'ನೇತ್ರಾವತಿ ಉಳಿಸಲು ಸ್ಪಂದಿಸದಿದ್ದರೆ ಅದು ದ.ಕ. ಜನತೆಯ ಸೋಲು'
ಎತ್ತಿನ ಹೊಳೆ ಯೋಜನೆಯ ವಿರುದ್ಧ ಸಹ್ಯಾದ್ರಿ ಸಂಚಯದಿಂದ ‘ನೋಟಾ’ ಅಭಿಯಾನ
'ಪಶ್ಚಿಮ ಘಟ್ಟ ನೆಮ್ಮದಿಯಾಗಿದ್ದರೆ ಇಡೀ ದಕ್ಷಿಣ ಭಾರತ ಸುರಕ್ಷಿತ'
ದಿನೇಶ್ ಹೊಳ್ಳ ಅಂತಾರಾಷ್ಟ್ರೀಯ ಮಟ್ಟದ ಕಲಾವಿದ. ಮಾತ್ರವಲ್ಲದೆ ಸುಮಾರು 25 ವರ್ಷಗಳಿಂದ ಪಶ್ಚಿಮ ಘಟ್ಟದಲ್ಲಿ ಚಾರಣ ನಡೆಸುತ್ತಾ, ಪಶ್ಚಿಮ ಘಟ್ಟದ ಇಂಚು ಇಂಚನ್ನೂ ಅರಿತವರು. ಅಲ್ಲಿನ ನಿವಾಸಿಗಳ ಜತೆ ಒಡನಾಟವನ್ನು ಬೆಳೆಸಿದವರು. ಜತೆಗೆ ಸಹ್ಯಾದ್ರಿ ಸಂಚಯದ ಮೂಲಕ ನಮ್ಮ ಪರಿಸರ, ಜಲಮೂಲಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳ ತಂಡವನ್ನು ಪಶ್ಚಿಮ ಘಟ್ಟಕ್ಕೆ ಕರೆದೊಯ್ದು ಚಾರಣದ ಮೂಲಕ ಅರಿವು ಮೂಡಿಸುತ್ತಿರುವ ಪರಿಸರ ಪ್ರೇಮಿ. ಜೀವನದಿ ನೇತ್ರಾವತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ತಂಡದೊಂದಿಗೆ ವಿಶೇಷ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ ಮಾತನಾಡಿಸಿದ್ದು ಸಂದರ್ಶನದ ಸಂಕ್ಷಿಪ್ತ ವಿವರನ್ನು ಇಲ್ಲಿ ನೀಡಲಾಗಿದೆ.
ಮುಂದಿನ ಚುನಾವಣೆಯಲ್ಲಿ ಸಹ್ಯಾದ್ರಿ ಸಂಚಯದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದೇ?
ಸಹ್ಯಾದ್ರಿ ಸಂಚಯ, ಎನ್‌ಇಸಿಎಫ್ ಮತ್ತು ಇತರ ನೇತ್ರಾವತಿ ಹೋರಾಟಗಾರರು ಸೇರಿಕೊಂಡು ‘ನೋಟಾ ಬಳಸಿ ನೇತ್ರಾವತಿ ಉಳಿಸಿ’ ಎಂಬ ಅಭಿಯಾನವನ್ನು ಮಾಡುತ್ತಿದೆ. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ನೇತ್ರಾವತಿ ನದಿಗೆ ವಂಚನೆ ಮಾಡಿರುವ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರ ಯಾವುದೇ ಪಕ್ಷಗಳಿಗೂ ಮತ ನೀಡದೆ ನೋಟಾ ಮತ ಚಲಾಯಿಸಬೇಕೆಂದು ಜಿಲ್ಲೆಯ ಜನರಲ್ಲಿ ಮನವಿ ಮಾಡುತ್ತಿದೆ. ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಆಲೋಚನೆ ಇದೆ. ಆದರೆ ಈವರೆಗೆ ಅಂತಹ ಅಭ್ಯರ್ಥಿಗಳು ದೊರಕಿಲ್ಲ.
ನೋಟಾ ಅಭಿಯಾನದಲ್ಲಿ ದ.ಕ. ಜಿಲ್ಲೆಯ ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತದೆ?
