ಕಂಪ್ಯೂಟರ್ ತಜ್ಞ ಕೆ.ಪಿ. ರಾವ್
‘ಬದುಕಿನ ಶಿಷ್ಯನಾಗುವುದು ಮುಖ್ಯ’
ಬದುಕಿನಲ್ಲಿ ಶ್ರೇಷ್ಠತ್ವ ಸಂಪಾದನೆ ಮಾಡಬೇಕಾದರೆ ಅಧ್ಯಯನ ಮತ್ತು ಅಧ್ಯಾಪನ ಮುಖ್ಯ ಅಂತ ಶಾಸ್ತ್ರ ಹೇಳ್ತದೆ. ಅದನ್ನು ಸಂಪೂರ್ಣ ನಂಬಿದವ ನಾನು. ದಿನದ ಕೊನೆಯಲ್ಲಿ ಆ ದಿನ ಏನೋ ಹೊಸತು ಕಲಿಯದೇ ಇದ್ದರೆ ಆ ದಿನ ವ್ಯರ್ಥ. ಮತ್ತೆ ಅಧ್ಯಾಪನ ಅಂದರೆ ಬೋಧನೆ ಅಂತ ಅಲ್ಲ. ಕಲಿತದ್ದನ್ನು ಹಂಚಿಕೊಳ್ಳುವುದು. ಕಲಿಕೆಯ ಆನಂದವನ್ನು ಹಂಚಿಕೊಳ್ಳುವ ಕ್ರಿಯೆ. ಹಾಗೆ ಹಂಚಿಕೊಂಡಾಗ ಕಲಿತದ್ದನ್ನು ಮತ್ತೆ ಕಲಿತ ಹಾಗೆ ಆಗುತ್ತದೆ. ಆ ಪುನರ್ ಕಲಿಕೆಯಲ್ಲಿ ಕಲಿತ ವಿಷಯವೇ ಇನ್ನೂ ಹೊಸತಾಗಿ ಕಾಣುತ್ತದೆ'' ಎಂದು ಮಾತಿಗಿಳಿದ ಕೆ.ಪಿ.ರಾಯರು ತಮ್ಮ ಬಾಲ್ಯದ ಒಂದು ಘಟನೆ ನೆನಪಿಸಿಕೊಂಡರು.
ಹುಟ್ಟು ಹಬ್ಬದ ಶುಭಕೋರಲು 28 ಫೆಬ್ರವರಿಯಂದು ಫೋನ್ ಮಾಡಿದವರಿಗೆ, ‘‘ಇವತ್ತಲ್ಲ ನಾಳೆ’’, ಎನ್ನುತ್ತಾ ಮಾರ್ಚ್ 1 ಕ್ಕೆ ಫೋನ್ ಮಾಡಿದವರಿಗೆ, ‘‘ಇವತ್ತಲ್ಲ ನಿನ್ನೆ’’ ಎನ್ನುತ್ತಾ ನಗುವ ಕೆ.ಪಿ. ರಾಯರು ಹುಟ್ಟಿದ್ದು ಫೆಬ್ರವರಿ 29 ರಂದು. ಅವರಂಥ ವ್ಯಕ್ತಿಗಳು ಬಹಳ ಅಪರೂಪ ಎನ್ನುವುದನ್ನು ಹೇಳಲೆಂದೇ ಅಪರೂಪದ ತಾರೀಖಿನಂದು ಅವರ ಜನನವಾದಂತಿದೆ ಮತ್ತು ಅವರ ‘‘ಇವತ್ತಲ್ಲ ನಾಳೆ’’ ‘‘ಇವತ್ತಲ್ಲ ನಿನ್ನೆ’’ ಎನ್ನುವ ಜೋಕ್ ಒಳಗಡೆ ಅವರು ಒಂದು ರೀತಿಯಲ್ಲಿ ಕಾಲಾತೀತರು ಎನ್ನುವ ಸತ್ಯ ಅಡಕವಾಗಿದೆ.
ಇಂಥಾ ವಿಶೇಷ ವ್ಯಕ್ತಿ ಕಿನ್ನಿ ಕಂಬಳ ಪದ್ಮನಾಭರಾವ್ ಅವರು ಕಂಪ್ಯೂಟರಿಗೆ ಕನ್ನಡ ಕಲಿಸಿದವರು ಎಂದೇ ಖ್ಯಾತರು. ಆದರೆ ಅವರ ಜ್ಞಾನ ಸಾಗರದಷ್ಟು ಆಳ, ಆಕಾಶದಷ್ಟು ವಿಶಾಲ. ಅವರ ಆಸಕ್ತಿಯ ವಿಷಯ ಆಕಾಶದ ಕೆಳಗಿರುವ, ಆಕಾಶದಲ್ಲಿರುವ ಮತ್ತು ಆಕಾಶದಾಚೆ ಇರುವ ಎಲಾ ಸಂಗತಿ.
ಮೊನ್ನೆ ಫೆಬ್ರವರಿ 28ರಂದು ಕೆ.ಪಿ. ರಾಯರ ಜನ್ಮದಿನವನ್ನು ಉಡುಪಿಯ ಸಾಗರ ದಡದಲ್ಲಿ ಆಚರಿಸಿ, ಮಾರ್ಚ್ ಒಂದರಂದು ಅವರೊಂದಿಗೆ ನಡೆಸಿದ ಒಂದು ಅನೌಪಚಾರಿಕ ಸಂವಾದದ ಸಂಗ್ರಹ ರೂಪ ಇಲ್ಲಿದೆ.
ಹಿಂದೊಮ್ಮೆ ಮಣಿಪಾಲದ ರಸ್ತೆಯೊಂದರ ಬದಿಯಲ್ಲಿ ನಿಂತು ಕೆ.ಪಿ.ರಾಯರು ಮತ್ತು ನಾನು ಮಾತನಾಡುತ್ತಿರುವಾಗ ಚಲಿಸುವ ಗಾಡಿಯಿಂದಿಳಿದು ಬಂದ ವ್ಯಕ್ತಿ ರಾಯರ ಕಾಲಿಗೆ ಬಿದ್ದು, ‘‘ಇವತ್ತು ನಾನೇನೇ ಆಗಿದ್ದರು ಅದು ನಿಮ್ಮಿಂದ’’ ಎಂದರು. ಆಗ ಒಂದಿಷ್ಟೂ ಬೀಗದೆ ರಾಯರು ಆತನಿಗೆ ‘‘ಬದುಕಿನ ಶಿಷ್ಯನಾಗುವುದು ಮುಖ್ಯ’’ ಎಂದು ಹೇಳಿ ಕಳುಹಿಸಿದರು. ಆ ಘಟನೆಯನ್ನು ನೆನಪಿಸಿಕೊಂಡು ಕೆ.ಪಿ. ರಾಯರೊಂದಿಗೆ ಸಂವಾದ ಆರಂಭಿಸಿದೆ.
‘‘ಬದುಕಿನಲ್ಲಿ ಶ್ರೇಷ್ಠತ್ವ ಸಂಪಾದನೆ ಮಾಡಬೇಕಾದರೆ ಅಧ್ಯಯನ ಮತ್ತು ಅಧ್ಯಾಪನ ಮುಖ್ಯ ಅಂತ ಶಾಸ್ತ್ರ ಹೇಳ್ತದೆ. ಅದನ್ನು ಸಂಪೂರ್ಣ ನಂಬಿದವ ನಾನು. ದಿನದ ಕೊನೆಯಲ್ಲಿ ಆ ದಿನ ಏನೋ ಹೊಸತು ಕಲಿಯದೇ ಇದ್ದರೆ ಆ ದಿನ ವ್ಯರ್ಥ. ಮತ್ತೆ ಅಧ್ಯಾಪನ ಅಂದರೆ ಬೋಧನೆ ಅಂತ ಅಲ್ಲ. ಕಲಿತದ್ದನ್ನು ಹಂಚಿಕೊಳ್ಳುವುದು. ಕಲಿಕೆಯ ಆನಂದವನ್ನು ಹಂಚಿಕೊಳ್ಳುವ ಕ್ರಿಯೆ. ಹಾಗೆ ಹಂಚಿಕೊಂಡಾಗ ಕಲಿತದ್ದನ್ನು ಮತ್ತೆ ಕಲಿತ ಹಾಗೆ ಆಗುತ್ತದೆ. ಆ ಪುನರ್‌ಕಲಿಕೆಯಲ್ಲಿ ಕಲಿತ ವಿಷಯವೇ ಇನ್ನೂ ಹೊಸತಾಗಿ ಕಾಣುತ್ತದೆ’’ ಎಂದು ಮಾತಿಗಿಳಿದ ಕೆ.ಪಿ.ರಾಯರು ತಮ್ಮ ಬಾಲ್ಯದ ಒಂದು ಘಟನೆ ನೆನಪಿಸಿಕೊಂಡರು.
ಸಮ ಪ್ರಮಾಣದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿದ್ದ ಊರು ಕಿನ್ನಿಕಂಬಳ. ಅಲ್ಲಿ ಮುಸ್ಲಿಮರು ಐದನೇ ತರಗತಿ ತನಕ ಓದುತ್ತಿದ್ದ ಸ್ಕೂಲ್ ಬೇರೆಯದಾಗಿತ್ತು. ಆ ಬಳಿಕ ಅವರು ರಾಯರು ಓದುತ್ತಿದ್ದ ಸರಕಾರೀ ಶಾಲೆಗೇ ಕಲಿಕೆ ಮುಂದುವರಿಸಲು ಬರುತ್ತಿದ್ದರು. ಆದರೆ ಹಾಗೆ ಐದನೇ ತರಗತಿಗೆ ಸೇರುವಾಗ ಕೆಲವರಿಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ಆ ಸಮಸ್ಯೆ ಪರಿಹರಿಸಲು ಶಾಲೆಯ ಶಿಕ್ಷಕರು ಹೊಸತಾಗಿ ಸೇರ್ಪಡೆ ಹೊಂದಿದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಜವಾಬ್ದಾರಿಯನ್ನು ಅದೇ ಶಾಲೆಯಲ್ಲಿ ಮೊದಲು ಕಲಿತ ಕೆಲವು ವಿದ್ಯಾರ್ಥಿಗಳಿಗೆ ನೀಡಿದರು. ಹಾಗೆ ರಾಯರಿಗೆ ಸಿಕ್ಕ ಕನ್ನಡ ಶಿಷ್ಯ ಮುಹಮ್ಮದ್ ಸೈನ್ಬಾಜಿ. ಆತನಿಗೆ ಕನ್ನಡ ಕಲಿಸುವ ಮುನ್ನ ರಾಯರು ಒಂದು ಷರತ್ತು ಹಾಕಿದರು. ಅದೇನೆಂದರೆ ತಾನು ಬಾಜಿಗೆ ಕನ್ನಡ ಕಲಿಸಿದರೆ ಆತ ತನಗೆ ಉರ್ದು ಕಲಿಸಬೇಕೆಂದು. ಬಾಜಿ ಒಪ್ಪಿದ. ಬಾಜಿಗೆ ಕನ್ನಡ ಕಲಿಸುತ್ತಾ ರಾಯರು ಆತನಿಂದ ಉರ್ದು ಕಲಿತರು.
‘‘ಅಧ್ಯಯನ ಮತ್ತು ಅಧ್ಯಾಪನ ಜೊತೆ ಜೊತೆಯಾಗಿ ಶುರುವಾದದ್ದು ಮೊದಲು ಹೀಗೆ’’ ಎಂದರು ರಾಯರು.
