ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಸಿಎಂ ತಿರ್ಮಾನವೇ ಅಂತಿಮವಲ್ಲ: ಶಾಮನೂರು ಶಿವಶಂಕರಪ್ಪ
ದಾವಣಗೆರೆ,ಮಾ.8: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀರ್ಮಾನವೇ ಅಂತಿಮವಾಗಲ್ಲ. ಸಿಎಂ ಹೇಳಿದಂತೆಯೇ ಎಲ್ಲಾ ಆಗುತ್ತದೆ ಅಂದ್ಕೋಬೇಡಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಿಎಂ ನಿಲುವಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ಸರ್ಕಾರದ ಏನಾದರೂ ಮಾಡಲಿ. ಸಿದ್ದರಾಮಯ್ಯ ಹೇಳಿದಂತೆಯೇ ಎಲ್ಲಾ ಆಗುತ್ತದೆ ಅಂದ್ಕೋಬೇಡಿ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರಷ್ಟೇ ಎಂದು ಮುಖ್ಯಮಂತ್ರಿ ಧೋರಣೆಯ ವಿರುದ್ಧವೇ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ತಿರುಗಿ ಬಿದ್ದಿದ್ದಾರೆ.
ಲಿಂಗಾಯತ ಧರ್ಮದ ಕುರಿತಂತೆ ಅಧ್ಯಯನಕ್ಕೆ ನೇಮಿಸಿದ್ದ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ ಸಲ್ಲಿಸಲು 6 ತಿಂಗಳವರೆಗೂ ಕಾಲಾವಕಾಶ ವನ್ನು ಸರ್ಕಾರ ನೀಡಿತ್ತು. ಆದರೆ, ಸಮಿತಿಯು ಕೇವಲ 2 ತಿಂಗಳಲ್ಲೇ ತರಾತುರಿಯಲ್ಲಿ ವರದಿ ಸಿದ್ದಪಡಿಸಿ, ಸರ್ಕಾರಕ್ಕೆ ಸಲ್ಲಿಸಿದ ಬಗ್ಗೆಯೂ ಎಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮವೆಂಬ ಹೆಸರಿನಲ್ಲಿ ಸಿದ್ದರಾಮಯ್ಯ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟಕ್ಕೂ ಸಿದ್ದರಾಮಯ್ಯ ತೀರ್ಮಾನವೇ ಅಂತಿಮವಾಗುವುದೂ ಇಲ್ಲ ಎಂದು ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.