ಕಿಡ್ನಿಗಳು ಮತ್ತು ಆರೋಗ್ಯ
ಆಕೆ ಸಲೀನಾ. 35 ದಾಟಿರುವ ಇಬ್ಬರು ಮಕ್ಕಳ ತಾಯಿ. ಕಳೆದೆರಡು ವರ್ಷಗಳಿಂದ ಉರಿ ಮೂತ್ರ ರೋಗಕ್ಕೆ ಮಾತ್ರೆ ನುಂಗುತ್ತಿದ್ದವಳಿಗೆ ಕಿಡ್ನಿ ವೈಫಲ್ಯವಾಗಿದೆ. ಆಕೆಯ ತಾಯಿ ಕಿಡ್ನಿ ದಾನ ಮಾಡಲು ಮುಂದಾಗಿದ್ದರೂ ಬಿಪಿ ಮತ್ತು ಶುಗರ್ ಇರುವುದರಿಂದ ವೈದ್ಯರು ತಿರಸ್ಕರಿಸಿದ್ದಾರೆ. ಗಂಡ ಮತ್ತು ಇಬ್ಬರು ಸಹೋದರರು ಕಿಡ್ನಿ ದಾನ ಮಾಡಲು ಮುಂದಾಗದಿದ್ದರೂ ಸಲೀನಾಳಲ್ಲಿ ದೂರುಗಳಿಲ್ಲ. ಆಕೆ ಡಯಾಲಿಸಿಸ್ನಿಂದ ದಿನ ದೂಡುತ್ತಿದ್ದಾರೆ.
ಸೌದಿಯಲ್ಲಿದ್ದ ಇಕ್ಬಾಲ್ ಬಾಯಾರಿದಾಗಲೆಲ್ಲಾ ಪೆಪ್ಸಿ, ಗೆಳೆಯರೊಂದಿಗೆ ವೀಕೆಂಡ್ ಡ್ರೈವ್ ಮಾಡುತ್ತಿದ್ದಾಗ ರೆಡ್ಬುಲ್ನಂತಹ ಎನರ್ಜಿ ಡ್ರಿಂಕ್ಸ್ ಕುಡಿಯುತ್ತಿದ್ದ. ಜ್ವರ, ತಲೆನೋವಿಗೆ ಪೆನಡಾಲ್ ಮಾತ್ರೆ ನುಂಗುತ್ತಿದ್ದ. 29ರ ಹರೆಯದ ಯುವಕ ಕಿಡ್ನಿ ತೊಂದರೆಯಿಂದ ಊರಿಗೆ ಬಂದಿದ್ದಾನೆ. ಆತನಿಗೆ ಕಿಡ್ನಿ ವೈಫಲ್ಯವಾಗಿದ್ದು, ಡಯಾಲಿಸಿಸ್ ಆರಂಭಿಸಲಾಗಿದೆ. ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ಕುರಿತಂತೆ ಕುಟುಂಬದಲ್ಲಿ ಚರ್ಚೆ ನಡೆಯುತ್ತಿದೆ. ಇಕ್ಬಾಲ್ನ ತಾಯಿ ದುಲೇಖ ಕಿಡ್ನಿ ದಾನ ಮಾಡಲು ಮುಂದಾಗಿದ್ದಾಳೆ.
ಪೈಂಟಿಂಗ್ ಕೆಲಸ ಮಾಡುತ್ತಿದ್ದ ರಾಜೇಶನಿಗೆ ಸಕ್ಕರೆ ಕಾಯಿಲೆಯಿಂದಾಗಿ ಕಿಡ್ನಿ ವೈಫಲ್ಯವಾಗಿದೆ. ಪತ್ನಿ ಸರೋಜಾ ಗಂಡನಿಗೆ ಕಿಡ್ನಿ ದಾನ ಮಾಡಿ ಧನ್ಯಳಾಗಿದ್ದಾಳೆ. ಇಂತಹ ನೂರಾರು ಘಟಣೆಗಳು, ನೈಜ ಕತೆಗಳು ನಮಗೆ ತಿಳಿದಿದ್ದರೂ ಈ ಕುರಿತಂತೆ ತಾರ್ಕಿಕ ಚರ್ಚೆಗಳು ನಡೆಯುತ್ತಿಲ್ಲ. ತಾಯಿ, ಹೆಂಡತಿ, ಸಹೋದರಿಗೆ ಕಿಡ್ನಿ ನೀಡಲು ಮುಂದಾಗ ಗಂಡು, ತನಗೆ ಕಿಡ್ನಿ ವೈಫಲ್ಯವಾದಾಗ ಅವರೆಲ್ಲರಿಂದ ಕಿಡ್ನಿ ದಾನವನ್ನು ನಿರೀಕ್ಷಿಸುತ್ತಾನೆ.
