ಭೂದೇವಿಯ ಸಖಿ ಶ್ರೀದೇವಿ
ಶಾಮಣ್ಣನವರ ಬೆನ್ನಿಗೆ ನಿಂತು ಅವರ ಬದುಕಿಗೆ ಒಂದು ಅರ್ಥಪೂರ್ಣತೆ ತಂದು ತನ್ನ ಅಸ್ಮಿತೆಯನ್ನೂ ಉಳಿಸಿಕೊಂಡಿರುವ ಶ್ರೀದೇವಿಯವರು ನಮ್ಮ ನಡುವಿನ ಹೆಮ್ಮೆಯ ರೈತ ಮಹಿಳೆ... ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯು ಸಹಭಾಗಿ ಸಂಘಟನೆಗಳ ಜೊತೆಗೂಡಿ ಶಿವಮೊಗ್ಗದಲ್ಲಿ ಮಾರ್ಚ್ ಎಂಟು ಮತ್ತು ಒಂಬತ್ತರಂದು ನಡೆಸಲಿರುವ ವಿಶ್ವ ಮಹಿಳಾ ದಿನದ ಜಾಥಾ ಉದ್ಘಾಟಿಸಲಿದ್ದಾರೆ.
ರೈ ತ ನಾಯಕ, ಸಮಾಜವಾದಿ ಹೋರಾಟಗಾರ ಕಡಿದಾಳು ಶಾಮಣ್ಣನವರಿಗೆ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಕೊಡಲು ನಿರ್ಧರಿಸಿದಾಗ ಆ ವಿಶ್ವವಿದ್ಯಾನಿಲಯದ ಕುಲಪತಿಗಳು ಶಾಮಣ್ಣನವರು ಅದಕ್ಕೆ ಒಪ್ಪದೇ ಇರಬಹುದೆಂದು ಶಾಮಣ್ಣನವರ ಹಿತಚಿಂತಕರ ಮೂಲಕ ಶಾಮಣ್ಣನವರ ಮಡದಿ ಶ್ರೀದೇವಿಯವರಿಗೆ ಗೌರವ ಡಾಕ್ಟರೇಟ್ ಪಡೆಯಲು ಶಾಮಣ್ಣನವರನ್ನು ಒಪ್ಪಿಸಲು ವಿನಂತಿಸಿದ್ದರು. ರಾಜ್ಯ ಸರಕಾರ ನೀಡಿದ್ದ ಮೈಸೂರು ದಸರಾ ಉದ್ಘಾಟನೆಯ ಗೌರವವನ್ನು ಶಾಮಣ್ಣನವರು ವಿನಯದಿಂದಲೇ ತಿರಸ್ಕರಿಸಿದಾಗ ಮತ್ತೆ ಶ್ರೀದೇವಿಯವರ ಮೇಲೆ ಶಾಮಣ್ಣರನ್ನು ಒಪ್ಪಿಸಲು ಒತ್ತಡ ತರಲಾಯಿತು.. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂದರ್ಭದಲ್ಲೂ ರಾಜ್ಯೋತ್ಸವ ಪ್ರಶಸ್ತಿ ನೀಡಿದರೆ ಶಾಮಣ್ಣನವರು ಪಡೆಯುತ್ತಾರೆಯೇ ಎಂದು ಶ್ರೀದೇವಿಯವರನ್ನೇ ಕೇಳಲಾಯಿತು... ಈ ಎಲ್ಲ ಸಂದರ್ಭದಲ್ಲೂ ಶ್ರೀದೇವಿಯವರದು ಒಂದೇ ಉತ್ತರ ‘‘ಶಾಮಣ್ಣನವರ ತತ್ವ, ಸಿದ್ದಾಂತ ಮತ್ತು ಬದ್ದತೆಗೆ ನಾನು ಭಂಗ ತರಲಾರೆ. ಶಾಮಣ್ಣನವರು ಆಸೆ ಪಡದ ಪ್ರಶಸ್ತಿ, ಗೌರವಗಳನ್ನು ತೆಗೆದುಕೊಳ್ಳಿ ಎಂದು ನಾನು ಅವರ ಮೇಲೆ ಯಾವುದೇ ಕಾರಣಕ್ಕೂ ಒತ್ತಡ ತರಲಾರೆ. ಅವರ ಇಷ್ಟವೇ ನನ್ನ ಇಷ್ಟ.’’ ಹೀಗೆಂದು ಸಾದಾ ಸೀದಾ ಉತ್ತರ ನೀಡಿ ಬದ್ಧತೆ ಮೆರೆದವರು ಶ್ರೀದೇವಿ ಶಾಮಣ್ಣ. ಇವತ್ತು ಶಾಮಣ್ಣನವರು ಹೋರಾಟಗಾರರಾಗಿ ಪ್ರಾಮಾಣಿಕ ಜೀವನ ನಡೆಸಲು ಸಾಧ್ಯವಾಗಿದ್ದರೆ ಅದು ಶ್ರೀದೇವಿಯವರಿಂದ.
