ವರ್ತನೆಗಳ ಪ್ರಚೋದಿಸುವ ಪ್ರಶ್ನೆಗಳು
ವಿಧ ವಿಧ ವರ್ತನೆಗಳು
ಭಾಗ 7
ಯಾವುದೇ ಮಗುವಿನದು ಅಥವಾ ವ್ಯಕ್ತಿಯದು ನಕಾರಾತ್ಮಕ ವರ್ತನೆ ಎಂದು ತಿಳಿಯುತ್ತದೆಯೋ ಅಥವಾ ಹಿಡಿಸುವುದಿಲ್ಲವೋ ಆಗ ಪ್ರಶ್ನೆ ಕೇಳುವ ಬದಲು ಅದನ್ನು ಸರಳ ವಾಕ್ಯಕ್ಕೆ ಪರಿವರ್ತಿಸಲು ಪ್ರಯತ್ನಿಸಿ. ಆಗ ಆ ವ್ಯಕ್ತಿಯಾಗಲಿ ಮಗುವಾಗಲಿ ಆ ತನ್ನ ವರ್ತನೆಯ ಬಗ್ಗೆ ಪ್ರಶ್ನೆಯ ಮೂಲಕ ಆಕ್ರಮಣ ಮಾಡುತ್ತಿದ್ದಾರೆಂದು ಭಾವಿಸದೇ ಉತ್ತರವನ್ನು ಬಯಸುತ್ತಿದ್ದಾರೆ ಎಂದು ಗ್ರಹಿಸಲಾಗುತ್ತದೆ.
ಪ್ರಶ್ನಿಸಿದರೇಕೆ ಕೆರಳುವರು?
ಹದಿಹರೆಯದವರ ವರ್ತನೆಗಳಲ್ಲಿ ಬಹಳ ಮುಖ್ಯವಾಗಿರುವುದು ಸಿಡಿಮಿಡಿಗೊಳ್ಳುವುದು. ಅದರಲ್ಲೂ ಪ್ರಶ್ನೆಗಳನ್ನು ಕೇಳುವ ಎಲ್ಲಾ ಸಂದರ್ಭಗಳಿಂದ ತಪ್ಪಿಸಿಕೊಳ್ಳುವುದು. ಕೇಳಲು ಪ್ರಾರಂಭಿಸಿದರೆ ತಲೆ ಸಿಡಿದುಹೋಗುತ್ತಿರುವಂತೆ ವರ್ತಿಸುವುದು ಅಥವಾ ಉತ್ತರ ಹೇಳದೇ ಪ್ರತಿ ಆಕ್ರಮಣ ಮಾಡುವುದು. ಪ್ರತಿಶತ ಎಂಬತ್ತಕ್ಕೂ ಹೆಚ್ಚು ಹರೆಯದ ಮಕ್ಕಳೊಂದಿಗೆ ಬಹಳಷ್ಟು ಪೋಷಕರಿಗೆ ಆಗುವ ಅನುಭವವೆಂದರೆ ಯಾವಾಗಂದರೆ ಆವಾಗ ಥಟ್ಟನೆ ಸಿಡಿಯುವುದು. ಬಹಳ ಸರಳವಾದ ಮತ್ತು ಸಹಜವಾದ ಯಾವುದೋ ಪ್ರಶ್ನೆಯನ್ನು ಕೇಳಿದರೆ ಪಟ್ಟನೆ ಸಿಡುಕುತ್ತಾ ಉತ್ತರ ನೀಡುವರು. ಮಕ್ಕಳೊಂದಿಗೆ ಸದಾ ಸಂಪರ್ಕದಲ್ಲಿರಬೇಕು ಎಂದು ಪೋಷಕರು ಪ್ರಶ್ನಿಸುತ್ತಾರೋ ಅಥವಾ ಕೇಳುವ ಅಗತ್ಯ ಇದೆ ಎಂದು ಕೇಳುತ್ತಾರೋ; ಒಟ್ಟಾರೆ ಒಂದರ್ಥವಾಗುವುದು ಏನೆಂದರೆ ಅವರಿಗೆ ಹಾಗೆ ಪ್ರಶ್ನಿಸುವುದು ಹಿಡಿಸಲಿಲ್ಲ ಎಂದು.
