ಕುಡ್ಸೆಂಪ್ ಹಗರಣದಲ್ಲಿ ಶಾಸಕ ಲೋಬೊ ಭಾಗಿ : ಸುನೀಲ್ ಕುಮಾರ್ ಬಜಾಲ್
‘ನಗರದ ನಾಡಿಮಿಡಿತ ಅರಿತ ಶಾಸಕರು ಅಭಿವೃದ್ಧಿಗೆ ಒತ್ತು ಕೊಡದೆ ಚುನಾವಣೆ ಸಮೀಪಿಸುವಾಗ ಶಂಕುಸ್ಥಾಪನೆ ಮಾಡಿ ಜನರನ್ನು ಮೋಸ ಮಾಡುತ್ತಿದ್ದಾರೆ’
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್
ಬಿಕಾಂ ಪದವೀಧರರಾಗಿರುವ 41ರ ಹರೆಯದ ಸುನೀಲ್ ಕುಮಾರ್ ಬಜಾಲ್ 1994ರಿಂದ ವಿದ್ಯಾರ್ಥಿ ಚಳವಳಿಯ ಮೂಲಕ ಸಾರ್ವಜನಿಕ ರಂಗಕ್ಕಿಳಿದವರು. ಎಸ್ಎಫ್ಐ, ಡಿವೈಎಫ್ಐ, ಸಿಐಟಿಯು ಸಂಘಟನೆಯ ಮೂಲಕ ವಿವಿಧ ಚಳವಳಿಯಲ್ಲಿ ತೊಡಗಿಸಿಕೊಂಡ ಸುನೀಲ್ ಸಿಪಿಎಂ ಸಕ್ರಿಯ ಕಾರ್ಯಕರ್ತನಾಗಿ, ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡವರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈಗಾಗಲೆ ಅವರು ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಅವರ ಜೊತೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
► ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಪ್ರಚಾರ ಆರಂಭಿಸಿದ್ದೀರಿ? ಹೇಗಿದೆ ಸ್ಪಂದನೆ?
ನಾವು ಹೋರಾಟದಿಂದಲೇ ಬಂದವರು. ನಿತ್ಯ ಹೋರಾಟದಲ್ಲಿ ಭಾಗಿಯಾಗುತ್ತಲೇ ಇದ್ದೇವೆ. ಚುನಾವಣೆ ಸಮೀಪಿಸಿದ ಕಾರಣ ನಾವು ಪ್ರಚಾರವನ್ನೂ ಆರಂಭಿಸಿದ್ದೇವೆ. ಅದೀಗ ಹೋರಾಟದ ರೂಪವನ್ನು ಪಡೆಯುತ್ತಿದೆ. ಅಂದರೆ ಪ್ರಚಾರಕ್ಕೆ ಹೋದಾಗಲೆಲ್ಲಾ ಜನರು ಸಮಸ್ಯೆಗಳನ್ನು ಮುಂದಿಡುತ್ತಿದ್ದಾರೆ. ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿದ್ದೇವೆ. ಹೋದಲ್ಲೆಲ್ಲಾ ಉತ್ತಮ ಸ್ಪಂದನೆ ಕೂಡಾ ವ್ಯಕ್ತವಾಗುತ್ತಿದೆ.
► ಸಿಪಿಎಂ ಪಕ್ಷಕ್ಕೆ ಮತ ಹಾಕುವುದು ವ್ಯರ್ಥ ಎಂಬ ಅಭಿಪ್ರಾಯ ಇದೆಯಲ್ಲಾ?
