ಹಗರಣವೊಂದರ ಪಾಠಗಳು
ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುತ್ತಿರುವ ವಂಚನೆಗಳನ್ನು ಖಾಸಗೀಕರಣದ ಮೂಲಕ ತಡೆಗಟ್ಟಬಹುದೆಂಬ ವಾದ ತಪ್ಪು.
ನೀರವ್ ಮೋದಿಯ ಕಂಪೆನಿಗಳು ಈ ಹಿಂದೆ ತಾವು ಪಡೆದುಕೊಂಡ ಸಾಲಗಳನ್ನು ಅವಧಿಯೊಳಗೆ ಹಿಂದಿರುಗಿಸಿದ್ದರಿಂದಲೇ ಅವರಿಗೆ ಹೊಸ ಸಾಲಗಳನ್ನು ಹೊರದೇಶದ ಬ್ಯಾಂಕುಗಳು ನೀಡಿವೆ ಅಂದರ್ಥ. ಇಲ್ಲದಿದ್ದರೆ ಪಿಎನ್ಬಿ ಕೊಡುತ್ತಿದ್ದ ಎಲ್ಒಯುಗಳನ್ನು ಹೊರದೇಶದ ಬ್ಯಾಂಕುಗಳು ಒಂದು ಕಾಲದ ನಂತರ ಮಾನ್ಯ ಮಾಡುತ್ತಿರಲಿಲ್ಲ. ಹಾಗಿದ್ದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಮೋದಿಯು ಸಾಲ ವಾಪಸ್ ಮಾಡದೇ ಇದ್ದರಿಂದ ಈ ಸಮಸ್ಯೆ ಪ್ರಾರಂಭವಾಯಿತೇ? ಅಥವಾ ನೀರವ್ ಮೋದಿಯ ಕಂಪೆನಿಗೆ ಎಲ್ಒಯುಗಳನ್ನು ಒದಗಿಸುತ್ತಿದ್ದ ಹಳೆಯ ಉದ್ಯೋಗಿಯ ಸ್ಥಾನಕ್ಕೆ ಬಂದ ಹೊಸ ಸಿಬ್ಬಂದಿಯು ಮೊದಲಿನಂತೆ ಎಲ್ಒಯು ನೀಡಲು ನಿರಾಕರಿಸಿದ್ದರಿಂದ ಸಮಸ್ಯೆ ಪ್ರಾರಂಭವಾಯಿತೇ? ಈ ಮಹತ್ವದ ವಿಷಯವು ಇನ್ನೂ ತನಿಖೆಗೊಳಪಡಬೇಕಿದೆ.
ಭಾರತವನ್ನು ದಿಕ್ಕೆಡಿಸಿದ ನೈಜ ಹಾಗೂ ಕಲ್ಪಿತ ಹಗರಣಗಳ ಸಾಲಿಗೆ ಇತ್ತೀಚಿನ ಸೇರ್ಪಡೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಹಗರಣ. ಪಿಎನ್ಬಿ ಹಗರಣಕ್ಕೆ ಸಂಬಂಧಪಟ್ಟಂತೆ ಎರಡು ಮುಖ್ಯ ವಿಷಯಗಳು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿರುವುದನ್ನು ಗುರುತಿಸಲೇಬೇಕು. ಮೊದಲನೆಯದಾಗಿ ಈ ಬ್ಯಾಂಕ್ ಹಗರಣವನ್ನು ಯೋಜಿತವಾಗಿ ನಡೆಸಿಕೊಂಡು ಬರಲಾಗಿದೆ. ಸಾಮಾನ್ಯವಾಗಿ ಬ್ಯಾಂಕಿನ ಉದ್ಯೋಗಿಗಳು ಅಥವಾ ಹೊರಗಿನವರು ಬ್ಯಾಂಕಿನ ನೀತಿನಿಯಮಗಳನ್ನು ಅಡ್ಡದಾರಿಗಳ ಮೂಲಕ ಉಲ್ಲಂಘಿಸಿ ಬ್ಯಾಂಕುಗಳಿಗೆ ನಷ್ಟವುಂಟು ಮಾಡಿದಾಗ ಬ್ಯಾಂಕ್ ಹಗರಣಗಳು ಸಂಭವಿಸುತ್ತವೆ. ಆದರೆ ಈ ಹಗರಣವು ತದ್ವಿರುದ್ಧವಾಗಿ ನಡೆದಿದೆ. ಈ ಹಗರಣದಲ್ಲಿ ಸ್ವಯಂ ಬ್ಯಾಂಕೇ ಮುಂದೆ ನಿಂತು ತನ್ನ ಶೇರುದಾರರು ಮತ್ತು ಮ್ಯಾನೇಜರುಗಳು ಲಾಭ ಮಾಡಿಕೊಳ್ಳಲು ಅನುವುಮಾಡಿಕೊಟ್ಟು ತಮ್ಮ ಗ್ರಾಹಕರು ಅಥವಾ ತೆರಿಗೆದಾರರಿಗೆ ವಂಚನೆ ಮಾಡಿದೆ. ವಸೂಲಾಗದ ಸಾಲ-ನಿಷ್ಕ್ರಿಯ ಸಂಪತ್ತು (ನಾನ್ ಪರ್ಫಾರ್ಮಿಂಗ್ ಅಸೆಟ್ಸ್ -ಎನ್ಪಿಎ)ಗಳು ಸಾಲಗಾರನ ಜೊತೆ ಬ್ಯಾಂಕ್ ಸಿಬ್ಬಂದಿಯೂ ಕೈಗೂಡಿಸಿ ಮಾಡುವ ವಂಚನೆಯಿಂದಲೂ ಸಂಭವಿಸಬಹುದು ಅಥವಾ ಸಾಲ ತೆಗೆದುಕೊಂಡ ವಿಶ್ವಾಸಾರ್ಹ ಉದ್ಯಮವೊಂದು ತನ್ನ ವ್ಯವಹಾರದಲ್ಲಿ ತೆಗೆದುಕೊಂಡ ತಪ್ಪಾದ ವ್ಯಾವಹಾರಿಕ ನಿರ್ಣಯಗಳಿಂದಲೂ ಸಂಭವಿಸಬಹುದು.
ವಂಚನೆಯಲ್ಲಿ ಎದ್ದುಕಾಣುತ್ತಿರುವ ಎರಡನೇ ಸಂಗತಿಯೆಂದರೆ ಈ ಹಗರಣವು ಬ್ಯಾಂಕ್ ವ್ಯವಸ್ಥೆ ಮತ್ತು ವಿಧಿವಿಧಾನಗಳ ಆಚರಣೆಯಲ್ಲಿರುವ ಲೋಪದೋಷಗಳ ದುರ್ಬಳಕೆಯಿಂದ (ಆಪರೇಷನಲ್ ರಿಸ್ಕ್-ಆಚರಣಾತ್ಮಕ ಅಪಾಯ ಎಂದು ಕರೆಯಲ್ಪಡುವ ವಿದ್ಯಮಾನದಿಂದ) ಸಂಭವಿಸಿದೆ. ಎಂದರೆ ಈ ಅಪಾಯವು ಸಾಲದ ವಾಪಸಾತಿ ಸಂಬಂಧಿತ ಅಪಾಯವಾಗಿರಲಿಲ್ಲ. ಈ ಹಗರಣವು ಹೊರಬಂದ ಕೂಡಲೇ ಪಡೆದುಕೊಂಡ ಅಪಾರ ರಾಜಕೀಯ ಆಯಾಮಗಳನ್ನು ಗಮನಿಸಿದಾಗ ಈ ಭಿನ್ನತೆಯ ಮಹತ್ವವು ಗೊತ್ತಾಗುತ್ತದೆ. ವಿರೋಧ ಪಕ್ಷಗಳು ಈ ಹಗರಣಕ್ಕೆ ಆಳ್ವಿಕೆಯಲ್ಲಿರುವ ಎನ್ಡಿಎ ಸರಕಾರವೇ ಹೊಣೆ ಎಂದು ಕೂಡಲೇ ಆರೋಪ ಹೊರಿಸಿದವು. ಭಾರತೀಯ ಜನತಾ ಪಕ್ಷವು ಇದಕ್ಕೆ ಪ್ರತ್ಯುತ್ತರವಾಗಿ ಆರೋಪಿ ನೀರವ್ ಮೋದಿಗೂ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರಿಗೂ ಸಂಂಧ ಇತ್ತೆಂದು ಆರೋಪಿಸಿದೆ.