ಅವರು ನೆನಪಿಸಿಕೊಂಡ ಮತ್ತೊಂದು ಘಟನೆ ಕುಂಡ ಎಂಬ ಅವರ ಬಾಲ್ಯ ಸ್ನೇಹಿತನದ್ದು. ದಲಿತನಾಗಿದ್ದ ಕುಂಡ ರಾಯರಿಗೆ ಕಾಡು ಮೇಡು ಅಲೆಯುವುದನ್ನು ಕಲಿಸಿದವನು. ಅವನಿಗೆ ಕನ್ನಡ ಕಲಿಸಿದ್ದು ರಾಯರು. ಹೀಗೆ ಒಮ್ಮೆ ಕುಂಡನಿಂದ ಹೊಸತೊಂದು ಕಲಿಕೆ ಕಲಿಯಲು ರಾಯರಿಗೆ ಮನಸ್ಸಾಗಿ ದನವನ್ನು ಕಡಿಯುವ ಹೊತ್ತಿಗೆ ತನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅದನ್ನು ತನಗೆ ತೋರಿಸುವಂತೆ ನಿವೇದಿಸಿಕೊಂಡರು. ಕುಂಡ ಕರೆದುಕೊಂಡು ಹೋದ. ಕಡಿಯುವ ದೃಶ್ಯ ನೋಡಿದ ರಾಯರು ತಲೆಸುತ್ತಿ ಬಿದ್ದರು. ಎಚ್ಚರಾದಾಗ ಕುಂಡ ದನದ ಒಳಗಿನ ಬೇರೆ ಬೇರೆ ಭಾಗಗಳನ್ನು ಬೇರ್ಪಡಿಸುತ್ತಿದ್ದ. ರಾಯರಿಗೆ ತುಂಬಾ ಮಜವಾಗಿ ಕಂಡದ್ದು ಶಾಲೆಗೇ ಹೋಗದ ಕುಂಡನಿಗೆ ದನದ ದೇಹದಲ್ಲಿ ಎರಡೇ ರೀತಿಯದ್ದಿರುವುದು, ‘‘ತಿನ್ನಲಿಕ್ಕಾಗುವಂಥದ್ದು’’ ಮತ್ತು ‘‘ತಿನ್ನಲಿಕ್ಕಾಗದಂತಿರುವದ್ದು’’. ಕರುಳು, ಜಠರ ಕೋಶ ಇತ್ಯಾದಿ ಇತ್ಯಾದಿ ಅವನಿಗೆ ತಿಳಿಯದ್ದು. ಇದು ರಾಯರು ಹೇಳುವಂತೆ ಅವರಿಗೆ ನಮ್ಮ ಬದುಕು, ನಮ್ಮ ಬದುಕಿನ ಅಗತ್ಯ, ನಮಗೆ ಒದಗಿ ಬಂದ ಅವಕಾಶಗಳು ಹೇಗೆ ನಮ್ಮ ಭಾಷೆಯನ್ನೂ ರೂಪಿಸುತ್ತದೆ ಎಂದು ತಿಳಿ ಹೇಳಿದ ಘಟನೆ. ಕೆ.ಪಿ.ರಾಯರ ತಂದೆಯ ಕಾಲದಲ್ಲಿ ಕಿನ್ನಿಕಂಬಳದಲ್ಲಿ ಶಾಲೆ ಇದ್ದಿರಲಿಲ್ಲ. ಆ ಕಾಲದಲ್ಲಿ ಅವರ ಊರನ್ನು ಹಾದು ಹೋಗುತ್ತಿದ್ದ ಮೇಷ್ಟ್ರೊಬ್ಬರು ಊರಿನವರ ಕೋರಿಕೆಯ ಮೇರೆಗೆ ಆ ಊರಿನಲ್ಲಿ ಕೆಲವು ತಿಂಗಳುಗಳ ಕಾಲ ಉಳಿದುಕೊಂಡು ಅಲ್ಲಿನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಆದರೆ ಕಲಿಯಲು ಅಗತ್ಯ ಬೇಕಾದ ಬಳಪ ಇಲ್ಲದಾದ ಕಾರಣ, ಮಕ್ಕಳಿಗೆ ಮರಳಿನ ಮೇಲೆ ಬರೆಯಲು ಹೇಳಿಕೊಡಲಾಗಿತ್ತು. ಆಮೇಲೆ, ಅಕ್ಷರಗಳನ್ನು ಜೋಡಿಸಿ ವಾಕ್ಯ ಬರೆಯುವುದನ್ನು ಕಲಿಸಿಕೊಡಬೇಕಾದ ಸಂದರ್ಭದಲ್ಲಿ ಪಠ್ಯಪುಸ್ತಕ ಇಲ್ಲದ ಕಾರಣ, ಯಕ್ಷಗಾನದ ಭಾಗವತರನ್ನು ಕರೆದು ಅವರ ಕೈಯಲ್ಲಿ ಹಾಡಿಸಿ ಆ ಹಾಡಿನ ಪದವನ್ನು ಬರೆಸುತ್ತಿದ್ದರು. ಆ ರೀತಿಯಾಗಿ ಭಾಗವತಿಕೆಯ ಪದವನ್ನು ಬರೆಯುತ್ತಾ ಮಕ್ಕಳು ಅಕ್ಷರ ಜೋಡಿಸಿ ವಾಕ್ಯ ಬರೆಯುವುದನ್ನು ಕಲಿತರು.