ಹೌದು. ಹೆಚ್ಚಿನ ಜನರು ಅಂತಹ ಅಭಿಪ್ರಾಯ ಹೊಂದಿದ್ದಾರೆ. ಸಿಪಿಎಂ ಹಳಬರ ಪಕ್ಷ. ಸಿಪಿಎಂಗೆ ಮತಹಾಕಿದರೆ ವ್ಯರ್ಥ ಎಂಬ ಭಾವನೆ ಇದೆ. ಅದನ್ನು ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇದು ಎಡಪಕ್ಷಗಳ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರ. ಈ ಅಪಪ್ರಚಾರ, ಅಪನಂಬಿಕೆಯನ್ನು ದೂರ ಮಾಡಲು ಮುಖ್ಯವಾಗಿ ಯುವ ಜನಾಂಗದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಹಾಗಾಗಿ ಭವಿಷ್ಯದಲ್ಲಿ ಈ ತಪ್ಪು ಅಭಿಪ್ರಾಯ ವ್ಯಕ್ತವಾಗದು.
► ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ?
ಮಂಗಳೂರು ರಾಜ್ಯ, ರಾಷ್ಟ್ರ ಮಾತ್ರವಲ್ಲ ಅಂತಾರಾಷ್ಟ್ರೀಯವಾಗಿಯೂ ಗಮನ ಸೆಳೆದ ನಗರ. ಇಲ್ಲಿ ವಿಮಾನ ನಿಲ್ದಾಣದವಿದೆ. ರೈಲು ನಿಲ್ದಾಣವಿದೆ. ಬಂದರು ಇದೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿಯೂ ಇವೆ. ಬಹುಶಃ ರಾಜ್ಯದ ಯಾವ ನಗರದಲ್ಲೂ ಇಂತಹ ಸೌಲಭ್ಯ ಇಲ್ಲ ಎಂದೇ ಹೇಳಬಹುದು. ಇಷ್ಟೆಲ್ಲಾ ಇದ್ದೂ ಈ ನಗರ ಸೊರಗಿದೆ. ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಇಲ್ಲಿತ್ತು. ಆದರೆ ಇಲ್ಲಿನ ಶಾಸಕರು ಅಭಿವೃದ್ಧಿಗೆ ಒತ್ತು ಕೊಡಲೇ ಇಲ್ಲ. ಈ ಹಿಂದೆ ಶಾಸಕರಾದವರ ವಿಷಯ ಬಿಡಿ. ಹಾಲಿ ಶಾಸಕ ಜೆ.ಆರ್.ಲೋಬೊ ಕೇವಲ ಶಾಸಕರು ಮಾತ್ರವಲ್ಲ. ಈ ಹಿಂದೆ ಇಲ್ಲಿನ ಅಧಿಕಾರಿಯಾಗಿದ್ದವರು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದಾಗಲೇ ನಗರದ ನಾಡಿಮಿಡಿತ ಅರಿತವರು. ಆದರೆ ಅವರು ಚುನಾವಣೆ ಸಮೀಪಿಸುವಾಗ ಶಂಕುಸ್ಥಾಪನೆ, ಉದ್ಘಾಟನೆಯಲ್ಲಿ ಮುಳುಗಿ ಜನರನ್ನು ಮೋಸ ಮಾಡಲು ಹೊರಟಿದ್ದಾರೆ.
► ಕುಡ್ಸೆಂಪ್ ಹಗರಣದ ಬಗ್ಗೆ ನಿಮ್ಮ ಆರೋಪವನ್ನು ಶಾಸಕ ಲೋಬೊ ನಿರಾಕರಿಸುತ್ತಿದ್ದಾರೆ.
