ಅಯ್ಯೂಬ್ ಅಹ್ಮದ್ ಜೀ ಎಂಬ ವೀರಬಾಹು
ಚಿಕ್ಕಂದಿನಿಂದಲೇ ಬಡವರ, ಭಿಕ್ಷುಕರ, ದೀನದಲಿತರ ಮೇಲೆ ಪ್ರೀತಿ, ಮಮಕಾರವನ್ನು ಬೆಳೆಸಿಕೊಂಡವರು ಅಯ್ಯೂಬ್. ಜೀವನ ನಿರ್ವಹಣೆಗೆ ಕಾರು ಕೊಳ್ಳಲು ಹೋಗಿ, ಜೀವನದ ಗತಿಯನ್ನೇ ಬದಲಿಸಿ ಕೊಂಡ ಕತೆ ಅಯ್ಯೂಬ್ ರವರದು.
ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು॥
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
ಪದ ಕುಸಿಯೆ ನೆಲವಿಹುದು? ಮಂಕುತಿಮ್ಮ॥
ಇದು ಜೀವನಸಾರವನ್ನು ಸಾರುವ , ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧಿಯಾದ ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗದ ಒಂದು ಜನಪ್ರಿಯ ಪದ್ಯ. ಇದು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಬದುಕಿ, ಎಲ್ಲೋ ಮಣ್ಣಾಗುವ ಜೀವನದ ಗತಿಯನ್ನು ಕಣ್ಣಿಗೆ ಕಟ್ಟುವ ಪದ್ಯ. ಜೀವನಯಾನದಲ್ಲಿ ಎಷ್ಟೋ ಜನರ ಬದುಕು ಅನಾಥವಾದರೆ, ಎಷ್ಟೋ ಮಂದಿ ಅನಾಥವಾಗಿಯೇ ಸಾಯುತ್ತಾರೆ. ಅವರ ಬದುಕಿನ ಕಾಯ ಅನಾಥ ಶವವಾಗುತ್ತದೆ. ಹುಟ್ಟುತ್ತಾ ಅನಾಥವಾಗುವುದಕ್ಕೆ ಯಾರದೋ ಒಂದು ಹೆಜ್ಜೆ ಕಾರಣವಾದರೆ, ಅನಾಥ ಸಾವಿಗೆ ಅವರದೋ ಅಥವಾ ಇನ್ಯಾರದೋ ಇನ್ನೊಂದು ಹೆಜ್ಜೆ ಕಾರಣವಾಗಿರುತ್ತದೆ. ಈ ಕುಸಿತದ ಹೆಜ್ಜೆಗಳಿಗೂ ಒಂದು ನೆಲೆಯಿರುತ್ತದೆ ಎಂಬುದನ್ನು ಮೇಲಿನ ಪದ್ಯದ ಕೊನೆಯ ಸಾಲು ತಿಳಿಸುತ್ತದೆ. ಹೆಜ್ಜೆ ಕುಸಿದು ಅಂತ್ಯ ಕಂಡ ಅನಾಥ ಶವಗಳಿಗೆ ‘‘ಪದ ಕುಸಿಯೆ ನೆಲವಿಹುದು....’’ ಎಂಬುದನ್ನು ಸಾಕಾರಗೊಳಿಸಿ ಅವುಗಳಿಗೆ ಮುಕ್ತಿ ಕೊಡಲು ಮೈಸೂರಿನಲ್ಲೊಬ್ಬ ನಿಜವಾದ ಸಾಹೇಬನಿದ್ದಾನೆ. ಈ ಕಾಯಕ ಯೋಗಿಯ ಹೆಸರು ‘‘ಅಯ್ಯೂಬ್ ಅಹ್ಮದ್ ಜೀ’’. ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವ ಮುಕ್ತಿದಾತ ಇವರು ಆಧುನಿಕ ವೀರಬಾಹು.