ಯಾಕಪ್ಪ ಅಥವಾ ಯಾಕಮ್ಮಾ ಅವರು ಪ್ರಶ್ನೆ ಕೇಳಿದರೆ ಹಾಗೆ ಕೋಪ ಮಾಡಿಕೊಳ್ತೀಯಾ ಎಂದೇನಾದರೂ ಕೇಳಿ ನೋಡಿ. ಅವರು ಹೇಳುವುದು ಏನೆಂದರೆ, ‘‘ನಮಗೆ ಅವರು ಕೇಳುವುದಕ್ಕಲ್ಲ ಕೋಪ. ಅವರು ಕೇಳುವ ರೀತಿಗೆ’’ ಎಂದೇ ಅವರು ಹೇಳುವುದು. ಪ್ರಶ್ನೆಗಳನ್ನು ಕೇಳುವ ಬಗೆಗೇ ಅವರಿಗೆ ನಖಶಿಖಾಂತ ಉರಿಯುವುದು. ಮೊದಲನೆಯದಾಗಿ ಸಣ್ಣ ವಯಸ್ಸಿನಿಂದ ತಮ್ಮ ಎಲ್ಲಾ ಕೆಲಸಗಳನ್ನು ಅಡ್ಡಿಪಡಿಸಲೆಂದೇ ಪ್ರಶ್ನೆಗಳನ್ನು ಕೇಳುತ್ತಾರೆಂಬ ಮನಸ್ಥಿತಿ ಮಕ್ಕಳಲ್ಲಿ ನಿರ್ಮಾಣವಾಗಿರುತ್ತದೆ.
ಪ್ರಶ್ನೆಗಳ ಉದ್ದೇಶ ಉತ್ತರ ಪಡೆಯುವುದಾಗಿರುತ್ತದೆಯೇ?
‘‘ಅದನ್ಯಾಕೆ ಮಾಡುತ್ತಿದ್ದೀಯಾ?’’ ಎಂದು ಪೋಷಕರು ಕೇಳುವ ರೀತಿಯಲ್ಲಿಯೇ ಮಕ್ಕಳಿಗೆ ಧ್ವನಿಸುವುದು ಏನೆಂದರೆ, ‘‘ಅದನ್ನು ಮಾಡಬೇಡ’’ ಎಂದು. ‘‘ಈಗೇನು ನನ್ನ ಜೊತೆ ಬರ್ತೀಯೋ ಇಲ್ಲವೋ?’’ ಎಂದು ಕೇಳುವುದರಲ್ಲಿ ‘‘ನೀನು ಬರಬೇಕು’’ ಎಂಬ ಆಜ್ಞೆ. ‘‘ಈಗ ನೀನು ಸುಮ್ಮನಿರುತ್ತೀಯೋ ಇಲ್ಲವೋ?’’ ಎಂಬ ಪ್ರಶ್ನೆಯಲ್ಲಿ ನೀನು ಸುಮ್ಮನಿರದಿದ್ದರೆ ಎರಡು ಒದೆ ಕೊಟ್ಟು ಸುಮ್ಮನಿಸುತ್ತೇನೆ ಎಂದೋ ಅಥವಾ ಇನ್ನಾವುದೋ ರೀತಿಯಲ್ಲಿ ನಿನಗೆ ಸುಮ್ಮನಿರಿಸುತ್ತೇನೆ ಎಂಬ ಧೋರಣೆ ಸ್ಪಷ್ಟವಾಗಿರುತ್ತದೆ. ಮಕ್ಕಳು ಯಾವುದೋ ತಮ್ಮಿಷ್ಟದ ಕೆಲಸ ಮಾಡುವಾಗ ‘‘ಯಾಕೆ? ನಿನಗೆ ಮಾಡಕ್ಕೆ ಬೇರೆ ಕೆಲಸ ಇಲ್ಲವಾ?’’ ಎಂಬ ಪ್ರಶ್ನೆ ತೂರಿ ಬಂದಿರುತ್ತದೆ. ಮಗುವು ಯಾವುದೋ ವಸ್ತುವನ್ನು ಮುರಿದುಕೊಂಡು ಬಂದಿರುತ್ತದೆ ಅಥವಾ ಬಟ್ಟೆ ಅಥವಾ ಪುಸ್ತಕವೋ ಹರಿದಿರುತ್ತದೆ. ಪೋಷಕರು ಕೇಳುವ ಪ್ರಶ್ನೆಗಳಾದರೂ ಹೇಗಿರುತ್ತವೆ? ‘‘ಯಾಕೆ ಮುರಿದೆ?’’ ‘‘ಯಾಕೆ ಹರಿದೆ?’’ ಮಗುವು ಮುರಿಯಬೇಕೆಂದು ಮುರಿದಿರುವುದಿಲ್ಲ. ಹರಿಯಬೇಕೆಂದು ಹರಿದಿರುವುದಿಲ್ಲ. ಆದರೆ ಅದಕ್ಕೆ ಆ ವಸ್ತುವನ್ನು ಸರಿಯಾಗಿ ನಿರ್ವಹಿಸಲಾಗದೇ ಇರುವುದಕ್ಕೋ, ಅಥವಾ ಎಚ್ಚರಿಕೆ ತೆಗೆದುಕೊಳ್ಳದೇ ಇರುವುದಕ್ಕೋ ಎಂತಹದ್ದೋ ಒಂದು ಆಗಿರುತ್ತದೆ. ಯಾಕೆ ಮುರಿದೆ, ಯಾಕೆ ಹರಿದುಕೊಂಡು ಬಂದೆ ಎನ್ನುವುದರ ಬದಲು ಹೇಗೆ ಮುರಿಯಿತು, ಹೇಗೆ ಹರಿಯಿತು ಎಂಬ ಮಾತು ಕೇಳಿದರೆ ಅವರಿಗೆ ಉತ್ತರ ಹೇಳಲು ಸಾಧ್ಯವಾಗುತ್ತದೆ.