1980ರಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಲಂಕೇಶ್ ಬರೆಯುತ್ತಾರೆ ‘‘ಶ್ರೀದೇವಿಯವರೇ ಕೃಷಿ ಮತ್ತು ಮನೆಯ ಜವಾಬ್ದಾರಿ ಎರಡನ್ನು ನಿರ್ವಹಿಸುತ್ತಿರುವುದರಿಂದ ಶಾಮಣ್ಣನವರ ಗದ್ದೆ, ತೋಟ, ಮನೆ, ಹೋರಾಟ ಎಲ್ಲವೂ ಉಳಿದುಕೊಂಡಿದೆ. ಶಾಮಣ್ಣನವರೇ ಈ ಎಲ್ಲದರ ಜವಾಬ್ದಾರಿ ತೆಗೆದುಕೊಂಡಿದ್ದರೆೆ ಎಲ್ಲದರ ಕಥೆಯೂ ಮುಗಿಯುತ್ತಿತ್ತು’’ ಹೀಗೆಂದು ಸ್ವತಃ ಶಾಮಣ್ಣನವೇ ಲಂಕೇಶರ ಎದುರಿಗೆ ಹೇಳಿದ್ದಂತೆ.
ಇವತ್ತಿಗೂ ರೈತರ ಬಗ್ಗೆ ಮಿಡಿಯುವ, ಮೊದಲಿನಂತೆ ರೈತ ಹೋರಾಟ ಗಟ್ಟಿಗೊಳ್ಳಬೇಕು ಎಂಬ ಚಿಂತೆನೆಯುಳ್ಳ ಶ್ರೀದೇವಿ ತಾವಿರುವ ಹೊಳೆಹೊನ್ನೂರು ಸಮೀಪದ ಭಗವತೀಕೆರೆ ಊರಿನ ಸಮಸ್ತರಿಗೂ ತಾಯಿ ಸಮಾನರು. ಈ ಇಳಿಸಂಜೆಯ ಬದುಕಲ್ಲೂ ಪಟ್ಟಣದ ಬದುಕಿಗೆ ಆಸೆ ಪಡದೇ ಸುತ್ತಮುತ್ತಲ ಊರಿನ ಬಹುತೇಕ ರೈತರು ಅಡಿಕೆ ಚೇಣಿಗೆ ಕೊಟ್ಟು ನಗರ ಸೇರಿದ್ದರೂ.. ನಮ್ಮ ತೋಟದ ಅಡಿಕೆ ಕೊಯ್ಲು ನಮ್ಮನೆ ಅಂಗಳದಲ್ಲೆ ನಡೆಯಬೇಕು... ಯಾರಿಗೋ ಚೇಣಿಗೆ ಕೊಟ್ಟು ರೈತರು ಅನಿಸಿಕೊಳ್ಳುವುದರಲ್ಲಿ ಅರ್ಥವೇನಿದೆ? ಎಂದು ತಮ್ಮ ಇಡೀ ತೋಟ, ಗದ್ದೆಯ ಉಸ್ತುವಾರಿಯನ್ನು ತಾವೇ ನಿಂತು ನೋಡಿಕೊಳ್ಳುತ್ತಾರೆ. ಒಣಗಿದ ಅಡಿಕೆ ಆಯುವುದರಿಂದ ಹಿಡಿದು ಒಂದು ಮಾವಿನ ಕಾಯಿ, ಒಂದು ಹಲಸಿನಕಾಯಿ, ಒಂದು ತೆಂಗಿನ ಕಾಯಿ, ಮನೆಯ ಎದುರಿನ ಮರದ ಚಿಕ್ಕು ಹಣ್ಣು, ದಿವಿ ಹಲಸು ಯಾವುದನ್ನೂ ನಿರುಪಯುಕ್ತವಾಗದಂತೆ ಜೋಪಾನ ಮಾಡುವ ಶ್ರೀದೇವಿ ತೋಟಕ್ಕೂ ಮನೆಗೂ ಓಡಾಡುತ್ತಲೇ ಎಲ್ಲ ಕೆಲಗಳನ್ನು ನಿರ್ವಹಿಸುವ ಪರಿಯಲ್ಲೇ ಹೊಸ ತಲೆಮಾರಿನ ಯುವಕ ಯುವತಿಯರಿಗೆ ಬದುಕು ನಿರ್ವಹಣೆಯ ಹಲವು ಪಠ್ಯಗಳಡಗಿದೆ. ಜೊತೆಗೆ ಶ್ರೀದೇವಿ ಪಕ್ಷಿಗಳಿಗೆ ತೋಟದ ಹಣ್ಣು-ಕಾಯಿ ಉತ್ಪನ್ನದ ಒಂದು ಪಾಲು, ಕೆಲಸದವರಿಗೆ ಮತ್ತೊಂದು ಪಾಲು ಮೀಸಲಿಟ್ಟು ನಂತರ ತಮ್ಮ ಪಾಲು ಪಡೆಯುವವರು. ಎಲ್ಲವನ್ನೂ ತಾವೇ ಭೋಗಿಸಬೇಕೆಂಬ ತುಸು ಹಪಾಹಪಿಯೂ ಇಲ್ಲದವರು.
ಶಾಮಣ್ಣನವರ ಜೊತೆ ಅಕ್ಷರತುಂಗಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಾಟೀನು ಬೆಳಕಲ್ಲಿ ಸುತ್ತಮುತ್ತಲ ಹಳ್ಳಿಗರಿಗೆ ಅಕ್ಷರ ಕಲಿಸಿದ್ದು, ತಮ್ಮೂರಿನ ಹೆಣ್ಣುಮಕ್ಕಳನ್ನೆಲ್ಲ ಕಲೆ ಹಾಕಿ ತಮ್ಮೂರಿನಲ್ಲಿ ಸಾರಾಯಿ ನಿಷೇಧ ಹೋರಾಟ ಮಾಡಿದ್ದು ಮತ್ತು ರೈತ ಸಂಘದ ಹತ್ತು ಹಲವು ಜಾಥಾ, ಹೋರಾಟಗಳಲ್ಲಿ ತಮ್ಮ ಎಳೆಯ ಮಕ್ಕಳನ್ನು ಕಟ್ಟಿಕೊಂಡೇ ಭಾಗಿಯಾಗಿದ್ದು, ತಮ್ಮಿಬ್ಬರು ಹೆಣ್ಣುಮಕ್ಕಳು ಅಲ್ಲಿ ರೈತ ಗೀತೆಗಳನ್ನು ಹಾಡುತ್ತಿದ್ದುದು, ಇವರ ಮನೆಯಂಗಳವೇ ಹಲವು ಸರಳ ವಿವಾಹ, ಅಂತರ್ಜಾತಿ ಪ್ರೇಮವಿವಾಹಕ್ಕೆ ವೇದಿಕೆಯಾಗಿದ್ದು ಇವೆಲ್ಲವೂ ಶ್ರೀದೇವಿಯವರು ಮತ್ತೆ ಮತ್ತೆ ನೆನಪಿಸಿಕೊಳ್ಳಬಯಸುವ ಚೆಂದದ ದಿನಮಾನಗಳು.