ಹುಟ್ಟು ಜೀವನ ಪ್ರೀತಿಯನ್ನೇ ಬೆಳೆಸಿಕೊಂಡ ಅಯ್ಯೂಬ್ ರವರದು ‘‘ಇನ್ಸಾನಿಯತ್ ಜಿಂದಾಬಾದ್’’ ಅಂದರೆ ‘‘ಮಾನವೀಯತೆಗೆ ಜಯವಾಗಲಿ’’ ಎಂಬ ನಂಬಿಕೆಯ ಕತೆ. ಮೈಸೂರು ನಗರದ ಎನ್. ಆರ್. ಮೊಹಲ್ಲಾದ ಹಾಜಿ ಬಶೀರ್ ಅಹ್ಮದ್ ಹಾಗೂ ಸಾಜಿದಾ ಬಾನು ದಂಪತಿಯ ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳ ತುಂಬು ಸಂಸಾರದಲ್ಲಿ ಕೊನೆಯ ಮಗ ಈ ಅಯ್ಯೂಬ್ ಅಹ್ಮದ್. ಚಿಕ್ಕಂದಿನಿಂದಲೇ ಬಡವರ, ಭಿಕ್ಷುಕರ, ದೀನದಲಿತರ ಮೇಲೆ ಪ್ರೀತಿ, ಮಮಕಾರವನ್ನು ಬೆಳೆಸಿಕೊಂಡವರು ಅಯ್ಯೂಬ್. ಜೀವನ ನಿರ್ವಹಣೆಗೆ ಕಾರು ಕೊಳ್ಳಲು ಹೋಗಿ, ಜೀವನದ ಗತಿಯನ್ನೇ ಬದಲಿಸಿ ಕೊಂಡ ಕತೆ ಅಯ್ಯೂಬ್‌ರದ್ದು. ಅವರ ಹತ್ತೊಂಬತ್ತನೇ ವಯಸ್ಸಿನಲ್ಲಿ ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸಲು ಕಾರು ಕೊಳ್ಳುವ ನೆಪದಲ್ಲಿ ಅಲ್ಪ ಸ್ವಲ್ಪ ಕೂಡಿಟ್ಟ ಮತ್ತು ಸಾಲದ ಹಣದೊಂದಿಗೆ ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ಸರಕಾರಿ ಬಸ್ಸಿನಲ್ಲಿ ಹೋಗುವಾಗ ಬಂಡೀಪಾಳ್ಯ ಎಂಬಲ್ಲಿ ಹಠಾತ್ತನೇ ನಿಂತ ಬಸ್ಸಿನ ಮಂದಿಗೆ ರಸ್ತೆಬದಿಯಲ್ಲಿ ನೆರೆದ ಜನರ ದೊಡ್ಡ ಗುಂಪೊಂದು ಕಾಣುತ್ತದೆ. ಆ ಗುಂಪಿನ ಮಧ್ಯೆ ಅಪಘಾತಕ್ಕಿಡಾಗಿ ಮರಣ ಹೊಂದಿದ ವ್ಯಕ್ತಿಯ ಶವ ಕಾಣುತ್ತದೆ. ಬಸ್ಸಿನಿಂದ ಇಳಿದ ಅಯ್ಯೂಬ್ ಶವದ ಬಳಿ ಹೋಗಿ ಇಣುಕುತ್ತಾರೆ. ಕಾರಣವೇನೆಂದು ಕೇಳಿದರೆ ಅಯ್ಯೂಬ್, ‘‘ನಮ್ಮ ಪ್ರವಾದಿ ಮುಹಮ್ಮದ್(ಸ) ‘‘ದಾರಿಯಲ್ಲಿ ಯಾರಾದರೂ ಸತ್ತಿದ್ದರೆ, ಮೊದಲು ಮುಖ ನೋಡು, ಪರಿಚಯವಿದ್ದರೆ ಮೊದಲು ಅವರ ಮನೆಯವರಿಗೆ ತಿಳಿಸು. ಇದು ದೇವರ ಕೆಲಸ, ಪುಣ್ಯದ ಕೆಲಸ’’ ಎಂದಿದ್ದಾರೆ ಎಂದು ನಾನು ಮುಖ ನೋಡಿದೆ. ಆದರೆ ಗುರುತು ಸಿಗಲಿಲ್ಲ. ಬಸ್ ಹತ್ತಿ ಹೊರಟೆ’’ ಎನ್ನುತ್ತಾರೆ. ಹಳೇ ಮಾಡಲ್ ಅಂಬಾಸಿಡರ್ ಕಾರನ್ನು ಕೊಂಡು ಸಂಜೆ ವಾಪಸ್ ಬರುವಾಗ ಅದೇ ಜಾಗದಲ್ಲಿ ಅದೇ ಶವದೊಂದಿಗೆ ಪೊಲೀಸನೊಬ್ಬ ಕೆಲವು ಜನರೊಂದಿಗೆ ನಿಂತಿರುವುದು ಕಂಡು ಅಯ್ಯೂಬ್ ವಿಚಾರಿಸಿದಾಗ ಯಾವ ವಾಹನವೂ ಶವ ಸಾಗಿಸಲು ಮುಂದೆ ಬಂದಿಲ್ಲ ಎಂದಾಗ ಅಯ್ಯೂಬ್,‘‘ನಾನಿದ್ದೀನಲ್ಲ’’ ಎಂದು ಶವವನ್ನು ತಮ್ಮ ಕಾರಿನಲ್ಲೇ ಮೈಸೂರಿನ ಮೆಡಿಕಲ್ ಕಾಲೇಜಿಗೆ ಹೊತ್ತು ತರುತ್ತಾರೆ. ಮೊದಲ ಸಲ ಕಾರುಕೊಂಡು ಇಮಾಮ್ ಶಾ ಗೋರಿ (ದರ್ಗಾ)ಗೆ ಹೋಗುವ ಬದಲು ಶವ ಹೊತ್ತು ಮೆಡಿಕಲ್ ಕಾಲೇಜಿನ ಶವಾಗಾರಕ್ಕೆ ಹೋದದ್ದನ್ನು ದೇವರ ಪೂಜೆಯೆಂದೇ ಹೆಮ್ಮೆಯಿಂದ ಅಯ್ಯೂಬ್ ಹೇಳಿಕೊಳ್ಳುತ್ತಾರೆ. ಆದರೆ ನಂತರ ನಡೆದ ಕೆಲವು ಘಟನೆಗಳಿಗೆ ವಿಷಾದಿಸುತ್ತಾರೆ. ಚಿಕ್ಕ ಪಟ್ಟಣದಲ್ಲಿ ಏನೂ ಮಾಡಿದರೂ ಕೆಲವರ ಕಣ್ಣಿಗೆ ಬೀಳುತ್ತದೆ. ಹಾಗೆಯೇ ಅಯ್ಯೂಬ್ ತಂದ ಶವದ ವಿಷಯ ಇವರು ಮನೆ ತಲುಪುವ ಮೊದಲೇ ಎಲ್ಲರಿಗೂ ತಿಳಿದು ಎಲ್ಲರ ತಿರಸ್ಕಾರಕ್ಕೆ ಗುರಿಯಾಗುತ್ತಾರೆ. ಮನೆಯವರ ಬೈಗುಳ, ಅಪಮಾನಗಳಿಂದ ಬೇಸತ್ತ ಅಯ್ಯೂಬ್, ಕಾರನ್ನು ಬಿಟ್ಟು ಯಾರಿಗೂ ಹೇಳದೆ ಬೆಂಗಳೂರಿನ ಬಸ್ ಹಿಡಿಯುತ್ತಾರೆ.