ಪೋಷಕರ ಪ್ರಶ್ನೆಗಳು ಸಾಮಾನ್ಯವಾಗಿ ಆಕ್ರಮಣಕಾರಿಯಾಗಿದ್ದರ ಅನುಭವ ಮಕ್ಕಳಿಗೆ ಬಾಲ್ಯದಲ್ಲಿ ಆಗುವ ಕಾರಣದಿಂದ, ಅವರು ಹದಿಹರೆಯದಲ್ಲಿ ಪ್ರಶ್ನೆಗಳನ್ನು ಕೇಳಿದರೇನೇ ಸಿಡಿಮಿಡಿಗೊಳ್ಳುತ್ತಾರೆ. ಪೋಷಕರ ಬಹಳಷ್ಟು ಪ್ರಶ್ನೆಗಳು ಉತ್ತರವನ್ನು ಪಡೆಯುವುದಾಗಿರುವುದಿಲ್ಲ. ಬದಲಿಗೆ ನಿರ್ದೇಶನಗಳನ್ನು ನೀಡುವುದಾಗಿರುತ್ತದೆ. ಆಜ್ಞೆ ಮಾಡುವುದಾಗಿರುತ್ತದೆ. ನೀನೊಬ್ಬ ಮೂರ್ಖ ಎಂದು ಹೀಯಾಳಿಸುವುದಾಗಿರುತ್ತದೆ. ನೀನು ಸರಿ ಇಲ್ಲ. ನಿನಗೆ ಬುದ್ಧಿ ಇಲ್ಲ. ನಿನಗೆ ಅರ್ಥ ಆಗಲ್ಲ; ಇತ್ಯಾದಿಗಳೇ ಆಗಿರುತ್ತವೆ.
ಬಾಯಿಕಟ್ಟುವ ಪ್ರಶ್ನೆಗಳು
ಹದಿಹರೆಯದ ಮಕ್ಕಳು ಸಾಮಾನ್ಯವಾಗಿ ಕೇಳುವ ಈ ಕೆಲವು ಪ್ರಶ್ನೆಗಳಿಗೆ ನೇರವಾಗಿ ‘ಇದೆ, ಇಲ್ಲ, ಹೌದು, ಅಲ್ಲ’’ ರೀತಿಯ ಎಂತಹ ಉತ್ತರ ಕೊಡಬೇಕು ಹೇಳಿ.
1.ಯಾಕೆ ನಿನಗೆ ಬುದ್ಧಿ ಇಲ್ಲವಾ?
2.ನಿನ್ನ ತಲೆಯಲ್ಲೇನು ಸೆಗಣಿ ತುಂಬಿಕೊಂಡಿದ್ದೀಯಾ?
3.ನೀನು ಯಾವತ್ತಾದ್ರೂ ಹೇಳಿದ ಮಾತು ಕೇಳ್ತೀಯಾ?
4.ನೀನು ನಮಗೆ ಒಳ್ಳೆ ಹೆಸರು ತರ್ತೀಯಾ?
5.ಯಾಕೆ ಹಾಗೆ ಆಡ್ತೀಯಾ?
6.ನಿನಗೆ ನಾವು ನೆಮ್ಮದಿಯಾಗಿ ಇರಬೇಕಾ ಬೇಡವಾ?
7.ನಿನಗೆಷ್ಟು ಹೇಳಿದರೂ ಯಾಕೆ ನಿನಗೆ ಅರ್ಥ ಆಗಲ್ಲ?
8.ಈಗೇನು ಹೇಳಿದ ಮಾತು ಕೇಳ್ತೀಯೋ ಇಲ್ಲವೋ?
9.ನಿನಗೆ ಯಾವಾಗ ಬುದ್ಧಿ ಬರೋದು?