ದೇಶದ ಖ್ಯಾತ ಸ್ಟಿರೊಯ್ಡಿ ಫ್ರೀ ಕಿಡ್ನಿ ಕಸಿ ತಜ್ಞ ಕೊಯಮತ್ತೂರಿನ ಡಾ. ವಿವೇಕ್ ಪಾಠಕ್ ಪ್ರಕಾರ ಕಿಡ್ನಿ ವೈಫಲ್ಯವಾಗಿರುವವರ ಪೈಕಿ ಕೇವಲ ಶೇ. 2.5 ರೋಗಿಗಳು ಮಾತ್ರ ದಾನಿಗಳಿಂದ ಕಿಡ್ನಿ ಪಡೆದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಉಳಿದವರು ಡಯಾಲಿಸಿಸ್ನಲ್ಲೇ ದಿನದೂಡುತ್ತಿದ್ದಾರೆ. ಕಿಡ್ನಿ ದಾನಿಗಳ ಪೈಕಿ ಶೇ. 80 ಮಹಿಳೆಯರಂತೆ! ‘ಕಿಡ್ನಿಗಳು ಮತ್ತು ಮಹಿಳೆಯ ಆರೋಗ್ಯ’ ಇದು ಈ ವರ್ಷ(2018)ದ ವಿಶ್ವ ಕಿಡ್ನಿ ದಿನಾಚರಣೆಯ ಧ್ಯೇಯ ವಾಕ್ಯ. ಇಂಟರ್ನ್ಯಾಶನಲ್ ಸೊಸೈಟಿ ಆಫ್ ನೆಪ್ರೊಲಜಿ (ಐಖಘೆ) ಹಾಗೂ ಇಂಟರ್ನ್ಯಾಶನಲ್ ಫೆಡರೇಶನ್ ಆಫ್ ಕಿಡ್ನಿ ಫೌಂಡೇಶನ್ಸ್ (ಐಊಓಊ) ಸಂಸ್ಥೆಗಳು ಜಂಟಿಯಾಗಿ ಪ್ರತಿ ವರ್ಷ ಮಾರ್ಚ್ ಎರಡನೇ ಗುರುವಾರ ಜಗತ್ತಿನಾದ್ಯಂತ ವಿಶ್ವ ಕಿಡ್ನಿ ದಿನಾಚರಣೆ ಆಚರಿಸುವ ಮೂಲಕ ಕಿಡ್ನಿ ವೈಫಲ್ಯ ಮತ್ತು ಕಿಡ್ನಿ ರೋಗಗಳನ್ನು ತಡೆಯುವ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವೈದ್ಯರು, ಆಸ್ಪತ್ರೆಗಳು, ಸರಕಾರ ಮತ್ತು ಆರೋಗ್ಯ ಸಂಸ್ಥೆಗಳು ಈ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದೆ.
