ಏಕವ್ಯಕ್ತಿಯೊಳಗಿನ ನೂರು ಮುಖಗಳು....
ಏಕ ವ್ಯಕ್ತಿ ಯಕ್ಷಗಾನ ಎಂಬ ಹೊಸ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಈ ಕಲೆಗೆ ಹೊಸ ಆಯಾಮ ನೀಡಿ, ಸಾವಿರಾರು ಏಕವ್ಯಕ್ತಿ ಪ್ರದರ್ಶನವನ್ನು ನೀಡಿರುವ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯರ ಸಾಧನೆಯ ಸಮಗ್ರ ಚಿತ್ರಣವನ್ನು ‘ಏಕವ್ಯಕ್ತಿ ಯಕ್ಷಗಾನ ಸಾಧಕ-ಮಂಟಪ ಪ್ರಭಾಕರ ಉಪಾಧ್ಯ’ ಕೃತಿ ನೀಡುತ್ತದೆ. ಕನ್ನಡ ಸಂಘ ಕಾಂತಾವರ ಹೊರತಂದಿರುವ ಈ ಕೃತಿಯನ್ನು ದೀವಿತ್ ಎಸ್. ಕೆ. ಪೆರಾಡಿ ಇವರು ಬರೆದಿದ್ದಾರೆ. ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಭಾಗವಾಗಿ ಈ ಕೃತಿಯನ್ನು ಹೊರ ತರಲಾಗಿದೆ. ಲೇಖಕರು ಸ್ವತಃ ಯುವ ಹವ್ಯಾಸಿ ಯಕ್ಷಗಾನ ಕಲಾವಿದರಾಗಿರುವುದರಿಂದ ಕೃತಿಯು ಕಲಾವಿದನನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಕೃತಿಯಲ್ಲಿ ಏಕವ್ಯಕ್ತಿ ಯಕ್ಷಗಾನದ ಬಗ್ಗೆಯೂ ಸರಳವಾದ ಪರಿಚಯವಿದೆ. ಜೊತೆಗೆ ಮಂಟಪ ಪ್ರಭಾಕರ ಉಪಾಧ್ಯ ಅವರ ಬಾಲ್ಯ, ಬದುಕು ಮತ್ತು ಯಕ್ಷಗಾನದ ಕುರಿತಂತೆ ಅವರಿಗಿರುವ ಆಸಕ್ತಿಯನ್ನು ಲೇಖಕರು ವಿಷದವಾಗಿ ಬರೆದಿದ್ದಾರೆ.
ಒಂದು ರೀತಿಯಲ್ಲಿ ಅವರ ಸಂಕ್ಷಿಪ್ತ ಆತ್ಮಕತೆಯನ್ನು ಲೇಖಕರು ಈ ಕೃತಿಯಲ್ಲಿ ಕೂಡಿಟ್ಟಿದ್ದಾರೆ. ಜೊತೆಗೆ ಬೇರೆ ಬೇರೆ ಗಣ್ಯರು ಪ್ರಭಾಕರ ಉಪಾಧ್ಯ ಕುರಿತಂತೆ ಬರೆದಿರುವ ಬರಹಗಳೂ, ನುಡಿನಮನಗಳೂ ಇದರಲ್ಲಿವೆ. ಮಂಟಪ ಅವರ ಬೇರೆ ಬೇರೆ ಸ್ತ್ರೀಯ ಪಾತ್ರಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಡಲಾಗಿದೆ. ಒಂದು ಪಾತ್ರದೊಳಗೆ ಪ್ರವೇಶಗೈದು ಅವರು ಹೇಗೆ ಆ ಪಾತ್ರವೇ ಆಗಿ ಪ್ರೇಕ್ಷಕರಲ್ಲಿ ರಸಸ್ವಾದವನ್ನು ಹುಟ್ಟಿಸುತ್ತಾರೆ ಎನ್ನುವುದನ್ನು ಹಲವು ಗಣ್ಯರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಹೆಣ್ಣಿನ ಮನಸ್ಸಿನ ವಿವಿಧ ಆಯಾಮಗಳನ್ನು ಕಲಾತ್ಮಕವಾಗಿ ಅನಾವರಣಗೊಳಿಸಿದ ರಂಗರೂಪಕ ‘ಹುಚ್ಚು ಹೆಣ್ಣಿನ ಹತ್ತು ಮುಖಗಳು’ ಎಂಬ ದೃಶ್ಯ ಕಾವ್ಯ ಮಂಟಪರನ್ನು ಸಾಕಷ್ಟು ಜನಪ್ರಿಯಗೊಳಿಸಿತು.
ದೌತ್ಯ ದೀಕ್ಷಿತೆಯೆಂಬ ಅಖ್ಯಾನದಲ್ಲಿರುವ ಪ್ರೇಮಸಂದೇಶ, ಜಾರಜಾಗರಣೆಯಲ್ಲಿ ಅತೃಪ್ತ ಹೆಣ್ಣಿನ ಮನಸ್ಸಿನ ವಿಲಾಪದ ನಾಟಕೀಯ ನಿರ್ವಹಣೆ, ಭವದಾಂಪತ್ಯದಲ್ಲಿ ಕೊರಗುವ ಭಾವ, ಚಿತ್ರದರ್ಶಿಕೆಯಲ್ಲಿ ಪರಮ ಸುಂದರಿಯ ಗರ್ವ, ಅಧೀರಸ್ವೀಯೆಯಲ್ಲಿ ಹೆಣ್ಣಿನ ವಿರಹಸಂಕಟ...ಹೆಣ್ಣೊಳಗಿನ ತಳಮಳವನ್ನು ಅವರು ಕಟ್ಟಿಕೊಡುವ ಪರಿ ರಂಗಭೂಮಿಗೆ ಒಂದು ಹೊಸ ನೋಟವನ್ನು ನೀಡಿದೆ.
ಕೃತಿಯ ಒಟ್ಟು ಪುಟಗಳು 56. ಮುಖಬೆಲೆ 45 ರೂ. ಆಸಕ್ತರು 9008978366 ದೂರವಾಣಿಯನ್ನು ಸಂಪರ್ಕಿಸಬಹುದು.