ಈ ಬಗೆಯ ಎಲ್ಲಾ ಪ್ರಶ್ನೆಗಳೂ ಉತ್ತರವನ್ನು ಕೊಡಲು ಸಾಧ್ಯವಾಗದಿರುವಂತಹವು. ಯಾಕೆ ಹಾಗೆ ಆಡ್ತೀಯಾ? ಅಂದ್ರೆ ನಾನು ಹೇಗೆ ಆಡ್ತಿದ್ದೀನಿ? ಎಂದು ಮರುಪ್ರಶ್ನೆ ಹುಟ್ಟಬಹುದು. ಅಥವಾ ನಾನಲ್ಲ ಆಡ್ತಿರೋದು ನೀನೇ ಎಂಬ ಪ್ರತಿಯಾಗಿ ಆಕ್ರಮಣ ಮಾಡಬಹುದು.
ಈಗೇನು ಹೇಳಿದ ಮಾತು ಕೇಳ್ತೀಯೋ ಇಲ್ಲವೋ ಎಂದಾಗ ಆ ಮಗುವು ಕೇಳುತ್ತೇನೆ ಎಂದು ವಿಧೇಯವಾಗಿರಬೇಕು ಅಥವಾ ಇಲ್ಲ ಎಂದು ಬಂಡಾಯವೇಳಬೇಕು. ಅಷ್ಟೇ ಆಯ್ಕೆಯನ್ನು ಪೋಷಕರು ಕೊಡುವುದು. ಬದಲಾಗಿ ಇಬ್ಬರೂ ಕೂಡಿ ಆ ಸಮಸ್ಯೆಗೆ ಅಥವಾ ಪ್ರಶ್ನೆಗೆ ಉತ್ತರವನ್ನೋ ಅಥವಾ ಪರಿಹಾರವನ್ನೋ ಕಂಡುಕೊಳ್ಳುವ ಯಾವ ಸೂಚನೆಯೂ ಕಾಣುವುದಿಲ್ಲ. ಹೀಗೆ ಯಾವುದೇ ಉತ್ತರಿಸಲಾಗದ ಅಥವಾ ಬಾಯಿಕಟ್ಟುವ ಅಥವಾ ಪ್ರತಿ ಆಕ್ರಮಣವನ್ನು ಆಹ್ವಾನಿಸುವ ಪ್ರಶ್ನೆಗಳನ್ನು ಕೇಳುವ ಪೋಷಕರ ಧೋರಣೆಗಳಿಂದ ಮಕ್ಕಳು ಅಪಮಾನಕ್ಕೆ ಒಳಗಾಗುತ್ತಿದ್ದೇವೆಂದು ಭಾವಿಸುತ್ತಾರೆ. ಉತ್ತರಿಸಲಾಗದ ಪ್ರಶ್ನೆಗಳಿಂದಾಗಿ ತಮ್ಮನ್ನು ಸುಮ್ಮನಿರುವ ಪ್ರಯತ್ನ ಮಾಡುತ್ತಿದ್ದಾರೆಂದು ತಿಳಿಯುತ್ತಾರೆ. ತಮ್ಮ ಸಾಮರ್ಥ್ಯವನ್ನು ಅನುಮಾನಿಸುತ್ತಿದ್ದಾರೆ ಎಂದು ಗ್ರಹಿಸುತ್ತಾರೆ. ನಿನ್ನನ್ನು ನಾವು ತಿರಸ್ಕರಿಸುತ್ತೇವೆ ಅಥವಾ ನೀನು ನಮ್ಮಾಡನಿರಲು ಯೋಗ್ಯವಲ್ಲ ಎಂಬ ಅಂಜಿಕೆ ಹುಟ್ಟಿಸುತ್ತಾರೆ. ಹೀಗೆ ತಮಗೊದಗುವ ಪ್ರಶ್ನೆಗಳು ಅನುಮಾನ, ಅಪಮಾನ, ಅಂಜಿಕೆ, ಅಸಡ್ಡೆ ಭಾವಗಳನ್ನು ಹುಟ್ಟಿಸುವುದರಿಂದಲೇ ಪೋಷಕರು ಪ್ರಶ್ನಿಸಲು ಮುಂದಾಗುತ್ತಿದ್ದಂತೆ ಅವರು ಪ್ರತಿ ಆಕ್ರಮಣಕ್ಕೆ ಸಜ್ಜಾಗಿಬಿಡುತ್ತಾರೆ.
ಪ್ರಶ್ನೆಗಳು ಸರಳವಾಕ್ಯಗಳಾದರೆ?
ಸರಳ ಸೂಚನೆ ಅಥವಾ ವಾಕ್ಯದ ಬದಲು ಪ್ರಶ್ನೆಗಳನ್ನು ಕೇಳಬೇಡಿ. ಅದೊಂದು ರೋಗ, ಒಬ್ಬರನ್ನು ಸಿಕ್ಕಿಸಲೆಂದೇ ಪ್ರಶ್ನೆಗಳನ್ನು ಕೇಳುತ್ತಿರುವುದು. ಅವರು ನಿರುತ್ತರವಾಗುವವರೆಗೂ ತಾವು ಜಯ ಶೀಲರಾಗುವುದಿಲ್ಲ ಎಂಬಂತಹ ಮನೋಭಾವ ಬಹಳಷ್ಟು ಜನರಿಗೆ.
ಮಗುವು ಸ್ನಾನ ಮಾಡುತ್ತಿದೆ. ಒಂದೇ ಸಮನೆ ಶವರ್ ಬಿಟ್ಟಿರುತ್ತದೆ. ನೀರು ಹರಿದುಹೋಗುತ್ತಿರುವ ಶಬ್ದ ಹೊರಗೆ ಕೇಳುತ್ತಿರುತ್ತದೆ. ಅದನ್ನು ಕೇಳಿಸಿಕೊಳ್ಳುವ ಪೋಷಕರು ಅಥವಾ ಹಿರಿಯರು ಕೇಳುವ ಪ್ರಶ್ನೆಯೆಂದರೆ, ‘‘ಯಾಕೆ ನೀರು ಹಾಗೆ ಬಿಟ್ಟಿದ್ದೀಯಾ?’’ ಇಂತಹ ಸಂದರ್ಭದಲ್ಲಿ ‘‘ಶವರ್ ನಿಲ್ಲಿಸು, ಬಕೆಟ್ಟಲ್ಲಿ ನೀರನ್ನು ಹಿಡಿದುಕೊಂಡು ಸ್ನಾನ ಮಾಡು. ನೀರು ವ್ಯರ್ಥವಾಗಿ ಪೋಲು ಆಗುತ್ತದೆ’’ ಇದನ್ನೇ ಹೇಳಬೇಕು. ಯಾಕೆ ಲೈಟ್ ಆಫ್ ಮಾಡಿಲ್ಲ? ಎನ್ನುವ ಬದಲು ಬರುವಾಗ ಲೈಟ್ ಆಫ್ ಮಾಡಿ ಬಾ. ‘‘ಯಾಕೆ ಗೇಟ್ ಹಾಕಿಕೊಂಡು ಹೋಗಲು ಆಗುವುದಿಲ್ಲವಾ’’ ಎನ್ನುವುದರ ಬದಲು, ಹೋಗುವಾಗ ಗೇಟ್ ಹಾಕಿಕೊಂಡು ಹೋಗು. ಮಗುವು ತನ್ನ ಊಟವನ್ನೋ ತಿಂಡಿಯನ್ನೋ ಪೂರ್ತಿ ತಿನ್ನದೇ ಬಿಟ್ಟಾಗ ಅದಕ್ಕೆ ಯಾಕೆ ಬಿಟ್ಟೆ ಎಂದು ಕೇಳುವುದರ ಅರ್ಥವೇನಿದೆ? ಮಗುವಿಗೆ ಸಾಕಾಯಿತು, ಬೇಡವಾಯಿತು ಎಂದೇ ಅರ್ಥ. ಅದನ್ನು ಕೇಳುವುದರ ಬದಲು, ‘‘ಇನ್ನು ಸ್ವಲ್ಪ ಇದೆ. ತಿಂದು ಮುಗಿಸಿಬಿಡು. ಆಹಾರ ವ್ಯರ್ಥ ಮಾಡಬಾರದು’’ ಎಂದು ಹೇಳುವುದಿಲ್ಲ. ಇದೇ ಅರ್ಥವನ್ನು ಧ್ವನಿಸುತ್ತಿದ್ದೇವೆಂದು ‘‘ಯಾಕೆ ಬಿಟ್ಟುಬಿಟ್ಟೇ?’’ ಎಂದು ಕೇಳುತ್ತಾರೆ. ಆದರೆ, ಪ್ರಶ್ನಾರ್ಥಕ ವಾಕ್ಯಗಳು ಮಕ್ಕಳಿಗೆ, ಹದಿಹರೆಯದವರಿಗೆ, ಅಷ್ಟೇಕೆ ದೊಡ್ಡವರಿಗೂ ಬಹಳ ಇರಿಸುಮುರಿಸು ಮತ್ತು ಮುಜುಗರ ಉಂಟು ಮಾಡುತ್ತದೆ.
ನಮ್ಮನ್ನು ನಾವು ಮಾತಾಡುವಾಗ ಪರೀಕ್ಷಿಸಿಕೊಳ್ಳಬೇಕು. ನಾವು ಯಾವ್ಯಾವ ಸರಳ ಸೂಚನೆ ಅಥವಾ ನೇರ ವಾಕ್ಯಗಳಿಗೆ ಬದಲಾಗಿ ಪ್ರಶ್ನಾರ್ಥಕಗಳನ್ನಾಗಿ ಮಾಡುತ್ತಿದ್ದೇವೆ ಎಂದು. ಪ್ರಶ್ನೆಗಳಾಗಿ ಬರುವುದನ್ನೆಲ್ಲಾ ಸರಳ ಮತ್ತು ನೇರವಾಕ್ಯಗಳನ್ನಾಗಿ ಬದಲಿಸಬಹುದೇ ಪರೀಕ್ಷಿಸಿ ನೋಡಿ.