ಬಂಟ್ವಾಳ, ಉಳ್ಳಾಲ, ಮಂಗಳೂರು ಹಾಗೂ ಸುರತ್ಕಲ್ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಸೂಕ್ತ ಅಭ್ಯರ್ಥಿ ಲಭ್ಯವಾದಲ್ಲಿ ಪ್ರಣಾಳಿಕೆಯಲ್ಲಿ ಏನಿರಲಿದೆ?
ಸೂಕ್ತ ಅಭ್ಯರ್ಥಿ ಲಭ್ಯವಾದಲ್ಲಿ ನಮ್ಮ ಆದ್ಯತೆ ಪ್ರಧಾನವಾಗಿ ನೇತ್ರಾವತಿ ನದಿ ಮತ್ತು ಪಶ್ಚಿಮ ಘಟ್ಟದ ಸಂರಕ್ಷಣೆ. ತುಳು ನಾಡಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಪಶ್ಚಿಮ ಘಟ್ಟದ ಮೇಲೆ ಅವೈಜ್ಞಾನಿಕ ಯೋಜನೆಗಳು ಹಾಗೂ ಮಾಫಿಯಾಗಳಿಂದಾಗಿ ಮಾರಣಾಂತಿಕ ಏಟು ಬೀಳುತ್ತಿದೆ. ಅಲ್ಲಿನ ಮಳೆಕಾಡು ನಾಶವಾಗುತ್ತಾ ಮಳೆ ಕಡಿಮೆಯಾಗುತ್ತಿದೆ. ಪಶ್ಚಿಮ ಘಟ್ಟ ನೆಮ್ಮದಿಯಾಗಿದ್ದರೆ ಇಡೀ ದಕ್ಷಿಣ ಭಾರತವೇ ನೆಮ್ಮದಿಯಾಗಿ ಉಳಿದೀತು.
ಪಕ್ಷೇತರ ಅಭ್ಯರ್ಥಿ ದೊರೆತಲ್ಲಿ ಚಿಹ್ನೆಯ ಬಗ್ಗೆ ತೀರ್ಮಾನವಾಗಿದೆಯೇ?
ನೇತ್ರಾವತಿ ಹೋರಾಟಕ್ಕೆ ಈಗಾಗಲೇ ಬಳಸಲಾಗಿರುವ ಚಿಹ್ನೆಯನ್ನೇ ಬಳಸಲಾಗುವುದು.
ನೋಟಾ ಅಭಿಯಾನದ ಪ್ರಚಾರ ಹೇಗೆ ನಡೆಯುತ್ತಿದೆ?
ಮನೆ ಮನೆಗಳಿಗೆ ತೆರಳಿ ಪ್ರಚಾರ ಮಾಡುವ ಉದ್ದೇಶವೂ ಇದೆ. ಸಂಘಟನೆ, ಕ್ಲಬ್‌ಗಳಿಗೆ ಹೋಗಿ ನೇತ್ರಾವತಿ ನದಿ ಬಗ್ಗೆ ಮಾಹಿತಿ ನೀಡಿ ನೋಟಾ ಮತ ಚಲಾಯಿಸಬೇಕೆಂದು ಪ್ರಚಾರ ಮಾಡಲಾಗುವುದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರಕ್ಕೆ ಆದ್ಯತೆ. ಕಳೆದ ಪಂಚಾಯತ್ ಚುನಾವಣೆಯಲ್ಲಿ ನಾವು ಮಾಡಿದ ನೋಟಾ ಪ್ರಚಾರಕ್ಕೆ 28,767 ಮತಗಳು ಲಭಿಸಿವೆ. ಈ ಬಾರಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಮತ ಲಭಿಸಬಹುದು ಎಂಬ ನಿರೀಕ್ಷೆ ಇದೆ.
ನೋಟಾದ ಬಗ್ಗೆ ಜನರಿಗೆ ಅರಿವಿದೆಯೇ?
ಜನರಿಗೆ ನೇತ್ರಾವತಿ ಯೋಜನೆಯ ಪರ ಒಳವು ಇರುವ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶವಿದೆ. ಆದರೆ ಹೆಚ್ಚಿನ ಜನರಿಗೆ ನೋಟಾದ ಬಗ್ಗೆ ಅರಿವಿಲ್ಲ. ನೋಟಾಕ್ಕೂ ನೇತ್ರಾವತಿಗೂ ಏನು ಸಂಬಂಧ ಎಂಬ ಗೊಂದಲವೂ ಇದೆ. ಈ ಬಗ್ಗೆ ಸಾಕಷ್ಟು ಪ್ರಚಾರ, ಮಾಹಿತಿ ನೀಡುವ ಕೆಲಸಗಳನ್ನು ಮಾಡಲಾಗುವುದು.