ಅವರೇ ಹೇಳುವಂತೆ ಬೆಂಗಳೂರಿನ ದೊಡ್ಡಮಾವಳ್ಳಿಯಲ್ಲಿ Flash Mineral Water ಕಂಪೆನಿಯಲ್ಲಿ ಕೆಲಸಕ್ಕೆ ಸೇರುತ್ತಾರೆ. ಕೆಲಸಕ್ಕೆ ಸೇರಿದ ಮೂರನೇ ದಿನ ಒಂದು ರವಿವಾರ ಬಿಡುವಿರುತ್ತದೆ. ಮಾಲಕರಲ್ಲಿ ಬಿನ್ನವಿಸಿ ಲಾಲ್‌ಬಾಗ್ ನೋಡಲು ಹೊರಡುತ್ತಾರೆ. ಅಲ್ಲಿ ಹೋದಾಗ ಅಲ್ಲಿಯ ಲೆಫ್ಟ್ ಗೇಟ್ ನಲ್ಲಿ ಹೆಚ್ಚಿನ ಜನಜಂಗುಳಿಯಿರುತ್ತದೆ. ದೊಂಬರಾಟವೋ, ಇಲ್ಲಾ ಚಿತ್ರೀಕರಣವೋ ಎಂಬ ಕುತೂಹಲದೊಂದಿಗೆ ಅಲ್ಲಿ ಇಣುಕಿದಾಗ ಶವವೊಂದು ಬಿದ್ದಿರುವುದು ಕಾಣುತ್ತದೆ. ಅಲ್ಲಿಯೂ ಮೊದಲಿನ ಸಮಸ್ಯೆಯೇ. ಯಾರೂ ಶವ ಮುಟ್ಟಲು ಮುಂದೆ ಬಂದಿರುವುದಿಲ್ಲ. ಅಯ್ಯೂಬ್ ಹುಟ್ಟುಗುಣವೆಂಬಂತೆ ಅಲ್ಲಿಯೂ ಹೆಣಸಾಗಿಸಲು ಪೊಲೀಸರಿಗೆ ನೆರವಾಗುತ್ತಾರೆ. ಇದರಿಂದ ಅಲ್ಲಿ ಕೆಲವರ ಪ್ರಶಂಸೆಗೆ ಒಳಗಾಗುತ್ತಾರೆ. ಮಾಲಕರಿಗೆ ತಿಳಿಸಿದರೆ ಕೆಲಸಕ್ಕೆಲ್ಲಿ ಕುತ್ತು ಬರುತ್ತದೋ ಎಂದು ತಿಳಿಸದೆ, ತಿಳಿಸದೆ ಇರಲೂ ಆಗದೆ ಮೂರು ದಿನಗಳ ನಂತರ ತಿಳಿಸಿದರೆ ಅವರಿಂದಲೂ ಸಹ ‘‘ಮನುಷ್ಯನಾಗಿ ಹುಟ್ಟಿ ಮಾಡಬೇಕಾಗಿರೋ ಕೆಲಸ ಮಾಡಿದ್ದೀಯ. ಅದು ದೇವರ ಕೆಲಸ ಶಹಬ್ಬಾಸ್’’ ಅಂತ ಅನ್ನಿಸಿಕೊಳ್ಳುತ್ತಾರೆ. ಈ ಮಧ್ಯೆ ಅಪ್ಪ ಅಮ್ಮನ ನೆನಪು ಹಾಗೂ ಇದೇ ಕೆಲಸವನ್ನು ಹುಟ್ಟೂರಿನಲ್ಲಿಯೇ ಯಾಕೆ ಮುಂದುವರಿಸಬಾರದು ಅಂತ ತಿಳಿದು ಮೈಸೂರಿಗೆ ವಾಪಸಾಗುತ್ತಾರೆ ಅಯ್ಯೂಬ್. ಪೋನ್, ಮೊಬೈಲ್‌ಗಳಿಲ್ಲದ ಕಾಲದಲ್ಲಿ ತಲೆಮರೆಸಿಕೊಂಡು ಹೋದ ಮಗನನ್ನು ಕಾಣದೆ ಆತಂಕದಲ್ಲಿದ್ದ ಮನೆಯವರು ಅವರನ್ನು ಬರಮಾಡಿಕೊಳ್ಳುತ್ತಾರೆ. ಮನೆಗೆ ಹಿಂದಿರುಗಿದ ಅಯ್ಯೂಬ್ ಅಪ್ಪ ಅಮ್ಮನಲ್ಲಿ ನೀವು ನನಗೆ ಮೊದಲಿನಿಂದಲೂ ಕುರ್‌ಆನ್ ಕಲಿಸುತ್ತಿದ್ದೀರಿ, ಹೇಳಿಕೊಟ್ಟಿದ್ದೀರಿ. ಅದು ಮಾನವೀಯತೆಯನ್ನಲ್ಲವೇ ಹೇಳೋದು. ಅದು ಏನು ಹೇಳುತ್ತೇ, ‘‘ಬೂಕೇಂಕಿ ಖಾನಾ ಕಿಲಾವ್, ಲಂಗೇ ಕಿ ಕಪಡಾ ಪಿಲಾವ್, ಮುಸಾಫಿರ್ ಕಾ ರಾಸ್ತಾ ದಿಕಾವ್’’ ಅಲ್ವಾ; ಆದ್ದರಿಂದ ನಾನು ಈ ಅನಾಥ ಶವಗಳಿಗೆ ಒಂದು ದಾರಿ ತೋರಿಸುತ್ತೇನೆ. ಮಿಕ್ಕಿದ್ದೆಲ್ಲಾ ಅಲ್ಲಾಹ್ ನೋಡಿಕೊಳ್ಳುತ್ತಾನೆ ಎಂದು ಸಮಾಧಾನ ಚಿತ್ತದಿಂದ ಮನವರಿಕೆ ಮಾಡಿಕೊಡುತ್ತಾರೆ. ಇದನ್ನು ಕೇಳಿದ ಅಮ್ಮ ಅವರ ಹಣೆಗೆ ಹೂ ಮುತ್ತನ್ನಿಟ್ಟು ‘‘ನೀನು ತಪ್ಪು ಮಾಡ್ತಾ ಇಲ್ಲ, ಮುಂದುವರಿಸು’’ ಎಂದು ಆಶೀರ್ವದಿಸುತ್ತಾರೆ.
ಅಂದಿನಿಂದ ಇಂದಿನವರೆಗೆ ಅಯ್ಯೂಬ್ ಮೈಸೂರಿನ ಸುತ್ತಾಮುತ್ತ, ಶ್ರೀರಂಗಪಟ್ಟಣ, ನಂಜನಗೂಡು, ಟಿ. ನರಸೀಪುರ, ಬನ್ನೂರು, ಪಿರಿಯಾಪಟ್ಟಣದಲ್ಲಿ ಹಾಗೂ ಕರೆ ಬಂದರೆ, ಚಾಮರಾಜನಗರ, ಗುಂಡ್ಲುಪೇಟೆ ಮುಂತಾದ ಕಡೆ ಹೋಗಿ ಅನಾಥ ಶವಗಳನ್ನು ಹೊತ್ತು ತಂದು ಮುಕ್ತಿ ಕಾಣಿಸುತ್ತಿದ್ದಾರೆ. ಅವರ ಕಾರ್ಯವೈಖರಿ ತುಂಬಾ ಶಿಸ್ತುಬದ್ಧ. ಅವರಿಗೆ ಸಾರ್ವಜನಿಕರಿಂದ ಅಥವಾ ಪೊಲೀಸರಿಂದ ಕರೆ ಬರುತ್ತದೆ. ರಸ್ತೆಬದಿಯಲ್ಲಿ, ರೈಲು ಹಳಿಯ ಮೇಲೆ, ಚರಂಡಿಯಲ್ಲಿ, ಕೆರೆಯಲ್ಲಿ ಅಥವಾ ಮರಕ್ಕೆ ನೇತು ಬಿದ್ದ ಶವಗಳಿರುತ್ತವೆ. ಸಾರ್ವಜನಿಕರಿಂದ ಕರೆಬಂದರೆ ಮೊದಲು ಪೊಲೀಸರಿಗೆ ಮಾಹಿತಿ ಕೊಡುತ್ತಾರೆ. ನಂತರ ಶವವನ್ನು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೋ ಇಲ್ಲಾ ಮೆಡಿಕಲ್ ಕಾಲೇಜಿನ ಶವಾಗಾರಕ್ಕೋ ತರುತ್ತಾರೆ. ಆ ಶವದ ಮುಖವನ್ನು ಪೋಟೊ ತೆಗೆದು ಹತ್ತಿರದ ಪೊಲೀಸ್ ಠಾಣೆಗಳಿಗೆ ನೀಡುತ್ತಾರೆ ಹಾಗೂ ಇತ್ತೀಚೆಗೆ ತಮ್ಮ ಫೇಸ್ಬುಕ್ ಪೇಜ್‌ನಲ್ಲೂ ಪ್ರಕಟಿಸುತ್ತಾರೆ. ಮೂರು ದಿವಸಗಳವರೆಗೆ ಯಾರೂ ವಾರಸುದಾರರು ಬರದಿದ್ದಲ್ಲಿ, ಪೊಲೀಸರ ಅಪ್ಪಣೆ ಮೇರೆಗೆ ಆಯಾ ಧರ್ಮಕ್ಕನುಗುಣವಾಗಿ ಅವರವರ ರುದ್ರಭೂಮಿಗಳಲ್ಲೇ ತಮ್ಮದೇ ಖರ್ಚಿನಲ್ಲಿ ಶವಸಂಸ್ಕಾರ ಮಾಡುತ್ತಾರೆ. ಅವರನ್ನು ಜಾತಿ, ಧರ್ಮದ ಬಗ್ಗೆ ಕೇಳಿದರೆ, ‘‘ಎಲ್ಲರ ರಕ್ತ ಒಂದೇ ಬಣ್ಣ, ಒಂದೇ ಭೂಮಿ, ಒಂದೇ ಊಟ ಅಲ್ವಾ ಸರ್?’’ ಅಂತ ನಮ್ಮನ್ನೇ ಪ್ರಶ್ನಿಸುತ್ತಾರೆ.
