'ಅಮಾನತ್' ವಂಚಿಸಿದ ರಹ್ಮಾನ್ ಖಾನ್ ಗೆ ಮತ್ತೆ ರಾಜ್ಯಸಭಾ ಟಿಕೆಟ್ ಪುರಸ್ಕಾರ ನೀಡಬೇಕೆ ಕಾಂಗ್ರೆಸ್ ?
ರಹ್ಮಾನ್ ಖಾನ್
ಕರ್ನಾಟಕದ ನಾಲ್ಕು ರಾಜ್ಯಸಭಾ ಸದಸ್ಯರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯಸಭೆ ಚುನಾವಣೆ ನಡೆಯಲಿದೆ. ಅದರಲ್ಲಿ ಒಂದು ಸ್ಥಾನ ಮುಸ್ಲಿಮರಿಗೆ ಸಿಗುವುದು ಖಚಿತ ಎಂದರೆ ತಪ್ಪಾಗದು. ಸದ್ಯ ಮಾಜಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ರಹ್ಮಾನ್ ಖಾನ್ ಪ್ರತಿನಿಧಿಸುವ ಸ್ಥಾನ ಮತ್ತೆ ಮುಸ್ಲಿಮರಿಗೆ ಸಿಗುವ ಸಾಧ್ಯತೆ ನಿಚ್ಚಳ. ನಾಲ್ಕು ಬಾರಿ ಸದಸ್ಯರಾದ ರಹ್ಮಾನ್ ಖಾನ್ ಮತ್ತೆಯೂ ಟಿಕೆಟ್ ತನಗೇ ಸಿಗಬೇಕೆಂದು ಹಠಕ್ಕೆ ಬಿದ್ದಂತಿದೆ. ಕಾಂಗ್ರೆಸ್ ಪಕ್ಷವೂ ಅಸೆಂಬ್ಲಿ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ರಹ್ಮಾನ್ ಖಾನ್ ರನ್ನು ಕೈ ಬಿಟ್ಟು ಇತರರಿಗೆ ಅವಕಾಶ ಕಲ್ಪಿಸುವ ಬಗ್ಗೆ ಅಷ್ಟಾಗಿ ಗಮನಹರಿಸಿದಂತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಈಗಾಗಲೇ ಸಲೀಂ ಅಹ್ಮದ್, ರೋಶನ್ ಬೇಗ್ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ. ಬದಲಾವಣೆ ಮಾಡ ಹೊರಟರೆ ಸ್ಪರ್ಧೆ ಖಚಿತ. ಬದಲಾವಣೆ ಮಾಡದೇ ಹಳೇ ಮುಖಕ್ಕೆ ಕೊಟ್ಟರೆ ಆಕಾಂಕ್ಷಿಗಳನ್ನು ತೆಪ್ಪಗಾಗಿಸುವುದು ತುಸು ಸುಲಭ.
ರಹ್ಮಾನ್ ಖಾನ್ ರ ಹಿರಿತನಕ್ಕೆ ಅಗತ್ಯ ಗೌರವವನ್ನು ನೀಡಿಕೊಂಡೇ ಕೆಲವೊಂದು ಪ್ರಶ್ನೆಗಳನ್ನು ಎತ್ತಬೇಕಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ರಹ್ಮಾನ್ ಖಾನ್ ರ ಹೊರತಾಗಿ ಅರ್ಹ ಮುಖಗಳೇ ಇಲ್ಲವೇ ? ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಬೇಕೆಂದರೆ ರಹ್ಮಾನ್ ಖಾನ್ ಅವರೇ ಆಗಬೇಕೇ ? ಅಥವಾ ಕೇಂದ್ರ ಮಟ್ಟದಲ್ಲಿ ಹೊಸ ನಾಯಕತ್ವ ಬೆಳೆಯುವುದನ್ನು ಕಾಂಗ್ರೆಸ್ ಹೈಕಮಾಂಡ್ ಬಯಸುವುದಿಲ್ಲವೇ ?