ಇದೊಂದು ಗಮನವಿರಲಿ. ಯಾವುದೇ ಮಗುವಿನದು ಅಥವಾ ವ್ಯಕ್ತಿಯದು ನಕಾರಾತ್ಮಕ ವರ್ತನೆ ಎಂದು ತಿಳಿಯುತ್ತದೆಯೋ ಅಥವಾ ಹಿಡಿಸುವುದಿಲ್ಲವೋ ಆಗ ಪ್ರಶ್ನೆ ಕೇಳುವ ಬದಲು ಅದನ್ನು ಸರಳ ವಾಕ್ಯಕ್ಕೆ ಪರಿವರ್ತಿಸಲು ಪ್ರಯತ್ನಿಸಿ. ಆಗ ಆ ವ್ಯಕ್ತಿಯಾಗಲಿ ಮಗುವಾಗಲಿ ಆ ತನ್ನ ವರ್ತನೆಯ ಬಗ್ಗೆ ಪ್ರಶ್ನೆಯ ಮೂಲಕ ಆಕ್ರಮಣ ಮಾಡುತ್ತಿದ್ದಾರೆಂದು ಭಾವಿಸದೇ ಉತ್ತರವನ್ನು ಬಯಸುತ್ತಿದ್ದಾರೆ ಎಂದು ಗ್ರಹಿಸಲಾಗುತ್ತದೆ.
ಯಾರೇ ಆಗಲಿ ತಡವಾಗಿ ಬಂದರೆ,
1.ಯಾಕೆ ಇಷ್ಟು ಲೇಟು?
2.ಯಾಕೆ ತಡವಾಯಿತು?
3.ಬೇಗ ಬರಕ್ಕಾಗಲ್ವಾ ನಿನಗೆ?
4.ಯಾಕೆ ತಡವಾಗಿ ಬಂದೆ?
ಎಂಬಿತ್ಯಾದಿ ನಿನ್ನ ತಡವಾಗಿ ಬರುವುದಕ್ಕೆ ನೀನೇ ಕಾರಣ ಎಂದು ದೂರುವುದರ ಬದಲು, ಟ್ರಾಫಿಕ್ ಜಾಸ್ತಿ ಇತ್ತಾ? ಬಸ್ ಸಿಗಲಿಲ್ಲವಾ? ಮನೆಯಲ್ಲಿ ತಿಂಡಿ ಆಗಿರಲಿಲ್ಲವಾ? ಹೀಗೆ ನಿನ್ನ ತಡಕ್ಕೆ ನೀನಲ್ಲ ಕಾರಣ ಆದರೆ, ಯಾವುದೋ ಸನ್ನಿವೇಶ ಅಥವಾ ವ್ಯವಸ್ಥೆ ಕಾರಣವಾಗಿರಬಹುದು ಎಂಬ ಅರ್ಥದಲ್ಲಿ ಸಂಭಾಷಣೆಗಳನ್ನು ಪ್ರಾರಂಭಿಸಿದರೆ, ಅವರಿಗೆ ಆಕ್ರಮಣದ ಭಾವ ಉಂಟಾಗುವುದಿಲ್ಲ. ಇರಿಸುಮುರಿಸು, ಮುಜುಗರ ಉಂಟಾಗುವುದಿಲ್ಲ. ಆಗ ಬಹುಶಃ ತಪ್ಪನ್ನು ತಮ್ಮದಾಗಿದ್ದರೂ ಹೇಳಿಕೊಳ್ಳುವ ಸಲೀಸಾದ ವಾತಾವರಣ ಸೃಷ್ಟಿಯಾಗಿರುತ್ತದೆ. ಆಗ ಬರುವ ಉತ್ತರ ಎದ್ದೇಳುವುದು ತಡವಾಯ್ತು, ಫೇಸ್ಬುಕ್ ನೋಡ್ತಿದ್ದೆ, ಈ ಡ್ರೆಸ್ ಹಾಕ್ಕೋಳ್ಬೇಕು ಅಂತ ನೋಡ್ದೆ, ಆದರೆ ಐರನ್ ಮಾಡಿರಲಿಲ್ಲ ಇತ್ಯಾದಿ ಪ್ರಾಮಾಣಿಕ ಉತ್ತರಗಳು ಬರಬಹುದು.
ನಿಜವಾದ ಮಾತುಗಳನ್ನು ಕೇಳಲು ಸಿದ್ಧವಿರದಿದ್ದಾಗ ಸುಳ್ಳಿನ ಮಾತುಗಳನ್ನು ಕೇಳಿಸುತ್ತಾರೆ. ಆದ್ದರಿಂದ ಮಗುವಿನ ಅಥವಾ ವ್ಯಕ್ತಿಯ ವರ್ತನೆ ಅಥವಾ ಕೊಡುವ ಕಾರಣ ಅದೆಷ್ಟೇ ಅಶಿಸ್ತಿನದಾಗಿದ್ದರೂ, ಅದನ್ನು ತಿದ್ದುವ ಮನಸ್ಸಿದ್ದರೆ, ಸಮ್ಮತಿಸದಿದ್ದರೂ ಕೇಳುವ ಸಹನೆ ಇರಬೇಕು. ಅಂತೆಯೇ ಕ್ಷಮಿಸದಿದ್ದರೂ ನಿಂದಿಸದಿರುವ ಅಥವಾ ಅಪಮಾನಿಸದಿರುವ ಔದಾರ್ಯವನ್ನು ಹೊಂದಿರಬೇಕು. ಆಗ ಯಾವುದೇ ವ್ಯಕ್ತಿಯಾಗಲಿ ಅಥವಾ ಮಗುವಾಗಲಿ ನಮ್ಮ ಬಳಿ ತೆರೆದುಕೊಳ್ಳಲು ಮುಂದಾಗುತ್ತದೆ. ಆಮೇಲೆ ತಿದ್ದುವ, ತೀಡುವ, ಅವರ ತಪ್ಪನ್ನು ಅವರ ಅರಿವಿಗೆ ತರುವ ಕೆಲಸ, ತಮ್ಮ ದೌರ್ಬಲ್ಯವನ್ನು ತೊಡೆದುಕೊಳ್ಳುವ ಕೆಲಸ ಇತ್ಯಾದಿಗಳಾಗಲಿ. ಸಂಬಂಧಗಳಿಗೆ ಬೆಲೆ ಇಲ್ಲ, ತನಗೆ ಕೆಲಸವಷ್ಟೇ ಮುಖ್ಯ, ಇವರು ಇದ್ದರೇನು ಹೋದರೇನು? ನನಗೆ ಈ ವ್ಯಕ್ತಿ ಬೇಡ, ಮಗುವು ಬೇಡ ಎನ್ನುವಂತಿದ್ದರೆ, ಫೈರಿಂಗ್ ಮಾಡಿಕೊಂಡು ಇಬ್ಬರೂ ಪರಸ್ಪರ ನರಕವನ್ನು ಸೃಷ್ಟಿಸಿಕೊಳ್ಳಬಹುದು.
ಪ್ರಶ್ನೆಗಳು ದಾಳಿಗಳಾಗದಿರಲಿ
ಯಾವಾಗಲೂ ಪ್ರಶ್ನಿಸುವ ಬದಲು ಸರಳ ವಾಕ್ಯವನ್ನೇ ಮಾಡಿಕೊಳ್ಳಲಾಗುವುದಿಲ್ಲ. ನಿಜ. ಹಾಗಾದರೆ ಪ್ರಶ್ನೆಗಳನ್ನು ಕೇಳುವುದನ್ನು ಬದಲಿಸುವುದು ಉತ್ತಮ. ಹಾಗೆಂದು ಹಿಂದೆ ಹಿಂದೆಯೇ ಪ್ರಶ್ನೆಗಳನ್ನು ಕೇಳುತ್ತಲೇ ಇರಬಾರದು.
ಕಿಶೋರಾವಸ್ಥೆಯಿಂದ ಯೌವನಕ್ಕೆ ಕಾಲಿಡು ತ್ತಿರುವ ಮಕ್ಕಳಂತೂ ತಮ್ಮ ಹಳೆಯ ಪ್ರಶ್ನಾಕ್ರಮಣಗಳ ಬಾಧೆಯಿಂದ ಹೊರಗೆ ಬಂದಿರುವುದಿಲ್ಲ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚಾಗಿ ಪ್ರತ್ಯಾಕ್ರಮಣದ ಧೋರಣೆ ತೋರುತ್ತಾರೆ.
ಎಷ್ಟೋ ಸಲ ಪ್ರಶ್ನೆಗಳನ್ನು ಕೇಳದೆಯೇ ಅವರಿಂದ ಉತ್ತರ ಪಡೆದುಕೊಳ್ಳಲು ಸಾಧ್ಯವಿರುತ್ತದೆ. ಅಂತಹ ಸಂಭಾವ್ಯಗಳನ್ನೂ ಗಮನಿಸಿಕೊಳ್ಳಬೇಕು.