ಸಾಲ ವಾಪಸಾತಿ ಸಂಬಂಧಿತ ಅಪಾಯಗಳಲ್ಲಿ (ಕ್ರೆಡಿಟ್ ರಿಸ್ಕ್) ಗಳಲ್ಲಿ ಸಾಮಾನ್ಯವಾಗಿ ರಾಜಕೀಯ ಅಥವಾ ಮೇಲಧಿಕಾರಿಗಳ ಮಧ್ಯಪ್ರವೇಶವೂ ಸಹ ಒಂದು ಪ್ರಮುಖ ಅಂಶವಾಗಿರುತ್ತದೆ. ಅವು ‘ಶಿಫಾರಸಿನ ಮೇಲೆ’ (‘ಬಿಹೆಸ್ಟ್’ ಲೆಂಡಿಂಗ್) ನೀಡಿದ ಸಾಲಗಳಾಗಿರುತ್ತವೆ. ಹಲವಾರು ಪ್ರಸಂಗಗಳಲ್ಲಿ ವಾಣಿಜ್ಯದೃಷ್ಟಿಯಿಂದ ಲಾಭದಾಯಕವಲ್ಲದ ವ್ಯವಹಾರಗಳಿಗೆ ಸಾಲವನ್ನು ನೀಡಲು ರಾಜಕಾರಣಿಗಳು ಮತ್ತು ಮೇಲಧಿಕಾರಿಗಳು ಸಾರ್ವಜನಿಕ ಬ್ಯಾಂಕುಗಳ ಮೇಲೆ ಒತ್ತಡವನ್ನು ಹಾಕುವುದು ಚಿರಪರಿಚಿತವಾದ ಸಂಗತಿಯೇ ಆಗಿದೆ. ಆದರೆ ಆಪರೇಷನಲ್ ರಿಸ್ಕ್- ಆಚರಣಾತ್ಮಕ ಲೋಪದೋಷಗಳ ದುರ್ಬಳಕೆ-ಯಿಂದ ನಡೆಯುವ ವಂಚನೆಗಳು ಬೇರೆ ರೀತಿಯವು. ಸಾಮಾನ್ಯವಾಗಿ ಇಂತಹ ವಂಚನೆಗಳು ಪ್ರಧಾನವಾಗಿ ಬ್ಯಾಂಕು ಸಿಬ್ಬಂದಿಗೆ ಹಾಗೂ ಕೆಲವೊಮ್ಮೆ ಹೊರಗಿನವರಿಗೆ ಲಾಭ ಮಾಡಿಕೊಡುತ್ತದೆ. ಇದರಲ್ಲಿ ರಾಜಕೀಯ ಮಧ್ಯಪ್ರವೇಶದಂಥ ಅಂಶಗಳು ಅಪರೂಪ. ನೀರವ್ ಮೋದಿಗೆ ಎಷ್ಟೇ ರಾಜಕೀಯ ಬೆಂಬಲವಿದ್ದರೂ ಈ ಸದ್ಯಕ್ಕಂತೂ ಪಿಎನ್ಬಿ ಬ್ಯಾಂಕಿನಲ್ಲಿ ನಡೆದಿರುವ ವಂಚನೆಗೆ ರಾಜಕೀಯ ನಿರ್ದೇಶನ ಅಥವಾ ಬೆಂಬಲವಿತ್ತು ಎಂದು ಸಾಬೀತುಪಡಿಸುವ ಆಧಾರಗಳಿಲ್ಲ.
