ಆಟದ ಬಯಲಿಗೊಂದು ಸುತ್ತು
‘‘ಅಂತಃಕರಣ’’ ಶಿವಮೊಗ್ಗದ ಹದಿನಾಲ್ಕರ ಹರೆಯದ ಬಾಲಕ. ಈತ ಕನ್ನಡ ಸಾಹಿತ್ಯಲೋಕದ ಹೊಸ ಮಿಂಚು. ಈಗಾಗಲೇ ಕಥೆ, ಕಾದಂಬರಿ, ವಿಜ್ಞಾನ ಸಾಹಿತ್ಯ, ಕ್ರೀಡಾ ಅಂಕಣ ಬರಹಗಳೆಂದು ಸುಮಾರು ಇಪ್ಪತ್ತನಾಲ್ಕು ಪುಸ್ತಕಗಳನ್ನು ಬರೆದ ಬಾಲ ಸಾಹಿತಿ. ಈತನ ಹೊಸ ಕೃತಿ ಆಟದ ಬಯಲು.ಇದು ಈತ ವಿಶ್ವಕನ್ನಡಿಗ ಎಂಬ ಪ್ರಸಿದ್ಧ ಅಂತರ್ಜಾಲ ಪತ್ರಿಕೆಗೆ ಬರೆದ ಕ್ರೀಡಾ ಅಂಕಣಗಳ ಸಂಕಲನ.
ಅಂತಃಕರಣನ ಆಸಕ್ತಿಯೇ ಒಂದು ವಿಸ್ಮಯ. ಆಟದ ಬಯಲು ಕೃತಿಯಲ್ಲಿ ಬ್ಯಾಡ್ಮಿಂಟನ್, ಕಬಡ್ಡಿ ಮತ್ತು ಪುಟ್ಬಾಲ್ ಕ್ರೀಡೆಗಳ ಕುರಿತ ಒಟ್ಟು ಇಪ್ಪತ್ತೊಂದು ವೈವಿಧ್ಯಮಯ ಲೇಖನಗಳಿವೆ. ಆಟದ ಬಯಲು ಕೃತಿಯಲ್ಲಿ ಅಂತಃಕರಣ ಎಷ್ಟು ಕ್ರೀಡಾಪಟುಗಳ ಬಗ್ಗೆ ಬರೆದಿದ್ದಾನೋ ಅವರೆಲ್ಲರ ಕ್ರೀಡಾ ಬದುಕಿನ ಒಟ್ಟು ಸಾಧನೆ, ಆ ಕ್ರೀಡಾಳುವಿನ ಸಾಮರ್ಥ್ಯ, ದೌರ್ಬಲ್ಯ ಎಲ್ಲವನ್ನೂ ನಿಖರವಾಗಿ ಬರೆದಿದ್ದಾನೆ.
ಒಬ್ಬ ಅಂಕಣಕಾರನಿಗೆ ಕೆಲವು ಮಿತಿಗಳಿರುತ್ತವೆ. ಬಹಳ ಮುಖ್ಯವಾಗಿ ತನಗೆ ನೀಡಲಾಗುವ ಸ್ಪೇಸ್ ಒಳಗೆ ತಾನು ಹೇಳಬೇಕಾದುದನ್ನೆಲ್ಲವನ್ನೂ ಹೇಳಬೇಕಾಗುತ್ತದೆ.ಇಂತಹ ಸಂದರ್ಭಗಳಲ್ಲಿ ನಾನೂ ಒಳಗೊಂಡಂತೆ ಅನೇಕ ಅಂಕಣಕಾರರು ಕೆಲವೊಮ್ಮೆ ತಮ್ಮ ವಿಚಾರಗಳನ್ನು ಪೂರ್ಣಗೊಳಿಸಲಾಗದೇ ಸೋತುಬಿಡುವುದಿದೆ. ಅಂತಃಕರಣನ ಅಂಕಣ ಬರಹಗಳನ್ನು ಓದಿದಾಗ ಆತನ ಬರವಣಿಗೆಯ ಶಿಸ್ತು ಕಂಡು ನನಗೆ ಆಶ್ಚರ್ಯವಾಗುತ್ತದೆ.
