ಒಂದು ಮಾದರಿ ಬಡಾವಣೆ
‘ಲೋಹಿತ್ನಗರ’ ಎಂದು ಕಂಟ್ರಾಕ್ಟರರೇ ನಾಮಕರಣ ಮಾಡಿದ್ದು ಮಹಾನಗರ ಪಾಲಿಕೆಯಿಂದ ಅನುಮೋದನೆಯೂ ಆಗಿರಬಹುದು. ಈ ಬಡಾವಣೆಗೆ ಬಂದ ನಾವೆಲ್ಲರೂ ಹೊಸಬರೇ. ಆದರೆ ನನಗೆ ಸ್ಥಳೀಯವಾದ ದಡ್ಡಲ್ಕಾಡು, ಗೊಲ್ಲಚ್ಚಿಲ್, ನೆಕ್ಕಿಲಗುಡ್ಡೆ, ದೇರೆಬೈಲು ಇವುಗಳೆಲ್ಲ ಪರಿಚಿತವಾದ್ದರಿಂದ ನಾವಿದ್ದ ನಿವೇಶನ ಗೊಲ್ಲಚ್ಚಿಲ್ ಆಗಿದ್ದುದರಿಂದ ನಮ್ಮ ವಿಳಾಸದಲ್ಲಿ ಅದನ್ನೇ ದಾಖಲಿಸಿದ್ದೆವು. ಈ ಬಡಾವಣೆಯಲ್ಲಿ ಎರಡು ಮುಖ್ಯರಸ್ತೆಗಳಿದ್ದು ರಾಷ್ಟ್ರೀಯ ಹೆದ್ದಾರಿಯಿಂದ ಪೂರ್ವದಿಕ್ಕಿಗೆ ಇದೆ. ಒಂದನೆಯ ಮುಖ್ಯರಸ್ತೆ ನೇರವಾಗಿ ಅಂದಿನ ರಾಷ್ಟ್ರೀಯ ಹೆದ್ದಾರಿ 17 (ಇಂದಿನ 66) ಸಂಖ್ಯೆಯ ರಸ್ತೆಯಿಂದ ತಗ್ಗಿಗೆ ಇಳಿದಂತೆ ಅದರ ಬಲ ಬದಿಗೆ ಅನೇಕ ಅಡ್ಡ ರಸ್ತೆಗಳು. ಎಡಬದಿಗೆ ತಿರುಗಿದಂತೆ ಕೆಲವು ನಿವೇಶನಗಳನ್ನು ದಾಟಿ ಮತ್ತೆ ಬಲಕ್ಕೆ ಪೂರ್ವ ದಿಕ್ಕಿಗೆ ಎರಡನೆಯ ಮುಖ್ಯರಸ್ತೆ. ಎರಡೂ ಮುಖ್ಯರಸ್ತೆಗಳಲ್ಲಿ ಎರಡೂ ಬದಿಗಳಿಗೆ ನಿವೇಶನಗಳು. ಸುಮಾರು ನೂರಕ್ಕೂ ಹೆಚ್ಚಿನ ನಿವೇಶನಗಳು ಪ್ರಾರಂಭದಲ್ಲೇ ಇದ್ದು ಇಂದು ಅಕ್ಕಪಕ್ಕದ ಸ್ಥಳಗಳೂ ಮಾರಾಟವಾಗಿ ಅಲ್ಲಿಯೂ ಮನೆಗಳು ನಿರ್ಮಾಣಗೊಂಡು ಅವುಗಳೂ ಈ ಬಡಾವಣೆಯೊಳಗೆ ಸೇರಿ ಹೋಗಿವೆ. ಅಂದು ಆ ನಿವೇಶನಗಳನ್ನು ಮನೆಯನ್ನೂ ಕಟ್ಟಿಸಿಕೊಳ್ಳುವ ಷರತ್ತಿನೊಂದಿಗೆ ಖರೀದಿಸಿದವರಾಗಿದ್ದರು ನಮ್ಮಂತೆಯೇ.