ವಂಚನೆಯ ವಿವರಗಳೇ ಇನ್ನೂ ಸ್ಪಷ್ಟವಾಗಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಹೊರದೇಶಗಳಲ್ಲಿ ವ್ಯವಹಾರ ನಡೆಸುತ್ತಿರುವ ನೀರವ್ ಮೋದಿಯರ ಸಂಸ್ಥೆಗಳ ಪರವಾಗಿ ಪಿಎನ್ಬಿ ಬ್ಯಾಂಕು ಹಲವಾರು ‘ಲೆಟರ್ ಆಫ್ ಅಂಡರ್ಸ್ಟಾಂಡಿಂಗ್’-ಎಲ್ಒಯು- ಒಂದು ಬಗೆಯ ಗ್ಯಾರಂಟಿ ಪತ್ರಗಳನ್ನು ನೀಡಿದೆ. ಆ ಬ್ಯಾಂಕಿನ ಉದ್ಯೋಗಿಯೊಬ್ಬರು ತನಗೆ ಅಧಿಕಾರವಿಲ್ಲದಿದ್ದರೂ ಬ್ಯಾಂಕುಗಳು ತಮ್ಮ ನಡುವಿನ ವ್ಯವಹಾರಗಳಿಗಾಗಿ ಬಳಸುವ ‘ಸ್ವಿಫ್ಟ್’ ವ್ಯವಸ್ಥೆಯನ್ನು ಬಳಸಿಕೊಂಡು ಆ ಪತ್ರಗಳನ್ನು ಒದಗಿಸಿದ್ದಾರೆ. ಆ ಉದ್ಯೋಗಿಯು ಇಂತಹ ಹಲವಾರು ಎಲ್ಒಯುಗಳನ್ನು ನೀಡಿದ್ದರಿಂದ ಹೊರದೇಶದಲ್ಲಿರುವ ಬ್ಯಾಕುಗಳು ನೀರವ್ ಮೋದಿಗೆ ಸಾಲಗಳನ್ನು ನಿರಂತರವಾಗಿ ನೀಡುತ್ತಲೇ ಹೋಗಿವೆ.
ಸಾಮಾನ್ಯವಾಗಿ ಇಂತಹ ಎಲ್ಒಯುಗಳನ್ನು 90 ದಿನಗಳಷ್ಟು ಸಣ್ಣ ಅವಧಿಗೆ ಮಾತ್ರ ನೀಡಲಾಗುತ್ತದೆ. ಆದರೆ ಈ ಸಿಬ್ಬಂದಿಯು ನೀತಿನಿಯಮಗಳನ್ನೆಲ್ಲಾ ಮುರಿದು 365 ದಿನಗಳಷ್ಟು ದೀರ್ಘಾವಧಿಯನ್ನು ನೀಡಿದ್ದಾರೆ. ವರದಿಗಳ ಪ್ರಕಾರ ಇದು ಕಳೆದ ಏಳು ವರ್ಷಗಳಿಂದ ನಡೆಯುತ್ತಾ ಬಂದಿದೆ. ಅಂದರೆ ನೀರವ್ ಮೋದಿಯ ಕಂಪೆನಿಗಳು ಈ ಹಿಂದೆ ತಾವು ಪಡೆದುಕೊಂಡ ಸಾಲಗಳನ್ನು ಅವಧಿಯೊಳಗೆ ಹಿಂದಿರುಗಿಸಿದ್ದರಿಂದಲೇ ಅವರಿಗೆ ಹೊಸ ಸಾಲಗಳನ್ನು ಹೊರದೇಶದ ಬ್ಯಾಂಕುಗಳು ನೀಡಿವೆ ಅಂದರ್ಥ. ಇಲ್ಲದಿದ್ದರೆ ಪಿಎನ್ಬಿ ಕೊಡುತ್ತಿದ್ದ ಎಲ್ಒಯುಗಳನ್ನು ಹೊರದೇಶದ ಬ್ಯಾಂಕುಗಳು ಒಂದು ಕಾಲದ ನಂತರ ಮಾನ್ಯ ಮಾಡುತ್ತಿರಲಿಲ್ಲ. ಹಾಗಿದ್ದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಮೋದಿಯು ಸಾಲ ವಾಪಸ್ ಮಾಡದೇ ಇದ್ದರಿಂದ ಈ ಸಮಸ್ಯೆ ಪ್ರಾರಂಭವಾಯಿತೇ? ಅಥವಾ ನೀರವ್ ಮೋದಿಯ ಕಂಪೆನಿಗೆ ಎಲ್ಒಯುಗಳನ್ನು ಒದಗಿಸುತ್ತಿದ್ದ ಹಳೆಯ ಉದ್ಯೋಗಿಯ ಸ್ಥಾನಕ್ಕೆ ಬಂದ ಹೊಸ ಸಿಬ್ಬಂದಿಯು ಮೊದಲಿನಂತೆ ಎಲ್ಒಯು ನೀಡಲು ನಿರಾಕರಿಸಿದ್ದರಿಂದ ಸಮಸ್ಯೆ ಪ್ರಾರಂಭವಾಯಿತೇ? ಈ ಮಹತ್ವದ ವಿಷಯವು ಇನ್ನೂ ತನಿಖೆಗೊಳಪಡಬೇಕಿದೆ.