ಅಂತಹ ತಂದೆಯ ಮಗ ಕಂಪ್ಯೂಟರಿಗೆ ಕನ್ನಡ ಕಲಿಸಿದ. ಈಗ ಆ ತಂತ್ರಜ್ಞಾನ ಯಾವ ಪರಿ ಮನುಷ್ಯ ಬದುಕಿನ ಭಾಗವಾಗಿದೆ ಎಂದರೆ ತಂತ್ರಜ್ಞಾನ ಮನುಷ್ಯ ದೇಹ ಮತ್ತು ಮನಸ್ಸಿನ ವಿಸ್ತರಣೆ ಎಂಬಷ್ಟು. ಹೀಗೆ ಬದಲಾದ ಕಾಲದಲ್ಲಿ ಕಲಿಕೆಯ ಸ್ವರೂಪ ಮತ್ತು ಕಲಿಕೆಯ ಕ್ರಮ ಬದಲಾಗಿದೆಯೇ ಎಂದು ಕೇಳಿದರೆ ಕೆ.ಪಿ. ರಾಯರು ಹೇಳಿದ್ದು, ‘‘ಕಲಿಕಾ ವಿಧಾನ ಕಲಿಕಾ ವಿಷಯ ಇವುಗಳು ಪ್ರತೀ ತಲೆಮಾರಿಗೂ ಹೊಸ ಹೊಸತು. ಭಾರತಕ್ಕೆ ಸ್ವಾತಂತ್ರ ಬಂದಾಗ ನಮ್ಮ ಶಾಲಾ ಪಠ್ಯದಲ್ಲಿ ಬದಲಾವಣೆಯಾಯಿತು. ಅಲ್ಲಿ ತನಕ ಐದನೇ ಜಾರ್ಜ್ ದೊಡ್ಡವ. ಆ ಮೇಲೆ ನೆಹರೂ ದೊಡ್ಡವ. ಒಂದು ರೀತಿಯ ಗೊಂದಲ. ಒಂದು ರೀತಿಯಲ್ಲಿ ಮಜಾ. ಎರಡನೇ ಮಹಾಯುದ್ಧ ಹೊಸ ವಿಜ್ಞಾನ ತಂತ್ರಜ್ಞಾನಕ್ಕೆ ದಾರಿ ಮಾಡಿಕೊಟ್ಟಿತು. ಉದಾಹರಣೆಗೆ ಸೆಮಿ ಕಂಡಕ್ಟರ್. ಅದನ್ನು ನಮ್ಮ ತಲೆಮಾರಿನವರು ಅಭ್ಯಾಸ ಮಾಡಿದ ರೀತಿ ನಮ್ಮ ಮುಂದಿನ ತಲೆಮಾರು ಅಭ್ಯಾಸ ಮಾಡುವ ಅಗತ್ಯ ಇರಲಿಲ್ಲ. ಇಟ್‌ವಾಸ್ ಗಿವನ್ ಟು ಆಲ್ ಆಫ್ ಯು. ಹಾಗೆ ಈಗಿನ ತಲೆಮಾರಿಗೆ ಈಗಿನ ಅನ್ವೇಷಣೆ ಇತ್ತೀಚಿನ ಬದಲಾವಣೆ ಬೆಳವಣಿಗೆ, ಅದರೊಂದಿಗೆ ಹೊಂದಿಕೊಂಡು ಹೋಗುವ ಅದನ್ನು ಕಲಿಯುವ ಚಾಲೆಂಜ್. ಅದು ಮುಂದಿನ ತಲೆಮಾರಿಗೆ ಗಿವನ್. ಆದರೆ ನಮ್ಮ ತಲೆಮಾರಿಗೂ ಈಗಿನ ತಲೆಮಾರಿಗೂ ಇರುವ ಒಂದು ದೊಡ್ಡ ವ್ಯತ್ಯಾಸ ಎಂದರೆ ಈ ಕಾಲದ ಹಾಗೆ ಅಂದೆಲ್ಲ ಇನ್ಫಾರ್ಮೆಶನ್ ಓವರ್ಲೋಡ್ ಇರಲಿಲ್ಲ. ಹಾಗಾಗಿ ನಾವು ನಿಧಾನಕ್ಕೆ ಬೆಳೆದವು ಆಗ ನಮ್ಮ ಬೇರುಗಳು ಗಟ್ಟಿಯಾದವು. ಈಗಿನ ತಲೆಮಾರು ಬಹಳ ಶೀಘ್ರಗತಿಯಲ್ಲಿ ಬೆಳೆಯುತ್ತದೆ. ಆ ಶೀಘ್ರತೆ ಬೇರನ್ನು ಗಟ್ಟಿಯಾಗಿಸುವುದಿಲ್ಲ. ಈಗ ಎಷ್ಟೆಲ್ಲಾ ಆಯ್ಕೆಗಳಿವೆ. ಆದರೆ ಯಾವ ಆಯ್ಕೆ ಸರಿ ತಪ್ಪು ಎಂದು ತಿಳಿಸಬಲ್ಲ ವಿವೇಕ ಸಾಧಿಸುವುದು ಕಷ್ಟವಾಗಿದೆ’’.