ಸುಮಾರು ನೂರಕ್ಕೂ ಹೆಚ್ಚಿನ ಮನೆಗಳನ್ನು ಬಿ.ಆರ್.ಆಚಾರ್ರವರು ಕಟ್ಟಿಸಿ ಕೊಡುವುದಕ್ಕೆ ಸುಮಾರು ಏಳೆಂಟು ವರ್ಷಗಳೇ ಬೇಕಾಯ್ತು. ಇದರ ಜೊತೆಗೆ ಅವರು ಕೂಡಾ ಇದೇ ನಿವೇಶನದಲ್ಲಿ ತನಗೂ ಮನೆ ಕಟ್ಟಿಸಿಕೊಂಡು ಇಲ್ಲೇ ಇದ್ದುದರಿಂದ ಆರಂಭಿಕವಾದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಪಾಲುದಾರರೇ ಆಗಿದ್ದರು. ಹಾಗೆಯೇ ಎಲ್ಲಾ ಮನೆಗಳು ಕಟ್ಟಿ ಪೂರ್ಣಗೊಂಡು ಜನ ವಸತಿ ಪ್ರಾರಂಭವಾದಂತೆ ಒಂದು ಸೊಸೈಟಿ ಮಾಡಿಕೊಳ್ಳಬೇಕು ಎಂಬ ಕಿವಿಮಾತನ್ನು ಬಡಾವಣೆಯ ಎಲ್ಲರ ಕಿವಿಗೂ ತುಂಬಿದ್ದರು. ಬಹು ಮುಖ್ಯವಾಗಿ, ಬಡಾವಣೆಯ ಒಳಗಿನ ರಸ್ತೆ ಕಾಮಗಾರಿ, ಕುಡಿಯುವ ನೀರಿನ ಖಾಯಂ ವ್ಯವಸ್ಥೆ, ಬೀದಿ ದೀಪಗಳು, ಕಸ ವಿಲೇವಾರಿ ಇತ್ಯಾದಿ ವಿಷಯಗಳಿಗೆ ಸಂಘಟಿತವಾದ ಬೇಡಿಕೆ ಇದ್ದಾಗ ಅವು ಬೇಗನೆ ಸಾಧ್ಯವಾಗುತ್ತದೆ ಎನ್ನುವುದು ಅವರ ಅನುಭವವೂ ಹೌದು. ಅವರು ಇನ್ನೂ ಒಂದು ವಿಷಯವನ್ನು ಹೇಳಿ ಆಸೆ ಹುಟ್ಟಿಸಿದ ವಿಷಯ ಎಂದರೆ ಮಕ್ಕಳಿಗಾಗಿ ಆಟವಾಡಲು ಒಂದು ಪಾರ್ಕ್ ಹಾಗೂ ಬಡಾವಣೆಯ ಜನರ ನಿತ್ಯೋಪಯೋಗಕ್ಕೆ ಸಹಾಯವಾಗುವಂತೆ ಒಂದು ಜಿನಸಿನ ಅಂಗಡಿ, ಹಾಲು, ಹಣ್ಣು, ತರಕಾರಿಗಳ ಅಂಗಡಿಗೂ ನಿವೇಶನಗಳಿವೆ ಎಂದಿದ್ದರು. ಆದರೆ ಅದು ಮನೆಗಳೆಲ್ಲ ಪೂರ್ಣವಾಗಿ ಉಳಿದ ಕೆಲವು ಖಾಲಿ ನಿವೇಶನಗಳು ಉಳಿದು ಅವುಗಳ ಬಗ್ಗೆ ಕೇಳಿದಾಗ ಅವುಗಳ ಬಗ್ಗೆ ತಕರಾರುಗಳಿವೆ. ಆದ್ದರಿಂದ ಅವು ಕಾರ್ಯರೂಪಕ್ಕೆ ತರಲಾಗುತ್ತಿಲ್ಲ ಎಂಬುದಾಗಿ.
ಹೆಚ್ಚುವರಿ ಜಾಗ ಮಾರಾಟ ಮಾಡಬೇಕಾದ ಹಾಗೂ ಅದನ್ನು ಬಡಾವಣೆಗಾಗಿ ಪರಿವರ್ತಿಸಬೇಕಾದಾಗ ಇಂತಹ ಷರತ್ತುಗಳು ನಾಗರಿಕ ನಿಯಮಗಳಲ್ಲಿ ಇದ್ದಿರಬಹುದಾದುದು ಸಹಜವೇ ಆದರೂ ಮುಂದೆ ಅದನ್ನು ಕಾರ್ಯರೂಪಕ್ಕೆ ತಾರದೆ ಇರಬಹುದಾಗಿದ್ದು, ಆ ನಿವೇಶನಗಳನ್ನೂ ಮಾರಾಟ ಮಾಡಿರುವ ಸಾಧ್ಯತೆ ಆಗಿರುವುದನ್ನೇ ಭ್ರಷ್ಟಾಚಾರ ಎನ್ನುವುದು. ಆದರೆ ಇಲ್ಲಿ ನಿವೇಶನಗಳನ್ನು ಕೊಂಡವರೆಲ್ಲ ಯಾರೂ ಪರಸ್ಪರ ಪರಿಚಿತರಲ್ಲದಿರುವುದು. ಇನ್ನು ಉಳಿದ ಎಷ್ಟೋ ಮನೆ ಮಾಲಕರು ದೂರದ ಊರುಗಳಲ್ಲಿರುವುದು ಇವೆಲ್ಲವೂ ಇದನ್ನು ಭ್ರಷ್ಟಾಚಾರ ಎಂದು ಭಾವಿಸಲು ಸಾಧ್ಯವಾಗದ ವಿಷಯಗಳೇ. ಇನ್ನು ಕೆಲವರು ನಾವು ನಮ್ಮಲ್ಲೇ ಈ ಬಗ್ಗೆ ಚರ್ಚಿಸಿದಾಗ ಅಯ್ಯೋ, ಅದೇನು ದೊಡ್ಡ ವಿಷಯ ಬಿಡಿ. ನಮ್ಮ ಮನೆಗೆ ಸಂಬಂಧಿಸಿದ ಎಲ್ಲಾ ಕೆಲಸ ಅಂದರೆ ಬಹು ಮುಖ್ಯವಾಗಿ ಮನೆ ಕಟ್ಟುವ ಪರ್ಮಿಟ್ಟಿನಿಂದ ಮೊದಲ್ಗೊಂಡು ಮಹಾನಗರ ಪಾಲಿಕಾ ಕಚೇರಿಯಲ್ಲಿ ಮನೆ ನಂಬ್ರ ಪಡಕೊಳ್ಳುವವರೆಗಿನ ಕೆಲಸ, ನೀರಿನ ವ್ಯವಸ್ಥೆ, ಕೆಇಬಿಯಿಂದ ವಿದ್ಯುತ್ ಸಂಪರ್ಕ ಇವುಗಳೆಲ್ಲ ಯಾವುದೇ ತೊಂದರೆ ಇಲ್ಲದೆ ಎಲ್ಲವನ್ನೂ ನಿಭಾಯಿಸಿದ್ದಾರಲ್ಲಾ ಎನ್ನುವುದೇ ಎಲ್ಲರಿಗೂ ಬಹುದೊಡ್ಡ ವಿಷಯಗಳು. ಈ ಕಚೇರಿಗಳಿಗೆ ನಾವು ರಜೆ ಹಾಕಿ ಓಡಾಡುವುದು ಉಂಟೇ? ಅಂದರೆ ಈ ಕಚೇರಿಗಳ ಸಿಬ್ಬಂದಿಗೆ ಕಾಲಾನುಕಾಲಕ್ಕೆ ಯಥಾಶಕ್ತಿ ದಕ್ಷಿಣೆ ನೀಡಿದಾಗಲೇ ಸಮಯಕ್ಕೆ ಸರಿಯಾದ ಕೆಲಸ ಆಗುವುದು. ಅದನ್ನು ಅವರು ನಿಭಾಯಿಸಿದ್ದಾರೆ.