ರಹ್ಮಾನ್ ಖಾನ್ ರ ಹಿರಿತನಕ್ಕೆ ತೀರಾ ಅವಕಾಶ ನೀಡದಿದ್ದಿದ್ದರೆ ಈ ಪ್ರಶ್ನೆ ರಾಜಕೀಯ ಅಪ್ರಬುದ್ಧತೆಯದ್ದಾಗುತ್ತಿತ್ತು. ಈಗಾಗಲೇ ನಾಲ್ಕು ಬಾರಿ ರಾಜ್ಯಸಭಾ ಸದಸ್ಯತ್ವ, ಕೇಂದ್ರ ಸಚಿವ, ರಾಜ್ಯಸಭಾ ಉಪಾಧ್ಯಕ್ಷ ಹುದ್ದೆಯನ್ನು ಅವರಿಗೆ ನೀಡಲಾಗಿದೆ. ಅದಾಗ್ಯೂ ಅವರು ಮುಸ್ಲಿಂ ಸಮುದಾಯಕ್ಕೆ ನೀಡಿದ ಕೊಡುಗೆಯೇನು ಎಂದು ಕೆದಕ ಹೊರಟರೆ ಸಹಜವಾಗಿಯೇ ಋಣಾತ್ಮಕ ಉತ್ತರವೇ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಮುಸ್ಲಿಂ ಸಮುದಾಯಕ್ಕೆ ಸಹಕಾರಿ ಬ್ಯಾಂಕ್ ಎಂಬ ಪರಿಕಲ್ಪನೆ ತೀರಾ ಕಡಿಮೆಯಿದ್ದ ಕಾಲದಲ್ಲಿ ರಹ್ಮಾನ್ ಖಾನ್ರೇ ಸ್ಥಾಪಿಸಿದ ಅಮಾನತ್ ಬ್ಯಾಂಕನ್ನು ಮುಳುಗಿಸಿದ ಆರೋಪದ ತೂಗುಗತ್ತಿ ಅವರ ಮೇಲಿದೆ. ಗಾರ್ಡಿಯನ್ ನಂತಹ ಅಂತಾರಾಷ್ಟ್ರೀಯ ಮೌಲ್ಯದ ಪತ್ರಿಕೆಯೇ ಅಮಾನತ್ ಬ್ಯಾಂಕ್ ವಂಚನೆಯ ಸೂತ್ರಧಾರ ಅಮಾನತ್ ಎಂದು ಆರೋಪಿಸಿ ದೊಡ್ಡ ಮಟ್ಟದ ತನಿಖಾ ವರದಿ ಪ್ರಕಟಿಸಿತ್ತು.
ಇಸ್ಲಾಮಿಕ್ ಪದಕೋಶದಲ್ಲಿ ಅಮಾನತ್ ಎಂದರೆ ರಕ್ಷಿಸಿಡಲು ನೀಡಲ್ಪಟ್ಟ ಸ್ವತ್ತು. ಲಕ್ಷಾಂತರ ಬಡ, ಕಾರ್ಮಿಕ ಮುಸ್ಲಿಮರು ತಮ್ಮ ಕಡು ಕಷ್ಟದ ದುಡಿಮೆಯ ಉಳಿತಾಯದ ಪಾಲನ್ನು ನಮ್ಮದೇ ಸ್ವಂತ ಬ್ಯಾಂಕ್ ಎಂಬ ವಿಶ್ವಾಸದಿಂದ ಅಮಾನತ್ ಬ್ಯಾಂಕಲ್ಲಿಟ್ಟರು. ರಹ್ಮಾನ್ ಖಾನ್ರು ಮುಸ್ಲಿಂ ಸಮುದಾಯದ "ಅಮಾನತ್" ಕಾಪಾಡದಾದರು ಮಾತ್ರವಲ್ಲ, ವಿಶ್ವಾಸವನ್ನೂ ಕಳೆದುಕೊಂಡರು.ಇಷ್ಟಾದ ಮೇಲೂ ಕಾಂಗ್ರೆಸ್ ಪಕ್ಷ ಮತ್ತೆ ಅವರಿಗೇ ಟಿಕೆಟ್ ನೀಡಿದರೆ ಅದು ಮುಸ್ಲಿಂ ಸಮುದಾಯದ ವಿಶ್ವಾಸಕ್ಕೆ ಎಸಗುವ ದ್ರೋಹವೆನ್ನದೇ ವಿಧಿಯಿಲ್ಲ.