ಕೆ.ಪಿ. ರಾವ್ ಬರೀ ಕೋಶ ಓದಿದವರಲ್ಲ, ದೇಶ ಸುತ್ತಿದವರೂ ಕೂಡ. ದೇಶ ಸುತ್ತುವುದರಿಂದ ಆಗುವ ಕಲಿಕೆ ಎಂತಹದ್ದು ಎಂದು ಅವರು ಈ ರೀತಿಯಾಗಿ ವಿವರಿಸಿದರು: ‘‘ನಾನು ಮೊತ್ತ ಮೊದಲ ಬಾರಿಗೆ ದೂರದ ಊರಿಗೆ ಹೋದದ್ದು ಎಂದರೆ ಮದ್ರಾಸಿಗೆ. ಅಲ್ಲಿಗೆ ಹೋದಾಗ ಮೊದಲು ಕಲಿತ ವಿಷಯ ಎಂದರೆ ಅಲ್ಲಿನ ನಾಣ್ಯವೇ ಬೇರೆ ಎಂದು. ನಾಣ್ಯ ಎಂದರೆ ಅದು ಖರೀದಿಗೆ ಸೀಮಿತವಾದ ನಾಣ್ಯವಲ್ಲ. ಅದು ದೈನಂದಿನ ವ್ಯವಹಾರ ನಡೆಸಲು ಬೇಕಾದ ಜ್ಞಾನವೂ ಹೌದು. ಹೊಸ ಊರು, ಹೊಸ ಪ್ರದೇಶ, ಹೊಸ ಹೊಸ ಸಂಪರ್ಕ ಹೊಸ ಹೊಸ ಸಂಬಂಧಗಳನ್ನು ಸಾಧ್ಯವಾಗಿಸುತ್ತದೆ. ಅದೆಲ್ಲ ಆದಾಗ ನಮ್ಮ ಲೋಕ ಮತ್ತಷ್ಟು ವಿಸ್ತಾರವಾಗುತ್ತದೆ, ಬೆಳವಣಿಗೆ ಸಾಧ್ಯವಾಗಿಸುತ್ತದೆ. ನನ್ನ ಮಟ್ಟಿಗೆ ನನ್ನನ್ನು ಬಹಳವಾಗಿ ಬದಲಾಯಿಸಿದ್ದು ಮತ್ತು ಬೆಳೆಸಿದ್ದು ಮುಂಬೈ. ನಾನು ಕಿನ್ನಿಕಂಬಳ ಮಂಗಳೂರಿನಲ್ಲೇ ಇದ್ದಿದ್ದರೆ ನನಗೆ ಮುಂಬೈ ನೀಡಿದ ಅವಕಾಶಗಳು ಸಿಗುತ್ತಿರಲಿಲ್ಲ. ಬೇರೆ ರೀತಿಯ ಬೆಳೆವಣಿಗೆ ಸಾಧ್ಯವಾಗುತ್ತಿತ್ತೇನೋ. ಆದರೆ ಅದು ಕಿನ್ನಿಕಂಬಳ, ಮಂಗಳೂರು ನೀಡುವ ಅವಕಾಶಗಳಿಗೆ ಸೀಮಿತವಾಗಿರುತ್ತಿತ್ತು. ಹೊಸದಿಗಂತ ಕಾಣಿಸುವುದು ದೇಶ ಸುತ್ತಿದಾಗಲೇ’’. ಇಷ್ಟೆಲ್ಲಾ ಹೇಳಿದ ರಾಯರು ಒಮ್ಮೆ ರೈಲ್ವೆ ಮುಷ್ಕರ ಸಮಯದಲ್ಲಿ ಮುಂಬೈಯಿಂದ ದಿಲ್ಲಿಗೆ ಹೊರಟ ಕೊನೆಯ ರೈಲೇರಿ ದಿಲ್ಲಿಗೆ ಹೋದ ಪ್ರಸಂಗ ನೆನಪಿಸಿಕೊಂಡರು. ಕಾಲಿಡಲು ಜಾಗವಿಲ್ಲದಷ್ಟು ತುಂಬಿದ ರೈಲು ಡಬ್ಬಿಯಲ್ಲಿ ರಾಯರು ಒಂದು ಉಪಾಯ ಮಾಡಿದರು. ತನ್ನ ಪಕ್ಕದಲ್ಲಿದ್ದವನ ಸ್ನೇಹ ಆಗುತ್ತಿದ್ದಂತೆ ಅವನ ಕೈ ನೋಡಿ ಅವನ ಭವಿಷ್ಯ ಹೇಳಿದರು. ಅದನ್ನು ನೋಡಿದ ಕೇಳಿದ, ಮತ್ತೊಬ್ಬ ತನ್ನ ಕೈ ಮುಂದಿಟ್ಟ. ಅದನ್ನು ನೋಡಿ ಕೇಳಿ ಇನ್ನೊಬ್ಬ. ಹೀಗೆ ಇಬ್ಬರು ಮೂವರ ಕೈ ನೋಡಿ ಭವಿಷ್ಯ ಹೇಳಿದಾಗ ಯಾರೋ ಒಬ್ಬರು ಫರ್ಮಾನು ಹೊರಡಿಸಿದರು, ‘‘ಪಂಡಿತ್ ಅವರಿಗೆ ಕುಳಿತುಕೊಳ್ಳಲು ಜಾಗ ಮಾಡಿ ಕೊಡಿ’’. ಸೀಟ್ ಮೇಲೆ ಕುಳಿತಿದ್ದ ಒಬ್ಬರು ಧಿಡೀರನೆದ್ದು ರಾಯರಿಗೆ ಕುಳಿತುಕೊಳ್ಳಲು ಹೇಳಿದರು. ರಾಯರು ಭವಿಷ್ಯ ನುಡಿಯುತ್ತಾ ಆರಾಮವಾಗಿ ದಿಲ್ಲಿ ತಲುಪಿದರು. ‘‘ಹೊಸ ಪರಿಸರಕ್ಕೆ ಒಗ್ಗಿಕೊಳ್ಳುವ, ಅಲ್ಲಿ ಉಳಿಯಲು ಬೇಕಾದ ಮಾರ್ಗೋಪಾಯ ಕಂಡುಕೊಳ್ಳಲು ಬೇಕಾದ ತಯಾರಿ ನಮ್ಮಲ್ಲಿ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಕಷ್ಟ. ಅದರರ್ಥ ಇನ್ನೊಬ್ಬರ ತಲೆ ಮೇಲೆ ಕಲ್ಲು ಹಾಕಿ, ಇನ್ನೊಬ್ಬರನ್ನು ಏಣಿಯಾಗಿಸಿಕೊಂಡು ಮೇಲೇರುವುದಲ್ಲ. ಅಲ್ಲಿ ಒದಗಿ ಬರುವ ಅವಕಾಶ ಉಪಯೋಗಿಸಿಕೊಳ್ಳಲು ಒಂದಿಷ್ಟು ಪೂರ್ವ ಸಿದ್ಧತೆ ನಮ್ಮಲ್ಲಿರ ಬೇಕಾಗುತ್ತದೆ. ಅಷ್ಟೇ’’.
