಮಿಯನ್ನು ಬಿಟ್ಟು ಹೊರಡಿ’’ ಎಂದು ಹೇಳಿದ್ದು ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಅವರ ಹೇಳಿಕೆಯ ಹಿಂದೆ ಗಂಭಿರವಾಗಿ ಆಲೋಚಿಸಬೇಕಾದ ವಿಚಾರಗಳಿವೆ. ಪ್ರಸಕ್ತ ಕಾಲಘಟ್ಟದಲ್ಲಿ ದಿನೇ ದಿನೇ ಮಣ್ಣಿನ ಗುಣಮಟ್ಟ, ನೀರಿನ ಗುಣಮಟ್ಟ ಕ್ಷೀಣಿಸುತ್ತಿದೆ. ಉಸಿರಾಡಲು ಶುದ್ಧ ಗಾಳಿಯ ಯಂತ್ರಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ, ಯಂತ್ರಗಳಿಂದ ಉಸಿರಾಡುವುದು ಪ್ರಗತಿಯನ್ನು ಬಿಂಬಿಸುವುದಿಲ್ಲ. ಬದಲಾಗಿ ಎಷ್ಟರ ಮಟ್ಟಿಗೆ ಪರಿಸರ ವಿನಾಶದ ಅಂಚಿಗೆ ತಲುಪಿದೆ ಎಂಬುದನ್ನು ಸೂಚಿಸುತ್ತದೆ
ಮನುಷ್ಯ ಭೂಮಿಯನ್ನು ಉಪಯೋಗಿಸಿದ ರೀತಿ ಸರ್ವ ಸಮಸ್ಯೆಗೆ ಕಾರಣ ಎಂಬುದನ್ನು ಸ್ಟೀಫನ್ ಹಾಕಿಂಗ್ರ ಹೇಳಿಕೆ ವ್ಯಕ್ತಪಡಿಸುತ್ತದೆ.ಆದುದರಿಂದಲೇ ಭೂಮಿಯನ್ನು ಉಳಿಸಿಕೊಳ್ಳಬೇಕಾದರೆ, ನಾವು ಬದುಕುಳಿಯಬೇಕಾದರೆ ಇನ್ನೊಂದು ಗ್ರಹಕ್ಕೆ ಕಾಲಿಡಬೇಕು ಎಂಬುದು ಅವರ ಎಚ್ಚರಿಕೆಯ ಸಂದೇಶ.
ಇಂತಹ ಸಂದರ್ಭದಲ್ಲಿ ಅನ್ಯ ಗ್ರಹದ ಬಗ್ಗೆ ಸಂಶೋಧನೆ ನಡೆಸುವುದು ನಮ್ಮ ಪ್ರಗತಿಯನ್ನು ಸೂಚಿಸುತ್ತದೆ. ಅಂತಹ ಸಂಶೋಧನೆಗಳು ನಡೆಯುತ್ತಿರಬೇಕು. ಅದಕ್ಕೂ ಮುನ್ನ ಅಸಂಖ್ಯ ಪ್ರಾಣಿ, ಪಕ್ಷಿ, ಜೀವಚರಾಚರಗಳು, 125 ಕೋಟಿಗೂ ಮಿಕ್ಕಿದ ಮನುಷ್ಯರು ವಾಸಿಸುವ ನೆಲಕ್ಕೆ ಆಪತ್ತೆರಗುವಾಗ ಅದನ್ನು ಉಳಿಸಿಕೊಳ್ಳಲು ಸಂಶೋಧನೆ ನಡೆಸಬೇಕೆಂಬ ವಿವೇಚನೆಯ ಅಗತ್ಯವಿದೆ.