ನಾವು ನೇರವಾಗಿ ಹೋಗಿ ದಕ್ಷಿಣೆ ಕೊಡದಿದ್ದರೂ ಕಂಟ್ರಾಕ್ಟರರ ಮೂಲಕ ಅವರಿಗೆ ಸೇರಿದೆ ಎನ್ನುವ ಸತ್ಯ ಗುಟ್ಟಾಗಿ ಉಳಿದಿಲ್ಲ ಎನ್ನುವುದರ ಹಿಂದೆ ನನ್ನ ವಾದ ಇಷ್ಟೇ! ನಾವೂ ಈ ಪರೋಕ್ಷ ದಕ್ಷಿಣೆ ನೀಡುವಲ್ಲಿ ಭಾಗಿಗಳೇ ಆಗಿದ್ದೇವೆ ಎನ್ನುವುದರೊಂದಿಗೆ ಈ ದೇಶ ಇಂದು ಭ್ರಷ್ಟಾಚಾರದ ಸ್ಪರ್ಧೆಯಲ್ಲಿ ಮೇಲೇರುತ್ತಾ ಮೊದಲ ರ್ಯಾಂಕನ್ನು ಪಡೆಯುವುದಕ್ಕೆ ಈ ದೇಶದ ಬಹುಕೋಟಿ ಜನ ತಮ್ಮ ಬದುಕಿನ ವ್ಯವಹಾರಗಳಲ್ಲಿ ತಿಳಿಯದೆ ಹಾಗೂ ತಿಳಿದೇ ಒಪ್ಪಿಕೊಂಡಿರುವ ವ್ಯವಸ್ಥೆ ಇರುವಾಗ ಇದನ್ನು ಕೇವಲ ರಾಜಕೀಯ ಪ್ರತಿನಿಧಿಗಳಿಗೆ, ರಾಜಕೀಯ ಪಕ್ಷಗಳಿಗೆ ಮೀಸಲಿಡುವುದು ಶುದ್ಧ ಅಪರಾಧ. ನಾವೂ ಇದಕ್ಕೆ ಹೊಣೆಗಾರರಾಗಬೇಕಾಗಿದೆ. ಬಹುಶಃ ಈ ಒಂದು ಸಂದರ್ಭ ನಮಗೆ ತಿಳಿಯದೆ ಆದುದನ್ನು ಬಿಟ್ಟರೆ ಉಳಿದೆಲ್ಲ ಸಂದರ್ಭಗಳಲ್ಲಿ ನಾನು ಬಹು ಎಚ್ಚರಿಕೆಯಿಂದ ಇಂತಹ ಅಪರಾಧ ನಮ್ಮಿಂದ ಆಗದಂತೆ ಬದುಕುವ ಪ್ರಯತ್ನ ಮಾಡಿದ್ದೇವೆ ಎನ್ನುವುದು ನನ್ನ ತೃಪ್ತಿ.