ಶಾಲೆಯಿಂದಲೋ, ಕಾಲೇಜಿಂದಲೋ ಮಂಕಾಗಿ ಬಂದ ಮಗುವನ್ನು ಏನಾಯ್ತು? ಏನು ಮಾಡಿಕೊಂಡು ಬಂದೆ? ಯಾರೇನಂದರು? ಇತ್ಯಾದಿಗಳನ್ನು ಕೇಳುವ ಬದಲು, ಪಕ್ಕದಲ್ಲಿ ಕುಳಿತುಕೊಳ್ಳುವ, ಕೈ ಹಿಡಿದುಕೊಳ್ಳುವ, ಅಪ್ಪಿಕೊಳ್ಳುವ ಆತ್ಮೀಯತೆಯನ್ನು ತೋರಿದರೆ ಅವರೇ ಹೇಳುತ್ತಾರೆ ಅಥವಾ ಮೂಡ್ ಸರಿ ಇಲ್ಲಾಂದ್ರೆ ಎಲ್ಲಾದ್ರೂ ಹೊರಗೆ ಹೋಗಿ ಬರೋಣ. ಏನು ಮಾಡಿಕೊಡಲಿ? ಇತ್ಯಾದಿಗಳನ್ನು ಮಾತಾಡುವುದರಿಂದಲೂ ತಾವಾಗಿ ಹೇಳುವ ಮನಸ್ಸು ಮಾಡುತ್ತಾರೆ.
ಒಟ್ಟಾರೆ ಮಗುವೊಂದು ಏನಾದರೂ ಯಡವಟ್ಟು ಮಾಡಿಕೊಂಡಾಗ ‘‘ಯಾಕೆ ಹೀಗೆ ಮಾಡಿದೆ?’’ ಎನ್ನುವಂತಹ ಪ್ರಶ್ನೆಗಳು ಮಗು ತನ್ನ ವರ್ತನೆಯನ್ನು ನಕಾರಾತ್ಮಕವಾಗಿ ತೋರಿಸುವ ಮೂಲಕ ಇರಿಸುಮುರಿಸು ತೋರಿದರೆ, ಅದೇ ಯಾವುದಾದರೂ ಸೃಜನಾತ್ಮಕವಾಗಿರುವ, ರಚನಾತ್ಮಕವಾಗಿರುವ ಕೆಲಸ ಮಾಡುವಾಗ ‘‘ಅರೆ, ಹೇಗೆ ಇದನ್ನು ಮಾಡುವುದು?’’ ಎಂದು ಕೇಳಿದರೆ ಅವರ ಕೆಲಸಕ್ಕೆ, ಅವರ ಪ್ರತಿಭೆಗೆ ಮಾನ್ಯತೆಯು ಸಿಕ್ಕಿ, ತಾನು ಅವರಲ್ಲಿ ಕುತೂಹಲವನ್ನು ಹುಟ್ಟಿಸಿದ್ದೇನೆ, ಆಸಕ್ತಿಯನ್ನು ಹುಟ್ಟಿಸಿದ್ದೇನೆ ಎಂದು ಸಂತೋಷವಾಗಿ ಉತ್ತರಿಸಲು ಸಿದ್ಧವಾಗುವರು.
ಒಟ್ಟಾರೆ ಇಷ್ಟು ತಿಳಿಯೋಣ. ಮಕ್ಕಳಲ್ಲಿ ಅನಪೇಕ್ಷಿತ ಮತ್ತು ಅನೀಕ್ಷಿತ ನಕಾರಾತ್ಮಕ ವರ್ತನೆಗಳನ್ನು ರೂಢಿಸಬಾರದೆಂದರೆ, ಅನಗತ್ಯವಾದಂತಹ, ಅನುಮಾನಿಸುವಂತಹ, ಅಪಮಾನಿಸುವಂತಹ, ಅಸಡ್ಡೆಯನ್ನು ಉಂಟುಮಾಡುವಂತಹ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸೋಣ. ಪ್ರಶ್ನೆಗಳು ದಾಳಿಗಳಾಗದೇ ಪರಸ್ಪರ ತೆರೆದುಕೊಳ್ಳಲು ಮೀಟಣಿಗೆಗಳಾಗಲಿ. ಪ್ರಶ್ನೆಗಳು ಉತ್ತರಿಸುವವರ ಸಾಮರ್ಥ್ಯದ ಮಾನದಂಡ ಎನ್ನುವುದಕ್ಕಿಂತ ಮೊದಲು ಅದು ಪ್ರಶ್ನಿಸುವವರ ಪ್ರಜ್ಞಾವಂತಿಕೆಯ ಮಾನದಂಡವಾಗಿರುತ್ತದೆ ಎಂಬುದನ್ನು ಮರೆಯದಿರೋಣ.