ಶ್ರೀದೇವಿ ಕನ್ನಡದ ಪ್ರಸಿದ್ಧ ಲೇಖಕರಾದ ಹಾ.ಮಾ ನಾಯಕರ ಸಹೋದರಿ. ಮೈಸೂರಿನಲ್ಲಿ ಹಾ.ಮಾ ನಾಯಕರ ಮನೆಯಲ್ಲಿದ್ದುಕೊಂಡೇ ಬಿಎ ವಿದ್ಯಾಭ್ಯಾಸ ಮಾಡಿರುವ ಶ್ರೀದೇವಿ ಬಾಲ್ಯದಿಂದ ಬಲ್ಲ ಕಡಿದಾಳು ಶಾಮಣ್ಣ ಅವರನ್ನು ಓದಿನ ದಿನಗಳಲ್ಲಿ ಮೈಸೂರಿನಲ್ಲಿ ಇದ್ದಾಗ ಹತ್ತಿರದಿಂದ ಅರಿತು ಮದುವೆಯಾದವರು. ‘‘ಶಾಮಣ್ಣನವರ ಹಳ್ಳಿಯಲ್ಲಿ ನೆಲೆಸುವ ನಿರ್ಧಾರ, ರೈತಾಪಿ ಮಾಡಿಯೇ ಬದುಕುವ ನಿರ್ಧಾರ, ಸಮಾಜವಾದಿ ತತ್ವದ ಸೆಳೆತ, ಸೃಜನಶೀಲ ಸಾಹಸಗಳು ಎಲ್ಲ ಗೊತ್ತಿದ್ದೂ ನೀವು ಶಾಮಣ್ಣನವರನ್ನು ಮದುವೆಯಾಗುವ ಮತ್ತು ಅವರೊಂದಿಗೆ ಹಳ್ಳಿಯಲ್ಲೇ ಬದುಕು ಕಳೆಯುವ ರಿಸ್ಕ್ ತೆಗೆದುಕೊಂಡಿರಲ್ಲ’’ ಎಂದು ಶ್ರೀದೇವಿಯವರನ್ನು ಕೇಳಿದರೆ ಅವರು ‘‘ಪ್ರೀತಿ ಪ್ರೇಮಕ್ಕೆ ಸಾಟಿ ಯಾವುದೂ ಇಲ್ಲ. ಅದಿದ್ದರೆ ಎಲ್ಲಿಯಾದರೂ ಬದುಕು ಸಾಗಿಸುವುದಕ್ಕೆ ಸಿದ್ಧರಾಗುತ್ತೇವೆ. ಶಾಮಣ್ಣನವರು ಮದುವೆಗೆ ಮುಂಚೆಯೇ ಭಗವತೀಕೆರೆಯಲ್ಲಿ ರೈತಾಪಿ ಮಾಡುತ್ತಾ ಬದುಕುವ ನಿರ್ಧಾರ ತೆಗೆದುಕೊಂಡಿದ್ದರು. ನನಗೂ ಹಳ್ಳಿಯ ಬದುಕೇ ಸುಖ ಎನಿಸುತ್ತಿತ್ತು. ಆದ್ದರಿಂದ ಸಂತೋಷದಿಂದಲೇ ನಾನು ಹಳ್ಳಿಯಲ್ಲಿ ಸಂಸಾರ ಶುರು ಮಾಡಿದೆ. ಈ ಹಳ್ಳಿಯಲ್ಲಿ ನೆಲೆ ನಿಂತು ಅರೆ ಶತಮಾನವಾಗಿದ್ದರೂ ನಮ್ಮಿಬ್ಬರ ಜೊತೆಗೂಡಿದ ಹಳ್ಳಿಯ ಬದುಕು ರುಚಿ ಕಳೆದುಕೊಂಡಿಲ್ಲ’’ ಎನ್ನುವರು.