ಈ ಬಡಾವಣೆಯ ಮನೆಗಳು ಪೂರ್ಣಗೊಳ್ಳುವವರೆಗಿನ ನಮ್ಮ ವಾಸ್ತವ್ಯ ನಗರ ಜೀವನದ ಅನೇಕ ಕಷ್ಟಗಳ ಅನುಭವಗಳನ್ನು ನೀಡಿತು. ರಸ್ತೆಗಳು ಚೆನ್ನಾಗಿಲ್ಲದ ಕಾರಣ ರಿಕ್ಷಾಗಳು ಬಡಾವಣೆಯೊಳಗೆ ಬರಲು ಕೇಳುತ್ತಿರಲಿಲ್ಲ. ಯಾರಾದರೂ ಬರುತ್ತೇವೆ ಅಂದರೆ ಒಂದೂವರೆ ಪಾಲು ಹಣ ಕೇಳುತ್ತಿದ್ದರು. ಅನಿವಾರ್ಯವಾದ ಸಂದರ್ಭಗಳಲ್ಲಿ ನಾವು ಅಸಹಾಯಕರೇ ಆಗಿದ್ದೆವು. ಅಂತಹ ರಸ್ತೆಗಳಲ್ಲಿ ರಿಕ್ಷಾ ಓಡಿಸುವವರು ನಮ್ಮ ಪಾಲಿಗೆ ಸಹಾಯಕ ಬಂಧುಗಳೆಂದೇ ಭಾವಿಸುತ್ತಿದ್ದೆವು. ಯಾಕೆಂದರೆ ಲೋಹಿತ್ನಗರ ಎಂದ ತಕ್ಷಣ ಅವರು ‘‘ಇಲ್ಲ ಬರುವುದಿಲ್ಲ’’ ಎಂದಾಗ ನಮಗಾಗುತ್ತಿದ್ದ ಅನುಭವ ಎಂದರೆ ಅದು ಅಪಮಾನ. ಒಂದರ್ಥದಲ್ಲಿ ಸಾಮಾಜಿಕ ಅಪಮಾನ ಅಂದರೆ ಏನು ಎನ್ನುವುದರ ಅನುಭವ. ಸಿಟ್ಟು ಬಂದರೂ ಅದುಮಿಟ್ಟುಕೊಳ್ಳಬೇಕಾದ ಸ್ಥಿತಿ. ಎಲ್ಲಾ ಮನೆಗಳಿಗೂ ನಳ್ಳಿ ನೀರಿನ ವ್ಯವಸ್ಥೆ, ಬೇಸಗೆಯಲ್ಲಿ ನೀರು ಬಾರದಿರುವ ಸ್ಥಿತಿ. ಕೊನೆಗೆ ಪಣಂಬೂರಿಗೆ ಶುದ್ಧ ನೀರು ಸರಬರಾಜಿನ ಪೈಪ್ನಿಂದ ನಮಗೆ ಸಂಪರ್ಕ ಜೋಡಿಸಿದಾಗ ಆ ನೀರು ಕುಡಿಯಲು ಮನಸೊಪ್ಪುತ್ತಿರಲಿಲ್ಲ.
ಕಾರಣ ಈ ಮೊದಲೇ ಗ್ರಾಹಕರ ಚಳವಳಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ನಾನು ಮಂಗಳೂರಿನ ಈ ನೀರಿನ ಪೈಪುಗಳು ಹಾಗೂ ಮುಖ್ಯರಸ್ತೆಗಳಲ್ಲಿ ಹಾಕಿದ್ದ ಡ್ರೈನೇಜ್ಗಳ ಪೈಪುಗಳು ಹತ್ತಿರವಿದ್ದು ಅವುಗಳು ಕೆಲವೆಡೆ ಒಡೆದು ಹೋಗಿ ಒಂದರ ನೀರು ಒಂದರೊಳಗೆ ಸೇರುತ್ತಿತ್ತು ಎನ್ನುವುದರ ಪ್ರಾತ್ಯಕ್ಷಿಕೆ ನೋಡಿದ್ದೆ. ಆ ಕಾರಣದಿಂದಲೇ ಈ ಬಡಾವಣೆಗೆ ಬಂದ ಹಾಗೆಯೇ ಮೊದಲಿಗೆ ಅಕ್ವಾಗಾರ್ಡ್ ಎಂಬ ನೀರಿನ ಶುದ್ಧೀಕರಣ ಯಂತ್ರವನ್ನು ಹಾಕಿಸಿಕೊಂಡಿದ್ದೆವು. ಈಗ ಬೇಸಗೆಯಲ್ಲಿ ಇಡೀ ಬಡಾವಣೆಗೆ ನಳ್ಳಿಯಲ್ಲಿ ನೀರು ಬಾರದೆ ಇದ್ದಾಗ ಕಾರ್ಪೊರೇಶನ್ ಟ್ಯಾಂಕರ್ಗಳಲ್ಲಿ, ಎಲ್ಲೆಲ್ಲಿಂದಲೋ ನೀರು ತಂದು ಮನೆಗಳಿಗೆ ಹಂಚುತ್ತಿತ್ತು. ಕೆಲವು ವರ್ಷಗಳ ಈ ತೊಂದರೆ ಮೇರಿಹಿಲ್/ಕೊಂಚಾಡಿಯ ವಾಟರ್ ಟ್ಯಾಂಕ್ಗಳ ಸಂಪರ್ಕ ನೀಡಿದ ಬಳಿಕ ಸ್ವಲ್ಪ ಸಮಯ ಸರಿ ಹೋಯ್ತು. ಮತ್ತೆ ಪುನಃ ನೀರಿಗೆ ಬರಗಾಲವೇ. ಬೇಸಗೆಯಲ್ಲಿ ನೀರಿನ ಅಭಾವವಾದರೆ ಮಳೆಗಾಲದಲ್ಲಿ ಪ್ರಾರಂಭದ ದಿನಗಳಲ್ಲಿ ತಗ್ಗಿನಲ್ಲಿದ್ದ ಮನೆಗಳ ಒಳಗೆ ನೀರು ನುಗ್ಗಿ ಅವಾಂತರಗಳಾದುವು. ನಮ್ಮ ಮನೆ ತೀರಾ ತಗ್ಗಿನಲ್ಲಿ ಇಲ್ಲದೆ ಇದ್ದುರಿಂದ ಮನೆಯೊಳಗೆ ನೀರು ಬರದಿದ್ದರೂ ಅಂಗಳವೆಲ್ಲಾ ಕೆಸರು ನೀರಿನಿಂದ ತುಂಬುತ್ತಿತ್ತು. ಎಲ್ಲಾ ಮನೆಯವರು ಈಗ ತಮ್ಮ ಮನೆಯಂಗಳ ಎತ್ತರಿಸಬೇಕಾಯ್ತು. ನಾವೂ ಕೂಡಾ ಎತ್ತರಿಸಿದಾಗ ಮನೆಯ ಗೇಟನ್ನು ಮತ್ತೆ ಮರುಜೋಡಿಸಬೇಕಾಯ್ತು. ಮುಂದಿನ ವರ್ಷಗಳಲ್ಲಿ ಮಳೆಗಾಲದ ನೀರು ಹೋಗಲು ಚರಂಡಿಗಳನ್ನು ಮಾಡಿದರೂ ಚರಂಡಿ ತುಂಬಿ ರಸ್ತೆಯೆಲ್ಲಾ ನೀರಿನಿಂದ ತುಂಬಿ ನಡೆಯುವುದು ಅಸಾಧ್ಯವಾಗುತ್ತಿತ್ತು. ಈ ದಿನಗಳಲ್ಲಿ ಈ ಬಡಾವಣೆಯ ಯಾರಲ್ಲೂ ಕಾರುಗಳಂತೂ ಇರಲಿಲ್ಲ.
