ಅಂಗದಲ್ಲಿ ಆಚಾರ
ಅಂಗದಲ್ಲಿ ಆಚಾರವ ತೋರಿದ;
ಆ ಆಚಾರವೇ ಲಿಂಗವೆಂದರುಹಿದ.
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ;
ಆ ಅರಿವೆ ಜಂಗಮವೆಂದು ತೋರಿದ.
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ.
-ಅಕ್ಕ ಮಹಾದೇವಿ
ಇಷ್ಟಲಿಂಗ ಸಂಬಂಧವಾದ ಆಚಾರಗಳಿಂದ ಕಾಯವನ್ನೇ ಕೈಲಾಸ ಮಾಡಿಕೊಳ್ಳಬಹುದು. ಚೆನ್ನಬಸವಣ್ಣನವರು ಇಷ್ಟಲಿಂಗದೀಕ್ಷೆಗಾಗಿ ಸಿದ್ದರಾಮರಿಗೆ ಐವತ್ತು ಬಗೆಯ ಆಚಾರಗಳನ್ನು ಬೋಧಿಸಿದ್ದಾರೆ: ಪರಸ್ತ್ರೀಯನ್ನು ಬಯಸದೆ ಇರುವುದು. ಪರಧನವನ್ನು ಅಪಹರಿಸದಿರುವುದು. ಹುಸಿಯ ನುಡಿಯದಿರುವುದು. ವಿಶ್ವಾಸಘಾತ ಮಾಡದಿರುವುದು. ಪ್ರಾಣಿಹಿಂಸೆಯ ಮಾಡದಿರುವುದು. ಶರಣಸಂಕುಲವನ್ನು ಸಂತೋಷದಲ್ಲಿಡುವುದು. ಕೆಟ್ಟವರ ಸಹವಾಸ ಮಾಡದಿರುವುದು. ಸಕಲ ಜೀವಿಗಳ ಹಿತ ಬಯಸುವುದು. ಜಂಗಮದಲ್ಲಿ ಕುಲವನರಿಸದಿರುವುದು ಮುಂತಾದವು.
ಬಾಹ್ಯಕ್ರಿಯೆಗಳನ್ನು ಶುದ್ಧಗೊಳಿಸುವ ಪಂಚಾಚಾರ: ಅನ್ಯದೈವಕ್ಕೆರಗದೆ ಇಷ್ಟಲಿಂಗ ಪೂಜೆ ಮಾಡುವುದು ಲಿಂಗಾಚಾರ, ಸತ್ಯಶುದ್ಧ ಕಾಯಕವನ್ನು ಮಾಡುತ್ತ ದಯಾಭಾವದೊಂದಿಗೆ ಬದುಕುವುದು ಸದಾಚಾರ, ಜಾತಿಭೇದ ಮಾಡದೆ ಶಿವಲಾಂಛನಧಾರಿಗಳನ್ನು ಪರಶಿವನೆಂದು ಭಾವಿಸುವುದು ಶಿವಾಚಾರ, ಶಿವನಿಂದೆಯನ್ನು ಕೇಳದಿರುವುದು ಗಣಾಚಾರ ಹಾಗೂ ‘ಶರಣರೆಲ್ಲ ಹಿರಿಯರು ತಾನು ಕಿರಿಯ’ ಎಂಬ ಭಾವ ತಾಳಿ ಸೇವೆ ಮಾಡುವುದು ಭೃತ್ಯಾಚಾರ.
ಅಂತರಂಗದ ಕ್ರಿಯೆಗಳನ್ನು ಶುದ್ಧಗೊಳಿಸುವ ಸಪ್ತಾಚಾರ: ಗುರು ಲಿಂಗ ಜಂಗಮಾರಾಧನೆ ಮಾಡುವುದು ಕ್ರಿಯಾಚಾರ. ಶರಣರ ವಚನಾನುಭವ ಅರಿತು ಆಚರಿಸುವುದು ಜ್ಞಾನಾಚಾರ. ಅರಿಷಡ್ವರ್ಗಗಳಿಂದ ದೂರಾಗಿ ಬದುಕುವುದು ಭಾವಾಚಾರ. ಕೊಟ್ಟ ಭಾಷೆಯನ್ನು ನಡೆಸಿಕೊಡುವುದು ಸತ್ಯಾಚಾರ. ಪಾಲಿಗೆ ಬಂದ ಪ್ರಸಾದದಲ್ಲಿ ಸುಖಿಸುವುದು ನಿತ್ಯಾಚಾರ. ಭಕ್ತಿಯಿಂದ ಕೂಡಿರುವುದು ಧರ್ಮಾಚಾರ. ಷಟ್‌ಸ್ಥಲ ಮಾರ್ಗದಲ್ಲಿ ನಡೆದು ನಿರವಯವನ್ನು ಸಾಧಿಸುವುದು ಸರ್ವಾಚಾರ.
ತ್ರಿವಿಧ ಆಚಾರ: ಎಲ್ಲ ಜನ ಅಹುದೆಂಬುದೇ ಸದಾಚಾರ, ಹಿಡಿದ ವ್ರತ ನಿಯಮವ ಬಿಡದಿಹುದೆ ನಿಯತಾಚಾರ, ಶಿವನಿಂದೆಯ ಕೇಳದಿಹುದೇ ಗಣಾಚಾರ. ಹೀಗೆ 50 ಆಚಾರ, ಪಂಚಾಚಾರ, ಸಪ್ತಾಚಾರ ಮತ್ತು ತ್ರಿವಿಧ ಆಚಾರಗಳನ್ನು ತನ್ನಂಗದಲ್ಲಿ ಅಳವಡಿಸಿಕೊಂಡವರು ಲಿಂಗದೇಹಿಗಳು ಆಗುತ್ತಾರೆ.
‘ಅರಿವು ಹಿಡಿಯಂದಡೆ ಕುರುಹು ಹಿಡಿದರು ನೋಡಾ’ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಇಷ್ಟಲಿಂಗವು ಅರಿವಿನ ಸಂಕೇತವೇ ಆಗಿದೆ. ಈ ಅರಿವು ಜಂಗಮಲಿಂಗದ ದರ್ಶನ ಮಾಡಿಸುತ್ತದೆ. ಒಬ್ಬನೇ ದೇವರು, ಒಂದೇ ಭೂಮಿ ಮತ್ತು ಒಂದೇ ಮಾನವಜನಾಂಗ ಎಂಬ ಅರಿವೇ ಜಂಗಮದ ಅರಿವು. ಸಕಲಜೀವಾತ್ಮರನ್ನು ಒಳಗೊಂಡಿರುವಂಥದ್ದೇ ಜಂಗಮ. ಹೀಗೆ ಇಷ್ಟಲಿಂಗ ಮತ್ತು ಜಂಗಮಲಿಂಗವೆಂಬ ಉಭಯಕುಳದ ಅರಿವನ್ನು ಬಸವಣ್ಣನವರಿಂದ ಪಡೆದು ಪ್ರಾಣದಲ್ಲಿ ನೆಲೆಗೊಳಿಸಿದೆ ಎಂದು ಅಕ್ಕ ಹೇಳಿದ್ದಾಳೆ. ಇಂಥ ಜಂಗಮಜಗತ್ತನ್ನು ಒಳಗೊಂಡ ಇಷ್ಟಲಿಂಗ ಜನಕ ಬಸವಣ್ಣ ಎಂದು ಸಾರಿದ್ದಾಳೆ.