ಕೃಷಿ ಕಾರ್ಮಿಕರ ಸಮಸ್ಯೆ, ಬೆಳೆಗೆ ತಗಲುವ ರೋಗಗಳು, ಬೆಲೆಯಲ್ಲಿ ಏರಿಳಿತ ಹೀಗೆ ಹತ್ತುಹಲವು ಸವಾಲುಗಳನ್ನು ಎದುರಿಸುತ್ತಲೇ ಇರುವ ಶ್ರೀದೇವಿ ಮತ್ತು ಶಾಮಣ್ಣ ಎಲ್ಲಿಯೂ ಕೃಷಿಯ ಬಗೆಗೆ ಆಸಕ್ತಿ ಕಳೆದುಕೊಳ್ಳದೆ ಶ್ರದ್ದೆಯಿಂದ ರೈತಾಪಿ ಬದುಕು ಮಾಡುತ್ತಿದ್ದಾರೆ. ಶ್ರೀದೇವಿ ಹೋರಾಟದಿಂದ ಎಷ್ಟು ಸಾರ್ಥಕತೆ ಪಡೆದಿದ್ದಾರೋ ಅಷ್ಟೇ ಕಷ್ಟ ನಷ್ಟ ಎದುರಿಸಿದ್ದಾರೆ. ರೈತ ಹೋರಾಟ ಚೈತನ್ಯದಾಯಕವಾಗಿದ್ದಾಗ ಇವರ ಮನೆಯೇ ಅದೆಷ್ಟೋ ರೈತರ ಆಶ್ರಯ ತಾಣವಾಗಿತ್ತು. ಜೊತೆಗೆ ರೈತ ಹೋರಾಟಗಾರರ, ಚಳವಳಿಯ ಕಷ್ಟ ನಷ್ಟದ ಸಂದರ್ಭದಲ್ಲಿ ತಮ್ಮ ಮನೆಯ ತೆಂಗಿನಕಾಯಿಯನ್ನೋ, ಭತ್ತವನ್ನೋ ಮಾರಿ ಚಳವಳಿಯ ಸಾಲ ತೀರಿಸಲು ಶ್ರೀದೇವಿಯವರು ಹಿಂದೆ ಮುಂದೆ ನೋಡಿಲ್ಲ. ಅಂತರ್ಜಾತಿ ಮದುವೆಗಳಿಗೆ, ಪ್ರೇಮವಿವಾಹಿತರಿಗೆ ಶಾಮಣ್ಣ-ಶ್ರೀದೇವಿ ದಂಪತಿ ಬೆನ್ನಿಗೆ ನಿಂತ ಕಾರಣಕ್ಕೆ ಶ್ರೀದೇವಿಯವರ ಮನೆಗೆ ಕಲ್ಲು ಬಿದ್ದಿದ್ದು, ಹತ್ತು ಹಲವು ಬಯ್ಗುಳ ತಿಂದಿದ್ದು, ಶಾಮಣ್ಣ ಅವರ ಮೇಲೆ ದೈಹಿಕ ಹಲ್ಲೆ ನಡೆಯುವಂತಹ ಸಂದರ್ಭಗಳು ಸೃಷ್ಟಿಯಾಗಿದ್ದರೂ ಈ ದಂಪತಿ ಯಾವತ್ತೂ ಇಂತಹ ಪ್ರಕ್ರಿಯೆಗಳಿಂದ ವಿಚಲಿತರಾಗದೇ ಇಂದಿಗೂ ಸರಳ ಮದುವೆ ಮಾಡಿಸಲು ಸ್ವಂತದ ಕೆಲಸಗಳನ್ನು ಬದಿಗೊತ್ತಿ ಸಂತೋಷದಿಂದ ಹೋಗುತ್ತಾರೆ.