ಹೀಗಾಗಿ ಏನನ್ನು ಮಾಡಬೇಕೆಂಬುದನ್ನು ಮತ್ತು ಅವಸರ ಮಾಡಿ ಏನನ್ನು ಮಾಡಬಾರದು ಎಂಬುದನ್ನು ಸ್ಪಷ್ಟಗೊಳಿಸಿಕೊಳ್ಳುವುದು ಅತ್ಯಂತ ಮುಖ್ಯ. ಮೊತ್ತ ಮೊದಲನೆಯದಾಗಿ ಈವರೆಗೆ ನೀಡಲಾಗಿರುವ ಎಲ್ಲ ಎಲ್ಒಯುಗಳ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ವಾಪಸ್ ಬರಬೇಕಿರುವ ಸಾಲದ ಮೊತ್ತವೆಷ್ಟು ಮತ್ತು ಅದನ್ನು ಸರಿದೂಗಿಸುವಲ್ಲಿ ಲಭ್ಯವಿರುವ ನೀರವ್ ಮೋದಿಯ ಆಸ್ತಿಪಾಸ್ತಿಗಳೆಷ್ಟು ಎಂಬ ಲೆಕ್ಕಾಚಾರವನ್ನು ಮಾಡಬೇಕಿದೆ. ಆಗ ಬ್ಯಾಂಕುಗಳಿಗೆ ಆಗಿರುವ ನಷ್ಟವೆಷ್ಟು ಎಂಬ ಸರಿಯಾದ ಲೆಕ್ಕ ಸಿಗುತ್ತದೆ. ಇದನ್ನು ಅತ್ಯಂತ ತ್ವರಿತವಾಗಿ ಮಾಡಬೇಕು. ಏಕೆಂದರೆ ಆಗಿರುವ ನಷ್ಟದ ಬಗ್ಗೆ ತಳಬುಡವಿಲ್ಲದೆ ನಡೆಯುತ್ತಿರುವ ಊಹಾಪೋಹಗಳಿಂದ ಸಾರ್ವಜನಿಕ ಬ್ಯಾಂಕುಗಳ ಶೇರುಬೆಲೆಗಳು ಕುಸಿಯುತ್ತಿವೆ. ಎರಡನೆಯದಾಗಿ ಆಂತರಿಕ ನಿಯಂತ್ರಣಾ ವ್ಯವಸ್ಥೆಗಳನ್ನು ಉಲ್ಲಂಘಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇದಕ್ಕೆ ಪಿಎನ್ಬಿ ಬ್ಯಾಂಕು ತನ್ನ ಸ್ವಿಫ್ಟ್ ವ್ಯವಸ್ಥೆಯನ್ನು ಇತರ ಬ್ಯಾಂಕುಗಳಂತೆ ಕೇಂದ್ರೀಯ ಬ್ಯಾಂಕು ಸಾಫ್ಟ್ವೇರಿಗೆ (ಕೋರ್ ಬ್ಯಾಂಕಿಂಗ್ ಸಾಫ್ಟ್ವೇರ್)ಜೋಡಿಸದೆ ಇದ್ದದ್ದು ಒಂದು ಕಾರಣವೆಂದು ಹೇಳಲಾಗುತ್ತಿದೆ. ಒಂದು ವೇಳೆ ಅದೇ ಕಾರಣವಾಗಿದ್ದರೂ ನೀತಿ ನಿಯಮಗಳ ಈ ಉಲ್ಲಂಘನೆಯನ್ನು ಬ್ಯಾಂಕಿನ ಆಂತರಿಕ ಲೆಕ್ಕ ಪರಿಶೋಧಕರಾಗಲೀ (ಆಡಿಟರ್ಸ್), ಆ ನಂತರದ ಹಂತಗಳ ಲೆಕ್ಕ ಪರಿಶೋಧಕರಾಗಲೀ ಏಕೆ ಗಮನಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ಎದುರಾಗುತ್ತದೆ. ಸರಕಾರವಂತೂ ಈ ಹೊಣೆಯನ್ನು ರಿಸರ್ವ್ ಬ್ಯಾಂಕಿನ ಉಸ್ತುವಾರಿಯಲ್ಲಿ ಆಗಿರುವ ಲೋಪಕ್ಕೆ ಕಟ್ಟಲು ಆತುರ ತೋರುತ್ತಿದೆ. ಆದರೆ ಸಾಮಾನ್ಯವಾಗಿ ಉಸ್ತುವಾರಿಯ ಜವಾಬ್ದಾರಿಯುಳ್ಳ ಆರ್ಬಿಐ, ವಂಚನೆಗೊಳಗಾದ ಬ್ಯಾಂಕು ಆ ಬಗ್ಗೆ ತನಗೆ ವರದಿ ಮಾಡಿದ ನಂತರವಷ್ಟೇ ಪ್ರತಿಕ್ರಿಯಿಸುತ್ತದೆ.
ಪಿಎನ್ಬಿ ಬ್ಯಾಂಕಿನ ಈ ಹಗರಣ ಮತ್ತೊಂದು ಸುತ್ತಿನ ಸಾರ್ವಜನಿಕ ಬ್ಯಾಂಕುಗಳ ದೂಷಣೆಗೆ ಎಡೆಮಾಡಿಕೊಟ್ಟಿದೆ. ಸಾರ್ವಜನಿಕ ಬ್ಯಾಂಕುಗಳಲ್ಲಿ ನಡೆಯುತ್ತಿರುವ ವಂಚನೆಗೆ ಹಾಗೂ ನಿಯಂತ್ರಣದಲ್ಲಿ ಆಗುತಿರ್ರುವ ಪ್ರಮಾದಗಳಿಗೆ ಸರಕಾರಿ ಒಡೆತನವೇ ಕಾರಣವೆಂದು ಹೇಳಲಾಗುತ್ತಿದೆ. ವಂಚನೆಗಳನ್ನು ತಡೆಗಟ್ಟುವಲ್ಲಿ ಮತ್ತು ಸಾರ್ವಜನಿಕರ ಹಣದ ದುರುಪಯೋಗವನ್ನು ತಡೆಗಟ್ಟುವಂತೆ ಮಾಡುವಲ್ಲಿ ಸಾರ್ವಜನಿಕ ಬ್ಯಾಂಕುಗಳ ಮ್ಯಾನೇಜರುಗಳಿಗೆ ಯಾವುದೇ ವಿಶೇಷ ಆಸಕ್ತಿಯನ್ನು ಬಿತ್ತದಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಹೀಗಾಗಿ ಈ ತರ್ಕಸರಣಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋದರೂ ಸಕಲ ರೋಗಕ್ಕೂ ಖಾಸಗೀಕರಣವೇ ಮದ್ದು ಎನ್ನುವ ತೀರ್ಮಾನಕ್ಕೆ ತಲುಪುತ್ತೇವೆ.