ಸ್ಕೂಟರ್, ಬೈಕುಗಳು ಬಹಳ ವಿರಳವಾಗಿ ಕೆಲವರಲ್ಲಿ ಇದ್ದುವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ಬಸ್ಸಿನ ಓಡಾಟವಿತ್ತು. ಅದು ಸೂರಿಂಜೆಯಿಂದ ಕಂಕನಾಡಿಗೆ ಹೋಗುತ್ತಿತ್ತು. ಈ ಬಸ್ಸನ್ನು ಹಿಡಿಯಬೇಕಾದರೆ ಕುಂಟಿಕಾನ ಜಂಕ್ಷನ್ಗೇ ಬರಬೇಕಾಗಿತ್ತು. ಒಟ್ಟು ಇಲ್ಲಿನ ಬಡಾವಣೆಯ ಜನರ ಮೊದಲ ಕೆಲವಾರು ವರ್ಷಗಳ ಬವಣೆಗಳು ನಮಗೆಲ್ಲ ಒಂದು ಸಂಘಟಿತ ವ್ಯವಸ್ಥೆ ಬೇಕು ಎನ್ನುವುದು ಅನುಭವಗಳಿಂದ ಅರ್ಥವಾಯಿತು. ಈ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ‘ಲೋಹಿತ್ನಗರ ವೆಲ್ಫೇರ್ ಸೊಸೈಟಿ’ ಎನ್ನುವುದು. ಹಿರಿಯರಾದ ಪ್ರೊ.ಎಚ್.ಪಿ.ಸಿ.ಶೆಟ್ಟರು ಸ್ಥಾಪಕ ಅಧ್ಯಕ್ಷರಾದರು. ಅನೇಕ ಹಿರಿಯರು ಜೊತೆ ಸೇರಿಕೊಂಡರು. ಕಿರಿಯರೂ ಉತ್ಸಾಹಿಗಳೇ ಇದ್ದರು. ಹೀಗೆ ಸಂಘಟಿತವಾದ ಸಂಸ್ಥೆ ತನ್ನ ಸಮಸ್ಯೆಗಳಿಗೆ ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ಸಂಬಂಧಪಟ್ಟ ಕಚೇರಿಗಳಿಗೆ ಮನವಿ ಸಲ್ಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಇಡೀ ಬಡಾವಣೆಯ ರಕ್ಷಣೆ, ಸೌಲಭ್ಯಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಪ್ರತಿ ವರ್ಷವೂ ತನ್ನ ವಾರ್ಷಿಕೋತ್ಸವವನ್ನು ಆಚರಿಸುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ, ಕಾರ್ಪೊರೇಟರನ್ನು, ಶಾಸಕರನ್ನು, ಅಧಿಕಾರಿಗಳನ್ನು ಅತಿಥಿಗಳನ್ನಾಗಿ ಕರೆದು, ಅವರಿಗೆ ಮನವಿ ಸಲ್ಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನಗಳಿಂದ ಬಡಾವಣೆಯಲ್ಲಿಯೇ ನೀರಿನ ಖಾಯಂ ವ್ಯವಸ್ಥೆಗೆ ಬೋರ್ವೆಲ್ ಆಯಿತು. ರಸ್ತೆಗಳು ನಿರ್ಮಾಣವಾದುವು. ಕಸ ವಿಲೇವಾರಿಗೆ ವ್ಯವಸ್ಥೆ ಮಾಡಲಾಯಿತು. ರಾತ್ರಿ ವಾಚ್ಮನ್ ನೇಮಕವಾಯಿತು.