ಜಗತ್ತಿನಲ್ಲಿ ಸುಮಾರು 195 ಮಿಲಿಯ ಮಹಿಳೆಯರು ಕಿಡ್ನಿ ವೈಫಲ್ಯಕ್ಕೆ ಒಳಗಾಗುತ್ತಿದ್ದು, ಪ್ರತಿ ವರ್ಷ ಸುಮಾರು 6 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಕಿಡ್ನಿ ವೈಫಲ್ಯಕ್ಕೊಳಗಾಗುವ ಪುರುಷರು ಮತ್ತು ಮಹಿಳೆಯರ ಅನುಪಾತ ಹೆಚ್ಚೂ ಕಮ್ಮಿ ಸಮಾನವಾಗಿವೆ. ಮಹಿಳೆಯರಲ್ಲಿ ಕಿಡ್ನಿ/ಮೂತ್ರದ ಸೋಂಕು ಮತ್ತು ಆಟೋಯಿಮ್ಯುನ್ನಂತಹ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಅನುಪಾತವು ಪುರುಷರಿಗಿಂತ ಜಾಸ್ತಿಯಾಗುವ ಸಾಧ್ಯತೆಗಳಿವೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಮೂತ್ರದ ಸೋಂಕಿನ ಸಾಧ್ಯತೆಗಳು ಹೆಚ್ಚು. ಕಿಡ್ನಿ ವೈಫಲ್ಯವಾಗಿರುವ ಮಹಿಳೆ ಗರ್ಭಿಣಿಯಾದಲ್ಲಿ ಮಗು ಮತ್ತು ತಾಯಿ ಇಬ್ಬರೂ ಅಪಾಯದ ಅಂಚಿನಲ್ಲಿರುತ್ತಾರೆ. ಆದ್ದರಿಂದ ಮಹಿಳೆಯರು ಕಿಡ್ನಿ ರೋಗಗಳ ಬಗ್ಗೆ ಎಚ್ಚರಿಕೆಯಿಂದಿರಬೇಕಾದ ಅಗತ್ಯವಿದೆ. ಸಮೀಕ್ಷೆ ಪ್ರಕಾರ 10ಮಂದಿ ಭಾರತೀಯರಲ್ಲಿ ಒಬ್ಬರಿಗೆ ಕಿಡ್ನಿ ಕಾಯಿಲೆಯಿದೆ. ಮಾರಣಾಂತಿಕ ರೋಗಗಳ ಪೈಕಿ ಕಿಡ್ನಿ ವೈಫಲ್ಯವು 3ನೇ ಸ್ಥಾನದಲ್ಲಿದೆ. ಕಿಡ್ನಿ ವೈಫಲ್ಯವಾಗಿರುವ ಶೇ. 75 ರೋಗಿಗಳು ಆರ್ಥಿಕ ಮುಗ್ಗಟ್ಟಿನ ಕಾರಣಕ್ಕಾಗಿ ಯಾವುದೇ ಚಿಕಿತ್ಸೆ ಪಡೆಯುತ್ತಿಲ್ಲ. ಸಕ್ಕರೆ ಕಾಯಿಲೆ (ಮಧು ಮೇಹ) ಮತ್ತು ಅಧಿಕ ರಕ್ತದೊತ್ತಡ ಕಿಡ್ನಿ ವೈಫಲ್ಯಕ್ಕೆ ಪ್ರಮುಖ ಕಾರಣವೆಂಬುದು ಸಾಬೀತಾಗಿದೆ.
ಕಿಡ್ನಿ ವೈಫಲ್ಯವೆಂಬ ಭಯಾನಕ ರೋಗ:
ಕಿಡ್ನಿ ವೈಫಲ್ಯಕ್ಕೆ 5 ಹಂತಗಳಿದ್ದು ಶೇ. 95ಕ್ಕಿಂತ ಹೆಚ್ಚು ಕಿಡ್ನಿ ರೋಗಿಗಳು 4 ಅಥವಾ 5ನೇ ಹಂತದಲ್ಲೇ ವೈದ್ಯರನ್ನು ಸಂಪರ್ಕಿಸುತ್ತಾರೆ. ಯಾಕೆಂದರೆ ಶೇ. 90 ಕಿಡ್ನಿ ವೈಫಲ್ಯವಾಗುವ ತನಕ ಹೆಚ್ಚಿನ ಕಿಡ್ನಿ ರೋಗಿಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಕಿಡ್ನಿ ವೈಫಲ್ಯವಾದರೆ ರಕ್ತ ಶುದ್ಧೀಕರಣಕ್ಕಾಗಿ ವಾರಕ್ಕೆ 2 ಅಥವಾ 3 ಬಾರಿ ಡಯಾಲಿಸಿಸ್ ಅಥವಾ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು. ಇವೆರಡೂ ದುಬಾರಿ. ಮನೆಯೊಂದರ ಒಬ್ಬರಿಗೆ ಕಿಡ್ನಿ ವೈಫಲ್ಯವಾದರೆ ಸಾಕು, ಇಡೀ ಕುಟುಂಬವೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ, ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಡಯಾಲಿಸಿಸ್ ಮುಕ್ತ ದೇಶ/ರಾಜ್ಯ ಸರಕಾರದ ಘೋಷಣೆಯಾಗಲಿ
ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೆಲವು ಕಿಡ್ನಿ ರೋಗಿಗಳಿಗೆ ನೆರವಾಗುತ್ತಿವೆ. ಸರಕಾರದಿಂದ ಉಚಿತ ಡಯಾಲಿಸಿಸ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಉಚಿತ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯ ಯೋಜನೆಗಳಿವೆ. ಕೆಲವು ಸರಕಾರೇತರ ಸಂಘ-ಸಂಸ್ಥೆಗಳೂ ಕಿಡ್ನಿ ರೋಗಿಗಳಿಗೆ ಆರ್ಥಿಕ ನೆರವು ನೀಡುತ್ತಿವೆ. ಆಸ್ಪತ್ರೆಗಳಿಗೆ ಡಯಾಲಿಸಿಸ್ ಯಂತ್ರ ನೀಡಿ ಕಿಡ್ನಿ ವೈಫಲ್ಯವಾದವರು ಉಚಿತ ಅಥವಾ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಸಹಕರಿಸುತ್ತಿವೆ. ಆದರೆ ಇವರಲ್ಲಿ ಕಿಡ್ನಿ ವೈಫಲ್ಯವನ್ನು ತಡೆಯುವ ಯಾವುದೇ ಜನಜಾಗೃತಿ ಕಾರ್ಯಕ್ರಮಗಳಿಲ್ಲ ಎನ್ನುತ್ತಾರೆ ದ.ಕ. ಜಿಲ್ಲೆಯಲ್ಲಿ ಕಿಡ್ನಿ ಆರೋಗ್ಯ ಅಭಿಯಾನವನ್ನು ಹಮ್ಮಿಕೊಂಡಿರುವ ಅಭಿಯಾನ ಸಂಘಟನಾ ಸಮಿತಿಯ ಅಧ್ಯಕ್ಷ ಎಸ್. ಗಣೇಶ್ ರಾವ್.
ಕಿಡ್ನಿ ವೈಫಲ್ಯವು ತಡೆಯಬಹುದಾದ ಒಂದು ರೋಗ. ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯೇ ಕಿಡ್ನಿ ವೈಫಲ್ಯಕ್ಕೆ ಮೂಲ ಕಾರಣ. ಉಳಿದಂತೆ ಅನಿಯಮಿತ ನೋವು ನಿವಾರಕ ಔಷಧ ಸೇವನೆ ಮತ್ತು ಕಿಡ್ನಿ ವೈಫಲ್ಯದ ಕೌಟುಂಬಿಕ ಹಿನ್ನೆಲೆ. ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿರುವವರು ಕೇವಲ ಔಷದ ಸೇವಿಸಿ, ಡಯಟ್, ವ್ಯಾಯಾಮ, ಯೋಗ ಮಾಡುತ್ತಿದ್ದರೆ ಸಾಲದು. ಪ್ರತೀ ಮೂರು ತಿಂಗಳಿ ಗೊಮ್ಮೆ ಮೂತ್ರ ಪರೀಕ್ಷೆ ಮಾಡಿಸಿ, ಮೂತ್ರದಲ್ಲಿ ಪ್ರೊಟೀನ್ನ ಅಂಶ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಅರಿತುಕೊಳ್ಳಬೇಕು. ವರ್ಷಕೊಮ್ಮೆ ರಕ್ತ ಪರೀಕ್ಷೆ ಮಾಡಿಸಿ ಕ್ರಿಯೇಟಿನೈನ್ ಮಟ್ಟವನ್ನು ತಿಳಿದುಕೊಳ್ಳಬೇಕು. ಮೂತ್ರದಲ್ಲಿ ಪ್ರೊಟೀನ್ನ ಅಂಶ ಸೋರಿಕೆಯಾಗುತ್ತಿದೆ ಅಥವಾ ರಕ್ತದ ಕ್ರಿಯೇಟಿನೈನ್ 1.4ಗಿಂತ ಅಧಿಕವಿದೆಯೆಂದಾದಲ್ಲಿ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಈ ಅಭ್ಯಾಸವನ್ನು ರೂಢಿಸಿಕೊಂಡರೆ ಖಂಡಿತ ಕಿಡ್ನಿ ವೈಫಲ್ಯವನ್ನು ತಡೆಯಬಹುದು.