ಕಳೆದ ಕೆಲವು ವರ್ಷಗಳಲ್ಲಿ ಜಗತ್ತಿನ ಹಲವು ಪ್ರಖ್ಯಾತ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಆಗಿರುವ ದೊಡ್ಡ ಮಟ್ಟದ ವಂಚನೆಗಳ ಬಗ್ಗೆ ಮಾಹಿತಿ ಇರುವವರಿಗೆ ಈ ತರ್ಕವು ಹಾಸ್ಯಾಸ್ಪದವೆನಿಸುವುದು ಸಹಜ. 1995ರಲ್ಲಿ ಜಗತ್ತಿನ ಅತಿದೊಡ್ಡ ಇನ್ವೆಸ್ಟ್ಮೆಂಟ್ ಬ್ಯಾಂಕುಗಳಲ್ಲಿ ಒಂದಾಗಿದ್ದ ಇಂಗ್ಲೆಂಡಿನ ‘ಬೇರಿಂಗ್ಸ್ ಬ್ಯಾಂಕ್’ನ್ನು ನಿಕ್ ಲೀಸನ್ ಎಂಬ ಧೂರ್ತ ವ್ಯಾಪಾರಿ ಕುಸಿದುಬೀಳುವಂತೆ ಮಾಡಿದ್ದ. ಇಂತಹ ವ್ಯಕ್ತಿಗಳು ನೀತಿ ನಿಯಮಗಳನ್ನು ಉಲ್ಲಂಘಿಸುತ್ತಾ ಹಣಕಾಸು ಸಂಸ್ಥೆಗಳಿಗೆ ಅಪಾರವಾದ ನಷ್ಟವನ್ನುಂಟುಮಾಡಿದ್ದಾರೆ.
ಮತ್ತೊಂದು ಕಡೆ ಖಾಸಗಿ ಒಡೆತನದ ಜಗತ್ತಿನ ಹಲವಾರು ಖ್ಯಾತ ಬ್ಯಾಂಕುಗಳು ಕಾನೂನುಗಳನ್ನು ಉಲ್ಲಂಘಿಸಿ ಲಕ್ಷಾಂತರ ಬಿಲಿಯನ್ ಡಾಲರ್ಗಳಷ್ಟು ದಂಡವನ್ನು ಕಟ್ಟಿದ್ದಾರೆ. ಹಲವಾರು ಖಾಸಗಿ ಅಂತಾರಾಷ್ಟ್ರೀಯ ಬ್ಯಾಂಕುಗಳು ಲೈಬರ್ ರಿಗ್ಗಿಂಗ್ (ಅಂತಾರಾಷ್ಟ್ರೀಯ ಸಾಲದ ದರವನ್ನು ತಮಗೆ ಅನುಕೂಲವಾದ ದರದಲ್ಲಿ ಇರುವಂತೆ ನಿಗದಿಗೊಳಿಸುವ ವಂಚನೆ-ಅನು), ವಿನಿಮಯ ದರಗಳಲ್ಲಿ ಹಸ್ತಕ್ಷೇಪ, ಕಪುಹಣವನ್ನು ಕಳ್ಳಲೆಕ್ಕಗಳ ಮೂಲಕ ಬಿಳಿಮಾಡಿಕೊಳ್ಳುವುದು (ಮನಿ ಲಾಂಡರಿಂಗ್), ಹಣಕಾಸು ಉಪಕರಣಗಳ ಮೋಸದ ಮಾರಾಟಗಳಂಥ ಹಲವಾರು ಬಗೆಗಳ ಕಾನೂನು ಉಲ್ಲಂಘನೆಗಳಲ್ಲಿ ಮತ್ತು ವಂಚನೆಗಳಲ್ಲಿ ತೊಡಗಿಕೊಂಡಿವೆ. ಈ ರೀತಿ ಕಾನೂನು ಉಲ್ಲಂಘಿಸುವುದರಲ್ಲಿ ಖಾಸಗಿ ಬ್ಯಾಂಕುಗಳ ಮ್ಯಾನೇಜರುಗಳಿಗೆ ಸ್ವಂತ ಲಾಭವಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುತ್ತಿರುವ ವಂಚನೆಗಳು ಮತ್ತು ಬ್ಯಾಂಕಿಂಗ್ ವ್ಯವಹಾರದಲ್ಲಿನ ವೈಫಲ್ಯಗಳು ಆಯಾ ಬ್ಯಾಂಕುಗಳ ಒಡೆತನದ ಸ್ವರೂಪದ ಮೇಲೆ ಆಧಾರಪಟ್ಟಿರುವುದಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಂಡುಬರುತ್ತಿರುವ ವಂಚನೆಗಳಿಗೆ ಖಾಸಗೀಕರಣವು ಪರಿಹಾರವೆಂಬುದು ಕೇವಲ ಒಂದು ಭ್ರಮೆಯಷ್ಟೆ.
ಕೃಪೆ: Economic and Political Weekly