ಇಳಿ ಸಂಜೆಯ ದಿನಗಳಲ್ಲೂ ಶ್ರೀದೇವಿಯವರ ಜೀವನ ಪ್ರೇಮ ತುಸುವೂ ಕುಂದಿಲ್ಲ. ಶ್ರೀದೇವಿಯವರು ಮದುವೆಯಾಗಿ ಶಾಮಣ್ಣನವರ ಜೊತೆ ಬಂದಾಗ ಭಗವತೀಕೆರೆಯ ಮನೆಯಲ್ಲಿ ಒಂದು ಬಚ್ಚಲು ಇರಲಿಲ್ಲವಂತೆ. ಪಕ್ಕದಲ್ಲಿ ನೀರಿನ ತೊರೆಯೇ ಇರಬೇಕಾದರೆ ಬಚ್ಚಲು ಅಗತ್ಯವಿಲ್ಲ ಎಂಬುದು ಶಾಮಣ್ಣನವರ ಅಂಬೋಣವಾಗಿತ್ತು. ನಂತರದಲ್ಲಿ ಒಂದು ಸುಂದರವಾದ ಮನೆ ಕಟ್ಟಿಸಿಕೊಂಡು ಸರಳವಾಗಿ ಆದರೆ ಸೃಜನಶೀಲವಾಗಿ ಶ್ರೀದೇವಿ-ಶಾಮಣ್ಣ ಬದುಕು ಕಟ್ಟಿಕೊಂಡಿದ್ದಾರೆ. ಇವತ್ತಿಗೂ ಮನೆಗೆ ಹೋದವರನ್ನು ತಮ್ಮ ಪ್ರೀತಿಯ ಆತಿಥ್ಯದಿಂದ ಸತ್ಕರಿಸುವ ಶ್ರೀದೇವಿಯವರು ಹೆಚ್ಚಿನ ಸಂದರ್ಭದಲ್ಲಿ ‘‘ನಿಮ್ಮ ಮನೆಯಲ್ಲಿ ನೆಡಿ’’ ಎಂದು ಗಿಡವೊಂದನ್ನು ಕೊಟ್ಟು ಕಳಿಸುವಷ್ಟು ಜೀವನೋತ್ಸಾಹಿ. ಆದರೆ ಈಗ ನಡೆಯುತ್ತಿರುವ ಎಳೆಗೂಸುಗಳ ಮೇಲಿನ ಅತ್ಯಾಚಾರ, ರೈತರ ಆತ್ಮಹತ್ಯೆ, ಕೊಳ್ಳುಬಾಕ ಸಂಸ್ಕೃತಿ ಕಲಿಸಿದ ಹಪಾಹಪಿತನ, ಧರ್ಮಗಳ ನಡುವಿನ ನೀಚ ರಾಜಕಾರಣ ಎಲ್ಲವೂ ಇವರನ್ನು ವಿಚಲಿತರನ್ನಾಗಿಸುತ್ತದೆ.
ಶಾಮಣ್ಣನವರ ಬೆನ್ನಿಗೆ ನಿಂತು ಅವರ ಬದುಕಿಗೆ ಒಂದು ಅರ್ಥಪೂರ್ಣತೆ ತಂದ ತನ್ನ ಅಸ್ಮಿತೆಯನ್ನೂ ಉಳಿಸಿಕೊಂಡಿರುವ ಶ್ರೀದೇವಿಯವರು ನಮ್ಮ ನಡುವಿನ ಹೆಮ್ಮೆಯ ರೈತ ಮಹಿಳೆ... ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯು ಸಹಭಾಗಿ ಸಂಘಟನೆಗಳ ಜೊತೆಗೂಡಿ ಶಿವಮೊಗ್ಗದಲ್ಲಿ ಮಾರ್ಚ್ ಎಂಟು ಮತ್ತು ಒಂಬತ್ತರಂದು ನಡೆಸಲಿರುವ ವಿಶ್ವ ಮಹಿಳಾ ದಿನದ ಜಾಥಾ ಉದ್ಘಾಟನೆ ಮಾಡಲಿದ್ದಾರೆ.