ಸರಕಾರದ ಆರೋಗ್ಯ ಇಲಾಖೆಯು ಕಿಡ್ನಿ ವೈಫಲ್ಯವನ್ನು ತಡೆಯುವ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ರಕ್ತದೊತ್ತಡ ಮತ್ತು ಮಧುಮೇಹ ರೋಗಗಳ ಉಚಿತ ತಪಾಸಣಾ ಶಿಬಿರ, ಉಚಿತ ಕಿಡ್ನಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಿಡ್ನಿ ಆರೋಗ್ಯ ಜನಜಾಗೃತಿ ಶಿಬಿರಗಳನ್ನು ಗ್ರಾಮ ಮಟ್ಟದಲ್ಲಿ ಸಂಘಟಿಸಬೇಕು. ಹಾಗಾದಲ್ಲಿ ನಮ್ಮ ದೇಶ/ರಾಜ್ಯ ಡಯಾಲಿಸಿಸ್ ಮುಕ್ತ ದೇಶ/ರಾಜ್ಯವಾಗಬಹುದು.
ಅಂಗಾಂಗ ದಾನದ ಜನಜಾಗೃತಿ:
ಆಪ್ತ ಬಂಧುಗಳಿಗೇ ರಕ್ತದ ಆವಶ್ಯಕತೆಯಿದ್ದಾಗ ಜನರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ರಕ್ತದ ಆವಶ್ಯಕತೆಯಿದೆಯೆಂಬ ಒಂದು ಸಂದೇಶ ಮೊಬೈಲ್ ಫೋನಲ್ಲಿ ಹರಿದಾಡಿದರೆ ಸಾಕು, ಪರಿಚಯವೇ ಇಲ್ಲದ ವ್ಯಕ್ತಿಗೂ ರಕ್ತದಾನ ಮಾಡಲು ಮುಂದಾಗುವ ಜನ ನಮ್ಮಲ್ಲಿ ಸಾಕಷ್ಟಿದ್ದಾರೆ. ರಕ್ತದಾನ ಶಿಬಿರಗಳಲ್ಲೂ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ರಕ್ತದಾನದ ಮಹತ್ವ ಮತ್ತು ರಕ್ತ ನೀಡುವುದರಿಂದ ದಾನಿಗೆ ಯಾವ ಆರೋಗ್ಯದ ಸಮಸ್ಯೆಯೂ ಬಾರದು ಎಂಬ ಜನಜಾಗೃತಿ ವ್ಯಾಪಕವಾದಾಗ ಉಂಟಾಗಿರುವ ಸಾಮಾಜಿಕ ಬದಲಾವಣೆಯಿದು. ಅಂಗಾಂಗ ದಾನ ಕುರಿತಾದ ಜನಜಾಗೃತಿಯೂ ಒಂದು ಆಂದೋಲನದ ರೂಪ ಪಡೆಯಬೇಕಾಗಿದೆ. ವಿಶೇಷವಾಗಿ ಪುರುಷರು ಅಂಗಾಂಗ ದಾನಕ್ಕೆ ಮುಂದಾಗಬೇಕಿದೆ.
ಮಂಗಳೂರು ನೆಪ್ರೊ ಯುರೋಲಜಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ,್ಷ ಮೂತ್ರ ರೋಗ ತಜ್ಞ ಡಾ. ಮುಹಮ್ಮದ್ ಸಲೀಮ್ರ ಪ್ರಕಾರ ಮಂಗಳೂರಿನಲ್ಲಿರುವ ಒಟ್ಟು ಆಸ್ಪತ್ರೆಗಳ ಸಮೀಕ್ಷೆ ನಡೆಸಿದರೆ ಸರಾಸರಿ ದಿನಕ್ಕೊಂದು ಬ್ರೈನ್ ಡೆತ್ ಕೇಸ್ಗಳು (ಅಪಘಾತ ಅಥವಾ ಮತ್ತಿತರ ಕಾರಣಗಳಿಂದ) ಬರುತ್ತವೆ. ಸಾವು ನಿಶ್ಚಿತವಾದ ಈ ರೋಗಿಗಳ ಪಾಲಕರು/ಕುಟುಂಬಸ್ಥರು ರೋಗಿಯ ಅಂಗಾಂಗ ದಾನಕ್ಕೆ ಮುಂದಾದರೆ, ಅಂಗಾಂಗ ಬೇಡಿಕೆಯ ಎಲ್ಲ ಸಮಸ್ಯೆಗಳು ಪರಿಹಾರವಾಗಬಹುದು. ಆದರೆ ಅಂತಹ ದೃಢ ನಿರ್ಧಾರ ತಗೊಳ್ಳುವವರ ಸಂಖ್ಯೆ ತೀರಾ ವಿರಳ. ನಿಮ್ಮ ಕಿಡ್ನಿ ಎಷ್ಟು ಸುರಕ್ಷಿತ?