ವಾರ್ಷಿಕೋತ್ಸವಕ್ಕೆ ಸಂಬಂಧಿಸಿ ಸದಸ್ಯರಾದವರಿಗೆ, ಅವರ ಮಕ್ಕಳ ವಿವಿಧ ಸ್ಪರ್ಧೆಗಳನ್ನು ಇಟ್ಟು ಬಹುಮಾನಗಳನ್ನು ನೀಡುವುದರೊಂದಿಗೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರೊಂದಿಗೆ ಬಡಾವಣೆಯ ವಾಸಿಗಳ ಪರಿಚಯ ಪರಸ್ಪರರಿಗೆ ಆಗುವುದಕ್ಕೆ ಕಾರಣವಾಯಿತು. ಇವೆಲ್ಲವುಗಳ ಪರಿಣಾಮದಿಂದ ಇದೀಗ ಮೂವತ್ತು ವರ್ಷಗಳ ಈ ಬಡಾವಣೆಯ ವಿಸ್ತರಣೆ ಆಗಿದೆ. ಆಗ ಉದ್ಯೋಗಿಗಳಾಗಿ ತಮ್ಮ ಕಿರುವಯಸ್ಸಿಗೆ ಮನೆ ಕಟ್ಟಿಕೊಂಡವರು ನಿವೃತ್ತರಾಗುತ್ತಿದಾರೆ. ಎಲ್ಲರ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಉದ್ಯೋಗಿಗಳಾಗಿ ದೇಶದ ವಿವಿಧ ಭಾಗಗಳಲ್ಲಿ, ವಿದೇಶಗಳಲ್ಲಿ ಇದ್ದಾರೆ. ಅಂದಿನ ಅನೇಕ ಮಕ್ಕಳು ಇಂದು ಗೃಹಸ್ಥರಾಗಿ ತಂದೆ ತಾಯಂದಿರಾಗಿದ್ದಾರೆ. ಅಂದು ಮನೆ ಕಟ್ಟಿಸಿ ಬಾಡಿಗೆ ಕೊಟ್ಟವರಲ್ಲಿ ಹಲವರು ನಿವೃತ್ತರಾಗಿ ತಮ್ಮ ಸ್ವಂತ ಮನೆಗೆ ಬಂದಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳು ನೆಲೆಸಿದ ಊರಲ್ಲೇ ತಾವು ನೆಲೆಸಿ ಇಲ್ಲಿನ ಮನೆಗಳನ್ನು ಮಾರಾಟ ಮಾಡಿದವರೂ ಇದ್ದಾರೆ. ಇಂದು ಅನೇಕರಿಗೆ ರಿಕ್ಷಾದ ಆವಶ್ಯಕತೆ ಇಲ್ಲದಂತೆ ಹೆಚ್ಚಿನ ಎಲ್ಲರ ಮನೆಗಳಲ್ಲೂ ಕಾರುಗಳು ಇದ್ದು ಇಡೀ ಬಡಾವಣೆಯೇ ಮೇಲ್ಮಧ್ಯಮ ವರ್ಗದ ಬಡಾವಣೆಯಾಗಿದೆ. ಅಂದು ಬ್ಯಾಂಕ್ಗಳಲ್ಲಿ ಸಣ್ಣ ಹುದ್ದೆಯಲ್ಲಿದ್ದವರು ಅನೇಕರು ಅಧಿಕಾರಿಗಳಾಗಿ ನಿವೃತ್ತರಾಗಿದ್ದಾರೆ. ಸಾಮಾಜಿಕ ನೆಲೆಯಲ್ಲಿ ಈ ಬಡಾವಣೆಯನ್ನು ಗಮನಿಸಿದರೆ ಗೌರವಕೊಟ್ಟು ಗೌರವ ಪಡೆಯುವ ಪ್ರಜ್ಞಾವಂತ ಬಡಾವಣೆಯಾಗಿದೆ. ಅನಗತ್ಯವಾದ ನೆರೆಹೊರೆ ಜಗಳವಿಲ್ಲದಂತೆಯೇ ಅನಗತ್ಯವಾಗಿ ಒಬ್ಬರ ಮನೆಗೆ ಒಬ್ಬರು ಹರಟೆ ಹೊಡೆಯಲು ಹೋಗುವಂತಹ ಜಾಯಮಾನವೂ ಕಡಿಮೆಯೇ. ಆಧುನಿಕ ಜೀವನ ಶೈಲಿಯಲ್ಲಿ ಲಿಂಗಭೇದವಿಲ್ಲದೆ ಇಲ್ಲಿನ ಗಂಡು ಹೆಣ್ಣು ಮಕ್ಕಳೂ ಸಮಾನವಾಗಿ ವಿದ್ಯಾವಂತರಾಗಿರುವುದು, ಪ್ರತಿಭಾವಂತರಾಗಿರುವುದರಿಂದ ಇದೊಂದು ಮಾದರಿ ಬಡಾವಣೆ ಎಂದರೆ ಸರಿಯಾದ ಮಾತು. ಇನ್ನೊಂದು ಬಹುಮುಖ್ಯ ಅಂಶ ಪ್ರಾರಂಭದಿಂದಲೂ ಇಲ್ಲಿನ ಅನೇಕ ಮನೆಗಳಲ್ಲಿ ಗಂಡ ಹೆಂಡತಿಯರಿಬ್ಬರೂ ಉದ್ಯೋಗಿಗಳಾಗಿದ್ದುದರಿಂದ ಇಲ್ಲಿನ ಮಹಿಳೆಯರೂ ಗೌರವಾನ್ವಿತರೇ ಆಗಿರುವುದರ ಜೊತೆಗೆ ಮನೆಯಲ್ಲಿದ್ದ ಗೃಹಿಣಿಯರೂ ವಿದ್ಯಾವಂತರೇ ಆಗಿರುವುದರಿಂದ ಈ ಬಡಾವಣೆಯಲ್ಲಿ ಒಂದು ಸುಸಂಸ್ಕೃತ ಸಭ್ಯ ವಾತಾವರಣ ಸಾಮಾನ್ಯವಾಗಿ ಎದ್ದು ಕಾಣುತ್ತದೆ.