ನೋಟಾದಿಂದ ಮತ ವಿಭಜನೆಯಾಗಿ ಅತಂತ್ರ ಸ್ಥಿತಿಗೆ ಕಾರಣವಾಗದೇ?
ನೋಟಾದಿಂದ ಅತಂತ್ರ ಸ್ಥಿತಿ ನಿರ್ಮಾಣವಾಗದು. ಯಾವುದಾದರೂ ಒಬ್ಬ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾನೆ. ನೋಟಾದಿಂದ ಅಭ್ಯರ್ಥಿಗೆ ತೊಂದರೆಯಾಗುವುದಿಲ್ಲ. ನಾವು ನೋಟಾ ಮಾಡುವ ಉದ್ದೇಶವೇನೆಂದರೆ ನಮ್ಮ ಪ್ರತೀಕಾರ. ಇದು ಒಂದು ನಮ್ಮ ಹೋರಾಟದ ಭಾಗವೇ ಹೊರತು ಸೋಲು, ಗೆಲವು ಮುಖ್ಯ ಅಲ್ಲ. ನೇತ್ರಾವತಿ ಪರ ನೋಟಾ ಮೂಲಕ ಒಂದು ಲಕ್ಷ ಜನರು ಬೆಂಬಲ ನೀಡುತ್ತಿದ್ದಾರೆ ಎಂಬುದು ಜಯಗಳಿಸುವ ಅಭ್ಯರ್ಥಿಗೆ ಎಚ್ಚರಿಕೆಯಷ್ಟೇ.
ಈ ಅಭಿಯಾನಕ್ಕೆ ಜನತೆ ಕೈಜೋಡಿಸುವರೇ?
ಜೀವನದಿ ನೇತ್ರಾವತಿಯನ್ನು ಉಳಿಸಲು ಈ ಸಂದರ್ಭದಲ್ಲೂ ಜನತೆ ಸ್ಪಂದಿಸದಿದ್ದರೆ ಅದು ಜನತೆಯ ಸೋಲು ಅಷ್ಟೇ. ಇನ್ನೂ ಕೂಡಾ ನೇತ್ರಾವತಿಯನ್ನು ನಾಶ ಮಾಡುವ ಜನಪ್ರತಿನಿಧಿಗಳೇ ಜಿಲ್ಲೆಯ ಜನತೆಗೆ ಬೇಕು ಎಂದಾದಲ್ಲಿ ಅದು ಜಿಲ್ಲೆಯ ಜನರ ಭವಿಷ್ಯದ ದುರಂತ. ಕೊನೇ ಪಕ್ಷ ಜಿಲ್ಲೆಯ ಜನತೆ ಅವರ ಮಕ್ಕಳ ಭವಿಷ್ಯದ ಹಿತದೃಷ್ಟಿಗಾದರೂ (ಕುಡಿಯುವ ನೀರಿಗೆ) ನೇತ್ರಾವತಿಯನ್ನು ಉಳಿಸಲು ನೋಟಾ ಮತ ನೀಡಿ ಎಂದು ನಾವು ಮನವಿ ಮಾಡುತ್ತಿದ್ದೇವೆ.
ಜಿಲ್ಲೆಯ ಜೀವ ನದಿ ನೇತ್ರಾವತಿಯ ರಕ್ಷಣೆ ಹಾಗೂ ಪಶ್ಚಿಮ ಘಟ್ಟದ ಸಂರಕ್ಷಣೆಯ ಉದ್ದೇಶದೊಂದಿಗೆ ಸಹ್ಯಾದ್ರಿ ಸಂಚಯ ಈ ಬಾರಿ ವಿಧಾನಸಭಾ ಚುನಾವಣೆಗೆ ನೋಟಾ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುವುದು ಈ ನೋಟಾ ಅಭಿಯಾನದ ಮುಖ್ಯ ಉದ್ದೇಶ ಎಂಬುದಾಗಿ ಸಹ್ಯಾದ್ರಿ ಸಂಚಯ ಈಗಾಗಲೇ ಸ್ಪಷ್ಟಪಡಿಸಿದೆ.
-ದಿನೇಶ್ ಹೊಳ್ಳ, ಸಹ್ಯಾದ್ರಿ ಸಂಚಯದ ಸಂಚಾಲಕ