ಕೆಲವೊಮ್ಮೆ ಗುರುತು ಪತ್ತೆ ಹಚ್ಚಿ ವಾರಸುದಾರರು ಬಂದರೂ, ಶವ ಸಂಸ್ಕಾರಕ್ಕೆ ನೆರವಾದದ್ದೂ ಇದೆ. ಅವರೇ ಹೇಳುವಂತೆ ಒಮ್ಮೆ ಕೆ.ಆರ್.ಎಸ್. ಹಿನ್ನೀರಿನಲ್ಲಿ ಬಿದ್ದ ಶವ ತೆಗೆಯಲು ಅಲ್ಲಿಯ ಸ್ಥಳೀಯ ಈಜುಗಾರರು 30,000 ರೂಪಾಯಿಗಳನ್ನು ಬೇಡಿಕೆಯಿಟ್ಟಾಗ ಪೊಲೀಸರು ಅಯ್ಯೂಬ್ ರವರನ್ನು ಕರೆಸಿ ಶವದ ವಾರಸುದಾರರಿಗೆ ಪರಿಚಯಿಸಿ ಅಯ್ಯೂಬ್ ಕೇಳಿದಷ್ಟು ಕೊಡಬಹುದು ಎಂದಾಗ, ಶವತೆಗೆದ ಅಯ್ಯೂಬ್ ವಾರಸುದಾರ ಹಿರಿಯಜ್ಜನಪರಿಸ್ಥಿತಿಯನ್ನು ಅವರು ಹಾಕಿಕೊಂಡಿದ್ದ ಬಟ್ಟೆಯಿಂದಲೇ ಅಳೆದು ಅವರು ಕೊಡಲು ಬಂದ 2,000 ರೂಪಾಯಿಗಳ ಜೊತೆಗೆ ತನ್ನಲ್ಲಿದ್ದ ಶವಕ್ಕೆ ಹೊದಿಸುವ ಬಟ್ಟೆ ಮತ್ತು ಸಂಸ್ಕಾರಕ್ಕೆ ಬೇಕಾದ ಸ್ವಲ್ಪ ಹಣವನ್ನು ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ತನಗಾಗಿ, ತನ್ನ ಆರೋಗ್ಯಕ್ಕಾಗಿ ನಿಮ್ಮ ದೇವರಲ್ಲಿ ಪ್ರಾರ್ಥಿಸಿ. ನಾನು ಇನ್ನಷ್ಟು ಸದೃಢನಾಗಿ ಮತ್ತಷ್ಟು ಸೇವೆಮಾಡಲು ಆಶೀರ್ವದಿಸಿ ಎನ್ನುತ್ತಾರೆ. ಹೀಗೆ ಪ್ರತೀ ಅನಾಥ ಶವಕ್ಕೆ ಬೇಕಾದ ಬಟ್ಟೆ ಮತ್ತು ಇತರ ಖರ್ಚುಗಳನ್ನು ತಾವೇ ಭರಿಸುತ್ತಾರೆ. ಇಷ್ಟೆಲ್ಲಾ ಖರ್ಚು ವೆಚ್ಚಗಳನ್ನು ಹೇಗೆ ಬರಿಸುತ್ತೀರಾ ಎಂದರೆ, ‘‘ಎಲ್ಲಾ ದೇವರ ಕರಿಷ್ಮಾ’’ ಎನ್ನುತ್ತಾ, ‘‘ರಾತ್ರಿ 11ರಿಂದ 11.30 ರವರೆಗೆ ಯಾರೊಂದಿಗೂ ಮಾತನಾಡುವುದಿಲ್ಲ. ಆ ಸಮಯದಲ್ಲಿ ‘‘ಸಲಾತುಲ್ ಹಾಜತ್ ( ಜರೂರತ್ ಕಿ ನಮಾಝ್)’’ ಅನ್ನು 4 ಸಲ ಮಾಡುತ್ತೇನೆ. ನಾನು ಕೇಳಿದ್ದೆಲ್ಲಾ ದೇವರು ಕೊಡ್ತಾ ಇದ್ದಾನೆ’’ ಎನ್ನುತ್ತಾರೆ ಅಯ್ಯೂಬ್. ಅವರು ದೇವರ ಪವಾಡಗಳನ್ನು ನಂಬುತ್ತಾರೆ. ಒತ್ತಾಯಿಸಿ ಕೇಳಿದರೆ, ನಾನು ದೇವರಲ್ಲಿ ಕೇಳಿದ್ದು ಉಡುಗೊರೆ ರೂಪದಲ್ಲಿ ಯಾರೋ ತಂದು ಕೊಡುತ್ತಾರೆ ಎನ್ನುತ್ತಾರೆ. ಒಂದು ಶವಸಂಸ್ಕಾರಕ್ಕೆ ಪೊಲೀಸರು 100 -150 ರೂಪಾಯಿಗಳನ್ನು ಕೊಡುತ್ತಾರೆ. ಮೊದ ಮೊದಲು ಅಯ್ಯೂಬ್ ರಾತ್ರಿ ಪಾಳಿಯಲ್ಲಿ ಕೂಲಿ ಕೆಲಸ, ಕಾರ್ ಡ್ರೈವಿಂಗ್ ಮಾಡುತ್ತಾ ಬಂದ ಹಣದಲ್ಲಿ ಇವೆಲ್ಲವನ್ನೂ ನಿಭಾಯಿಸುತ್ತಿದ್ದರು. ಅವರ ಆದಾಯದಲ್ಲಿ ಮೂರು ಪಾಲು ಮಾಡುತ್ತಾ, ಮೊದಲ ಪಾಲನ್ನು ಹೆಂಡತಿ ಮಕ್ಕಳಿಗೆ, ಎರಡನೇ ಪಾಲನ್ನು ಅನಾಥ ಶವ ಸಂಸ್ಕಾರಕ್ಕೆ ಹಾಗೂ ಮೂರನೇ ಪಾಲನ್ನು ರಸ್ತೆ ಬದಿಯ ಬಡವರಿಗೆ, ಭಿಕ್ಷುಕರಿಗೆ ದಾನಮಾಡುತ್ತಾ ಬರುತ್ತಿದ್ದಾರೆ. ಇದಕ್ಕೆ ದೊರಕುತ್ತಿರುವ ತಮ್ಮ ಹೆಂಡತಿ ರೂಹಿ ತಬಸ್ಸುಮ್ ರ ಸಹಕಾರವನ್ನು ನೆನೆಯುತ್ತಾರೆ. ಪೊಲೀಸರು ಕೊಡುವ 100 -150 ರೂಪಾಯಿಗಳಲ್ಲಿ ಸಂಸಾರ ಸಾಗಿಸಲು ಅಸಾಧ್ಯವಾಗಿರುವಾಗ ಅವರ ಹೆಂಡತಿ ಟೈಲರಿಂಗ್ ಮೂಲಕ ತಮ್ಮ ಬೇಡಿಕೆಗಳನ್ನು ನೀಗಿಸಿಕೊಳ್ಳುತ್ತಾ ತಮ್ಮ ಎರಡು ಹೆಣ್ಣು ಮಕ್ಕಳಿಗೆ ಓದು ಕಲಿಸಿ ಸಲಹುತ್ತಿರುವುದನ್ನು ತುಂಬು ಹೃದಯದಿಂದ ಸ್ಮರಿಸುತ್ತಾರೆ.