ನಮ್ಮ ಮನೆಗೆ ಬರುವ ಬೇರೆ ಊರಿನ ಸ್ನೇಹಿತರಿಗೆಲ್ಲಾ ಈ ಬಡಾವಣೆಯು ಬೆಂಗಳೂರು, ಮೈಸೂರು ನಗರವನ್ನು ನೆನಪಿಸುತ್ತದೆ. ಮಾತ್ರವಲ್ಲ ಎಲ್ಲರೂ ಮೆಚ್ಚುಗೆಯನ್ನು ಸೂಚಿಸುತ್ತಾರೆ. ಮತ, ಜಾತಿ, ಧರ್ಮಗಳ ಹಿನ್ನೆಲೆಯಲ್ಲೂ ಒಂದೆರಡು ಮನೆಗಳಾದರೂ ಇದ್ದು ಸರ್ವ ಧರ್ಮ, ಜಾತಿ, ಮತಗಳಿಂದ ಕೂಡಿದೆ ಎನ್ನುವುದು ಸಂತೋಷದ ವಿಷಯವೇ. ಅಂದು ನೆಲ ಅಂತಸ್ತಿನಲ್ಲೇ ಮನೆ ಕಟ್ಟಿಸಿಕೊಂಡ ಹಲವರು ಇಂದು ಮಹಡಿ ಕಟ್ಟಿಸಿಕೊಂಡಿದ್ದಾರೆ. ಒಂದರ್ಥದಲ್ಲಿ ಇಲ್ಲಿರುವ ನಿವಾಸಿಗಳು ಆರ್ಥಿಕವಾಗಿ ಸ್ವತಂತ್ರರು. ನನ್ನ ಮಕ್ಕಳು, ಅವರ ವಯಸ್ಸಿನ ಇತರ ಮನೆಯ ಮಕ್ಕಳೆಲ್ಲಾ ಬಸ್ಸಲ್ಲೇ ಓಡಾಡಿ ಶಾಲಾ ಕಾಲೇಜುಗಳಿಗೆ ಹೋಗಿದ್ದರೆ, ಇಂದಿನ ಚಿಕ್ಕ ಮಕ್ಕಳು ರಿಕ್ಷಾ, ಕಾರು, ವ್ಯಾನು, ಶಾಲಾ ಬಸ್ಸುಗಳಲ್ಲಿ ಓಡಾಡುತ್ತಾರೆ. ಪ್ರಾರಂಭದ ದಿನಗಳಲ್ಲಿ ಬಡವಾಣೆಯ ಆಸುಪಾಸಿನ ಮನೆಗಳಲ್ಲಿ ದನಕರುಗಳಿದ್ದುದರಿಂದ ಮನೆಗೆ ಹಾಲು ತಂದು ಕೊಡುವವರಿದ್ದರು. ಈಗ ಎಲ್ಲರಿಗೂ ನಂದಿನಿ ಹಾಲಿನ ಪ್ಯಾಕೆಟೇ ಗತಿಯಾಗಿದೆ. ಅಂದು ಹೀಗೆಯೇ ನೆಕ್ಕಿಲಗುಡ್ಡೆ, ದೇರೆಬೈಲಿನ ಮನೆಗಳಿಂದ ತೆಂಗಿನಕಾಯಿ ತರುತ್ತಿದ್ದರೆ ಇಂದು ಪ್ರತಿಯೊಂದು ಮನೆಯಲ್ಲೂ ಅಂದು ನೆಟ್ಟ ಮರಗಳಲ್ಲಿ ಕಾಯಿಗಳು ತುಂಬಿ ಮನೆಗಳಿಗೆ ಸಾಕಾಗುವಷ್ಟು ದೊರೆಯುತ್ತದೆ. ಎಲ್ಲರ ಮನೆಗಳಲ್ಲಿ ಅಂದು ಮಲ್ಲಿಗೆ, ಜಾಜಿ, ದಾಸವಾಳ ಹೂವುಗಳು ಮನೆಯಂಗಳವನ್ನು ಅಲಂಕರಿಸಿದ್ದರೆ ಇಂದು ಹೆಚ್ಚಿನ ಮನೆಯಂಗಳದಲ್ಲಿ ಸಿಮೆಂಟಿನ ಕಾಂಕ್ರಿಟ್ ಅಥವಾ ಟೈಲ್ಸ್, ಇಂಟರ್ಲಾಕ್ಗಳನ್ನು ಹಾಕಿರುವುದರಿಂದ ಹೂಕುಂಡಗಳಲ್ಲಿ ನರ್ಸರಿಯಿಂದ ತಂದಿರುವ ಹೆಸರು ತಿಳಿಯದಿದ್ದರೂ ಅಂದವಾದ ಹೂಗಳು ಅರಳುತ್ತಿವೆ.