‘‘ನೀವು ಕಂಪ್ಯೂಟರಿಗೆ ಕನ್ನಡ ಕಲಿಸುವಾಗ ನಿಮ್ಮ ಸಹಾಯಕ್ಕೆ ಬಂದದ್ದು ಕೇವಲ ತಂತ್ರಜ್ಞಾನದ ಕುರಿತಾದ ತಿಳುವಳಿಕೆ ಅಲ್ಲ, ಭಾರತೀಯ ಜ್ಞಾನಪರಂಪರೆ ಸಹ ಎಂದು ನೀವು ಒಮ್ಮೆ ಹೇಳಿದ್ದಿದೆ. ಅದನ್ನು ವಿವರಿಸುತ್ತೀರಾ?’’ ಎಂದು ಕೇಳಿದಾಗ ಕೆ.ಪಿ.ರಾಯರು, ‘‘ಪಾಣಿನಿಯಂತಹ ಜ್ಞಾನಿಗಳು ಭಾಷೆಯಲ್ಲಿ ಉಪಯೋಗಿಸಲ್ಪಡುವ ಅಕ್ಷರಗಳನ್ನು ಸ್ವರ ಮತ್ತು ವ್ಯಂಜನ ಎಂದಾಗಿ ವಿಂಗಡಿಸಿದರು. ಅಷ್ಟೇ ಅಲ್ಲ. ಯಾವ ಸ್ವರ ಯಾವ ವ್ಯಂಜನದೊಂದಿಗೆ ಉಚ್ಚರಿಸಲು ಸಾಧ್ಯ, ಸಾಧ್ಯವಿಲ್ಲ ಎಂಬುದೆಲ್ಲವನ್ನು ವಿವರಿಸಿದರು. ಬಾಯಿಯ ಯಾವ ಭಾಗದಿಂದ ಯಾವ ಸ್ವರ ಹೊರಡುತ್ತದೆ ಎಂಬುದನ್ನೂ ಅಧ್ಯಯನ ನಡೆಸಿದರು. ಈ ಎಲ್ಲಾ ಕೆಲಸ ನಾನು ಹುಟ್ಟುವ ಎಷ್ಟೋ ವರ್ಷಗಳ ಹಿಂದೆ ನಡೆದು ಹೋಗಿತ್ತು. ಹಾಗಾಗಿ ನನ್ನ ಕೆಲಸ ಸುಲಭವಾಯಿತು. ಸ್ವರ ಸೇರಿದಾಗ ಮಾತ್ರ ವ್ಯಂಜನ ವ್ಯಂಜಿತವಾಗುತ್ತದೆ ಅಂತ ಗೊತ್ತಿತ್ತು. ಅದನ್ನೇ ಬಳಸಿ ಫೊನೆಟಿಕ್ರೂಲ್ಸ್ ಅಪ್ಲೈ ಮಾಡಿದೆ. 26 ಆಂಗ್ಲ ಕೀ ಇರುವ ಕೀಲಿ ಮಣೆಗೆ ಸ್ವರ ವ್ಯಂಜನಗಳ ಆಧಾರದ ಮೇಲೆ ಅವುಗಳ ಸಂಯೋಗದ ಮೂಲಕ ಕನ್ನಡ ಭಾಷೆ ಅಳವಡಿಸಿದೆ’’ ಎನ್ನುತ್ತಾ ರಾಯರು ಹೇಳಿದರು. ‘‘ಎಲ್ಲಾ ಭಾಷೆಯಲ್ಲಿ ಲಿಪಿ ತುಂಬಾ ತರ್ಕಹೀನವಾಗಿ ಸೃಷ್ಟಿಗೊಂಡಿರುತ್ತದೆ. ಕ ಮತ್ತು ಖ ಯಾವ ಹೋಲಿಕೆಯನ್ನೂ ಹೊಂದಿರುವುದಿಲ್ಲ. ಅದು ಕೇವಲ ಕನ್ನಡದಲ್ಲಿಯಲ್ಲ. ಇತರ ಭಾರತೀಯ ಭಾಷೆಗಳದ್ದೂ ಅದೇ ಕತೆ. ಹಾಗಿರುವಾಗ ಲಿಪಿ ಬಳಸಿಕೊಂಡು ಕಂಪ್ಯೂಟರಿನಲ್ಲಿ ಕೀಲಿ ಮಣೆ ಸಾಧಿಸುವುದು ಅಸಾಧ್ಯ. ಆಗ ಇರುವ ಏಕೈಕ ಮಾರ್ಗ ಎಂದರೆ ಉಚ್ಚಾರಣೆಯನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಕೆಲಸ ಮಾಡುವುದು’’.
ಹೀಗೆ ತಾನು ಮಾಡಿದ ಆವಿಷ್ಕಾರಕ್ಕೆ ಅದೆಷ್ಟೋ ಹಿಂದಿನ ತಲೆಮಾರಿನವರ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಕೆ.ಪಿ.ರಾಯರು ತಾವು ಆವಿಷ್ಕರಿಸಿದ ಕೀಲಿ ಮಣೆಗೆ ಪೇಟೆಂಟ್ ಮಾಡಿಸಲೇ ಇಲ್ಲ. ‘‘ಅದು ಕನ್ನಡಕ್ಕೆ’’ ಎಂದು ಹೇಳುವ ರಾಯರು ಹಿಂದೊಮ್ಮೆ ಹೇಳಿದ್ದರು, ‘‘ಇದನ್ನು ಮನ್ನಣೆಗಾಗಿ ಮಾಡಲಿಲ್ಲ. ಜನರು ಕಂಪ್ಯೂಟರನ್ನು ತಮ್ಮ ಭಾಷೆಗಳಿಗಾಗಿ ಸುಲಭದಲ್ಲಿ ಬಳಸುವಂತಾಗುವುದೇ ನನಗೆ ಮನ್ನಣೆ. ಇದು ಧಾರಾಳ ಸಿಕ್ಕಿತು. ಉಚ್ಚಾರವನ್ನು ಆಧಾರವಾಗಿಟ್ಟ ಈ ಕೀ ಬೋರ್ಡ್ ಕಲ್ಪನೆ ಜಪಾನಿ ಭಾಷೆಗೂ ಅನ್ವಯವಾಗುವಂತಿತ್ತು. ಒಮ್ಮೆ ಇದು ಸಾಧ್ಯವೆಂದು ಗೊತ್ತಾದರೆ ಹಲವು ಕಂಪ್ಯೂಟರ್ ತಜ್ಞರು ಈ ಹೆಜ್ಜೆ ಹಿಡಿದು ಹೊಸತುಗಳನ್ನು ಕಾಣುತ್ತಾರೆ. ಹಾಗಾಗಿ ನಾನು ಇದನ್ನು ಬಚ್ಚಿಡಲು ಹೋಗಲಿಲ್ಲ’’.