ಈ ಸವಾಲಿಗೆ ಕಂಡುಕೊಳ್ಳುವ ಪರಿಹಾರ ವಿಜ್ಞಾನ ಲೋಕದ ಅತೀ ದೊಡ್ಡ ಕ್ರಾಂತಿಯಾಗಿದೆ. ಭಾರತದ ವಿಜ್ಞಾನ ಸಂಸ್ಥೆಗಳ ಮುಂದೆ ಹಲವು ಸವಾಲುಗಳಿವೆ. ಭಾರತ ಹಿಂದಿನಿಂದಲೂ ಕೃಷಿ ಪ್ರಧಾನ ರಾಷ್ಟ್ರವೆಂಬ ಖ್ಯಾತಿಯನ್ನು ಹೊಂದಿತ್ತು. ಇತ್ತೀಚೆಗೆ ಕೃಷಿ ಚಟುವಟಿಕೆಗಳು ಅಧೋಗತಿಯಲ್ಲಿದೆ. ಒಂದೆಡೆ ಅನ್ನ ಬೆಳೆಯುವ ಭೂಮಿಯನ್ನು ವಿದೇಶಿ ಕಂಪೆನಿಗಳು, ರಿಯಲ್ ಎಸ್ಟೇಟ್ಗಳು ಕಸಿದುಕೊಂಡಿದೆ. ಇನ್ನೊಂದೆಡೆ ಬೆಳೆಯುವ ಬೆಳೆ ರೋಗ ರುಜಿನಗಳಿಗೆ ತುತ್ತಾಗುತ್ತಿವೆ. ಈ ಸಮಸ್ಯೆಗೆ ಬೇರೆ ದಾರಿ ಕಾಣದೆ ರೈತರು ಕೃಷಿ ಭೂಮಿಯನ್ನು ಮಾರಿ ಬಿಡುತ್ತಿದ್ದಾರೆ. ಕೃಷಿ ನಾಶವಾಗದಂತೆ ಸಂಶೋಧನೆಗಳು ನಡೆಯಬೇಕಿದೆ. ಆ ಮೂಲಕ ಅಭಿವೃದ್ಧಿಯ ಜೊತೆಗೆ ರೈತರ ಆತ್ಮಹತ್ಯೆಯನ್ನು ತಡೆಯಬಹುದಾಗಿದೆ.
ಒಂದು ವೇಳೆ ವಿದೇಶದಿಂದ ಆಹಾರ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ದುಸ್ಥಿತಿ ಉಂಟಾದರೆ, ದುಬಾರಿ ಬೆಲೆ ನೀಡಲಾಗದೆ ಬಡ ಜೀವಿಗಳು ಅನ್ನವಿಲ್ಲದೆ ಸಾವನ್ನಪ್ಪಲೂಬಹುದು ಅಥವಾ ಆತ್ಮಹತ್ಯೆಗೆ ಶರಣಾಗಲೂಬಹುದು.
ವಿಜ್ಞಾನ ಕಟ್ಟುಕತೆಯೇ?
ಮಂಗನಿಂದ ಮಾನವ ಎಂಬ ಡಾರ್ವಿನ್ನ ಹುರುಳಿಲ್ಲದ ವಿಕಾಸವಾದದ ಸಿದ್ಧಾಂತಗಳನ್ನು ನಂಬುವ ಜನರು ಇಂದೂ ಇದ್ದಾರೆ. ಅದನ್ನು ಇಂದಿಗೂ ವೈಜ್ಞಾನಿಕ ಸಂಶೋಧನೆ ಎನ್ನುತ್ತಿರುವುದು ಮೂರ್ಖತನವಲ್ಲ, ಈ ಹೇಳಿಕೆಗಳು ವೌಢ್ಯವನ್ನು ಜನಸಾಮಾನ್ಯರ ಮೆದುಲೊಳಗೆ ತುಂಬುವ ಹುನ್ನಾರ ಮತ್ತು ವಿಜ್ಞಾನಕ್ಕೆ ಮಾಡುವ ಅಪಚಾರವಾಗಿದೆ.
ಇಂದು ಕೆಲವು ವಿಜ್ಞಾನಿಗಳೇ ತಮ್ಮ ಕಾರ್ಯಸಾಧನೆಗೆಂದು ಮೂಢನಂಬಿಕೆಗಳನ್ನು ಬಂಡವಾಳವನ್ನಾಗಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ನ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಆನಂದ್ ಜೆ ಬೊಡಾಸ್ಎಂಬವರನ್ನು ಆಹ್ವಾನಿಸಲಾಗಿತ್ತು. ಅವರ ಹುಚ್ಚು ಹೇಳಿಕೆಗಳು ವ್ಯಾಪಕವಾಗಿ ಚರ್ಚೆಯಾಗತೊಡಗಿತು.