ಒಮ್ಮಮ್ಮೆ ದಿನಕ್ಕೆ ಒಂದು, ಎರಡು ಶವಗಳಾದರೆ, ಮತ್ತೊಮ್ಮೆ 5 ರಿಂದ 10 ಶವಗಳನ್ನು ಸಂಸ್ಕಾರ ಮಾಡಿದ್ದಿದೆ. ಒಟ್ಟಾರೆ ಇಲ್ಲಿಯ ತನಕ 10 ಸಾವಿರಕ್ಕೂ ಮೇಲ್ಪಟ್ಟ ಶವಸಂಸ್ಕಾರವನ್ನು ಮಾಡಿದ ಲೆಕ್ಕ ಕೊಡುತ್ತಾರೆ ಅಯ್ಯೂಬ್. ಇತ್ತೀಚೆಗೆ ಕೆಲವು ಸರಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಒಂದೊತ್ತಿನ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಇದನ್ನು ಮುಂದಿನ ದಿನಗಳಲ್ಲಿ ಒಂದೇ ಸೂರಿನಡಿಯಲ್ಲಿ ಮುಂದುವರಿಸುವ ಯೋಜನೆಯಲ್ಲಿದ್ದಾರೆ. ಅದಕ್ಕಾಗಿ ಮೈಸೂರಿನ ಉದಯಗಿರಿ ಹತ್ತಿರದ ಶಾಂತಿನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರಕಾರಿ ಆಸ್ಪತ್ರೆಯ ಹತ್ತಿರದ ಜಾಗವನ್ನು ಗುರುತಿಸಿದ್ದಾರೆ.
‘‘ನಮ್ಮ ಮಕ್ಕಳಿಗೆ ನಾವು. ಇನ್ನೊಬ್ಬರ ದುಡ್ಡಿಗೆ ಆಸೆ ಪಡಬಾರದು. ಮೊದಲು ಬೇರೆಯವರಿಗೆ ಒಳ್ಳೆಯದನ್ನು ಬೇಡಿಕೊಳ್ಳಿ. ನಮಗೆ ಒಳ್ಳೆಯದಾಗುತ್ತದೆ’’ ಎಂದು ಹೇಳಿಕೊಟ್ಟಿದ್ದೇವೆ ಎನ್ನುತ್ತಾರೆ.
ಸ್ವಂತ ಸೂರಿಲ್ಲದೆ ಮೈಸೂರಿನ ಶಾಂತಿನಗರದಲ್ಲಿಯೇ ಚಿಕ್ಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಅಯ್ಯೂಬ್ ತನ್ನ ಕಾಯಕಕ್ಕೆ ಅನುಕೂಲವಾಗುವಂತೆ ಯಾರಾದರೂ ಒಂದು ಆ್ಯಂಬುಲೆನ್ಸ್ ಕೊಡಿಸುತ್ತಾರೇನೋ ಎನ್ನುವ ಆಶಾಭಾವನೆಯಲ್ಲಿದ್ದಾರೆ. ಕೆಲವು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನ, ಪ್ರಶಸ್ತಿ ಮತ್ತು ನಗದು ಬಹುಮಾನಗಳನ್ನು ನೀಡಿವೆ. ಬೆಂಗಳೂರು, ಹೈದರಾಬಾದ್, ಕೋಲ್ಕತಾ, ಆಸ್ಟ್ರೇಲಿಯಾದಿಂದ ಅವರಿಗೆ ಪ್ರಶಂಸೆಯ ಕರೆಗಳು ಬರುತ್ತಿವೆ. ಇವುಗಳಿಗಿಂತ ಮುಖ್ಯವಾಗಿ ನಮ್ಮ ಸರಕಾರ ಅವರನ್ನು ಗುರುತಿಸಿ ಇನ್ನಷ್ಟು ಅನುಕೂಲಗಳನ್ನೊದಗಿಸಬೇಕಲ್ಲವೇ?