ಕಂಪ್ಯೂಟರಿಗೆ ಕನ್ನಡ ಕಲಿಸಿದ ರಾಯರ ಸಾಧನೆ ಹೇಗೆ ವಿವಿಧ ಜ್ಞಾನ ಶಾಖೆಗಳ ಸಂಗಮ ಹೊಸ ಸಾಧ್ಯತೆ ತೋರುತ್ತವೆ ಎಂದು ನಿರೂಪಿಸುತ್ತವೆ. ಸ್ವತಃ ಕೆ.ಪಿ.ರಾಯರೇ ಹಲವು ಜ್ಞಾನಶಾಖೆಗಳ ಒಂದು ಸಂಗಮ. ಇದರ ಕುರಿತು ಕೇಳಿದರೆ ಅವರು ತಮ್ಮ ಗುರುಗಳಾದ ಡಿ.ಡಿ. ಕೋಸಾಂಬಿಯನ್ನು ನೆನಪಿಸಿಕೊಂಡು ಹೇಳುತ್ತಾರೆ,
‘‘ಇಫ್ ಯು ಆರ್ ನಾಟ್ ಇಂಟರೆಸ್ಟೆಡ್ ಇನ್ ಎವೆರಿಥಿಂಗ್ ದೆನ್ ಯು ಆರ್ ನಾಟ್ ಇಂಟರೆಸ್ಟೆಡ್ ಇನ್ ಎನಿಥಿಂಗ್’’ ಇತ್ತೀಚಿನ ದಿನಗಳಲ್ಲಿ ಬಹಳವಾಗಿ ‘ಸಾಮಾಜಿಕ ಅರಿವು’ ಮತ್ತು ‘ಸಾಮೂಹಿಕ ಜ್ಞಾನ’ದ ಕುರಿತಾಗಿ ಆಲೋಚಿಸುತ್ತಿದ್ದಾರೆ. ಅವರ ಪ್ರಕಾರ ಭಿನ್ನ ಜ್ಞಾನ ಶಾಖೆಗಳು ಒಂದು ಕಡೆ ಕುಳಿತು ಒಂದು ಸಮಸ್ಯೆ ಕುರಿತು ಆಲೋಚಿಸಿದರೆ ಅದಕ್ಕೆ ಹೆಚ್ಚು ಪರಿಣಾಮಕಾರಿಯಾದ ಪರಿಹಾರ ಸಿಗಬಹುದು. ಬದುಕಿನಲ್ಲಿ ಎಲ್ಲ ವಿಷಯವೂ ಒಂದಲ್ಲ ಒಂದು ರೀತಿಯಲ್ಲಿ ಅಂತರ ಸಂಬಂಧ ಹೊಂದಿವೆ. ಹಾಗಾಗಿ ಒಂದೇ ವಿಷಯವನ್ನು ಅದರ ಸೂಕ್ಷ್ಮ ವಿವರಗಳಲ್ಲಿ ಅಧ್ಯಯನ ಮಾಡುವುದು ಒಂದು ಅಗತ್ಯವಾದರೆ ಆ ವಿವರಗಳನ್ನೆಲ್ಲ ಸೇರಿಸಿ ಹೊಸ ಅರಿವು ಹೊಸ ಪರಿಹಾರ ಸಾಧಿಸುವುದು ಆಗಬೇಕು ಎನ್ನುವುದು ಅವರ ಆಶಯ. ಇದಕ್ಕೆ ಅವರು ಕೊಡುವ ಉದಾಹರಣೆ ಮಾನಸಿಕ ಸಮಸ್ಯೆಗಳದ್ದು. ‘‘ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗಾಗುವ ದೊಡ್ಡ ಸಮಸ್ಯೆ ಮಾತಿನಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲಿಕ್ಕಾಗದ್ದು. ಎಕ್ಲಾನ್ ಎಂಬ ವಿಜ್ಞಾನಿ ಕೆಲವು ವರ್ಷಗಳಿಂದ ಮನುಷ್ಯನ ಮುಖದಲ್ಲಿರುವ ಮಾಂಸ ಮತ್ತು ಬೇರೆ ಬೇರೆ ಭಾವನೆಗಳು ಉಕ್ಕುವ ಸಂದರ್ಭದಲ್ಲಿ ಆ ಮಾಂಸಗಳು ಹಿಗ್ಗುವ ಕುಗ್ಗುವ ಪರಿಯ ಕುರಿತು ಅಧ್ಯಯನ ನಡೆಸಿದ್ದಾನೆ. ಅವನ ಈ ಅಭ್ಯಾಸದ ಕಲಿಕೆಯನ್ನು ಮಾನಸಿಕ ತಜ್ಞರು ಉಪಯೋಗಿಸಿಕೊಂಡರೆ ಮಾನಸಿಕ ಬೇನೆಯಿಂದ ಬಳಲುತ್ತಿರುವ ಆ ಬೇನೆಯನ್ನು ಮಾತಿನಲ್ಲಿ ವಿವರಿಸಲು ಹೆಣಗುತ್ತಿರುವ ಮಂದಿಯ ನೋವನ್ನು ಅರಿಯಲು ಅವರ ಶುಶ್ರೂಷೆ ಮಾಡಲಿಕ್ಕೆ ಸಹಾಯ ಆಗಬಹುದು’’. ಡಿ.