ಈಗ ಫೇಸ್ ಬುಕ್ ಮೂಲಕ 40 ದೇಶಗಳಲ್ಲಿ ಉದ್ಯೋಗ ಪಡೆಯುವ ಸುವರ್ಣಾವಕಾಶ
ಇದನ್ನು ನಿರುದ್ಯೋಗಿಗಳ ಪಾಲಿನ ಶುಭಸುದ್ದಿ ಎಂದೇ ಹೇಳಬಹುದು. ಇಂದಿನ ದಿನಗಳಲ್ಲಿ ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುತ್ತಿರುವುದು ಸುಳ್ಳಲ್ಲ. ಆದರೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಿರುದ್ಯೋಗಿಗಳಿಗೆ 40 ದೇಶಗಳಲ್ಲಿ ಉದ್ಯೋಗ ಪಡೆಯುವ ಸುವರ್ಣಾವಕಾಶವನ್ನು ಒದಗಿಸುತ್ತಿದೆ.
ಫೇಸ್ ಬುಕ್ ನ ಹೊಸ ಫೀಚರ್ ಆದ ಫೇಸ್ ಬುಕ್ ಜಾಬ್ಸ್ ಭಾರತದಲ್ಲೂ ಲಭ್ಯವಾಗುತ್ತಿದ್ದು, ಈ ಮೂಲಕ ಉದ್ಯೋಗಾಕಾಂಕ್ಷಿಗಳು ವಿವಿಧ ದೇಶಗಳಲ್ಲಿರುವ ಉದ್ಯೋಗಗಳ ಬಗ್ಗೆ ಮಾಹಿತಿ ಪಡೆಯಬಹುದು. ಫೇಸ್ ಬುಕ್ ಮೂಲಕ ನೇರವಾಗಿ ನೀವು ಉದ್ಯೋಗಕ್ಕೆ ಅಪ್ಲೈ ಮಾಡಬಹುದಾಗಿದೆ. ಫೆಬ್ರವರಿ 17ರಂದು ಪ್ರಪ್ರಥಮ ಬಾರಿಗೆ ಅಮೆರಿಕ ಹಾಗು ಕೆನಡಾದಲ್ಲಿ ಫೇಸ್ ಬುಕ್ ಜಾಬ್ಸ್ ಫೀಚರ್ ಲಾಂಚ್ ಆಗಿತ್ತು. ಇದೇ ಪ್ಲಾಟ್ ಫಾರ್ಮ್ ಮೂಲಕ ರೆಸ್ಯೂಮ್ ಗಳನ್ನು ರಚಿಸಲು ಇದು ಅವಕಾಶ ನೀಡುತ್ತದೆ. ಈ ಫೀಚರನ್ನು ಬಳಸಿಕೊಂಡು ಅಮೆರಿಕದಲ್ಲಿ ನಾಲ್ವರಲ್ಲಿ ಒಬ್ಬ ಉದ್ಯೋಗ ಹುಡುಕಿದ್ದಾನೆ ಎಂದು ಮಾರ್ನಿಂಗ್ ಕನ್ಸಲ್ಟ್ ವರದಿ ಮಾಡಿದೆ.
ನಿಮ್ಮ ಹೋಮ್ ಪೇಜ್ ನಲ್ಲಿರುವ ಎಡಬದಿಯ ಪ್ಯಾನೆಲ್ ನಲ್ಲಿರುವ ‘ಜಾಬ್ಸ್’ ಆಯ್ಕೆಗೆ ಕ್ಲಿಕ್ ಮಾಡಬೇಕು. ತಕ್ಷಣ ನಿಮ್ಮ ಸಮೀಪವಿರುವ ಉದ್ಯೋಗಾವಕಾಶಗಳ ಪಟ್ಟಿ ತೆರೆಯುತ್ತದೆ.
ವರ್ಗ (ಕೆಟಗರಿ), ಲೊಕೇಶನ್ ಅಥವಾ ಟೈಟಲ್ ಮೂಲಕ ನೀವು ಹುಡುಕಬಹುದು. ನಿಮ್ಮ ಪ್ರೊಫೈಲ್ ನಿಂದ ಅಗತ್ಯ ಮಾಹಿತಿಗಳನ್ನು ಸ್ವಯಂಚಾಲಿತವಾಗಿ ಅಪ್ಲಿಕೇಶನ್ ಪಡೆಯುತ್ತದೆ. ನೀವು ನಿಮ್ಮ ಖಾತೆಯಲ್ಲಿ ‘ಸಾರ್ವಜನಿಕ’ವಾಗಿ ತೋರಿಸಿರುವ ಮಾಹಿತಿಗಳನ್ನು ಪಡೆಯಲಷ್ಟೇ ಕಂಪೆನಿಗಳಿಗೆ ಸಾಧ್ಯವಾಗುತ್ತದೆ.
ಮೊಬೈಲ್ ನಲ್ಲಾದರೆ ಎಕ್ಸ್ ಪ್ಲೋರ್ ಸೆಕ್ಷನ್ ನಲ್ಲಿರುವ ‘ಜಾಬ್ಸ್’ ಆಯ್ಕೆಯ ಮೂಲಕ ಅಥವಾ www.facebook.jobs ಮೂಲಕ ಈ ಡ್ಯಾಶ್ ಬೋರ್ಡ್ ನಲ್ಲಿ ಉದ್ಯೋಗಗಳ ಮಾಹಿತಿ ಪಡೆಯಬಹುದಾಗಿದೆ.