ನಿಮಗೆ ಅತಿಯಾದ ರಕ್ತದೊತ್ತಡ ಇದೆಯೇ?
ನಿಮಗೆ ಮಧುಮೇಹ (ಸಕ್ಕರೆ ಕಾಯಿಲೆ) ಇದೆಯೇ?
ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕಿಡ್ನಿ ಕಾಯಿಲೆ ಇದೆಯೇ?
ನೀವು ಅತಿಯಾದ ತೂಕ ಹೊಂದಿದ್ದೀರಾ?
ನೀವು ಧೂಮಪಾನ ಮಾಡುತ್ತಿದ್ದೀರಾ?
ನಿಮ್ಮ ವಯಸ್ಸು 50 ದಾಟಿದೆಯೇ?
ಮೇಲಿನ ಯಾವುದಾದರೂ ಒಂದು ಅಥವಾ ಅದಕ್ಕಿಂತ ಹೆಚ್ಚು ಪ್ರಶ್ನೆಗಳ ಉತ್ತರ ಹೌದು ಎಂದಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳಿ. ಯಾಕೆಂದರೆ ಕಿಡ್ನಿ ಕಾಯಿಲೆಗಳಿಗೆ ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಲಕ್ಷಣಗಳಿರುವುದಿಲ್ಲ. ಹೀಗಾಗಿ ಕಿಡ್ನಿ ಆರೋಗ್ಯ ಕಾಪಾಡೋಣ, ಡಯಾಲಿಸಿಸ್ ಮುಕ್ತ ಸಮೃದ್ಧ ದೇಶ ಕಟ್ಟೋಣ.
ಕಿಡ್ನಿ ರೋಗಿಗಳಿಗೆ ಸಾಂತ್ವನ ನೀಡುವ ಯೋಜನೆಗಳು ಜಾರಿಯಾಗಲಿ
ಕಿಡ್ನಿ ವೈಫಲ್ಯದಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಕಂಗಾಲಾಗಿವೆ. ಅವರಿಗೆ ನೆರವಾಗುವ ಪರಿಣಾಮಕಾರಿ ಯೋಜನೆಗಳು ಸರಕಾರದಿಂದ ಇನ್ನೂ ಜಾರಿಯಾಗಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಕೆಲವೇ ಮಂದಿ ಕಿಡ್ನಿ ರೋಗಿಗಳಿಗೆ ಉಚಿತ ಡಯಾಲಿಸಿಸ್ ನಡೆಯುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಉಚಿತ ಡಯಾಲಿಸಿಸ್ ಯೋಜನೆಯ ಪ್ರಸ್ತಾಪ ಸರಕಾರದ ಮುಂದಿದ್ದರೂ ಇನ್ನೂ ಅನುಷ್ಠಾನಗೊಂಡಿಲ್ಲ. ಕಿಡ್ನಿ ರೋಗಿಗಳಿಗೆ ಉಚಿತ ಔಷಧಿ ನೀಡುವ ಯೋಜನೆ ಕೂಡಲೇ ಜಾರಿಯಾಗಬೇಕು. ಜನರಿಕ್ ಮೆಡಿಸಿನ್ಗಳಲ್ಲಿ ಕಿಡ್ನಿ ರೋಗಿಗಳ ಔಷಧಿಗಳು ಸೇರ್ಪಡೆಯಾಗಬೇಕು. ಕಿಡ್ನಿ ರೋಗಿಗಳಿಗೆ ಬಿಪಿಎಲ್ ಕಾರ್ಡ್ ನೀಡಬೇಕು. ಅಂಗವಿಕಲರ ಎಲ್ಲ ಸವಲತ್ತುಗಳು ಕಿಡ್ನಿ ರೋಗಿಗಳಿಗೆ ಸಿಗುವಂತಾಗಬೇಕು ಎನ್ನುತ್ತಾರೆ ದ.ಕ. ಜಿಲ್ಲಾ ಕಿಡ್ನಿ ರೋಗಿಗಳ ಸಂಘದ ಅಧ್ಯಕ್ಷ ವಿ.ಎಂ. ರಿಯಾಝ್.