ಡಿ. ಕೋಸಾಂಬಿ ಮತ್ತು ಹೋಮಿ ಬಾಬಾ ಜೊತೆ ಕೆ.ಪಿ.ರಾಯರ ನಿಕಟ ಸಂಪರ್ಕ ಸುಪ್ರಸಿದ್ಧವಾದದ್ದು. ಆದರೆ ಅಷ್ಟೇ ನಿಕಟ ಸಂಪರ್ಕ ಅವರಿಗೆ ಅನ್ನಪೂರ್ಣಾ ದೇವಿ, ಎ.ಕೆ. ರಾಮಾನುಜನ್, ಗಿರೀಶ್ ಕಾರ್ನಾಡ್, ಕೀರ್ತಿನಾಥ ಕುರ್ತುಕೋಟಿ, ಚಿತ್ರ ನಿರ್ದೇಶಕ ಜಿ.ಅರವಿಂದನ್ ಜೊತೆಯೂ ಇತ್ತು. ಅಣುಶಕ್ತಿ ವಿಷಯದಲ್ಲಿ ಬಾಬಾ ಮತ್ತು ಕೋಸಾಂಬಿಯವರಿಗೆ ಇದ್ದ ಭಿನ್ನಾಭಿಪ್ರಾಯ ಅವರಿಬ್ಬರ ನಡುವೆ ಬಿರುಕು ಉಂಟು ಮಾಡಿತು. ಆ ಸಂದರ್ಭದಲ್ಲಿ ವೈಯಕ್ತಿಕವಾಗಿ ತಾನು ಕೊಸಾಂಬಿ ಎತ್ತಿ ಹಿಡಿದ ಸೌರಶಕ್ತಿ ಪರವಾಗಿ ಇದ್ದರೂ ಬಾಬಾ ಜೊತೆ ತನ್ನ ಸ್ನೇಹವನ್ನು ಹಾಗೆ ಕಾಪಾಡಿಕೊಂಡಿದ್ದರು ಕೆ.ಪಿ. ರಾಯರು.
ಕೆಲವು ವರ್ಷಗಳ ಹಿಂದೆ ‘‘ಅಹಂ ಬ್ರಹ್ಮಾಸ್ಮಿ’’ ಎಂದು ಭೃತ ಹರಿ ಹೇಳಿದ್ದು ಭಾಷೆಯ ಕುರಿತು ಎಂದು ಕೆ.ಪಿ.ರಾಯರು ನಮ್ಮ ಸಂವಾದವೊಂದರ ಸಂದರ್ಭದಲ್ಲಿ ಹೇಳಿದ್ದರು. ‘‘ನಾನು ಬ್ರಹ್ಮ ಅಂತ ಆತ ಹೇಳುತ್ತಿರುವುದಲ್ಲ. ಬದಲಾಗಿ ನಾನು ಭಾಷೆಯ ಮುಖಾಂತರ ಒಂದು ಲೋಕವನ್ನು ಸೃಷ್ಟಿಸಬಲ್ಲೆ. ತನ್ನಿಂದ ಒಂದು ಸೃಷ್ಟಿ ಸಾಧ್ಯ ಆಗಿರುವ ಕಾರಣಕ್ಕೆ ತಾನು ಸಹ ಬ್ರಹ್ಮ ಎಂದು ಆತ ಹೇಳುತ್ತಿರುವುದು’’ ಎಂದು ವಿವರಿಸಿದ್ದರು. ಭಾಷೆಯ ಕುರಿತು ಬಹಳವಾಗಿ ಆಲೋಚಿಸುವರ ಅವರ ಬಳಿ ಮಾತು ಮುಗಿಸುವ ಮುನ್ನ ಮೌನದ ಕುರಿತು ಅವರಿಗೇನು ಹೇಳಲಿಕ್ಕಿದೆ ಎಂದು ಕೇಳಿದೆ. ರಾಯರು ಹೇಳಿದರು, ‘‘ಮೌನವೂ ಒಂದು ಭಾಷೆ. ನಿಚ್ಚಳ ಮೌನ ಅಂತ ಏನೂ ಇರುವುದಿಲ್ಲ. ಯೋಗಧ್ಯಾನ ಮಾಡುವಾಗ ನಿಮ್ಮೆಲ್ಲಾ ಆಲೋಚನೆ ಹೊರಹಾಕಿ, ಮೌನವಾಗಿ ಅಂತೆಲ್ಲ ಹೇಳ್ತಾರೆ. ಆದರೆ ಅದೆಲ್ಲ ಆಗುವಂಥದ್ದಲ್ಲ. ಯಾಕೆ ಅಂದರೆ ಮೌನ ಏನನ್ನೋ ಹೇಳುತ್ತಿರುತ್ತದೆ. ಏನಲ್ಲದಿದ್ದರೂ ಅದು ತನ್ನೊಂದಿಗೆ ಒಂದು ಸಂಭಾಷಣೆಯಲ್ಲಿರುತ್ತದೆ. ಆ ಮೌನವನ್ನು ಯಾರೋ ಕೇಳುತ್ತಿರುತ್ತಾರೆ, ಗಮನಿಸುತ್ತಿರುತ್ತಾರೆ ಮತ್ತು ಅದು ಏನನ್ನೋ ಹೇಳುತ್ತಿರುತ್ತದೆ. ಸಾವು ಮಾತ್ರ ಮೌನಿ ಆಗಿರಲು ಸಾಧ್ಯ’’.