ಏಳು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಈಗಿನ ವಿಮಾನಕ್ಕಿಂತ ಹೆಚ್ಚಿನ ಸೌಲಭ್ಯವಿದ್ದ ವಿಮಾನಗಳಿದ್ದವಂತೆ.ಆ ವಿಮಾನಗಳು ಹಿಂದಕ್ಕೆ, ಮುಂದಕ್ಕೆ, ಅಕ್ಕ ಪಕ್ಕ ಹಾರುತ್ತಿದ್ದು, ಕತ್ತೆ ಮತ್ತು ಆನೆಯ ಮೂತ್ರ ಅದರ ಇಂಧನವಾಗಿ ಉಪಯೋಗಿಸಲಾಗುತ್ತಿತ್ತು ಎಂಬ ಅವಿವೇಕತನದ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಅದೇ ಸಮಾವೇಶದಲ್ಲಿ ಆಯುರ್ವೇದ ವೈದ್ಯ ಮತ್ತು ಸಂಸ್ಕೃತ ಪಂಡಿತರಾದ ಅಶ್ವಿನ್ ಸಾವಂತ್ ಎಂಬವರು ಋಗ್ವೇದ ಕಾಲದಲ್ಲಿ ಸ್ತ್ರೀಯರಿಗೆ ಸಿಸೇರಿಯನ್ ಮಾಡುವುದು ತಿಳಿದಿತ್ತು ಎಂಬ ತಿರುಳಿಲ್ಲದ ಹೇಳಿಕೆಯನ್ನು ಮುಂದಿಟ್ಟಿದ್ದರು.
ರಾಕೆಟ್ ಉಡಾವಣೆಯ ವೇಳೆಯನ್ನು ಇಸ್ರೋ ಅಧ್ಯಕ್ಷ ರಾಧಾಕಷ್ಣನ್ ಜ್ಯೋತಿಷ್ಯದ ಮೂಲಕ ತಿಳಿಯಲು ಮುಂದಾಗಿದ್ದರು. ವಿಜ್ಞಾನಿಗಳಿಗೂ ಜ್ಯೋತಿಷ್ಯರ ಅಗತ್ಯ ಇರುವುದು ಯಾವ ಪ್ರಗತಿಯನ್ನು ಬಿಂಬಿಸುತ್ತದೆ?
ಹೆಣ್ಣು ಮಕ್ಕಳು ಕುರೂಪಿಯಾಗಿ ಜನಿಸಿದರೆ ಅವರ ಜಾತಕ ಸರಿಯಿಲ್ಲವೆಂದು ಹೇಳಿ ನಾಯಿ, ಮರಗಳ ಜೊತೆ ಮದುವೆ ಮಾಡಿಸುವ ಪ್ರಸಂಗ ದೇಶಾದ್ಯಂತ ಜೀವಂತವಾಗಿದೆೆ. ಮಳೆ ಬಾರದಿದ್ದರೆ ಕಪ್ಪೆಗಳಿಗೆ ಮದುವೆ ಮಾಡಬೇಕೆಂದು ಜ್ಯೋತಿಷಿಗಳು ಹೇಳುತ್ತಾರೆ. ಒಂದು ವೇಳೆ ಕಪ್ಪೆಗಳ ಮದುವೆಯಿಂದ ಮಳೆ ಬರುವುದಾದರೆ ಜಗತ್ತಿನಲ್ಲಿ ಮಳೆ ಬಾರದೆ ಬರಗಾಲವಿರುವ ಹಲವು ರಾಷ್ಟ್ರಗಳಿವೆ. ಆ ರಾಷ್ಟ್ರಗಳಿಗೆ ಈ ಬಗ್ಗೆ ತಿಳಿಸಬಹುದಲ್ಲವೇ?
ವಿಜ್ಞಾನದ ಮೂಲಕ ಮೌಢ್ಯದಿಂದ ಜನರನ್ನು ರಕ್ಷಿಸಬೇಕಾದ ವಿಜ್ಞಾನಿಗಳು ಮೌಢ್ಯದಿಂದ ಹೊರಬರಬೇಕಿದೆ. ಪ್ರಜ್ಞಾವಂತ ನಾಗರಿಕರು ವಿಜ್ಞಾನದ ಸಂಗತಿಗಳನ್ನು ವಿಮರ್ಶೆ, ವಿವೇಚನೆಯಿಂದ ತಿಳಿಯಬೇಕು. ಆ ಮೂಲಕ ಅಜ್ಞಾನವನ್ನು ದೂರೀಕರಿಸಬೇಕು.