ಅವರು ಈ ಬಗ್ಗೆ ಬಹಿರಂಗ ಚರ್ಚೆ ಮಾಡುವುದಿದ್ದರೆ ನಾನು ಸಿದ್ಧ. ನನ್ನ ಸವಾಲನ್ನು ಅವರು ಸ್ವೀಕರಿಸಲಿ. ಅವರು ಮನಪಾ ಆಯುಕ್ತರಾಗಿದ್ದಾಗಲೇ ಭ್ರಷ್ಟ ಎಂಬುದು ಎಲ್ಲರಿಗೂ ಗೊತ್ತಿತ್ತು. ಶಾಸಕರಾದ ಬಳಿಕ ಅದು ಜಗಜ್ಜಾಹೀರಾಗಿದೆ. ನಗರದ ಒಳಚರಂಡಿಯ ಅಭಿವೃದ್ಧಿಗಾಗಿ 2002ರಲ್ಲಿ ಎಡಿಬಿಯಿಂದ 360 ಕೋಟಿ ರೂ. ಸಾಲ ಪಡೆದಾಗ ಅವರು ಮನಪಾ ಆಯುಕ್ತರಾಗಿದ್ದರು. ಬಳಿಕ ಕುಡ್ಸೆಂಪ್ ನಿರ್ದೇಶಕರಾಗಿದ್ದರು. ಕುಡ್ಸೆಂಪ್ ಯೋಜನೆಯ ಬಗ್ಗೆ ರಾಜ್ಯ ಸರಕಾರವೇ ಸಿಐಡಿ ತನಿಖೆಗೆ ಸೂಚಿಸಿದೆ. ಇಲ್ಲಿ ಅವ್ಯವಹಾರ ಆಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ. ಕುಡ್ಸೆಂಪ್ನಲ್ಲಿ ಭಾರೀ ಅವ್ಯವಹಾರವಾಗಿದ್ದು, ಹಗರಣದಲ್ಲಿ ಶಾಸಕರು ಭಾಗಿಯಾಗಿದ್ದಾರೆ. ಭ್ರಷ್ಟ ಅಲ್ಲ ಎಂದು ತೋರಿಸಿಕೊಳ್ಳುವ ಸಲುವಾಗಿ ಅವರು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ.
► ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಆಗಿದೆ ಎಂದು ಹಾಲಿ ಶಾಸಕರು ಹೇಳುತ್ತಿದ್ದಾರೆ.
ಎಲ್ಲಿ ಆಗಿದೆ. ನಾಲ್ಕು ರಸ್ತೆಗಳು ಕಾಂಕ್ರಿಟೀಕರಣಗೊಂಡರೆ ಅದು ಅಭಿವೃದ್ಧಿಯೇ? ಅವರ ಅಭಿವೃದ್ಧಿ ಹೋರ್ಡಿಂಗ್ಗಳಲ್ಲಿ ಮಾತ್ರ. ಕೇಂದ್ರ ಮಾರುಕಟ್ಟೆಯನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸುವುದಾಗಿ ಹೇಳಿದರೂ ಮಾಡಿಲ್ಲ. ಕೋಟ್ಯಂತರ ರೂಪಾಯಿ ವಹಿವಾಟು ತರುವ ಬಂದರ್, ಧಕ್ಕೆಯ ಅಭಿವೃದ್ಧಿಯೂ ಆಗಿಲ್ಲ. ನಗರದ ಇತರ ಮಾರುಕಟ್ಟೆಗಳ ಸ್ಥಿತಿ ಕೂಡ ಶೋಚನೀಯ. ನಗರಕ್ಕೊಂದು ಸುಸಜ್ಜಿತ ಬಸ್ ತಂಗುದಾಣವಿಲ್ಲ. ಪಂಪ್ವೆಲ್ ಬಸ್ ತಂಗುದಾಣದ ಪ್ರಗತಿ ಶೂನ್ಯ. ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆಯ ಸಮಸ್ಯೆ ನೀಗಿಲ್ಲ. ಲೇಡಿಗೋಶನ್ ಆಸ್ಪತ್ರೆಯ ನವೀಕೃತ ಕಟ್ಟಡಕ್ಕೆ ಇನ್ನೂ ಲೋಕಾರ್ಪಣೆಯ ಭಾಗ್ಯ ಸಿಕ್ಕಿಲ್ಲ. ನಂತೂರು, ಪಂಪ್ವೆಲ್ ಸಮೀಪದ ಫ್ಲೈಓವರ್ ಕಾಮಗಾರಿ ನಿಂತಿದೆ. ಪುರಭವನ ಬಳಿಯ ಸ್ಕೈವಾಕ್ನ ಕಥೆ ಏನಾಗಿದೆ ಅಂತ ಗೊತ್ತಿಲ್ಲ. ಮಂಗಳೂರು, ಬೆಂಗರೆಗೆ ಸಂಪರ್ಕ ಕಲ್ಪಿಸುವ ತೂಗುಸೇತುವೆ ಆಗಿಲ್ಲ. ಮನೆ ನಿವೇಶನ, ವಸತಿ, ಹಕ್ಕುಪತ್ರ, ಕುಡಿಯುವ ನೀರು, ಒಳಚರಂಡಿ ಹೀಗೆ ಸಮಸ್ಯೆಗೆ ಇಲ್ಲಿ ಕೊನೆ ಎಂಬುದೇ ಇಲ್ಲ. ಶಕ್ತಿನಗರದಲ್ಲಿ ಇತ್ತೀಚೆಗೆ ‘ಜಿ ಪ್ಲಸ್ 3’ ಮಾದರಿಯ ವಸತಿ ವ್ಯವಸ್ಥೆಯು ಚುನಾವಣಾ ತಂತ್ರಗಾರಿಕೆ ಅಷ್ಟೆ. ಒಟ್ಟಿನಲ್ಲಿ ಮಂಗಳೂರಿನಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ.
► ಕುಡ್ಸೆಂಪ್ ಹಗರಣದ ಆರೋಪ ದ್ವೇಷ ರಾಜಕಾರಣದ ಭಾಗವೇ?
ಹಣ, ತೋಳ್ಬಲವನ್ನು ನಾವು ಲೆಕ್ಕಿಸಿಲ್ಲ. ಅದಕ್ಕೆಲ್ಲಾ ಅಂಜಿಕೊಳ್ಳುವ ಕಾಲದಲ್ಲಿ ನಾವಿಲ್ಲ. ಅಲ್ಲದೆ ನಾವೇನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಅಭಿವೃದ್ಧಿಗೆ ಸಂಬಂಧಿಸಿದಂತೆ ಬೊಗಳೆ ಬಿಡುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದೇವೆ. ಚುನಾವಣೆ ಅಂತಲ್ಲ. ಈ ಹಿಂದೆಯೂ ನಾವು ಶಾಸಕರ ವೈಫಲ್ಯವನ್ನು ಬೆಟ್ಟು ಮಾಡಿ ಧ್ವನಿ ಎತ್ತುತ್ತಿದ್ದೆವು.
► ಇದು ನಿಮ್ಮ ಮೊದಲ ಸ್ಪರ್ಧೆಯೇ?
ಅಲ್ಲ. ನಾಲ್ಕು ವರ್ಷದ ಹಿಂದೆ ನಾನು ಮನಪಾ ಕೋರ್ಟ್ ವಾರ್ಡ್ನಿಂದ ಸ್ಪರ್ಧಿಸಿದ್ದೆ. ನನ್ನಿಂದಾಗಿಅಲ್ಲಿ ಬಿಜೆಪಿಯ ಕಾರ್ಪೊರೇಟರ್ ಸೋತು ಕಾಂಗ್ರೆಸ್ ಗೆಲ್ಲುವಂತಾಯಿತು.
► ಸಿಪಿಎಂ ಸ್ಪರ್ಧೆ ಬಿಜೆಪಿಗೆ ಪೂರಕವಾಗುವುದಿಲ್ಲವೇ?
ಅವರೆಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಿಜೆಪಿ ಮತೀಯ ಶಕ್ತಿಗಳನ್ನು ಬೆಳೆಸುತ್ತಿದೆ. ಕಾಂಗ್ರೆಸ್ ಆರ್ಥಿಕ ನೀತಿಯನ್ನು ಪ್ರೋತ್ಸಾಹಿಸುತ್ತಿದೆ. ಎರಡೂ ಪಕ್ಷಗಳಿಗೆ ಬಡವರು, ಕಾರ್ಮಿಕ ವರ್ಗದ ಮೇಲೆ ಕಿಂಚಿತ್ತೂ ಕನಿಕರ ಇಲ್ಲ. ಇದ್ದಿದ್ದರೆ ಅವರು 1991ರಲ್ಲಿ ಕರಾಳ ಆರ್ಥಿಕ ನೀತಿ ಜಾರಿಗೊಳಿಸುತ್ತಿರಲಿಲ್ಲ. ದೇಶದ ಆರ್ಥಿಕ ಸ್ಥಿತಿ ಬಿಗಡಾಯಿಸಲು ಕಾಂಗ್ರೆಸೇ ಕಾರಣ. ಅದನ್ನೀಗ ಬಿಜೆಪಿ ಯಥಾವತ್ತಾಗಿ ಜಾರಿಗೊಳಿಸುತ್ತಿದೆ. ಬಿಜೆಪಿ ಅವಧಿಯ ಬೆಲೆ ಏರಿಕೆ, ಹಣದುಬ್ಬರದ ವಿರುದ್ಧದ ಕಾಂಗ್ರೆಸ್ನ ಹೋರಾಟಕ್ಕೆ ಅರ್ಥವೇ ಇಲ್ಲ.
► ಕೆಲವು ದಿನಗಳ ಹಿಂದೆ ಮಾನವ ಸರಪಳಿ ನಡೆಸಿದ ಕಾಂಗ್ರೆಸ್ನ ವಿರುದ್ಧವೇ ಸ್ಪರ್ಧಿಸುವುದು ಸರಿಯೇ?
ನಾವು ಕಾಂಗ್ರೆಸ್ನೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿಲ್ಲ. ಅದು ಮಾನವ ಮೈತ್ರಿ. ಈ ದೇಶದ ಕೋಮುಶಕ್ತಿಗಳನ್ನು ನಿರ್ಮೂಲನೆ ಮಾಡಬೇಕು ಎಂಬ ಉದ್ದೇಶದಿಂದ ಜಾತ್ಯತೀತ ಶಕ್ತಿಗಳು ಒಗ್ಗೂಡಿ ಕಾರ್ಯಕ್ರಮ ಸಂಘಟಿಸಿದ್ದೆವು. ಅದಕ್ಕೂ ಚುನಾವಣೆಗೂ ಸಂಬಂಧವೇ ಇಲ್ಲ. ದೇಶದಲ್ಲಿ ಕಾಂಗ್ರೆಸ್, ಬಿಜೆಪಿಯ ಆಡಳಿತಕ್ಕೆ ಜನರು ಭ್ರಮನಿರಸರಾಗಿದ್ದಾರೆ. ಇವರಿಗೆ ಶಾಂತಿ ಬೇಕಿಲ್ಲ. ಅಭಿವೃದ್ಧಿ ಬೇಕಿಲ್ಲ. ಬಡವರು, ದುಡಿಯುವ ವರ್ಗ ಇವರಿಗೆ ಬೇಡ. ಸಿಪಿಎಂ ಜನತೆಗೆ ಎಷ್ಟು ಅನಿವಾರ್ಯ ಎಂಬುದನ್ನು ನಾವು ತೋರಿಸಿಕೊಡಲಿದ್ದೇವೆ. ಸಿಪಿಎಂ ಬಗ್ಗೆ ಜನರಿಗೆ ಇರುವ ತಪ್ಪು ಅಭಿಪ್ರಾಯಗಳನ್ನೆಲ್ಲಾ ದೂರ ಮಾಡುವೆವು. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು, ಶಕ್ತಿನಗರ, ಬಜಾಲ್, ಪಂಜಿಮೊಗರು ಮತ್ತಿತರ ಕಡೆ ನಮ್ಮ ಶಕ್ತಿ ಪ್ರಬಲವಾಗಿದ್ದು, ಅದನ್ನು ಎಲ್ಲೆಡೆ ವಿಸ್ತರಿಸುತ್ತೇವೆ.