ಹೀಗೆ ಈ ಬಡಾವಣೆಯೊಳಗೆ ಒಂದು ತಲೆಮಾರಿನ ಬದುಕು ಕೊನೆಗೊಳ್ಳುತ್ತಾ ಎರಡನೇ, ಮೂರನೇ ತಲೆಮಾರಿನವರ ಬದುಕಿನ ಆಧುನಿಕತೆ ಹಾಗೂ ಕೆಲವು ಸಾಂಪ್ರದಾಯಕತೆಯ ಮಿಶ್ರಣದ ಬದುಕನ್ನು ಕಾಣುತ್ತಿದ್ದೇವೆ. ಇನ್ನು ಈ ಬಡಾವಣೆಯ ಹೊರಗಿನ ಪರಿಸರದಲ್ಲಿ ಆದ ಬದಲಾವಣೆಗಳಲ್ಲಿ ಮುಖ್ಯವಾದುದು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣದೊಂದಿಗೆ ಇಮ್ಮುಖವಾಗಿರುವ ರಸ್ತೆಗಳಲ್ಲಿ ದಿನವಿಡೀ ವಾಹನಗಳ ಓಡಾಟ. ಜೊತೆಗೆ ಫ್ಲೈಓವರ್ ಬಂದು ವಾಹನವುಳ್ಳ ಮಂದಿಗೆ ಉರ್ವಾಸ್ಟೋರ್ಸ್ ಎನ್ನುವ ಊರೇ ದೂರವಾದ ಹಾಗಾಗಿದೆ. ಹಾಗೆಯೇ ನಮ್ಮ ಬಡಾವಣೆಗೆ ಇರುವ ಸರ್ವಿಸ್ ರಸ್ತೆಯಲ್ಲಿ ಕಾರುಗಳ ಬೃಹತ್ ಶೋರೂಮ್ನೊಂದಿಗೆ ಕಾರುಗಳ ಸರ್ವಿಸ್ ಸೆಂಟರ್ಗಳಿದ್ದು ಬಡಾವಣೆಗೆ ಒಂದಿಷ್ಟು ತೊಂದರೆಯಾಗುತ್ತಿರುವುದೂ ಇದೆ. ಹಾಗೆಯೇ ಇದೀಗ ಹೊಸದಾಗಿ ಆರಂಭವಾಗಿರುವ ಹೊಟೇಲ್ ಒಂದು ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಅನುಕೂಲವಾದುದಾದರೂ ಅಲ್ಲಿನ ಸದ್ದು ನಮ್ಮ ಬಡಾವಣೆಯ ಒಳಗೆ ಸೇರಿಕೊಂಡಂತೆ ಸಮೀಪವಾಗಿ ಅಲ್ಲಿನ ಅಡುಗೆ ಯಂತ್ರಗಳ ಸದ್ದು ತೊಂದರೆ ಕೊಟ್ಟದ್ದೂ ಇದೆ.
ಇವನ್ನೆಲ್ಲಾ ತೊಂದರೆ ಎನ್ನುವುದು ನಿಜವಾದರೂ ‘‘ಸಂತೆಯೊಳಗೆ ಒಂದು ಮನೆಯ ಮಾಡಿ ಶಬುದಕ್ಕಂಜಿದೊಡೆ ಎಂತಯ್ಯೆ’’ ಎಂದು ಅಕ್ಕಮಹಾದೇವಿ ಹೇಳಿದ ಹಾಗೆ ಇವುಗಳಿಗೆ ಅಂಜದೆ ಸಮಾಧಾನಿಯಾಗಿರಬೇಕಾಗಿದೆ ನಾವು. ನಗರದ ವಾಸ್ತವ್ಯ ಅಂದರೆ ಹಾಗೆಯೇ. ಶಬ್ದಮಾಲಿನ್ಯ, ವಾಯುಮಾಲಿನ್ಯ ಅನುಭವಕ್ಕೆ ದಕ್ಕುವಂತಹುದರ ಜೊತೆಗೆ ಮಲೇರಿಯಾ, ಪೈಲೇರಿಯಾ, ಅಸ್ತಮಾ, ಧೂಳಿನ ಅಲರ್ಜಿ, ಚರ್ಮದ ಅಲರ್ಜಿಗಳನ್ನು ಅನುಭವಿಸಬೇಕಾದುದು ಅನಿವಾರ್ಯ ಎಂಬಂತಾಗಿದೆ. ಇನ್ನು ನಮ್ಮ ಮಂಗಳೂರು ಸಿಟಿಯೇ ಸ್ಮಾರ್ಟ್ ಸಿಟಿಯಾಗಲಿದೆ ಎಂದಾಗ ಆ ಸ್ಮಾರ್ಟ್ನೆಸ್ನ ಹೆಸರಲ್ಲಿ ಇನ್ನೆಷ್ಟು ಮರಗಳು ಉರುಳಲಿದೆಯೋ?. ಹಸಿರು ಎನ್ನುವುದು ಉಸಿರಾಗದ ನಮ್ಮ ಸ್ಥಿತಿ ಎಂತಹುದಾಗಬಹುದು ಎಂಬ ಬಗ್ಗೆ ವೇಗವಾಗಿ ಬದಲಾಗುವ ಈ ವರ್ತಮಾನಕ್ಕೆ ನಾವು ಯೋಗ್ಯರಾಗುತ್ತೇವೋ ಇಲ್ಲವೋ ಎಂಬ ಅನುಮಾನ ಪ್ರಾರಂಭವಾಗಿದೆ. ಈ ಅನುಮಾನಕ್ಕೆ ನಮ್ಮ ವಯಸ್ಸು ಕಾರಣವೋ? ಅಲ್ಲ ನಮ್ಮನ್ನು ಸುತ್ತಿರುವ ಸಾಮಾಜಿಕ ಬದುಕು ಕಾರಣವೋ? ತಿಳಿದಿಲ್ಲ.