ಮಾಜಿ ಸಿಎಂ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಹಾಕಲು ಹಾಲಿ ಸಿಎಂ ಯೋಚನೆ
ಯಡಿಯೂರಪ್ಪ ವಿರುದ್ದ ಕಾಂಗ್ರೆಸ್‍ನಿಂದ ಕಣಕ್ಕಿಳಿಯಲಿದ್ದಾರಾ ಈ ಪ್ರಭಾವೀ ಮುಖಂಡ ?
ಖಾಸಗಿ ಸರ್ವೇ ಏಜೆನ್ಸಿಗಳ ಮೂಲಕ ಗುಪ್ತ ವರದಿ ತರಿಸಿಕೊಂಡ ಸಿದ್ದರಾಮಯ್ಯ?
ಶಿವಮೊಗ್ಗ, ಮಾ. 6: ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ 'ಮುಖ್ಯಮಂತ್ರಿ' ಅಭ್ಯರ್ಥಿಗಳೆಂದೇ ಬಿಂಬಿತವಾಗಿರುವ, ಹಾಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಹಾವು - ಮುಂಗಸಿಯಂತೆ ಕಾದಾಟಕ್ಕಿಳಿದಿದ್ದಾರೆ. ಇಬ್ಬರ ನಡುವಿನ ಆರೋಪ - ಪ್ರತ್ಯಾರೋಪ ತಾರಕಕ್ಕೇರಿದೆ.
ಈ ನಾಯಕರ ನಡುವಿನ ವೈಮನಸ್ಸಿನ ಕಾರಣದಿಂದಲೇ, ಅವರು ಕಣಕ್ಕಿಳಿಯುತ್ತಿರುವ ಕ್ಷೇತ್ರಗಳು ಕೂಡ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಒಬ್ಬರು ಮತ್ತೊಬ್ಬರ ಕ್ಷೇತ್ರದತ್ತ ಕಣ್ಣು ನೆಟ್ಟಿದ್ದಾರೆ. ಪರಸ್ಪರ ರಾಜಕೀಯ ದಾಳ ಉರುಳಿಸಲಾರಂಭಿಸಿದ್ದಾರೆ. ಸ್ವಕ್ಷೇತ್ರದಲ್ಲಿಯೇ ಸಂಕಷ್ಟಕ್ಕೀಡು ಮಾಡಲು ರಾಜಕೀಯ ತಂತ್ರ - ಪ್ರತಿತಂತ್ರ ರೂಪಿಸುತ್ತಿದ್ದಾರೆ. ಈ ಕಾರಣದಿಂದಲೇ ಬಿ.ಎಸ್.ಯಡಿಯೂರಪ್ಪರವರು, 'ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆದ್ದು ತೋರಿಸಲಿ' ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಶತಾಯಗತಾಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂಗೆ ಹಿನ್ನಡೆ ಮಾಡಲು ಬಿ.ಎಸ್.ವೈ. ಕಾರ್ಯತಂತ್ರ ರೂಪಿಸುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ. ಈ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಒಳ ಒಪ್ಪಂದ ಏರ್ಪಟ್ಟರೂ ಅಚ್ಚರಿಯಿಲ್ಲವೆಂಬ ವಾತಾವರಣ ಕಂಡುಬರುತ್ತಿದೆ. ಈ ಕಾರಣದಿಂದಲೇ ಸಿಎಂ ಚಾಮುಂಡೇಶ್ವರಿ ಕ್ಷೇತ್ರ ಬದಲಾವಣೆಯ ಚಿಂತನೆ ನಡೆಸುತ್ತಿರುವ ಮಾಹಿತಿಗಳೂ ಇವೆ.