ಜಾಫರ್ ಶರೀಫರಂತಹ ಹಿರಿಯ ಮುತ್ಸದ್ಧಿಗೆ ಬಹಳಷ್ಟು ಅವಕಾಶ ನೀಡಲಾಗಿದೆ ಎನ್ನುವ ಕಾಂಗ್ರೆಸಿಗರಿಗೆ ರಹ್ಮಾನ್ ಖಾನ್ರಿಗೆ ನೀಡಲಾದ ಅವಕಾಶ ಕಡಿಮೆಯೆಂದೆನಿಸುತ್ತದೆಯೇ?
ಕಾಂಗ್ರೆಸ್ ಪಕ್ಷ ರಾಜ್ಯಸಭಾ ಸದಸ್ಯತ್ವವನ್ನು ದುಡ್ಡಿನ ಖುಳಗಳಿಗೆ ನೀಡಲಾಗುವ ಅಥವಾ ರಾಜಕೀಯದ ಪುನರ್ವಸತಿಗಾಗಿ ನೀಡಲಾಗುವ ಹುದ್ದೆಯೆಂದು ಬಗೆಯದೇ ಸಮಾಜ ಮತ್ತು ಸಮುದಾಯದ ಹಿತಕ್ಕಾಗಿ ಕೆಲಸ ಮಾಡಿದವರಿಗೆ ಪಕ್ಷಾತೀತವಾಗಿ ಅಂದರೆ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸದವರಿಗೆ ನೀಡಬಯಸುವುದಾದರೆ ಆ ಆಯ್ಕೆ ಅಂತಹ ಸವಾಲಿನ ಕೆಲಸವಾಗದು. ಅಂತಹ ಅರ್ಹ ಪತ್ರಕರ್ತರು, ಸಾಹಿತಿಗಳೂ ಮತ್ತಿತರ ಉದ್ಯಮೇತರ ರಂಗದ ಅನೇಕ ಗಣ್ಯರು ಮುಸ್ಲಿಮ್ ಸಮುದಾಯದಲ್ಲಿದ್ದಾರೆ.
ಕರಾವಳಿ ಕರ್ನಾಟಕದಲ್ಲಿ ಬಿ.ಇಬ್ರಾಹೀಂ ಅವರ ಬಳಿಕ ಯಾವೊಬ್ಬ ಮುಸ್ಲಿಮನಿಗೂ ಇಂತಹ ಅವಕಾಶವನ್ನು ಕಾಂಗ್ರೆಸ್ ನೀಡಿಲ್ಲ. ಬಿಲ್ಲವ ಸಮುದಾಯದ ಜನಾರ್ದನ ಪೂಜಾರಿಗೆ, ಕ್ರೈಸ್ತ ಸಮುದಾಯದ ಆಸ್ಕರ್ ಫೆರ್ನಾಂಡಿಸರಿಗೆ, ಮೊಯ್ಲಿ ಸಮುದಾಯದ ವೀರಪ್ಪ ಮೊಯ್ಲಿಗೆ ರಾಜಕೀಯ ಪುನರ್ವಸತಿಯ ಕಾರಣಕ್ಕೆ ಇಂತಹ ಅವಕಾಶಗಳನ್ನು ನೀಡಲಾಗಿದೆ. ಈಗ ಹೇಗಿದ್ದರೂ ಕರಾವಳಿಯ ಮುಸ್ಲಿಮರು ಮೇಯರ್ ಪಟ್ಟ ಕೈ ತಪ್ಪಿದ ಸಿಟ್ಟಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕರಾವಳಿಯ ಗಣ್ಯ ಮುಸ್ಲಿಮರೊಬ್ಬರಿಗೆ ರಾಜ್ಯಸಭಾ ಸದಸ್ಯತ್ವ ನೀಡಿದರೆ ಮುಸ್ಲಿಮರಿಗೆ ರಾಜಕೀಯ ನ್ಯಾಯ ಕಲ್ಪಿಸಿದಂತೆಯೂ ಆಗುತ್ತದೆ, ಮುಸ್ಲಿಂ ಸಮುದಾಯದ ಸಿಟ್ಟನ್ನು ಶಮನ ಮಾಡಿದಂತೆಯೂ ಆಗುತ್ತದೆ. ಚೆಂಡು ಹೈ ಕಮಾಂಡ್ ಅಂಗಣದಲ್ಲಿದೆ.