ಬ್ಯಾಡ್ಮಿಂಟನ್ ಆಟ ಕ್ರಿಕೆಟ್, ಟೆನಿಸ್, ಫುಟ್ಬಾಲ್, ಕಬಡ್ಡಿಯಷ್ಟು ಜನಪ್ರಿಯ ಕ್ರೀಡೆಯಾಗಿ ಇನ್ನೂ ಭಾರತದಲ್ಲಿ ಬೆಳೆದಿಲ್ಲ. ಪ್ರಕಾಶ್ ಪಡುಕೋಣೆ, ಪುಲ್ಲೇಲ ಗೋಪಿಚಂದ್, ಸೈನಾ ನೆಹ್ವಾಲ್, ಸಿಂಧು, ಜ್ವಾಲಾ ಗುಟ್ಟಾ ಮುಂತಾದ ಬೆರಳೆಣಿಕೆಯ ಹೆಸರುಗಳನ್ನು ಬಿಟ್ಟರೆ ಭಾರತದ ಸಾಮಾನ್ಯ ಕ್ರೀಡಾಪ್ರೇಮಿಗಳಿಗೆ ಅದರಾಚೆಗಿನ ಸೂಕ್ಷ್ಮ ವಾದ ಮಾಹಿತಿಗಳಿಲ್ಲ. ಆ ಆಟದ ಸೌಂದರ್ಯ, ಸ್ಪರ್ಧಾತ್ಮಕತೆ, ಸೆನ್ಸೇಶನಲ್ ಆದ ಹೊಸ ತಾರೆಗಳು, ಅವರ ಶಕ್ತಿ ಸಾಮರ್ಥ್ಯ ಮತ್ತು ಮಿತಿಗಳು ಆಟದ ಶೈಲಿ, ಅವರ ದಾಖಲೆಗಳು, ಅಂಕಿಅಂಶಗಳು ಇತ್ಯಾದಿಗಳನ್ನೆಲ್ಲಾ ಅಂತಃಕರಣ ಇಲ್ಲಿ ಕರಾರುವಾಕ್ಕಾಗಿ ದಾಖಲಿಸಿದ್ದಾನೆ.
ಬಂಡವಾಳಶಾಹಿಗಳ ಹೂಡಿಕೆ ಮತ್ತು ಗ್ಲಾಮರಸ್ ಟಚ್ ನಿಂದಾಗಿ ಕಬಡ್ಡಿ ಕಳೆದೈದು ವರ್ಷಗಳಿಂದೀಚೆಗೆ ಭಾರತದಲ್ಲಿ ಕ್ರಿಕೆಟ್ ನ ಸನಿಹದಲ್ಲೇ ದೌಡಾಯಿಸುತ್ತಿದೆ. ಕಬಡ್ಡಿಯ ಬಗ್ಗೆ ಅಂತಃಕರಣ ಇಲ್ಲಿ ಬರೆದ ಬರಹಗಳು ಕನ್ನಡನಾಡಿನಲ್ಲಿ ಕಬಡ್ಡಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬಲ್ಲುದು. ಅಷ್ಟು ಮನಮುಟ್ಟುವಂತೆ ಅಂತಃಕರಣ ಕಬಡ್ಡಿಯ ರೋಚಕತೆಯನ್ನು ಕೆಲವು ತಂಡ ಮತ್ತು ಆಟಗಾರರ ಸಾಧನೆಗಳ ಆಧಾರದಲ್ಲಿ ಕಟ್ಟಿಕೊಟ್ಟಿದ್ದಾನೆ. ಕಬಡ್ಡಿಯ ಪ್ರಸಿದ್ಧ ಮತ್ತು ಉದಯೋನ್ಮುಖ ತಾರೆಗಳ ಆಟದ ವೈಖರಿ, ಅವರ ದಾಖಲೆಗಳ ಅಂಕಿ ಅಂಶಗಳು , ಅವರ ಶಕ್ತಿ ಮತ್ತು ಮಿತಿಗಳನ್ನು ಕಣ್ಣಿಗೆ ಕಟ್ಟುವಂತೆ ಇಲ್ಲಿ ದಾಖಲಿಸಿದ್ದಾನೆ.
ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದರೂ ಕೇರಳ ಮತ್ತು ಪಶ್ಚಿಮ ಬಂಗಾಳದ ಹೊರತಾಗಿ ಇತ್ತೀಚಿನವರೆಗೆ ದೊಡ್ಡ ಮಟ್ಟದಲ್ಲಿ ಭಾರತದಲ್ಲಿ ಫುಟ್ಬಾಲ್ ಬೆಳೆಯಲಿಲ್ಲ ಎಂದರೆ ತಪ್ಪಾಗದು. ಇತ್ತೀಚಿನ ಒಂದು ದಶಕದಲ್ಲಿ ಭಾರತದ ಮೂಲೆಮೂಲೆಗಳಿಗೂ ಫುಟ್ಬಾಲ್ ಕ್ರೇಝ್ ಹರಡಿದೆ. ಈ ಹಿಂದೆ ಕ್ಲಬ್ ಮಟ್ಟದ ಫುಟ್ಬಾಲ್ ಟೂರ್ನಮೆಂಟ್ ಗಳು ಇತ್ತಾದರೂ ಇಂಡಿಯನ್ ಸೂಪರ್ ಲೀಗ್ ಪ್ರಾರಂಭವಾದ ಬಳಿಕ ಭಾರತದಲ್ಲಿ ಪುಟ್ಬಾಲ್ ಬೆಳೆಯುತ್ತಿದೆ. ಅಂತಃಕರಣನಂತಹ ಬರಹಗಾರರು ದಾಖಲಿಸುವ ದಟ್ಟ ಮಾಹಿತಿಯುಕ್ತ ರೋಚಕ ಬರಹಗಳು ಅದಕ್ಕೆ ಹೊಸ ಖದರು ನೀಡುತ್ತಿದೆ. ಇಲ್ಲಿ ಅನೇಕ ಪ್ರಸಿದ್ಧ ಆಟಗಾರರು ಮತ್ತು ತಂಡಗಳ ಬಗ್ಗೆ ಅಂತಃಕರಣ ಬರೆದಿದ್ದಾನೆ. ಫುಟ್ಬಾಲ್ ಎಂದರೆ ಜಾಗತಿಕವಾಗಿ ಹೇಗೆ ಗ್ಲಾಮರಸ್ ಕ್ರೀಡೆಯಾಗಿದೆಯೋ ಭಾರತದಲ್ಲೂ ಫುಟ್ಬಾಲ್ ಹಾಗೆಯೇ ಬೆಳೆಯುತ್ತಿದೆ.
ಈ ಕೃತಿಯನ್ನು ಓದಿದರೆ ಎಂತಹ ಓದುಗನೂ ಈ ಬಾಲಕನ ಕ್ರೀಡಾ ಜ್ಞಾನದ ಬಗ್ಗೆ ಬೆರಗಾಗುವಂತಿದೆ. ಕ್ಲಿಷ್ಟ ವಿಷಯಗಳನ್ನೂ ಸರಳವಾಗಿ ಅರ್ಥೈಸುವ ರೀತಿಯಲ್ಲಿ ಸರಳವಾಗಿ ಬರೆಯುತ್ತಾನೆ. ಅಗಾಧ ಕ್ರೀಡಾ ಜ್ಞಾನ ಹೊಂದಿರುವ ಅಂಕಣಕಾರ ಅಂತಃಕರಣನ ಕ್ರೀಡಾಸಕ್ತಿ ಮತ್ತು ಬರಹದ ಸವಿಯೂ ಈ ಕೃತಿಯಲ್ಲಿದೆ.
ಕೃತಿ: ಆಟದ ಬಯಲು
ಲೇಖಕ : ಅಂತಃ ಕರಣ
ನಾನು ಓದಿದ ಪುಸ್ತಕ
ಇಸ್ಮತ್ ಪಜೀರ್