ಮತ್ತೊಂದೆಡೆ ಸಿದ್ದರಾಮಯ್ಯ ಕೂಡ ಬಿ.ಎಸ್.ವೈಗೆ ತಕ್ಕ ಎದಿರೇಟು ನೀಡುವ ಯೋಜನೆ ರೂಪಿಸುತ್ತಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ ಪಕ್ಷದಿಂದ ಪ್ರಬಲ ಅಭ್ಯರ್ಥಿಯೋರ್ವರನ್ನು ಕಣಕ್ಕಿಳಿಸುವ ಅಥವಾ ಜೆಡಿಎಸ್ ಮತ್ತಿತರ ಸಮಾನಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ವಸಮ್ಮತ ಅಭ್ಯರ್ಥಿಯೋರ್ವರನ್ನು ಕಣಕ್ಕಿಳಿಸುವ ಚಿಂತನೆ ನಡೆಸುತ್ತಿದ್ದಾರೆಂಬ ಮಾಹಿತಿ ಕೇಳಿಬರುತ್ತಿದೆ. ಈ ಕಾರಣದಿಂದ ಕಳೆದ ಹಲವು ತಿಂಗಳುಗಳ ಹಿಂದಿನಿಂದಲೂ ಶಿಕಾರಿಪುರ ಕ್ಷೇತ್ರದ ರಾಜಕೀಯ ಆಗುಹೋಗುಗಳ ಬಗ್ಗೆ ಗುಪ್ತಚರ ಏಜೆನ್ಸಿ ಹಾಗೂ ಖಾಸಗಿ ಸಮೀಕ್ಷಾ ಸಂಸ್ಥೆಗಳ ಮೂಲಕ ಸಿಎಂ ನಿರಂತರವಾಗಿ ಮಾಹಿತಿ ತರಿಸಿಕೊಳ್ಳುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿ.ಎಸ್.ವೈ ಜಯ ಸಾಧಿಸುವ ಸಾಧ್ಯತೆ ಎಷ್ಟಿದೆ? ಕ್ಷೇತ್ರದಲ್ಲಿರುವ ಪ್ರಬಲ ಸಮುದಾಯಗಳ ಒಲವು ಯಾವ ಪಕ್ಷಗಳತ್ತ ಇದೆ? ಕ್ಷೇತ್ರದ ಯಾವ ಭಾಗದಲ್ಲಿ ಬಿ.ಎಸ್.ವೈಗೆ ಸಕಾರಾತ್ಮಕ - ನಕಾರಾತ್ಮಕ ಅಂಶಗಳಿವೆ? ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಭ್ಯರ್ಥಿ ಕಣಕ್ಕಿಳಿಸಿದರೆ ಬಿಜೆಪಿಗೆ ಆಗುವ ಲಾಭ - ನಷ್ಟವೇನು? ಕಾಂಗ್ರೆಸ್‍ನಿಂದ ಯಾರು ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಪ್ರಬಲ ಪೈಪೋಟಿವೊಡ್ಡಬಹುದು? ಕ್ಷೇತ್ರದ ಬಹುಸಂಖ್ಯಾತ ಮತದಾರರಾದ ಮುಸ್ಲಿಂ, ಕುರುಬ, ಬಣಜಾರ ಇತರೆ ಹಿಂದುಳಿದ ವರ್ಗಗಳ ಮತಗಳನ್ನು ಪಕ್ಷಕ್ಕೆ ಸೆಳೆಯುವುದು ಹೇಗೆ? ಎಂಬಿತ್ಯಾದಿ ಹಲವು ಅಂಶಗಳ ಕುರಿತಂತೆ ಸಿದ್ದರಾಮಯ್ಯ ವರದಿ ತರಿಸಿಕೊಂಡು ಸಮಗ್ರ ಪರಾಮರ್ಶೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಟಿಕೆಟ್ ರೇಸ್: ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿಯಲು ಈಗಾಗಲೇ ಹಲವು ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ. ಆರ್.ಪ್ರಸನ್ನಕುಮಾರ್, ಶಿಕಾರಿಪುರ ಕ್ಷೇತ್ರಕ್ಕೆ ಸೇರಿದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಮುಖಂಡರಾದ ಮಹಾಲಿಂಗಪ್ಪ ಮತ್ತಿತರರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ಈ ನಾಲ್ವರು ಟಿಕೆಟ್ ಗಿಟ್ಟಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಹೈಕಮಾಂಡ್ ಬಳಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಈ ನಡುವೆ ಟಿಕೇಟ್ ರೇಸ್‍ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರ ಹೆಸರು ಕೂಡ ದಿಢೀರ್ ಆಗಿ ಕೇಳಿಬಂದಿದ್ದು, ಇದು ಸ್ಥಳೀಯ ಕಾಂಗ್ರೆಸ್ ಪಾಳೇಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಂಜುನಾಥ ಭಂಡಾರಿಯನ್ನು, ಶಿಕಾರಿಪುರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸುವ ಕುರಿತಂತೆ ಸಿಎಂ ತಮ್ಮ ಆಪ್ತರ ಬಳಿ ಸಮಾಲೋಚನೆ ನಡೆಸಿದ್ದಾರೆ. ಜೊತೆಗೆ ಭಂಡಾರಿ ಕಣಕ್ಕಿಳಿದರೆ ಪಕ್ಷಕ್ಕೆ ಆಗುವ ಲಾಭ - ನಷ್ಟ ಕುರಿತಂತೆ ಗುಪ್ತ ವರದಿ ಕೂಡ ತರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಮಂಜುನಾಥ ಭಂಡಾರಿಯವರ ಹೆಸರು ಸೊರಬ ಕ್ಷೇತ್ರದಲ್ಲಿ ಕೇಳಿಬಂದಿತ್ತು. 'ಸೊರಬದಿಂದ ಕಣಕ್ಕಿಳಿಯುವಂತೆ ಪಕ್ಷದ ಕೆಲ ನಾಯಕರು ಸಲಹೆ ನೀಡುತ್ತಿದ್ದಾರೆ. ಆದರೆ ತಮಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿಯಿಲ್ಲದಾಗಿದ್ದು, ಲೋಕಸಭೆ ಚುನಾವಣೆಯತ್ತ ಗಮನಹರಿಸಿರುವುದಾಗಿ' ಭಂಡಾರಿಯವರು ಸ್ಪಷ್ಟಪಡಿಸಿದ್ದರು. ಈ ನಡುವೆ ಶಿಕಾರಿಪುರ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಬೇಕೆಂಬ ಚರ್ಚೆಗಳು ನಡೆಯಲಾರಂಭಿಸಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಚಿಂತನೆ ನಡೆಸಿರುವುದು ಜಿಲ್ಲೆಯ ಕಾಂಗ್ರೆಸ್ ಪಾಳೇಯದಲ್ಲಿ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಒಟ್ಟಾರೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆಂಬ ಕುತೂಹಲ ಜಿಲ್ಲೆಯ ರಾಜಕೀಯ ವಲಯದಲ್ಲಿ ಮನೆ ಮಾಡಿದೆ. ಟಿಕೆಟ್ ರೇಸ್‍ನಲ್ಲಿ ಹಲವರ ಹೆಸರುಗಳು ಕೇಳಿಬರುತ್ತಿದ್ದು, ಯಾರು ಸ್ಪರ್ಧಿಯಾಗುತ್ತಾರೆ ಎಂಬುವುದು ಇಷ್ಟರಲ್ಲಿಯೇ ಬಹುತೇಕ ಸ್ಪಷ್ಟವಾಗಲಿದೆ.
ಅಹಿಂದ ಮತಗಳತ್ತ ಸಿದ್ದು ಚಿತ್ತ...!
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಹೊರತುಪಡಿಸಿದರೆ ಮುಸ್ಲಿಂ, ಕುರುಬ, ಬಣಜಾರ್ ಮತ್ತಿತರ 'ಅಹಿಂದ' ವರ್ಗದ ಮತದಾರರ ಸಂಖ್ಯೆಯೇ ಜಾಸ್ತಿಯಿದೆ. ಯಾವುದೇ ವರ್ಗದ ಅಭ್ಯರ್ಥಿಯ ಸೋಲು - ಗೆಲುವಿನಲ್ಲಿ 'ಅಹಿಂದ' ವರ್ಗದ ಮತಗಳು ಪ್ರಮುಖವಾಗಿದೆ. ಶಿಕಾರಿಪುರ ಕ್ಷೇತ್ರದಲ್ಲಿ 'ಅಹಿಂದ' ಮತಗಳ ಪ್ರಾಬಲ್ಯದ ಮಾಹಿತಿ ಪಡೆದುಕೊಂಡಿರುವ ಸಿಎಂ ಸಿದ್ದರಾಮಯ್ಯರವರು ಈ ವರ್ಗಗಳ ಮತಗಳ ಧ್ರುವೀಕರಣದ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಕಾರಣದಿಂದ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿ, ಬಿ.ಎಸ್.ಯಡಿಯೂರಪ್ಪರನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.
ಲೋಕಸಭೆ ಎಲೆಕ್ಷನ್‍ನಲ್ಲಿ 2 ನೇ ಸ್ಥಾನ ಪಡೆದಿದ್ದ ಭಂಡಾರಿ
ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ ಕಣಕ್ಕಿಳಿದಿದ್ದರು. ಅಂದು ಕಾಂಗ್ರೆಸ್‍ನಲ್ಲಿದ್ದ, ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕುಮಾರ್ ಬಂಗಾರಪ್ಪ ಭಂಡಾರಿ ಕಣಕ್ಕಿಳಿಯುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಹಿರಂಗವಾಗಿಯೇ ಅವರ ವಿರುದ್ದ ಟೀಕಾಪ್ರಹಾರ ನಡೆಸಿದ್ದರು. ಚುನಾವಣೆಯಲ್ಲಿ ಅವರ ವಿರುದ್ದ ಕೆಲಸ ಮಾಡಿದ್ದ ಮಾತುಗಳೂ ಕೂಡ ಕೇಳಿಬಂದಿದ್ದವು. ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ ಹಾಗೂ ಜೆಡಿಎಸ್‍ನಿಂದ ಚಿತ್ರನಟ ಶಿವರಾಜ್‍ಕುಮಾರ್ ಪತ್ನಿ ಗೀತಾರವರು ಕಣಕ್ಕಿಳಿದಿದ್ದರು. 'ಕಾಂಗ್ರೆಸ್‍ನಲ್ಲಿದ್ದ ಆಂತರಿಕ ಭಿನ್ನಮತದ ಕಾರಣದಿಂದ ಭಂಡಾರಿಯವರು ಮೂರನೇ ಸ್ಥಾನಕ್ಕೆ ಕುಸಿಯಲಿದ್ದಾರೆ. ಅವರ ಮತಗಳಿಕೆ ಕಡಿಮೆಯಿರಲಿದೆ' ಎಂದು ಬಹುತೇಕ ಕಾಂಗ್ರೆಸ್‍ನವರೇ ಅಭಿಪ್ರಾಯಪಟ್ಟಿದ್ದರು.
ಆದರೆ ಫಲಿತಾಂಶ ಪ್ರಕಟವಾದಾಗ ಎಲ್ಲರ ಲೆಕ್ಕಾಚಾರ ತಲೆಕೆಳಗಾಗುವಂತಾಗಿತ್ತು. ಮಂಜುನಾಥ ಭಂಡಾರಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. 2,42,911 ಮತ ಪಡೆದಿದ್ದರು. ಭಾರೀ ನಿರೀಕ್ಷೆ ಮೂಡಿಸಿದ್ದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‍ಕುಮಾರ್ ರವರು 2,40,636 ಮತ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಈ ಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಲ್ಲಿ ಜಯ ಸಂಪಾದಿಸಿದ್ದ ಬಿ.ಎಸ್.ಯಡಿಯೂರಪ್ಪರವರು 6,06,216 ಮತ ಗಳಿಸಿದ್ದರು.